ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ತುಂಬಿತು ಸುಳ್ಳ ಕೆರೆ

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿರುವ ಎಂಟು ಎಕರೆ ವಿಸ್ತೀರ್ಣದ ಸುಳ್ಳಕೆರೆಗೆ ಬಹುದಿನಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ಗ್ರಾಮದ ಕೃಷಿ ಚಟುವಟಿಕೆಗಳಿಗೆ ನೀರನ್ನು ಒದಗಿಸುತ್ತಿದ್ದ ಸುಳ್ಳ ಕೆರೆಯ ನೀರನ್ನು ಅಕ್ಕಪಕ್ಕದ ಮಂದಿ ಕುಡಿಯಲು ಉಪಯೋಗಿಸುತ್ತಿದ್ದರು. ಒಂದು ಮಳೆಗಾಲದಲ್ಲಿ ಕೆರೆ ತುಂಬಿದರೆ ಮುಂದಿನ ಎರಡು ಮೂರು ವರ್ಷಗಳವರೆಗೆ ಗ್ರಾಮದ ಜನರಿಗೆ ನೀರಿನ ಸಮಸ್ಯೆ ಎದುರಾಗುತ್ತಿರಲಿಲ್ಲ.

2ಪೂರ್ವಜರು ಕೆರೆಯ ಸೌಂದರ್ಯ ಕೆಡದಂತೆ ರಕ್ಷಿಸಿಕೊಂಡು ಬಂದ ಈ ಕೆರೆ ದಿನಕಳೆದಂತೆ ಹೂಳು ತುಂಬಿಕೊಳ್ಳಲಾರಂಭಿಸಿತು. ಅಭಿವೃದ್ಧಿಯ ನೆಪದಲ್ಲಿ ಕೆಲವೇ ವರ್ಷಗಳಲ್ಲಿ ಕೆರೆ ಮೈದಾನದಂತಾಯಿತು. ಕೆರೆಗೆ ತಾಗಿಕೊಂಡೆ ಡಾಂಬರು ರಸ್ತೆ ನಿರ್ಮಾಣವಾಯಿತು. ಒಂದು ಬದಿಯಲ್ಲಿ ಕಟ್ಟಡಗಳು ತಲೆಯೆತ್ತಿ ನಿಂತುವು. ಕೆರೆ ದಿನಕಳೆದಂತೆ ತನ್ನ ಎಕರೆ ವಿಸ್ತೀರ್ಣವನ್ನು ಕಳೆದುಕೊಳ್ಳತೊಡಗಿತು. ಕಳೆದ ಏಳೆಂಟು ವರ್ಷಗಳಿಂದ ಕೆರೆಯಲ್ಲಿ ನೀರು ಬತ್ತಿದ ಪರಿಣಾಮವಾಗಿ ಇಲ್ಲಿನ ಮಂದಿ ಕೃಷಿಗಾಗಿ ಬೋರ್ ತೋಡುವುದು ಅನಿವಾರ‍್ಯವಾಯಿತು. ತೆಗೆದ ಶೇ. ೪೦ ರಷ್ಟು ಬೋರ್‌ಗಳು ೭೦೦ – ೮೦೦ ಅಡಿಯಿಂದ ನೀರು ನೀಡಿದರೆ ಉಳಿದವರ ಹಣ ಕೊಳವೆ ಪಾಲಾಯಿತು. ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಿದಂತೆ ಕುಡಿಯುವ ನೀರನ್ನು ಹಣ ನೀಡಿ ಪಡೆಯುವಂತಾಯಿತು.

ಕಳೆದ ಮೂರು ವರ್ಷಗಳಿಂದ ಇಲ್ಲಿ ಸರಿಯಾದ ಮಳೆಯಾಗಿಲ್ಲ. ವರ್ಷದಿಂದ ವರ್ಷಕ್ಕೆ ನೀರ ಸಮಸ್ಯೆ ಇಮ್ಮಡಿಗೊಳ್ಳುತ್ತಾ ಬಂತು. ಪ್ರಾಣಿ, ಪಕ್ಷಿ, ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಯಿತು.

