ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೃಷಿ ಹೊಂಡ ತಂದ ನೀರ ನೆಮ್ಮದಿ

ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಬಗ್ಗೆ ರಾಜ್ಯದಾದ್ಯಂತ ಸಾಕಷ್ಟು ಟೀಕೆ, ಲೋಪ, ಭ್ರಷ್ಟತೆ ಆರೋಪಗಳಿವೆ. ಆದರೆ ಅಭಿವೃದ್ಧಿ ಗರಿಷ್ಟ ಮಟ್ಟದಲ್ಲಿ ಆಗಿದೆ. ಅದೆಲ್ಲ ಒಂದಿಷ್ಟು ಅವ್ಯವಹಾರದಿಂದ ಸಾರ್ವಜನಿಕವಾಗಿ ಬೆಳಕಿಗೆ ಬಂದಿಲ್ಲ. ತುಮಕೂರು ಜಿಲ್ಲೆ ಕಳೆದ ಹತ್ತು ವರ್ಷಗಳಿಂದ ಸಮೃದ್ಧ ಮಳೆಯನ್ನು ಕಂಡಿಲ್ಲ. ಆದರೂ ಬರದಲ್ಲೂ ಹತ್ತಾರು ಕೆರೆ, ಕಟ್ಟೆಗಳಲ್ಲಿ ನೀರು ತುಂಬಿರುತ್ತದೆ. ಅದಕ್ಕೆ ಕಾರಣ ನರೇಗಾ.

Tumkur -1ಉದ್ಯೋಗ ಖಾತ್ರಿ ಯೋಜನೆಯಡಿ ಅಂತರ್ಜಲ ಹೆಚ್ಚಿಸುವ ಪ್ರಯತ್ನ ೨೦೧೪ರಿಂದ ತುಮಕೂರು ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಪರಿಣಾಮ ೨೦೧೫-೧೬ರ ಸಾಲಿನಲ್ಲಿ ಬರದ ಬೇಗೆ ಹೆಚ್ಚಾದರೂ ಮಧುಗಿರಿಯಂತಹ ಸದಾ ಬರಪೀಡಿತ ತಾಲೂಕಿನಲ್ಲೂ ಕೆರೆ, ಕಟ್ಟೆ, ಗೋಕಟ್ಟೆಯಲ್ಲಿ ನೀರಿದೆ. ಊರಿನ ಹಿತಕ್ಕಾಗಿ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡುವ ದಿನಗಳು ಕಳೆದು ದಶಕಗಳೇ ಉಳಿದಿವೆ. ಈಗ ಪ್ರತಿಯೊಂದಕ್ಕೂ ಸರ್ಕಾರದ ಕಡೆ ನೋಡುವ ಸೋಮಾರಿತನದ ಪ್ರವೃತ್ತಿ ಬಂದಿದೆ. ಆದರೆ ಕೆಲ ಅಧಿಕಾರಿಗಳ ಹಿತಾಸಕ್ತಿಯಿಂದ ನರೇಗಾ ಯೋಜನೆಯಡಿ ಸುಮಾರು ಐದು ಸಾವಿರಕ್ಕೂ ಅಧಿಕ ಕೃಷಿ ಹೊಂಡಗಳನ್ನು ರೈತರು ತಮ್ಮ ಜಮೀನುಗಳಲ್ಲಿ ನಿರ್ಮಿಸಿಕೊಂಡು ಮಳೆನೀರು ನಿಲ್ಲುವಂತೆ ಮಾಡಿಕೊಂಡಿದ್ದಾರೆ. ಕೃಷಿಗೆ, ದನ, ಕರುಗಳಿಗೆ ಈ ಹೊಂಡಗಳು ನೀರಿನಾಶ್ರಯದ ತಾಣಗಳಾಗಿವೆ. ಜೊತೆಗೆ ರೈತರು ಜಮೀನಿಗೆ ಹೂಡಿದ ಬಂಡವಾಳವನ್ನು ತಂದು ಕೊಡುತ್ತಿದೆ.

