ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬಸವನಕಟ್ಟೆ ಕೆರೆಯ ಹೂಳೆತ್ತಿದವರು

ಗುಲ್ಬರ್ಗಾ ಜಿಲ್ಲೆಯ ಆಳಂದ ತಾಲೂಕಿನ ರುದ್ರವಾಡಿ ಗ್ರಾಮಕ್ಕೆ ನೀರುಣಿಸುತ್ತಿದ್ದ ಬಸವನಕಟ್ಟೆ ಕೆರೆ ಬತ್ತಿಹೋಗಿ ಹಲವಾರು ವರ್ಷಗಳೇ ಕಳೆದಿದ್ದುವು. ಕೊಳವೆಬಾವಿ, ನಗರೀಕರಣ – ಹೀಗೆ ಹಲವಾರು ಕಾರಣಗಳಿಗಾಗಿ ಆರು ಎಕರೆ ವಿಸ್ತೀರ್ಣದ ಬಸವನಕಟ್ಟೆ ಕೆರೆ ದಿನ ಕಳೆದಂತೆ ಕಸದ ತೊಟ್ಟಿಯಾಗಿ 3ಮಾರ್ಪಟ್ಟಿತ್ತು. ಪ್ರತಿಯೊಬ್ಬರೂ ಕೆರೆಗೆ ಕಸ -ಕಡ್ಡಿ, ತ್ಯಾಜ್ಯಗಳನ್ನು ಬಿಸಾಕುವ ಪ್ರಯತ್ನ ಮಾಡಿದರೇ ಹೊರತು, ಯಾರೂ ಕೂಡಾ ಕೆರೆಯಲ್ಲಿ ತುಂಬಿದ್ದ ಹೂಳನ್ನು ತೆಗೆಯುವ ಪ್ರಯತ್ನವನ್ನು ಮಾಡಲಿಲ್ಲ. ಪರಿಣಾಮವಾಗಿ ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಳೆರಾಯ ಅಬ್ಬರಿಸದ ಆಳಂದ ತಾಲೂಕಿನಲ್ಲಿ ನೀರಿಗಾಗಿ ಹಾಹಾಕಾರವೆದ್ದಿತ್ತು.

ಜಲಸಂರಕ್ಷಣೆಗಾಗಿ ಪ್ರತಿವರ್ಷ ಬೇರೆ ಬೇರೆ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ ವರ್ಷ ರುದ್ರವಾಡಿ ಗ್ರಾಮದಲ್ಲಿರುವ ಆರು ಎಕರೆ ವಿಸ್ತೀರ್ಣದ ಬಸವನಕಟ್ಟೆ ಕೆರೆಯ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಿದರು. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್. ಎಚ್.ಮಂಜುನಾಥ್‌ರವರ ಮಾರ್ಗದರ್ಶನದಂತೆ, ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ವರ್ಗದ ಮುಂದಾಳತ್ವದಲ್ಲಿ, ಊರಿನ ಕಸದ ತೊಟ್ಟಿಯಂತೆ ಹೂಳು ತುಂಬಿ ನೆಲಸಮವಾಗಿದ್ದ ಬಸವನಕಟ್ಟೆ ಕೆರೆಯನ್ನು ಮರಳಿ ಹಿಂದಿನ ಸ್ಥಿತಿಗೆ ತರುವ ಕೆಲಸಗಳಲ್ಲಿ ಊರಮಂದಿಯೂ ಕೈಜೋಡಿಸಿದರು. ಕಳೆದ ವರ್ಷ ಇಲ್ಲಿ ಚೆನ್ನಾಗಿ ಮಳೆ ಬಂದಿದೆ. ಮಳೆ ನೀರು ಆರು ಎಕರೆಯ 4ಕೆರೆಯಲ್ಲಿ ತುಂಬಿಕೊಂಡಿದೆ. ಪರಿಣಾಮವಾಗಿ ಈ ಬಾರಿ ಇಲ್ಲಿನ ನೀರ ಸಮಸ್ಯೆಯೊಂದು ಬಗೆಹರಿದಂತಾಗಿದೆ. ಕೆರೆಯ ಹೂಳೆತ್ತುವ ಕೆಲಸದಲ್ಲಿ ಎರಡು ಟಿಪ್ಪರ್ ಮತ್ತು ಇಪ್ಪತ್ತಾರು ಟ್ರ್ಯಾಕ್ಟರ್‌ಗಳು ೨೬೩ ಗಂಟೆಗಳ ಕಾಲ ದುಡಿದಿವೆ.

