ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ-79 : ಕೆರೆ ಒತ್ತುವರಿ: ಮತ್ತೊಂದು ವರದಿ ಮಂಡನೆ, ಅದೇನದು?

ರಾಜಧಾನಿ ಬೆಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿಗಿಂತ ಅವುಗಳನ್ನು ಉಳಿಸಿಕೊಳ್ಳುವುದೇ ಸಾಹಸದ ಕೆಲಸ. ಇರುವ ಕೆರೆಗಳಿಗೆ ಹತ್ತಾರು ಕೋಟಿ ವೆಚ್ಚ ಮಾಡಿ, ಅಲಂಕಾರಿಕ ವಸ್ತುಗಳಿಗೇ ಹೆಚ್ಚು ವೆಚ್ಚ ಮಾಡುತ್ತಿರುವ ಪ್ರಕ್ರಿಯೆ ಒಂದೆಡೆಯಾದರೆ, ಮತ್ತೊಂದೆಡೆ ಅದರಲ್ಲಿರುವ ಒತ್ತುವರಿಯನ್ನು ತೆಗೆಯುವುದೇ ಮೂಗಿಗೆ ತುಪ್ಪ ಸುರಿಯುವ ಕೆಲಸದಂತಾಗಿದೆ. ಏಕೆಂದರೆ ಈ ಒತ್ತುವರಿ ದಶಕಗಳಿಂದಲೂ ಇರುವ ಸಮಸ್ಯೆ. ಆಗಿನಿಂದಲೂ ಮೂಗಿಗೆ ತುಪ್ಪ ಸವರಿದಂತೆ ಒತ್ತುವರಿ ತೆರವು ಎಂದು ಸರ್ಕಾರಗಳು ಉರುಳಿದಂತೆ ಬರುವ HD halli lakeಮತ್ತಷ್ಟು ಸರ್ಕಾರಗಳು ಅದನ್ನೇ ಮತ್ತೆ ಹೇಳುತ್ತಿವೆ.

ಬೆಂಗಳೂರಿನ ಕೆರೆಗಳನ್ನು ಉಳಿಸಲು ಲಕ್ಷ್ಮಣರಾವ್ ವರದಿಯಿಂದ ಹಿಡಿದು ಹಲವು ವರದಿಗಳು ಸರ್ಕಾರದ ಕೈ ಸೇರಿವೆ. ಆದರೆ ಅದರ ಅನುಷ್ಠಾನ ಮಾತ್ರ ಎಲ್ಲೂ ಆಗಿಲ್ಲ. ಅಲ್ಲಲ್ಲಿ ಕೋಟ್ಯಂತರ ಸುರಿದು ಕೆಲವಷ್ಟು ಕೆರೆಗಳಿಗೆ ಕಾಯಕಲ್ಪ ನೀಡಿರುವುದಷ್ಟೇ ಸಮಾಧಾನಕರ ವಿಷಯ. ಕೆರೆಗಳ ಒತ್ತುವರಿ ವಿಷಯ ರಾಜಕಾರಣಿಗಳ ಮಾತಿಗೆ ತುಪ್ಪ ಇದ್ದಂತೆ. ಆಗಾಗ ಅದನ್ನು ಬಳಸಿಕೊಂಡೇ ಕಾಡ್ಗಿಚ್ಚಿಗೆ ಸುರಿಯುತ್ತಲಿರುತ್ತಾರೆ. ಒಂದು ಮಳೆ ಬಂದಾಗ ತಣ್ಣಗಾಗುವ ಕಾಡ್ಗಿಚ್ಚಿನಂತೆ ಒಂದು ಒಪ್ಪಂದ ಕೂಡ ಇಂತಹ ರಾಜಕಾರಣದ ವಿಷಯಗಳನ್ನು ತಣ್ಣಗಾಗಿಸಿಬಿಡುತ್ತದೆ. ಮತ್ತೆ ಬೇಸಿಗೆ ಸಂದರ್ಭದಲ್ಲೇ ಕಾಡ್ಗಿಚ್ಚು ಬರುವಂತೆ, ಯಾವುದೋ ಬಿಸಿ ತಾಕಿದ ಸಂದರ್ಭದಲ್ಲಿ ನಾವಿದ್ದೇವೆ ನಿಮ್ಮ ಜೊತೆಗೆ ಅಥವಾ ಪರಿಸರ ಉಳಿಸಬೇಕು ಎಂದು ಎದ್ದು ನಿಲ್ಲುತ್ತಾರೆ. ಇಂತಹ ಸಂದರ್ಭದಲ್ಲೇ ಸರ್ಕಾರವೆಂಬ ಸರ್ಕಾರವೇ ರಚಿಸಿದ ತೀರಾ ಇತ್ತೀಚಿಗೆ, ಈಗಿರುವ ವಾಸ್ತವವನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಒಂದಷ್ಟು ತೆರೆದಿಡುವ ಕೆಲಸ ವಿಧಾನಸಭೆ ಸದನ ಸಮಿತಿಯಿಂದ ಆಗಿದೆ.

