ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೫೧: ಮಾಲಿನ್ಯ ರಹಿತ ಕೆರೆ- ಜಲಮಂಡಳಿ ಜವಾಬ್ದಾರಿ!!!

ಬೆಂಗಳೂರಿನಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಬಹಳಷ್ಟು ಕೆರೆಗಳಿವೆ. ಅದರಲ್ಲಿ ಕೆಲವು ಜೀವಂತವಾಗಿವೆ, ಇನ್ನು ಕೆಲವು ಒಣಗಿಹೋಗಿವೆ. ಎಲ್ಲ ಜಲ ಮೂಲಗಳನ್ನು ಸಂರಕ್ಷಿಸಲು, ಪುನರುಜ್ಜೀವನಗೊಳಿಸಲು, ಪರಿಸರವನ್ನು ಉಳಿಸಿ, ನಿರ್ವಹಣೆ ಮಾಡಲು, ರಾಜ್ಯ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಎನ್. ಲಕ್ಷ್ಮಣರಾವ್ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ೧೯೮೫ರ ಜುಲೈ ೨೬ರಂದು ರಚಿಸಿತ್ತು. ಈ ಸಮಿತಿLakshmanRao Report-1 ಕೆರೆಗಳ ಪರಿಸ್ಥಿತಿಯನ್ನು ವಿಮರ್ಶೆ ಮಾಡಿ, ಸರ್ಕಾರಕ್ಕೆ ತನ್ನ ಸಲಹೆಗಳನ್ನು ನೀಡಿದೆ…..


ಹೀಗೆಂದು ೧೯೮೮ರ ಜೂನ್ ೩೦ರ ರಾಜ್ಯಪತ್ರ (ಸಂಪುಟ ೧೨೩, ಸಂಚಿಕೆ ೩೦) ಆರಂಭವಾಗುತ್ತದೆ. ಲಕ್ಷ್ಮಣರಾವ್ ಸಮಿತಿ ನೀಡಿದ ವರದಿಯನ್ನು ಎರಡು ಅನುಬಂಧವಾಗಿ ನೀಡಲಾಗಿದೆ. ಒಂದರಲ್ಲಿ ಶಿಫಾರಸ್ಸುಗಳನ್ನು ಪ್ರಕಟಿಸಲಾಗಿದ್ದರೆ, ಮತ್ತೊಂದರಲ್ಲಿ ಕೆರೆಗಳ ಹೆಸರು, ಅದರ ವ್ಯಾಪ್ತಿ, ನೋಂದಣಿ ಸಂಖ್ಯೆ, ಎಲ್ಲಿವೆ, ಸಿಡಿಪಿಯಲ್ಲಿ ಏನಾಗಿದೆ, ಅದನ್ನು ಹೇಗೆ ರಕ್ಷಿಸಬಹುದು, ಯಾರ ಒಡೆತನದಲ್ಲಿದೆ ಎಂಬ ಮಾಹಿತಿ ನೀಡಲಾಗಿದೆ. ಮೊದಲಿಗೆ ಲಕ್ಷ್ಮಣರಾವ್ ನೇತೃತ್ವದ ತಜ್ಞರ ಸಮಿತಿ ನೀಡಿದ ೧೨ ಶಿಫಾರಸ್ಸುಗಳೇನು ಎಂಬುದನ್ನು ನೋಡೊಣ:

 1. ಈಗಿರುವ ಕೆರೆಗಳು ಅಂತರ್ಜಲವನ್ನು ಮರುಪೂರಣ ಮಾಡುತ್ತಿದ್ದು, ಇವುಗಳ ಕೆಳಭಾಗದಲ್ಲಿರುವ ವಸತಿ ಪ್ರದೇಶ ಅಥವಾ ಕೈಗಾರಿಕೆ ಪ್ರದೇಶಗಳಿಗೆ, ಬಾವಿ ಅಥವಾ ಕೊಳವೆಬಾವಿಗಳ ಮೂಲಕ ನೀರು ನೀಡುತ್ತಿವೆ. ಈಗಿರುವ ಕೆರೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚದೆ, ಅವುಗಳನ್ನು ಜಲಮೂಲಗಳನ್ನಾಗಿಯೇ ಉಳಿಸಿಕೊಳ್ಳಬೇಕು.
