ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ತಿಮ್ಲಾಪುರದ ನೀರಿನ ಸೆಲೆಗಳು

ಇದು ಸುಮಾರು ೧೭೦ ಮನೆಗಳಿರುವ ಪುಟ್ಟ ಗ್ರಾಮ. ಇಲ್ಲಿರುವುದು ಸಾವಿರ ಗಡಿ ಮೀರಿದ ಜನಸಂಖ್ಯೆ. ಇಡೀ ಗ್ರಾಮಕ್ಕೆ ಇಂದಿಗೂ ಮೂರೇ ಮೂರು SANYO DIGITAL CAMERAಸಾರ್ವಜನಿಕ ಕೊಳಾಯಿಗಳಿವೆ! ಇಲ್ಲಿ ಆರೇಳು ವರ್ಷಗಳ ಕೆಳಗೆ ಅನಿಶ್ಚಿತ ಮಳೆಯಿಂದ ಅಂತರ್ಜಲ ಕುಸಿದಿದ್ದರಿಂದ, ಅದರ ಬಿಸಿ ಈ ಗ್ರಾಮಕ್ಕೆ ತಟ್ಟಿತು. ಪ್ರತಿ ನಿತ್ಯ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ, ಜಾಗರಣೆ, ಜನರ ಮಧ್ಯೆ ವಾಗ್ವಾದ, ಮಾರಾಮಾರಿ. ಇಷ್ಟಿದ್ದರೂ ಕೊಳಾಯಿ ನೀರು ಕುಡಿಯಲಿಕ್ಕೆ ಯೋಗ್ಯವಾಗಿರಲಿಲ! ಈ ನಡುವೆ ಕರೆಂಟ್, ಬೋರ್‌ವೆಲ್ ಅಪ್ಪಿ-ತಪ್ಪಿ ಒಂದೆರೆಡು ದಿನಗಳು ಕೈ ಕೊಟ್ಟರೆ ಇವರ, ಜಾನುವಾರುಗಳ ದಾಹ ಇಂಗಿಸುವಲ್ಲಿ ಸರ್ಕಾರವೂ ಅಸಹಾಯಕ! ಇಂತಿಪ್ಪ ವೇಳೆ, ಈ ಜನರ ನೀರಿನ ಬವಣೆ ನೀಗಿಸಿದ್ದು ಇಲ್ಲಿನ ಪ್ರಕೃತಿ! ಅಂದಿನಿಂದ ಇಂದಿಗೂ, ಗ್ರಾಮದ ಸಕಲ ಜೀವ ಸಂಕುಲಗಳಿಗೆ ಶುದ್ಧ ಜೀವ ಜಲ ನೀಡಿ ಪೊರೆಯುತ್ತಿದೆ! ಬರಗಾಲದ ಕರಿನೆರಳು ಬೆಂಬಿಡದೆ ಕಾಡಿದರೂ, ಅಭಯ ಹಸ್ತ ನೀಡುತ್ತಿದೆ!

