ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಪರಿಸರ ಕಾಳಜಿ ನಮ್ಮ ಚರ್ಮವಾಗಬೇಕು ; ಅಂಗಿಯಲ್ಲ!

೧೩-೧೪ (ಶನಿವಾರ-ಭಾನುವಾರ) ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆ

ಈ ತಿಂಗಳ ೧೩-೧೪ (ಶನಿವಾರ-ಭಾನುವಾರ) ೨೦೧೭ನೇ ಸಾಲಿನ ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆ ಧಾರವಾಡದಲ್ಲಿ ಜರುಗಿತು. ಆಚರಣೆಯ ಧ್ಯೇಯ- ‘ಅವುಗಳ ಭವಿಷ್ಯವೇ ನಮ್ಮ ಭವಿಷ್ಯ’. ‘ವನ್ಯಜೀವಿ ಹಾಗೂ ಮನುಷ್ಯರಿಗಾಗಿ ಸುಸ್ಥಿರ ಅಭಿವೃದ್ಧಿ’ ಎಂಬ ವಿಷಯದ ಮೇಲೆ ಬೆಳಕು ಚೆಲ್ಲಲು ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆಯ ದಿನವನ್ನು ಬಳಸಿಕೊಳ್ಳಲಾಯಿತು. ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ ಆಧರಿಸಿ ಬಳಕೆಯ ಮಿತಿ, ಮಾನವ ಮತ್ತು ವಲಸೆ ಹಕ್ಕಿಗಳ ಮಧ್ಯದ ಆಂತರಿಕ ಅವಲಂಬನೆ ಅರ್ಥ ಮಾಡಿಕೊಳ್ಳುವ ಪ್ರಯತ್ನ, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿಹಣೆ ಜೊತೆಗೆ ವಲಸೆ ಪಕ್ಷಿಗಳ ಸಂರಕ್ಷಣೆ.. ಹೀಗೆ, ಮುಂದಿ ಪೀಳಿಗೆಯ ‘ಮನುಷ್ಯ’ರ ರಕ್ಷಣೆಗಾಗಿಪೂರ್ವ ನಿರ್ಧಾರಿತ ಹೆಜ್ಜೆ ಈ ಬಾರಿಯ ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆಯ ವಿಶೇಷವಾಗಿತ್ತು.

ಧಾರವಾಡ: ಪರಿಸರ ಸ್ನೇಹಿ, ಸರಳ ಜೀವನ ವಿಧಾನ ನಮಗೆಲ್ಲ ತೊಡುವಅಂಗಿಯಂತಾಗಿದೆ; ಅದನ್ನು ಇನ್ನಾದರೂ ನಮ್ಮ ಚರ್ಮ ಆಗಿಸಿಕೊಳ್ಳದಿದ್ದರೆ.. ಈ ನಾಟಕದ ಅಂಕದ ಪರದೆ ಕೊನೆಯ ಬಾರಿ ಬಿದ್ದು ಬಿಡುವ ದಿನಗಳು ದೂರವಿಲ್ಲ!

ಬಹುತೇP ವಲಸೆ ಹಕ್ಕಿಗಳು ಈ ಬಾರಿ ಮರು ಪ್ರಯಾಣ ಆರಂಭಿಸಿದ್ದರಿಂದ, ಸ್ಥಳೀಯ ಪಕ್ಷಿಗಳ ವೀಕ್ಷಣೆಯ ಮೂಲಕ ಸಾಂದರ್ಭಿಕವಾಗಿ ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆ ಪಕ್ಷಿ ಪ್ರಿಯರು ಧಾರವಾಡದಲ್ಲಿ ಆಚರಿಸುವಂತಾಯಿತು. ಮಕ್ಕಳಲ್ಲಿ ಹಕ್ಕಿಗಳ ಬದುಕು-ಬವಣೆಯ ಬಗ್ಗೆ ಕಾಳಜಿ ಮೂಡಿಸುವ ಪ್ರಯತ್ನವಾಗಿ ಇದೊಂದು ಒಳ್ಳೆಯ ಪ್ರಯತ್ನವಾದರೂ, ‘ಹಿರಿಯರಾದ ನಾವು ಪರಿಸರವನ್ನು ಹಾಳುಗೆಡಹಿದ್ದೇವೆ.. ಕಿರಿಯರೆ ನೀವು ಕಾಪಾಡಿ’ ಎಂಬಂತಹ ಇಬ್ಬಂದಿ ನಿಲುವು ಎದ್ದು ಕಾಣಿಸುವಂತಾಗಿದೆ. ಇದು ತುಂಬ ಕಳವಳಕಾರಿ ಬೆಳವಣಿಗೆ.

