ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

‘ದೊಣೆ’ಗಳೆಂಬ ಪಾರಂಪರಿಕ ಜಲಮೂಲಗಳು

ತೆರೆದ ಬಾವಿ, ಸುರಂಗ, ಕಟ್ಟ, ಮದಕ, ಗುಂಡಾವರ್ತಿ, ಬಾವಡಿ, ಗೋಕಟ್ಟೆ, ಕಲ್ಯಾಣಿ, ಚಿಲುಮೆ, ತಲಪರಿಗೆ ಮುಂತಾದ ಹತ್ತಾರು ಪಾರಂಪರಿಕ ಜಲಮೂಲಗಳು ನಮ್ಮಲ್ಲಿವೆ. ‘ದೊಣೆ’ ಇವುಗಳ ಸಾಲಿಗೆ ಸೇರುವ ಮತ್ತೊಂದು ಪ್ರಮುಖ ಜಲಮೂಲ.done - mallikarjuna article photo

ಉಳಿದ ಜಲಮೂಲಗಳಿಗೂ ‘ದೊಣೆ’ಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ ಉಳಿದವು ಸಂಪೂರ್ಣ ಇಲ್ಲವೇ ಭಾಗಶಃ ಮಾನವ ನಿರ್ಮಿತವಾದರೆ, ದೊಣೆ ಸಂಪೂರ್ಣ ನೈಸರ್ಗಿಕ ಅಥವಾ ಪ್ರಕೃತಿ ನಿರ್ಮಿತ. ಆದರೆ ಕೆಲವೆಡೆ ದೊಣೆಗಳಿಗೆ ಇಳಿಯಲು ಸುಲಭವಾಗುವಂತೆ, ನೀರು ಕಲುಷಿತವಾಗದಂತೆ ಮೆಟ್ಟಿಲು ಇಲ್ಲವೇ ಕಲ್ಲುಕಟ್ಟಣೆ ಮಾಡಲಾಗಿರುತ್ತದೆ.

ದೊಣೆಗಳು ಸಾಮಾನ್ಯವಾಗಿ ಬೆಟ್ಟ-ಗುಡ್ಡಗಳಲ್ಲಿ, ಬಂಡೆಗಳ ಮೇಲೆ, ಬಂಡೆ ಸಂದುಗಳಲ್ಲಿ ಕಂಡುಬರುತ್ತವೆ. ರಾಜ್ಯದ ತುಮಕೂರು, ಕೋಲಾರ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಈ ರಚನೆಗಳಿಗೆ ದೊಣೆ ಎಂಬ ಹೆಸರಿದ್ದು, ಇತರೆ ಭಾಗಗಳಲ್ಲಿ ಬೇರೆ ಹೆಸರಿನಿಂದ ಕರೆಯುತ್ತಿರಬಹುದು ಎನಿಸುತ್ತದೆ. ಏಕೆಂದರೆ ಬೆಟ್ಟಗುಡ್ಡಗಳಿರುವೆಡೆಯೆಲ್ಲಾ ಈ ರಚನೆಗಳು ಇದ್ದೇ ಇರುತ್ತವೆ. ಕೆಲವೆಡೆ ದೇವಾಲಯಗಳ ಆಸುಪಾಸಿನಲ್ಲಿರುವ ದೊಣೆಗಳಿಗೆ ಧಾರ್ಮಿಕ ಮಹತ್ವ ನೀಡಲಾಗಿದ್ದು, ‘ತೀರ್ಥ’ ಎಂಬ ಹೆಸರಿರುವುದನ್ನು ಕಾಣಬಹುದು (ರಾಮತೀರ್ಥ, ಲಕ್ಷ್ಮಣ ತೀರ್ಥ ಇತ್ಯಾದಿ).

ಬೆಟ್ಟ-ಗುಡ್ಡ, ಬಂಡೆಗಳಲ್ಲಿ ನೈಸರ್ಗಿಕವಾಗಿ ಆಳದ ಗುಂಡಿ ನಿರ್ಮಿತವಾಗಿದ್ದು, ಇದರಲ್ಲಿ ನೀರು ಶೇಖರಣೆಯಾಗಿರುತ್ತದೆ. ಕ್ರಮೇಣ ಈ ನೀರನ್ನು ಬಳಸಲು ಆರಂಭಿಸಿರಬಹುದು ಎನಿಸುತ್ತದೆ. ಇವು ವಿವಿಧ ಆಕಾರ, ಅಳತೆ ಹಾಗೂ ಆಳ ಇರುವುದನ್ನು ಗಮನಿಸಬಹುದು. ಕೆಲವು ಕೇವಲ ಎರಡು ಅಡಿ ವ್ಯಾಸವಿದ್ದರೆ, ಇನ್ನು ಕೆಲವು ೨೦-೩೦ ಅಡಿ ವ್ಯಾಸವಿರುತ್ತವೆ. ಕೆಲವು ಕೇವಲ ಮೂರ್ನಾಲ್ಕು ಅಡಿ ಆಳವಿದ್ದರೆ ಇನ್ನು ಕೆಲವು ಐವತ್ತು ಅಡಿಯವರೆಗೂ ಆಳ ಇರುತ್ತವೆ.

