ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೫೨: ಆದೇಶ ರಾಜ್ಯಪತ್ರದಲ್ಲಿ ಭದ್ರವಾಗಿ ಉಳಿದಿದೆ!

ಎನ್. ಲಕ್ಷ್ಮಣರಾವ್ ಸಮಿತಿ ನೀಡಿರುವ ವರದಿಯಂತೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೆರೆ ಅಂಗಳದಲ್ಲಿ ನಿರ್ಮಿಸುತ್ತಿರುವ ಬಡಾವಣೆಯನ್ನು ನಿಲ್ಲಿಸಿ, ಸಮಿತಿ ಶಿಫಾರಸ್ಸಿನಂತೆ ಅಲ್ಲಿ ಕೆರೆ ಸಂರಕ್ಷಿಸಬೇಕು

೧೯೮೮ರ ಜೂನ್ ೩೦ರಂದು ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆಯಿಂದ ಹೊರಡಿಸಿರುವ ಆದೇಶ ಇದು. ರಾಜ್ಯಪತ್ರದಲ್ಲಿ ಇದು ಪ್ರಕಟಗೊಂಡಿದೆ. ಅದರೆ, ಈ ಆದೇಶಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಿಮ್ಮತ್ತಿನ ಬೆಲೆಯನ್ನೂ ನೀಡಲಿಲ್ಲ. ಈವರೆಗೂ ಅದರ ಪಾಲನೆಗೆ ಮುಂದಾಗಿರುವುದು ಒಂದಟ್ಟಿಗಿರಲಿ, ಕೆರೆ ಉಳಿಸುವುದನ್ನು ಮತ್ತಷ್ಟು ಕೆರೆಗಳನ್ನು ಬಡಾವಣೆಗೆ ತೆಗೆದುಕೊಂಡಿದ್ದು ಮಾತ್ರ ಅತ್ಯಂತ ದೊಡ್ಡ ಕರ್ತವ್ಯ ಲೋಪ. ಸರ್ಕಾರದ ಆದೇಶವನ್ನೇ ಕಡೆಗಣಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೆರೆಗಳನ್ನು ನುಂಗಿಹಾಕಿದೆ.

LakshmanRao-Orderಆದೇಶ ಏನಿದೆ ನೋಡಿ: ಎನ್. ಲಕ್ಷ್ಮಣರಾವ್ ನಿವೃತ್ತ ಐಎಎಸ್ ಅಧಿಕಾರಿ. ಇವರ ನೇತೃತ್ವದಲ್ಲಿ ಬೆಂಗಳೂರು ನಗರದಲ್ಲಿರುವ ಕೆರೆಗಳನ್ನು ಸಂರಕ್ಷಿಸುವ, ಪುನರುಜ್ಜೀವನಗೊಳಿಸುವ ಉದ್ದೇಶದಿಂದ ತಜ್ಞರ ಸಮಿತಿಯನ್ನು ರಚಿಸಿದ್ದು, ಈ ತಜ್ಞರ ಸಮಿತಿ ನೀಡಿರುವ ಸಲಹೆಗಳನ್ನು ಸರ್ಕಾರ  ಒಪ್ಪಿಕೊಳ್ಳುತ್ತದೆ. ವರದಿಯಲ್ಲಿನ ಶಿಫಾರಸ್ಸಿನಂತೆ ಸಿನಿವಾಗಿಲು ಕೆರೆ, ಜಕ್ಕರಾಯನಕೆರೆ, ಬಿಳೇಕನಹಳ್ಳಿ ಕೆರೆ ಅಂದರೆ, ಉತ್ತರದ ದೊರೆಸಾನಿಪಾಳ್ಯ ಮತ್ತು ಜೆ.ಪಿ.ನಗರದ ಭಾಗದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಡಾವಣೆ ಮಾಡಿಕೊಳ್ಳಲು ಬಳಸಿಕೊಂಡಿದೆ. ಹೀಗಾಗಿ, ಅವುಗಳನ್ನು ಹೊರತುಪಡಿಸಿ,  ಈ ವರದಿಯಲ್ಲಿ ಅನುಬಂಧ ೨ ಮತ್ತು ೩ರಲ್ಲಿ ನೀಡಲಾಗಿರುವಂತೆ ಕೆರೆಗಳನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಲಾಗಿದೆ.

ಅಂದರೆ, ಈ ಮೂರು ಕೆರೆಗಳನ್ನು ಹೊರತುಪಡಿಸಿ ಎಂದು ಸರ್ಕಾರ ಅಂದೇ ಬಿಡಿಎಗೆ ನಿರೀಕ್ಷಣಾ ಜಾಮೀನು ನೀಡಿದಂತೆ ನೀಡಿಬಿಟ್ಟಿತ್ತು. ಅದನ್ನೇ ಬಂಡವಾಳವಾಗಿರಿಸಿಕೊಂಡ ಬಿಡಿಎ, ಆ ಮೂರು ಕೆರೆಗಳ ಜಾಗದಲ್ಲಿ ಸಮಿತಿ ನೀಡಿದ್ದ ಶಿಫಾರಸ್ಸುಗಳನ್ನು ಅನುಸರಿಸುವುದಕ್ಕೇ ಹೋಗಲಿಲ್ಲ. ಯಾವ ಕೆರೆಯಲ್ಲಿ ಏನು ಮಾಡಬೇಕೆಂದು ಸಮಿತಿ ಹೇಳಿದೆ ಎಂಬುದನ್ನು ವಿವರವಾಗಿ, ಕೆರೆಗಳ ಅನುಸಾರ ಮುಂದಿನ ನೋಟದಲ್ಲಿ ನೀಡುತ್ತೇನೆ.

