ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನಮ್ಮ ನೆಲ-ಮುಗಿಲಿನ ಕೂಸೇ ಮೋಡ!

“ನೋಡ್ರಿ.. ನೆಲದ ಸಂಪತ್ತಿಗಿಂತ ಹೆಚ್ಚಿನ ಮಹತ್ವದ್ದು ಜಲ ಸಂಪತ್ತು. ರೈತರಿಗೆ ಇಷ್ಟು ತಿಳಿಯೋವರ್ಗೂ ಉದ್ಧಾರ ಸಾಧ್ಯ ಇಲ್ಲ.” ಪ್ರಗತಿಪರ, ಸಾವಯವ ಕೃಷಿಕ ಧಾರವಾಡ ಬಳಿ ಮಂಡ್ಯಾಳದ ಕೃಷ್ಣ ಕುಮಾರ ಭಾಗವತ್ ‘ಕಡ್ಡಿ ಮುರದ್ಹಂಗ’ ಹೇಳಿದ್ರು!

1“ಎಷ್ಟ.. ಉತ್ಕೃಷ್ಟ ಭೂಮಿ, ಮೇಲ್ಮೈ ಮಣ್ಣು ರೈತನ ಹತ್ರ ಇದ್ರೂ, ನೀರಿನ ಆಸರಿ ಇಲ್ದಿದ್ರ.. ಅಷ್ಟ..” ಅನುಭವಿ ಶಿಕ್ಷಕ-ರೈತ ಹಿಡಕಲ್ ಡ್ಯಾಂನ ಆರ್.ಜಿ. ತಿಮ್ಮಾಪೂರ ಧ್ವನಿ ಗೂಡಿಸಿದ್ರು.

ಪ್ರತಿ ವರ್ಷ ಹೆಚ್ಚೂ ಕಡಿಮೆ ನಮ್ಮ ರಾಜ್ಯದ ಎಲ್ಲ ಕಡೆ ಮಳೆ ಸುರಿಯುತ್ತದೆ. ಕೆಲವೆಡೆ ಧಾರಾಕಾರ, ಹಲವೆಡೆ ಅಡ್ಡಿ ಇಲ್ಲ, ಮತ್ತೊಂದೆಡೆ ತುಂತುರು.. ಹೀಗೆ. ಬಿದ್ದ ಒಟ್ಟು ಮಳೆ ನೀರಿನ ಒಂದು ಭಾಗ ನೆಲದ ಮೇಲೆ ಬಿದ್ದು, ಹರಿದು ಕೆರೆ, ಹಳ್ಳ, ತೊರೆಗಳ ಮೂಲಕ ನದಿ ಕೊನೆಗೆ ಸಮುದ್ರ ಸೇರುತ್ತದೆ. ಮಳೆಯಾಗಿ ನೆಲಕ್ಕೆ ಬಿದ್ದ ನೀರಿನ ಬಹುಭಾಗ ಸೂರ್ಯನ ಶಾಖದಿಂದ ಆವಿಯಾಗಿ ಮೇಲೆದ್ದು ಮತ್ತೆ ಮೋಡ ಗರ್ಭ ಕಟ್ಟುತ್ತದೆ. ಅಂದಾಜು ಒಟ್ಟು ಮಳೆಯ ಶೇ. ೧೦ರಷ್ಟು ಭಾಗ ಮಾತ್ರ ನೆಲದೊಳಗೆ ಜಿನುಗಿ ಅಂತರ್ಜಲವಾಗಿ ಪರಿಣಮಿಸುತ್ತದೆ!

ಅಂತರ್ಜಲ ವೃದ್ಧಿಗೆ ಮಳೆಯೇ ಸೆಲೆ. ನೆಲದ ಮೇಲಿನ ನೀರು ಹರಿಯುತ್ತಿದ್ದರೆ ಶುದ್ಧ. ನಿಂತಲ್ಲೇ ಬೀಡುಬಿಟ್ಟರೆ ಕೊಳೆಯುತ್ತದೆ. ಆದರೆ, ನೆಲದೊಳಗೆ ಮಳೆ ನೀರು ಇಂಗುವ ಗತಿ ತುಂಬ ನಿಧಾನ. ಮೇಲ್ಮೈ ನೀರಿನಂತೆ ಬಹುಬೇಗ ಹರಿದು ಮಾಯವಾಗುವುದಿಲ್ಲ! ನಿಧಾನವಾದರೂ ತಾಳಿಕೆ ಮತ್ತು ಬಾಳಿಕೆ ಬರುವಂತೆ ಇಂಗಿದ ನೀರು ನೆಲದೊಳಗೆ ಶೇಖರಗೊಳ್ಳುತ್ತದೆ.