ಧಾರವಾಡ ಜಿಲ್ಲೆಯ ೫ ತಾಲೂಕುಗಳ (ಧಾರವಾಡ, ಹುಬ್ಬಳ್ಳಿ, ಕಂದಗೋಳ, ಕಲಘಟಗಿ ಹಾಗೂ ನವಲಗುಂದ) ಬಹುತೇಕ ನೀರಿನಾಸರೆಗಳು, ಬಿರು ಬೇಸಿಗೆ ಹಾಗೂ ಮಳೆ ಕೊರತೆಯಿಂದ ಬೇಗನೇ ಇಂಗಿ ಹೋದವು. ಗುಡ್ಡ-ತಟಾಕುಗಳ ಕಣಿವೆಯಲ್ಲಿ ಅಷ್ಟೋ-ಇಷ್ಟೋ ಜೀವ ಹಿಡಿದಿದ್ದ ಸಂಕಗಳ ಮಾದರಿ ಹೊಂಡಗಳು ಡಿಸೆಂಬರ್-ಜನೇವರಿ ವೇಳೆಗೆ ಬಾಯಿ ಬಿರಿದು, ಬಿಸಿಯುಸಿರು ಕೊರಕಲಿನಿಂದ ಹೊರಡಿಸುವಂತಾದವು.

NRCD BIRD WATCHING (1)

ಣ ಬರ, ಕೆರೆ ಅಂಗಳದ ತರಿ ಭೂಮಿಯ ಹಸಿಯನ್ನು ಕಸಿದ ಪರಿಣಾಮ, ವಲಸೆ ಹಕ್ಕಿಗಳಿಗೆ ಅನ್ನವೇ ಇಲ್ಲದಂತಾಯ್ತು. ಮನುಷ್ಯರಿಗೆ ಅನ್ನಭಾಗ್ಯ, ನೀರ ಭಾಗ್ಯ, ಶೌಚ ಭಾಗ್ಯ ಕರುಣಿಸಲು ಸರ್ಕಾರಗಳಿವೆ. ವನ್ಯ ಪ್ರಾಣಿ-ಪಕ್ಷಿಗಳಿಗೆ ಆ ಭಾಗ್ಯ ಒದಗಿಸಲು ಯಾರಿದ್ದಾರೆ? ಇಲ್ಲೂ ಕೂಡ ಕಾಳಜಿ ಅಂಗಿಗೆ ಅಂಟಿದಂತಿದೆ.. ಕೆಲವಡೆ ರೈತರ ದೊಡ್ಡ ಮನಸ್ಸಿನಿಂದ ನೈಜ ಕಾಳಜಿ ‘ಚರ್ಮವಾಗಿದ್ದು’ ಪಕ್ಷಿ ಪ್ರಿಯರಿಗೆ ಸಮಾಧಾನ ತಂದಿದೆ.

ಈ ಎಲ್ಲ ಕಳವಳದ ಬೆಳವಣಿಗೆಯ ಮಧ್ಯೆ, ‘ಆಚರಣೆ’ ಅರ್ಥಪೂರ್ಣ ಎನಿಸದಿದ್ದರೆ, ಕಾಟಾಚಾರಕ್ಕೆ ಚೆಂದದ ಅಂಗಿ ತೊಟ್ಟಂತೆ.. ತೋರಿಕೆಯ ತುರಿಕೆ ಎನಿಸದಿರುವುದೇ?

