ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹುಯ್ಯೋ ಹುಯ್ಯೋ ಮಳೆರಾಯ

ಮಳೆ ನಮ್ಮ ಬೇಸಾಯದ ಹತ್ತಿರದ ನೆಂಟ. ಯಾವ ಕಾಲದಲ್ಲಿ ಯಾವ ಮಳೆ ಬೀಳುತ್ತದೆ, ಯಾವ ಮಳೆ ಬಂದಾಗ ಯಾವ ಕೃಷಿ ಚಟುವಟಿಕೆ ಆರಂಭಿಸಬೇಕು, ಯಾವ ಬೀಜ ಬಿತ್ತಬೇಕುಎಂಬ ಲೆಕ್ಕಾಚಾರದಲ್ಲಿ ರೈತ ಸಮುದಾಯ ತಪ್ಪುವುದಿಲ್ಲ. ಹಳ್ಳಿಗರ ಪಾಲಿಗೆ ಮಳೆ ಕೇವಲ ನೀರಲ್ಲ. ಬದುಕಿನ ಜೀವ ಧಾರೆ. ಪ್ರಕೃತಿಯ ಒಡಲಿನ ವಿದ್ಯಮಾನಗಳನ್ನು ಎಚ್ಚರಿಕೆಯಿಂದಗಮನಿಸಿ, ಮಳೆಯ ಸಂಭವನೀಯತೆಯನ್ನು ನಿರ್ಧರಿಸುವ ಕೃಷಿಕರ ಬದುಕಿನ ಶೈಲಿ ಅನನ್ಯ. ಮಲ್ಲಿಕಾರ್ಜುನ ಹೊಸಪಾಳ್ಯ ರವರ ಲೇಖನ 

ಮಳೆ ಕುರಿತ ಆಚರಣೆಗಳು

ಕಾಲಕ್ಕೆ ಸರಿಯಾಗಿ ಮಳೆ ಬಾರದಿದ್ದಾಗ ರೈತ ಬಲು ಕಂಗಾಲು. ಆದರೆ ಅಂತಹ ಸಂದರ್ಭದಲ್ಲಿ ಆತ ಕೇವಲ ಮುಗಿಲು  ನೋಡುತ್ತಾಕೂರುವುದಿಲ್ಲ. ತನ್ನ ಸುತ್ತ-ಮುತ್ತಲ  ಪಶು ಪಕ್ಷಿ, ಪ್ರಾಣಿಗಳನ್ನು ಗಮನಿಸತೊಡಗುತ್ತಾನೆ. ಇಡೀ ದಿನ ಹೊಲಗದ್ದೆಗಳಲ್ಲಿ ಸುತ್ತಾಡಿ  ಗಿಡ-ಮರ, ಪ್ರಾಣಿ ಪಕ್ಷಿ ಮತ್ತು ಕೀಟಗಳ ನಡವಳಿಕೆಗಳನ್ನು ಅಭ್ಯಸಿಸಿ, ಆ ಅನುಭವದ ಆಧಾರದ ಮೇಲೆ ಮಳೆಯ ಆಗು-ಹೋಗುಗಳನ್ನುನಿರ್ಧರಿಸುತ್ತಾನೆ. ಏಕೆಂದರೆ ನೆಲದ ಜೊತೆ ಅವಿನಾಭಾವ ಸಂಬಂಧ ಹೊಂದಿದ ಕ್ರಿಮಿ ಕೀಟಗಳಿಗೆ ಮಳೆ ಬರುವ ಹಾದಿಯ ಖಚಿತತೆತಿಳಿದಿರುತ್ತದೆ. ಪಕ್ಷಿಗಳ ವರ್ತನೆ, ಇರುವೆಗಳ ತರಾತುರಿ, ಜಾನುವಾರುಗಳ ದಿನಚರಿಗಳು ಒಂದು ನಿರ್ಧಿಷ್ಟ ರೀತಿಯಲ್ಲಿಬದಲಾಗುವುದಕ್ಕೂ ಮಳೆ ಬರುವುದಕ್ಕೂ ಅಂತರ್ ಸಂಬಂಧವಿದೆ. ಈ ಅಂತರ್ ಸಂಬಂಧದ ವರ್ತಮಾನವನ್ನು ನಮ್ಮ ರೈತ ವರ್ಗ ಶತ-ಶತಮಾನಗಳಿಂದ ಗಮನಿಸಿ ಅನುಭವಿಸಿದೆ. ಆ ಅನುಭವದ ನೆಲೆಯಲ್ಲಿ ಈ ಮಳೆ ನಂಬಿಕೆಗಳು ರೂಢಿಗೆ ಬಂದಿವೆ, ಚಾಲ್ತಿಯಲ್ಲಿವೆ.

