ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಒಂದುವರೆ ಸಾವಿರ ಮನೆಗಳಿಗೆ ನೀರು ಒದಗಿಸುವ ಮಣಕವಾಡ ಕೆರೆ

ನವಲಗುಂದ ತಾಲೂಕಿನ ಮಣಕವಾಡ ಮತ್ತು ನಲವಡಿ ಗ್ರಾಮಗಳ ನೀರದಾಹವನ್ನು ನೀಗಿಸುವುದು ಇಲ್ಲಿನ ಮಣಕವಾಡ ಕೆರೆ. ಕುಡಿಯುವ ನೀರಿನ ಕೆರೆ ಇದಾಗಿದ್ದು ಹದಿನಾರು ಎಕರೆ ವಿಸ್ತೀರ್ಣವನ್ನು ಹೊಂದಿದೆ. ಕೆರೆಯ ಆರು ಎಕರೆ ಮಾತ್ರ ನೀರು ತುಂಬಿದ್ದು ಉಳಿದ ಹತ್ತು ಎಕರೆ ಹೂಳು ತುಂಬಿತ್ತು. ವಿಶೇಷವೆಂದರೆ ಪ್ರತಿವರ್ಷ ಪಂಚಾಯತ್ ವತಿಯಿಂದ ಮಲಪ್ರಭಾ ಕಾಲುವೆಯಿಂದ ಈ ಕೆರೆಗೆ ನೀರನ್ನು ಹಾಯಿಸಲಾಗುತ್ತದೆ. ಆದರೆ ಕೆರೆ ಹತ್ತು ಎಕರೆ ಹೂಳು ತುಂಬಿದ್ದು ನೀರು ಸಂಗ್ರಹಣಾ ಪ್ರಮಾಣವು ತುಂಬಾ ಕಡಿಮೆಯಾಗಿತ್ತು. ಇದೀಗ ಹತ್ತು ಎಕರೆಯ ಹೂಳೆತ್ತುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡಿ ಮುಗಿಸಿದೆ.

1 ಕೆರೆ ಇಪ್ಪತ್ತೈದು ಅಡಿ ಆಳವಾಗಿದ್ದು ಹತ್ತು ಅಡಿಗಳಷ್ಟು ಹೂಳನ್ನು ತೆಗೆಯಲಾಗಿದೆ. ಸಂಪೂರ್ಣ ಹೂಳು ತುಂಬಿ ಒಣಭೂಮಿಯಂತಿದ್ದ ಹತ್ತು ಎಕರೆಯ ಹೂಳೆತ್ತಿ ಕೆರೆಗೆ ಮರುರೂಪವನ್ನು ನೀಡಲಾಗಿದೆ. ಕೆರೆಯಲ್ಲಿ ಮಳೆಯಿಂದ ಭರ್ತಿಯಾದ ನೀರು ಮೂರು ತಿಂಗಳುಗಳ ಕಾಲ ಬಳಕೆಗೆ ಬರುತ್ತದೆ. ಕೆರೆಗೆ ವರ್ಷದಲ್ಲಿ ಎರಡು ಬಾರಿ ಪಂಪ್ ಮೂಲಕ ನೀರು ತುಂಬಿಸಿ ಫಿಲ್ಟರ್ ಮಾಡಿ ಮನೆಗಳಿಗೆ ಒದಗಿಸಲಾಗುತ್ತದೆ. ಕೆರೆಯ ಹೂಳೆತ್ತಿದ ಪರಿಣಾಮದಿಂದಾಗಿ ಕಳೆದ ಮಳೆಗಾಲದ ನೀರು ನಿಲ್ಲುವಂತಾಗಿದ್ದು ಕೆರೆಯಲ್ಲಿನ  ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಕೆರೆಯ ಹೂಳೆತ್ತಲು ಶ್ರೀ ಕ್ಷೇತ್ರ ಧರ್ಮಸ್ಥಳ ೧೨ ಲಕ್ಷ ರೂಪಾಯಿಯನ್ನು ತೊಡಗಿಸಿದೆ. ಸುಮಾರು ೧೦೫೦೦ ಲೋಡ್ ಹೂಳನ್ನು ರೈತರು ಕೊಂಡೊಗಿ ತಮ್ಮ ಗದ್ದೆಗಳಿಗೆ ಬಳಸಿಕೊಂಡಿದ್ದಾರೆ. ಕೆರೆಯಿಂದ ೬೦೦ ಲೋಡ್ ಟಿಪ್ಪರ್ ಹೂಳನ್ನು ತೆಗೆಯಲಾಗಿದ್ದು ನಲುವತ್ತು ದಿನಗಳ ಕಾಲ ಪ್ರತಿದಿನ ೩೦ ಟ್ರಾಕ್ಟರ್ ಮತ್ತು ೨ ಹಿಟಾಚಿಗಳು ಕೆಲಸ ನಿರ್ವಹಿಸಿವೆ. ಕೆರೆಯಲ್ಲಿ ಈ ಬಾರಿ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿದ್ದು ದೂರದಿಂದ ಮಳೆಗಾಲದ ನೀರು ಇಲ್ಲಿಗೆ ಬಂದು ಸೇರುವುದಕ್ಕಾಗಿ ಒಂದುವರೆ ಕಿ. ಮೀ ದೂರದಿಂದ ರಾಜ ಕಾಲುವೆಯನ್ನು ನಿರ್ಮಿಸಲಾಗಿದೆ. ಕೆರೆಯ ಸುತ್ತ ಕಾಲುವೆ, ಏರಿ ನಿರ್ಮಾಣವನ್ನು ಮಾಡಲಾಗಿದೆ.