9ಇದು ಕೇವಲ ಸುಳ್ಳ ಗ್ರಾಮವೊಂದರ ಸಮಸ್ಯೆಯಲ್ಲ. ರಾಜ್ಯದಾದ್ಯಂತ ಕೆರೆಗಳಲ್ಲಿ ಹೂಳು ತುಂಬಿದ ಪರಿಣಾಮವಾಗಿ ಮಳೆನೀರು ಶೇಖರಣೆ ಅಸಾಧ್ಯವಾಗಿ ಎಲ್ಲೆಡೆ ನೀರ ಸಮಸ್ಯೆ ಭುಗಿಲೆದ್ದಿದೆ. ಇದನ್ನು ಹತ್ತಿರದಿಂದ ಕಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕಳೆದ ವರ್ಷ ಪ್ರಾಯೋಗಿಕವಾಗಿ  ಧಾರವಾಡ ತಾಲೂಕಿನ ೯೦ ಎಕರೆ ವಿಸ್ತೀರ್ಣದ ಮುಗದಕೆರೆ, ೧೯ ಎಕರೆಯ ಹೆಬ್ಬಳ್ಳಿ, ೬ ಎಕರೆಯ ತಿಮ್ಮಾಪುರ, ೩ ಎಕರೆಯ ಹಳ್ಳಿಗೇರಿ, ೨ ಎಕರೆಯ ಕೋಟಾಬಾಗಿ ಮತ್ತು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ರುದ್ರವಾಡಿ ಗ್ರಾಮದ ಬಸವನಕಟ್ಟೆಕೆರೆ, ಸರಸಾಂಬಾದ ಮಡ್ಡಿಕೆರೆ, ಆಫಜಲ್‌ಪುರ ತಾಲೂಕಿನ ಬಳೂರ್ಗಿ ಗ್ರಾಮದ ಹೊಸಕೆರೆ - ಹೀಗೆ ಒಟ್ಟು ಎಂಟು ಕೆರೆಗಳ ಹೂತ್ತಿ, ಬೇಸಿಗೆಗಾಲದಲ್ಲೂ ನೀರನ್ನು ಪಡೆಯುವ ಪ್ರಯತ್ನವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡಲಾಗಿದೆ. ಕಳೆದ ಬೇಸಿಗೆಯಲ್ಲಿ ಕೆರೆಗಳ ಹೂಳೆತ್ತುವ ಕೆಲಸಕ್ಕಾಗಿ ಹೆಗ್ಗಡೆಯವರು ಬರೋಬ್ಬರಿ ೩೧ ಲಕ್ಷ ರೂ. ಗಳನ್ನು ಮೀಸಲಿರಿಸಿದ್ದಾರೆ. ಪರಿಣಾಮವಾಗಿ ಮಳೆಗಾಲದ ನೀರು ಕೆರೆಯಲ್ಲಿ ಸಂಗ್ರಹವಾಯಿತು. ಆ ಊರಿನ ಬತ್ತಿದ ಬೋರ್‌ಗಳಲ್ಲಿ ಮತ್ತೆ ಜಲಸಿಂಚನವಾಯಿತು. ಕೃಷಿಗೆ, ಜಾನುವಾರುಗಳಿಗೆ ಈ ಬಾರಿಯ ಬೇಸಿಗೆಯಲ್ಲೂ ನೀರು ದೊರೆಯುವಂತಾಯಿತು. ಕಳೆದ ವರ್ಷ ಕೆರೆಗಳ ಹೂಳೆತ್ತುವ ಕೆಲಸಕ್ಕೆ ದೊರೆತ ಅಭೂತಪೂರ್ವ ಸ್ಪಂದನೆ, ಅದರಿಂದಾದ ಪ್ರಯೋಜನವನ್ನು ಕಂಡು ಈ ಬಾರಿ ಈಗಾಗಲೇ ರಾಜ್ಯದಾದ್ಯಂತ ಒಟ್ಟು ೮೦ ಕೆರೆಗಳ ಹೂಳೆತ್ತಲಾಗಿದೆ.

ಸ್ಥಳೀಯ ಜನಪ್ರತಿನಿಧಿ, ಶಾಸಕರ, ಊರವರ, ಪಂಚಾಯತ್, ಇತರರ ಪ್ರತ್ಯಕ್ಷ ಮತ್ತು ಪರೋಕ್ಷ ಸಹಕಾರದೊಂದಿಗೆ ಸುಮಾರು ೨೦ ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ಹೂಳೆತ್ತುವ ಕೆಲಸಗಳಿಂದಾಗಿ ಶ್ರೀ ಹೆಗ್ಗಡೆಯವರು ಅನುದಾನದ ರೂಪದಲ್ಲಿ ಧರ್ಮಸ್ಥಳದಿಂದ ರೂ. ೧೦ ಕೋಟಿಯನ್ನು ವಿನಿಯೋಗಿಸಿದ್ದಾರೆ. ರಾಜ್ಯದ ಆಯಾ ಜಿಲ್ಲೆಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೆಶಕರು, ನಿರ್ದೇಶಕರು, ತಾಲೂಕಿನ ಯೋಜನಾಧಿಕಾರಿಗಳು, ಕೃಷಿ ಮೇಲ್ವಿಚಾರಕ – ಹೀಗೆ ಅಧಿಕಾರಿ ವೃಂದ ಪೂಜ್ಯರ ಮಹತ್ವಕಾಂಕ್ಷೆಯ ಈ ಯೋಜನೆಯನ್ನು ಯಶಸ್ಸುಗೊಳಿಸುವಲ್ಲಿ ಅವಿರತವಾಗಿ ಶ್ರಮಿಸಿದೆ. ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಇದೀಗ ಯೋಜನೆ ಯಶಸ್ಸಿನ ಹಂತ ತಲುಪಿದೆ.