ಮನುಷ್ಯರಿಗಿಂತ ಪ್ರಾಣಿಗಳು ಹೆಚ್ಚು ಸೂಕ್ಷ್ಮ ಮತ್ತು ಸಂವೇದನೆಯುಳ್ಳವಾಗಿರುತ್ತವೆ. ಹಾಗಾಗಿ ಅವು ಪ್ರಕೃತಿ ಮತ್ತುವಾತಾವರಣದಲ್ಲಾಗುವ ಬದಲಾವಣೆಯನ್ನು ಬಹು ಬೇಗ ಗುರುತಿಸುತ್ತವೆ ಮತ್ತು ಅದನ್ನು ತಮ್ಮ ಹಾವಭಾವಗಳಿಂದ ವ್ಯಕ್ತಪಡಿಸುತ್ತವೆ. ಈವರ್ತನೆಗಳನ್ನು ಅನುಭವದಿಂದ ಬಲ್ಲ ರೈತ ಸಮುದಾಯ ಅವುಗಳನ್ನಾಧರಿಸಿ ಮಳೆ-ಬೆಳೆಯ ಮುನ್ಸೂಚನೆಯನ್ನು ವಿಶ್ಲೇಷಿಸುತ್ತಾರೆ.

 • ಅಧುನಿಕ ವಿಜ್ಞಾನದ ಅಳತೆಗೋಲಿಗೆ ಸಿಕ್ಕದ, ತಲೆ-ತಲೆಮಾರುಗಳ ಮೂಲಕ ಹಾದು ಬಂದ ಹಳ್ಳಿಗರ  ಮಳೆನಂಬಿಕೆಗಳು ಹೀಗಿವೆ.
 • ಹುಲ್ಲಿನ ಮೇಲೆ ಎಂಜಲು ಉಗಿದಂತೆ ಕಾಣುವ ನುರುಗು ಹುಳು ಹುಲ್ಲಿನಲ್ಲಿ ಜಾಸ್ತಿ ಇದ್ದರೆ ಮಳೆ ಬರುವುದು ವಿಳಂಬವಾಗುತ್ತದೆ, ಅದೇ ಹುಳು ರಾಗಿ ಹೊಲದಲ್ಲಿ ಹೆಚ್ಚಾಗಿದ್ದರೆಒಂದು ವಾರದೊಳಗೆ ಮಳೆ ಗ್ಯಾರಂಟಿ.
 • ಉಗನೀ ಬಳ್ಳಿ ತುಂಡಾಗದೆ ಚೆನ್ನಾಗಿ ಹಂಬು ಬೆಳೆದ ವರ್ಷ ಒಳ್ಳೆ ಮಳೆಯನ್ನು ನಿರೀಕ್ಷಿಸಬಹುದು.
 • ಮಳೆ ಇಲ್ಲದ ದಿನ ಬೆಟ್ಟಗಳಲ್ಲಿ ಮಂಜು ಅಥವಾ ಕಾವಳ ಹಿಡಿದರೆ ವಾರದೊಳಗೆ ಮಳೆ ಬರುತ್ತದೆ. ಜಡಿಮಳೆ ಇದ್ದು ಬೆಟ್ಟಗಳಲ್ಲಿ ಮಂಜು ಹಿಡಿದರೆ (ಮುಸುಕಿದರೆ) ಬರುತ್ತಿದ್ದ ಮಳೆಬಿಡುತ್ತದೆ ಇಲ್ಲವೇ ಜಾಸ್ತಿಯಾಗುತ್ತದೆ.
