ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಷಷ್ಠಿ ಪೂರ್ತಿ ಮಾಡಿಸಿಕೊಂಡ ಗಂಗೆ

ಅರವತ್ತೈದು ವಸಂತಗಳನ್ನು ಕಂಡ ನಮ್ಮ ಗಂಗೆಯ ಕಥೆ ಬರೆಯ ಹೊರಟರೆಅದು ಗಂಗಾಯಣವೇ ಆದೀತು. ಗಂಗೆ ಬೇರೆ ಯಾರೂ ಅಲ್ಲ. ನಮ್ಮ ಮನೆಯಸಿಹಿನೀರಿನ ಅಕ್ಷಯ ಪಾತ್ರೆ. ಅರ್ಥಾತ್, ಬಾಯಾರಿದವರಿಗೆ ಸದಾಕಾಲಸಿಹಿನೀರು ಹಂಚುತ್ತಿರುವ ಸಂತೃಪ್ತೆ. ಅನಸೂಯ ಶರ್ಮ  ರವರ ಲೇಖನ

ಷಷ್ಠಿ ಪೂರ್ತಿ ಮಾಡಿಸಿಕೊಂಡ ಗಂಗೆ

ಅರವತ್ತೈದು ವಸಂತಗಳನ್ನು ಕಂಡ ನಮ್ಮ ಗಂಗೆಯ ಕಥೆ ಬರೆಯ ಹೊರಟರೆ ಅದು ಗಂಗಾಯಣವೇ ಆದೀತು. ಗಂಗೆ ಬೇರೆ ಯಾರೂ ಅಲ್ಲ. ನಮ್ಮ ಮನೆಯಸಿಹಿನೀರಿನ ಅಕ್ಷಯ ಪಾತ್ರೆ. ಅರ್ಥಾತ್, ಬಾಯಾರಿದವರಿಗೆ ಸದಾಕಾಲಸಿಹಿನೀರು ಹಂಚುತ್ತಿರುವ ಸಂತೃಪ್ತೆ. ಇವಳಿಗೆ ಗಂಗೆ ಎಂಬ ಹೆಸರು ಬಂದಿದ್ದೂಒಂದು ಆಕಸ್ಮಿಕವೇ. ೮೫ ವರ್ಷದ ನಮ್ಮ ಅಜ್ಜಿಗೆ ಸಾಯುವುದರೊಳಗೆ ಒಮ್ಮೆಕಾಶಿಯಾತ್ರೆ ಮಾಡಬೇಕೆಂಬ ಮಹದಾಸೆ. ಅದು ಈಡೇರದಿದ್ದಾಗ, ಬಾವಿಯನೀರು ಸೇದಿ ಸ್ನಾನ ಮಾಡುತ್ತಾ, ‘ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂದು ಹೇಳುತ್ತಿದ್ದರು. ಅರ್ಥಾತ್ ಇಷ್ಟೆಲ್ಲಾ ನದಿಗಳ ನೀರಿನಲ್ಲಿ ಸ್ನಾನ ಮಾಡಿದ ಪುಣ್ಯ ಈ ಬಾವಿಯ ನೀರಿನಿಂದ ಸಿಗುತ್ತದೆ ಎಂದು. ಹಾಗಾಗಿ ನಮ್ಮ ಮನೆಯ ನೀರಿನಅಕ್ಷಯ ಪಾತ್ರೆ ಗಂಗೆಯಾದಳು.

ಮನೆಯಲ್ಲಿ ಜನಿಸಿದ ಮಗುವಿಗೆ ಮೂರು ತಿಂಗಳಾದಾಗ ಬಾಣಂತಿಯ ಕೈಯಿಂದ ಗಂಗೆ ಪೂಜೆಯಾಗುತ್ತಿದ್ದುದೂ ಈ ಬಾವಿಗೆಹಿಂದಿನಿಂದ ಬಂದಸಂಪ್ರದಾಯ. ಮೂರು ತಿಂಗಳವರೆಗೆ ಬಾಣಂತಿ ತಣ್ಣೀರು ಮುಟ್ಟುವಂತಿಲ್ಲ. ನಂತರ ಓಡಾಡ ತೊಡಗಿದಾಗ ಶೀತ ಬಾಧೆಗಳಿಂದ ತನ್ನನ್ನೂ, ಮಗುವನ್ನೂರಕ್ಷಿಸು ತಾಯಿ ಎಂದು ಬೇಡುವ ಪರಿ. ಬಾವಿ ಕಟ್ಟೆಗೆ ಅರಿಶಿನ ಕುಂಕುಮ ಹಚ್ಚಿ, ಹತ್ತಿಯಿಂದ ಮಾಡಿದ ಗೆಜ್ಜೆ-ವಸ್ತ್ರ ತೊಡಿಸಿ, ತೆಂಗಿನಕಾಯಿ, ಬಾಳೆಹಣ್ಣು, ಕಲ್ಲುಸಕ್ಕರೆ ನೇವೇದ್ಯ ಮಾಡಿ, ಕರ್ಪೂರದಾರತಿ ಎತ್ತಿ ಬಾಗಿನ ನೀಡುವುದು ಸಂಪ್ರದಾಯ. ಕೊನೆಯಲ್ಲಿ ಬಾವಿಯಿಂದ ನೀರು ಸೇದಿ ತೀರ್ಥ ತೆಗೆದುಕೊಂಡರೆ,ಬಾಣಂತಿ ಮಗುವಿಗೆ ಯಾವದೇ ಶೀತ ಸಂಬಂಧಿ ಖಾಯಿಲೆಗಳು ಕಾಡುವದಿಲ್ಲವೆಂಬ ಅಚಲ ನಂಬಿಕೆ. ಸ್ವರ್ಣಗೌರಿ ಹಬ್ಬದ ಮರುದಿನ ಗಂಗೆ ಪೂಜೆ ಮಾಡುವಪದ್ಧತಿ ಇಂದಿಗೂ ಪ್ರಚಲಿತ. ನಮ್ಮ ಬಾವಿ ಗಂಗೆಯಾಗಲು ಇದೂ ಒಂದು ಕಾರಣ.

