ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹಕ್ಕಿಗಳಿಗಾಗಿ ಕೆರೆಯ ನಡುಗಡ್ಡೆಯಲ್ಲಿ ‘ಸೂರು ಖಾತ್ರಿ’!

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಧಾರವಾಡದಲ್ಲಿ ಪಕ್ಷಿಗಳಿಗಾಗಿಯೂ ಬಡಾವಣೆ!

IMG_20170516_153617ಧಾರವಾಡ: ಪಕ್ಷಿಗಳಿಗಾಗಿ ಮೀಸಲಿರಿಸಿದ ಬಡಾವಣೆ..! ಕೆರೆಯ ಸುತ್ತಲೂ ಚಿಕ್ಕ ನಡುಗಡ್ಡೆಗಳನ್ನು ನಿರ್ಮಿಸಿ, ನೆಮ್ಮದಿಯ ತಾಣವನ್ನು ಜನರೇ ರೂಪಿಸಿರುವ ಮಾದರಿ ಬಹುಶಃ ಇಡೀ ರಾಜ್ಯದಲ್ಲಿ ಇದೇ ಪ್ರಥಮ!

ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ನೀಲನಕ್ಷೆಯ ಮೂಸೆಯಲ್ಲಿ ಅರಳಿದ ಧಾರವಾಡದ ಕೆಲಗೇರಿ ಕೆರೆ ‘ರೆಕ್ಕೆಯ ಮಿತ್ರರಿಗಾಗಿ ಸೂರು’ ಎಂಬ ಹೊಸ ಕಲ್ಪನೆಗೆ ಆಶ್ರಯ ನೀಡಿದೆ.

ಕೆರೆಯನ್ನು ತನ್ನ ಸುಪರ್ದಿಯಲ್ಲಿರಿಸಿಕೊಂಡಿರುವ ಬೇಸಾಯ ವಿವಿ, ಜಿಲ್ಲಾಡಳಿತ, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೆಲಗೇರಿ ಗ್ರಾಮಸ್ಥರು ಈ ವಿಶಿಷ್ಟ ಯೋಜನೆಯ ಸೂತ್ರಧಾರರು.

ಮರಗಳನ್ನು ಬೇರು ಸಮೇತ ಬೇರೆಡೆ ಸಾಗಿಸಿ, ಮರು ನಾಟಿ ಮಾಡುವಲ್ಲಿ ಯಶಸ್ಸು ಗಳಿಸಿರುವ ಅಸ್ಲಂಜಹಾನ್ ಅಬ್ಬೀಹಾಳ್, ಹಿರಿಯ ಪರಿಸರವಾದಿ ಶಂಕರ ಕುಂಬಿ ನಿವೇಶನ ರೂಪಿಸಿ, ಮನೆ ಕಟ್ಟುತ್ತಿರುವ ಹಕ್ಕಿ ಮಿತ್ರರು.

ನಗರಗಳು ವಿಸ್ತರಿಸುತ್ತಿದ್ದಂತೆ ಹಸಿರಿಗೆಲ್ಲಿದೆ ಜಾಗೆ? ಕಾಂಕ್ರೀಟ್ ಕಾಡು ವಿಸ್ತರಿಸುತ್ತಿದ್ದಂತೆ, ಕೆರೆಗಳು ಹೇಗೆ ಬದುಕುಳಿಯುವುದು. ಆಕಾಶಕ್ಕೆ ಲಾಳಿಕೆಯಾಗಿ, ಮೋಡಗಳಿಗೆ ಮೇನಕೆಯಾಗುತ್ತಿದ್ದ ಮರಗಳು ಉರುಳಿದ ಮೇಲೆ ಮಳೆ ಇನ್ನೆಲ್ಲಿ? ಮಾಲಿನ್ಯ ಪ್ರಮಾಣ ಎಷ್ಟು ಏರಿಗತಿಯಲ್ಲಿದೆ ಎಂದರೆ.. ದಿನೇದಿನೇ ಹೈಟೆಕ್ ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿರುವುದೂ ಈಗ ‘ಬೆಳವಣಿಗೆ’!

20160521_111551ಆದರೂ, ಲಭ್ಯ ಅವಕಾಶ ಮತ್ತು ಮೂಲ ಸೌಕರ್ಯಗಳನ್ನೇ ಬಳಸಿಕೊಂಡು, ಒಂದಿಷ್ಟು ಹಸಿರು ಹೆಚ್ಚಿಸುವ ಉಮ್ಮೇದು ಹೊಂದಿದ ತಂಡ ಇಲ್ಲಿದೆ. ಜೊತೆಗೆ, ಭೂಮಿ ನಮಗಷ್ಟೇ ಮೀಸಲಿಲ್ಲ! ಎಂಬ ಸಂದೇಶವೂ ಈ ಹೆಜ್ಜೆಯಲ್ಲಿ ಅಡಗಿದೆ!

