ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೪೯: ಕೆರೆ ಅಭಿವೃದ್ಧಿ ಎಂದರೆ ಅಷ್ಟೇ ಸಾಕೇ?

ಕೆರೆ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಕೆರೆ ಅಭಿವೃದ್ಧಿ… ಈ ಮಾತನ್ನು ಬಹುತೇಕ ಎಲ್ಲ ದಿನಗಳಲ್ಲೂ ಒಬ್ಬರಲ್ಲ ಮತ್ತೊಬ್ಬರು ಹೇಳುತ್ತಲೇ ಇರುತ್ತಾರೆ. ಕೆರೆ ಅಭಿವೃದ್ಧಿ ಎಂದು ಹೇಳಿದರಷ್ಟೇ ಸಾಕೇ? ಹಾಗೆಂದರೇನು? ಏನು ಮಾಡುತ್ತೀರಿ? ಜನರಿಗೇನು ಉಪಯೋಗ? ಪ್ರಾಣಿ-ಪಕ್ಷಿಗಳಿಗೇನು ಉಪಯೋಗ? ಅಂತರ್ಜಲ ವೃದ್ಧಿಯಾಗುತ್ತದೆಯೇ? ಇಂತಹ ಒಂದೆರಡು ಪ್ರಶ್ನೆಗಳನ್ನು ಕೆರೆ ಅಭಿವೃದ್ಧಿ ಮಾಡುವ ಸರ್ಕಾರ ನಾಮಫಲಕ ಹಾಕಿಕೊಂಡವರನ್ನು ಕೇಳಿ ನೋಡಿ! ಅವರಿಂದ ಎಂತಹ ಉತ್ತರ ಬರುತ್ತದೆ ಎಂಬುದೇ ನೋವುದಾಯಕ.

Kaikondanahalli-2ಕೆರೆಗಳ ಹೂಳು ತೆಗೆಯುವ ಬಗ್ಗೆ ಮಾತನಾಡುತ್ತೇವೆ. ಆದರೆ, ವೈಜ್ಞಾನಿಕವಾಗಿ ಎಷ್ಟು ಪ್ರಮಾಣದಲ್ಲಿ ಹೂಳು ತೆಗೆಯಬೇಕು ಎಂಬುದು ಗೊತ್ತಿಲ್ಲ. ಏಕೆಂದರೆ ಹೂಳು ಹೆಚ್ಚು ತೆಗೆದರೆ ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಪ್ರಾಣಿ, ಸಸ್ಯ ತಜ್ಞರು ಹೇಳುತ್ತಾರೆ. ಹಾಗಾದರೆ, ಹಾಗೇ ಬಿಟ್ಟರೆ ನೀರು ಹೆಚ್ಚಿಗೆ ತುಂಬದೆ ಬೇಸಿಗೆಯಲ್ಲಿ ಪ್ರಾಣಿ, ಸಸ್ಯಗಳೆಲ್ಲ ಸಾಯುತ್ತವಲ್ಲವೇ ಎಂದರೆ, ಅದಕ್ಕೆ ಸೂಕ್ತ ಉತ್ತರವಿಲ್ಲ. ಆಗಾಗ್ಗೆ ಮಳೆ ಬರಬೇಕು, ಎಲ್ಲವೂ ಸರಿಹೋಗುತ್ತದೆ ಎನ್ನುತ್ತಾರೆ. ನಿಜ, ಆಗಾಗ್ಗೆ ಮಳೆ ಬಂದು, ಜಲಸಂಪತ್ತು ಸಮೃದ್ಧವಾಗಿದ್ದರೆ ಈ ಕೆರೆಗಳತ್ತ ಯಾರ ನೋಟವೂ ಹರಿಯುತ್ತಿರಲಿಲ್ಲ. ಕೆರೆಗಳನ್ನು ನಾಶ ಮಾಡಲೇ ಹೆಚ್ಚು ಜನ ಇನ್ನಷ್ಟು ವೇಗವಾಗಿ ಹುಟ್ಟಿಕೊಳ್ಳುತ್ತಿದ್ದರು.