ಕೆರೆ ಸ್ವಚ್ಛತೆಗೆ ಹೆಸರುವಾಸಿಯಾಗಿದ್ದು ಕೆರೆ ನಿರ್ಮಾಣದಿಂದಾಗಿ ವರ್ಷದುದ್ದಕ್ಕೂ ಬೇಕಾದಷ್ಟು ನೀರನ್ನು ಸಂಗ್ರಹಿಸಿಡಬಹುದಾಗಿದೆ. ಊರಿನ ಪ್ರತಿಯೊಬ್ಬರು ಕೆರೆ ಸಂರಕ್ಷಣೆ ತಮ್ಮ ಹಕ್ಕು ಎಂದು ದುಡಿಯುತ್ತಿದ್ದು ಕೆರೆಗೆ ಪಂಪ್ ಅಳವಡಿಸಲು, ದನಕರು ತೊಳೆಯಲು ಅವಕಾಶಗಳಿಲ್ಲ.

ಪ್ರತಿಫಲ :

ಕೆರೆಯಲ್ಲಿ ನೀರು ಶೇಖರಣೆಯಾಗುವುದರಿಂದಾಗಿ ಹತ್ತಿರದ ಮೂರು ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ಮಹಿಳೆಯರು ದೂರದ ಊರಿಗೆ ನೀರಿಗಾಗಿ ಓಡಾಡುವುದು ತಪ್ಪಿದೆ. ಎಲ್ಲೆಡೆ ಕೆರೆಯ ಹೂಳೆತ್ತುವ ಕೆಲಸಗಳು ನಡೆದಲ್ಲಿ ರಾಜ್ಯದ ನೀರಿನ ಸಮಸ್ಯೆಯೊಂದು ಬಗೆಹರಿಯುವುದರಲ್ಲಿ ಎರಡು ಮಾತಿಲ್ಲ. ಆ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕೈಜೋಡಿಸಬೇಕಾಗಿದೆ.

೭೫ ಕೆರೆಗಳ ಹೂಳೆತ್ತಿದ ಧರ್ಮಸ್ಥಳ :

   5 ಕಳೆದರಡು ವರ್ಷಗಳ ಹಿಂದೆ ಅಂದರ ಆರಂಭದಲ್ಲಿ ಧಾರವಾಡ ತಾಲೂಕಿನ ೯೦ ಎಕರೆ ವಿಸ್ತೀರ್ಣದ ಮುಗದಕೆರೆ, ೧೯ ಎಕರೆಯ ಹೆಬ್ಬಳ್ಳಿ, ೬ ಎಕರೆಯ ತಿಮ್ಮಾಪುರ, ೩ ಎಕರೆಯ ಹಳ್ಳಿಗೇರಿ, ೨ ಎಕರೆಯ ಕೋಟಾಬಾಗಿ ಮತ್ತು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ರುದ್ರವಾಡಿ ಗ್ರಾಮದ ಬಸವನಕಟ್ಟೆಕೆರೆ, ಸರಸಾಂಬಾದ ಮಡ್ಡಿಕೆರೆ, ಆಫಜಲ್‌ಪುರ ತಾಲೂಕಿನ ಬಳೂರ್ಗಿ ಗ್ರಾಮದ ಹೊಸಕೆರೆ ಹೀಗೆ ಒಟ್ಟು ಎಂಟು ಕೆರೆಗಳ ಹೂಳೆತ್ತುವ ಮೂಲಕ ಬೇಸಿಗೆಗಾಲದಲ್ಲೂ ನೀರನ್ನು ಪಡೆಯುವ ಪ್ರಯತ್ನವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡಲಾಗಿದೆ. ಆರಂಭದಲ್ಲಿ ಕೆರೆಗಳ ಹೂಳೆತ್ತುವ ಕೆಲಸಕ್ಕಾಗಿ ಧರ್ಮಸ್ಥಳ ಬರೋಬ್ಬರಿ ೩೧ ಲಕ್ಷ ರೂ. ಗಳನ್ನು ವ್ಯಹಿಸಿದೆ.