ಸ್ಥಳೀಯ ಹಕ್ಕಿಗಳು, ವಲಸೆ ಹಕ್ಕಿಗಳು ಹಾಗೂ ವಿದೇಶಿ ಬಾನಾಡಿಗಳಿಗೆ ಸುರಕ್ಷಿತ ತಾಣ ಖಾತ್ರಿಯಾಗಿಸಲು, ಕೆಲಗೇರಿ ಕೆರೆಯಲ್ಲಿ ಸೂರು ಖಾತ್ರಿ ಯೋಜನೆ ಜಾರಿಗೊಂಡಿದೆ. ೭ ಕೆರೆ, ೭ ಗುಡ್ಡಗಳ ಮಲೆನಾಡ ಸೆರಗು ಧಾರವಾಡದಲ್ಲಿಯೂ ಈಗ ಕಾಂಕ್ರೀಟ್ ಕಾಡಿನ ನಿರ್ಮಿತಿ ಮಿತಿಯಲ್ಲಿಲ್ಲ. ಸಹಜ ಹಸಿರು ವರವಾಗಿದ್ದ ಈ ಛೋಟಾ ಮಹಾಬಳೇಶ್ವರದಲ್ಲಿ, ಈಗ ಬಾಯ್ದೆರೆದ ಭೂಮಿ.. ಅಳಿದುಳಿದ ನೀರಿನಾಸರೆಗಳು ಪಳೆಯುಳಿಕೆಗಳಂತೆ ಗೋಚರಿಸುತ್ತವೆ.

ಏತನ್ಮಧ್ಯೆ, ಕೈಕಟ್ಟಿ ಕುಳಿತುಕೊಳ್ಳದೇ ಪಕ್ಷಿಗಳಿಗಾಗಿಯೇ ಮೀಸಲಿಟ್ಟು, ಪ್ರತಿ ನಡುಗಡ್ಡೆಯನ್ನು ವಿಶೇಷ ರೀತಿ ಒಂದೊಂದು ನಮೂನೆಯಲ್ಲಿ ವಿನ್ಯಾಸಗೊಳಿಸುತ್ತಿದೆ ಅಸ್ಲಂಜಹಾನ್ ಅಬ್ಬೀಹಾಳ್ ಹಾಗೂ ಶಂಕರ ಕುಂಬಿ ತಂಡ. ಇವುಗಳನ್ನೇ ಹಕ್ಕಿಯ ಮಿತ್ರರಿಗಾಗಿ ಸುರಕ್ಷಿತ ತಾಣವಾಗಿಸಲು ಮುನ್ನೋಟ ಯೋಜನೆ ಸಹ ಸಿದ್ಧ ಪಡಿಸಿದ್ದಾರೆ.

kelgeri mini pakshidham -1ಕೆಲಗೇರಿ ನಮ್ಮೂರಿನ ದೊಡ್ಡ ಕೆರೆ. ಸುತ್ತಲೂ ಖಾಸಗಿಯವರ ಸ್ವತ್ತು. ಕೆರೆಯಲ್ಲಿ ಮತ್ತು ಅಕ್ಕ-ಪಕ್ಕ ಹಸಿರು ಗೋಚರಿಸುತ್ತಿದ್ದರೂ, ಎಷ್ಟು ದಿನದ್ದು ಈ ಹಸಿರಾವರಣ? ಖಚಿತವಿಲ್ಲ. ಹಾಗೇನಾದರೂ, ಸದ್ಯ ಸುತ್ತಮುತ್ತಲೂ ಲಭ್ಯವಿರುವ ಗಿಡಗಳನ್ನು ಕಾಂಕ್ರೀಟ್ ಕಾಡನ್ನು ವಿಸ್ತರಿಸುವ ದೆಸೆಯಿಂದ ಮಾರಣ ಹೋಮ ನಡೆದರೆ.. ಇಲ್ಲಿ ಆಶ್ರಯ ಪಡೆದಿರುವ ಹಕ್ಕಿಗಳ ಪಾಡೇನು ಎಂದು ಚಿಂತಿಸಿದ ಅಸ್ಲಂಜಹಾನ್, ಕೆರೆಯಲ್ಲಿ ಅಲ್ಲಲ್ಲಿ ನಡುಗಡ್ಡೆ ಸ್ಥಾಪಿಸಿ ಅಲ್ಲಿ ದಟ್ಟ ಹಸಿರು ಬೆಳೆಸುವ ಯೋಜನೆಗೆ ಮುಂದಾದರು.

