ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕುಡಿಯುವ ನೀರಿನ ಉದ್ಯಮ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಒಂದು ತಾಲ್ಲೂಕು ಕೇಂದ್ರ. ಚಿಕ್ಕ ಪಟ್ಟಣ. ವಾರ್ಷಿಕ ಮಳೆಯ ಪ್ರಮಾಣ ಅಬ್ಬಬ್ಬಾ ಅಂದರೆ ೪೩೦ ಮಿಲಿಮೀಟರ್. ಕಳೆದ ಎರಡು ವರ್ಷಗಳಿಂದ ಇದು ೨೫೦ ಮಿಲಿಮೀಟರ್‌ಗಳು ದಾಟಿಲ್ಲ ಎಂಬುದು ಇಲ್ಲಿನ ನೀರಿನ ಪರಿಸ್ಥಿತಿಯನ್ನು ತಿಳಿಸುತ್ತದೆ. ಆದರೂ ಎಷ್ಟೋ ಕಾಲದಿಂದ ನೀರಿಲ್ಲದೇ ಬದುಕಿದಕ್ಕಾಗಿ ಎಲ್ಲವನ್ನೂ ಸಹಜವಾಗಿ ಸ್ವೀಕರಿಸುವ ಮನೋಭಾವ. ಕೊಳವೆ ಬಾವಿಗಳ ನೀರು ಕುಡಿಯಲಾರದಷ್ಟು ಗಡಸು. ಕೆರೆಗಳೆಲ್ಲಾ ಇಸವಿ ೨೦೧೦ರಲ್ಲಿ ಬತ್ತಿದ ಮೇಲೆ ಮತ್ತೆ ತುಂಬಿಲ್ಲ. ತೆರೆದ ಬಾವಿಗಳು ಯಾವಾಗ ಬತ್ತಿವೆ ಎಂಬುದು ಇಂದಿನ ತಲೆಮಾರಿನವರಿಗೆ ಗೊತ್ತಿಲ್ಲ.

C6-YAVUDAKKE MODALUಮೂರು ಕಿಲೋಮೀಟರ್ ದಾಟಿದರೆ ಆಂಧ್ರ ಪ್ರದೇಶದ ಗಡಿ. ದಾರಿಯುದ್ದಕ್ಕೂ ನಾಲ್ಕಾರು ಹಳ್ಳಿಗಳು. ಅಕ್ಕಪಕ್ಕ ಸಾಲುಸಾಲು ಗುಡ್ಡಗಳು. ಮಳೆಗಾಲವಾದ್ದರಿಂದ ಅಲ್ಲಲ್ಲಿ ಹಸುರಿನ ಚುಕ್ಕೆಗಳು ಕಾಣಿಸುತ್ತವೆ. ಉಳಿದಂತೆ ಕೆಂಪನೆಯ ಕಲ್ಲುಬಂಡೆಗಳು ಮಾತ್ರ. ಮೊಳಕಾಲ್ಮೂರಿನಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿದೆ ಅಲ್ಲಿನ ನಗರ ರಾಯ್‌ದುರ್ಗ.ಜನಸಂಖ್ಯೆ ಸುಮಾರು ಒಂದು ಲಕ್ಷ. ಹೆಚ್ಚಿನವರು ಕೃಷಿಕರು. ಉಳಿದವರು ವ್ಯಾಪಾರಿಗಳು. ಅಲ್ಲೂ ಇದೇ ರೀತಿ ಕುಡಿಯುವ ನೀರಿನ ಅಭಾವ ಇರುತ್ತಿತ್ತೇನೋ. ಆದರೆ ರಾಜಶೇಖರ ರೆಡ್ಡಿ ಮುಖ್ಯ ಮಂತ್ರಿಯಾಗಿದ್ದಾಗ ಮಾಡಿದ ಮಹತ್ತರ ಕೆಲಸ ತುಂಗಭದ್ರಾ ನೀರನ್ನು ಅವರಿಗೆ ದಯಪಾಲಿಸಿದ್ದು. ಅದಕ್ಕಾಗಿ ಅಲ್ಲಿನ ಜನ ಈಗಲೂ ಅವರನ್ನು ಪೂಜಿಸುತ್ತಾರೆ. ಹತ್ತು ರಸ್ತೆಗಳಿರುವ ಊರಿನಲ್ಲಿ ಅವರ ಮೂರು ಪುತ್ತಳಿಗಳಿವೆ!! ಹಾಗಂತಾ ಅವರೆಲ್ಲಾ ಕೇವಲ ಪೂಜಿಸುತ್ತಾ ಕುಳಿತಿದ್ದಾರೆ ಎಂದುಕೊಳ್ಳಬೇಡಿ. ಅವರ ಶ್ರಮದ ಬದುಕು ನಮ್ಮನ್ನು ಮತ್ತೊಂದು ಬದಿಯನ್ನು ತೋರಿಸುತ್ತದೆ.

