ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಚಾವಣಿ ನೀರು ಸಂಗ್ರಹ – ಬದಲಾಗಬೇಕಿದೆ ಮನೋಭಾವ

ಬಾಗೇಪಲ್ಲಿ ಬಳಿಯ ದಿಡಗಂ ಎಂಬ ಊರು, ಮಳೆ ನೀರು ಸಂಗ್ರಹಣೆ ಬಗ್ಗೆ ಚರ್ಚೆ. ಸುಮಾರು ಐವತ್ತು ಜನ ಮಹಿಳೆಯರು ಪಾಲ್ಗೊಂಡಿದ್ದರು. ಎಲ್ಲರದೂ ಒಂದೇ ಸಮಸ್ಯೆ. ಕುಡಿಯಲು ಶುದ್ಧ ನೀರಿಲ್ಲ. ಇರುವ ನೀರಿನಲ್ಲಿ ಪ್ಲೋರೈಡ್ ವಿಪರೀತವಾಗಿದೆ. ಒಳ್ಳೆಯ ನೀರು ಸಿಗಬೇಕೆಂದರೆ ಊರಿನಿಂದ ಒಂದೆರಡು ಕಿಲೋಮೀಟರ್ ಹೋಗಬೇಕು. ಖಾಸಗಿ ಟ್ಯಾಂಕರ್ ಅಥವಾ ಕ್ಯಾನ್ ನೀರನ್ನು ಅವಲಂಬಿಸಬೇಕು.

ಕೈಕಾಲು ನೋವು, ಕೀಲು, ಮಂಡಿ ನೋವು, ಮೂಳೆ ಸವೆತ, ಹಲ್ಲಿನ ಮೇಲೆ ಹಳದಿ ಪಾಚಿ. ಮಕ್ಕಳಿಗೆ ಹಲವು ರೀತಿಯ ರೋಗ, ಆಸ್ಪತ್ರೆಗೆ ವಿಪರೀತ ಖರ್ಚು ಮುಂತಾದ ಅನೇಕ ಸಮಸ್ಯೆಗಳನ್ನು ತೋಡಿಕೊಂಡರು. ತಾಲ್ಲೂಕಿನಲ್ಲಿ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುತ್ತಿರುವ ಮಹಿಳಾ ಸಾಮಖ್ಯ ಸಂಸ್ಥೆ ಇದಕ್ಕೆ ಪರಿಹಾರ ಮತ್ತು ಪರ್ಯಾಯಗಳDSC_0834ನ್ನು ರೂಪಿಸಲು ಕಾರ್ಯಾಗಾರ ಏರ್ಪಡಿಸಿತ್ತು.

ಚರ್ಚೆಯ ನಂತರ ಅವರಿಗೆಲ್ಲಾ ಅದೇ ತಾಲ್ಲೂಕಿನ ಗೂಳೂರು ಪಂಚಾಯ್ತಿಯ ಮಾರಗಾನಕುಂಟೆಯಲ್ಲಿ ನೂರಾ ಹತ್ತು ಮನೆಗಳವರು ಕಳೆದ ಐದು ವರ್ಷಗಳಿಂದ ಚಾವಣಿ ನೀರು ಸಂಗ್ರಹಿಸಿ ಕುಡಿಯುತ್ತಿರುವುದನ್ನು ತೋರಿಸಿಕೊಂಡು ಬಂದೆವು. ೩.೭ ಪಿಪಿ.ಎಂ.ನಷ್ಟು (ಪಾರ್ಟ್ ಪರ್ ಮಿಲಿನಿಯಂ) ಅಧಿಕ ಪ್ರಮಾಣದ ಪ್ಲೋರೈಡ್ ಆ ಗ್ರಾಮದಲ್ಲಿತ್ತು. ಮಳೆ ನೀರು ಕುಡಿಯುವ ಮೂಲಕ ಆ ಸಮಸ್ಯೆಗೆ ಕಡಿವಾಣ ಹಾಕಿದ್ದರು. ಜನರು ತಮ್ಮ-ತಮ್ಮ ಮನೆಗಳ ಲಭ್ಯ ಜಾಗದಲ್ಲೇ ಚಾವಣಿ ನೀರು ಹಿಡಿದಿಟ್ಟುಕೊಂಡಿದ್ದರು. ಕೆಲವರು ಅಡುಗೆ ಮನೆಯಲ್ಲೇ ತೊಟ್ಟಿ ಮಾಡಿಕೊಂಡಿದ್ದರು. ಗ್ರಾಮದ ದೇವಾಲಯಕ್ಕೂ ಚಾವಣಿ ನೀರು ಸಂಗ್ರಹ ಅಳವಡಿಸಿ ಪ್ರತಿನಿತ್ಯ ದೇವರಿಗೆ ಶುದ್ಧ ಮಳೆನೀರಲ್ಲೇ ಅಭಿಶೇಕ ಮಾಡುತ್ತಿದ್ದರು.