ನಮ್ಮ ಕಣ್ಣಿಗೆ ಕಾಣುವ ಕೆರೆ-ಕುಂಟೆ, ನದಿ-ಹಳ್ಳದ ನೀರು ‘ಮೇಲಿನ ನೀರು.’ ನಮ್ಮ ಕಣ್ಣಿಗೆ ಕಾಣದಂತೆ ನೆಲದೊಳಗೆ, ಮಣ್ಣ ಕಣಗಳ ನಡುವಿನ ರಂಧ್ರಗಳಲ್ಲಿ, ಕಲ್ಲು ಪದರುಗಳ ಸೀಳುಗಳಲ್ಲಿ ಶೇಖರಗೊಂಡು, ಬಾವಿ ತೋಡಿದಾಗ ಬಿಟ್ಟುಕೊಡುವ ‘ನೆಲದ ನೀರು’ – ಅಂತರ್ಜಲ.

BIRTH PLACE OF SHALMALA RIVER NEAR SOMESHWAR DHARWAD (1)ನದಿಗಳ ದಂಡೆ ಆಶ್ರಯಿಸಿ ನಾಗರಿಕತೆ ಬೆಳೆದದ್ದು, ಊರು ಪಲ್ಲವಿಸಿದ್ದು ನಮಗೆ ತಿಳಿದಿದೆ. ಧಾರವಾಡ ಶಾಲ್ಮಲಾ ನದಿ ತಟದಲ್ಲಿದೆ. ಈಗ ಈ ನದಿಯ ಅಚ್ಚುಕಟ್ಟು ಪ್ರದೇಶ, ಉಗಮ ಸ್ಥಾನ ಎಲ್ಲ ಅತಿಕ್ರಮಣಗೊಂಡಿದೆ. ಹೆಚ್ಚೂ ಕಡಿಮೆ ನದಿ ಸೋಮೇಶ್ವರ ದೇವಾಲಯದ ಪಕ್ಕ ಕೆರೆಯಂತೆ ಗೋಚರಿಸುತ್ತದೆ! ಕಲಘಟಗಿ ಮೂಲಕ ಹಾಯ್ದು ಉತ್ತರ ಕನ್ನಡ ಜಿಲ್ಲೆಯ ಸಹಸ್ರಲಿಂಗದಲ್ಲಿ ಪುಟಿದೇಳುವ ಗುಪ್ತಗಾಮಿನಿಯೂ ಆದಂತೆ ಮೇಲ್ನೋಟಕ್ಕೆ ತೋರುತ್ತದೆ. ಅಖಿಲ ಭಾರತ ಕನ್ನಡ ಸಾಹಿತ್ಯ ೮೨ನೇ ಸಮ್ಮೇಳನದ ನಿಯೋಜಿತ ಅಧ್ಯಕ್ಷರು ಪ್ರೊ. ‘ಚಂಪಾ’ ‘ ಓ ನನ್ನ ಶಾಲ್ಮಲೆ’ ಕವನಕ್ಕೆ ಸ್ಪೂರ್ತಿ ನೀಡಿದ್ದ ನದಿ ಈಗ ಕಾಲನ ಗರ್ಭ ಸೇರುವ ತವಕದಲ್ಲಿದೆ.

ಊರು ಪಕ್ಕದ ನದಿಯಲ್ಲಿ ನೀರು ಬತ್ತಿದಾಗ, ನದಿ ಪಾತ್ರದಲ್ಲಿ ಗುಂಡಿ ತೋಡಿ ‘ಒರ್ತಿ ತೆಗೆಯುವುದು’ ನೀರನ್ನು ಪಡೆಯುವ ವಿಧಾನ ನಮ್ಮ ಕಣ್ಣ ಮುಂದಿದೆ. ಈ ಅನುಭವದ ಆಧಾರದಲ್ಲಿ ನಮ್ಮ ಹಿರೀಕರು ಮುಂದೆ ನದಿ ಪಾತ್ರದಿಂದ ತುಂಬ ದೂರವಿರುವ ಸ್ಥಳಗಳಲ್ಲಿಯೂ ನೀರಿಗಾಗಿ ಆಳು ಮಟ್ಟದ ಗುಣಿಗಳನ್ನು ತೋಡುವಂತೆ ಮಾಡಿತು. ಇಂತಹ ಗುಣಿಗಳಲ್ಲಿ ನೀರು ಬಸಿದು ಬಂದಾಗ, ನೀರಿನ ಕೊಳಗಳನ್ನು ಕಟ್ಟಿಕೊಂಡರು.

ಭೂವಿಷಯದಲ್ಲಿ ಪುದಿದ ರಸವಾಸನೆಗಳೆಲ್ಲ

ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು

ಬಾವಿಗೂಟೆಯನಿತ್ತು ನರರೊಡಲ ಸೇರುವುದು

ದೈವ ರಸತಂತ್ರವಿದು – ಮಂಕುತಿಮ್ಮ.

