ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬರಡು ಪ್ರದೇಶದಲ್ಲಿ ನೀರು ಕೊಯ್ಲು, ಭತ್ತ ಬೇಸಾಯ

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಸುತ್ತಮುತ್ತಲ ಪ್ರದೇಶವೆಂದರೆ ನೆನಪಾಗುವುದು ಕಲ್ಲುಬಂಡೆಗಳು ಮತ್ತು ಗುಡ್ಡಗಾಡುಗಳಿಂದ ಆವೃತವಾದುದು ಎಂದು. ಕೆಲವಾರು ವರ್ಷಗಳಿಂದ ಕಾಡುತ್ತಿರುವ ಬರ, ಜನ ಹಾಗೂ ಜಾನುವಾರಗಳಿಗೆ ನೀರಿನ ಹಾಹಕಾರ. ಇಂತಹ ಪರಿಸ್ಥಿತಿ ತಾಲ್ಲೂಕಿನ ರೈತರಲ್ಲಿ ಅತಂಕ ಮೂಡಿಸಿದೆ. ತಾಲ್ಲೂಕಿನಲ್ಲಿ ಕಂಡುಬರುವ ನೂರಾರು ಕೆರೆಗಳು ಕೃಷಿ ಮತ್ತು ಇತರೆ ಉದ್ದೇಶಗಳಿಗೆ ನೀರಿನ್ನು ಒದಗಿಸುವಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದವು. ಆದರೆ ಇಂದು ಆ ಕೆರೆಗಳು ಬತ್ತಿ ಹೋಗಿವೆ. ಭತ್ತ ಬೆಳೆಯುತ್ತಿದ್ದ ರೈತರು, ಶೇಂಗಾ ಮತ್ತು ರಾಗಿ ಬೆಳೆಗಳನ್ನು ಬೆಳೆಯುವಂತಾಗಿದ್ದಾರೆ. ಭತ್ತದ ಬೆಳೆ ಈಗ ಕಾಣಸಿಗುವುದು ಬಲು ಅಪರೂಪವಾಗಿದೆ.

for suresh doddamavattur article - 2-1ಕಳೆದ ವರ್ಷದ ನವೆಂಬರ್ ಮಾಹೆಯಲ್ಲಿ ಬಿದ್ದ ಅಕಾಲಿಕ ಮಳೆ, ರೈತರ ಮುಖದಲ್ಲಿ ಹರ್ಷ ಮೂಡಿಸಿದೆ. ೨೦ ವರ್ಷಗಳಿಂದ ನೀರು ಕಾಣದ ಕೆರೆ ಕುಂಟೆಗಳು ನೀರಿನಿಂದ ಅವೃತಗೊಂಡಿವೆ. ಕೆರೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಒಣಗಿದ ಕೊಳವೆ ಬಾವಿಗಳು, ಇದ್ದಕ್ಕಿದ್ದ ಹಾಗೆ ನೀರು ನೀಡಲು ಪ್ರಾರಂಭಿಸಿವೆ.  ರೈತರು ಸಿಕ್ಕಿದ್ದೇ ಅವಕಾಶ ಎಂಬಂತೆ ಭತ್ತವನ್ನು ಬೆಳೆಯಲು ಶುರು ಮಾಡಿದ್ದಾರೆ. ಪ್ರತಿಯೊಬ್ಬ ರೈತರೂ ಕೆರೆಗಳಲ್ಲಿ ಸಂಗ್ರಹವಾದ ನೀರನ್ನು ನೇರವಾಗಿ ಕೃಷಿಗೆ ಬಳಕೆ ಮಾಡದೇ ಇದ್ದರೂ, ಕೆರಯ ಅಚ್ಚುಕಟ್ಟಿನಲ್ಲಿರುವ ಕೊಳವೆ ಬಾವಿಗಳ ಮೂಲಕ ಎಚ್ಚರಿಕೆಯಿಂದ ಹಾಗೂ ಇತಿಮಿತಿಯಿಂದ ಬಳಕೆ ಮಾಡುತ್ತಿರುವುದಂತೂ ನೂರಕ್ಕೆ ನೂರರಷ್ಟು ಸತ್ಯ. ಇದು ಸಾಮಾನ್ಯವಾಗಿ ಕಂಡುಬಂದ ಪ್ರಸಂಗವಾದರೆ, ಇಲ್ಲೊಬ್ಬ ರೈತ ನೀರಿಲ್ಲದಿದ್ದರೂ ಭತ್ತವನ್ನು ಬೆಳೆಯುವ ಸಾಹಸಕ್ಕೆ ಕೈಹಾಕಿದ್ದಾನೆ. ನೀರಿನ ತಜ್ಞನಾಗಿ ಭತ್ತ ಬೆಳೆಯುತ್ತಿದ್ದಾನೆ ಗೊರ್ತಪಲ್ಲಿ ಕಾಲೋನಿಯ ಮಲ್ಲಪ್ಪ.

