ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೊಳವೆ ಬಾವಿಯಿಂದ ನೀರೆತ್ತಿ ಕಾಡು ಪ್ರಾಣಿಗಳ ದಾಹ ತೀರಿಸಿದ ಗ್ರಾಮಸ್ಥರು – ಬರದಲ್ಲೂ ಮಾನವೀಯತೆಯ ಒರತೆ ಬತ್ತಲಿಲ್ಲ!

ಧಾರವಾಡ (ಬಣದೂರ): ಅರಿತು ಬಾಳ್ವೆನೆಂಬ ಆಳಿಗೆ ಈ ಬಾಳೆಂಬುದೊಂದು ಕುಲುಮೆ..!

ಕವಿ ರಾಘವ ಅವರ ಕವನದ ಈ ಸಾಲು ನಮ್ಮ ಕೃಷಿಕರಿಗೆ ಅನ್ವರ್ಥಕವೆನಿಸುವಂತಿದೆ. 

8ನಮಗೆಲ್ಲ ಗೊತ್ತು. ನಮ್ಮ ಅನ್ನದಾತ ಅಂತಃಕರಣಿ. ಸದೈವ ಕೊಡುಗೈ ದಾನಿ ಅಂತ. ಲಾಭ-ನಷ್ಟದ ಲೆಕ್ಕ ಮಾಡಿಕೊಂಡು ನಡೆಯುವ ವ್ಯಾಪಾರಿಯಂತಲ್ಲ ಅವ.

ಹಾಗೊಂದು ವೇಳೆ, ತನ್ನ ಮನಸ್ಸು ಬದಲಿಸಿ, ಉಳುವ ಯೋಗಿ ಒಕ್ಕಿದರೆ ಜಗವೆಲ್ಲ ಬಿಕ್ಕುವಂತಾದೀತು..!

ಹಣ್ಣು ಹೊದ್ದು ನಿಂತ ಮರವೊಂದು, ತನ್ನತ್ತ ಎರಡು ಕಲ್ಲೆಸೆಯುವವನಿಗೆ ‘ಬಾ.. ನನ್ನ ನೆರಳಲ್ಲಿ ನಿಂತು ಎಸೆ’ ಎಂದು, ತೆರೆದ ಬಾಹುಗಳಿಂದ ಆಹ್ವಾನಿಸಿ, ಪರೋಪಕಾರದ ಪಾರಾಕಾಷ್ಠೆ ಮೆರೆಯುವಂತೆ.. ತನ್ನೆಲ್ಲ ಕಷ್ಟಗಳ ನಿರ್ಲಿಪ್ತ ಸಹಿಷ್ಣು ನಮ್ಮ ರೈತರು.

ಬರ-ತುಟ್ಟಿಯ ಈ ವರ್ತಮಾನದಲ್ಲೂ

ಒಕ್ಕುವ ಪರಂಪರೆಗೆ ಚ್ಯುತಿ ಬಾರದಂತೆ ನಡೆದು, ಮನುಷ್ಯನ ಬದುಕಿಗೆ ಮೇಲ್ಪಂಕ್ತಿ ಹಾಕಿದ ಪ್ರಾತಿನಿಧಿಕ ಮನಸ್ಸುಗಳು ಅನುಕರಣೀಯ ಕೆಲಸ ಮಾಡಿದ್ದಾರೆ. ಸಹಾಯ ಧನ, ಸಬ್ಸಿಡಿ, ಉಚಿತ ಇತ್ಯಾದಿ ಸರ್ಕಾರಿ ಪರಿಹಾರ, ಅನುದಾನಕ್ಕೆ ಮನಸ್ಸು ಮಾಡದೇ ಮಾನವೀಯತೆ ಮೆರೆದಿದ್ದಾರೆ.