ಮೊಳಕಾಲ್ಮೂರಿನ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾಗಿರುವ ಪ್ರೊಫೆಸರ್ ತಿಂಮಣ್ಣ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ. ಮೊಳಕಾಲ್ಮೂರಿನ ಜನ ಯಾವತ್ತೂ ರಾಯದುರ್ಗಕ್ಕೆ ಅಧೀನರು. ಒಂದು ಸೂಜಿ ತರುವುದಿದ್ದರೂ ಅವರು ರಾಯದುರ್ಗಕ್ಕೆ ಹೋಗುತ್ತಿದ್ದರಂತೆ. ಈಗಲೂ ಹಾಗೇ ಆಗಿದೆ. ನಮ್ಮ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ನಾವೀಗ ಅಲ್ಲಿಗೆ ಹೋಗುತ್ತೇವೆ. ಅಂದರೆ ಕಾಲ ಬದಲಾಗಿಯೇ ಇಲ್ಲ ಎಂದಾಯಿತು. ಗಡಿ ಭಾಗದ ಜನರ ಮೂಲಭೂತ ಅವಶ್ಯಕತೆಗಳನ್ನು ನಮ್ಮ ಯಾವ ಸರ್ಕಾರಗಳೂ ಪೂರೈಸುತ್ತಲೇ ಇಲ್ಲ. ನಾವೆಲ್ಲಾ ಕೊರತೆಯಲ್ಲಿಯೇ ಬದುಕುತ್ತಿರುತ್ತೇವೆ.

C3-SAMSKARNEಇಲ್ಲೇನು ಕುಡಿಯುವ ನೀರಿನ ಘಟಕ ಇಲ್ಲವೆಂದಲ್ಲ. ಆದರೆ ಅದು ಆಂಧ್ರಪ್ರದೇಶದ ನೆಲಗೊಂಡ ತಂತ್ರಜ್ಞಾನವನ್ನು ಆಧರಿಸಿದ ಫಿಲ್ಟರ್. ಪಕ್ಕದ ರಾಯದುರ್ಗದಲ್ಲಿ ಇದೇ ತಂತ್ರಜ್ಞಾನವನ್ನಾಧರಿಸಿದ ಘಟಕಗಳು ಎಂದೂ ಕೆಡುವುದಿಲ್ಲ. ಇಲ್ಲಿ ಮಾತ್ರ ನಿರ್ಮಿಸಿದ ಮೂರು ತಿಂಗಳಿಗೆ ಕೆಟ್ಟು ಕೂಳಿತುಕೊಳ್ಳುತ್ತದೆ ಹೇಗೆ? ಎನ್ನುವ ಪ್ರಶ್ನೆಯನ್ನು ಭೀಮಣ್ಣ ಯಾದವರು ಮುಂದಿಡುತ್ತಾರೆ. ಅಂದರೆ ಗಡಿ ಪ್ರದೇಶಗಳಲ್ಲಾಗುವ ಆಗು ಹೋಗುಗಳು ಸಿಂಹಾಸನದ ಮೇಲೆ ಕುಳಿತವರಿಗೆ ತಿಳಿಯುವುದೇ ಇಲ್ಲವೇ?