ಹೂಳೆತ್ತುವ ಕೆಲಸಗಳಲ್ಲಿ ಊರ ಮಂದಿ, ಜಿಲ್ಲಾ ಪಂಚಾಯತ್, ಮಾಜಿ ಶಾಸಕರು ಕೈಜೋಡಿಸಿದ್ದಾರೆ. ಧರ್ಮಸ್ಥಳದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಹೂಳೆತ್ತುವ ಕೆಲಸಗಳಿಗಾಗಿ ಐದು ಲಕ್ಷ ರೂಪಾಯಿಯನ್ನು ನೀಡಿದ್ದಾರೆ. ಗ್ರಾಮಸ್ಥರು ಕೆರೆಯ ಹೂಳನ್ನು ಸಾಗಿಸುವ ಕೆಲಸಗಳಿಗಾಗಿ ತಮ್ಮಲ್ಲಿದ್ದ ಟಿಪ್ಪರ್, ಟ್ರ್ಯಾಕ್ಟರ್‌ಗಳನ್ನು ಉಚಿತವಾಗಿ ನೀಡಿದ್ದಾರೆ. ಜಿಲ್ಲಾ ಪಂಚಾಯತ್‌ನವರು ಒಂದು ಲಕ್ಷ ರೂಪಾಯಿಯನ್ನು ನೀಡಿದ್ದಾರೆ. ಊರವರು ಹೂಳೆತ್ತುವ ಕೆಲಸಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಕೈಜೋಡಿಸಿದ್ದಾರೆ. ಕಳೆದ ವರ್ಷ ಸುರಿದ ಮಳೆನೀರು ಕೆರೆಯಲ್ಲಿ ಶೇಖರಣೆಯಾಗಿದೆ. ಕೆರೆ ಮತ್ತೆ ಹಿಂದಿನ ರೂಪ ಪಡೆದಿದೆ. ಈ ಗ್ರಾಮದ ಬತ್ತಿದ ತೊಂಬತ್ತು ಬಾವಿಗಳ ಪೈಕಿ, ಹದಿಮೂರು ಕೊಳವೆಬಾವಿಗಳಲ್ಲಿ ಜಲಮರುಪೂರಣವಾಗಿದೆ. ಆರು ಎಕರೆ ವಿಸ್ತೀರ್ಣದಲ್ಲಿ ಬರೋಬ್ಬರಿ ಹದಿನಾರು ಅಡಿ6 ಆಳದಲ್ಲಿ ತುಂಬಿದ ಹೂಳನ್ನು ಮೇಲಕ್ಕೆತ್ತಲಾಗಿದೆ. ಕೆರೆಯ ಹೂಳನ್ನು ಹತ್ತಿರದ ಹೊಲಗಳಿಗೆ ಊರಿನವರು ಕೊಂಡೊಗಿದ್ದಾರೆ. ಹೂಳಿನಿಂದ ರಸ್ತೆ ನಿರ್ಮಾಣವನ್ನು ಮಾಡಲಾಗಿದೆ. ಒಂದಷ್ಟು ರೈತರು ತಮ್ಮ ಕೃಷಿ ತೋಟಗಳಿಗೆ ಒಯ್ದು ಹಾಕಿದ್ದಾರೆ. ಕೆರೆಯ ಸುತ್ತಮುತ್ತಲಿನ ಏರುತಗ್ಗು ಪ್ರದೇಶಗಳನ್ನು ಸಮತಟ್ಟುಗೊಳಿಸಲಾಗಿದೆ.

7ಕಳೆದ ವರ್ಷ ನೀರಿಲ್ಲದೆ ಪರದಾಡುತ್ತಿದ್ದ ಅಲ್ಲಿನ ಜನತೆ ಈ ಬಾರಿ ಬೇಸಿಗೆಯಲ್ಲೂ ಕೃಷಿ ಚಟುವಟಿಕೆಯನ್ನು ಕೈಗೊಂಡಿದ್ದಾರೆ. ಕೆರೆ ಅಭಿವೃದ್ಧಿಯಿಂದ ಪ್ರಾಣಿ ಪಕ್ಷಿಗಳಿಗೂ ಸುಲಭವಾಗಿ ನೀರು ಎಟಕುವಂತಾಗಿದೆ. ಕೆರೆಗೆ ಪಂಪನ್ನು ಅಳವಡಿಸಬಾರದೆಂಬ ನಿಯಮವನ್ನು ಊರಿನವರೇ ಜಾರಿಗೊಳಿಸಿದ್ದಾರೆ. ಕೆರೆಯಲ್ಲಿ ನೀರಿದ್ದರೆ ಸಾಕು ತಮ್ಮ ಬಾವಿಗಳಲ್ಲಿ ಬೇಕಾದಷ್ಟು ನೀರು ಸಿಗುತ್ತದೆ ಎಂಬುವುದು ಇಲ್ಲಿನ ಗ್ರಾಮಸ್ಥರ ಅನುಭವದ ಮಾತು. ಕೆರೆಗಳ ಹೂಳೆತ್ತುವ ಕೆಲಸಗಳಲ್ಲಿ ಇತರರು ಕೈಜೋಡಿಸಿದ್ದಲ್ಲಿ ರಾಜ್ಯದ ನೀರಿನ ಸಮಸ್ಯೆಯೊಂದು ಸುಲಭವಾಗಿ ಬಗೆಹರಿಯುವುದರಲ್ಲಿ ಸಂಶಯಗಳಿಲ್ಲ.

                                                                       ಚಿತ್ರ-ಲೇಖನ: ಚಂದ್ರಹಾಸ ಚಾರ್ಮಾಡಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*