 • ಕೊಡತಿ ಹುಳು  (ಡ್ರಾಗನ್ ಪ್ಲೈ) ಗುಂಪಾಗಿ ನೆಲ ಕಚ್ಚಿದರೆ ಅಥವಾ ನೆಲ ಮೂಸುತ್ತಿದ್ದರೆ ಅಥವಾ ಉತ್ತರದಿಂದ ದಕ್ಷಿಣಕ್ಕೆ ಹಿಂಡುಗಟ್ಟಲೆ ಹಾರಿ ಹೋದರೆ ೩ ದಿನದೊಳಗೆ ಮಳೆಬರುತ್ತದೆ.
 • ಹುಣಸೇ ಮರ ಜಬರದಸ್ತಾಗಿ  ಹೂ ಬಿಟ್ಟ ವರ್ಷ ಮಳೆಯ ಪ್ರಮಾಣ ಕೂಡ ಅಧಿಕ.
 • ನಂದಿ ಮೂಲೆ ಅಥವಾ ದೇವ ಮೂಲೆಯಲ್ಲಿ ಮಿಂಚು ಹುಟ್ಟಿದರೆ ತಪ್ಪದೆ ಮಳೆ ಬರುತ್ತದಂತೆ, ನಿಖರವಾದ ಮಳೆ ನಂಬಿಕೆಯಿದು ಮತ್ತು ವ್ಯಾಪಕವಾಗಿ ನಾಡಿನ ಹಲವಾರುಪ್ರದೇಶಗಳಲ್ಲಿ ಇದು ಬಳಕೆಯಲ್ಲಿರುವುದು ವಿಶೇಷ.
 • ತೆಳುವಾಗಿ ಹರಿಯುತಿರುವ ಹಳ್ಳದ ನೀರು ಇದಕ್ಕಿದ್ದಂತೆ ಭೂಮಿಯೊಳಗೆ ಇಂಗಿ ಹೋದರೆ ಮಳೆ ಬರುತ್ತದೆ ಎಂದು ನಂಬಲಾಗುತ್ತದೆ.
 • ಕಪ್ಪು ಇರುವೆಗಳು ತಮ್ಮ ಗೂಡಿನಿಂದ ಮೊಟ್ಟೆಗಳು ಮತ್ತು ಆಹಾರವನ್ನು ಬೇರೆಡೆಗೆ ಸಾಗಿಸುತ್ತಿದ್ದರೆ ೩ ದಿನದೊಳಗೆ ನಿಶ್ಚಿತವಾಗಿ ಮಳೆ ಬರುತ್ತದೆ. ಇರುವೆಗಳು ತಮ್ಮ ಸ್ಥಳಬದಲಾಯಿಸುವಿಕೆಯು ಮಳೆ ಬರುವ ಸೂಚನೆ.
 • ಕೆಂಬೂತ (ಸಂಬಾರ್ ಕಾಗೆ) ಹಾಗೂ ಕೋಗಿಲೆಗಳು ಕೂಗುತ್ತಿದ್ದರೆ ಶೀಘ್ರದಲ್ಲಿ ಮಳೆ ಯೋಗ ಇದೆಯೆಂದು ಅರ್ಥ.
 • ಸೂರ್ಯ ಹುಟ್ಟುವ ಸ್ವಲ್ಪ ಹೊತ್ತಿನ ಮೊದಲು ಪೂರ್ವದಿಂದ ಪಶ್ಚಿಮಕ್ಕೆ ಬಿಳಿ ಮೋಡ ಕಾಲುವೆ ರೀತಿ ಗೋಚರಿಸಿದರೆ ಅಂದು ಮಳೆ ಬರುತ್ತದೆ.
