ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ-78 : ಲಕ್ಷ್ಮಣರಾವ್ ವರದಿ ಹೀಗಿತ್ತು… ಮುಂದಿನ ನೋಟವೇನು?

ಉದ್ಯಾನನಗರಿಯನ್ನಾಗಿ ಬೆಂಗಳೂರನ್ನು ಕಂಡಿದ್ದ ಐಎಎಸ್ ಅಧಿಕಾರಿ ಲಕ್ಷ್ಮಣರಾವ್ ಅವರು ಅಂದಿದ್ದ ಕೆರೆಗಳನ್ನು ಸಂರಕ್ಷಿಸಿ, ಪೋಷಿಸಿ ಮುಂದಿನ ಜನಾಂಗಕ್ಕೆ ನೀಡಬೇಕೆಂದು ತಮ್ಮ ವರದಿಯಲ್ಲಿ ಸಾಕಷ್ಟು ಒತ್ತು ನೀಡಿದ್ದರು. ಅಷ್ಟೇ ಅಲ್ಲ, ಅದು ಅವರ ಒತ್ತಾಸೆಯೂ ಆಗಿತ್ತು.

ಬೆಂಗಳೂರು ನಗರವನ್ನು ವಿಸ್ತರಿಸುವ ಆತುರದಲ್ಲಿ ಸರ್ಕಾರಿ ಸಂಸ್ಥೆಗಳು ಸೇರಿದಂತೆ ಬಡಾವಣೆ ನಿರ್ಮಿಸುವ ಪ್ರಾಧಿಕಾರಗಳ ಕಣ್ಣು ಬಿದ್ದದ್ದು ಜಲಮೂಲಗಳ ಮೇಲೆ. ಒಣಗಿರುವ ಈ ಕೆರೆ-ಕುಂಟೆಗಳಿಂದ ಏನು ಪ್ರಯೋಜನ ಎಂದು ಅವುಗಳಿಗೆ ಮಣ್ಣು ಸುರಿದು ನಿವೇಶನ ಮಾಡಿದವು. ಅದರ ಪ್ರತಿಫಲವೇ ಇಂದಿನ ನೀರಿನ ಹಾಹಾHebbalaಕಾರ  ಹಾಗೂ ಹವಾನಿಯಂತ್ರಿತ ನಗರಿ ಎಂಬ ಹೆಗ್ಗಳಿಕೆ ಮರೆಯಾಗಲು ಕಾರಣ. ಇದನ್ನೇ ಎನ್. ಲಕ್ಷ್ಮಣರಾವ್ ನೇತೃತ್ವದ ತಜ್ಞರ ಸಮಿತಿ ಹೇಳಿದ್ದು. ಆದರೆ ಇದೆಲ್ಲವನ್ನೂ ಅಂದೇ ಸರ್ಕಾರ ಪಾಲಿಸಿದ್ದರೆ, ಇಂದು ಕೆರೆ ಒತ್ತುವರಿ ಎಂಬ ಪದವೇ ಇರುತ್ತಿರಲಿಲ್ಲ. ದೂರದೃಷ್ಟಿಯ ಕೊರತೆಯಿಂದ ಜಲಮೂಲಗಳನ್ನು ಆಪೋಷಣ ತೆಗೆದುಕೊಳ್ಳಲು ಬಡಾವಣೆ ನಿರ್ಮಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂತಹ ಸಂಸ್ಥೆಗಳಿಗೆ ಸರ್ಕಾರವೇ ಬೆನ್ನೆಲುಬಾಗಿ ನಿಂತದ್ದು ದುರ್ದೈವ.

