ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಜಲ ಪ್ರಸಾದ ನೀಡಿದ ಮಂಜುನಾಥಸ್ವಾಮಿ

ನಮ್ಮ ಹಿಂದಿನ ಹಿರಿಯರಿಗೆ ಕೆರೆ ಅಂದರೆ ಏನು? ಅದರ ಶಕ್ತಿ ಎಂತಹದ್ದು? ಅದರ ಪ್ರಯೋಜನ ಏನೆನು? ಎಂದೆಲ್ಲ ಗೊತ್ತಿತ್ತು. ಜೊತೆಗೆ ಮಳೆ ನೀರು ಹಿಡಿದಿಟ್ಟುಕೊಳ್ಳಬೇಕು ಎನ್ನುವ ವೈಜ್ಞಾನಿಕ ಸತ್ಯ ಅವರಿಗೆ ಮನದಟ್ಟಾಗಿತ್ತು. ಹಳ್ಳಿಗರಲ್ಲಿ ಅನೇಕರು ಅನಕ್ಷರಸ್ಥರಾಗಿದ್ದಿರಬಹುದು. ಆದರೆ ಅವರೆಲ್ಲ ಬುದ್ದಿವಂತರಾಗಿದ್ದರು. ಎಲ್ಲಕ್ಕೂ ಮುಖ್ಯವಾಗಿ ಅವರಿಗೆ ಪ್ರಕೃತಿ ಮಾತೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡವರಾಗಿದ್ದರು. ಹೀಗಾಗಿ ಊರಿಗೆ ಒಂದೊಂದು ಕೆರೆ ಇರುತ್ತಿದ್ದದ್ದು ಸಾಮಾನ್ಯವಾಗಿತ್ತು. ಇದರಿಂದ ಅವರು ನೀರಿನ ಸಮಸ್ಯೆ ಎದುರಿಸುತ್ತಿರಲಿಲ್ಲ.

kere_2ನಾವುಗಳು ಕೆರೆಗಳನ್ನೇಲ್ಲ ಕಾಂಕ್ರೇಟ್‌ಮಯವಾಗಿಸಿದ್ದಲ್ಲದೆ ಮಳೆಯ ನೀರನ್ನು ಅದರಷ್ಟಕ್ಕೆ ಬಿಟ್ಟು ನೀರಿನ ಬಗ್ಗೆ ಸ್ವಚ್ಛಂದವಾಗಿ ನಡೆದುಕೊಳ್ಳುವ ರೀತಿ ಈಗಾಗಲೇ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿ ಆಗಿದೆ. ಆದರೆ ಇದರ ಎಚ್ಚರವಿಲ್ಲದೆ ೨೦ರೂಪಾಯಿ ಕೊಟ್ಟರೆ ಒಂದು ಲೀಟರ್ ನೀರು ಬರುತ್ತೆ ಅನ್ನೊ ಅಹಂ ಇರುವ ನಮಗೆ ಈಗಾಗಲೇ ಅಂತರ್ಜಲ ಕುಸಿದು ನೀರಿಗಾಗಿ ಬಡಿದಾಡುವ ಸ್ಥಿತಿ ನಿರ್ಮಾಣವಾದರೂ ನಾವುಗಳು ಎಚ್ಚರವಾಗುತ್ತಿಲ್ಲ.

