ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೬೨: ಹೇಗಿದ್ದವು, ಏನಾದವು ‘ಉಪಯೋಗಿಸದ ಕೆರೆಗಳು’? – ೭

ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನಲ್ಲಿದ್ದ ಕೆರೆಗಳನ್ನು ಎರಡು ವರ್ಗವಾಗಿ ವಿಭಾಗಿಸಿದ್ದರು. ಒಂದು, ಉಪಯೋಗಿಸದ ಕೆರೆಗಳು. ಮತ್ತೊಂದು, ಜೀವಂತ ಕೆರೆಗಳು. ಇದರಲ್ಲಿ ೪೬ ಉಪಯೋಗಿಸದ ಕೆರೆಗಳಿದ್ದವು. ಅವುಗಳು ಹೇಗಿದ್ದವು, ಏನು ಮಾಡಬಹುದಿತ್ತು.. ಪಟ್ಟಿ ಮುಂದುವರಿದಿದೆ ನೋಡಿ…

Rachenahalli೪೦. ಸ್ಯಾಂಕಿ ಕೆರೆ

ಸ್ಯಾಂಕಿ ಕೆರೆ ೬೯೨ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ಈ ಕೆರೆಯನ್ನು ೧೮೮೨ರಲ್ಲಿ ನಿರ್ಮಿಸಲಾಗಿದೆ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಈ ಕೆರೆ ನಿರ್ಮಾಣವಾಯಿತು. ಇದರ ಏರಿ ಅತ್ಯುತ್ತಮ ಸ್ಥಿತಿಯಲ್ಲದಿದ್ದು, ಅಚ್ಚುಕಟ್ಟು ಹಾಗೂ ಏರಿ ಮಧ್ಯಭಾಗದಲ್ಲಿ ನೀರಿದೆ. ಈ ಕೆರೆಯ ಪೂರ್ವಭಾಗದಲ್ಲಿ ಈಜುಕೊಳವನ್ನು ನಿರ್ಮಿಸಲಾಗಿದೆ. ಪಶ್ಚಿಮ ಭಾಗದಲ್ಲಿ ಸಣ್ಣ ಉದ್ಯಾನವನವಿದೆ. ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ  ಬೋಟಿಂಗ್ ವ್ಯವಸ್ಥೆಯನ್ನು ಇಲ್ಲಿ ಮಾಡಿದೆ. ಸಿಡಿಪಿಯಲ್ಲಿ ಇದರ ದಕ್ಷಿಣ ಭಾಗವನ್ನು ಜಲಮೂಲ ಮತ್ತು ಅರೆ ಸಾರ್ವಜನಿಕ ಪ್ರದೇಶ ಎಂದು ಉತ್ತರ ಭಾಗದಲ್ಲಿ ಗುರುತಿಸಿದೆ. ಈ ಕೆರೆಯ ಉತ್ತರಭಾಗ ಮತ್ತು ಪಶ್ಚಿಮಭಾಗದಲ್ಲಿ ವೃಕ್ಷವನವನ್ನು ನಿರ್ಮಿಸಬೇಕು ಹಾಗೂ ದಕ್ಷಿಣ ಭಾಗದಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಯ ಸುಪರ್ದಿಯಲ್ಲಿದೆ.

೪೧. ದಾಸೈನಕೆರೆ

೬೭೭ ಸಂಖ್ಯೆಯಲ್ಲಿ ನೋಂದಣಿಯಾಗಿರುವ ದಾಸನಕೆರೆ ತೀರಾ ಸಣ್ಣದಾಗಿದ್ದು, ೦.೦೬ ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಈ ಕೆರೆಯ ಸುತ್ತಲೂ ಹಾಗೂ ಕೆರೆ ಅಂಗಳದಲ್ಲಿ ಅನಧಿಕೃತ ಕಟ್ಟಡಗಳಿವೆ. ಬಿಡಿಎ ‘ನಂದಿನಿ ಬಡಾವಣೆ’ ಎಂಬ ಯೋಜನೆಯನ್ನು ಈ ಕೆರೆಯ ಸುತ್ತಮುತ್ತ ಅಭಿವೃದ್ಧಿಪಡಿಸಿದೆ. ಸಿಡಿಪಿಯಲ್ಲಿ ಈ ಪ್ರದೇಶವನ್ನು ವಸತಿ ಎಂದು ಗುರುತಿಸಲಾಗಿದೆ. ಸಮಿತಿ ಯಾವುದೇ ಶಿಫಾರಸು ಅಥವಾ ಪ್ರತಿಕ್ರಿಯೆ ನೀಡಿಲ್ಲ.

