ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮುಚ್ಚಿದ ಕೆರೆಯನ್ನು ತೆರೆದಾಗ

ಧಾರವಾಡ ಜಿಲ್ಲೆಯ ಜನತೆ ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಾರೆ. ಇದೀಗ ಕೊಳವೆ ಬಾವಿಗಳೇ ಇಲ್ಲಿನ ನೀರಿನ ಪ್ರಮುಖ ಮೂಲಗಳು. ಪೂರ್ವಜರ ಕಾಲದಲ್ಲಿ ನೂರಾರು ಎಕರೆಗೆ ನೀರುಣಿಸುತ್ತಿದ್ದ ಕೆರೆಗಳಂತೂ ಇದೀಗ ಕಾಣಸಿಗುವುದೇ ಅಪರೂಪ. ಇರುವ ಕೆರೆಗಳು ಹೂಳು ತುಂಬಿ ಕಣ್ಮರೆಗೊಂಡಿರುವ ಇತ್ತೀಚಿನ ದಿನಗಳಲ್ಲಿ, ಮಳೆ ನೀರು ತಂಗಲು ಜಾಗವಿಲ್ಲ. ಕೆರೆಗಳ ಹೂಳೆತ್ತಿದರೆ ಮಳೆನೀರನ್ನು ಶೇಖರಿಸುವ ಮೂಲಕ ಭೂಮಿಯ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದೆಂಬುವುದು ಎಲ್ಲರಿಗೂ ಗೊತ್ತಿರುವIMG-20170408-WA0010
ವಿಷಯ. ಆದರೆ ಅದು ಒಬ್ಬಿಬ್ಬರಿಂದ ಆಗುವ ಕೆಲಸಗಳಲ್ಲ. ಸಾಕಷ್ಟು ಹಣಕಾಸಿನ ನೆರವು ಬೇಕು. ಊರಿನ ಜನರನ್ನು ಒಗ್ಗೂಡಿಸುವ ಶಕ್ತಿ ಎಲ್ಲವೂ ಇದ್ದರೆ ಮಾತ್ರ ಇದು ಸಾಧ್ಯವೆಂದುಕೊಂಡಿದ್ದ ಧಾರವಾಡ ತಾಲೂಕಿನ ಹಳ್ಳಿಗೇರಿ ಜನತೆಯ ಬಹುದಿನಗಳ ಕನಸೊಂದು ಇದೀಗ ಈಡೇರಿದೆ.

ಧಾರವಾಡ ತಾಲೂಕಿನ ಹಳ್ಳಿಗೇರಿ ಹೊಲದ ರಸ್ತೆಯ ಮೂರು ಎಕರೆ ವಿಸ್ತೀರ್ಣದ ಹಳ್ಳಿಗೇರಿ ಕೆರೆಯ ಹೂಳೆತ್ತುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಾಡಿ ಮುಗಿಸಿದೆ. ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಕನಸಿನಂತೆ ಹೂಳೆತ್ತುವ ಕೆಲಸವನ್ನು ಇಲ್ಲಿ ಕೈಗೊಂಡಿದ್ದು, ಕೆರೆ ಮಳೆನೀರು ಶೇಖರಣೆಗೆ ಸಿದ್ಧಗೊಂಡಿದೆ. ಕಳೆದ ವರ್ಷ ಇಲ್ಲಿ ಬೇಕಾದಷ್ಟು ಪ್ರಮಾಣದಲ್ಲಿ ಮಳೆಯಾಗದ ಕಾರಣ ಇದೀಗ ಕೆರೆಯಲ್ಲಿ ನೀರಿಲ್ಲ. ಗ್ರಾಮದಲ್ಲಿ ಒಟ್ಟು ೪ ಕೆರೆಗಳಿದ್ದು, ಹಳ್ಳಿಗೇರಿ ಕೆರೆಯಂತೆ ಇತರ ಕೆರೆಗಳು ಹೂಳುಮುಕ್ತಗೊಂಡಲ್ಲಿ, ಮುಂದೊಂದು ದಿನ ಇಲ್ಲಿನ ಜಲ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರವಾಗಬಲ್ಲದು. ಹಳ್ಳಿಗೇರಿ ಕೆರೆಯಲ್ಲಿ ಮಳೆನೀರು ತುಂಬಿದ್ದಲ್ಲಿ, ಇಲ್ಲಿನ ೩೦೦ ಮನೆಗಳಿಗೆ ನೀರು ದೊರೆತಂತಾಗುತ್ತದೆ ಎಂಬುವುದು ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ದಿನೇಶ್ ಎಂ.ರವರ ಅನುಭವದ
ಮಾತು.

IMG-20170408-WA0014ಕೆರೆಯಿಂದ ೩೧೫೦ ಟ್ರಾಕ್ಟರ್ ಹೂಳನ್ನು ತೆಗೆಯಲಾಗಿದೆ. ಇದಕ್ಕೆ ಸುಮಾರು ಮೂರು ಲಕ್ಷ ರೂಪಾಯಿ ಖರ್ಚು ತಗಲಿದ್ದು, ಆ ಹಣ ಧರ್ಮಸ್ಥಳದಿಂದ ಅನುದಾನ ರೂಪದಲ್ಲಿ ದೊರೆತಿದೆ.
ಕೆರೆಯ ಸುತ್ತ ಏರಿಯನ್ನು ನಿರ್ಮಿಸಲಾಗಿದ್ದು, ಹೂಳೆತ್ತಿದ ಪರಿಣಾಮವಾಗಿ ಹಳ್ಳಿಗೇರಿ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯ ಇಮ್ಮಡಿಗೊಂಡಿದೆ. ಅಲ್ಲದೆ, ಕಾಡು ಪ್ರಾಣಿ, ಜಾನುವಾರುಗಳಿಗೆ ಸುಲಭವಾಗಿ ಕುಡಿಯುವ ನೀರು ದೊರೆಯುವಂತಾಗಿದೆ. ಇಲ್ಲಿನ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ವರ್ಗ ಹೂಳೆತ್ತುವ ಕೆಲಸದಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ನೀರು ಬರುವ ಕಾಲುವೆಗಳನ್ನು ಸರಿಪಡಿಸಿ, ಮಳೆ ನೀರು ಕೆರೆಗೆ ಬೀಳುವಂತೆ ಮಾಡುವ ಯೋಚನೆ ಇವರಲ್ಲಿದೆ.

ಮಳೆನೀರನ್ನು ಎಲ್ಲೆಡೆಗಳಲ್ಲಿ ಹರಿದಾಡಲು ಬಿಟ್ಟು ಬೇಸಿಗೆ ಕಾಲ ಬಂದಾಗ ನೀರಿಗಾಗಿ ಪರಿತಪಿಸುವ ಬದಲು, ಮಳೆಗಾಲದ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಕೆರೆಗಳ ಹೂಳೆತ್ತುವ ಇಂತಹ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವ ಮೂಲಕ ರಾಜ್ಯದ ಜಲ ಸಮಸ್ಯೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಕೈಲಾದ ಪ್ರಯತ್ನವನ್ನು ಮಾಡಬೇಕಾಗಿದೆ. ಧರ್ಮಸ್ಥಳದ ಈ ಪ್ರಯತ್ನದೊಂದಿಗೆ ನಾವೆಲ್ಲ ಕೈಜೋಡಿಸಬೇಕಾಗಿದೆ.

                                                        ಚಿತ್ರ-ಲೇಖನ: ಚಂದ್ರಹಾಸ ಚಾರ್ಮಾಡಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*