 ಧಾರವಾಡ ತಾಲೂಕಿನ ಬಣದೂರು, ಘಳಗಿ ಹುಲಕೊಪ್ಪ ಹಾಗೂ ಮಾವಿನಕೊಪ್ಪದಲ್ಲಿ ಅರಣ್ಯ ಇಲಾಖೆ ವನ್ಯ ಜೀವಿಗಳಿಗಾಗಿ ‘ಓಯಾಸಿಸ್’ಗಳಂತಹ ನೀರಿನ ಆಸರೆ ನಿರ್ಮಿಸಿದೆ. ಚನ್ನಪ್ಪ ಮುಧೋಳ, ಯಲ್ಲಪ್ಪ ಚಿಕ್ಕಾಡಿ, ಎಂ.ಎನ್.ಮೊಕಾಶಿ ಮತ್ತು ಅರುಣ್ ಪತ್ತಾರ್ ಅವರಂತಹ ಹತ್ತಾರು ಜನ ರೈತರು, ತಮ್ಮ ಹೊಲದಲ್ಲಿರುವ ಸ್ವಂತ (ಖಾಸಗಿ) ಬೋರ್‌ವೆಲ್‌ಗಳಿಂದ ನೀರು ಹರಿಸಿ, ನೀರ್ಗುಂಡಿಗಳ ಮೂಲಕ ಪ್ರಾಣಿ-ಪಕ್ಷಿಗಳ ದಾಹ ತೀರಿಸುತ್ತಿದ್ದಾರೆ.

ಬಣದೂರಿನ ಕಾಡಿನಲ್ಲಿರುವ ನೀರ್ಗುಂಡಿಗೆ ರೈತ ಎಂ.ಎನ್.ಮೊಕಾಶಿ ಅವರು ೧೨ ಪಿವಿಸಿ ಪೈಪ್, ಜನರೇಟರ್, ವಿದ್ಯುತ್ ಒದಗಿಸಿ, ತಮ್ಮ ಹೊಲದಿಂದ ನೀರು ಸಾಗಿಸಿ ವನ್ಯ ಜೀವಿಗಳಿಗೆ ಆಸರೆಯಾಗಿದ್ದಾರೆ.

ಬಣದೂರಿನ ಇನ್ನೋರ್ವ ರೈತ ನಾಗಯ್ಯ ಗಿಡದಹುಬ್ಬಳ್ಳಿ ಅವರು, ಬರದ ಮುನ್ಸೂಚನೆ ಅರಿತವರು. ತಮ್ಮ ಹೊಲದ ಮಡುವುಗಳನ್ನು ಕೊಳವೆ ಬಾವಿ ನೀರಿನಿಂದ ತೋಯಿಸಿಕೊಂಡು, ಬಾಕಿ ನೀರನ್ನು ವನ್ಯ ಪ್ರಾಣಿಗಳಿಗಾಗಿ ಸ್ವಂತ ಖರ್ಚಿನಲ್ಲಿ ಕಾಡಂಚಿನಲ್ಲಿ ಹೊಂಡಗಳನ್ನು ನಿರ್ಮಿಸಿ, ಮಾನವೀಯತೆ ಮೆರೆದಿದ್ದಾರೆ.

ನಾಲ್ಕು ವರ್ಷಗಳ ಸತತ ಬರಗಾಲ4 (1)

ಧಾರವಾಡ ಜಿಲ್ಲೆಯಾದ್ಯಂತ ಕೃಷಿಯಲ್ಲಿ ಖುಷಿ ಉಳಿದಿಲ್ಲ. ರೈತಾಪಿ ವರ್ಗದ ಮೊಗದಲ್ಲಿ ಚಿಂತೆಯ ಗೆರೆಗಳು ದಿನೇ ದಿನೇ ದಟ್ಟವಾಗುತ್ತಿವೆ. ಮಳೆಯೇ ಇಲ್ಲದೆ ಜಲ ಮೂಲಗಳು ಬತ್ತಿ, ಅಂತರ್ಜಲ ಮಟ್ಟವೂ ಕಳವಳಕಾರಿ ಮಟ್ಟದಲ್ಲಿ ಕುಸಿದಿದೆ. ಬಹುತೇಕ ಕೊಳವೆ ಬಾವಿಗಳು ಬತ್ತಿವೆ. ಇಳುವರಿ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು ಎಂಬ ಸ್ಥಿತಿ.