 ಕೆಲವು ದಶಕಗಳ ಹಿಂದೆ ಸರಿದರೆ, ಗಂಗೆಯ ಉಗಮಕ್ಕೆ ತಲುಪಬಹುದು. ಮಂಡ್ಯದ ಇಂದಿನ ಸುಭಾಷ್ ನಗರ ಅಂದಿನ ಬನ್ನೂರು ಬಡಾವಣೆ. ಅಲ್ಲೊಂದುಇಲ್ಲೊಂದು ಮನೆ. ಕಾವೇರಿ ನೀರಿನ ಒಳ ಹರಿವಿಗಾಗಿ ಕಟ್ಟುತ್ತಿದ್ದ ಹುಲಿಕೆರೆ ಟನಲ್’ ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನಮ್ಮ ತಂದೆಗೆ ಮಂಡ್ಯದಲ್ಲೇಇರಬೇಕಾದ ಅನಿವಾರ್ಯ. ಮನೆ ಕಟ್ಟಿಸಲು, ನೀರಿಗಾಗಿ ಬಾವಿ ತೋಡಿಸಿದ್ದು. ನಾಲ್ಕಾಳು ಉದ್ದ ತೋಡಿದಾಗಲೇ ಜಿನುಗ ತೊಡಗಿದ ನೀರು, (ಒಂದಾಳಿಗೆಐದು ಅಡಿಯ ಲೆಕ್ಕ.) ಇನ್ನೂ ಒಂದಾಳು ತೋಡಿ ಕಟ್ಟೆ ಕಟ್ಟಿದ್ದು. ಮಳೆಗಾಲದಲ್ಲಿ ನೀರು ಸೇದಲು ಮಾರುದ್ದ ಹಗ್ಗ ಸಾಕಾಗುತಿತ್ತು.

ಕಲ್ಲಹಳ್ಳಿ, ಕೋಣೇನಹಳ್ಳಿ, ಹಾಗೂ ಮಂಡ್ಯದ ಕೆರೆಗಳು ಅಸ್ತಿತ್ವದಲ್ಲಿದ್ದ ಕಾಲ. ಮಳೆಗಾಲದಲ್ಲಿ ಬಾವಿಯ ನೀರು ಭೂಮಿಯ ಮಟ್ಟಕ್ಕೆ ಏರುತ್ತಿತ್ತು. ಆಗಶುರುವಾಗುತ್ತಿತ್ತು ಪರದಾಟ. ಊಟದ ಮನೆಯ ಗೋಡೆಗಳಿಗೆ ಶೀತ ಏರುತ್ತಿತ್ತು. ಬಾವಿಯಲ್ಲಿ ನೀರು ಬತ್ತಿದ್ದೇ ಇಲ್ಲ. ಕ್ರಮೇಣ ಕಾರಣಾಂತರಗಳಿಂದಕೆರೆಗಳೆಲ್ಲಾ ಇಲ್ಲವಾದವು. ಅಂದಿನಿಂದ ಭೂಮಿಯ ಮಟ್ಟಕ್ಕೆ ಏರುತ್ತಿದ್ದ ನೀರು ಎರಡು ಮೂರು ಅಡಿ ಕಮ್ಮಿಯಾಗಿದೆ. ಗೋಡೆಗೆ ಶೀತ ಏರುವುದೂ ನಿಂತಿತು. ನೂರಾರು ಬಿಂದಿಗೆ ನೀರು ಸೇದಿದರೂ ಬೆಳಗಿನ ವೇಳೆಗೆ ಅಷ್ಟೇ ನೀರಿರುತ್ತಿತ್ತು.