ಕೆರೆ ಅಭಿವೃದ್ಧಿ ಬಗ್ಗೆ ಜನರಿಗೆ, ಅದರಲ್ಲೂ ಅದರ ಉಪಯೋಗ ಪಡೆದುಕೊಂಡಿರುವ ನಮ್ಮ ಹಿರಿಯರಿಗೆ ಗೊತ್ತಿರವಷ್ಟು ಮಾಹಿತಿ ನಮ್ಮ ಅಧಿಕಾರಿಗಳಿಗಿಲ್ಲ. ಅದಕ್ಕೇ ಯಾವುದೋ ಕಚೇರಿಯೊಂದರಲ್ಲಿ ಕುಳಿತು ಕೆರೆ ಅಭಿವೃದ್ಧಿ ಎಂದು ಯೋಜನೆ ರೂಪಿಸುತ್ತಾರೆ. ಕಟ್ಟಡ, ರಸ್ತೆ ನಿರ್ಮಿಸುವ ರೀತಿಯಲ್ಲಿ ನಕ್ಷೆ, ಎಂಜಿನಿಯರಿಂಗ್ ಯೋಜನೆ ಎಲ್ಲವನ್ನೂ ಸಿದ್ಧಪಡಿಸುತ್ತಾರೆ. ನಿಜ, ಕೆರೆ ಅಭಿವೃದ್ದಿಯಲ್ಲಿ ಎಂಜಿನಿಯರಿಂಗ್ ಪಾತ್ರವೂ ಇದೆ. ಆದರೆ, ಕೇವಲ ಸಿಮೆಂಟು, ಇಟ್ಟಿಗೆ ಕಲ್ಲಿಗೆ ಮಾತ್ರ ಇದು ಸೀಮಿತವಾಗುತ್ತಿರುವುದರಿಂದ, ನಮ್ಮಲ್ಲಿ ಅಭಿವೃದ್ಧಿ ಆಗುತ್ತಿರುವ ಕೆರೆಗಳೂ ಒಣಭೂಮಿಗಳಾಗಿವೆ. ನೀರಿನ ದಿಕ್ಕು ಕಾಣದೆ, ಬರಡಾಗುತ್ತಿವೆ. ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಒಂದು ಕಲೆ. ಅದಕ್ಕೇ ಹಿಂದೆ, ಊರು ಕಟ್ಟುವ ಮುನ್ನ ಕೆರೆ ಕಟ್ಟು ಎನ್ನುತ್ತಿದ್ದರು. ಅದರಂತೆ ನಡೆಯುತ್ತಿದ್ದರು. ಕೆರೆ ನಿರ್ಮಿಸಿದ ಮೇಲೆ ಅದರ ಸೆಳೆತ, ಒಳಹರಿವು, ಹೊರ ಹರಿವು, ಪ್ರವಾಹ ಎಲ್ಲವನ್ನೂ ಅರಿತುಕೊಂಡೇ ಅದರ ನಿರ್ಮಾಣವಾಗುತ್ತಿತ್ತು. ಅದಕ್ಕೇ ಎಂತಹ ಮಳೆ ಬಂದರೂ ಜನ ಪರಿತಪಿಸುತ್ತಿರಲಿಲ್ಲ. ಈಗಿನ ಒಂದು ಸಣ್ಣ ಮಳೆಗೆ ಎಲ್ಲೆಲ್ಲೂ ನೀರೇ. ನಿಜ, ಒಪ್ಪೋಣ, ಆಗ ಜನಸಂಖ್ಯೆಯೂ ಕಡಿಮೆ, ಹಾಗೂ ನಗರವೂ ಬೆಳದಿರಲಿಲ್ಲ. ಇಲ್ಲೇ ಇರೋದು ಸiಸ್ಯೆ ನಗರದ ಬೆಳವಣಿಗೆ.