for suresh doddamavattur article - 1-1ಮಲ್ಲಪ್ಪ ಗೊರ್ತಪಲ್ಲಿ ಕಾಲೋನಿಯ ಬೆಟ್ಟದ ಬುಡ ಭಾಗದಲ್ಲಿ ಎರಡು ಎಕರೆ ಭೂಮಿಯನ್ನು ಹೊಂದಿದ್ದಾರೆ. ಈ ವರ್ಷದ ಆಕಾಲಿಕ ಮಳೆ ಅವರಲ್ಲಿ ಒಂದು ಸಣ್ಣ ಆಸೆಯನ್ನು ಹುಟ್ಟುಹಾಕಿತು. ಆ ಮಳೆಯಿಂದ ಅವರ ಹೊಲದ ಪಕ್ಕದಲ್ಲಿಯೇ ಇರುವ ನಾಲಾಬದುವಿನಲ್ಲಿ ನೀರು ತುಂಬಿತು. ಆ ನೀರನ್ನು ನೋಡಿದ ಇವರು ತಮ್ಮ ಆರು ಗುಂಟೆ ಹೊಲದಲ್ಲಿ ಭತ್ತವನ್ನು ಬೆಳೆಯಲಾರಂಭಿಸಿದರು. ದುರದೃಷ್ಟಕರ ಎಂದರೆ ಕೆಲವೇ ದಿನಗಳಲ್ಲಿ ಆ ನಾಲಾಬದುವಿನಲ್ಲಿ ಸಂಗ್ರಹವಾದ ನೀರು ನೋಡ ನೋಡುತ್ತಲೇ ಮಾಯವಾಯಿತು. ಇದರಿಂದ ದಿಗ್ಭ್ರಾಂತರಾದ ಮಲ್ಲಪ್ಪ ಸುಮ್ಮನೆ ಕೂರಲಿಲ್ಲ. ಏನು ಮಾಡಬಹುದು ಎಂದು ಯೋಚಿಸಲಾರಂಭಿಸಿದರು.