ಸುಳ್ಳ ಕೆರೆ ಹೂಳೆತ್ತುವ ಮುಂಚೆ :

ಈ ಯೋಜನೆಯಡಿ ಕಳೆದೆರಡು ತಿಂಗಳ ಹಿಂದೆ ಹುಬ್ಬಳ್ಳಿಯ ಸುಳ್ಳಕೆರೆಯ ಹೂಳನ್ನು ಎತ್ತುವ ಕೆಲಸವನ್ನು ಕೈಗೊಳ್ಳಲಾಗಿದೆ. ಎಂಟು ಎಕರೆಯನ್ನು ಹನ್ನೆರಡು ಅಡಿ ಆಳವಾಗಿ ಒಂದು ಜೆಸಿಬಿ, ಒಂದು ಹಿಟಾಚಿಯನ್ನು ಬಳಸಿ ಮೂವತ್ತೈದು ದಿನಗಳ ಕಾಲ ೧೮,೦೦೦ ಟ್ರ್ಯಾಕ್ಟರ್ ಹೂಳನ್ನು ಮೇಲಕ್ಕೆತ್ತಲಾಗಿದೆ. ಒಂದು ಟ್ರ್ಯಾಕ್ಟರ್ ಹೂಳಿಗೆ ರೂ. ೮೦೦ ರಂತೆ ೨೫೨ ಟ್ರ್ಯಾಕ್ಟರ್ ಹೂಳನ್ನು ಮೇಲಕ್ಕೆತ್ತಿದ್ದು ಇದರಿಂದ ಬಂದ ಎರಡು ಲಕ್ಷ ರಾಪಾಯಿಯನ್ನು ಹೂಳೆತ್ತುವ ಕೆಲಸಗಳಿಗೆ ಬಳಸಿಕೊಳ್ಳಲಾಗಿದೆ. ಈ ಕೆಲಸಗಳಿಗೆ ಧರ್ಮಸ್ಥಳದಿಂದ ರೂ. ೧೦ ಲಕ್ಷ ಅನುದಾನವನ್ನು ನೀಡಲಾಗಿದೆ.

ಮಳೆಗಾಲದ ನೀರಿಗಾಗಿ ಕಾಲುವೆ :

4ಮಳೆನೀರು ಸಂಗ್ರಹಿಸುವುದಕ್ಕಾಗಿ ಸುಮಾರು ಒಂದೂವರೆ ಕಿ.ಮೀ. ದೂರದಿಂದ ಅಗಲವಾದ ಕಾಲುವೆಯನ್ನು ನಿರ್ಮಿಸಲಾಗಿದೆ. ಅಲ್ಲಿನ ಗದ್ದೆಗಳಿಗೆ ಬಿದ್ದ ನೀರು ಕಾಲುವೆ ಮೂಲಕ ಬಂದು ಕೆರೆ ಸೇರುವಂತೆ ವ್ಯವಸ್ಥೆಗೊಳಿಸಲಾಗಿದೆ. ಊರಿನ ಕೊಳಚೆ ನೀರು ನೇರವಾಗಿ ಕೆರೆಗೆ ಬೀಳುವುದನ್ನು ತಡೆಯುವುದಕ್ಕಾಗಿ, ಕೆರೆಯ ಪಕ್ಕದಲ್ಲಿ ಗುಂಡಿಯೊಂದನ್ನು ನಿರ್ಮಿಸಲಾಗಿದೆ. ಕೊಳಚೆ ನೀರನ್ನು ಅದಕ್ಕೆ ಬೀಳುವಂತೆ ವ್ಯವಸ್ಥೆಗೊಳಿಸಲಾಗಿದೆ.

ಸ್ವಚ್ಛತೆಗೆ ಮಹತ್ವ :

ಕೆರೆಯನ್ನು ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ಕೆರೆಯಲ್ಲಿ ಜಾನುವಾರು ತೊಯಲು, ಬಟ್ಟೆ ಒಗೆಯಲು ಅವಕಾಶವಿಲ್ಲ. ಕಸ-ಕಡ್ಡಿಗಳನ್ನು ಕೆರೆಗೆ ಬಿಸಾಡದಂತೆ ಊರಿನವರಿಗೆ ಅರಿವು ಮೂಡಿಸಲಾಗಿದೆ. ಕೆರೆಯಿಂದ ತುಸು ದೂರದಲ್ಲಿ ಬಟ್ಟೆ ಒಗೆಯುವ ಕಲ್ಲನ್ನು ಹಾಕಿ ಅಲ್ಲಿಗೆ ನೀರು ಒದಗಿಸುವ ಯೋಚನೆ ಇಲ್ಲಿನದು.