ನೀರು-ಆಹಾರಕ್ಕೆ ಬಹುತೇಕ ಅರಣ್ಯದ ಮೇಲೆಯೇ ಅವಲಂಬಿತವಾಗಿರುವ ಕಾಡಿನ ಜೀವಗಳ ಪರಿಸ್ಥಿತಿ ನಮ್ಮ ಊಹೆಗೂ ನಿಲುಕದ್ದು. ಆಹಾರ ಅಭಾವ ಒಂದೆಡೆ; ಏರುತ್ತಿರುವ ತಾಪಮಾನ (೪೨ ರಿಂದ ೪೩ ಡಿಗ್ರಿ ಸೆಲ್ಶಿಯಸ್) ಅವುಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಬಾಯಾರಿಕೆಯಿಂದ ಬಳಲಿ, ಜೀವದ ಹಂಗು ತೊರೆದು ಕೃಷಿಕರ ಹೊಂಡಗಳಿಗೆ ನೀರು ಕುಡಿಯಲು ಬಂದು ಸಾಕು-ಕಾಡಾಡಿ-ಬೀಡಾಡಿ ನಾಯಿಗಳಿಗೆ ಬಲಿಯಾದ ಚುಕ್ಕೆ ಜಿಂಕೆಗಳ ಸಂಖ್ಯೆಯೂ ಕಳೆದ ಮೂರು ತಿಂಗಳಲ್ಲಿ ೧೨ ಮೀರಿದೆ.

ತಮ್ಮ ಕಷ್ಟದಲ್ಲೂ……

ಇನ್ನೊಬ್ಬರಿಗೆ ಕೈಲಾದ ಸಹಾಯ ಮಾಡುವ ರೈತರ ಮನೋಸ್ಥಿತಿ ಇಲ್ಲಿ ಮಾನವೀಯತೆಗೆ ಹೊಸ ಭಾಷ್ಯ ಬರೆದಿದೆ. ಅರಣ್ಯ ಇಲಾಖೆಯ ಕೋರಿಕೆ, ವನ್ಯ ಪ್ರಾಣಿ-ಪಕ್ಷಿಗಳ ದಯನೀಯ ಸ್ಥಿತಿ ನೋಡಿ ಮಮ್ಮಲ ಮರಗುವ ಮನಸ್ಸುಗಳಿಂದ ಭಗವಂತ ನರರೂಪದಲ್ಲಿದ್ದಾನೆ ಎಂಬುದು ಸಾಬೀತಾಗಿದೆ.

ವಲಯ ಅರಣ್ಯಾಧಿಕಾರಿ ಪಿ.ಕೆ. ವಿಜಯ್‌ಕುಮಾರ, ಮುತುವರ್ಜಿ ವಹಿಸಿ, ಗ್ರಾಮ ಅರಣ್ಯ ಸಮಿತಿಗಳ ಸಹಭಾಗಿತ್ವ, ಕಾಡಂಚಿನ ರೈತರ ಸಹಕಾರದಿಂದ ನೀರಿನಾಸರೆ ನಿರ್ಮಿಸಿ ವನ್ಯ ಜೀವಿಗಳನ್ನು ರಕ್ಷಿಸಲು ಯೋಜಿಸಿದಾಗ, ‘ಇಲ್ಲ’ ಎನ್ನಲು ಮನಸ್ಸಾಗಲಿಲ್ಲವಂತೆ ಯಲ್ಲಪ್ಪ, ಅರುಣ್ ಮತ್ತು ನಾಗಯ್ಯ ಅವರಂಥ ಹತ್ತಾರು ರೈತರಿಗೆ.

“ಕಾಡಿನ ತುದಿಗೆ ನಮ್ಮ ಹೊಲಗೋಳು ಅದಾವ್ರಿ.. ಅವುಗಳ ಪೋಲ್ಮಿ, ಜ್ವಾಪಾನ ಮಾಡೋದು ನಮ್ಮ ಧರ್ಮ. ಹಂಗಾಗಿ, ದೇವರ ಇಚ್ಛೆ.. ನಾನೂ ಸೇಕೊಂಡು ರೈತರೆಲ್ಲ ಕಾಡಿನ ಪ್ರಾಣಿ-ಪಕ್ಷಿಗೋಳಿಗೆ ನೀರುಣಿಸಾಕ ನಿಂತೆವು.. ನಮ್ಮ ಬೋರ್‌ವೆಲ್ ಬಂದಾಗಲಾರದ್ಹಾಂಗ ದೇವ್ರು ಕಾಪಾಡ್ಲಿ ಅನ್ನೋದ ಹರಕಿರೀ..” ಮಾತು ಮುಗಿಸಿದ್ರು.. ಬಣದೂರ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ, ಕೃಷಿಕ ಚನ್ನಪ್ಪ ಮುಧೋಳ.