  –     ಕಗ್ಗ ಗುರು ಡಿ.ವಿ.ಜಿ.

ಇಂದಿಗೂ ನಮ್ಮ ಗ್ರಾಮಾಂತರ ಪ್ರದೇಶದ ಜನ ಜೀವನ ಉತ್ತಮಗೊಳ್ಳುತ್ತ ಬಂದಿರುವುದು ಅಂತರ್ಜಲದ ಆಸರೆಯಿಂದ. ಕಾರಣ, ವರ್ಷದ ಎರಡೂವರೆ ತಿಂಗಳು ಮಾತ್ರ ಮಳೆಗಾಲ! ಬಾಕಿ ಒಂಭತ್ತೂವರೆ ತಿಂಗಳು ಮೇಲು ನೀರು ಮತ್ತು ನೆಲದ ನೀರೇ ಜೀವದಾಯಿ!

ಭೂಮಿಯ ಮೇಲೆ ನೀರು ಹಿಮಗಡ್ಡೆಗಳಾಗಿ, ಮಂಜಾಗಿ, ಹರಿಯುವ ನದಿಯಾಗಿ, ನೆಲದಲ್ಲಿ ಇಂಗಿದ ಜಿನುಗುನೀರಾಗಿ ಕಾಣಿಸಿಕೊಳ್ಳುತ್ತದೆ. ಎಲ್ಲ ನೀರಿಗೂ ಮಳೆಯೇ ಆಧಾರ.       

BIRTH PLACE OF SHALMALA RIVER NEAR SOMESHWAR DHARWAD (2)ಕಷ್ಟದ ದಿನಗಳನ್ನು ಎದುರಿಸುವುದಕ್ಕೆ ಮಳೆ ನೀರನ್ನು ಅದು ಬಿದ್ದ ಸ್ಥಳದಲ್ಲಿಯೇ ತಡೆ ಹಿಡಿದು ಹಾಗೆ ಶೇಖರಿಸಿದ ನೀರನ್ನು ಮಳೆ ಬಾರದ ಕಾಲದಲ್ಲಿ ಮಿತವಾಗಿ ಎಚ್ಚರಿಕೆಯಿಂದ ಉಪಯೋಗಿಸಿಕೊಳ್ಳುವ ಜಾಣತನವನ್ನು ನಾವು ಬೆಳೆಸಿಕೊಳ್ಳಬೇಕಿದೆ. ಹಾಗೆಯೇ, ಅಂತರ್ಜಲವೂ ಬೇರೆ ಜಲವೇನಲ್ಲ; ಪ್ರತಿ ವರ್ಷ ಬಿದ್ದ ಮಳೆಯ ನೀರೇ ಜಿನುಗಿ ಭೂಮಿಯ ಆಳ ಪದರುಗಳಲ್ಲಿ ಸಂಗ್ರಹವಾಗುತ್ತ ಬಂದ ಸಂಪತ್ತು!

ನಮ್ಮ ರಾಜ್ಯದಲ್ಲಿ ಸದ್ಯ ೪.೫ ಲಕ್ಷ ಬೋರ್‌ವೆಲ್ ಕೊರೆಯಲಾಗಿದ್ದು, ಅಂದಾಜು ೪ ಲಕ್ಷ ಬೋರ್‌ವೆಲ್‌ಗಳು ಬಳಕೆಯಲ್ಲಿವೆ. ಆ ಪೈಕಿ, ಅಂದಾಜು ೧ ಲಕ್ಷಕ್ಕೂ ಮಿಕ್ಕಿದ ಕೊಳವೆ ಬಾವಿಗಳು ಬೆಂಗಳೂರು ವ್ಯಾಪ್ತಿಯಲ್ಲಿಯೇ ಸೇವಾ ನಿರತವಾಗಿವೆ! ರಾಜ್ಯದ ಯಾವುದೇ ಮೂಲೆಯಲ್ಲಿ ಸರ್ಕಾರಿ ನಳದ ವ್ಯವಸ್ಥೆ ಇಲ್ಲ ಅಥವಾ ಕುಡಿವ ನೀರಿನ ಪೂರೈಕೆ ನಿಯಮಿತವಾಗಿಲ್ಲ ಎಂದಾದರೆ, ‘ಬೋರ್‌ವೆಲ್ ಇದೆ..’ ಎಂದೇ ಅರ್ಥ ಮಾಡಿಕೊಳ್ಳುವುದು!