ಈ ರಚನೆಗಳಲ್ಲಿ ಮಳೆ ನೀರು ಶೇಖರವಾಗಿ ಬಳಸಲ್ಪಡುತ್ತದೆ, ಅಥವಾ ಭೂಮಿ ಆಳದಲ್ಲಿರುವ ಶಿಲಾಪದರದ ನೀರೂ ಸಹ ಕೆಲವು ದೊಣೆಗಳ ಸಂಪರ್ಕಕ್ಕೆ ಬಂದಿರಬಹುದು ಎನ್ನುತ್ತಾರೆ ಭೂಗರ್ಭ ತಜ್ಞರು. ಶಿವಗಂಗೆ ಬೆಟ್ಟದಲ್ಲಿರುವ ದೊಣೆ ಶಿಲಾಪದರದ ನೀರಿನ ಮೂಲ ಹೊಂದಿರುವುದಕ್ಕೆ ಉತ್ತಮ ಉದಾಹರಣೆ. ಇದು ಧಾರ್ಮಿಕ ಮಹತ್ವ ಹೊಂದಿದೆ, ಇದಕ್ಕೆ ಕೈಹಾಕಿದಾಗ ನೀರು ತಾಕಿದರೆ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ. ಆದರೆ ಕೆಲವರು ಕೈಹಾಕಿದಾಗ ನೀರು ತಾಕುತ್ತದೆ, ಇನ್ನು ಕೆಲವರಿಗೆ ತಾಕುವುದಿಲ್ಲ. ಈ ವ್ಯತ್ಯಾಸಕ್ಕೆ ಕಾರಣ ಪಾಪ-ಪುಣ್ಯಗಳಲ್ಲ, ಬದಲಿಗೆ ಶಿಲಾಪದರದ ನೀರು. ನೀರು ಏರಿಳಿತವಾಗುವುದರಿಂದ ನೀರಿನ ಮಟ್ಟ ಏರಿದಾಗ ಕೈಹಾಕಿದವರಿಗೆ ತಾಕುತ್ತದೆ, ಇಳಿದಾಗ ಸಿಗುವುದಿಲ್ಲ.

ಇದೇ ರೀತಿ ಧಾರ್ಮಿಕ ಮಹತ್ವ ಪಡೆದುಕೊಂಡಿರುವ ಮತ್ತೊಂದು ದೊಣೆ ತುಮಕೂರು ಬಳಿಯ ದೇವರಾಯನದುರ್ಗದಲ್ಲಿರುವ ನಾಮದ ಚಿಲುಮೆ. ರಾಮಾಯಣದ ಶ್ರೀರಾಮನಿಗೂ ಇದಕ್ಕೂ ಸಂಬಂಧ ಕಲ್ಪಿಸಿರುವುದರಿಂದ, ಹೆಚ್ಚಿನ ಮಹತ್ವ ಬಂದಿದೆ. ಬೆಟ್ಟದ ಜಿನುಗು ನೀರು ಇದಕ್ಕೆ ಆಧಾರ, ಎಂದಿಗೂ ಬತ್ತುವುದಿಲ್ಲ ಎಂಬ ಜನರ ನಂಬಿಕೆ ಇತ್ತೀಚಿನ ವರ್ಷಗಳಲ್ಲಿ ಹುಸಿಯಾಗುತ್ತಿದೆ. ಕಡು ಬೇಸಿಗೆ ದಿನಗಳಲ್ಲಿ ನಾಮದ ಚಿಲುಮೆ ಒಣಗುವುದು ಸಾಮಾನ್ಯ ಸಂಗತಿ.