ಆದರೂ, ಕಾಳಜಿ ದರ್ಶಿಸದಿದ್ದರೆ, ಮರೆತೇ ಹೋಗಬಹುದು ಎಂಬ ಉದ್ದೇಶದಿಂದ ವಲಸೆ ರೆಕ್ಕೆಯ ಮಿತ್ರರನ್ನು ಹುಡುಕ ಹೊರಟವರ ಪ್ರವರ ಇಲ್ಲಿದೆ.

ಚುಮು ಚುಮು ಬೆಳಕು ಹರಿಯುತ್ತಿದ್ದ ಹೊತ್ತು

ಮಂಜು ಮುಸುಕಿದ ವಾತಾವರಣ. ಆದಾಗತಾನೇ ಗೂಡಿನಿಂದ ಎದ್ದು ಬಂದು ಮೈ ಮುರಿಯುತ್ತ.. ಸುಪ್ರಭಾತದ ಶೈಲಿಯಲ್ಲಿ ‘ಎದ್ದೀರಾ..?’ ಎಂದು, ತಮ್ಮವರನ್ನು ಪ್ರಶ್ನಿಸುವಂತೆ ಕಲರವ ಎಬ್ಬಿಸಿದ್ದವು ಪಕ್ಷಿಗಳು!

ಧಾರವಾಡದಿಂದ ಹಳಿಯಾಳ ರಸ್ತೆಯ ಮೇಲೆ ಸುಮಾರು ೧೫ ಕಿ.ಮೀ. ದೂರದ ಹಳ್ಳಿಗೇರಿಯಲ್ಲಿ ಶನಿವಾರ (ಮೇ ೧೩), ವಲಸೆ ಹಕ್ಕಿಗಳ ಅಂತಾರಾಷ್ಟ್ರೀಯ ದಿನಾಚರಣೆ ಅಂಗವಾಗಿ, ನೇಚರ್ ಫಸ್ಟ್ ಇಕೋ ವಿಲೇಜ್‌ನಲ್ಲಿ ಆಯೋಜಿಸಿದ್ದ, ‘ಒಂದು ಮರ ನೂರು ಸ್ವರ’ ಸ್ಥಳೀಯ ಪಕ್ಷಿಗಳ ವೀಕ್ಷಣೆ ಕಾರ್ಯಕ್ರಮದಲ್ಲಿ ಕಣ್ಣು ತಿಕ್ಕಿಕೊಳ್ಳುತ್ತ, ಎವೆಇಕ್ಕದೇ ತಲೆ ಎತ್ತಿ ಅವರತ್ತ ನೋಡುತ್ತಿದ್ದ ಮಕ್ಕಳನ್ನು ಅಷ್ಟೇ ಕುತೂಹಲದಿಂದ ರೆಕ್ಕೆಯ ಮಿತ್ರರು ಗಮನಿಸಿದರು. ‘ಎಲ್ಲಿ.. ನನಗ ಕಾಣಸ್ವಾಲ್ತು..’ ಮಕ್ಕಳು ಅಂದಾಗ, ಫಕ್ಕನೇ ಕ್ಕಂತೆ, ತಮ್ಮ ಇರುವಿಕೆ ಸಾಬೀತು ಪಡಿಸಲು ರೆಕ್ಕೆ ಬಿಚ್ಚಿ ಹಾರಿದ ವೇಳೆ.. ಅವಕ್ಕಾಗಿ ಗಮನಿಸಿದ ಮಕ್ಕಳ ಸಂತಸಕ್ಕೆ ಪಾರವೇ ಇರಲಿಲ್ಲ.

ಹಕ್ಕಿಗಳ ಲೋಕದಲಿ ರೆಕ್ಕೆ ಮುಡುವುದೆನಗೆ; ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ ಎಂಬ ಕುವೆಂಪು ಅವರ ಕವಿ ವಾಣಿಯನ್ನು ಅನುಭವಿಸುವಂತೆ ಮಾಡಿತ್ತು.. ಪಕ್ಷಿ ವೀಕ್ಷಣೆಯ ಸಹಲ್.