ತನ್ನ ಭತ್ತದ ಗದ್ದೆಯ ಸುತ್ತಮುತ್ತ ಇರುವ ಪರಿಸ್ಥಿತಿಯನ್ನು ಅವಲೋಕಿಸಿದರು. ಹೊಲದ ಮೂರೂ ಕಡೆ ಹೊಂದಿಕೊಂಡಂತಿರುವ ಬೆಟ್ಟ ಮತ್ತು ಗೋಮಾಳ ಪ್ರದೇಶವನ್ನು ಗಮನಿಸಿದರು. ಈ ಪ್ರದೇಶದಲ್ಲಿ ಕಂಡುಬರುವ ೫೦೦ರಿಂದ ೮೦೦ ಮೀಟರ್ ಉದ್ದವಿರುವ ಹಳ್ಳದಲ್ಲಿ ಈಗಾಗಲೇ ನೀರು ಮತ್ತು ಮಣ್ಣು ಸಂರಕ್ಷಣೆಗಾಗಿ ಅಲ್ಲಲ್ಲಿ ೧೦ರಿಂದ ೧೫ ಕಲ್ಲು ತಡೆಗಳನ್ನು ಮತ್ತು ಮಣ್ಣು ಬದುಗಳನ್ನು ನಿರ್ಮಿಸಿರುವುದನ್ನು ಮನದಟ್ಟು ಮಾಡಿಕೊಂಡರು. ಆ ತಡೆಗಳಲ್ಲಿ ಸಂಗ್ರಹವಾದ ನೀರು ತಗ್ಗು ಪ್ರದೇಶದಲ್ಲಿ ಸಣ್ಣದಾಗಿ ಜಿನುಗುತ್ತಿರುವುದನ್ನು ಗಮನಿಸಿದರು. ನಂತರ ಮಲ್ಲಪ್ಪ, ತಮ್ಮ ಹೊಲದ ಮೇಲ್ಭಾಗಕ್ಕೆ ಹೊಂದಿಕೊಂಡಂತಿರುವ ಗೋಮಾಳದ ಅಂಚಿನಲ್ಲಿ ಒಂದು ದೊಡ್ಡ ಕಾಲುವೆಯನ್ನು ನಿರ್ಮಿಸಿದರು. ಈ ಕಾಲುವೆಯಲ್ಲಿ ಜಿನುಗು ನೀರು ಸಂಗ್ರಹವಾಗಿ, ತುಂಬಿ ತುಳುಕುತ್ತಿದೆ. ಈ ನೀರು ಸುಮಾರು ಎರಡು ತಿಂಗಳುಗಳಿಂದ ತನ್ನ ಭತ್ತದ ಗದ್ದೆಗೆ ತೇವಾಂಶ ಒದಗಿಸುತ್ತಿದೆ. ಮಲ್ಲಪ್ಪ ಯಾವ ಕಾರಣಕ್ಕೂ ಸಂಗ್ರಹವಾದ ಈ ನೀರನ್ನು ಪಂಪು ಮಾಡುತ್ತಿಲ್ಲ, ಬದಲಾಗಿ ಜಿನುಗು ಮೂಲಕ ಅವಶ್ಯಕ ನೀರನ್ನು ಭತ್ತಕ್ಕೆ ನೀಡುತ್ತಿದ್ದಾರೆ. ಈ ಕುರಿತು ಸಂತೋಷ ವ್ಯಕ್ತಪಡಿಸುವ ಮಲ್ಲಪ್ಪ, ಹಾಲಿ ಭತ್ತದ ಬೆಳೆಗೆ ಈ ನೀರೇ ಸಾಕು ಎಂಬ ದೃಢ ನಿರ್ಧಾರಕ್ಕೆ ಬಂದಿದ್ದಾರೆ.

for suresh doddamavattur article - 3-1ಸಾಮೂಹಿಕ ಭೂಪ್ರದೇಶಗಳಲ್ಲಿ (ಹಳ್ಳ ಮತ್ತು ಗೋಮಾಳ ಇವುಗಳಲ್ಲಿ) ನೀರು ಮತ್ತು ಮಣ್ಣು ಸಂರಕ್ಷಣೆಯ ವಿವಿಧ ಚಟುವಟಿಕೆಗಳನ್ನು ಕೈಗೊಂಡವರು ಯಾರು? ಎಂಬ ಪ್ರಶ್ನೆಗೆ, ಮಲ್ಲಪ್ಪ ಉತ್ತರಿಸಿದ್ದು ಹೀಗೆ, “ಕಳೆದ ಹತ್ತು ವರ್ಷಗಳ ಹಿಂದೆ ಈ ಗ್ರಾಮ ಮತ್ತು ಪಕ್ಕದ ಮೂರು ಗ್ರಾಮಗಳಲ್ಲಿ, ವಿವಿಧ ನೆಲೆ-ಜಲ ಸಂರಕ್ಷಣೆ ಕಾರ್ಯಗಳನ್ನು ಸಮುದಾಯವೇ ಕೈಗೆತ್ತಿಕೊಂಡಿತ್ತು”. ಸಮುದಾಯದ ಸಹಭಾಗಿತ್ವದೊಂದಿಗೆ, ಈ ಎಲ್ಲಾ ಕಾರ್ಯಕ್ರಮಗಳ ಯೋಜನೆ ತಯಾರಿಸುವ ಮತ್ತು ಅವುಗಳ ಅನುಷ್ಠಾನ ಮಾಡುವಲ್ಲಿ ಚಿಂತಾಮಣಿಯ ಎಫ್.ಇ.ಎಸ್ ಸ್ವಯಂ ಸೇವಾ ಸಂಸ್ಥೆಯ ಕೊಡುಗೆಯನ್ನು ಮಲ್ಲಪ್ಪ ಮತ್ತು ಅಲ್ಲಿ ನೆರದಿದ್ದ ಯರ್ರಕೊಂಡಾ ಗ್ರಾಮಸ್ಥರು ನೆನಪು ಮಾಡಿಕೊಳ್ಳುವುದನ್ನು ಮರೆಯಲಿಲ್ಲ.