SANYO DIGITAL CAMERAನಿಜ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ತಿಮ್ಲಾಪುರ ಗ್ರಾಮ, ನೀರಿನ ವಿಷಯದಲ್ಲಿ ಅಕ್ಷರಶಃ ಪ್ರಕೃತಿಯ ಕೃಪಾಕಟಾಕ್ಷದಲ್ಲಿದೆ. ಈ ಗ್ರಾಮದ ಕೂಗಳತೆಯಲ್ಲಿರುವ ಕೆರೆಸರದ ಗುಡ್ಡಗಳೆರೆಡರ ನಡುವಿನ ಇಳಿಜಾರಿನ ಎರಡು ಚಿಕ್ಕ ಸಿಹಿ ನೀರಿನ ಬುಗ್ಗೆ [ಸೆಲೆ] ಗಳೇ ಗ್ರಾಮಕ್ಕೆ ಆಧಾರ. ಕಾಡು ಕಲ್ಲುಗಳೇ ಈ ಗುಡ್ಡದಲ್ಲಿ ಹೆಚ್ಚಾಗಿದ್ದು, ಆ ಕಲ್ಲಿನ ಪದರುಗಳಿಂದ ನೀರು ತೆಳುವಾಗಿ ಹೊರ ಬರುತ್ತದೆ. ಒಂದು ನೀರಿನ ಬುಗ್ಗೆಯ ಆಳ ಸುಮಾರು ಐದಾರು ಅಡಿ ಇದ್ದರೆ, ಮತ್ತೊಂದು ಕೇವಲ ಒಂದು ತಂಬಿಗೆಯಿಂದ ನೀರು ತುಂಬುವಷ್ಟಿದೆ. ಆದರೂ, ನೀರಿನ ವಿಷಯದಲ್ಲಿ ಇವರೆಡು ಅಕ್ಷಯ ಪಾತ್ರೆಗಳು! ನೀರು ತುಂಬಿದಂತೆಲ್ಲಾ ಮತ್ತೆ ನೀರು ಶೇಖರಣೆಯಾಗುವುದು ಇವುಗಳ ವೈಶಿಷ್ಟ್ಯತೆ. ಒಂದು ವೇಳೆ ನೀರನ್ನು ತುಂಬದೇ ಇದ್ದರೂ, ನೀರು ಒಂದು ಹಂತದವರೆಗೆ ಬಂದು ನಿಲ್ಲುತ್ತದೆಯೇ ವಿನಃ, ವ್ಯರ್ಥವಾಗಿ ಹರಿಯುವುದಿಲ್ಲ!

SANYO DIGITAL CAMERAಅಂದಹಾಗೆ, ಇಲ್ಲಿ ಹೀಗೆ ಜೀವಜಲ ಕಾಣಿಸಿಕೊಂಡಿದ್ದು ಇತ್ತೀಚೆಗೇನಲ್ಲ. ಈ ಬುಗ್ಗೆಗಳಿಗೆ ೨-೩ ತಲೆಮಾರು ಇತಿಹಾಸವಿದ್ದರೂ, ಗ್ರಾಮಸ್ಥರು ಇವುಗಳನ್ನೇ ಆಶ್ರಯಿಸಿದ್ದು ಮಾತ್ರ ಕಳೆದ ಆರೇಳು ವರ್ಷಗಳಿಂದ. ಆಗ ಮಳೆ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದ್ದರಿಂದ, ಗ್ರಾಮದ ಮೂರು ಸೇದುವ ಬಾವಿಗಳು ಬತ್ತಿ ಹೋದವು. ಹೀಗಾಗಿ, ಜನರಿಗೆ ನೀರನ್ನು ಹುಡುಕಿಕೊಂಡು ತರುವುದೇ ದಿನನಿತ್ಯದ ದೊಡ್ಡ ಕೆಲಸವಾಗಿದ್ದಲ್ಲದೆ, ಗ್ರಾಮದಿಂದ ೪ ಕಿ.ಮೀ ದೂರದ ಎಕ್ಕನಹಳ್ಳಿ ಗುಡ್ಡದ ಬುಡದಲ್ಲಿರುವ ಭದ್ರಾ ಡ್ಯಾಂ ನೀರಿನ ಕಾಲುವೆಯ ಕಡೆ ಮುಖ ಮಾಡದೆ ವಿಧಿ ಇರಲಿಲ್ಲ.  ಹೀಗೆ ಹನಿ ನೀರಿಗೂ ಚಡಪಡಿಸುತ್ತಿದ್ದರಿಂದಲೇ, ಅನೇಕರು ಈ ಗ್ರಾಮಕ್ಕೆ ಹೆಣ್ಣು ಕೊಡಲು ಮುಂದೆ ಬರುತ್ತಿರಲಿಲ್ಲ!

