ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರಿನ ಪಾಠ ಹೇಳುವ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರ

ದಟ್ಟ ಕಾನನದ ನಡುವೆ ನೀರಿನ ಪಾಠ ಹೇಳುವ ಕೇಂದ್ರವಿದು, ಪಾಠವೆಂದರೆ ಕ್ಲಾಸ್ ರೂಮಿನಲ್ಲಿ ಕುಳಿತು ಗ್ರಾಂಥಿಕ ಮಾಹಿತಿ ವಿಸ್ತರಿಸುವ ಮಾದರಿಯಲ್ಲ. ಅಪ್ಪಟ ಪ್ರಾತ್ಯಕ್ಷಿಕೆ. ಮರದಡಿಯಲ್ಲಿ, ಕೆರೆದಡದಲ್ಲಿ, ಬಿದಿರು ಮೆಳೆಯಲ್ಲಿ ತೂರಿ, ಬೇಲಿ ಸಂಕವನ್ನು ಹಾರಿ ಕೇಳಬಹುದಾದ ಪಾಠ. ಕಾಲೇಜು ಕಲಿತವರು ಹೇಳುವ ಪಾಠವಲ್ಲ, ಕಾಡಿನ ನಡುವೆ ಬದುಕಿ ಬಾಳಿದವರು ಹೇಳುವ ಅನುಭವದ ಪಾಠ.   

Kanmane-article-mh-1ಉತ್ತರ ಕನ್ನಡದ ಶಿರಸಿಯಿಂದ ೧೦ ಕಿಲೋ ಮೀಟರ್ ಸನಿಹದ ಕಳವೆಯಲ್ಲಿ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರವಿದೆ. ಗ್ರಾಮ ಅರಣ್ಯ ಸಮಿತಿ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ನೇತ್ರತ್ವದಲ್ಲಿ ದೇಸಿ ಅರಣ್ಯ, ಜಲ ಸಂರಕ್ಷಣೆ ಜಾಗೃತಿಗಾಗಿ ೩೨.೫೦ ಲಕ್ಷ ವೆಚ್ಚದಲ್ಲಿ ಇದು ನಿರ್ಮಾಣವಾಗಿದೆ. ೨೦೧೪ರ ಜೂನ್ ೫ರ ವಿಶ್ವಪರಿಸರ ದಿನದಂದು ಇದು ಆರಂಭವಾಗಿದೆ.

ಶಾಲಾ ಮಕ್ಕಳು, ಗ್ರಾಮಸ್ಥರು, ವಿವಿಧ ಇಲಾಖಾ ಅಧಿಕಾರಿಗಳು ನೆಲ-ಜಲ ಸಂರಕ್ಷಣೆ ತರಬೇತಿಗಾಗಿ ಇಲ್ಲಿಗೆ ಬರುತ್ತಾರೆ. ಕಳೆದ ಒಂದು ವರ್ಷದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಶಾಲಾ ಮಕ್ಕಳು ಸೇರಿದಂತೆ ೬,೦೦೦ ಜನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಅರಣ್ಯ ಸಂರಕ್ಷಣೆಯ ಪ್ರಯತ್ನ ಇಲ್ಲಿ ಸಾಕಾರವಾಗಿದೆ. ಸುಮಾರು ೩೫೦ ಎಕರೆ ಪ್ರದೇಶದಲ್ಲಿ ಮುರುಗಲು, ಉಪ್ಪಾಗೆ, ನೇರಲು, ವಾಟೆ, ಮಾವು, ಹಲಸು, ಹೆಬ್ಬಲಸು, ದಾಲ್ಚನ್ನಿ, ಸಾಲುದೂಪ ಸೇರಿದಂತೆ ವಿವಿಧ ಸಸ್ಯಗಳನ್ನು ಬೆಳೆಸಲಾಗಿದೆ. ಗ್ರಾಮದ ಪ್ರತಿ ಎಕರೆ ಜಾಗದಲ್ಲಿ ವಾರ್ಷಿಕ ೮೫ರಿಂದ ೯೦ ಲಕ್ಷ ಲೀಟರ್ ಮಳೆ ನೀರು ಸುರಿಯುತ್ತದೆ. ಚಂದ್ರಬರಾವು, ಕಟ್ ಅಗಳ, ಅಗಳಗಳಲ್ಲಿ ನೀರು ಹಿಡಿಯುವ ಪ್ರಯತ್ನ ದಶಕಗಳಿಂದ ನಡೆಯುತ್ತಿದೆ. ಕದಂಬರ ಕಾಲದಲ್ಲಿ ಕಾಡು ಕಣಿವೆಯಲ್ಲಿ ನಿರ್ಮಿಸಲಾಗುತ್ತಿದ್ದ ಪುರಾತನ ‘ಗುಡ್ಡತಟಾಕ’ ಮಾದರಿಯ ಪ್ರೇರಣೆಯಿಂದ ಕಳೆದ ೨೦೦೨ರಿಂದ ಕೆರೆ ನಿರ್ಮಾಣ ಆರಂಭವಾಗಿದೆ.