ನಮ್ಮ ಮಹಿಳೆಯರು ಅರ್ಧ ದಿನ ಅದನ್ನೆಲ್ಲಾ ನೋಡಿ ರೈತರೊಂದಿಗೆ ಮಾತನಾಡಿ ಮಳೆ ನೀರನ್ನು ಕುಡಿದು ಬಂದರು.  ಕಾರ್ಯಾಗಾರದ ಸ್ಥಳಕ್ಕೆ ವಾಪಸ್ಸಾದ ನಂತರ ಚರ್ಚೆ ಪ್ರಾರಂಭವಾಯಿತು.

‘ನೋಡಿದ್ರಲ್ಲಾ ಏನನ್ನಿಸಿತು?’

‘ಬಾಳಾ ಚೆನಾಗಿದೆ, ನೀರು ಬಲೇ ಟೇಸ್ಟು, ಇಂಥಾ ಬರಗಾಲ್ದಾಗು ಅವರಿಗೆ ನೀರಿನ ಸಿಂತೆ ಇಲ್ಲ’

‘ಎಷ್ಟು ಖರ್ಚಾಗುತ್ತೆ ಅಂತ ಗೊತ್ತಾಯ್ತಾ’

‘ಅವರೇ ಹೇಳಿದ್ರಲ್ಲ, ಐದು ಸಾವಿರ ಲೀಟರ್‌ನಷ್ಟು ನೀರಿನ ತೊಟ್ಟಿ ಕಟ್ಟೋಕೆ ಹದ್ನಾರು ಸಾವ್ರ ಬೇಕಾಗುತ್ತೆ’

‘ನೀವೂ ಯಾಕೆ ನಿಮ್ಮ ಮನೆಗಳಲ್ಲಿ ಇದೇ ರೀತಿ ಮಳೆ ನೀರು ಸಂಗ್ರಹಣೆ ಮಾಡಿಕೊಳ್ಳಬಾರದು’

‘ಸರ್ಕಾರದೋರು ಮಾಡ್ಸಿಕೊಡ್ಬೇಕು, ಆ ಹಳ್ಳಿಗೆಲ್ಲಾ ಕೊಟ್ಟಂಗೆ ನಮಗೂ ಸಬ್ಸಿಡಿ ಕೊಟ್ರೆ ನಾವೂ ಮಡ್ಕೋಬಹುದು’

‘ಒಂದು ವೇಳೆ ಸರ್ಕಾರ ಸಬ್ಸಿಡಿ ಕೊಡಲಿಲ್ಲ ಅನ್ನಿ, ಆಗೇನ್ಮಾಡ್ತೀರಿ?