ರೈತರ ಮನಸ್ಸು, ಹುಮ್ಮಸ್ಸು

2 (3)ಗಮನಿಸಿದ ಅರಣ್ಯ ಇಲಾಖೆ, ನೀರಿನ ಆಸರೆಗಳಿಗೆ ಆಗಾಗ ಬಂದು ಹೋಗುವ ಪ್ರಾಣಿ-ಪಕ್ಷಿಗಳ ಚಲನ ವಲನ ಹಾಗೂ ಗಣತಿಗಾಗಿ ನಾಲ್ಕು ಟ್ರಾಪಿಂಗ್ ಕ್ಯಾಮೆರ ಖರೀದಿಸಿ, ಅಳವಡಿಸಿದೆ. ಪ್ರತಿ ೧೫ ಸೆಕೆಂಡಿಗೆ ಒಂದು ಚಿತ್ರದಂತೆ ಮತ್ತು ಟ್ಯಾಪ್ ಕ್ಯಾಮೆರ ಎದುರು ಯಾವುದೇ ಚಲನಶೀಲ ಸಂಗತಿ ಅಡ್ಡ ಸಾಗಿದರೆ, ಇನ್‌ಫ್ರಾರೆಡ್ ಕಿರಣ ಸೋಕಿ, ಸೆನ್ಸಾರ್‌ಗೆ ಸಂದೇಶ ರವಾನೆಯಾಗಿ ಚಿತ್ರ ಕ್ಲಿಕ್ ಕ್ಲಿಕ್..!

ರೇಂಜರ್ ಟಿ.ಜಿ.ಧನವೆ ಅಭಿಪ್ರಾಯ ಪಡುವಂತೆ, “ರೈತರು ತುಂಬ ದೊಡ್ಡ ಮನಸ್ಸಿನವರು. ಈ ಭಾಗದ ಕೃಷಿಕರ ಈ ಸಹಕಾರ, ಉಳಿದೆಡೆ ಪ್ರೇರಣೆ ನೀಡಲಿದೆ. ಕಳೆದ ವರ್ಷ ನೀರಿನ ಆಸರೆಗಳೆಲ್ಲ ಬತ್ತಿ ಕಾಡಿನ ಜೀವಿಗಳ ಪ್ರಾಣ ಬಾಯಿಗೆ ಬಂದಿತ್ತು. ಈ ಬಾರಿ, ರೈತರ ಸಹಕಾರದಲ್ಲಿ ಇಲಾಖೆ ನೀರ್ಗುಂಡಿಗಳನ್ನು ನಿರ್ಮಿಸಿದ ಹಿನ್ನೆಲೆ, ಈ ಭಾಗದ ಕಾಡಿನಲ್ಲಿರುವ ಚಿರತೆ, ಕರಡಿ, ಜಿಂಕೆ, ಕೊಂಡುಕುರಿ, ಕಾಡುಕೋಣ ಹಾಗೂ ಮಂಗಗಳು ನಿರಾತಂಕವಾಗಿ ಬಂದು ದಾಹ ತೀರಿಸಿಕೊಂಡು ಕಾಡಿನಲ್ಲಿ ಕಣ್ಮರೆಯಾಗುತ್ತಿವೆ.”

ಆದರೆ, ಈ ನಿರಿನಾಸರೆಗಳು ಬೇಟೆಗಾರರಿಗೆ ಪ್ರಶಸ್ತ ಸ್ಥಳ!