 2. ಈ ಕೆರೆಗಳಿಗೆ ತ್ಯಾಜ್ಯ ನೀರು ಮತ್ತು ಕೈಗಾರಿಕೆ ತ್ಯಾಜ್ಯಗಳನ್ನು ಹರಿಸುವ ಮೂಲಕ, ಇವುಗಳು ಮಾಲಿನ್ಯವಾಗದಂತೆ ತಡೆಗಟ್ಟಬೇಕು.
 3. ಮುಂದುವರಿದು, ಈ ಕೆರೆಗಳಲ್ಲಿ ಹೂಳು ತುಂಬುವುದನ್ನು ತಡೆಯಲು, ತೀರದ ಪ್ರದೇಶವನ್ನು ಅಭಿವೃದ್ಧಿ ಮಾಡಬೇಕು. ಎಲ್ಲ ರೀತಿಯ ಒತ್ತುವರಿಯನ್ನು ತೆರವು ಮಾಡಿ, ಬೃಹತ್ ಪ್ರಮಾಣದಲ್ಲಿ ಸಸಿಗಳನ್ನು ನೆಡಬೇಕು.
 4. ಈಗಾಗಲೇ ಮುಚ್ಚಲಾಗಿರುವ ಕೆರೆಗಳ ಜಾಗವನ್ನು ವಸತಿ ನಿವೇಶನಗಳನ್ನು ಮಾಡುವುದಕ್ಕೆ ಉಪಯೋಗಿಸಬಾರದು. ಬದಲಿಗೆ, ಆ ಪ್ರದೇಶವನ್ನು ಸಸ್ಯ ಉದ್ಯಾನಗಳನ್ನಾಗಿ (ವೃಕ್ಷವನ / ಟ್ರೀ ಪಾರ್ಕ್) ಸೃಷ್ಟಿಸಬೇಕು.
 5. ಈಗಿರುವ ಕೆರೆಗಳಲ್ಲಿರುವ ಕಳೆಯನ್ನು ನಿವಾರಿಸಬೇಕು ಮತ್ತು ಜಲಜೀವಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು.
 6. ಅಚ್ಚುಕಟ್ಟು ಪ್ರದೇಶ ಇಲ್ಲದ ಕೆರೆಗಳನ್ನು ಅರಣ್ಯ ಇಲಾಖೆಗೆ ವಹಿಸಿಕೊಟ್ಟು, ಸಸಿಗಳನ್ನು ನೆಡುವಂತೆ ಸೂಚಿಸಬೇಕು. ಅರಣ್ಯ ಇಲಾಖೆ ವೃಕ್ಷವನ (ಟ್ರೀ ಪಾರ್ಕ್) ಅಥವಾ ತೀರದ ಪ್ರದೇಶಗಳಲ್ಲಿ ಸಸ್ಯಗಳನ್ನು ಹಾಕುವ ಕಾರ್ಯಕ್ರಮಗಳನ್ನು ನಡೆಸುವ ಮೂಲಕ, ಪ್ರಾದೇಶಿಕ ಉದ್ಯಾನಗಳನ್ನು ನಿರ್ಮಿಸಬೇಕು. ಈ ಶಿಫಾರಸ್ಸನ್ನು ಅನುಷ್ಠಾನಗೊಳಿಸಲು ಅರಣ್ಯ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಸೂಕ್ತ ಹಣವನ್ನು ಹಂಚಿಕೆ ಮಾಡಬೇಕು ಎಂದು ಸಮಿತಿ ಸರ್ಕಾರಕ್ಕೆ ಸಲಹೆ ನೀಡುತ್ತದೆ.
 7. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ / ಬೆಂಗಳೂರು ನಗರ ಪಾಲಿಕೆ / ಸಣ್ಣ ನೀರಾವರಿ ಇಲಾಖೆಗಳು ಕೆರೆಗಳಲ್ಲಿನ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು.