ತುಮಕೂರು ಜಿಲ್ಲೆ ಮಧುಗಿರಿಯ ಏಕಶಿಲಾ ಬೆಟ್ಟದಲ್ಲಿ ನವಿಲು ದೊಣೆ, ಭೀಮನ ದೊಣೆ, ತುಪ್ಪದ ದೊಣೆ ಮುಂತಾದ ಆಕರ್ಷಕ ಹೆಸರುಗಳ ದೊಣೆಗಳಿವೆ. ಈ ಬೆಟ್ಟದ ಪಕ್ಕದಲ್ಲಿರುವ ಆನಂದರಾಯನ ಗುಡ್ಡದ ಬಸವಣ್ಣನ ದೇವಸ್ಥಾನದ ಮುಂಭಾಗದಲ್ಲಿ ಒಂದು ದೊಣೆ ಇದ್ದು, ೩೦ ಅಡಿಯಷ್ಟು ಆಳವಿದೆ. ಸುಮಾರು ೬೦ ವರ್ಷಗಳ ಹಿಂದೆ ಇಲ್ಲಿ ದೇವಾಲಯ ನಿರ್ಮಿಸುವಾಗ ಈ ದೊಣೆಗೆ ಮೆಟ್ಟಿಲು ಹಾಗೂ ಕಲ್ಲುಕಟಣೆ ಮಾಡಲಾಗಿದೆ. ‘ ಕಳೆದ ೬೦ ವರ್ಷಗಳ ಅನುಭವದಲ್ಲಿ ಯಾವ ವರ್ಷವೂ ಇದರಲ್ಲಿ ನೀರು ಖಾಲಿಯಾಗಿಲ್ಲ’ ಎನ್ನುತ್ತಾರೆ ದೇವಾಲಯದ ಅರ್ಚಕರ ಮಡದಿ ರುದ್ರಮ್ಮ. ಇದೇ ತಾಲ್ಲೂಕಿನ ಬೋಡುಬಂಡೆಪಾಳ್ಯದ ಬಂಡೆ ಮೇಲೆ ಎರಡು ದೊಣೆಗಳಿವೆ, ಹಾಗೆಯೇ ಆಂಧ್ರದ ಅನಂತಪುರ ಜಿಲ್ಲೆ ರತ್ನಗಿರಿಯ ಬೆಟ್ಟದ ಮೇಲೆ ಹಲವು ದೊಣೆಗಳಿವೆ.

ದೊಣೆಗಳಲ್ಲಿರುವ ನೀರು ಸಾಮಾನ್ಯವಾಗಿ ತಣ್ಣಗಿರುತ್ತದೆ. ಬಂಡೆಗಳ ಸಂದುಗಳಲ್ಲಿ ನೀರು ಶೇಖರವಾಗಿರುವುದರಿಂದ ನೀರಿಗೆ ಸಹಜವಾಗಿಯೇ ತಣ್ಣಗಿನ ಗುಣ ಬಂದಿರುತ್ತದೆ.

ಪಶುಪಾಲನೆಗೆ, ದೇವಾಲಯಗಳಿಗೆ, ಪ್ರವಾಸಕ್ಕೆ ಹಾಗೂ ಇನ್ನಿತರ ಕೆಲಸಗಳಿಗಾಗಿ ಬೆಟ್ಟಗುಡ್ಡಗಳಿಗೆ ಬರುವವರಿಗೆ ಶತಮಾನಗಳಿಂದ ನೀರಿನಾಸರೆ ಒದಗಿಸುತ್ತಿದ್ದ ದೊಣೆಗಳು ಅತ್ಯಪೂರ್ವ ಜಲಮೂಲಗಳು. ಕಾಡುಪ್ರಾಣಿಗಳ ಬಾಯಾರಿಕೆಯನ್ನು ತೀರಿಸಿದ ಹೆಗ್ಗಳಿಕೆಯೂ ದೊಣೆಗಳಿಗೆ ಇದೆ. ಆದರೆ ಇವುಗಳ ಪ್ರಾಮುಖ್ಯತೆಯ ಅರಿವು ಇಂದು ಕಡಿಮೆಯಾಗುತ್ತಿದೆ. ಅವುಗಳಿಗೆ ಪ್ಲಾಸ್ಟಿಕ್, ಕಲ್ಲು ಕಸ ತುಂಬುತ್ತಿರುವುದನ್ನು ಕಾಣುತ್ತಿದ್ದೇವೆ. ಜಲ್ಲಿ ಕಲ್ಲು ಹಾಗೂ ಗಣಿಗಾರಿಕೆಗಾಗಿ ಬೆಟ್ಟಗುಡ್ಡ, ಬಂಡೆಗಲ್ಲುಗಳನ್ನು ನೆಲಸಮ ಮಾಡುತ್ತಿರುವುದೂ ದೊಣೆಗಳ ನಿರ್ನಾಮಕ್ಕೆ ಕಾರಣವಾಗಿದೆ.

ಚಿತ್ರ-ಲೇಖನ: ಮಲ್ಲಿಕಾರ್ಜುನ ಹೊಸಪಾಳ್ಯ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*