ರೈತರು ಪ್ರತಿಯೊಂದಕ್ಕೂ ಸರ್ಕಾರವೇ ಮಾಡಲಿ ಎಂದು ಎದುರು ನೋಡದೆ ಸರ್ಕಾರದ ಸಹಾಯ, ಸವಲತ್ತುಗಳನ್ನು ಬಳಸಿಕೊಂಡು ಜಲಮೂಲಗಳನ್ನು ರಕ್ಷಿಸಿಕೊಳ್ಳಬೇಕು. ಬರಗಾಲ ನಿನ್ನೆ, ಮೊನ್ನೆಯದ್ದಲ್ಲ. ಅದಕ್ಕೂ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ಚರಿತ್ರೆಯಲ್ಲೇ ಸಾಕಷ್ಟು ಪುರಾವೆಗಳಿವೆ. ಬರವನ್ನು ಅಟ್ಟಲು ನಮ್ಮ ಪೂರ್ವಿಕರು ಬಾವಿ, ಕೆರೆ, ಕಲ್ಯಾಣಿಗಳನ್ನು ನಿರ್ಮಿಸಿ, ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಅವರನ್ನು ಈಗ ನಾವು ಅನುಸರಿಸಲೇ ಬೇಕಾಗಿದೆ. ಇಲ್ಲವಾದರೆ ಕರ್ನಾಟಕ ಮರಳುಗಾಡು ಆಗುವುದರಲ್ಲಿ ಸಂಶವಿಲ್ಲವೆಂದು ಜಲತಜ್ಞರು ಎಚ್ಚರಿಸಿದ್ದಾರೆ.

ಇಂತಹ ಎಚ್ಚರಿಕೆಗಳ ಹಿನ್ನೆಲೆಯಲ್ಲಿ ಕೃಷಿ ಹೊಂಡಗಳ ನಿರ್ಮಾಣ ತೀರಾ ಅನಿವಾರ್ಯವಾಗಿದೆ. ಆದ್ದರಿಂದಲೇ ನಾನು ನಿವೃತ್ತಿ ಜೀವನದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡು ಕೃಷಿಯಲ್ಲಿ ನೆಮ್ಮದಿ ಜೀವನ ಕಾಣುತ್ತಿದ್ದೇನೆ ಎನ್ನುತ್ತಾರೆ ಆರ್. ಪುಟ್ಟರಂಗಯ್ಯ. ತುಮಕೂರು ನಗರದ ಕೂಗಳತೆಯಲ್ಲಿರುವ ಸತ್ಯಮಂಗಲಕ್ಕೆ ಪಕ್ಕದಲ್ಲಿರುವ ನವಿಲಹಳ್ಳಿ ಒಂದು ಕಾಲದಲ್ಲಿ ಕಾಡಿನ ಪರಿಸರ ಹೊಂದಿತ್ತು. ನಗರದ ಎಲ್ಲ ಚಾಳಿ ಅಂಟಿಕೊಂಡ ನಂತರ ಕಾಡು ಮಾಯವಾಗಿ, ನೀರಿಗೂ ತತ್ವಾರ ಬಂದಿತು. ಆ ವೇಳೆಗೆ ಮುಖ್ಯ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದೆ. ಕೃಷಿ ಕುಟುಂಬದ ನಾನು ನಿವೃತ್ತಿ ನಂತರ ಬೇಸಾಯಕ್ಕಿಳಿದೆ. ಐದು ಎಕರೆ ಜಮೀನಿನಲ್ಲಿ ಬೇಸಾಯ ಮಾಡಲು ನೀರಿಲ್ಲ. ಕಣ್ಣಾಮುಚ್ಚಾಲೆಯಾಡುವ ಮಳೆ ನಂಬಿ ರೈತರು ಸಾಕಷ್ಟು ನಷ್ಟಕ್ಕೀಡಾಗುತ್ತಿದ್ದಾರೆ. ಏನು ಮಾಡುವುದು ಎಂದು ಚಿಂತಿಸುತ್ತಿದ್ದೆ. ಆಗ ಕೃಷಿಹೊಂಡದ ಬಗ್ಗೆ ಇಲಾಖೆ ಅಧಿಕಾರಿಗಳು ಮಾಡುವ ಪ್ರಚಾರದ ಬಗ್ಗೆ ಇನ್ನಷ್ಠು ಮಾಹಿತಿ ತಿಳಿಯಲು ತಾಲೂಕು ಕೃಷಿ ಸಹಾಯಕ ನಿರ್ದೇಶಕರನ್ನು ಭೇಟಿಯಾದೆ. ಅವರು ನೀಡಿದ ಸಲಹೆಯಂತೆ ಕೃಷಿಭಾಗ್ಯ ಯೋಜನೆಯಡಿ ಕೃಷಿಹೊಂಡ ನಿರ್ಮಿಸಿದೆ.  ಮಳೆ ನೀರು ತುಂಬಿತು. ಅಲ್ಲಿಂದ ನನ್ನ ಕೃಷಿ ಬದುಕು ಬದಲಿಸಿತು ಎಂದು ಎದೆಯುಬ್ಬಿಸಿ ಹೇಳುತ್ತಾರೆ ಆರ್. ಪುಟ್ಟರಂಗಯ್ಯ..