ಕೆಮ್ಮಂಡೆ ಗಿಳಿ (ಪ್ಲಮ್ ಹೆಡೆಡ್ ಪ್ಯಾರಾಕೀಟ್), ರಾಮ ಗಿಳಿ (ಲಾರ್ಜ್ ಇಂಡಿಯನ್ ಪ್ಯಾರಾಕೀಟ್), ಚಿಟ್ಟು ಗಿಳಿ (ಲಾರಿ ಕೀಟ್), ಚಿಟ್ಟು ಗುಟುರು (ಕಾಪರ್ ಸ್ಮಿತ್), ಚಿಟ್ಟು ಮಡಿವಾಳ (ಇಂಡಿಯನ್ ರಾಬಿನ್), ಮಡಿವಾಳ (ಮ್ಯಾಗ್ ಪೈ ರಾಬಿನ್), ಕೆಮ್ಮಂಡೆ ಗಣಿಗಾರ‍್ಲ ಹಕ್ಕಿ (ಸ್ಮಾಲ್ ಗ್ರೀನ್ ಬೀ ಈಟರ್), ಕಿರು ಮಿಂಚುಳ್ಳಿ (ಸ್ಮಾಲ್ ಬ್ಲೂ ಕಿಂಗ್ ಫಿNRCD BIRD WATCHING (3)ಷರ್), ನೆಲ ಕಟುಕ (ಹುಪೋ), ಕೆಮ್ಮೀಸೆ ಪಿಕಳಾರ (ರೆಡ್ ವಿಸ್ಕರ್ಡ್ ಬುಲ್‌ಬುಲ್), ಕೆಂಪು ಬಾಲದ ಪಿಕಳಾರ (ರೆಡ್ ವೆಂಟೆಡ್ ಬುಲ್‌ಬುಲ್), ಬಿಳಿ ಕುಂಡೆಕುಸ್ಕ (ವೈಟ್ ವ್ಯಾಗ್‌ಟೇಲ್), ಚುಕ್ಕೆ ಮುನಿಯ (ಸ್ಪಾಟೆಡ್ ಮುನಿಯ), ಕಿರು ಗುಲಗಂಜಿ (ಸ್ಮಾಲ್ ಸ್ಕಾರ್‌ಲೆಟ್ ಮಿನಿವೆಟ್), ಬಿಳಿ ಹುಬ್ಬಿನ ಬೀಸಣಿಗೆ ಬಾಲ (ವೈಟ್ ಸ್ಪಾಟೆಡ್ ಫ್ಯಾನ್‌ಟೇಲ್ ಫ್ಲೈ ಕ್ಯಾಚರ್), ಹಳದಿ ಹೂ ಗುಬ್ಬಿ (ಪರ್ಪಲ್ ರಂಪ್ಡ್ ಸನ್‌ಬರ್ಡ್), ಕಾಜಾಣ (ರ‍್ಯಾಕೆಟ್ ಟೇಲ್ಡ್ ಡ್ರೋಂಗೋ), ಭರದ್ವಾಜ (ಬ್ಲ್ಯಾಕ್ ಡ್ರೋಂಗೋ), ಮೈನಾ ಹಕ್ಕಿ (ಇಂಡಿಯನ್ ಮೈನಾ), ಗೀಜಗ (ಬಾಯಾ ವೀವರ್), ಕದುಗನ ಹಕ್ಕಿ (ಇಂಡಿಯನ್ ಟ್ರೀ ಪಾಯ್), ಕಾಡು ಕಾಗೆ (ಜಂಗಲ್ ಕ್ರೋ), ನವಿಲು (ಕಾಮನ್ ಪೀ ಫೌಲ್), ಗೌಜಿಗ ಹಕ್ಕಿ (ಗ್ರೇ ಪಾಟ್ರಿಡ್ಜ್), ಹುಂಡು ಕೋಳಿ (ವೈಟ್ ಬ್ರೆಸ್ಟೆಡ್ ವಾಟರ್ ಹೆನ್), ಮಣಿ ಹೊರಸಲು (ರೆಡ್ ಟರ್ಟಲ್ ಡೌ), ಮನಿಯಾಡಲು (ಗ್ರೀನ್ ಪಿಜನ್), ಬೂದು ಮಂಗಡ್ಡೆ ಹಕ್ಕಿ (ಕಾಮನ್ ಗ್ರೇ ಹಾರ್ನ್‌ಬಿಲ್), ಕೋಗಿಲೆ (ಕೋಯಲ್.. ಕಕ್ಕೂ), ಕೆಂಬೂತ (ಕ್ರೋ ಪೆಸೆಂಟ್, ಕಕೌಲ್), ಗೋಲ್ಡನ್ ಓರಿಯೋಲ್, ಪ್ಯಾರಾಡೈಸ್ ಫ್ಲೈ ಕ್ಯಾಚರ್ ಹೀಗೆ ೩೫ಕ್ಕೂ ಹೆಚ್ಚು ಸ್ಥಳೀಯ ಪಕ್ಷಿಗಳನ್ನು ತಜ್ಞರ ಸಹಾಯದಿಂದ ಬೈನ್ಯಾಕುಲರ್‌ಗಳ ಮೂಲಕ ಮಕ್ಕಳು ಗುರುತಿಸಿ, ಅವುಗಳ ಬದುಕು-ಬವಣೆ ಅರಿತುಕೊಂಡರು.