ಸರ್ಕಾರ ಈ ಕರುಣಾಜನಕ ಪರಿಸ್ಥಿತಿಯನ್ನರಿತು, ೨೫-೩೦ ಬೋರ್‌ವೆಲ್‌ಗಳನ್ನು ಕೊರೆಯಿಸಿತು. ಆದರೆ ನೀರು ಕಂಡಿದ್ದು ಕೇವಲ ಎರಡು ಬೋರ್‌ವೆಲ್‌ಗಳಲ್ಲಿ! ಅದು ಗ್ರಾಮದಿಂದ ಕಿ.ಮೀ.ಗಟ್ಟಲೆ ದೂರದಲ್ಲಿ! ಸರಕಾರ ಪೈಪಲೈನ್ ಮೂಲಕ ಗ್ರಾಮಕ್ಕೆ ನೀರು ತಂದು ಅಂಜನೇಯ ಗುಡಿ, ರೇವಣಪ್ಪಜ್ಜರ ಮನೆ ಬಳಿ ಹಾಗೂ ಬೋವಿ ಕಾಲೋನಿಯಲ್ಲಿ ಸಾರ್ವಜನಿಕ ಕೊಳಾಯಿಗಳನ್ನು ಕಷ್ಟಪಟ್ಟು ಹಾಕಿತು. ಸಾವಿರ ಜನಸಂಖ್ಯೆಗೆ ಮೂರು ಕೊಳಾಯಿ ನೀರು ಸಾಲಲಿಲ್ಲ. ದಿನವಿಡೀ ಸರದಿ ಪ್ರಕಾರ ನಿಂತರೂ, ಒಂದು ಕೊಡ ನೀರು ಸಿಕ್ಕರೆ ಅದೃಷ್ಟವೆನ್ನುವಂತಾಗಿತ್ತು. ಇಷ್ಟು ಪಡಿಪಾಟಲು ಪಟ್ಟು ನೀರು ಸಂಗ್ರಹಿಸಿದರೂ, ಅವು ಕುಡಿಯಲಿಕ್ಕೆ ಯೋಗ್ಯವಿರಲಿಲ್ಲ. ಈಗ ಮತ್ತೆ ಗ್ರಾಮಸ್ಥರನ್ನು ಕಾಡಿದ್ದು ಶುದ್ಧ ನೀರಿನ ಸಮಸ್ಯೆ. ಆಗ ಇವರಿಗೆ ಕಂಡಿದ್ದು ಕೆರೆಸರದ ಈ ನೀರಿನ ಸೆಲೆಗಳು!

SANYO DIGITAL CAMERAಇಷ್ಟು ವರ್ಷ ನಗಣ್ಯವಾಗಿದ್ದ ಈ ನೀರಿನ ಸೆಲೆಗಳೇ ಇಂದು ಇವರಿಗೆ ಸರ್ವಸ್ವ! ಗ್ರಾಮಸ್ಥರು ದಿನನಿತ್ಯ ಇಲ್ಲಿಂದ ಹಗಲು-ರಾತ್ರಿ ಎನ್ನದೆ ನೀರು ಒಯ್ಯುತ್ತಾರೆ. ಒಂದು ವೇಳೆ ವಿದ್ಯುತ್ ವ್ಯತ್ಯಯದಿಂದ ಒಂದೆರೆಡು ದಿನ ಕೊಳದ ನೀರು ಬಾರದೇ ಇದ್ದರೆ, ಇಲ್ಲಿ ಜನಜಾತ್ರೆ, ಕೊಡಗಳ ಮೆರವಣಿಗೆ! ಕೊಳದಲ್ಲಿ ನೀರು ಸದ್ದು ಮಾಡಿದರೂ ಪ್ರತಿ ನಿತ್ಯ ಸಾವಿರಕ್ಕೂ ಹೆಚ್ಚು ಕೊಡಗಳಲ್ಲಿ ನೀರನ್ನು ಗ್ರಾಮಸ್ಥರು ಸರದಿ ಪ್ರಕಾರದಲ್ಲಿ ತುಂಬಿಕೊಂಡು ಹೋಗುತ್ತಾರೆ! ಅಂದಹಾಗೆ, ಈ ನೀರಿನ ಗುಣಮಟ್ಟವನ್ನು ಈ ಹಿಂದೆ ಪರೀಕ್ಷಿಸಿದ ಆರೋಗ್ಯ ಇಲಾಖೆ, ಇದು ಕುಡಿಯಲಿಕ್ಕೆ ಯೋಗ್ಯವೆಂದು ಹಸಿರು ನಿಶಾನೆ ತೋರಿಸಿತ್ತು. ಹಾಗಾಗಿ, ಒಂದು ಕಾಲದಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದವರಿಗೆ, ಇಂದು ಕುಡಿಯಲಿಕ್ಕೆ ಮಾತ್ರವಲ್ಲದೆ, ಮನೆ ಬಳಕೆಗೆ, ಜಾನುವಾರುಗಳಿಗೆ ಈ ನೀರಿನ ಸೆಲೆಗಳೇ ಜೀವಾಳ.