ಕೆರೆಗಳನ್ನು ಬಳಕೆ ಇಲ್ಲದ, ಜೀವಂತವಾಗಿರುವ ಕೆರೆಗಳು ಎಂಬ ಎರಡು ವರ್ಗದಲ್ಲಿ ವಿಂಗಡಿಸಬಹುದಾಗಿದೆ. ಬೆಂಗಳೂರಿನಲ್ಲಿ ೪೬ ಬಳಕೆ ಇಲ್ಲದ ಕೆರೆಗಳಿವೆ. ಇವುಗಳನ್ನು ಹಲವು ಸಂಸ್ಥೆಗಳು ಹಲವು ಯೋಜನೆಗಳಿಗೆ ಈಗಾಗಲೇ ಬಳಸಿಕೊಂಡಿವೆ. LakshmanRao-Order (2)ತೋಟಗಾರಿಕೆ ಇಲಾಖೆ, ಬೆಂಗಳೂರು ನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಸಂಸ್ಥೆಗಳು ಈಗಾಗಲೇ ೧೦ ಕೆರೆಗಳನ್ನು ಬಳಸಿಕೊಂಡಿವೆ. ಈ ಕೆರೆಗಳ ಪ್ರದೇಶದಲ್ಲಿ ಕೆರೆಗಳನ್ನು ಉಳಿಸಿಕೊಳ್ಳುವುದು ಅತ್ಯಂತ ದುಬಾರಿ ಎಂದು ತಜ್ಞರ ಸಮಿತಿ ಹೇಳಿದೆ. ಅದಕ್ಕಾಗಿ ಈ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಕೂಡಲೇ ವೃಕ್ಷವನಗಳನ್ನು ಅಭಿವೃದ್ಧಿಪಡಿಸಬೇಕು. ಈ ವೃಕ್ಷವನಗಳು ಮನರಂಜನಾ ತಾಣಗಳೂ ಆಗಿ ನಗರದ ಜನರಿಗೆ ಬಳಕೆಯಾಗಬೇಕು. ಜತೆಗೆ, ಈ ಕೆರೆಗಳ ಪ್ರದೇಶವನ್ನು ಮತ್ತಷ್ಟು ಒತ್ತುವರಿ ಮಾಡಲು ಬಿಡಬಾರದು. ನೀರು ಹೊಂದಿರುವ ಕೆರೆಗಳನ್ನು ಬರಡು ಮಾಡಬಾರದು. ಅವುಗಳನ್ನು ಜಲಮೂಲವಾಗಿಯೇ ಉಳಿಸಿಕೊಳ್ಳಬೇಕು. ಈ ಜಲಮೂಲಗಳನ್ನು ಮಾಲಿನ್ಯಗೊಳಿಸಬಾರದು. ನಗರದ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ಕೆರೆಗಳ ಸುತ್ತಲೂ ಸಸಿಗಳನ್ನು ನೆಟ್ಟು ಕಾಪಾಡಬೇಕು.

ಹೀಗೆ, ಆದೇಶ ಹೊರಡಿಸುವ ಮುನ್ನದ ಪ್ರಸ್ತಾವನೆಯಲ್ಲಿ ಹೀಗೆಲ್ಲ ತಿಳಿಸಲಾಗಿದೆ. ಆದರೆ, ಬಹುತೇಕ ೩೦ ವರ್ಷದ ಹಿಂದಿನ ಈ ಆದೇಶ ರಾಜ್ಯಪತ್ರದ ಆದೇಶವಾಗಿಯೇ ಉಳಿದುಹೋಗಿರುವುದು ನಗರದ ದುರಂತ. ಹೀಗಾಗಿಯೇ ಬೆಂಗಳೂರು ಹವಾನಿಯಂತ್ರಿತ ನಗರವೆಂಬ ಹೆಗ್ಗಳಿಕೆಯನ್ನು ಕಳೆದುಕೊಂಡಿರುವುದು. ಲಕ್ಷ್ಮಣರಾವ್ ವರದಿ ಜಾರಿ ಮಾಡುತ್ತೇವೆ ಎನ್ನುವ ಜನಪ್ರತಿನಿಧಿಗಳ ಮಾತು ಎಷ್ಟು ನಿಜ ಯೋಚಿಸಿ? ೩೦ ವರ್ಷದ ಹಿಂದೆ ಭೂಮಾಫಿಯಾದ ಸೊಂಕೇ ಇಲ್ಲದ ನಗರದಲ್ಲಿ ಉಳಿಯದ ಕೆರೆಗಳು ಈಗ ಆ ಗಾತ್ರದಲ್ಲಿ ಮತ್ತೆ ಪ್ರತಿಷ್ಠಾಪನೆ ಸಾಧ್ಯವೇ?

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*