ತುಮಕೂರು ರಸ್ತೆ ಮತ್ತು ಬಳ್ಳಾರಿ ರಸ್ತೆ ಮಧ್ಯಭಾಗದಲ್ಲಿ ಬರುವ ಕೆರೆಗಳು:

೪೨. ಗೆದ್ದಲಹಳ್ಳಿ ಕೆರೆ

ಗೆದ್ದಲಹಳ್ಳಿ ಕೆರೆ ರಾಜಮಹಲ್ ವಿಲಾಸ್ ೨ನೇ ಘಟ್ಟದ ಪ್ರದೇಶದಲ್ಲಿ ೩೪೭ನೇ ಸಂಖ್ಯೆಯಲ್ಲಿ ನಮೂದಾಗಿದ್ದು, ೧೦.೨೨ ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಬಿಡಿಎ ತನ್ನ ಅಭಿವೃದ್ಧಿಗಾಗಿ ಈ ಕೆರೆಯನ್ನು ಒತ್ತುವರಿ ಮಾಡಿದ್ದು, ರಸ್ತೆಯನ್ನು ಈ ಕೆರೆಯ ಎಲ್ಲ ಭಾಗದಲ್ಲೂ ಮಾಡಿದೆ. ಸಿಡಿಪಿಯಲ್ಲಿ ಉದ್ಯಾನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈ ಕೆರೆಯ ಪ್ರದೇಶವನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅರಣ್ಯ ಇಲಾಖೆ ಸುಪರ್ದಿಯಲ್ಲಿ ಈ ಕೆರೆ ಇದೆ.

೪೩. ಚಿಕ್ಕಮಾರನಹಳ್ಳಿ ಕೆರೆ

ಚಿಕ್ಕಮಾರನಹಳ್ಳಿ ಕೆರೆಯು ೩೪೮ನೇ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ೧೦ ಹೆಕ್ಟೇರ್ ವಿಸ್ತೀರ್ಣದಲ್ಲಿದೆ. ಈ ಕೆರೆಯು ನಾಗಶೆಟ್ಟಿಹಳ್ಳಿ ಸಮೀಪದ ಆರ್.ಎಂ.ವಿ. ೨ನೇ ಘಟ್ಟದ ಸಮೀಪವಿದೆ. ಆರ್.ಎಂ.ವಿ. ಯೋಜನೆಯಲ್ಲಿ ಜಲಮೂಲವನ್ನು ಬಿಡಿಎ ಪ್ರಸ್ತಾಪಿಸಿದೆ. ಆದರೆ, ಈಗ ಅರಿವಾಗಿರುವುದು ಏನೆಂದರೆ, ಈ ಕೆರೆಯ ಏರಿ ಪ್ರದೇಶವನ್ನು ಅಂತರಿಕ್ಷ ಇಲಾಖೆ ಮತ್ತು ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ಼್ ಸೈನ್ಸ್ ಮತ್ತು ಬಿ.ಡಿ.ಎ.ಗೆ ಹಂಚಿಕೆ ಮಾಡಲಾಗಿದೆ. ಸಿಡಿಪಿಯಲ್ಲಿ ಉದ್ಯಾನವನ ಮತ್ತು ನಾಗರಿಕ ಸೌಲಭ್ಯ ಎಂದು ನಮೂದಿಸಲಾಗಿದೆ. ಈ ಕೆರೆಯ ಯಾವುದೇ ಭಾಗದಲ್ಲಿ ಸಾಧ್ಯವಿದ್ದ ಕಡೆಯಲ್ಲೆಲ್ಲ ಉದ್ಯಾವನವನ್ನು ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಬಿಡಿಎ ಸುಪರ್ದಿಯಲ್ಲಿ ಈ ಕೆರೆ ಇದೆ.