ಎನ್. ಲಕ್ಷ್ಮಣರಾವ್ ಸಮಿತಿ ನೀಡಿರುವ ವರದಿಯಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೆರೆ ಅಂಗಳದಲ್ಲಿ ನಿರ್ಮಿಸುತ್ತಿರುವ ಬಡಾವಣೆಯನ್ನು ನಿಲ್ಲಿಸಿ, ಸಮಿತಿ ಶಿಫಾರಸಿನಂತೆ ಅಲ್ಲಿ ಕೆರೆ ಸಂರಕ್ಷಿಸಬೇಕು… 1988ರ ಜೂನ್ 30ರಂದು ರಾಜ್ಯ ಸರ್ಕಾರ ಲೋಕೋಪಯಗಿ ಇಲಾಖೆಯಿಂದ ಹೊರಡಿಸಿರುವ ಆದೇಶ ಇದು. ರಾಜ್ಯಪತ್ರದಲ್ಲಿ ಇದು ಪ್ರಕಟಗೊಂಡಿದೆ. ಅದರೆ, ಈ ಆದೇಶಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಿಮ್ಮತ್ತಿನ ಬೆಲೆಯನ್ನೂ ನೀಡಲಿಲ್ಲ. ಈವರೆಗೂ ಅದರ ಪಾಲನೆಗೆ ಮುಂದಾಗಿರುವುದು ಒಂದಟ್ಟಿಗಿರಲಿ, ಕೆರೆ ಉಳಿಸುವುದನ್ನು ಮತ್ತಷ್ಟು ಕೆರೆಗಳನ್ನು ಬಡಾವಣೆಗೆ ತೆಗೆದುಕೊಂಡಿದ್ದು ಮಾತ್ರ ಅತ್ಯಂತ ದೊಡ್ಡ ಕರ್ತವ್ಯ ಲೋಪ. ಸರ್ಕಾರದ ಆದೇಶವನ್ನೇ ಕಡೆಗಣಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೆರೆಗಳನ್ನು ನುಂಗಿಹಾಕಿದೆ.

ಲಕ್ಷ್ಮಣ ರಾವ್ ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳುತ್ತಾರಲ್ಲ ಯಾವ ವರದಿ ಎಂದು ಯಾರೂ ಹೇಳುತ್ತಿಲ್ಲ. ಏಕೆಂದರೆ ಲಕ್ಷ್ಮಣರಾವ್ ವರದಿಯನ್ನು ಸರ್ಕಾರ ಒಪ್ಪಿಕೊಂಡು, ಅದರ ಸಲಹೆಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಆದೇಶ ಹೊರಡಿಸಿ 29 ವರ್ಷವೇ ಕಳೆದಿವೆ. ಆದರೆ ಆ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಅಷ್ಟೇ ಅಲ್ಲ, ವರದಿ ಒಪ್ಪಿಕೊಂಡು, ಅವರ ಸಲಹೆ, ಶಿಫಾರಸ್ಸುಗಳನ್ನು ಅನುಷ್ಠಾನಗಳಿಸುವ ಆದೇಶವಾದ ಐದು ವರ್ಷದ ನಂತರ ಮತ್ತೆ ಕೆರೆಗಳ ಸಂರಕ್ಷಣೆಗೆ ಹಾಗೂ ಬೆಂಗಳೂರು ನಗರದ ಸೌಂದರ್ಯ ಕಾಪಾಡಲು ಉನ್ನತ ಮಟ್ಟದ ಸಮಿತಿಯನ್ನೂ ಎನ್. ಲಕ್ಷ್ಮಣರಾವ್ ಅಧ್ಯಕ್ಷತೆಯಲ್ಲೇ ರಚಿಸುತ್ತದೆ. ಪರಿಸರ ಕಾಳಜಿಯುಳ್ಳ ಲಕ್ಷ್ಮಣರಾವ್ ಬೆಂಗಳೂರಿನ ಜಲಮೂಲಗಳನ್ನು ರಕ್ಷಿಸುವ ಜತೆಗೆ ಉದ್ಯಾನಗಳನ್ನೂ ಹೇಗೆ ಹೆಚ್ಚು ಸಮೃದ್ಧಗೊಳಿಸಬೇಕು ಎಂಬ ಸಲಹೆ, ಶಿಫಾರಸ್ಸುಗಳನ್ನು ಸಮಿತಿ ಮೂಲಕ ಸರ್ಕಾರಕ್ಕೆ ಸಲ್ಲಿಸುತ್ತಾರೆ. ದುರಂತವೆಂದರೆ, ಲಕ್ಷ್ಮಣರಾವ್ ಅವರು ಸಲ್ಲಿಸಿದ ಎರಡೂ ವರದಿಗಳನ್ನು ಸರ್ಕಾರ ಅಂಗೀಕರಿಸಿದರೂ ಅದರ ಅನುಷ್ಠಾನಕ್ಕೆ ಅಗತ್ಯವಾದ ಆದೇಶ ಅಥವಾ ಕ್ರಮ ಕೈಗೊಳ್ಳಲೇ ಇಲ್ಲ. ಅದಕ್ಕೇ 29 ವರ್ಷಗಳ ನಂತರವೂ ಬೆಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿ ಅಥವಾ ಸಂರಕ್ಷಣೆ ಎಂದ ಕೂಡಲೇ ಅಧಿಕಾರದಲ್ಲಿರುವವರಿಗೆಲ್ಲ ಲಕ್ಷ್ಮಣರಾವ್ ಹೆಸರು ಜ್ಞಾಪಕಕ್ಕೆಬರುತ್ತದೆ. ಆದರೆ, ಈಗ ಆ ಆಶ್ವಾಸನೆ ನೀಡಿರುವ ಯಾರೊಬ್ಬರೂ ಅವರು ನೀಡಿರುವ ವರದಿಯನ್ನು ನೋಡಿಯೇ ಇಲ್ಲ.