SANYO DIGITAL CAMERAಇನ್ನು ಜಾನುವಾರುಗಳಿಗೆ ಪ್ರತಿ ಬಾರಿ ಕೆರೆಸರಕ್ಕೆ ಕರೆದೊಯ್ಯುವುದು, ನೀರು ಹೊತ್ತು ತಂದು ಕುಡಿಸುವುದು ಕಷ್ಟ ಸಾಧ್ಯ. ಹೀಗಾಗಿ, ಗ್ರಾಮಕ್ಕೆ ಅಂಟಿಕೊಂಡು ಸಣ್ಣಪ್ಪಜ್ಜರ ಮನೆತನಕ್ಕೆ ಸೇರಿದ ಜಮೀನಿನಲ್ಲಿ ಹೊಂಡವಿದೆ. ಈ ಮನೆತನ, ಇದನ್ನೇ ಮಳೆ ನೀರು ಶೇಖರಣೆಗೆ ಬಿಟ್ಟು ಗ್ರಾಮಕ್ಕೆ ಅರ್ಪಿಸಿದೆ. ಅಂದಹಾಗೆ, ಇಲ್ಲಿಗೆ ನೀರು ಹರಿದು ಬರುವುದು ಅದೇ ಕೆರೆಸರದ ಗುಡ್ಡಗಳಿಂದ! ಮಳೆಗಾಲದಲ್ಲಿ ಗುಡ್ಡಗಳ ಮೇಲೆ ಬಿದ್ದ ನೀರು, ಇಳಿಜಾರಿನ ಮೂಲಕ ಸೀದಾ ಈ ಹೊಂಡದಲ್ಲಿ ಸೇರುವ ವ್ಯವಸ್ಥೆ ನೈಸರ್ಗಿಕವಾಗಿಯೇ ಇದೆ! ಹಾಗಾಗಿ, ವರ್ಷದಲ್ಲಿ ಒಂದೆರೆಡು ಭರ್ಜರಿ ಮಳೆಯಾದರೆ, ಈ ಹೊಂಡ ಭರ್ತಿಯಾದಂತೆ. ಈ ಹೊಂಡ ಭರ್ತಿಯಾಗುತ್ತಿದ್ದಂತೆ ರೈತಾಪಿ ಜನರ ಮೊಗದಲ್ಲಿ ನಗೆಯ ಅಲೆ! ದನಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ನೀರಿನ ಬಗ್ಗೆ ನಿಶ್ಚಿಂತೆ! ಹೀಗಾಗಿಯೇ, ಸಣ್ಣಪ್ಪಜ್ಜರ ಮನೆತನದವರು ಹೊಂಡವನ್ನು ಗ್ರಾಮಕ್ಕೆ ತೆರೆದಿಟ್ಟಿದ್ದರೆ, ಗ್ರಾಮಸ್ಥರೂ ಸಹ ಇದರ ಸ್ವಚ್ಛತೆಯತ್ತ ಲಕ್ಷ್ಯ ಕೊಟ್ಟಿದ್ದಾರೆ.

ಹೀಗೆ ಒಂದು ಕಾಲದಲ್ಲಿ ಇಡೀ ಗ್ರಾಮ ಹನಿ ನೀರಿಗೂ ಬೆವರಿಳಿಸುತ್ತಿರುವ ವೇಳೆ, ಅಪತ್ಭಾಂದವನಾಗಿದ್ದು ಕೆರೆಸರ ಮತ್ತು ಈ ನೀರಿನ ಸೆಲೆಗಳು! ಗ್ರಾಮಸ್ಥರು ಒಂದೆಡೆ ನೀರಿನ ಸೆಲೆಗಳಿಂದ ತಾವು ಬದುಕುತ್ತಾ,  ಮತ್ತೊಂದೆಡೆ ನೀರಿನ ಹೊಂಡ ಪೋಷಿಸುತ್ತಿರುವ ಫಲವಾಗಿ, ಈ ಭಾಗದ ಇಡೀ ಪ್ರಾಣಿ-ಪಕ್ಷಿ ಸಂಕುಲಗಳು ಶುದ್ಧ ನೀರು ಕುಡಿದು, ನೆಮ್ಮದಿಯಿಂದ ಬದುಕುತ್ತಿವೆ. ಹೀಗಾಗಿ, ಈ ಗ್ರಾಮದ ಸೆಲೆಯ ನೀರು ಜೀವ ಉಳಿಸುವ, ಮನುಷ್ಯ ಮತ್ತು ಪ್ರಾಣಿಗಳ ನಡುವೆ ಸೌಹಾರ್ದ ಬದುಕಿಗೆ ವೇದಿಕೆ, ಕೊಂಡಿಯಾಗಿ ನಿಂತಿದೆ.