ಆಟದ ಮೈದಾನದಂತಿದ್ದ ಕೆರೆ ತುಂಬಿದೆ :

12ಹೂಳೆತ್ತುವ ಮೊದಲು ಮಾರಾಟಕ್ಕೆ ಸಿದ್ಧಗೊಂಡ ಸೈಟ್‌ನಂತಿದ್ದ ಕೆರೆ ಹೂಳೆತ್ತಿದ ನಂತರ ಅಗಲವಾದ ಕ್ರಿಕೆಟ್ ಮೈದಾನದ ಆಕಾರವನ್ನು ಪಡೆದಿತ್ತು. ಇದೀಗ ಹುಬ್ಬಳ್ಳಿ ತಾಲೂಕಿನಲ್ಲಿ ಸ್ವಲ್ಪ ಮಟ್ಟಿನ ಮಳೆಯಾಗಿದೆ. ಸುಳ್ಳ ಗ್ರಾಮದಲ್ಲಿ ಒಂಚೂರು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಪರಿಣಾಮವಾಗಿ ಇದೀಗ ಸುಳ್ಳ ಕೆರೆಯಲ್ಲಿ ಏಳರಿಂದ ಎಂಟು ಅಡಿಯಷ್ಟು ನೀರು ತುಂಬಿದ್ದು ಸುಳ್ಳ ಕೆರೆಗೆ ಮರುಜೀವ ಬಂದಂತಾಗಿದೆ. ಜಾನುವಾರುಗಳಿಗೆ, ಪ್ರಾಣಿಪಕ್ಷಿಗಳಿಗೆ ಇದೀಗ ಸುಲಭವಾಗಿ ಕುಡಿಯುವ ನೀರು ದೊರೆಯುತ್ತಿದ್ದು ಸುಳ್ಳ ಕೆರೆ ಗತಕಾಲದ ವೈಭವವನ್ನು ಪಡೆಯುತ್ತಿದೆ.

 

ರಾಜ್ಯದಾದ್ಯಂತ ಇನ್ನೇನು ಕಣ್ಣರೆಯ ಹಂತದಲ್ಲಿದ್ದ ಕೆರೆಗಳ ಹೂಳೆತ್ತುವ ಕೆಲಸವನ್ನು ಈಗಾಗಲೇ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್. ಹೆಚ್. ಮಂಜುನಾಥ್‌ರವರ ಮುಂದಾಳತ್ವದಲ್ಲಿ ರಾಜ್ಯದಾದ್ಯಂತ ಮನೆ ಮಾತಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ವರ್ಗದ ಮೂಲಕ ಮಾಡಿ ಮುಗಿಸಿದ್ದು ಈ ಬಾರಿಯ ಮಳೆಗಾಲದಲ್ಲಿ ಕೆರೆಗಳೆಲ್ಲಾ ಮತ್ತೆ ಮರುಜೀವ ಪಡೆಯಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಆಯಾ ಗ್ರಾಮದಲ್ಲಿನ ಬೋರ್‌ಗಳು ರಿಚಾರ್ಜ್‌ಗೊಳ್ಳುವುದು, ಊರಿನ ನೀರ ಸಮಸ್ಯೆ ಅರ್ಧದಷ್ಟರ ಮಟ್ಟಿಗೆ ಬಗೆಹರಿಯುವುದರಲ್ಲಿ ಎರಡು ಮಾತಿಲ್ಲ. ಸರಕಾರ ಹೂಳೆತ್ತುವ ಅರ್ಧದಷ್ಟು ಮೊತ್ತದಲ್ಲಿ, ಊರವರ ಸಂಪೂರ್ಣ ಸಹಭಾಗಿತ್ವದಲ್ಲಿ ಕೆರೆಯ ಹೂಳೆತ್ತುವ ಕೆಲಸಗಳು ನಡೆದಿದ್ದು ರಾಜ್ಯದಾದ್ಯಂತ ಪ್ರತಿವರ್ಷ ಸರಕಾರ ಕೆರೆಗಳ ಹೂಳೆತ್ತುವ ಬದಲು ಈ ಕೆಲಸಗಳನ್ನು ಪಾರದರ್ಶಕ ವ್ಯವಹಾರ ಹೊಂದಿರುವ ಸಂಘ-ಸಂಸ್ಥೆಗಳಿಗೆ ವಹಿಸಿಕೊಟ್ಟಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ನೀರಿನ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿದೀತು.

 

ಚಿತ್ರ-ಲೇಖನ: ಚಂದ್ರಹಾಸ ಚಾರ್ಮಡಿ

Save

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*