ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬದುಕು ಬದಲಿಸಿದ ಜಂಗಾಲಕೆರೆ

ಯರ್ರಮ್ಮನಹಳ್ಳಿ ಪಾವಗಡ ತಾಲ್ಲೂಕಿನ ಪುಟ್ಟ ಗ್ರಾಮ. ಪಾವಗಡದಿಂದ ೨೦ ಕಿ.ಮೀ. ದೂರ.  ೧೭೦ ಕುಟುಂಬಗಳುಳ್ಳ ಗ್ರಾಮಕ್ಕೆ ಮಳೆಯೇ ಪ್ರಮುಖ ನೀರಿನ ಮೂಲ. ಸದಾ ಬರಗಾಲ ಪೀಡಿತ ಬಯಲು ಪ್ರದೇಶ. ಬಡತನ ಹಾಸು ಹೊಕ್ಕಾಗಿರುವುದು ಕಣ್ಣಿಗೆ ರಾಚುತ್ತದೆ. ಇಲ್ಲಿ ನೂರಾರು ವರ್ಷಗಳ ಹಿಂದೆ ಜಂಗಾಲರು ಕಟ್ಟಿದರೆನ್ನಲಾದ ಕೆರೆಯೊಂದಿದೆ. ಅದಕ್ಕೆ ‘ಜಂಗಾಲರ ಕೆರೆ’ ಎಂದೇ ಹೆಸರು. ತೀರಾ ದೊಡ್ಡದೂ ಅಲ್ಲದ ತೀರಾ ಚಿಕ್ಕದೂ ಅಲ್ಲದ ಮಧ್ಯಮ ಗಾತ್ರದ ಕೆರೆ. ೧೦.೫೦ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುತ್ತದೆ. ಕೆರೆ ಸುಸ್ಥಿತಿಯಲ್ಲಿದ್ದಾಗ ಅಚ್ಚುಕಟ್ಟಿನಲ್ಲಿ ಉತ್ತಮ ಬೆಳೆ ಬರುತ್ತಿತ್ತು. ಅಂತರ್ಜಲ ಮೇಲ್ಮಟ್ತದಲ್ಲಿತ್ತು. ಆದರೆ ಕೆರೆ ನೂರಾರು ವರ್ಷಗಳಿಂದ ಹೂಳು ತುಂಬಿಕೊಂಡು ಅದರ ಧಾರಣ ಸಾಮರ್ಥ್ಯ ಕುಸಿದು ಹೋಗಿತ್ತು. ನೀರು ಬಂದರೂ ಹೆಚ್ಚು ಕಾಲ ನಿಲ್ಲುತ್ತಿರಲಿಲ್ಲ.

ಇದರ ಪರಿಣಾಮ ದಾರುಣ!