 • ಮನೆಯ ಕೋಳಿಯು ರೆಕ್ಕೆ ಹರಡಿ ಬಿಸಿಲು ಕಾಯಿಸುತ್ತಿದ್ದರೆ ಮಳೆಯ ಮುನ್ಸೂಚನೆ. ಅಲ್ಲದೆ ಮದ್ಯಾಹ್ನದ ಹೊತ್ತಲ್ಲಿ ಹುಂಜ ಕೂಗಿದರೆ ಹಾಗೂ ಕೋಳಿಗಳು ಕಚ್ಚಾಡಿದರೆ ಅಂದುಮಳೆ ಬರುತ್ತದೆ.
 • ಒಣ ಭೂಮಿಯ ಕಲ್ಲಿನ ಕೆಳಗೆ ಕಪ್ಪೆ ಒಂದೇ ಸಮ ವಟಗುಟ್ಟುತ್ತಿದ್ದರೆ ಮಳೆ ಬರುವ ಸಂಭವ ಹೆಚ್ಚು.
 • ಸೂರ್ಯನ ಸುತ್ತ ವೃತಾಕಾರದ ಉಂಗುರಗಳು ಮೂಡುತ್ತವೆ. ಇವು ಸೂರ್ಯನಿಗೆ ಹತ್ತಿರದಲ್ಲಿದ್ದರೆ ಬೇಗ ಮಳೆ ಬರುತ್ತದೆ, ಉಂಗುರ ದೂರದಲ್ಲಿದ್ದರೆ ತಡವಾಗಿ ಮಳೆ ಬರುತ್ತದೆ.ಇದನ್ನು ಕೆಲವೆಡೆ ಸೂರ್ಯನಿಗೆ ಗುಡಿ ಕಟ್ಟುವುದು ಎನ್ನುತ್ತಾರೆ. ಚಂದ್ರನಿಗೆ ಈ ರೀತಿ ಉಂಗುರ ಅಥವಾ ಗುಡಿ ಮೂಡಿದಾಗಲೂ ಇದೇ ರೀತಿಯ ನಂಬಿಕೆಗಳಿವೆ.
 • ಕಾಡು-ಮೇಡುಗಳಲ್ಲಿ ಶತಾವರಿ ಬಳ್ಳಿ (ಅಜ್ಜಿತಲೆ ಗಿಡ) ಚೆನ್ನಾಗಿ ಹರಿದ ವರ್ಷ ಮಳೆ-ಬೆಳೆ ಉತ್ತಮವಾಗುತ್ತದೆ.
 • ನವಿಲು ಹಾಗೂ ಕಾಡುಕೋಳಿಗಳು ಕೂಗಿಕೊಂಡರೆ ೩ ದಿನದೊಳಗೆ ಮಳೆ ಬರುತ್ತದೆ.
 • ಕಡ್ಡಿ ಜೇನಿನ ತುಪ್ಪ ಗಟ್ಟಿಯಾದರೆ ಮಳೆ ವಿಳಂಬವಾಗುತದೆ. ಅದೇ ಜೇನು ತುಪ್ಪ ತೆಳುವಾಗಿದ್ದರೆ ಮಳೆ ಬರುವ ಸಂಭವ ಜಾಸ್ತಿ.
 • ಗೊಟ್ಟಿಮರ ಕಾಯಿ ಜಾಸ್ತಿ ಬಿಟ್ಟ ವರ್ಷ ಬರಗಾಲ ಬರುತ್ತದೆ.
 • ಅಗ್ನಿ ಮೂಲೆಯಲ್ಲಿ ಮಿಂಚಿದರೆ ಆ ದಿನ ಮಳೆ ಬರುವುದಿಲ್ಲ.
 • ನಿಶ್ಚಿತ ಪ್ರಮಾಣದ ಹಾಲು ಕರೆಯುತ್ತಿರುವ ಹಸು-ಎಮ್ಮೆಗಳು ಇದ್ದಕ್ಕಿದ್ದಂತೆ ಕಡಿಮೆ ಹಾಲು ಕರೆದರೆ ಮುಂದಿನ ಎರಡು ದಿನಗಳಲ್ಲಿ ಮಳೆಬರುತ್ತದೆ.