ಮೊಳಕಾಲ್ಮೂರು ಎಂದರೆ ಒಂದು ಕಾಲದಲ್ಲಿ ರೇಶ್ಮೆ ಸೀರೆಗಳಿಗೆ ಪ್ರಖ್ಯಾತವಾದ ಪಟ್ಟಣವಾಗಿತ್ತು. ಇಂದು ರೇಶ್ಮೆ ಸೀರೆಯನ್ನು ನೇಯುವ ಕೆಲಸಗಾರರೇ ಇಲ್ಲ. ಅಪ್ಪಟ ರೇಶ್ಮೆ ನಾರೂ ಸಹಾ ಸಿಗುತ್ತಿಲ್ಲ. ಅದೇ ರಾಯದುರ್ಗದಲ್ಲಿ ಇಂದಿಗೂ ಕೈಮಗ್ಗಗಳು ಇವೆ. ಯಾಂತ್ರಿಕ ಮಗ್ಗಗಳು ಇವೆ. ಅಪ್ಪಟ ರೇಶ್ಮೆಯನ್ನು ಕರ್ನಾಟಕದಿಂದಲೇ ತರಿಸುತ್ತಾರಂತೆ. ಕೈಮಗ್ಗ ಮತ್ತು ಯಾಂತ್ರಿಕ ಮಗ್ಗಗಳು ೨೦೦೦ ಅಧಿಕ ಇವೆ ಎನ್ನುತ್ತಾರೆ ರಾಯದುರ್ಗದ ಧನಂಜಯ. ಅಷ್ಟೇ ಅಲ್ಲ ೨೩ ಬೀದಿಗಳಲ್ಲಿ ಮಗ್ಗದ ಜನ ಇದ್ದಾರೆ ಎಂದು ಹೆಮ್ಮೆಯನ್ನೂಪಡುತ್ತಾರೆ.

ರಾಯದುರ್ಗದಲ್ಲಿ ಧನಂಜಯರವರ ಕುಡಿಯುವ ನೀರಿನ ಘಟಕಗಳಿವೆ. ಗಂಗೋತ್ರಿ ಹಾಗೂ ಗಂಗಾಭವಾನಿ. ಒಂದು ಘಟಕವು ನೀರನ್ನು ಎರಡು ಸಾರಿ ಸಂಸ್ಕರಣೆ ಮಾಡುತ್ತದೆ. ಇನ್ನೊಂದು ಅದನ್ನು ತಂಪುಗೊಳಿಸುತ್ತದೆ. ಪ್ರತಿದಿನ ನೀರಿನ ಮಾರಾಟವಿದೆ. ಬೆಳಿಗ್ಗೆ ನಾಲ್ಕೂವರೆಗೆ ಪ್ರಾರಂಭವಾಗುವ ಸಂಸ್ಕರಣೆ ಹಾಗೂ ಮಾರಾಟ ಮುಗಿಯುವುದು ರಾತ್ರಿ ಹನ್ನೊಂದಕ್ಕೆ. ತುಂಗಭದ್ರಾ ನದಿಯ ನೀರು ಹಾಗೂ ಎರಡು ಬೋರ್‌ವೆಲ್ ನೀರು ಇದರ ಮೂಲ.

ಜಗನ್ ಮೊಲಕಾಲ್ಮುರಿನ ೨೭ರ ಯುವಕ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಹುಡುಗನ ಹೆಗಲುಗಳ ಮೇಲೆ ಅಮ್ಮ ಹಾಗೂ ತಮ್ಮ ಕುಳಿತರು. ದುಡಿಮೆ ಅನಿವಾರ್ಯವಾಯಿತು. ಹತ್ತಾರು ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈಗ್ಗೆ ಮೂರು ವರ್ಷಗಳ ಹಿಂದೆ ಊರಿನ ಬರ ಇವರಿಗೊಂದು ಉದ್ಯೋಗವನ್ನು ದೊರಕಿಸಿತು. ಕುಡಿಯುವ ನೀರನ್ನು ಮನೆಮನೆಗೆ ತಲುಪಿಸುವ ಕೆಲಸ. ಆಗಲೇ ಒಂದಿಬ್ಬರು ಈ ಉದ್ಯೋಗವನ್ನು ಮಾಡುತ್ತಿದ್ದರು. ಆದರೆ ಇನ್ನೂ ನಾಲ್ಕು ಜನ ಮಾಡಿದರೂ ಅಗತ್ಯವಿರುವಷ್ಟು ಹಕ್ಕೊತ್ತಾಯ ಅಲ್ಲಿತ್ತು.