ಬೆಂಗಳೂರಿನಲ್ಲಿ ಒತ್ತುವರಿ ಎಂಬ ಭೂತ ಎಲ್ಲೆಡೆಯೂ ಆವರಿಸಿದೆ. ಕೆರೆ ಒತ್ತುವರಿ, ಸರ್ಕಾರಿ ಒತ್ತುUlsoor Lakeವರಿ ಎಂಬುದನ್ನು ಲಕ್ಷ್ಮಣರಾವ್ ವರದಿಯಿಂದ ಹಿಡಿದು ಎ.ಟಿ. ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ವರದಿ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆಗಿದ್ದ  ವಿ. ಬಾಲಸುಬ್ರಮಣಿಯನ್ ಅವರ ಕಾರ್ಯಪಡೆ ವರದಿಯಲ್ಲೂ ಒತ್ತುವರಿಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ ಸರ್ಕಾರ ಈವರೆಗೆ ಕ್ರಮ ಕೈಗೊಂಡಿಲ್ಲ. ಆದರೆ ಈಗಿರುವ ಒಂದು ಸಣ್ಣ ಆಸೆ ಎಂದರೆ, ಭೂ ಒತ್ತುವರಿ ವರದಿ ಕೊಟ್ಟು ಬೆಂಗಳೂರು ಭೂ ಮಾಫಿಯಾಗೆ ನಡುಕ ಉಂಟು ಮಾಡಿದ್ದ ಎ.ಟಿ. ರಾಮಸ್ವಾಮಿ ಅವರು ಶಾಸಕರಾಗಿದ್ದಾರೆ. ಅಷ್ಟೇಅಲ್ಲ, ಸಚಿವರಾಗುವ ಲಕ್ಷಣಗಳಿವೆ. ಅವರು ಈ ಬಗ್ಗೆ ಯಾವ ರೀತಿ ಗಮನಹರಿಸುತ್ತಾರೆ ಎಂಬುದೇ ಕುತೂಹಲಕಾರಿ ಹಾಗೂ ಆಶಾದಾಯಕ.

ಬೆಂಗಳೂರಿನ ಕೆರೆಗಳ ದುಸ್ಥಿತಿಯನ್ನು ಲಕ್ಷ್ಮಣರಾವ್ ಅವರು ತಮ್ಮ ವರದಿಯಲ್ಲಿ ಸಚಿತ್ರ, ಸವಿವರವಾಗಿ ನಮೂದಿಸಿದ್ದರು. ಅವರ ವರದಿ ಬಗ್ಗೆ ಎಲ್ಲರೂ ಹೇಳುತ್ತಿದ್ದರೇ ಹೊರತು ಅದನ್ನು ಪ್ರಕಟಿಸುವ ಅಥವಾ ಅದನ್ನು ಸಮಗ್ರವಾಗಿ ನೀಡುವ ಕೆಲಸವನ್ನು ಯಾರೂ ಮಾಡಲಿಲ್ಲ. ಆದರೆ, ಕನ್ನಡ ವಾಟರ್ ಪೋರ್ಟಲ್ ಈ ಕೆಲಸವನ್ನು ಪ್ರಥಮವಾಗಿ ಮಾಡಿದೆ. ಲಕ್ಷ್ಮಣರಾವ್ ವರದಿಯನ್ನು ‘ಕೆರೆ ನೋಟ’ದಲ್ಲಿ ಸಂಪೂರ್ಣವಾಗಿ ತೆರೆದಿಟ್ಟಿದೆ. ಇನ್ನು ಮುಂದೆ…. ಏನಿರುತ್ತೆ ನೋಟದಲ್ಲಿ…

ಬೆಂಗಳೂರು ಕೆರೆಗಳ ಭಯಾನಕ ಇಂದಿನ ಸ್ಥಿತಿ ಹಾಗೂ ಅದರ ಒತ್ತುವರಿಯ ಸಚಿತ್ರವನ್ನು ಮುಂದಿನ ನೋಟಗಳಲ್ಲಿ ತೆರೆದಿಡಲಿದೆ. ಕಾಯುತ್ತಿರಿ…

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*