ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಸಾಗರದೊಳಗಿನ ಸಿಹಿನೀರ ಶೋಧ

ನೀವೆಂದಾರೂ ಸಮುದ್ರದ ಒಂದು ಗುಟುಕು ಊಹುಂ….. ಒಂದು ತೊಟ್ಟು ನೀರನ್ನು ಬಾಯಿಗೆ ಹಾಕಿಕೊಂಡಿದ್ದೀರಾ?? ಈ ಮಾತನ್ನು ಕರಾವಳಿಯವರಿಗೆ ಕೇಳಿದರೆ ಬಿದ್ದು ಬಿದ್ದು ನಕ್ಕಾರು. ಬಯಲುನಾಡಿನವರಿಗೆ ಕೇಳಿದರೆ ಒಂದ್ ತೊಟ್ಟ್ ಯಾಕ್ರೀ ಸರ್ರಾ….. ಒಂದ್ ತಂಬಿಗಿ ನೀರ್ ಕೊಡ್ರಿ. ಅಷ್ಟೋಕೊಂದ್ ನೀರ್ ಅದಾವು, ಒಂದ್ ತಂಬಿಗಿ ಕುಡಿದೀವ್ ಅಂದ್ರಾ ಖಾಲಿ ಆಗಾಂಗಿಲ್ಲ ಬಿಡ್ರೀ ಸರ್ರಾ….. ಎಂದಾರು. ಸಮುದ್ರವನ್ನು ಕೇವಲ ಚಿತ್ರದಲ್ಲಿ ನೋಡಿರುವ ಅವರಿಗೇನು ಗೊತ್ತು! ಅದರ ಒಂದು ತೊಟ್ಟು ನೀರೂ ಸಹಾ ಗಂಟಲಿನವರೆಗೂ ಹೋಗಲೊಲ್ಲದು ಎಂಬುದು. ಅದರಲ್ಲಿ ಬರೀ ಉಪ್ಪು ಅಂದರೆ ೧೪ಕ್ಕೂ ಹೆಚ್ಚಿನ ರೀತಿಯ ಲವಣಗಳು ಇವೆ ಎಂಬುದು ಬಾಯಿಗೆ ಹಾಕಿಕೊಂಡ ಮೇಲೆಯೇ ತಿಳಿಯುವುದು.

poorna article -  sea water processing - 1 copyಪ್ರಪಂಚದಾದ್ಯಂತ ಏರುತ್ತಿರುವ ನೀರಿನ ಕೊರತೆಯನ್ನು ಶಮನಗೊಳಿಸುವ ಒಂದು ಉಪಾಯವೇ ಸಮುದ್ರದ ನೀರನ್ನು ಸವಳು-ಮುಕ್ತಗೊಳಿಸುವ ವಿಧಾನ. ತಮಿಳುನಾಡಿನಲ್ಲಿ ಈ ರೀತಿಯ ಕೆಲವು ಘಟಕಗಳು ಸವಳು ಮುಕ್ತಗೊಳಿಸತೊಡಗಿವೆ. ಸಿಹಿ ನೀರಿನ ಕೊರತೆಯ ನಿವಾರಣೆಗೆ ಹೊಸ ತಿರುವು ನೀಡುತ್ತಿವೆ.

