ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಭೂತನಾಳ ಕೆರೆಗೆ ಅಂತೂ ಸಿಕ್ಕಿತು ಕಾಯಕಲ್ಪ

ಬರದ ನಾಡು, ಬಿಸಿಲು ನಗರಿ ಎಂದೆಲ್ಲ ಕರೆಯಿಸಿಕೊಳ್ಳುವ ಐತಿಹಾಸಿಕ ವಿಜಯಪುರ ನಗರದಲ್ಲಿ ನೂರಾರು ಕೆರೆಗಳಿವೆ. ಕ್ರಿಶ ೧೬ನೇ ಶತಮಾನದಲ್ಲಿ ವಿಜಯಪುರವನ್ನಾಳಿದ ಶಾಹಿ ಸುಲ್ತಾನರು ಅನೇಕ ಬಾವಿ, ಬಾವಡಿ, ಕೆರೆ ಸೇರಿದಂತೆ, ನೂರಾರು ನೆರೆತೊರೆಗಳಿಂದ ನೀರು ಸಂಗ್ರಹಿಸಿ ನೀರನ್ನೇ ಐಶಾರಾಮಿ ವಸ್ತುವನ್ನಾಗಿಸಿಕೊಂಡಿದ್ದರು. ಇಂದು ಆ ಕೆರೆಗಳೆಲ್ಲ ಬಹುತೇಕ ಒತ್ತುವರಿಗೊಂಡಿದ್ದು, ತಮ್ಮ ಕುರುಹು ಕಳೆದುಕೊಂಡಿವೆ. ಆದರೆ, ಸ್ವಾತಂತ್ರ್ಯಾನಂತರ, ಕುಡಿಯುವ ನೀರಿಗಾಗಿ ನಗರವಾಸಿಗಳು ನರಕಯಾತನೆ ಅನುಭವಿಸುತ್ತಿರುವುದನ್ನು ಕಂಡ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ವಿಜಯಪುರದ ಕುಡಿಯುವ ನೀರಿಗಾಗಿ ಹಾಕಿದ ಯೋಜನೆ ಇಂದಿಗೂ ನಗರವಾಸಿಗಳ ದಾಹ ತಣಿಸುತ್ತಿದೆ. ಅದೇ, ಇಂದಿನ ಭೂತನಾಳ ಟ್ಯಾಂಕ್.

ವಿಶ್ವೇಶ್ವರಯ್ಯನವರ ಕನಸಿನ ಕೂಸು, ಭೂತನಾಳ ಕೆರೆಗೆ ಅಂತೂ ಸಿಕ್ಕಿತು ಕಾಯಕಲ್ಪ!

ಬರದ ನಾಡಿನ ಕೆರೆಗೆ ಪುನರ್ಜನ್ಮ

vjp-bhutanal (1)ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಕನಸಿನ ಕೂಸು ಹಾಗೂ ವಚನ ಪಿತಾಮಹ ಡಾ. ಹಳಕಟ್ಟಿ ಅವರ  ವಾಸ್ತವಿಕ ನೆಲೆಗಟ್ಟಿನಲ್ಲಿ ೧೯೧೧ರಲ್ಲಿ ನಿರ್ಮಾಣಗೊಂಡ ಭೂತನಾಳ ಕೆರೆಗೆ ಬಹುವರ್ಷಗಳ ನಂತರ ಜಲಸಂಪನ್ಮೂಲ ಇಲಾಖೆ ಕಾಯಕಲ್ಪಕ್ಕೆ ಮುಂದಾಗಿದ್ದು, ಅಪಾಯದಂಚಿನ ಹಲವು ಹಳ್ಳ, ಝರಿ ಹಾಗೂ ನೈಸರ್ಗಿಕ ನಾಲೆಗಳು ಪುನಃಶ್ಚೇತನಗೊಳ್ಳುತ್ತಿವೆ.