Kanmane-article-mh-2ಒಂದು ಕೋಟಿಯಿಂದ ಆರಂಭಿಸಿ ಐವತ್ತು  ಲಕ್ಷ ಲೀಟರ್ ಮಳೆ  ನೀರು ಹಿಡಿಯುವ ಸಾಮರ್ಥ್ಯದ ರಚನೆಗಳು ಇಲ್ಲಿವೆ. ಮಳೆ ಸುರಿದಾಗ ಓಡುತ್ತಿದ್ದ ನೀರು ಭೂಮಿಗೆ ಇಂಗುತ್ತಿದೆ, ಗುಡ್ಡದ ಕೆಲವು  ಕೆರೆಗಳಲ್ಲಿ ಬೇಸಿಗೆಯಲ್ಲೂ ನೀರು ನಲಿಯುತ್ತಿದೆ. ಅಂತರ್ಜಲ ಏರಿಕೆ ಪರಿಣಾಮ ಒಣಗುತ್ತಿದ್ದ ಸುತ್ತಮುತ್ತಲ ಅಡಿಕೆ ತೋಟಗಳು ಹಸಿರಾಗಿವೆ. ಸೊಪ್ಪಿನ ಬೆಟ್ಟದ ಸುಮಾರು ೧೮೦ ಎಕರೆ ಕ್ಷೇತ್ರದಲ್ಲಿ ನೀರಿಂಗಿಸುವ ರಚನೆಗಳನ್ನು ಮಾಡಲಾಗಿದೆ.

ಈ ಪರಿಶ್ರಮದ ಹಿಂದಿರುವುದು ರಾಜ್ಯದ ಪ್ರಮುಖ ಪರಿಸರ ಬರಹಗಾರರಾದ ಶಿವಾನಂದ ಕಳವೆ. ತಾವು ಹುಟ್ಟಿದ ಹಳ್ಳಿಯಲ್ಲಿಯೇ ಉಳಿದು, ತಮ್ಮ ನೆರೆಹೊರೆಯವರನ್ನು ಸೇರಿಸಿ ಗ್ರಾಮ ಅರಣ್ಯ ಸಮಿತಿ ರಚಿಸಿ ಸತತ ವರ್ಷಗಳ ಪ್ರಯತ್ನದಿಂದ ಇದನ್ನು ಕಟ್ಟಿದ್ದಾರೆ. ತಮ್ಮ ಹಳ್ಳಿಯ ಕಾಡು, ನದಿ, ಕೃಷಿ, ನೆಡುತೋಪಿನ ಇತಿಹಾಸ, ನೆಲದ ಕಾಲಮಾನ, ದೇಸೀ ಅರಣ್ಯ ಜ್ಞಾನ, ನೀರಿನ ಸ್ಥಿತಿಗತಿಗಳನ್ನು ಹಲವು ದಶಕಗಳಿಂದ ಹತ್ತಿರದಿಂದ ಗಮನಿಸಿದವರು. ಆ ಅನುಭವದ ಆಧಾರದ ಮೇಲೆ ಜ ಜಾಗೃತಿ ಹಾಗೂ ಪರಿಸರದ ಪ್ರತ್ಯಕ್ಷ ಪಾಠ ಹೇಳುವ ಈ ಕೇಂದ್ರವನ್ನು ನಿರ್ಮಿಸಿದ್ದಾರೆ.

ಗ್ರಾಮ ಅರಣ್ಯ ಸಮಿತಿಗಳು ಕೇವಲ ಕಾಟಾಚಾರಕ್ಕೆ ಮಾತ್ರ, ಅವುಗಳಿಂದ ಅರಣ್ಯಕ್ಕಾಗಲೀ, ಅರಣ್ಯ ಇಲಾಖೆಗಾಗಲೀ ಅಥವಾ ಜನರಿಗಾಗಲೀ ಏನೂ ಉಪಯೋಗವಿಲ್ಲ ಎಂಬ ಅಭಿಪ್ರಾಯವಿದೆ. ಅದು ಬಹುತೇಕ ನಿಜ ಸಹ. ಆದರೆ  ಕಳವೆಯಲ್ಲಿನ ಗ್ರಾಮ ಅರಣ್ಯ ಸಮಿತಿಯು ಮಾದರಿಯಾಗಿ ನಿಲ್ಲುತ್ತದೆ. ಇಲ್ಲಿನ ಜನರ ಬದ್ಧತೆಗೆ ಇಲಾಖೆಯೂ ಸಹ ಕೈಜೋಡಿಸಿರುವುದು ಗಮನಾರ್ಹ. ಸರ್ಕಾರದ ಇಲಾಖೆಗಳ ಜೊತೆ ಕೆಲಸ ಮಾಡುವುದು ಕಷ್ಟ ಎನ್ನುವವರೂ ಸಹ ಈ ಮಾದರಿಯನ್ನು ಗಮನಿಸಬಹುದು.

ಈ ಕೇಂದ್ರವನ್ನು ನೋಡಿದಾಗ, ಇಲ್ಲಿನ ಪ್ರಯತ್ನಗಳನ್ನು ಗಮನಿಸಿದಾಗ ನೀರ ಕೊರತೆಯ ಭೀಕರತೆಯನ್ನು ಎದುರಿಸುತ್ತಿರುವ ಬಯಲು ಸೀಮೆಯಲ್ಲಿ ಇಂತಹುದೊಂದು ನಿಸರ್ಗ ಪಾಠಶಾಲೆಯ ಅಗತ್ಯ ತುರ್ತು ಬೇಕಾಗಿದೆ.

 ಚಿತ್ರ-ಲೇಖನ: ಮಲ್ಲಿಕಾರ್ಜುನ ಹೊಸಪಾಳ್ಯ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*