ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೫೦: ಕೆರೆಗಳ ಬಗ್ಗೆ ಲಕ್ಷ್ಮಣರಾವ್ ವರದಿ ಹೇಳುವುದೇನು?

ಕೆರೆಗಳ ಅಭಿವೃದ್ಧಿ ವಿಷಯ ಅಥವಾ ಒತ್ತುವರಿ ವಿಷಯ ಬಂದಾಗೆಲ್ಲಾ ಲಕ್ಷ್ಮಣರಾವ್ ವರದಿ ಏನೇಳುತ್ತೇ ಗೊತ್ತೇ? ಅದರಲ್ಲಿರುವಂತೆ ಅಭಿವೃದ್ಧಿ ಮಾಡುತ್ತೇವೆ. ಅದನ್ನೇ ಪಾಲುಸುತ್ತೇವೆ ಎಂದು ಮುಖ್ಯಮಂತ್ರಿಯಾದಿಯಾಗಿ, ಕಟ್ಟಕಡೆಯ ಅಧಿಕಾರಿಯೂ ಹೇಳುತ್ತಾರೆ. ಆ ವರದಿಯಲ್ಲಿ ಏನಿದೆ ಗೊತ್ತೆ? ಅಸಲಿಗೆ ಲಕ್ಷ್ಮಣರಾವ್ ಅವರು  ನೀಡಿರುವುದು ಒಂದು ವರದಿಯಲ್ಲ, ಎರಡು ವರದಿ!

N Lakshman Rauಲಕ್ಷ್ಮಣ ರಾವ್ ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳುತ್ತಾರಲ್ಲ ಯಾವ ವರದಿ ಎಂದು ಯಾರೂ ಹೇಳುತ್ತಿಲ್ಲ. ಏಕೆಂದರೆ ಲಕ್ಷ್ಮಣರಾವ್ ವರದಿಯನ್ನು ಸರ್ಕಾರ ಒಪ್ಪಿಕೊಂಡು, ಅದರ ಸಲಹೆಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಆದೇಶ ಹೊರಡಿಸಿ ೨೯ ವರ್ಷವೇ ಕಳೆದಿವೆ. ಆದರೆ ಆ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಅಷ್ಟೇ ಅಲ್ಲ, ವರದಿ ಒಪ್ಪಿಕೊಂಡು, ಅವರ ಸಲಹೆ, ಶಿಫಾರಸ್ಸುಗಳನ್ನು ಅನುಷ್ಠಾನಗಳಿಸುವ ಆದೇಶವಾದ ಐದು ವರ್ಷದ ನಂತರ, ಮತ್ತೆ ಕೆರೆಗಳ ಸಂರಕ್ಷಣೆಗೆ ಹಾಗೂ ಬೆಂಗಳೂರು ನಗರದ ಸೌಂದರ್ಯ ಕಾಪಾಡಲು ಉನ್ನತ ಮಟ್ಟದ ಸಮಿತಿಯನ್ನೂ  ಎನ್. ಲಕ್ಷ್ಮಣರಾವ್ ಅಧ್ಯಕ್ಷತೆಯಲ್ಲೇ ರಚಿಸುತ್ತದೆ. ಪರಿಸರ ಕಾಳಜಿಯುಳ್ಳ ಲಕ್ಷ್ಮಣರಾವ್ ಬೆಂಗಳೂರಿನ ಜಲಮೂಲಗಳನ್ನು ರಕ್ಷಿಸುವ ಜೊತೆಗೆ, ಉದ್ಯಾನಗಳನ್ನೂ ಹೇಗೆ ಹೆಚ್ಚು ಸಮೃದ್ಧಗೊಳಿಸಬೇಕು ಎಂಬ ಸಲಹೆ, ಶಿಫಾರಸ್ಸುಗಳನ್ನು ಸಮಿತಿ ಮೂಲಕ ಸರ್ಕಾರಕ್ಕೆ ಸಲ್ಲಿಸುತ್ತಾರೆ. ದುರಂತವೆಂದರೆ, ಲಕ್ಷ್ಮಣರಾವ್ ಅವರು ಸಲ್ಲಿಸಿದ ಎರಡೂ ವರದಿಗಳನ್ನು ಸರ್ಕಾರ ಅಂಗೀಕರಿಸಿದರೂ ಅದರ ಅನುಷ್ಠಾನಕ್ಕೆ ಅಗತ್ಯವಾದ ಆದೇಶ ಅಥವಾ ಕ್ರಮ ಕೈಗೊಳ್ಳಲೇ ಇಲ್ಲ. ಅದಕ್ಕೇ ೨೯ ವರ್ಷಗಳ ನಂತರವೂ ಬೆಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿ ಅಥವಾ ಸಂರಕ್ಷಣೆ ಎಂದ ಕೂಡಲೇ, ಅಧಿಕಾರದಲ್ಲಿ ಇರುವವರಿಗೆಲ್ಲ ಲಕ್ಷ್ಮಣರಾವ್ ಹೆಸರು ಜ್ಞಾಪಕಕ್ಕೆಬರುತ್ತದೆ. ಆದರೆ, ಈಗ ಆ ಆಶ್ವಾಸನೆ ನೀಡಿರುವ ಯಾರೊಬ್ಬರೂ ಅವರು ನೀಡಿರುವ ವರದಿಯನ್ನು ನೋಡಿಯೇ ಇಲ್ಲ. ಎಷ್ಟು ವರದಿಗಳಿವೆ, ಏನೇನು ಶಿಫಾರಸ್ಸುಗಳಿವೆ ಎಂಬುದರ ಬಗ್ಗೆ ಮಾಹಿತಿಯೇ ಇವರಲ್ಲಿ ಇಲ್ಲ. ಅದಕ್ಕೇ ಬೆಂಗಳೂರಿನ ಕೆರೆಗಳ ಸ್ಥಿತಿ ಹೀಗಿರುವುದು.