ಜನಸಂಖ್ಯೆಯ ಹೆಚ್ಚಳ ವಾರ್ಷಿಕ ಶೇಕಡಾ ೧.೯ರಂತೆ ಮುಂದುವರೆದರೆ, ಇಸವಿ ೨೦೫೦ರ ವೇಳೆಗೆ ನಾವು ೧.೫ ಬಿಲಿಯನ್‌ನ್ನು ತಲುಪುತ್ತೇವೆ. ಇದರ ಅರ್ಥ ನಮ್ಮ ನೀರಿನ ಅಗತ್ಯ ಈಗಿರುವುದಕ್ಕಿಂತ ಎರಡೂವರೆ ಪಟ್ಟು ಹೆಚ್ಚುತ್ತದೆ. ಈಗಾಗಲೇ ನಮ್ಮ ಸಾಂಪ್ರದಾಯಿಕ ನೀರಿನ ಸಂಗ್ರಹಾಗಾರಗಳಾದ ಕೆರೆಗಳು, ಹಳ್ಳಗಳು, ಹೊಂಡಗಳು, ನದಿಗಳೆಲ್ಲಾ ಬತ್ತುತ್ತಿವೆ. ಬೋರ್‌ವೆಲ್‌ನ ಆಳ ೨೫೦ ಅಡಿಗಳಿಂದ ೮೦೦ ಅಡಿಗಳವರೆಗೆ ಇಳಿದಿದೆ. ಗ್ರಾಮೀಣ ಪ್ರದೇಶದಲ್ಲಿರಬಹುದು, ನಗರ ಪ್ರದೇಶಗಳಲ್ಲಿರಬಹುದು ನೀರನ್ನು ಒದಗಿಸುವ ಕೆಲಸ ಪ್ರಯಾಸಕರವೆನಿಸಿದೆ. ಹೀಗಾಗಿ ಸಮುದ್ರ ತೀರದಲ್ಲಿರುವ ನಗರಗಳಲ್ಲಿ ಉಪ್ಪುನೀರಿನಿಂದ ಸಿಹಿನೀರನ್ನು ಬೇರ್ಪಡಿಸುವ ಪ್ರಕ್ರಿಯೆಗೆ ಆದ್ಯತೆ ಸಿಗುತ್ತಿದೆ. ಆದರೆ ಇಲ್ಲಿ ತಲೆದೋರುವ ಪ್ರಮುಖ ಪ್ರಶ್ನೆ ಇದು ಸುಲಭವಾದ ಹಾಗೂ ವೆಚ್ಚವಿರದ ಉದ್ದಿಮೆಯೇ??

ಹೊಚ್ಚ ಹೊಸ ತಂತ್ರಜ್ಞಾನ?!

ಸವಳು ಅಥವಾ ಉಪ್ಪು ನೀರನ್ನು ಸಂಸ್ಕರಣೆ ಮಾಡಿ ಸಿಹಿನೀರಾಗಿಸುವ ತಂತ್ರಜ್ಞಾನವೂ ಅತ್ಯಂತ ವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ. ಇಸವಿ ೧೯೫೦ರಲ್ಲಿ ಸಮುದ್ರದ ನೀರಿನಿಂದ ಸಿಹಿನೀರನ್ನು ಬೇರ್ಪಡಿಸುವ ಕೆಲಸಕ್ಕೆ ಯುನೈಟೆಡ್ ಸ್ಟೇಟ್ಸ್ನವರು ಮೊದಲು ಕಾಲಿಟ್ಟರು. ಅದಕ್ಕಾಗಿ ಸೀವಾಟರ್ ರಿವರ್ಸ್ ಆಸ್ಮೊಸಿಸ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು. ಆಸ್ಮೊಸಿಸ್ ಅಥವಾ ಪರಾಸರಣ ಎನ್ನುವುದು ಒಂದು ನೈಸರ್ಗಿಕ ಕ್ರಿಯೆ. ಯಾವುದೇ ದ್ರಾವಣವು ದ್ರವ್ಯಸಾರತೆ ಕಡಿಮೆ ಇರುವ ಪ್ರದೇಶದಿಂದ ದ್ರವ್ಯಸಾರತೆ ಅಧಿಕ ಇರುವ ಪ್ರದೇಶಕ್ಕೆ ಅರೆಪಾರಕ ಪೊರೆಯ ಮೂಲಕ ಚಲಿಸುತ್ತದೆ. ಅರೆಪಾರಕ ಪೊರೆಯ ಎರಡೂ ಬದಿಯಲ್ಲಿರುವ ದ್ರಾವಣಗಳ ಸಾರತೆಯು ಸಮಾನಾಗುವವರೆಗೂ ಪಾರಸರಣ ಕ್ರಿಯೆ ನಡೆಯುತ್ತದೆ. ಪಾರಸರಣ ಕ್ರಿಯೆಯು ದ್ರವ್ಯದ ಪ್ರಮಾಣವನ್ನು ಅವಲಂಬಿಸಿದೆಯೇ ವಿನಾ ಅದರ ಗುಣಲಕ್ಷಣಗಳನ್ನಲ್ಲ. ಆದರೆ ಇಲ್ಲಿ ನಡೆಯುವ ಕ್ರಿಯೆ ಅದಕ್ಕೆ ವಿರುದ್ದವಾದದ್ದು. ಅದು ಪ್ರತಿ ಪರಾಸರಣ ಕ್ರಿಯೆ ಅರ್ಥಾತ್ ರಿವರ್ಸ್ ಆಸ್ಮೊಸಿಸ್.