ಇವರ ಕಾಯಕಕ್ಕೆ ಪರಿಸರವಾದಿ ಶಂಕರ ಕುಂಬಿ ಹಾಗೂ ಮಾಲಿನ್ಯ ನಿಯಂತ್ರಣ ಅಧಿಕಾರಿ ವಿಜಯಕುಮಾರ ಕಡಕಬಾವಿ ಕೈಜೋಡಿಸಿದ್ದು ವಿಶೇಷ. ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿಗೂ ಯೋಜನೆ ಹಿಡಿಸಿತು. ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿ ಟಾಟಾ ಹಿಟಾಚಿ ಕಂಪೆನಿ ಹೊಂಡ ತೋಡಿ, ಕೆರೆಯ ಅಂಗಳದಲ್ಲಿ ಅಲ್ಲಲ್ಲಿ ನಡುಗಡ್ಡೆ ರೂಪಿಸಲು ಜೆಸಿಬಿಗಳನ್ನು ಉಚಿತವಾಗಿ ನೀಡಿತು. ಹೀಗೆ ಎರಡು ವರ್ಷಗಳಿಂದ ನಡೆದ ಕಾಮಗಾರಿ ಈಗ ಫಲ ನೀಡುವ ಹಂತದಲ್ಲಿದೆ. ಈ ನಡುಗಡ್ಡೆಗಳಲ್ಲಿ ಈಗ ಪಕ್ಷಿಗಳ ಕಲರವ!

“ಎರಡು ವರ್ಷಗಳ ಶ್ರಮ ಈಗ ಫಲ ನೀಡಿದೆ. ನಮಗೂ ಈ ಬಗ್ಗೆ ವಿಶ್ವಾಸವಿರಲಿಲ್ಲ. ಪ್ರಯತ್ನವಷ್ಟೇ ನಮ್ಮದು ಎಂದು ಮನಸ್ಸು ಗಟ್ಟಿ ಮಾಡಿಕೊಂಡು ಮುಂದಾದೆವು. ಈ ಬಾರಿ ಐದು ನಡುಗಡ್ಡೆಗಳನ್ನು ರೂಪಿಸಲು ಯೋಜಿಸಿದೆವು. ಒಂದೆಡೆ ಕೆರೆಯ ಹೂಳನ್ನು ಎತ್ತಿಸಿ, ಕೆರೆಯ ಪಾತಳಿ ಹಿಗ್ಗಿಸುವುದು. ತನ್ಮೂಲಕ ಓಡುವ ಮಳೆ ನೀರನ್ನು ಹಿಡಿದು ನಿಲ್ಲಿಸುವ ಪ್ರಯತ್ನ. ಅದೇ ಹೂಳನ್ನು ಎತ್ತಿ ನಡುಗಡ್ಡೆಗೆ ಗುಡ್ಡ ಹಾಸುವುದು. ಮಣ್ಣು ಕೊಚ್ಚಿ ಹೋಗದಂತೆ ಗಿಡಗಳನ್ನು ನೆಟ್ಟು ಸವಕಳಿ ತಡೆಯುವುದು ನಮ್ಮ ಯೋಚನೆ” ಎನ್ನುತ್ತಾರೆ ಅಸ್ಲಂ.

IMG_20170517_172506೮೦೦ ರಿಂದ ೧೦೦೦ ಚದರಡಿ ವಿಸ್ತೀರ್ಣದ ಐದು ನಡುಗಡ್ಡೆಗಳನ್ನು ರೂಪಿಸಲಾಗಿದೆ. ಒಂದೊಂದು ನಡುಗಡ್ಡೆಯನ್ನು ವಿಶಿಷ್ಟವಾಗಿ ಸಜ್ಜುಗೊಳಿಸಲಾಗುತ್ತಿದೆ. ಒಂದರಲ್ಲಿ ಬರೀ ಕರಿ ಜಾಲಿ ಗಿಡಗಳನ್ನು ನೆಟ್ಟರೆ, ಮತ್ತೊಂದರಲ್ಲಿ ಸಿಂಗಪೂರ ಚೆರ್ರಿ, ಮತ್ತೊಂದು ನಡುಗಡ್ಡೆಯಲ್ಲಿ ಅರಳಿ ಹಾಗೂ ಕರಿಮತ್ತಿ, ಮಗದೊಂದರಲ್ಲಿ ಅತ್ತಿ, ಆಲ, ಬಸರಿ, ಪತ್ರೆ, ಪೀಕಜಾಲಿ, ಹುಣಸಿ, ಬಿದಿರು ಮೆಳೆ ಸಸಿ – ಹೀಗೆ ವೈವಿಧ್ಯಮಯ ಹಕ್ಕಿಗಳನ್ನು ಪೋಷಿಸುವ ಸಸಿಗಳನ್ನು ನೆಡಲು ಯೋಜನೆ ಸಿದ್ಧಗೊಂಡಿದೆ.