ಒಟ್ಟು ೩೨೨ ಎಕರೆ ವಿಸ್ತೀರ್ಣ ಹೊಂದಿರುವ ಭೂತನಾಳ ಕೆರೆ ಹೂಳು ತುಂಬಿಕೊಂಡು ಹಾಳು ಬೀಳುವ ಹೊತ್ತಿನಲ್ಲೇ ಕಾಯಕಲ್ಪಕ್ಕೆ ಮುಂದಾಗಿರುವುದು ಕೊಂಚ ಸಮಾಧಾನ ತಂದಿದೆ. ಗುಮ್ಮಟ ನಗರಿಯ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಈ ಕೆರೆ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿತ್ತು. ಇಡೀ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಭೂತನಾಳ ಕೆರೆ ಪ್ರವಾಸಿಗರ ಅಟಾಟೋಪಕ್ಕೆ ಬಲಿಯಾಗಿ ಪ್ಲಾಸ್ಟಿಕ್‌ಮಯವಾಗಿ ರೂಪುಗೊಳ್ಳುತ್ತಿತ್ತು. ಇನ್ನೂ ಸ್ವಲ್ಪ ದಿನ ಕಳೆದಿದ್ದರೆ, ಕೆರೆ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತಿತ್ತು. ಹೀಗಾಗಿ ಜಲಸಂಪನ್ಮೂಲ ಇಲಾಖೆ ಮುಂಜಾಗೃತೆಯಿಂದಾಗಿ ಐತಿಹಾಸಿಕ ಕೆರೆಯೊಂದು ಮರುಹುಟ್ಟು ಪಡೆದುಕೊಳ್ಳುತ್ತಿದೆ.

ಹಳ್ಳಗಳ ಪುನರ್ಜನ್ಮ

vjp-bhutanal (4)ಭೂತನಾಳ ಕೆರೆಗೆ ತೊರವಿಯ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಿಂದ ಆರಂಭವಾಗುವ ಹಳ್ಳ, ದರ್ಗ ಹಾಗೂ ರಾಮಲಿಂಗನ ಕೆರೆ ಮಾರ್ಗವಾಗಿ, ಭೂತನಾಳ ಕೆರೆ ಸೇರುವ ಹಳ್ಳ ಹಾಗೂ ಇಟ್ಟಂಗಿಹಾಳ ಉತ್ತರ ಮತ್ತು ದಕ್ಷಿಣ ಹಾಗೂ ಕರಡಿದೊಡ್ಡಿ ಗ್ರಾಮದಿಂದ ಹಾಯ್ದು ಬರುವ ಹಳ್ಳಗಳಿಂದ ಯಥೇಚ್ಚವಾಗಿ ನೀರು ಹರಿದು ಬರುತ್ತಿತ್ತು. ಇದರಿಂದ ಕಡು ಬೇಸಿಗೆಯಲ್ಲೂ ನಗರವಾಸಿಗಳಿಗೆ ನೀರಿನ ಕೊರತೆ ಎದುರಾಗುತ್ತಿರಲಿಲ್ಲ. ಆದರೆ, ಈಚೆಗೆ ಆ ಹಳ್ಳಗಳಲ್ಲಿ ಕೆಲವು ಅತಿಕ್ರಮಣಗೊಂಡರೆ, ಕೆಲವು ಮುಳ್ಳು ಕಂಟಿಗಳಿಂದ, ಹೂಳು ಮಿಶ್ರತವಾಗಿ ಸಂಪೂರ್ಣ ಮರೆಮಾಚಿದ್ದವು. ಆದರೆ, ಇದೀಗ ಆ ಎಲ್ಲ ಹಳ್ಳಗಳನ್ನು ಸ್ವಚ್ಛಗೊಳಿಸಲಾಗಿದೆ. ಮಾತ್ರವಲ್ಲ, ಈ ಹಳ್ಳಗಳಿಂದ ಹರಿದು ಬರುವ ನೀರಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಮುಖ್ಯವಾಗಿ ಈ ಹಳ್ಳ ಸೇರುವ ಕೆರೆಯ ದಡದಲ್ಲಿ ಅಡ್ಡಲಾಗಿ ‘ಸಿಲ್ಟ್ ಟ್ರಾಪ್’ಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಅನಗತ್ಯವಾಗಿ ಕೆರೆಗೆ ಹೂಳು ತುಂಬುವುದನ್ನು ತಡೆಯಬಹುದಾಗಿದೆ.