 8. ಸಮಿತಿ ನೀಡಿರುವ ಈ ಶಿಫಾರಸ್ಸುಗಳು ಅನುಷ್ಠಾನವಾಗುವುದನ್ನು ಆಗಾಗ್ಗೆ ಮೇಲ್ವಿಚಾರಣೆನಡೆಸಲು, ಸರ್ಕಾರ ಒಂದು ಏಜೆನ್ಸಿಯನ್ನು ಸ್ಥಾಪಿಸಬೇಕು. ಇದಕ್ಕಾಗಿ, ಅರಣ್ಯ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ನಗರ ಪಾಲಿಕೆ, ಸಣ್ಣ ನೀರಾವರಿ ಇಲಾಖೆ, ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ, ನಗರ ಯೋಜನೆ ಇಲಾಖೆಗಳನ್ನು ಈ ಏಜೆನ್ಸಿ ಒಳಗೊಂಡಿರಬೇಕು.
 9. ಬೆಂಗಳೂರು ನಗರಪಾಲಿಕೆ ಅಥವಾಇತರೆ ಯಾವುದಾದರೂ ಸೂಕ್ತ ಏಜೆನ್ಸಿಗೆ ಸೊಳ್ಳೆಗಳ ನಿಯಂತ್ರಣದ ಕಾರ್ಯವನ್ನು ವಹಿಸಬೇಕು.
 10. ಕೆರೆಗಳು ಸ್ವಚ್ಛ ಹಾಗೂ ಸುರಕ್ಷಿತ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯದ್ದಾಗಿದೆ. ಕೆರೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ, ಅಂತರ್ಜಲವನ್ನು ವೃದ್ಧಿಸಬಹುದು. ಇದರಿಂದ ಮುಂದಿನ ದಿನಗಳಲ್ಲಿ ಬೋರ್ ವೆಲ್ ಗಳ ಮೂಲಕ ನೀರನ್ನು ಪಡೆಯಬಹುದಾಗಿದೆ.
 11. ಸ್ವಾಭಾವಿಕ ಅಥವಾ ಪ್ರಾಕೃತಿಕ ಕಣಿವೆಗಳ ಮೂಲಕ ನೀರು ಹರಿಸುತ್ತಿರುವ ಪ್ರದೇಶದಲ್ಲಿ ಹೊಸ ಕೆರೆಗಳನ್ನು ನಿರ್ಮಿಸುವ ಸಾಧ್ಯತೆಗಳನ್ನು ಪರಾಮರ್ಶಿಸಿ, ಅದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಕೆರೆಗಳನ್ನು ಯಶಸ್ವಿಯಾಗಿ ಮರುಸ್ಥಾಪಿಸಿದ ಮೇಲೆ ಅಥವಾ ಪುನರುಜ್ಜೀವನಗೊಳಿಸಿದ ಮೇಲೆ, ಆ ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ಮನರಂಜನಾ ಚಟುವಟಿಕೆ ಮತ್ತು ಪ್ರವಾಸಿ ಚಟುವಟಿಕೆಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು. ಇದರಲ್ಲಿ, ರೆಸ್ಟೋರೆಂಟ್, ವಿರಾಮ ಸ್ಥಳ, ಶೌಚಾಲಯಗಳಿರಬೇಕು.
 12. ಶಿನಿವಾಗಿಲು ಕೆರೆ ಮತ್ತು ಜಕ್ಕಸಂದ್ರ ಕೆರೆಗಳ ದಡಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಅಲ್ಲಿ ಬಡಾವಣೆಯನ್ನು ನಿರ್ಮಿಸಲು ಆರಂಭಿಸಿದೆ. ಸರ್ಕಾರ ಇಲ್ಲಿ ಬಡಾವಣೆಯನ್ನು ನಿರ್ಮಿಸಲು ಅನುಮತಿಯನ್ನೂ ನೀಡಿದ್ದು, ಹೂಡಿಕೆಯೂ ಮಾಡಲಾಗಿದೆ.