ರಿವರ್ಸ್ ಆಸ್ಮೊಸಿಸ್ ಕ್ರಿಯೆಯು ಒತ್ತಾಯದಿಂದ ಮಾಡುವ ಪ್ರಕ್ರಿಯೆ. ಇದಕ್ಕೂ ಸಹಾ ಅರೆಪಾರಕ ಪೊರೆಯನ್ನು ಬಳಸಲಾಗುತ್ತದೆ. ಈ ಪೊರೆಯು ನೀರಿನಲ್ಲಿ ಕರಗಿರುವ ಮತ್ತು ತೇಲುತ್ತಿರುವ ಪದಾರ್ಥಗಳನ್ನು ಬೇರ್ಪಡಿಸುತ್ತದೆ. ಸಮುದ್ರದ ನೀರನ್ನು ಅಧಿಕ ಒತ್ತಡದಲ್ಲಿ ಈ ಅರೆಪಾರಕ ಪೊರೆಯ ಮೂಲಕ ಹಾಯಿಸುತ್ತಾರೆ. ಆಗ ಪೊರೆಯನ್ನು ಹಾದು ಮುಂದೆ ಹೋಗುವ ನೀರಿನಲ್ಲಿ ಯಾವುದೇ ಘನ ಅಂಶಗಳೂ ಇರುವುದಿಲ್ಲ. ಒತ್ತಡ ನೀಡಿದ ಕಡೆ ಲವಣಗಳು ಮತ್ತು ಅವುಗಳ ಸಶೇಷಗಳು ಮಾತ್ರ ಉಳಿಯುತ್ತವೆ. ಹೀಗೆ ಯಂತ್ರದಿಂದ ಹೊರಬರುವ ನೀರು ಲವಣ ಅಥವಾ ಸವಳು ಮುಕ್ತವಾಗಿರುತ್ತದೆ.

ಸಮುದ್ರದ ನೀರಿನಲ್ಲಿ ಸವಳಿನ ಸಾರವು, ಅಂದರೆ ಒಟ್ಟಾರೆ ಕರಗಿರುವ ಘನವಸ್ತುಗಳು ಸುಮಾರು ೩೫,೦೦೦ ಪಿಪಿಎಮ್‌ಗಳಷ್ಟು ಇರುತ್ತದೆ. ಅದನ್ನು ಕುಡಿಯಲು ಅನುಕೂಲವಾಗಿರುವಷ್ಟು, ಅಂದರೆ ಸುಮಾರು ೨೦೦-೫೦೦ ಪಿಪಿಎಮ್‌ಗಳಿಗೆ ಬದಲಾಯಿಸಲಾಗುತ್ತದೆ. ಆ ನೀರು ತನ್ನೆಲ್ಲಾ ಗಡಸುತನ ಮತ್ತು ಕ್ಷಾರತೆಯನ್ನು ಕಳೆದುಕೊಂಡಮೇಲೆ ಅದಕ್ಕೆ ಕಾರ್ಬನ್ ಡೈಯಾಕ್ಸೈಡ್ ಮತ್ತು ಸುಣ್ಣವನ್ನು ಸೇರಿಸುತ್ತಾರೆ. ಆಗ ನೀರು ಸಮಸ್ಥಿತಿಗೆ ಬರುತ್ತದೆ. ಗ್ರಾಹಕರಿಗೆ ಹಂಚುವ ಮೊದಲು ನೀರಿನಲ್ಲಿರುವ ಸೂಕ್ಷ್ಮಜೀವಿಗಳನ್ನು ನಿವಾರಿಸಲು ಅದಕ್ಕೆ ಮತ್ತೆ ಕ್ಲೋರಿನ್‌ನ್ನು ಬೆರೆಸಲಾಗುತ್ತದೆ.