ಹಾಗಾಗಿ, ವನ್ಯ ಜೀವಿಗಳು ನೀರ್ಗುಂಡಿಗಳಿಗೆ ದಾಹ ತಣಿಸಿಕೊಳ್ಳಲು ಆಗಮಿಸಿದಾಗ, ಅವಘಡ ಸಂಭವಿಸದಂತೆ ರಾತ್ರಿ ವೇಳೆ ಸಿಬ್ಬಂದಿಯ ಗಸ್ತು, ಸಿಸಿ ಟಿವಿ ಕ್ಯಾಮೆರ ಹಾಗೂ ಅರಣ್ಯ ಸಮಿತಿ7 ಸದಸ್ಯರ ನೆರವು ಪಡೆದು ನಿಯಂತ್ರಿಸಲಾಗುತ್ತಿದೆ. ಅಲ್ಲಲ್ಲಿ ಚೆಕ್ ಪೋಸ್ಟ್, ಬೇಟೆ ನಿರ್ಮೂಲನಾ ಘಟಕಗಳನ್ನೂ ಸಹ ತೆರೆದು, ಸುಸ್ಥಿಯಲ್ಲಿಡಲಾಗಿದೆ.

ವಾಚರ್‌ಗಳಾದ ಸಿರಾಜ್ ಟಕ್ಕದ್ ಹಾಗೂ ವಿನಾಯಕ ಮರೇವಾಡ ಅವರ ಮಾತಿನಲ್ಲಿ ರೈತರ ಪ್ರತಿ ಧನ್ಯತೆ ಇತ್ತು. “ಪ್ರತಿ ವರ್ಷ ಹತ್ತಾರು ಜಿಂಕೆ, ನವಿಲು ನೀರನ್ನ ಹುಡುಕಿ ನಾಡಿಗೆ ನುಗ್ಗಿ ಬಂದು ಅಕಾಲಿಕ ಸಾವನ್ನಪ್ಪುತ್ತಿದ್ದ ಪರಿಸ್ಥಿತಿ ನೋಡಿ, ಕಣ್ಣು ತುಂಬಿ ಬರುತ್ತಿದ್ದವು. ಈ ಬಾರಿ ನೀರಿನ ಹೊಂಡಗಳಿಂದಾಗಿ, ದುರಂತ ಅಂತ್ಯ ಕಾಣುವುದು ತಪ್ಪಿದಂತಾಗಿದೆ. ನೆಮ್ಮದಿಯಿಂದ ಕಾಡಿನಲ್ಲೇ ಅವು ಕಾಲಕಳೆಯುವಂತಾಗಿದ್ದು ನೆಮ್ಮದಿ ತಂದಿದೆ” ಎಂದರು.

ಅನುಕರಣೀಯ ಯೋಗ್ಯ ಈ ಪ್ರಯತ್ನ

ಈ ಪ್ರಯತ್ನದ ಹಿಂದೆ, ಅನೇಕ ಸುಮನಸ್ಸುಗಳ ಶ್ರಮವಿದೆ. ಪ್ರಚಾರ ಬಯಸದ ಚಿಕ್ಕ ಚಿಕ್ಕ ಹಣತೆಗಳು ಅಲ್ಲಲ್ಲಿ ಬೆಳಗಿವೆ. ಮೂಕ ಪ್ರಾಣಿ-ಹಕ್ಕಿಗಳ ಬವಣೆಗೆ ದನಿಯಾಗಬಯಸುವ ಸುಜನರ ಪಡೆಯೇ ಇದೆ.

‘ಮಾನವ ಪರಿಸರದ ಕೂಸು’ ಎಂಬ ಕ್ಲೀಷೆಗೆ, ಈಗ ನಿಜಕ್ಕೂ ಅರ್ಥ ಬಂದಿದೆ.

ಬರಗಾಲದಲ್ಲೂ ವನ್ಯ ಜೀವಿಗಳಿಗೆ ನೀರುಣಿಸಿದ ಮನಸ್ಸುಗಳನ್ನು ನೆನೆದು, ಅಭಿಮಾನ ನೂರ್ಮಡಿಯಾಗಿದೆ. ಇಂಥವರ ಸಂತತಿ ಸಾವಿರವಾಗಲಿ ಎಂದು ಮನಸ್ಸು ಹಾರೈಸಿದೆ.

ಚಿತ್ರ-ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ 

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*