ಕಳೆದ ವರ್ಷ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯದಾದ್ಯಂತ  ೭೫ ಕೆರೆಗಳ ಹೂಳೆತ್ತುವ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಈ ಕೆಲಸಕ್ಕೆ ಊರವರ ಸಹಕಾರವು ತುಂಬಾ ಚೆನ್ನಾಗಿ ಸಿಕ್ಕಿದೆ. ಸುಮಾರು ಇಪ್ಪತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಕೆರೆಗಳು ಹೂಳು ಮುಕ್ತಗೊಂಡಿದ್ದು ಇದರಲ್ಲಿ ಹತ್ತು ಕೋಟಿ ರೂಪಾಯಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗಿದೆ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|ಎಲ್.ಎಚ್.ಮಂಜುನಾಥ್, ರಾಜ್ಯದ ಯೋಜನೆಯ ಸಿಬ್ಬಂದಿಗಳ, ಊರವರ ಸಹಕಾರದೊಂದಿಗೆ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಕೆರೆಗಳ ಹೂಳೆತ್ತುವ ಕೆಲಸವನ್ನು ಮಾಡಿ ಮುಗಿಸಲಾಗಿದೆ. ಮಣಕವಾಡ ಕೆರೆಯ ಹೂಳೆತ್ತುವ ಕೆಲಸ ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಎನ್. ಜಯಶಂಕರ ಶರ್ಮ, ನಿರ್ದೇಶಕರಾದ ದಿನೇಶ್ ಎಂ., ಯೋಜನಾಧಿಕಾರಿ ಸತೀಶ್.ಎಚ್ ಇತರ ಯೋಜನೆಯ ಸಿಬ್ಬಂದಿಗಳ ಮುಂದಾಳತ್ವದಲ್ಲಿ ನಡೆದಿದೆ. ಹೂಳೆತ್ತಿದ ಪರಿಣಾಮ ನೆಲಸಮವಾಗಿದ್ದ ಕೆರೆ ಪ್ರದೇಶ ಇದೀಗ ಮತ್ತೆ ಮರುಜೀವವನ್ನು ಪಡೆದಿದೆ. ಹೂಳನ್ನು ರೈತರು ತೆಗೆದುಕೊಂಡು ಹೋಗುವ ಮೂಲಕ ಪರೋಕ್ಷವಾಗಿ ಹೂಳೆತ್ತುವ ಕೆಲಸಗಳಲ್ಲಿ ಸಾಥ್ ನೀಡಿದ್ದಾರೆ.

“ನೀರಾವರಿಗಾಗಿ ಸಣ್ಣ ಸಣ್ಣ ಕೆರೆಗಳ ಮೂಲಕ ಜಲ ಅಭಿವೃದ್ಧಿ ಮಾಡುವುದು, ಕೃಷಿಗೆ ನೀರು ಪೂರೈಸುವುದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡಿಕೊಂಡು ಬಂದಿವೆ. ಸರಕಾರಗಳು ಕೋಡಪಾನದಷ್ಟು ಕೊಟ್ಟರೆ ನಾವು ಸಣ್ಣ ಚಮಚೆಯಲ್ಲಿ ನೀರು ಕೊಡುವ ಸಣ್ಣ ಕಿರು ಸೇವೆಯನ್ನು ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಜನರ ಸಹಭಾಗಿತ್ವದಲ್ಲಿ ಕೆರೆ ಪುನಶ್ಚೇತನ ಮಾಡಿದ್ದೇವೆ.” –   ಡಾ|| ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ.

“ರಾಜ್ಯದ ಸಾವಿರಾರು ಎಕರೆಯ ಕೆರೆಗಳು ನಾನಾ ಕಾರಣಗಳಿಂದಾಗಿ ಒತ್ತುವರಿಯಾಗುತ್ತಿರುವ ಈ ದಿನಗಳಲ್ಲಿ ಕಡಿಮೆ ವೆಚ್ಚದಲ್ಲಿ ಯಾವುದೇ ದುಂದುವೆಚ್ಚವನ್ನು ಮಾಡದೆ, ಊರವರ ಸಂಪೂರ್ಣ ಸಹಭಾಗಿತ್ವದಲ್ಲಿ ರಾಜ್ಯದ ಕೆರೆಗಳ ಹೂಳೆತ್ತುವ ಧರ್ಮಸ್ಥಳದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಪ್ರಯತ್ನ ರಾಜ್ಯಕ್ಕೆ ಮಾದರಿಯಾಗಬಲ್ಲದು.

ಚಿತ್ರ-ಲೇಖನ:  ಚಂದ್ರಹಾಸ ಚಾರ್ಮಾಡಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*