ಮಳೆಯಾಶ್ರಿತ ಜಮೀನಿನ ಒಂದು ಹೆಕ್ಟೇರ್ ಪ್ರದೇಶದಲ್ಲಿ ಕಂದಕ ಬದು, ೧೦*೧೦*೩ ಅಡಿ ಉದ್ದಗಲ, ಆಳದ ಕೃಷಿ ಹೊಂಡ ನಿರ್ಮಿಸಿರುವ ಅವರು ಹೊಂಡಕ್ಕೆTumkur -2 ಡೀಸೆಲ್ ಎಂಜಿನ್ ಅಳವಡಿಸಿಕೊಂಡಿದ್ದಾರೆ. ಹೊಂಡ ಮಳೆ ನೀರಿನಿಂದ ತುಂಬಿಕೊಳ್ಳುವುದರಿಂದ ನೀರು ಪೋಲಾಗದಂತೆ ಹೊಂಡದ ತುಂಬ ಪಾಲಿಥಿನ್ ಹಾಳೆಯನ್ನು ಹಾಸಬೇಕು. ಆದ್ದರಿಂದ ವಾರ್ಷಿಕ ಮಳೆ ನೀರು ಸುಮಾರು ಐದು ಲಕ್ಷ ಲೀಟರ್ ಸಂಗ್ರಹವಾಗುತ್ತದೆ. ಅಲ್ಲದೆ ಕಂದಕ, ಬದುಗಳೂ ಮಳೆ ನೀರು ಸಂರಕ್ಷಣೆ ಸರಪಳಿಗೆ ಅನುಕೂಲವಾಗುತ್ತವೆ. ಆದ್ದರಿಂದ ಎರಡು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಶಕ್ತಿಮಾನ್ ಮುಸುಕಿನ ಜೋಳಕ್ಕೆ  ಮಳೆ ಕೊರತೆ ಆದಾಗ ಹೊಂಡದ ನೀರು ಆಶ್ರಯವಾಗಿ, ಉತ್ತಮ ಬೆಳೆ ಬಂದು ಕೈ ತುಂಬ ಹಣವೂ ಸಿಕ್ಕಿದೆ. ಬಿತ್ತಿದ ಬೆಳೆಗಳು ಉತ್ಕೃಷ್ಠವಾಗಿ ಬಂದದ್ದರಿಂದ ನನ್ನಂತೆಯೇ ಇತರೆ ರೈತರು ಆಗಲಿ ಎಂದು ಕೃಷಿ ಇಲಾಖೆ ಅಧಿಕಾರಗಳ ಸಹಕಾರದೊಂದಿಗೆ ಬೆಳೆ ಕ್ಷೇತ್ರೋತ್ಸವವನ್ನು ಏರ್ಪಡಿಸಿ, ಸಹಪಾಠಿ ರೈತರಿಗೆ ಕೃಷಿಹೊಂಡದ ಅವಶ್ಯಕತೆಯನ್ನು ತಿಳಿಸಿಕೊಟ್ಟರು. ಕೃಷಿ ಹೊಂಡಗಳನ್ನು ಜಮೀನಿನ ಇಳಿಜಾರಿನಲ್ಲಿ ನಿರ್ಮಿಸಿಕೊಂಡರೆ ಮಳೆ ನೀರಿನಿಂದ ಫಲವತ್ತಾದ ಜಮೀನಿನ ಮಣ್ಣು ಕೊಚ್ಚಿ ಹೋಗದಂತೆ ತಡೆಯಬಹುದು. ಮಣ್ಣು ಸವಕಳಿ ತಪ್ಪಿಸಿದರೆ ಫಲವತ್ತತೆ ಜಮೀನಿನಲ್ಲೇ ಉಳಿದು, ಉತ್ಖೃಷ್ಠ ಬೆಳೆ ಬೆಳೆಯಲು ಅನುಕೂಲವಾಗಲಿದೆ.