ಆದರೆ, ೪.೫ ಲಕ್ಷ ಬೋರ್‌ವೆಲ್‌ಗಳ ಪೈಕಿ ಸುಮಾರು ೫೦ ಸಾವಿರ ಕೊಳವೆ ಬಾವಿಗಳಿಗೆ ಮಾತ್ರ ಸುಸ್ಥಿತಿಯ ಮರುಪೂರಣ ವ್ಯವಸ್ಥೆ ಇದೆ! ಅದೂ ಪಟ್ಟಣ ಪ್ರದೇಶದಲ್ಲಿ.. ಕಾರಣ ಕರ ರಿಯಾಯಿತಿ ಪಡೆಯುವ ಆಸೆಯಿಂದ. ಮಳೆಯಾದರೆ ಮಾತ್ರ ‘ಈ ಬೋರ್‌ವೆಲ್‌ಗಳು ರೀಚಾರ್ಜ್’! ಇಲ್ಲದಿದ್ದರೆ, ಬಾಕಿ ೪ ಲಕ್ಷ ಕೊಳವೆ ಬಾವಿಗಳ ಸ್ಥಿತಿ.. ‘ನೀರೆತ್ತು-ಬಳಸು-ಬಿಸಾಕು’! ಪರವಾನಿಗೆ ಇಲ್ಲದೇ ಕೊರೆಯಿಸಿದ ಕೊಳವೆ ಬಾವಿಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚೂ ಕಡಿಮೆ ೨ ಲಕ್ಷದಷ್ಟು!

ಕೃಷಿ ಮತ್ತು ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಪೂರೈಕೆಗೆ ಬಳಕೆಯಾಗುವ ಕೊಳವೆ ಬಾವಿಗಳ ಸಂಖ್ಯೆಯೇ ಸಿಂಹಪಾಲಿನಷ್ಟಿದೆ. ಮಳೆ ಅಥವಾ ಇಲ್ಲಿ ಬಳಸಿದ ನೀರನ್ನು ಬೋರ್‌ವೆಲ್‌ಗಳಿಗೆ ಮರುಪೂರಣ ಮಾಡುವ ಯಾವುದೇ ವೈಜ್ಞಾನಿಕ ಅಥವಾ ಸ್ಥಳೀಯ ತಾಂತ್ರಿಕ ಕೌಶಲ ಅಳವಡಿಸಿದ ಉದಾಹರಣೆ ಇಲ್ಲ.

ಮೇಲಾಗಿ, ಕೃಷಿ ಭೂಮಿಯಲ್ಲಿ ಬಂದಾದ ಬೋರ್‌ವೆಲ್‌ಗಳಿಂದ ಕೇಸ್ ಪೈಪ್ ಎತ್ತಿ, ಬಾಯ್ದೆರೆದ ‘ಜೀವ ಇಂಗುಗುಂಡಿ’ಗಳಾಗಿಸಿರುವ ಬೋರ್‌ವೆಲ್‌ಗಳನ್ನು ಕೂಡಲೇ ಮಾಲೀಕರ ಖರ್ಚಿನಲ್ಲಿ ಮುಚ್ಚಿಸಲು ಎಲ್ಲ ೩೦ ಜಿಲ್ಲಾಡಳಿಗಳಿಗೂ ರಾಜ್ಯಾಡಳಿತ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಸರ್ಕಾರ ಇನ್ನು ನಮ್ಮ ಬೇಡಿಕೆ ತಕ್ಕಷ್ಟು ನೀರನ್ನು ಪೂರೈಸಲು ಸಾಧ್ಯವಿಲ್ಲ. ಜಿಲ್ಲಾವಾರು ಪರ್ಯಾಯ ಚಿಂತನೆಗೆ ಇದು ಸಕಾಲ. ಇನ್ನಾದರೂ ಮೋಡಗಳನ್ನು ಆಕರ್ಷಿಸಲು ಸಂಸದರು, ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು, ಆಡಳಿತದ ಚುಕ್ಕಾಣಿ ಹಿಡಿದವರನ್ನು ‘ಸೆಂಟ್ರಿ’ ಆಗಿಸಬೇಕು! ಏಕೆಂದರೆ ನೆಲ-ಮುಗಿಲಿನ ಸಂತಾನವೇ.. ಮೋಡ.

 

ಚಿತ್ರಶ್ರೀ ಶಿವಾನಂದ ಕಳವೆ.

ಶಾಲ್ಮಲಾ ನದಿ ಉಗಮಸ್ಥಾನ, ಧಾರವಾಡ

ಶಾಲ್ಮಲಾ ನದಿ ಹರಿಯುವ ಸಹಸ್ರಲಿಂಗ, ಉತ್ತರ ಕನ್ನಡ ಜಿಲ್ಲೆ.

 ಲೇಖನ : ಹರ್ಷವರ್ಧನ ವಿ. ಶೀಲವಂತ, ಧಾರವಾಡ.

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*