 • ದನ-ಕರುಗಳು ಒಂದು ನಿರ್ದಿಷ್ಟ ದಿಕ್ಕಿಗೆ ತಲೆ ಎತ್ತಿ ನಿಂತುಕೊಂಡು, ಬಾಯಿಯನ್ನು ಸ್ವಲ್ಪ ತೆರೆದು ಮೂಗಿನ ಹೊರಳೆ ಅಗಲಿಸಿಗಾಳಿಯನ್ನು ಜೋರಾಗಿ ಎಳೆದುಕೊಳ್ಳುತ್ತಿದ್ದರೆ ಮಳೆಯಾಗುತ್ತದೆ.
 • - ರಣಹದ್ದುಗಳು, ಕಾಗೆಗಳು ಮುಗಿಲಲ್ಲಿ ತುಂಬಾ ಹೊತ್ತು ಹಾರಾಡುತ್ತಿದ್ದರೆ, ಹದ್ದುಗಳು ರೆಕ್ಕೆ ಬಡಿಯದೆ ಮುಗಿಲಲ್ಲಿ ತುಂಬಾ ಹೊತ್ತುತೇಲಾಡುತ್ತಿದ್ದರೆ ಮಳೆ ಬರುವ ಸೂಚನೆ.

ಮುತ್ತುಗದ ಮರ ಜಗತ್ತಿನಲ್ಲಿರುವ ಮರ-ಮುಟ್ಟುಗಳಲ್ಲಿ  ಅತ್ಯಂತ ಹಿರಿಯದು ಎನ್ನುವ ನಂಬಿಕೆ ನಮ್ಮ ರೈತರಲ್ಲಿದೆ. ಅದಕ್ಕೆ ಅವರುನೀಡುವ ಕಾರಣ ಅದರ ಹೆಸರೇ ಮುದುಕದ ಮರ ಎಂಬುದು. ಈ ಮರ ಚೆನ್ನಾಗಿ ಹೂ ಕಾಯ್ದು ಕಾಯಿ ಜೋತಿಡಿದರೆ ಆ ವರ್ಷ ಹಿಂಗಾರುಮತ್ತು ಮುಂಗಾರು ಎರಡೂ ಸಹ ಸಮೃದ್ಧವಾಗಿರುತ್ತದೆ.  ಅದರಲ್ಲಿಯೂ ಕಾಯಿಯಲ್ಲಿರುವ ರುಪಾಯಗಲದ ಬೀಜ ಕಾಯಿಯ ತೊಟ್ಟಿನಭಾಗದಲ್ಲಿದ್ದರೆ ಹಿಂಗಾರು ಉತ್ತಮ, ತುದಿಯ ಭಾಗದಲ್ಲಿದ್ದರೆ ಮುಂಗಾರು ಉತ್ತಮ ಮತ್ತು ಸರಿಯಾಗಿ ಕಾಯಿಯ ಮಧ್ಯ ಭಾಗದಲ್ಲಿದ್ದರೆಹಿಂಗಾರು -ಮುಂಗಾರು ಎರಡೂ ಉತ್ತಮ ಎಂಬುದು ರೈತರ ನಂಬಿಕೆ. ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಅಂದರೆ ಇನ್ನೇನು ಮುಂಗಾರುಆರಂಭವಾಗುತ್ತದೆನ್ನುವಾಗ ಕೆಂಪು ವರ್ಣದ ಹೂ ಬಿಡುವ ಮುತ್ತುಗ ರೈತರಿಗೆ ಆ ವರ್ಷದ ಏರಿ-ಪೇರುಗಳನ್ನು ತಿಳಿಸುವ ಭವಿಷ್ಯಕಾರ.

ಹೀಗೆ ಹತ್ತು-ಹಲವು ನಂಬಿಕೆ, ವಾಡಿಕೆಗಳನ್ನು ನಮ್ಮ ರೈತಾಪಿಗಳ ನಿತ್ಯದ ಬದುಕಿನಲ್ಲಿ ಕಾಣಬಹುದು.

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*