ಯರ್ರಕೊಂಡಾ ಗೋಮಾಳವನ್ನು ಗ್ರಾಮಸ್ಥರು ಹಲವು ರೀತಿಯಲ್ಲಿ ಕಾಪಾಡಿ ಅಲ್ಲಿ ಗಿಡಮರಗಳ್ನು ಬೆಳೆಯುವಂತೆ ಮಾಡಿದ್ದಾರೆ. ಬೆಟ್ಟದಿಂದ ಹರಿದು ಹೋಗುವ ನೀರನ್ನು ಅಲ್ಲಲ್ಲೇ ತಡೆಗಳನ್ನು ನಿರ್ಮಿಸುವ ಮೂಲಕ ಇಂಗುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಗೋಮಾಳ ಅಭಿವೃದ್ಧಿಗಾಗಿ ಗಿಡಗಳನ್ನು ನಾಟಿ ಮಾಡಿ ಅದರ ರಕ್ಷಣೆಗಾಗಿ ಕಾವಲುಗಾರರನ್ನು ನೇಮಿಸಿದ್ದಾರೆ. ಸಮುದಾಯ ಇಷ್ಟೆಲ್ಲಾ ಶ್ರಮ, ಪ್ರತಿಫಲವನ್ನು ನೀಡುವಂತಾಗಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಹೆಮ್ಮಪಡುವ ಮಲ್ಲಪ್ಪ, ಗಲ್ಲಿಪ್ಲಗ್ ಗಳಲ್ಲಿ ತುಂಬಿರುವ ಮಣ್ಣನ್ನು ತೋರಿಸಿ ಸಂರಕ್ಷಣೆಯಾದ ಮಣ್ಣಿನ ಲೆಕ್ಕಾಚಾರವನ್ನು ತಿಳಿಸುತ್ತಾರೆ. ಇದರ ಬಗ್ಗೆ ನೋಡಿದಾಗ ನಿಜಕ್ಕೂ ಸೋಜಿಗವೆನಿಸುತ್ತದೆ. ಸುತ್ತಮುತ್ತಲೂ ಬರಡು ಭೂಮಿಯಿದ್ದರೂ ನೀರು ಜಿನುಗುತ್ತಿರುವುದು ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಈ ನೀರನ್ನು ಸಮರ್ಪಕವಾಗಿ ಬಳಕೆ ಮಾಡುವುದನ್ನು ನಾವೆಲ್ಲರು ಕಲಿಯುವುದರ ಜೊತೆಗೆ, ಉತ್ತಮ ಕೃಷಿ ಪದ್ಧತಿಗಳನ್ನು ರೈತರೇ ಅನ್ವೇಷಣೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂಬ ಎಚ್ಚರಿಕೆ ಮಾತನ್ನು ಕೂಡ ಮಲ್ಲಪ್ಪ ಹೇಳುವುದನ್ನು ಮರೆಯಲಿಲ್ಲ.

 

ಚಿತ್ರ-ಲೇಖನ: ಸುರೇಶ್ ದೊಡ್ಡಮಾವತ್ತೂರು ಮತ್ತು ಶ್ರೀಕಾಂತ್ ಭಟ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*