for poorna article - sea water processing - 2 copyಅಂತಾರಾಷ್ಟ್ರೀಯ ಸವಳು ನಿವಾರಣಾ ಸಂಘಟನೆಯ ಪ್ರಕಾರ, ೧೫೦ ದೇಶಗಳಲ್ಲಿ ಒಟ್ಟು ೧೮,೪೨೬ ಸವಳು ನಿವಾರಣಾ ಘಟಕಗಳಿವೆ. ಇವು ಸಧ್ಯ ೩೦೦ ಮಿಲಿಯನ್ ಜನರಿಗೆ ನೀರನ್ನು ಒದಗಿಸುತ್ತಿದೆ. ಇಸ್ರೇಲ್‌ನ ಅರ್ಧಕ್ಕಿಂತ ಹೆಚ್ಚು ಜನರು ಈ ರೀತಿ ಸಂಸ್ಕರಿಸಿದ ನೀರನ್ನೇ ಬಳಸುತ್ತಿದ್ದಾರೆ. ಉತ್ತರ ಆಫ್ರಿಕಾ ಮತ್ತು ಮಧ್ಯ ಪ್ರಾಚ್ಯದವರ ಪ್ರಮುಖ ನೀರಿನ ಆಸರೆ ಸವಳು ನಿವಾರಣಾ ಘಟಕಗಳು. ಉಳಿದ ಯಾವುದೇ ತಂತ್ರಜ್ಞಾನಕ್ಕೆ ಹೋಲಿಸಿದರೆ, ಇದು ಅತ್ಯಂತ ಸುಲಭ ವಿಧಾನ.

ಆಶಾದಾಯಕವಾದ ಈ ತಂತ್ರಜ್ಞಾನವನ್ನು ಬಳಸಿಕೊಂಡ ತಮಿಳುನಾಡು ಮತ್ತೆ ಎರಡು ಸವಳು ನಿವಾರಣಾ ಘಟಕಗಳನ್ನು ಅಳವಡಿಸಿದೆ. ಅವುಗಳು ಪ್ರತಿದಿನ ೨೦೦ ಮಿಲಿಯನ್ ಲೀಟರ್‌ಗಳಷ್ಟು ನೀರನ್ನು ಉತ್ಪಾದನೆ ಮಾಡಿ ಚನ್ನೈನ ಮಹಾ ದಾಹವನ್ನು ತಣಿಸುತ್ತಿದೆ. ಚನ್ನೈಗಂತೂ ಮುಂಗಾರು ಬಂದರೇನೇ ನೀರು ಎಂಬಂತಾಗಿತ್ತು. ಆದರೆ ಪ್ರತಿ ವರ್ಷವೂ ಮುಂಗಾರಿನ ವಿಫಲತೆ ಅಲ್ಲಿಯ ಜನರನ್ನು ಕಂಗೆಡುವಂತೆ ಮಾಡುತ್ತಿತ್ತು. ನಗರಸಭೆಯು ನೀರಿನ ದಾಹವನ್ನು ತಣಿಸಲು ಸವಳು ನಿವಾರಣಾ ಘಟಕಗಳನ್ನು ಇಸವಿ ೨೦೦೩-೦೪ರಲ್ಲಿಯೇ ತನ್ನ ಕಾರ್ಯವ್ಯಾಪ್ತಿಗೆ ಸೇರಿಸಿಕೊಂಡಿತು. ಹೀಗೆ ನಿಮ್ಮೇಲಿ ಮತ್ತು ಮಿನ್‌ಜೂರ್‌ಗಳ ಘಟಕಗಳು ಇಂದು ನಗರದ ಮೂರನೇ ಒಂದು ಭಾಗದಷ್ಟು ನೀರಿನ ಅವಶ್ಯಕತೆಯನ್ನು ಪೂರೈಸುತ್ತಿದೆ.