 ಉತ್ತರ ಕರ್ನಾಟಕ ಪಕ್ಷಿ ವೀಕ್ಷಕರRED MUNIA ಸಂಘದ ಎಸ್.ಎಂ.ಪಾಟೀಲ, ಪವನ್ ಮಿಸ್ಕಿನ್, ಹಾಗೂ ನೇಚರ್ ರಿಸರ್ಚ್ ಸೆಂಟರ್‌ನ ಹರ್ಷವರ್ಧನ ಶೀಲವಂತ, ಪ್ರಕಾಶ ಗೌಡರ ೩೦ಕ್ಕೂ ಹೆಚ್ಚು ಮಕ್ಕಳ ಮೂರು ತಂಡಗಳನ್ನು ಮುನ್ನಡೆಸಿದರು.

ಅರಣ್ಯ, ತನ್ಮೂಲಕ ನದಿ, ಕೆರೆ-ಕುಂಟೆಗಳು, ವಲಸೆ ಹಕ್ಕಿಗಳ ಕಾರಿಡಾರ್‌ಗುಂಟ ಪರಿಸರ ಸಂರಕ್ಷಿಸುವ ತುರ್ತು, ವಲಸೆ ಹಕ್ಕಿಗಳ ಭವಿಷ್ಯದಲ್ಲಿಯೇ ನಮ್ಮ ಭವಿಷ್ಯ ಅಡಗಿರುವ ಮಹತ್ವವನ್ನು ತಜ್ಞರು ಮಕ್ಕಳಿಗೆ ವಿವರಿಸಿದರು. ಬಿರು ಬೇಸಿಗೆಯ ಹಿನ್ನೆಲೆ, ಉತ್ತರದಲ್ಲಿ ಚಳಿಗಾಲ ಮುಗಿಯುತ್ತ ಬಂದ ಕಾರಣ ಹಾಗೂ ಒಣಗಿದ ಕೆರೆಕುಂಟೆಗಳ ದೆಸೆಯಿಂದ ಈ ಬಾರಿ ಬಹುತೇಕ ವಲಸೆ ಹಕ್ಕಿಗಳು ತುಸು ಮುಂಚೆಯೇ ತಮ್ಮ ಮರಳಿ ಪ್ರವಾಸ ಆರಂಭಿಸಿದ್ದರಿಂದ, ಒಂದೇ ಅರಳಿ ಮರದಲ್ಲಿ ಸ್ಥಳೀಯ ಪಕ್ಷಿಗಳ ವೀಕ್ಷಣೆಯ ಮೂಲಕ ಮಹತ್ವದ ದಿನಾಚರಣೆ ಕೈಗೊಳ್ಳಲಾಯಿತು.

ಮುಂದಿನ ಬಾರಿ ಹೀಗಾಗದಂತೆ ಮಾಡಲು ಏನು ಮಾಡಬೇಕು ಎಂಬ ಚಿಂತೆ ನಮ್ಮನ್ನು ಈಗಲೇ ಕಾಡಲಾರಂಭಿಸಿದೆ..

ಚಿತ್ರ-ಲೇಖನ: ಹರ್ಷವರ್ಧನ ವಿ.ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*