LakshmanRao Report-2ಹೀಗಿದ್ದರೂ, ಸರ್ಕಾರದ ಆದೇಶ ಎಚ್.ಯು.ಡಿ ೭೯೪ ಟಿಟಿಪಿ ೮೫ ದಿನಾಂಕ ೩೧-೧೨-೧೯೮೫ರ ಪ್ರಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಗಲಿ ಅಥವಾ ಇನ್ನಿತರೆ ಯಾವುದೇ ಸಂಸ್ಥೆಯಾಗಲಿ, ಕೆರೆಯಲ್ಲಿ ಬಡಾವಣೆ ನಿರ್ಮಿಸಲು ಅನುಮತಿ ಇಲ್ಲ ಎಂದು ಹೇಳಿದೆ. ಆದ್ದರಿಂದ, ಈ ಸಮಿತಿ, ಸಿಡಿಪಿ ಆಧಾರದಂತೆ ಮತ್ತು ಸರ್ಕಾರ ಈಗಾಗಲೇ ನೀಡಿರುವ ಸೂಚನೆಯನ್ನು ಮನಗೊಂಡು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಸಲಹೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಮಿತಿ ಅಭಿಪ್ರಾಯಪಡುತ್ತದೆ. ಸಣ್ಣ ನೀರಾವರಿ ಇಲಾಖೆ ಪ್ರತಿನಿಧಿಗಳು ಕೂಡ ಅಭಿವೃದ್ಧಿ ಪ್ರಾಧಿಕಾರಗಳು ಕೆರೆಗಳನ್ನು ಒತ್ತುವರಿ ಮಾಡಿ ಅಭಿವೃದ್ಧಿಯನ್ನು ಮಾಡುತ್ತಿವೆ ಎಂದು ಹಲವು ಬಾರಿ ಹೇಳಿದ್ದಾರೆ. ಅಲ್ಲದೆ, ಈ ಸಂಬಂಧ ಸಣ್ಣ ನೀರಾವರಿ ಇಲಾಖೆಗೆ ಮಾಹಿತಿಯನ್ನೂ ನೀಡಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಇಂತಹ ಸಂದರ್ಭಗಳಲ್ಲಿ, ಸಣ್ಣ ನೀರಾವರಿ ಇಲಾಖೆಯ ಅಭಿಪ್ರಾಯವನ್ನೂ ಪರಿಗಣಿಸಲಾಗಿದೆ. ಅಭಿವೃದ್ಧಿ ಪ್ರಾಧಿಕಾರಗಳು ಯಾವುದೇ ರೀತಿಯ ಸಲಹೆ ಅಥವಾ ಸಮ್ಮತಿಯನ್ನು ಪಡೆದುಕೊಳ್ಳದೆ ಕೆರೆ ಪ್ರದೇಶದಲ್ಲಿ ಪ್ರಾಧಿಕಾರಗಳು ಅಭಿವೃದ್ಧಿ ಮಾಡುತ್ತಿವೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಇದಲ್ಲದೆ, ಕ್ವಾರಿ ಗಣಿಗಳಿಗೆ ಸಂಬಂಧಿಸಿದಂತೆ, ಇಲ್ಲಿ ನೀರು ನಿಂತು, ಮಾಲಿನ್ಯ ಸೃಷ್ಟಿಯಾಗುತ್ತಿದೆ. ಈ ಕ್ವಾರಿಗಣಿಗಳನ್ನು ಭಾಗಶಃ ತುಂಬಿ, ನೀರು ತುಂಬುವಂತೆ ಮಾಡಿ, ವೃಕ್ಷವನಗಳನ್ನು ಅಭಿವೃದ್ಧಿಮಾಡಬೇಕು. ಈ ಕೆಲಸವನ್ನು ಬೆಂಗಳೂರು ನಗರಪಾಲಿಕೆ ಅಥವಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೊಳ್ಳಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*