 ಎಪ್ಪತ್ತರ ದಶಕದಲ್ಲೊಮ್ಮೆ, ಬಾವಿಯಲ್ಲಿ ಬಿಟ್ಟಿದ್ದ ಪುಟ್ಟ ಆಮೆ ಮರಿ ಬೆಳಗಾಗುವ ಹೊತ್ತಿಗೆ ಕೊನೆಯುಸಿರೆಳೆದಿತ್ತು. ಕಾರಣ ಬಾವಿಯ ನೀರಿಗೆ ಎಲ್ಲಿಂದಲೋಬಂದು ಸೇರಿದ ಕಲುಷಿತ ನೀರು. ತಕ್ಷಣ ನೀರೆಲ್ಲಾ ಖಾಲಿ ಮಾಡಿಸಿದಾಗ ಬಾವಿಯಲ್ಲಿ ಸಿಕ್ಕಿದ್ದು ನಾಲ್ಕಾರು ಚೊಂಬು, ಚಮಚ, ಸಣ್ಣ ತಟ್ಟೆಗಳು. ಬಾವಿಯನೀರಿನೊಳಕ್ಕೆ ಎಸೆದಾಗ ಆಗುವ “ಟುಳಕ್” ಶಬ್ದ ಕೇಳಲು ಮಕ್ಕಳು ಎಸೆದಿದ್ದ ಪಾತ್ರೆಗಳು. ಆಗಲೇ ತಿಳಿದಿದ್ದು ತಳ ದಲ್ಲಿದ್ದ ದೊಡ್ಡ ಬಂಡೆಯ ಸಂದಿನಿಂದ ನೀರು ಒಸರುವ ವಿಸ್ಮಯ.

ಮನೆಯ ಮಕ್ಕಳೊಂದಿಗೆ, ಬೀದಿಯ ಹೆಣ್ಣು ಮಕ್ಕಳೆಲ್ಲರಿಂದ ಗಂಗೆಪೂಜೆ ಮಾಡಿಸಿಕೊಂಡು, ಇಂದಿಗೂ ಶುಭ್ರವಾದ ನೀರಿನ ಸೆಲೆ ಉಳಿಸಿಕೊಂಡಿರುವಗಂಗೆಗೀಗ ೬೬ ವರ್ಷ. ಅವಳ ಸಹಾಯಕ ಮರದ ರಾಟೆಗೆ ೪೫ ವರ್ಷ. ರಜೆಗೆಂದು ಅಜ್ಜಿಯ ಮನೆಗೆ ಬರುವ ಮೊಮ್ಮಕ್ಕಳಿಗೆ ಹಗ್ಗ ಸುತ್ತಿ ನೀರು ಸೇದುವದೇಒಂದು ಆಟ. ಹೆಣ್ಣು ಮಕ್ಕಳಿಗೆ ಹರಟೆ ಹೊಡೆಯಲು ಪ್ರಿಯವಾದ ಕಟ್ಟೆ.

ಈಗ ಸುತ್ತಲೂ ಮನೆಗಳಿವೆ. ನಮ್ಮ ಅಂಗಳಕ್ಕೂ ಸಿಮೆಂಟಿನ ಲೇಪವಾಗಿದೆ. ೨೨ಅಡಿ ದೂರದಲ್ಲಿ ಒಂದು ಕೊಳವೆ ಬಾವಿ ಕೊರೆದಿದ್ದಾರೆ. ಎದುರು-ಬದರಿನಬಾವಿಗಳಲ್ಲಿ ಕೆಲವನ್ನು ಮುಚ್ಚಿದ್ದಾರೆ, ಕೆಲವು ಬತ್ತಿ ಹೋಗಿವೆ. ಆದರೆ ನಮ್ಮ ಗಂಗೆಯ ನೀರು ಬತ್ತಿಲ್ಲ. ಇದು ಪೂರ್ವಜರ ಪುಣ್ಯವೋ, ಹೆಣ್ಣು ಮಕ್ಕಳ ಗಂಗೆಪೂಜೆಯ ಮಹಿಮೆಯೋ, ಅಂತು ಗಂಗೆ ನಮ್ಮಲ್ಲಿ ಸ್ಥಿರವಾಗಿ ನಿಂತಿದ್ದಾಳೆ. ಅಜ್ಜಿಯ ವಯಸ್ಸಿನ ಗಂಗೆಯ ಕಥೆ ಹೇಳಿದವರಿಗೂ ಕೇಳಿದವರಿಗೂ ಪುಣ್ಯ ಕಟ್ಟಿಟ್ಟಬುತ್ತಿ ಎಂದು ಚಿಕ್ಕಪ್ಪ ಹೇಳುತ್ತಿದ್ದುದು ಸತ್ಯವೇನೋ ಅನ್ನಿಸುತ್ತೆ.


ಅನಸೂಯ ಶರ್ಮ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*