ಆಗ ಸ್ಥಳೀಯವಾಗಿ ಯಾವುದೇ ಕುಡಿಯುವ ನೀರಿನ ಘಟಕವಿರಲಿಲ್ಲ. ಹೇಗಿದ್ದರೂ ಎಲ್ಲದಕ್ಕೂ ರಾಯದುರ್ಗಕ್ಕೆ ಹೋಗುವ ಸ್ವಭಾವ. ಇವರನ್ನೂ ಅಲ್ಲಿಗೆ ಓಡಿಸಿತು. ಮೊದಲಿಗೆ ಯಾರದ್ದೋ ಆಟೋದಲ್ಲಿ ಒಂದಿಪ್ಪತ್ತು ನೀರಿನ ಕ್ಯಾನ್‌ನ್ನು ತಂದರು. ಅದನ್ನು ತಮ್ಮ ಪುಟ್ಟ ಟಿವಿಎಸ್‌ನಲ್ಲಿ ಮನೆಮನೆಗೆ ತಲುಪಿಸಿದರು. ಹಾಗೇ ಆರು ತಿಂಗಳು ಕಳೆಯಿತು. ಇನ್ನೊಬ್ಬರ ಅವಲಂಬನೆ ಸ್ವಾಭಿಮಾನಿ ಹುಡುಗನಿಗೆ ತಾಳಲಾಗಲಿಲ್ಲ. ತಾನೇ ಒಂದು ಆಟೋವನ್ನು ಕೊಂಡುಕೊಂಡ. ಮತ್ತೆ ಎರಡು ವರ್ಷ ಕಳೆಯುವುದರೊಳಗೆ ಸಣ್ಣ ವ್ಯಾನ್ ಒಂದರ ಒಡೆಯರಾಗಿದ್ದಾರೆ ಜಗನ್.

ಬೆಳಗಿನ ಜಾವವೇ ಗಂಗಾಭವಾನಿ ಘಟಕಕ್ಕೆ ಪಯಣ. ಖಾಲಿ ಕ್ಯಾನ್‌ಗಳ ಸ್ವಚ್ಛತೆ. ಅವುಗಳಿಗೆ ಮೂರು ಪೈಪ್‌ಗಳ ಮೂಲಕ ನೀರು ತುಂಬುವಿಕೆ. ತಕ್ಷಣ ಅವುಗಳನ್ನು ಶೀಲ್ ಮಾಡುವುದು. ಅಲ್ಲಿಂದ ಹೊರಟು ದಾರಿಯಲ್ಲಿ ಶನಿವಾರ ಹನುಮಂತನ ದೇವಾಲಯಕ್ಕೆ ಒಂದು ಕಾಯಿ. ರಸ್ತೆ ಪಕ್ಕದ ದುರ್ಗಮ್ಮನಿಗೊಂದು ಕ್ಯಾನ್ ನೀರು. ಗಡಿಯಲ್ಲಿರುವ ಮಾರಮ್ಮನಿಗೊಂದು ಉದ್ಧಂಡ ನಮಸ್ಕಾರ. ಆಮೇಲೆ ಖಾಯಮ್ ಪಡೆಯುವವರಿಗೆ ನೀಡುವುದು. ಹೊಸಬರನ್ನು ಹುಡುಕುವುದು. ಅಗತ್ಯಬಿದ್ದರೆ ಮತ್ತೊಮ್ಮೆ ನೀರು ತರಲು ಹೋಗುವುದು.