ಭೂತನಾಳ ಕೆರೆ ೫೬೩.೨೫೦ ಮೀಟರ್ ಅತ್ಯುನ್ನತ ನೀರಿನ ಮಟ್ಟ ಹೊಂದಿದ್ದು, ೫೬೧.೯೫೦ ಮೀ. ಪೂರ್ಣ ನೀರಿನ ಮಟ್ಟ ಹೊಂದಿದೆ. vjp-bhutanal (2)ಅಂದಾಜು ೮೭.೩೪ ಚ.ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ. ಈ ಕೆರೆಯ ಮಣ್ಣಿನ ಏರಿ ೯೫೦ ಮೀ. ಉದ್ದ, ೬.೦೮ ಮೀ. ಎತ್ತರ ಹಾಗೂ ೩.೫೦ ಮೀ.  ಅಗಲ ಹೊಂದಿದೆ. ಕೆರೆಯ ಪುನಶ್ಚೇತನದಿಂದ ೧೩.೯೦ ಮೀ. ಘ.ಅಡಿ ವಿಸ್ತ್ರೀರ್ಣ ಹೆಚ್ಚಾಗಲಿದೆ. ಶೇ.೦.೧೪ ಟಿಎಂಸಿ ನೀರಿನ ಶೇಖರಣೆ ಸಾಮರ್ಥ್ಯ ಹೆಚ್ಚಳವಾಗಲಿದೆ ಎಂದು ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಲಸಂಪನ್ಮೂಲ ಇಲಾಖೆ ಸಹಾಯಕ ಅಭಿಯಂತರ ರಾಜೇಂದ್ರ ರೂಡಗಿ ತಿಳಿಸುತ್ತಾರೆ.

೩೩೭.೯೮ ಲಕ್ಷ ರೂ.ವೆಚ್ಚ

ಒಟ್ಟು ೩೩೭.೯೮ ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ನಾಲ್ಕು ತಿಂಗಳೊಳಗಾಗಿ ಕಾಮಗಾರಿ ಮುಗಿಸಲು ಗಡುವು vjp-bhutanal (5)ನೀಡಲಾಗಿದೆ. ಈಗಾಗಲೇ ೫ ರಿಂದ ೬ ಫ಼ುಟ್ ಹೂಳು ತೆಗೆಯಲಾಗಿದೆ. ಒಟ್ಟಾರೆ ೧೧ ಕಿಮೀ ಉದ್ದದ ಸುತ್ತಲಿನ ಕೆರೆ ದಡದ ಪೈಕಿ ೧ ಕಿಮೀ ಮಾತ್ರ ಕೆರೆ ದಡವಿದ್ದು, ಹೊಸದಾಗಿ ೧೦ ಕಿಮೀ ಉದ್ದದ ಕೆರೆ ದಡ ನಿರ್ಮಿಸುವ ಕಾರ್ಯ ಹಾಗೂ ಹೂಳೆತ್ತುವ ಕಾರ್ಯ ಶೇ.೭೦ರಷ್ಟು ಪೂರ್ಣಗೊಂಡಿದೆ. ಕೆರೆಗೆ ಮಳೆ ನೀರು ಹರಿದು ಬರುವ ದರ್ಗಾ ಕಾಲುವೆ ೭ ಕಿಮೀ ಉದ್ದವಿದ್ದು, ಈ ಕಾಲುವೆಯನ್ನು ಈಗಾಗಲೇ ೫.೫ ಕಿ.ಮೀ. ನಷ್ಟು ಸ್ವಚ್ಛಗೊಳಿಸಲಾಗಿದೆ. ೩.೯೪ ಕಿಮೀ ಉದ್ದದ ಇಟ್ಟಂಗಿಹಾಳ ಕಾಲುವೆ ಹಾಗೂ ೩ ಕಿಮೀ ಉದ್ದದ ಕರಡಿದೊಡ್ಡಿ ಕಾಲುವೆ ಸ್ವಚ್ಛಗೊಳಿಸಲಾಗಿದೆ.