ನಮ್ಮ ಕೆರೆಗಳು ನಮಗೆ ಬೇಕು, ಮಳೆ ನೀರು ಅಮೂಲ್ಯ ಅವುಗಳನ್ನು ಹಿಡಿದಿಟ್ಟುಕೊಳ್ಳುವ ಬಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಮ್ಮನ್ನು ತಡವಿ ಎಚ್ಚರ ಮಾಡುವತ್ತ ಮುಂದಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿ ಅವನ ಸನ್ನಿಧಿಗೆ ಹೋದವರಿಗೆ ಆಸ್ತಿಕರಿಗೆ ಅಥವಾ ದೇವರ ಮೇಲೆ ನಂಬಿಕೆ ಇರುವವರಿಗೆ ದರ್ಶನ ನೀಡಿ ಪ್ರಸಾದ ನೀಡುತ್ತಿದ್ದಾನೆ ಎಂದುಕೊಳ್ಳಬೇಡಿ. ಅವನ ದರ್ಶನವನ್ನು ನಾಡಿನ ಗ್ರಾಮ ಗ್ರಾಮಗಳಲ್ಲಿ ಆಗುತ್ತಿದೆ. ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಗ್ರಾಮೀಣ ಬದುಕಿನ ಬಗ್ಗೆ ಇದ್ದ ಅಪಾರ ಪ್ರೀತಿ, ಗೌರವಗಳಿಂದ ‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ’ ಇಂದು ರಾಜ್ಯದ ಎಲ್ಲೆಡೆ ಕೆಲಸ ಮಾಡುತ್ತಿದೆ. ಜೊತೆಗೆ ನಮ್ಮ ಗ್ರಾಮೀಣ ಭಾಗದ ತಾಯಂದಿರು, ಅಕ್ಕ-ತಂಗಿಯರು ಆರ್ಥಿಕವಾಗಿ ಸಭಲರಾಗುವಂತಾಗಿದೆ. ಗ್ರಾಮೀಣ ಬದುಕು ಸುಧಾರಿಸಿದರೆ ನಾಡಿನ ಅಭಿವೃದ್ದಿ ಸಾಧ್ಯ ಎನ್ನುವುದನ್ನು ಮನದಟ್ಟು ಮಾಡಿಕೊಂಡಿರುವ ಡಾ. ವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಬದುಕಿಗೆ ಅರ್ಥ ತುಂಬುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಇನ್ನು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ.

ಈ ಕಾರ್ಯಕ್ರಮಗಳಲ್ಲಿ ಅಗತ್ಯವಾಗಿ ಹೇಳಬೇಕಾದ ಮತ್ತು ಹೆಚ್ಚು ಮಹತ್ವದ ಕೆಲಸ ಬರಗಾಲ ಪೀಡಿತ ಪ್ರದೇಶಗಳಲ್ಲಿ ಕೆರೆಗಳ ದುರಸ್ತಿ ಕೆಲಸ. ಗದಗ ಜಿಲ್ಲೆಯ ಎರಡು ಊರುಗಳಲ್ಲಿ ಕೆರೆಗಳ ದುರಸ್ಥಿ ಕೆಲಸ ಮಾಡಿ ಕೆರೆಗಳು ನೀರು ತುಂಬಿ ನಗುಚಲ್ಲಿ ಊರ ಜನರ ಮತ್ತು ಜಾನುವಾರುಗಳ ದಾಹ ತೀರಿಸಲು ಸನ್ನದ್ಧವಾಗಿವೆ.

kere_3ಗದಗ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಹಾಗೂ ನಿಡಗುಂದಿ ಗ್ರಾಮಗಳಲ್ಲಿನ ಹಳೆಯ ಕೆರೆಗಳ ಹೂಳು ತೆಗೆದು ಇವುಗಳಿಗೆ ಹೊಸ ಹೊಳಪು ಕೊಡಲಾಗಿದೆ. ಅಲ್ಲದೆ ಜನರಿಗೆ ಅನಕೂಲವಾಗಲೆಂದು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಒಟ್ಟಾರೆ ಈ ಕೆಲಸಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ೩೫ ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಲಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಕೆರೆಗಳನ್ನು ಅಭಿವೃದ್ದಿ ಪಡಿಸುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧಿಕಾರಿಗಳು ಗ್ರಾಮಸ್ಥರನ್ನು ಒಳಗೊಂಡು ಅವರೊಂದಿಗೆ ಕೆಲಸ ಮಾಡುವುದರ ಜೊತೆಗೆ ಇದು ನಮ್ಮೂರಿನ ಕೆರೆ ನಾವು ಸಂರಕ್ಷಿಸಿಕೊಳ್ಳಬೇಕು. ಇದರಿಂದ ಮಳೆಯ ನೀರನ್ನು ಕೆರೆಯಲ್ಲಿ ಸಂಗ್ರಹಿಸಿಕೊಳ್ಳಬೇಕು ಎಂಬುದುನ್ನು ಮನವರಿಕೆ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಈ ಕೆರೆಗಳು ತಮ್ಮ ಊರಿನ ಸುತ್ತಮುತ್ತಲಿನ ಅಂತರ್ಜಲವನ್ನು ಹೆಚ್ಚಿಸುವುದರ ಜೊತೆಗೆ ಭೂಮಿಯ ತೇವಾಂಶವನ್ನು ಹೆಚ್ಚಿಸುತ್ತವೆ ಎಂಬುದನ್ನು ಅರ್ಥವಾಗುವ ಹಾಗೆ ತಿಳಿಸಿದ್ದಾರೆ. ಇದರಿಂದ ನಮ್ಮ ಹಿಂದಿನ ಹಿರಿಯರ ಪ್ರಜ್ಞಾವಂತಿಕೆಯ ಕೆಲಸಗಳು ಸ್ಮರಣೆಗೆ ಬಂದಿವೆ.