C4-VYAPARKKU SRDI SALUಗಂಗಾಭವಾನಿ ಘಟಕದವರು ಎರಡು ರೀತಿಯ ಮಾರಾಟ ಮಾಡುತ್ತಾರೆ. ಒಂದು ಹೋಲ್‌ಸೇಲ್. ಅಂದರೆ ಒಂದು ೨೦ ಲೀಟರ್‌ಗಳ ಕ್ಯಾನ್‌ಗೆ ವ್ಯಾಪಾರಸ್ತರಾದರೆ ಐದು ರೂಪಾಯಿಗಳು. ಒಂದು ಲೀಟರ್ ನೀರಿಗೆ ೨೫ ಪೈಸೆ ಮಾತ್ರ. ಅದೇ ಗ್ರಾಹಕರಾದರೆ ಹದಿನೈದು ರೂಪಾಯಿಗಳು. ಒಂದು ಲೀಟರ್ ನೀರಿಗೆ ೭೫ ಪೈಸೆ ಮಾತ್ರ. ಅದೇ ನೀರನ್ನು ತಂಪುಗೊಳಿಸಿ ಕೊಡುತ್ತಾರೆ. ಅದಕ್ಕೆ ಪ್ರತ್ಯೇಕ ತಂಪು ಪೆಟ್ಟಿಗೆ ಇದೆ. ತುಂಬಲು ಪ್ರತ್ಯೇಕ ತಂಪು ಕ್ಯಾನ್ ಇದೆ. ಒಂದು ತಂಪು ಕ್ಯಾನ್ ನೀರಿಗೆ ೩೫ ರೂಪಾಯಿಗಳು. ಕನಿಷ್ಟ ೧೦ ತಾಸುಗಳ ಕಾಲ ನೀರು ತಂಪಾಗಿರುತ್ತದೆ. ಬಿರುಬೇಸಿಗೆಯಲ್ಲಿ ಆರೇ ತಾಸು ತಂಪು ನಿಲ್ಲುತ್ತದೆ. ನೀರು ಖಾಲಿಯಾದ ಮೇಲೆ ಕ್ಯಾನನ್ನು ತಂದು ಮತ್ತೆ ತುಂಬಿಸಿಕೊಂಡು ಹೋದರಾಯಿತು. ಕ್ಯಾನ್ ಇವರೇ ಒದಗಿಸುತ್ತಾರೆ. ಚೌಕಾಶಿ ವ್ಯಾಪಾರವಿಲ್ಲ. ನೀರಿಗಾಗಿ ಚೌಕಾಶಿ ಮಾಡುವವರೂ ಇಲ್ಲ ಬಿಡಿ. ಹೀಗೆ ದಿನಾಲೂ ಖರ್ಚಾಗುವ ನೀರಿನ ಪ್ರಮಾಣ ಸುಮಾರು ಒಂದು ಲಕ್ಷ ಲೀಟರ್‌ಗಳು. ಅಂದರೆ ಸುಮಾರು ೫೦ ಸಾವಿರ ರೂಪಾಯಿಗಳ ಆದಾಯ. ಎಂದಿಟ್ಟುಕೊಳ್ಳೋಣ. ಹಾಗಿದ್ದರೆ ಖರ್ಚೆಷ್ಟು? ಬೋರ್‌ವೆಲ್ ತೆಗೆಸಿದ ಖರ್ಚು. ತುಂಗಭದ್ರಾ ನೀರನ್ನು ತರುವ ಖರ್ಚು. ಸಂಸ್ಕರಣೆ ಮಾಡಿದ ಖರ್ಚು. ಉಪಕರಣಗಳ ಖರ್ಚು. ನಿರ್ವಹಣೆ ಖರ್ಚು. ಸವಕಳಿ ಹೀಗೆ ಏನೆಲ್ಲಾ ಖರ್ಚುಗಳನ್ನು ಕಡಿತ ಮಾಡಿ ಉಳಿವ ಲಾಭ ಏನೂ ಇಲ್ಲಾ ಎನ್ನುವುದು ಧನಂಜಯರವರ ಅಭಿಪ್ರಾಯ. ತಿಂಗಳಿಗೆ ಐದು ಲಕ್ಷ ನಿವ್ವಳ ಉಳಿಯುತ್ತದೆ ಎನ್ನುವುದು ನನ್ನ ಲೆಕ್ಕಾಚಾರ.

ಐದು ಜನರಿರುವ ಮನೆಗೆ ದಿನವೊಂದಕ್ಕೆ ಕುಡಿಯಲು ಮತ್ತು ಅಡುಗೆಗಾಗಿ ೨೦ ಲೀಟರ್ ನೀರು ಅಗತ್ಯ. ಮದುವೆ ಮನೆಗಳಿಗೆ ಒಂದು ನೂರು ಕ್ಯಾನ್. ಹುಟ್ಟಿದ ಹಬ್ಬದ ಪಾರ್ಟಿಗೆ ಐದು ಕ್ಯಾನ್. ಹೀಗೆ ಅವರು ಕೆಲವು ಲೆಕ್ಕಾಚಾರಗಳನ್ನೂ ಸಹಾ ಮಾಡುತ್ತಾರೆ. ಕೈಮುಗಿದು ಕೇಳಿದವರಿಗೆ ಉಚಿತವಾಗಿಯೂ ಸಿಗುತ್ತದೆ.