2014ರಲ್ಲಿ ಬೆಂಗಳೂರು ನಗರದಲ್ಲಿ ಕೆರೆಗಳ ಒತ್ತುವರಿ ತೆರವಿನ ವಿಷಯ ರಾಜಕಾರಣವೇ ಆಯಿತು. ರಾಜಕಾಲುವೆ ಒತ್ತುವರಿ ಕೆಲಸಗಳು ಇಂದಿಗೂ ಅವಶೇಷಗಳಂತೆಯೇ ಇತ್ತು ಫಲಾನುಭವಿಗಳ ಸುಪರ್ದಿಯಲ್ಲೇ ಇದೆ. 2014ರಲ್ಲಿ ಒಂದು ತೆರವು ಕಾರ್ಯ ಆದಾಗ ಎಲ್ಲ ರಾಜಕಾರಣಿಗಳು ಸದನದ ಒಳಗೆ ಹಾಗೂ ಹೊರಗೆ ಸಾಕಷ್ಟು ಮಾತನಾಡಿದರು. ಗಂಟೆಗಟ್ಟಲೆ ಮಾತನಾಡಿದರು. ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸಿದರು. ಒತ್ತುವರಿ ತೆರವಿನಿಂದ ಕಂಗಾಲಾಗಿ ಬೀದಿಗೆ ಬಿದ್ದವರತ್ತ ಹೋಗಿ ಕನಿಕರ ವ್ಯಕ್ತಪಡಿಸಿದರು. ಇಂತಹ ಒತ್ತುವರಿ ತೆರವು ಸರಿ ಅಲ್ಲ ಎಂದರು. ಸದನದಲ್ಲಿ ಬಂದು ಒತ್ತುವರಿ ತೆರವಾಗಬೇಕು, ಅಮಾಯಕರಿಗೆ ತೊಂದರೆ ಆಗಬಾರದು ಎಂದೂ ಹೇಳಿದರು. ಆದರೆ, ಯಾರ ಮೇಲೆ ಕ್ರಮ ಆಗಬೇಕು ಎಂದಾಗ ಎಲ್ಲರೂ ಸುಮ್ಮನಾದರು.