ನಿಡಗುಂದಿ ಗ್ರಾಮದಲ್ಲಿ ೪ ಎಕರೆಗೆ ಹೆಚ್ಚು ವಿಸ್ತಾರವಾಗಿದ್ದ ಕೆರೆಯ ಹೂಳನ್ನು ತೆಗೆದು ದುರಸ್ಥಿ ಮಾಡಿ ಸುಸಜ್ಜಿತಗೊಳಿಸಲಾಗಿದ್ದು ಗ್ರಾಮದ ೫ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಮತ್ತು ಊರಿನಲ್ಲಿರುವ ಸಹಸ್ರಾರು ಜಾನುವಾರುಗಳಿಗೆ ಗಂಟಲು ಒಣಗದಂತೆ ನೋಡಿಕೊಳ್ಳಲು ಕೆರೆ ‘ನಾನಿದ್ದೇನೆ’ ಎನ್ನುವಂತೆ ಮೈತುಂಬಿ ನಿಂತಿದೆ.

ಇನ್ನು ಮಲ್ಲಾಪೂರ ಗ್ರಾಮದಲ್ಲಿನ ೩ ಎಕರೆಯ ವಿಸ್ತಾರದ ಕೆರೆ ಗ್ರಾಮದ ೨ ಸಾವಿರಕ್ಕೂ ಹೆಚ್ಚು ಕುಟುಂಬಗಳು ಸೇರಿದಂತೆ ಗ್ರಾಮದ ಜಾನುವಾರುಗಳ ಕುಡಿಯುವ ನೀರಿಗೆ ಆಸರೆ ಆಗಿದೆ. ಈ ಕೆರೆಯನ್ನು ಸಂಪೂರ್ಣವಾಗಿ ಹೂಳು ತೆಗೆದು ದುರಸ್ಥಿ ಮಾಡಿ ನೀರು ತುಂಬಿಸುವ ಕೆಲಸ ಕೂಡಾ ಆಗಿದೆ.

ಎರಡು ಗ್ರಾಮಸ್ಥರು ಸ್ವತ ಧರ್ಮಸ್ಥಳದ ಮಂಜುನಾಥಸ್ವಾಮಿಯೇ ಬಂದು ಜಲಪ್ರಸಾದ ನೀಡಿದ್ದಾನೆ ಎಂಬಂತೆ ಖುಷಿಯಲ್ಲಿದ್ದಾರೆ. ಜಲಪ್ರಸಾದ ಸ್ವೀಕರಿಸಿರುವ ಗ್ರಾಮಸ್ಥರು ಬದುಕಿಗೆ ಅತ್ಯಂತ ಮಹತ್ವವಾಗಿರುವ ಈ ಪ್ರಸಾದವನ್ನು ಶಾಶ್ವತವಾಗಿ ಉಳಿಸಿಕೊಳ್ಳುವತ್ತ ನಿರಂತರ ಜಾಗೃತಿ ಕೂಡಾ ಅವರಲ್ಲಿ ಇರಬೇಕಾದ ಅಗತ್ಯವಿದೆ.