ಮಳೆ ನೀರು ಹೊರತುಪಡಿಸಿ ಕೃಷ್ಣಾ ನದಿಯಿಂದ ಲಿಂಗದಳ್ಳಿಯ ಹತ್ತಿರ ಜಾಕ್‌ವೆಲ್‌ನಿಂದ ವರ್ಷದ ೯೦ ದಿನಗಳವರೆಗೆ ಬಬಲೇಶ್ವರ, ಮಮದಾಪುರ, ಬೇಗಂ ತಲಾಬ ಕೆರೆ ಸೇರಿದಂತೆ ೬ ಕೆರೆ ತುಂಬಿಸುವ ಯೋಜನೆಯಡಿ ಭೂತನಾಳ ಕೆರೆ ತುಂಬಿಸುವ ನಿಟ್ಟಿನಲ್ಲಿ ಪ್ರತ್ಯೇಕ ಯೋಜನೆ ಸಹ ಕಾರ್ಯಗತಗೊಳ್ಳುತ್ತಿದ್ದು, ಈಗಾಗಲೇ ಬೇಗಂ ತಲಾ ಕೆರೆಯವರೆಗೆ ಪೈಪ್ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಬೇಗಂ ತಲಾಬನಿಂದ ಭೂತನಾಳ ಕೆರೆಯವರೆಗೆ ಪೈಪ್‌ಲೈನ್ ಅಳವಡಿಸಲು ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಬರುವ ಅಕ್ಟೋಬರ್ ಒಳಗೆ ಪೈಪ್‌ಲೈನ್ ಕಾಮಗಾರಿ ಮುಗಿಯಲಿದೆ ಎಂದು ರೂಡಗಿ ತಿಳಿಸುತ್ತಾರೆ.

ಸುಂದರ vjp-bhutanal (3)ಪ್ರವಾಸಿ ತಾಣ

ಭೂತನಾಳ ಕೆರೆಯ ಸುತ್ತ ಸುಂದರ ಉದ್ಯಾನ ನಿರ್ಮಾಣ ಮಾಡಲಾಗಿದ್ದು, ನಿತ್ಯ ನೂರಾರು ನಗರವಾಸಿಗಳು ವಾಯು ವಿಹಾರಕ್ಕೆ ಆಗಮಿಸುತ್ತಾರೆ. ಇದೀಗ ಕೋಟಿ ವೃಕ್ಷ ಅಭಿಯಾನದಡಿ ೩೦೦ಕ್ಕೂ ಹೆಚ್ಚು ಸಸಿಗಳನ್ನು ಕೆರೆಯ ಸುತ್ತ ನೆಡಲಾಗುತ್ತಿದೆ. ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತಿದ್ದು, ಕೆರೆಯ ಮುಂಭಾಗ ಅರಣ್ಯ ಇಲಾಖೆಯಿಂದ ಅಂದಾಜು ೮ ಎಕರೆ ಜಾಗೆಯಲ್ಲಿ ನೆಡುತೋಪು ನಿರ್ಮಾಣ ಮಾಡಲಾಗಿದೆ. ಅಲ್ಲದೇ, ಮೀನುಗಾರಿಕೆ ಇಲಾಖೆಯಿಂದ ಹಲವು ಅಪರೂಪದ ಮೀನು ಸಾಕಣೆ ಕಾರ್ಯವೂ ಭರದಿಂದ ಸಾಗಿದೆ.

ಚಿತ್ರ-ಲೇಖನ: ರಾಮು ಬಿ. ಮಸಳಿ

 

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*