‘ಎಲ್ರೂ ಒಗ್ಗಟ್ಟಾಗಿ ಹೋಗಿ ಕೇಳ್ತೀವಿ, ಧರಣಿ ಮಾಡ್ತಿವಿ, ಕೊಡೋವರ್ಗೂ ಬಿಡಲ್ಲ’

‘ಸರ್ಕಾರ ನಿಮ್ಮ ಮನವಿಗೆ ಒಪ್ಪಿ, ಯೋಜನೆ ತಯಾರುಮಾಡೋಕೆ ಎರಡು ವರ್ಷ ಆಗುತ್ತೆ ಅಂತಿಟ್ಕೊಳಿ, ಅಲ್ಲೀವರಗೂ ಏನ್ಮಾಡ್ತೀರಿ’

‘ಇನ್ನೇನ್ಮಾಡೋದು ಇರೋ ನೀರನ್ನೇ ಕುಡಿಯೋದು’

‘ಹದ್ನಾರು ಸಾವಿರ ಅಂದ್ರೆ ಹೆಚ್ಚೇನಲ್ಲ, ನೀವೇ ಕೈಯಿಂದ ಹಾಕಿ ಯಾಕೆ ಮಾಡ್ಕೋಬಾರ್ದು, ಶಾಶ್ವತವಾಗಿ  ಇರುತ್ತಲ್ಲ’

‘ಅದೆಂಗಾಗುತ್ತೆ ಹೇಳಿ, ಸರ್ಕಾರ ಮಾಡ್ಕೊಡಬೇಕು’

ಈ ರೀತಿ ನಮ್ಮ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. ನಾವು ಎಷ್ಟು ಮನವೊಲಿಸಿದರೂ ಕೇಳಲು ತಯಾರಿರಲಿಲ್ಲ. ಸರ್ಕಾರವೇ ಮಾಡಿಸಿಕೊಡಬೇಕು, ಇಲ್ಲವೇ ಬೇರೆ ಯಾವುದೇ ಸಂಸ್ಥೆಯಾದರೂ ನೆರವು ನೀಡಬೇಕೆಂಬುದು ಅವರ ವಾದ. ನಮಗೆ ತಲೆ ರೋಸಿ ಹೋಯಿತು. ಕೊನೆಗೊಂದು ಪ್ರಶ್ನೆ ಕೇಳಿದೆ.

‘ನಿಮ್ಮ ಎಷ್ಟು ಮನೆಗಳಲ್ಲಿ ಬೈಕ್ ಇದೆ?’

ಅರ್ಧದಷ್ಟು ಜನ ಕೈ ಎತ್ತಿದರು,

‘ಎಷ್ಟು ಮನೆಗಳಲ್ಲಿ ಕಲರ್ ಟಿ.ವಿ.ಇದೆ?

ಎಲ್ಲರೂ ಕೈ ಎತ್ತಿದರು.

‘ಬೈಕು, ಟಿ.,ವಿ. ತಗೋಳೋಕೆ ಸರ್ಕಾರ ಸಬ್ಸಿಡಿ ಕೊಟ್ಟಿದ್ಯಾ?’

ಯಾರಿಂದಲೂ ಮಾತಿಲ್ಲ ಕತೆಯಿಲ್ಲ.

‘ಐವತ್ತು ಸಾವಿರ ಕೊಟ್ಟು ಬೈಕ್ ತಗೊಳ್ತೀರಾ, ಪ್ರತಿ ತಿಂಗಳು ಸಾವಿರಾರು ರುಪಾಯಿಯ ಪೆಟ್ರೋಲ್ ಹಾಕಿಸ್ತಿರ, ಹತ್ತು-ಹದಿನೈದು ಸಾವಿರ ಕೊಟ್ಟು ಟಿ.ವಿ. ತಗೊಳ್ತಿರ, ಕುಡಿಯೋ ನೀರಿಗೆ ಮಾತ್ರ ಸರ್ಕಾರದ ಕಡೆಗೆ ನೋಡ್ತಿರಾ’ ಎಂದು ಜೋರು ಮಾಡಿದ ಮೇಲೆ ಮೌನವಹಿಸಿದರು. ಕೆಲವೇ ಜನ ಮಾತ್ರ ತಾವೇ ಸ್ವಂತ ಖರ್ಚಿನಿಂದ ನಿರ್ಮಿಸಿಕೊಳ್ಳುವುದಾಗಿ ಮುಂದೆ ಬಂದರು.

 

ಚಿತ್ರ-ಲೇಖನ: ಮಲ್ಲಿಕಾರ್ಜುನ ಹೊಸಪಾಳ್ಯ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*