ಸಣ್ಣಪ್ಪಜ್ಜರ ಉಮ್ಮಣ್ಣ

ಈ ಮುಂಚೆ ಆರೋಗ್ಯ ಇಲಾಖೆಯವರು ಸೆಲೆಯ ನೀರು ಶುದ್ಧೀಕರಣಕ್ಕೆ ಗುಳಿಗೆಗಳನ್ನು ಕಾಲ-ಕಾಲಕ್ಕೆ ಕೊಡುತ್ತಿದ್ದರು. ಅವುಗಳನ್ನು ಈ ಸೆಲೆಯಲ್ಲಿ ಹಾಕುತ್ತಿದ್ದೆವು. ಇದರಿಂದ, ಮತ್ತಷ್ಟು ನೀರು ಶುದ್ಧಗೊಳ್ಳುತ್ತಿದ್ದವು. ಆದರೆ ಇತ್ತೀಚಿಗೆ, ಇಲಾಖೆ ಗುಳಿಗೆಗಳನ್ನು ನೀಡುವುದನ್ನು ನಿಲ್ಲಿಸಿದೆ. ಹಾಗಾಗಿ, ನೀರು ಶುದ್ಧವಿದ್ದರೂ ಸೋಸಿ ಕುಡಿಯುತ್ತಿದ್ದೇವೆ. ಸರ್ಕಾರ ಇದರತ್ತ ಗಮನಕೊಡಬೇಕಿದೆ.

ಎನ್.ಕೆ. ಮಂಜುನಾಥ್

ಈ ನೀರಿನ ಸೆಲೆಗಳು ನಮ್ಮ ಗ್ರಾಮದ ನೀರಿನ ಬವಣೆ ನೀಗಿಸಿವೆ. ಈಗ ನಾನೇ ಹಣ ಖರ್ಚು ಮಾಡಿ, ಗ್ರಾಮಸ್ಥರ ಸಹಕಾರದಿಂದ ಇವುಗಳ ಸುತ್ತಾ ಸೆಲೆಗೆ ಹಾನಿಯಾಗದಂತೆ, ವೈಜ್ಞಾನಿಕವಾಗಿ ಚಿಕ್ಕ ಗೋಡೆ ಕಟ್ಟಿ, ಕುಡಿಯಲು ಮತ್ತು ಬಳಕೆಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡುವುದಕ್ಕೆ ಕಂಕಣ ತೊಟ್ಟಿದ್ದೇನೆ.  ಗ್ರಾಮಕ್ಕೆ ಇದೇ ನೀರನ್ನು ತರುವ ಚಿಂತನೆ ಇದ್ದು, ಪ್ರಯೋಗಾರ್ಥವಾಗಿ ಉಡುಸಲಮ್ಮ ಗುಡಿ ಬಳಿ ಇರುವ ಬತ್ತಿದ ಬಾವಿಗೆ ಆ ನೀರನ್ನು ಪೈಪ್‌ಲೈನ್ ಮೂಲಕ ತುಂಬಿಸುವೆ. ಇದರಿಂದ ಜನರು ದಿನನಿತ್ಯ ಕೆರೆಸರದವರೆಗೆ ಹೋಗುವುದು ತಪ್ಪುತ್ತದೆ.

ಸಂಪರ್ಕಕ್ಕೆ ೯೬೧೧೭೭೦೨೦೩

 ಚಿತ್ರ-ಲೇಖನ: ಸ್ವರೂಪಾನಂದ.ಎಂ.ಕೊಟ್ಟೂರ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*