ಲಕ್ಷ್ಮಣರಾವ್ ಅವರ ಸಮಿತಿ ರಚನೆ ಹಾಗೂ ಅವುಗಳ ಶಿಫಾರಸ್ಸುಗಳು ಏನು ಎಂಬುದನ್ನು ಈ ನೋಟದಿಂದ ಸಂಕ್ಷಿಪ್ತ, ಬೇಡ ಬಹುತೇಕ ಸಮಗ್ರವಾಗಿಯೇ ನೀಡುತ್ತೇನೆ. ಸಂಕ್ಷಿಪ್ತ ಎಂದರೆ ಮತ್ತಷ್ಟು ಮೊಟಕುಗೊಳಿಸಿದಂತಾಗುತ್ತದೆ. ಲಕ್ಷ್ಮಣರಾವ್ ಸಮಿತಿ ನೀಡಿದ ವರದಿಗಳನ್ನು ಪ್ರತ್ಯೇಕವಾಗಿಯೇ ನೀಡುತ್ತೇನೆ. ಮೊದಲಿಗೆ ೧೯೮೫ರಲ್ಲಿ ರಚನೆಗೊಂಡ ಸಮಿತಿಯ ಮಾಹಿತಿಗಳನ್ನು ನೀಡುತ್ತೇನೆ. ನಂತರ ೧೯೯೨ರಲ್ಲಿ ರಚನೆಯಾದ ಉನ್ನತಮಟ್ಟದ ಸಮಿತಿ ವರದಿ ಹಾಗೂ ಶಿಫಾರಸ್ಸುಗಳನ್ನು ನೀಡುತ್ತೇವೆ. ಎರಡೂ ವರದಿಯಲ್ಲಿ ಕೆರೆಗಳ ಪಟ್ಟಿ ಹಾಗೂ ಅವುಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಮಾಹಿತಿ ಒಂದೇ ಇದೆ. ಆದ್ದರಿಂದ, ಎರಡನೇ ವರದಿಯ ಮಾಹಿತಿ ನೀಡುವಾಗ, ಕೆರೆಗಳ ಹೆಸರು, ಯಾವ ರೀತಿ ಅಭಿವೃದ್ಧಿ, ಅಲ್ಲೇನಿದೆ ಎಂಬ ಸಮಗ್ರ ಮಾಹಿತಿಯನ್ನೂ ನೀಡಲಾಗುತ್ತದೆ. ಮೊದಲು ಪ್ರಥಮ ಸಮಿತಿ ರಚನೆ ಬಗ್ಗೆ ಅವಲೋಕಿಸೋಣ.

೧೯೮೫ರಲ್ಲಿ ಲೋಕೋಪಯೋಗಿ ಇಲಾಖೆಯ ಆದೇಶ (ಸಂಖ್ಯೆ ಪಿಡಬ್ಲ್ಯುಡಿ/೮೨/ಐಎಂಬಿ/೮೫ ದಿನಾಂಕ ೧೧/೦೨/೧೯೮೫ರ) ವನ್ನು ಉಲ್ಲೇಖಿಸಿ, ಸರ್ಕಾರ ಸರ್ಕಾರದ ಆದೇಶ (ಸಂಖ್ಯೆ ಪಿಡಬ್ಲ್ಯುಡಿ/೮೨ಐಎಂಬಿ/೮೫ ದಿನಾಂಕ ೨೬/೦೬/೧೯೮೫) ರೀತ್ಯ, ಬೆಂಗಳೂರು ಮಹಾನಗರದ ಕೆರೆಗಳನ್ನು ಸಂರಕ್ಷಿಸುವ, ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಮತ್ತು ಹಾಲಿ ಕೆರೆಗಳ ಜಾಗದಲ್ಲಿ ಅಪೇಕ್ಷಣೀಯ ವಾತಾವರಣ ಉಳಿಯುವಂತೆ ಮಾಡುವಲ್ಲಿ ಇರುವ ತೊಡಕುಗಳು ಮತ್ತು ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ನಿವೃತ್ತ ಐ..ಎಸ್ ಅಧಿಕಾರಿ            ಎನ್. ಲಕ್ಷ್ಮಣರಾವ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಕೆರೆಗಳ ಸಮಗ್ರ ಅಧ್ಯಯನ ನಡೆಸಿ ರಾಜ್ಯ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿತು. ಈ ವರದಿಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರ ೧೯೮೮ರ ಜನವರಿ ೨೭ರಂದು ರಾಜ್ಯಪಾಲರ ಆದೇಶದಂತೆ, ಶಿಫಾರಸ್ಸುಗಳ ಅನುಷ್ಠಾನಕ್ಕೆ ರಾಜ್ಯಪತ್ರ ಪ್ರಕಟಿಸಿತು. ಈ ಅಧಿಸೂಚನೆ ಅಥವಾ ರಾಜ್ಯಪತ್ರದಲ್ಲಿ ಏನಿದೆ ಎಂಬುದನ್ನು ಮುಂದಿನ ನೋಟದಲ್ಲಿ ತಿಳಿಸುತ್ತೇನೆ.

ಚಿತ್ರ-ಲೇಖನ: ಕೆರೆ ಮಂಜುನಾಥ್

ಇದು ’ಕೆರೆ ನೋಟ’ ಅಂಕಣದ  ೫೦ನೆಯ ಲೇಖನವಾಗಿದ್ದು, ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡದ ಪರವಾಗಿ ಶ್ರೀ ಮಂಜುನಾಥರವರಿಗೆ  ಹೃತ್ಪೂರ್ವಕ  ಅಭಿನಂದನೆಗಳು!!

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*