kere_4ಈ ಎರಡು ಕೆರೆಗಳ ಮರುಜೀವ ಪಡೆದು ಗ್ರಾಮಸ್ಥರಿಗೆ ಜೀವಜಲ ಒದಗಿಸಲು ಸಜ್ಜಾಗಲು ಗ್ರಾಮಸ್ಥರನ್ನು ಹುರುದುಂಬಿಸಿ ಅವರನ್ನು ಜಾಗೃತಗೊಳಿಸುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗದಗ ಜಿಲ್ಲಾ ನಿರ್ದೇಶಕರಾಗಿ ಕೆಲಸ ಮಾಡಿ ಇದೀಗ ಡಾವಣಗೇರಿಗೆ ವರ್ಗಾವಣೆ ಆಗಿರುವ ಶ್ರೀ ಜಯಂತ ಪೂಜಾರಿ ಹಾಗೂ ರೋಣ ಯೋಜನಾಧಿಕಾರಿ ಶ್ರೀಮತಿ ವಸಂತಿ ಅಮಿನ್, ಗದಗ ಯೋಜನಾಧಿಕಾರಿಯಾಗಿ ಕೆಲಸ ಮಾಡಿ ಇದೀಗ ಕೇಂದ್ರ ಕಛೇರಿಗೆ ವರ್ಗಾವಣೆ ಆಗಿರುವ ಶ್ರೀ ದಿವಾಕರ್ ಸೇರಿದಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಎಲ್ಲ ಸಿಬ್ಬಂದಿಗಳ ಶ್ರಮ, ಆಸಕ್ತಿ ಗ್ರಾಮಗಳ ಮೇಲಿನ ಪ್ರೀತಿ ನೆನೆಯುವಂತಹವು. ಇದೀಗ ಬಂದ ಜಿಲ್ಲಾ ಯೋಜನಾಧಿಕಾರಿ ಶಿವಾನಂದ ಆಚಾರ್ಯ ಅವರು ಈ ಕೆರೆಗಳನ್ನು ಗ್ರಾಮಸ್ಥರಿಗೆ ಹಸ್ತಾಂತರ ಮಾಡುತ್ತಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವ ಕೆರೆಗಳ ದುರಸ್ತಿಯತ್ತ ದೃಷ್ಠಿನೆಟ್ಟಿದ್ದಾರೆ.

ಎಲ್ಲಕ್ಕಿಂತ ಹೆಚ್ಚು ಗೌರವಿಸಬೇಕಾದವರು ಧರ್ಮಾಧಿಕಾರಿಗಳು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರವರ್ತಕರಾಗಿರುವ ಡಾ.ವೀರೇಂದ್ರ ಹೆಗ್ಗಡೆಯವರು. ಹೆಗ್ಗಡೆಯವರ  ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಕೊಪ್ಪಳದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಂಗಾಧರ ರೈ ಸೇರಿದಂತೆ ಎಲ್ಲ ಅಧಿಕಾರಿಗಳ ಕೆಲಸ ಸದಾ ಸ್ಮರಣೀಯ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗ್ರಾಮದ ಅನೇಕ ಕಾರ್ಯಕ್ರಮಗಳೊಂದಿಗೆ ಹಳೆಯ ಕೆರೆಗಳ ಹೂಳು ತೆಗೆದು ದುರಸ್ತಿ ಮಾಡಿ ಅವುಗಳಿಗೆ ಹೊಸ ರೂಪ ನೀಡಿ ಅವುಗಳು ಮತ್ತೆ ತುಂಬಿಕೊಳ್ಳುವಂತೆ ಮಾಡುವ ಮೂಲಕ ಸದ್ದಿಲ್ಲದೆ ಅಂತರ್ಜಲ ಹೆಚ್ಚಿಸುವ ಈ ಕೆಲಸ ಇತರ ಸಂಸ್ಥೆಗಳಿಗೆ ಮಾದರಿ.

ಚಿತ್ರ-ಲೇಖನ: ಎಂ.ಮಂಜುನಾಥ ಬಮ್ಮನಕಟ್ಟಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*