ಅಸ್ಲಂ ಹೇಳುವಂತೆ, “ಸದ್ಯಕ್ಕೆ ನೀರಿನ ಅಗತ್ಯವಿಲ್ಲ. ಆದರೆ ಮಳೆ ನೀರನ್ನು ಸಂಗ್ರಹಿಸಿ, ಬಳಸಿಕೊಳ್ಳುವ ಯೋಜನೆ ಇದೆ. ಅದಕ್ಕಾಗಿ ಸರಳವಾದ ವಿಧಾIMG_20170518_172359ನವೊಂದನ್ನು ಸಿದ್ಧಪಡಿಸಲು ಕೋರಿದ್ದೇನೆ. ಅದು ಸಾಧ್ಯವಾದಲ್ಲಿ, ಮಳೆಯ ರೂಪದಲ್ಲೇ ಪಂಪ್ ಮೂಲಕ ನೆಟ್ಟ ಸಸಿಗಳಿಗೆ ನಂತರ ಬೆಳೆದ ಮರಗಳಿಗೆ ನೀರುಣಿಸುವ ಮನಸ್ಸಿದೆ..”

ಶಂಕರ ಕುಂಬಿ ಅವರ ಅಭಿಪ್ರಾಯ – “ಕೆಲಗೇರಿ ಕೆರೆಗೆ ಚರಂಡಿ ನೀರೂ ಸಹ ಬಂದು ಸೇರುವಂತಾಗಿದೆ. ಈಗಾಗಲೇ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಈ ವಿಷಯ ತರಲಾಗಿದ್ದು, ಗಟಾರಿನ ಮುಖ ಕೆರೆಯ ಆಚೆ ಬದಿಗೆ ತಿರುಗಿಸುವಂತೆ ಮನವಿ ಮಾಡಲಾಗಿದೆ. ಹಾಗಾದಲ್ಲಿ, ಕೆರೆಯ ಪರಿಸರ ಮತ್ತು ಜೀವಿ ವೈವಿಧ್ಯದ ಆರೋಗ್ಯ ಮತ್ತು ನೀರಿನ ಶುದ್ಧತೆ ಕಾಪಾಡಿಕೊಳ್ಳುವುದು ಕಷ್ಟವೇನಲ್ಲ..”

IMG_20170514_184348ಅರಣ್ಯ ಇಲಾಖೆ ಅಧಿಕಾರಿಗಳು, ಬೇಸಾಯ ವಿವಿಯ ಹಿರಿಯ ಪ್ರಾಧ್ಯಾಪಕರು ಈ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ವಿಶೇಷ. ನಡುಗಡ್ಡೆಗಳ ವಿನ್ಯಾಸ ಹಾಗೂ ಅಲ್ಲಿ ನೆಡಲು ಯೋಜಿಸಿರುವ ಗಿಡಗಳ ಬಗ್ಗೆ ಅಗತ್ಯ ಸಲಹೆ,
ಸೂಚನೆ ಲಭ್ಯವಾಗಿದೆ. ಧಾರವಾಡದ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಸಾಮುದಾಯಿಕ ಪ್ರಯತ್ನ, ಸಂಘಟಿತ ಶ್ರಮವಾಗಿ ಇಲ್ಲಿ ಹೊರಹೊಮ್ಮಿದೆ.

ನಮ್ಮಂತೆ ಇತರ ಜೀವಿಗಳಿಗೂ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ. ಅವುಗಳ ಹಕ್ಕನ್ನು ಗೌರವಿಸುವ ವಿವೇಕ ಮತ್ತು ವಿವೇಚನೆ ಇಂತಹ ಕೆಲ ಪುಟ್ಟ ಪ್ರಯತ್ನಗಳಿಂದ ಅನಾವರಣಗೊಳ್ಳುತ್ತಿರುವುದು, ಅನುಕರಣೀಯ ಮಾದರಿ ಎನಿಸಿದೆ. ಕೇವಲ ಹಕ್ಕಿಗಳಿಗಾಗಿ ಮಾತ್ರ ಮೀಸಲಿಟ್ಟು ಉದ್ಯಾನ ರೂಪಿಸುವ ಯೋಜಿತ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಂತೂ, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಧಾರವಾಡದಲ್ಲಿ ಪಕ್ಷಿಗಳಿಗಾಗಿಯೂ ಬಡಾವಣೆಯೊಂದು ಸಜ್ಜುಗೊಂಡಿದೆ.. ಜೊತೆಗೆ ಚಿನ್ನದ ಬೆಳೆಸು ತೋಟವೂ..!

ಚಿತ್ರ-ಲೇಖನ: ಹರ್ಷವರ್ಧನ ವಿ. ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*