ನಗರದ ಬೆಳವಣಿಗೆಯಲ್ಲಿ ಮುಂದಾಗಬಹುದಾದ ಪ್ರಾಕೃತಿಕ ಸಮಸ್ಯೆಗಳ ಬಗ್ಗೆ ಯಾರೂ ಯೋಚಿಸಲೇ ಇಲ್ಲ. ಬಡಾವಣೆ ಆಗಬೇಕು ಎನ್ನುವುದಕ್ಕೇ ಸೀಮಿತವಾಗಿಹೋಗಿತ್ತು ಯೋಜನೆ. ಮಳೆ ಬಂದರೆ ಆ ನೀರು ಎಲ್ಲಿ ಹೋಗುತ್ತದೆ, ಅದನ್ನು ಸಂಗ್ರಹಿಸಬೇಕಲ್ಲ. ಅದರಿಂದ ನಮಗೆ ಅಪಾಯ ಆಗಬಾರದಲ್ಲ ಎಂಬುದನ್ನು ಯಾರೂ ಯೋಚಿಸಲೇ ಇಲ್ಲ. ಕೆರೆಗಳನ್ನು ಮುಚ್ಚುತ್ತಾ  ಹೋದರು. ಕಾಲುವೆಗಳನ್ನು ಸಣ್ಣದಾಗಿ ಅಲ್ಲಲ್ಲಿ ಉಳಿಸಿಕೊಂಡರು. ಏಕೆಂದರೆ ಮಾನವನ ತ್ಯಾಜ್ಯ ಹರಿಯಬೇಕಿತ್ತಲ್ಲಾ? ಅದಕ್ಕೇ ಕಾಲುವೆ ಸಣ್ಣದಾದವು. ಮಳೆ ಬಂದಾಗ ಈ ಕಾಲುವೆಗಳು ನೀರಿನ ಶಕ್ತಿಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಎಲ್ಲಿ ಜಾಗ ಸಿಗುತ್ತದೋ ಅಲೆಲ್ಲ ನೀರು ಹರಿದು ಹೊರಹೊಮ್ಮಿತು. ಮನೆಗಳೆಲ್ಲವೂ ನೀರಿನಿಂದ ತುಂಬಿಹೋದವು. ವಾಸ್ತವದಲ್ಲಿ ಇದೆಲ್ಲ ನೀರು ಕೆರೆ-ಕುಂಟೆಗಳಲ್ಲಿ ಸಂಗ್ರಹವಾಗಬೇಕಿತ್ತು. ಆದರೆ, ಕೆರೆಗಳು ನಾಶವಾಗಿವೆ. ಇರುವ ಕೆರೆಗೆ ನೀರು ಹೋಗುವ ಕಾಲುವೆಗಳೇ ಇಲ್ಲ. ಹೀಗಾಗಿ, ಕೆರೆಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಮಾಹಿತಿ ಇಲ್ಲದೆ ಇಂತಹ ಪ್ರಮಾದಗಳಿಗೆ ಜನರು, ಅಧಿಕಾರಿಗಳು, ಸರ್ಕಾರವೇ ಕಾರಣೀಭೂತವಾಗಿವೆ. ಏಕೆಂದರೆ, ನಾವು ಯಾವ ತಜ್ಞರು ಹೇಳುವ ಮಾತನ್ನು ಕೇಳಿಲ್ಲ. ಅವರ ವರದಿಗಳನ್ನು ಒಪ್ಪಿಕೊಂಡರೂ, ಅದರ ಬಗ್ಗೆ ಯೋಜನೆ ರೂಪಿಸುವುದು, ಅನುಷ್ಠಾನ ಮಾಡಲು ಹೋಗಲೇ ಇಲ್ಲ. ಇಷ್ಟೆಲ್ಲ ಏಕೆ ಹೇಳಿದೆ ಎಂಬುದು, ಮುಂದಿನ ನೋಟದಲ್ಲಿ ನಿಮಗೆ ವಿಸ್ತಾರವಾಗಿ ಅರಿವಾಗಲಿದೆ. ಈ ಮಧ್ಯೆ ಕೆರೆಗಳಿಗೆ ನೀರು ಬರುವ ಕಾಲುವೆಗಳನ್ನು ಬೇಸಿಗೆಯಲ್ಲಾದರೂ ಸರಿಪಡಿಸಬೇಕು. ಹಿಂದಿನ ವರ್ಷಗಳ ಅನುಭವ, ಸಂಕಷ್ಟದ ಅರಿವಿದ್ದು, ಮಳೆಗಾಲಕ್ಕೆ ಕಾಯುವ ಬದಲು ಈಗಲೇ ಕೆಲಸ ಆರಂಭಿಸಿ, ನೀರು ಹರಿವಿಗೆ, ಇರುವ ಕೆರೆಗಳಲ್ಲಿ ಅತಿಹೆಚ್ಚು ನೀರು ತುಂಬುವುದಕ್ಕೆ ಕೆಲಸ ಮಾಡಬೇಕು. ನಾಗರಿಕರು ಇದರ ಹಕ್ಕೊತ್ತಾಯ ಮಾಡಬೇಕಿದೆ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ನಾಗರಿಕರು ಹೇಳಿದ ಕೆಲಸಗಳು ಆಗಿವೆ, ಆಗುತ್ತಿವೆ. ಅವರು ಆಸಕ್ತಿಯಿಂದ ನಿಂತರೆ, ಎಲ್ಲವೂ ಆಗುತ್ತದೆ ಎಂಬುದನ್ನು ಸಾಬೀತಾಗಿವೆ. ಇಂತಹ ಕೆಲಸು ಹೆಚ್ಚಾಗಲಿ.

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*