AmruthaHalli-1ಇಂತಹ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ ಬಗ್ಗೆ ಗಂಟೆಗಟ್ಟಲೆ ವಿಧಾನಸೌಧದಲ್ಲಿ ದಾಖಲೆ, ಚಿತ್ರಗಳ ಸಹಿತ ತೆರೆದಿಟ್ಟರು. ಸರ್ಕಾರವನ್ನು ಹೀಯಾಳಿಸಿದರು. ತಾಕತ್ತಿದ್ದರೆ ಇಂತಹ ಒತ್ತುವರಿ ತೆಗೆಯಿರಿ ಎಂದು ಸವಾಲು ಹಾಕಿದರು. ಸಾಕಷ್ಟು ವಾದ ವಿವಾದಗಳ ನಂತರ, ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ ಬಗ್ಗೆ ವರದಿ ಸಲ್ಲಿಸಲು ಸದನ ಸಮಿತಿ ರಚಿಸಲು ತೀರ್ಮಾನಿಸಲಾಯಿತು. “ಬೆಂಗಳೂರು ಮತ್ತು ಸುತ್ತಮುತ್ತಲಿನ ಕೆರೆ ಒತ್ತುವರಿ ಅಧ್ಯಯನ ಸದನ ಸಮಿತಿ” ಎಂಬ ಹೆಸರಿನಲ್ಲಿ ಸಮಿತಿ ರಚನೆಯೂ ಆಯಿತು. ಇದಕ್ಕೆ ಅಂದು ಶಾಸಕರಾಗಿದ್ದ, ವರದಿ ನೀಡುವಾಗ ಸ್ಪೀಕರ್ ಆಗಿದ್ದ ಕೆ.ಬಿ. ಕೋಳಿವಾಡ ಅಧ್ಯಕ್ಷರಾಗಿದ್ದರು.  ಈ ಸಮಿತಿ ತನ್ನ ವರದಿಯನ್ನು ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ 2017ರ ನವೆಂಬರ್ 22ರಂದು ವರದಿಯನ್ನು ಸದನದಲ್ಲಿ ಮಂಡಿಸಿದರು. ಅದಾದ ಮೇಲೆ ಏನಾಗಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ.

ನಿಮಗೆ ಗೊತ್ತಿರಲಿ, ಬೆಂಗಳೂರಿನ ಕೆರೆಗಳ ಒತ್ತುವರಿ ಬಗ್ಗೆ ಸಮಗ್ರ ಮಾಹಿತಿ ನೀಡಿ ಒತ್ತುವರಿದಾರರನ್ನು ಬಿಡಬಾರದೆಂದು ಆಗ್ರಹಿಸಿ, ಈ ಸದನ ಸಮಿತಿ ರಚನೆಗೆ ಕಾರಣರಾಗಿದ್ದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಮುಖ್ಯಮಂತ್ರಿ. ಅವರ ಮುಂದೆಯೇ ಅವರೇ ಒತ್ತಾಯಿಸಿದ್ದ ಒತ್ತುವರಿ ತೆರವಿನ ವರದಿ ಇದೆ. ಈಗ ಏನು ಮಾಡುತ್ತಾರೆ ಎಂಬುದೇ ಇಂದಿನ ಕುತೂಹಲ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಕೆರೆಗಳ ಒತ್ತುವರಿ ಅಧ್ಯಯನ ಸಮಿತಿಯನ್ನು ಕೋಳಿವಾಡ ಸಮಿತಿ ವರದಿ ಎಂದು ಕರೆಯುವುದೂ ಇದೆ. ಇರಲಿ, ಆದರೆ, ಈ ವರದಿ ಬಗ್ಗೆ ಸಾಕಷ್ಟು ಹೇಳಲಾಗುತ್ತದೆ. ಇಷ್ಟಾದರೂ ಎಲ್ಲರಿಗೂ ವರದಿಯ ಸಂಪೂರ್ಣ ಮಾಹಿತಿ ಇಲ್ಲ. ಹೀಗಾಗಿ, ಎಲ್ಲರಿಗೂ ಮಾಹಿತಿ ಇರಲಿ ಎಂಬ ಕಾರಣದಿಂದ “ಕೆರೆ ನೋಟ”ದ ಮುಂದಿನ ನೋಟಗಳಲ್ಲಿ ಈ ವರದಿಯನ್ನು ಸಮಗ್ರವಾಗಿ ಬಿಚ್ಚಿಡಲಾಗುತ್ತಿದೆ. ನಿರೀಕ್ಷೆ ಮುಂದುವರಿಯಲಿ…

 

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*