ಭಾರತದ ಒಟ್ಟು ಸವಳುರಹಿತ ನೀರಿನ ಉತ್ಪಾದನಾ ಸಾಮರ್ಥ್ಯದ ಶೇಕಡಾ ೨೪ರಷ್ಟನ್ನು ಸರ್ಕಾರದ ಸಹಾಯದೊಂದಿಗೆ ತಮಿಳುನಾಡೊಂದೇ ನೀಡುತ್ತಿದೆ. ಗುಜರಾತ್ ಬಳಿಕ ಅತ್ಯಧಿಕ ಪ್ರಮಾಣದಲ್ಲಿ ಸವಳುರಹಿತ ನೀರನ್ನು ಉತ್ಪಾದಿಸುತ್ತಿರುವ ರಾಜ್ಯವೆಂದರೆ ತಮಿಳುನಾಡು. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ಪಾದನಾ ವೆಚ್ಚವನ್ನು ಅತ್ಯಂತ ಕಡಿಮೆಗೊಳಿಸಿಯೂ ಇದು ಚನ್ನೈನಂತಹಾ ನಗರಗಳಿಗೆ ಬೇಕಾ ಎನ್ನುವ ಪ್ರಶ್ನೆ ಅಲ್ಲಿನ ನೀರಯೋಧರದು. ಕಾರಣ ಚನ್ನೈನಲ್ಲಿ ಇಸ್ರೇಲಿನ ಟೆಲ್ ಅವೀವ್‌ಗಿಂತಲೂ ಮೂರು ಪಟ್ಟು ಹೆಚ್ಚು ಮಳೆಯಾಗುತ್ತದೆ. ಖರ್ಚೇ ಇಲ್ಲದ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಬದಲು, ಪರಿಸರ ವಿರೋಧಿ ಮತ್ತು ಅತೀ ಖರ್ಚಿನ ಈ ತಂತ್ರಜ್ಞಾನ ನಮಗೆ ಅಷ್ಟೊಂದು ಅಗತ್ಯವೇ?

ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್‌ನ ಪ್ರೊಫೆಸರ್ ಎಸ್ ಜನಕರಾಜನ್‌ರವರು ಈ ರೀತಿಯಲ್ಲಿ ತಕರಾರು ಎತ್ತಿದ ಮೊದಲನೆಯವರು. ಅವರು ಚನ್ನೈನಲ್ಲಾಗುವ ಮಳೆಯ ವಿವರಗಳನ್ನು ನೀಡುತ್ತಾರೆ. ವಾರ್ಷಿಕ ೧೨೦೦ ಮಿಲಿಮೀಟರ್‌ಗಳಷ್ಟು ಮಳೆ ಚನ್ನೈನಲ್ಲಿ ಗ್ಯಾರೆಂಟಿ ಬೀಳುತ್ತದೆ. ಹೀಗೆ ಬೀಳುವ ಮಳೆ ನೀರನ್ನು ಚನ್ನೈನ ಪ್ರತಿಯೊಬ್ಬ ನಾಗರಿಕರೂ ಹಿಡಿದಿಟ್ಟರೆ, ಆಗ ಮುಂದಿನ ಎರಡು ದಶಕಗಳ ಕಾಲ ಜನಸಂಖ್ಯೆ ಎಷ್ಟೇ ಹೆಚ್ಚಾದರೂ ನೀರಿನ ಕೊರತೆಯಾಗದು ಎಂಬುದು ಅವರು ದಾಖಲೆ ಸಹಿತ ಮಾಡುವ ವಾದ. ಸಮುದ್ರದ ನೀರನ್ನು ಸಿಹಿನೀರನ್ನಾಗಿಸುವ ಕೆಲಸ ಸೋಮಾರಿಗಳ ಆಯ್ಕೆ. ಯಾರಿಗೆ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲಾಗದೋ, ಅಂತಹ ಜನ ಇದನ್ನು ಸೂಚಿಸಿರುತ್ತಾರೆ. ಮಳೆಯೇ ಬೀಳದ ಮಧ್ಯಪ್ರಾಚ್ಯಾದ ತಂತ್ರಜ್ಞಾನ ಇಲ್ಲಿಗೆ ಖಂಡಿತಾ ಬೇಕಾಗಿಲ್ಲ. ನಮ್ಮ ಪರಂಪರಾಗತ ಸಂಗ್ರಹಾಗಾರಗಳಲ್ಲಿ, ಅಂದರೆ ಕೆರೆ ಕಟ್ಟೆಗಳಲ್ಲಿ ನೀರನ್ನು ಸಂಗ್ರಹಿಸಿದಷ್ಟೂ ಮಳೆ ಬೀಳುವ ಪ್ರಮಾಣ ಹೆಚ್ಚುತ್ತದೆ. ಇದೊಂದು ನೈಸರ್ಗಿಕ ಆಕರ್ಷಣಾ ಕ್ರಿಯೆ. ಈ ರೀತಿ ಸವಳು ನಿವಾರಣಾ ಘಟಕಗಳನ್ನು ಅಳವಡಿಸಿದಷ್ಟೂ ನಮ್ಮ ಕೆರೆಗಳು ಬಡಾವಣೆಗಳಾಗುತ್ತವೆ. ಹಳ್ಳಗಳು ಕಿರಿದಾಗಿ, ಅದರ ಮೇಲೂ ಕಟ್ಟಡಗಳ ನಿರ್ಮಾಣವಾಗತೊಡಗುತ್ತವೆ. ಹೀಗೆ ಮಳೆಯ ಮೇಲಿನ ಅವಲಂಬನೆ, ಅದನ್ನು ಹಿಡಿದಿಟ್ಟುಕೊಳ್ಳಬೇಕೆಂಬ ಮನೋಭಾವವೆ ಮರೆತುಹೋಗುತ್ತದೆ. ಅದು ಇನ್ನಷ್ಟು ಭೀಕರ ಪರಿಣಾಮಗಳಿಗೆ ಕಾರಣವಾಗುತ್ತದೆ ಎನ್ನುವ ಆಲೋಚನೆಯನ್ನು ಅವರು ಮಾಧ್ಯಮಗಳ ಮೂಲಕವೂ ನೀಡಿದ್ದಾರೆ.

“ಸಮುದ್ರಕ್ಕೆ ಸೇರುವ ಮೊದಲೇ ಸಿಹಿ ನೀರನ್ನು ಹಿಡಿದಿಡುವುದು ಸರಿಯೋ? ಅಥವಾ ಸಮುದ್ರ ಸೇರಿದ ಮೇಲೆ ಅದನ್ನು ಬೇರ್ಪಡಿಸುವುದು ಸರಿಯೋ? ನಮ್ಮ ಬುದ್ದಿ ಎಲ್ಲಿ ಊನವಾಗಿದೆ” ಎಂದು ಪ್ರಶ್ನಿಸುತ್ತಾರೆ ಎಸ್ ಜನಕರಾಜನ್.

ಚಿತ್ರ-ಲೇಖನ: ಪೂರ್ಣಪ್ರಜ್ಞ ಬೇಳೂರು

Save

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*