ಈ ಸಾಧನೆ ಕೇವಲ ಆರ್. ಪುಟ್ಟರಂಗಯ್ಯರದ್ದು ಮಾತ್ರವಲ್ಲ. ನೂರಾರು ರೈತರದ್ದೂ ಆಗಿದೆ. ಶಿರಾ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಲೋಕಮ್ಮ ಕೃಷಿ ಹೊಂಡವನ್ನು ನಿರ್ಮಿಸಿಕೊಂಡು ಬೆಳೆಗಳಿಗೆ ಅವಶ್ಯಕವಾದಾಗ ನೀರನ್ನು ಹರಿಸಿಕೊಂಡು ಕೃಷಿ ಬದುಕಿನಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ತೋಟಗಾರಿಕೆ ಬೆಳೆಗಳನ್ನೂ ಹಲವಾರು ರೈತರು ಬೆಳೆದು ಲಾಭ ಪಡೆಯುತ್ತಿದ್ದಾರೆ. ಇನ್ನೂ ಕೆಲ ರೈತರು ಹೊಂಡದ ನೀರನ್ನು ಹನಿ ನೀರಾವರಿ ಪದ್ಧತಿಗೂ ಅಳವಡಿಸಿಕೊಂಡಿದ್ದಾರೆ. ಇಂತಹ ಹಲವಾರು ವಿಧಾನಗಳ ಮೂಲಕ ಬಯಲು ಸೀಮೆಗಳಲ್ಲಿ ಬರಗಾಲವನ್ನು ಅಟ್ಟಿ, ಸಮೃದ್ಧ ಬೆಳೆ ಬೆಳೆದುಕೊಳ್ಳುವಲ್ಲಿ ನೂರಾರು ರೈತರು ಯಶಸ್ಸಿನ ಪಟ್ಟಿ ಸೇರುತ್ತಿದ್ದಾರೆ.

ತುಮಕೂರು ಜಿಲ್ಲೆಯಾದ್ಯಂತ ಈವರೆಗೆ ಒಟ್ಟು ಐದು ಸಾವಿರಕ್ಕೂ ಅಧಿಕ ಕೃಷಿ ಹೊಂಡಗಳನ್ನು ನರೇಗಾ ಯೋಜನೆಯಡಿ ನಿಮೀಸಲಾಗಿದೆ. ಕೃಷಿ ಹೊಂಡಗಳೆಂದರೆ ಕೇವಲ ಮಳೆ ನೀರನ್ನು ಸಂಗ್ರಿಸಲು ಮಾತ್ರ ಎಂಬ ಮನೋಭಾವವಿದೆ. ನೀರಿಲ್ಲದೆ ಒಣಗಿ ಹೋಗಿರುವ ತೆರೆದ ಬಾವಿ, ಕೊಳವೆಬಾವಿಗಳನ್ನು ಪುನಶ್ಚೇತನಗೊಳಿಸಲು ಕೃಷಿಹೊಂಡಗಳ ನೀರನ್ನು ಬಳಿಸಿಕೊಳ್ಳಬಹುದು. ಈಗಾಗಲೆ ಹಲವಾರು ಮಂದಿ ರೈತರು ಕೃಷಿ ಹೊಂಡಗಳ ನೀರನ್ನು ಪಾರಂಪರಿಕ ಜಲ ಸಂರಕ್ಷಣಾ ವಿಧಾನದಿಂದ ಕೊಳವೆಬಾವಿಗಳಿಗೆ ಮರುಪೂರಣ ಮಾಡಿ ಪುನಶ್ಚೇನಗೊಳಿಸಿಕೊಂಡಿದ್ದಾರೆ.

ಕೃಷಿ ಭಾಗ್ಯ ಯೋಜನೆಯಡಿ ಲಾಟರಿ ಮೂಲಕ ಆಯ್ಕೆಯಾಗಿರುವ ಸಾವಿರಾರು ಮಂದಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಕೃಷಿಯಲ್ಲಿ ನೀರನೆಮ್ಮದಿ ಕಂಡುಕೊಂಡಿದ್ದಾರೆ.

ಇಂದು ಕೃಷಿ ಜೀವನವಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಯಂತ್ರ, ಮಂತ್ರಗಳಿಂದ ಒಂದು ಹನಿ ನೀರು, ಒಂದು ಹಿಡಿ ಕಾಳನ್ನು ತಯಾರಿಸಲು ಸಾಧ್ಯವಿಲ್ಲ. ಇದನ್ನು ಮನಗಂಡ ಸರ್ಕಾರ ಕೃಷಿ ಹೊಂಡಗಳನ್ನು ನಿರ್ಮಿಸಿ, ಆ ಮೂಲಕ ಆಹಾರ ಧಾನ್ಯ ಮತ್ತು ನೀರಿನ ಕೊರತೆ ನೀಗಲು ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ನಿರಂತರ ಪ್ರಯತ್ನ ನಡೆಸಿದೆ.

ಚಿತ್ರ-ಲೇಖನ:  ಜಿ. ಇಂದ್ರಕುಮಾರ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*