ಜಗನ್ ದಿನಕ್ಕೆ ನೂರು ಕ್ಯಾನ್ ನೀರನ್ನು ಖಾಯಮ್ಮಾಗಿ ತರುತ್ತಾರೆ. ಬೆಳಗಿನ ಜಾವ ಹೋದರೆ ಸರತಿ ಸಾಲಿನಲ್ಲಿ ನಿಲ್ಲುವುದು ಬೇಕಿಲ್ಲ. ಇಲ್ಲದಿದ್ದರೆ ಎರಡು ತಾಸು ಕಾಯಬೇಕಾಗುತ್ತದೆ. ಬೆಳಿಗ್ಗೆಯೇ ನೀಡಿದರೆ ಎಲ್ಲರಿಗೂ ತಾಜಾ ನೀರು ಬಂತೆಂಬ ಖುಷಿ. ಸಿಹಿಯಾದ ನೀರು ಎಲ್ಲರ ಮನಸ್ಸನ್ನು ಪ್ರಫುಲ್ಲಿತಗೊಳಿಸುತ್ತದೆ. ಒಂದು ಕ್ಯಾನ್‌ಗೆ ೨೦ ರೂಪಾಯಿಗಳು. ಹಾಸ್ಟೆಲ್, ದೇವಸ್ಥಾನ ಮತ್ತು ಮನೆಮನೆಗಳ ಬಾಗಿಲಿಗೆ ಒಯ್ಯುತ್ತಾರೆ. ಅಡುಗೆ ಮನೆಯವರೆಗೂ ಹೊತ್ತೊಯ್ದು ಇಟ್ಟು ಬರುತ್ತಾರೆ. ಮಿತವಾದ ಮಾತು. ಕಾಸಿಗಾಗಿ ಎಂದೂ ತಕರಾರು ಮಾಡಿದ್ದಿಲ್ಲ. ತಿಂಗಳಿಗೊಮ್ಮೆ ವಸೂಲಿ. ಜಗನ್‌ಗೆ ಬರುವುದು ನಿರ್ವಹಣೆ ಖರ್ಚು. ಸವಕಳಿ, ಕೂಲಿ, ಸಾಗಾಣಿಕೆ ಇತ್ಯಾದಿ. ಎಲ್ಲವನ್ನೂ ಅವರೊಬ್ಬರೇ ನಿಭಾಯಿಸುತ್ತಾರೆ. ದಿನದ ಕನಿಷ್ಟ ಸಂಪಾದನೆ ಒಂದು ಸಾವಿರ ರೂಪಾಯಿಗಳು. ತಿಂಗಳಿಗೆ ೩೦ ಸಾವಿರ ಗ್ಯಾರೆಂಟಿ. ಹೀಗಾಗಿಯೇ ನನಗೆ ನಾಲ್ಕು ಗಾಲಿಗಳ ಆಟೋ ಕೊಳ್ಳಲು ಸಾಧ್ಯವಾಗಿದ್ದು ಎನ್ನುತ್ತಾರೆ ಜಗನ್.

ಅಂದ ಹಾಗೇ ಜಗನ್ ತಮ್ಮ ವ್ಯಾಪಾರವನ್ನು ವಿಸ್ತರಿಸಬೇಕೆಂದಿದ್ದಾರೆ. ಜೊತೆಗೆ ಪೂರಕ ವ್ಯಾಪಾರವನ್ನೂ ಮಾಡಬೇಕೆಂದಿದ್ದಾರೆ. ನಿಮ್ಮ ಸಲಹೆಗಳು ಏನಾದರೂ ಇದ್ದರೆ ನೀಡಿರಿ; ೯೭೪೦೨೭೭೭೭೪

ಚಿತ್ರ-ಲೇಖನ: – ಪೂರ್ಣಪ್ರಜ್ಞ, ಬೇಳೂರು 

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*