೪೪. ಮಲ್ಲಸಂದ್ರ ಕೆರೆ

ಜಾಲಹಳ್ಳಿ ಪ್ರದೇಶದಲ್ಲಿರುವ ಮಲ್ಲಸಂದ್ರ ಕೆರೆ ೫ ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, ೫೦೯ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಸಿಡಿಪಿಯಲ್ಲಿ ಈ ಪ್ರದೇಶವನ್ನು ರಕ್ಷಣಾ ವಲಯದ ಪ್ರದೇಶ ಎಂದು ಹೇಳಲಾಗಿದೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

೪೫. ಜಕ್ಕಸಂದ್ರ ಕಾವಲ್ ಕೆರೆ

ಈ ಜಕ್ಕಸಂದ್ರ ಕಾವಲ್ ಕೆರೆ ವರ್ಗೀಕರಿಸದ ಪರದೇಶದಲ್ಲಿದ್ದು, ೫೦೭ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಸಿಡಿಪಿಯಲ್ಲಿ ಇದು ರಕ್ಷಣಾ ವಲಯದಲ್ಲಿದೆ ಎಂದು ನಮೂದಿಸಲಾಗಿದೆ. ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಸಿ ನೆಡಲು ಸಮಿತಿ ಸಲಹೆ ನೀಡಿದೆ. ಅರಣ್ಯ ಇಲಾಖೆಯ ಸುಪರ್ದಿಗೆ ಈ ಕೆರೆ ಬರುತ್ತದೆ.

೪೬. ಮತ್ತಿಕೆರೆ ಕೆರೆ

ಯಶವಂತಪುರ ಸಮೀಪದ ಬಿಇಎಲ್ ಮತ್ತು ಎಚ್.ಎಂ.ಟಿ ರಸ್ತೆಗೆ ಹೊಂದಿಕೊಂಡಂತಿರುವ ಮತ್ತಿಕೆರೆ ಕೆರೆ ೩೯.೩೪ ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, ೩೪೯ನೇ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆ ಮತ್ತು ಅಚ್ಚುಕಟ್ಟು ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಕಟ್ಟಡಗಳು ನಿರ್ಮಾಣವಾಗಿದೆ. ಕೆರೆಯ ಏರಿಯ ಮೇಲೆಯೂ ಒತ್ತುವರಿಗಳಿದ್ದು, ಅಲ್ಲಲ್ಲಿ ಕೃಷಿ ಚಟುವಟಿಕೆಗಳೂ ಅಕ್ರಮವಾಗಿ ನಡೆಯುತ್ತಿವೆ. ಸಿಡಿಪಿಯಲ್ಲಿ ಇದನ್ನು ಪ್ರಾಂತೀಯ ಉದ್ಯಾನವನ ಎಂದು ನಮೂದಿಸಲಾಗಿದೆ. ಈ ಕೆರೆಯಲ್ಲಿ ಅನಧಿಕೃತ ಕೃಷಿಯನ್ನು ತೆರವುಗೊಳಿಸಬೇಕು. ಈ ಕೆರೆಯನ್ನು ಪ್ರಾಂತೀಯ ಉದ್ಯಾನವನವನ್ನಾಗಿ ಅಭಿವೃದ್ಧಿಪಡಿಸುವ ಜೊತೆಗೆ ಮೈದಾನದ ಸೌಲಭ್ಯವನ್ನೂ ಒದಗಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆ ಮತ್ತು ಬೆಂಗಳೂರು ನಗರ ಪಾಲಿಕೆ ಸುಪರ್ದಿಯಲ್ಲಿದೆ.

ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ೪೬ ಉಪಯೋಗಿಸದ ಕೆರೆಗಳಿದ್ದವು. ಅವುಗಳು ಹೇಗಿದ್ದವು, ಏನು ಮಾಡಬಹುದಿತ್ತು ಎಂಬ ವಿವರವನ್ನು ಈವರೆಗೆ ನೀಡಲಾಗಿದೆ. ಲಕ್ಷ್ಮಣರಾವ್ ಅವರ ವರದಿಯ ಎರಡನೇ ಭಾಗದಲ್ಲಿ ಜೀವಂತ ಕೆರೆಗಳ ಪಟ್ಟಿ ನೀಡಿ, ಅವುಗಳನ್ನು ಹೇಗೆ ರಕ್ಷಿಸಬೇಕು ಎಂಬುದನ್ನೂ ತಿಳಿಸಲಾಗಿದೆ. ಇದನ್ನು ಮುಂದಿನ ನೋಟಗಳಲ್ಲಿ ಅನಾವರಣಗೊಳಿಸಲಾಗುತ್ತದೆ.

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*