Picture1೧೫ ವರ್ಷಗಳ ಹಿಂದೆ ಗ್ರಾಮದ ಶೆಟ್ಟರು ಒಂದು ಕೊಳವೆ ಬಾವಿ ಕೊರೆಸಿದ್ದರು. ಆರಂಭದಲ್ಲಿ ಎರಡೂವರೆ ಇಂಚು ನೀರು ಬರುತ್ತಿತ್ತು. ಅಂತರ್ಜಲ ಮಟ್ಟ ಕೆಳಗೆ ಹೋಗಿದ್ದರಿಂದ, ೨ ವರ್ಷದ ನಂತರ ಸಂಪೂರ್ಣ ನಿಂತು ಹೋಯಿತು. ಸಾಲದ  ಸುಳಿಗೆ ಸಿಲುಕಿ ಆಘಾತ ಅನುಭವಿಸಿದ ಶೆಟ್ಟರು ಕೊಳವೆ ಬಾವಿಗೆ ಅಳವಡಿಸಿದ್ದ ಪಂಪು, ವೈರು, ಮೋಟಾರುಗಳನ್ನೆಲ್ಲಾ ಕಳಚಿ ತಂದು ಮನೆಯಲ್ಲಿಟ್ಟರು. ಹಾಗೆಯೇ, ತಿಮ್ಮಾರೆಡ್ಡಿ ಎಂಬುವರು ಸಹ ಕೊಳವೆಬಾವಿಯೊಂದನ್ನು ಕೊರೆಸಿ ಕೆಲವು ವರ್ಷ ಬೆಳೆ ಇಟ್ಟರು, ಆದರೆ ಶೆಟ್ಟರಂತೆಯೇ ಇವರ ಕೊಳವೆ ಬಾವಿಯೂ ಸಹ ಒಂದೆರಡು ವರ್ಷದ ನಂತರ ಸಂಪೂರ್ಣ ಒಣಗಿ ಹೋಯಿತು. ಪಂಪು ಮೋಟಾರು ಕಳಚಿ ಕೈತೊಳೆದುಕೊಂಡರು. ಪಡಜಾಲಪ್ಪ ಎಂ ರೈತರ ಕೊಳವೆಬಾವಿ ಕೊರೆಸಿದ ಹೊಸತರಲ್ಲಿ ಒಂದರಿಂದ ಒಂದೂವರೆ ಇಂಚು ನೀರು ಹೊಡೆಯುತ್ತಿತ್ತು. ಕ್ರಮೇಣ ಗ್ರಾಮದಲ್ಲಿ ಅಂತರ್ಜಲ ಮಟ್ಟ ಅಧೋಗತಿಗಿಳಿದ ಪರಿಣಾಮ, ಅದೂ ಸಹ ನಿರಂತರವಾಗಿ ಬರದೆ ಗ್ಯಾಪ್ ಕೊಡುತ್ತಿತ್ತು. ಇದರಿಂದಾಗಿ ಪಡಜಾಲಪ್ಪ ಸರಿಯಾಗಿ ಬೆಳೆಯನ್ನೇ ಇಡುತ್ತಿರಲಿಲ್ಲ. ರಾಮಲಿಂಗರೆಡ್ಡಿಯವರದೂ ಸಹ ಇದೇ ಅನುಭವ. ಕೆರೆ ಅಚ್ಚುಕಟ್ಟಿನಲ್ಲಿರುವ ಇವರ ಕೊಳವೆಬಾವಿ ೫ ವರ್ಷಗಳ ಹಿಂದೆಯೇ ಒಣಗಿ ಹೋಗಿತ್ತು. ಇವರೂ ಸಹ ಪಂಪು, ಮೋಟಾರುಗಳನ್ನು ಬಿಚ್ಚಿ ಮನೆಯಲ್ಲಿಟ್ಟಿದ್ದರು.

ಕೊಳವೆಬಾವಿಗಳ ಕತೆ ಇಷಾದರೆ, ಕೆರೆ ಅಚ್ಚುಕಟ್ಟಿನಲ್ಲಿದ್ದ ತೆರೆದ ಬಾವಿಗಳ ಪರಿಸ್ಥಿತಿ ಇದಕ್ಕಿಂತಲೂ ಘೋರ; ಕೊಳವೆಬಾವಿಗಳಿಗಿಂತಲೂ ಮುಂಚೆಯೇ ಇವು ಒಣಗಿ ನಿಂತಿದ್ದವು. ಉದಾಹರಣೆಗೆ, ಸಣ್ಣನಿಂಗಪ್ಪನ ಗುಟ್ಟೆಬಾವಿಯು ನೂರಾರು ವರ್ಷ ಜನ-ಜಾನುವಾರುಗಳಿಗೆ ನೀರುಣಿಸಿದ್ದ ಇದು ೯ ಮಟ್ಟು (ಒಂದು ಮಟ್ಟು = ೫ ಅಡಿ) ಆಳದ ತೆರೆದ ಬಾವಿ. ಅಂತರ್ಜಲದ ಸಮಸ್ಯೆಯಿಂದ ಕಳೆದ ೧೦ ವರ್ಷದಿಂದ ನೀರಿಲ್ಲದೆ ಒಣಗಿ ಬಾವಿ ಒಳಗೆಲ್ಲಾ ಗಿಡಗೆಂಟೆಗಳು ಬೆಳೆದಿದ್ದವು. ಇದೆಲ್ಲದರ ಪರಿಣಾಮ ಜನರು ನಗರಗಳಿಗೆ ಗುಳೆ ಹೊರಟರು. ಹೊಲಗಳು ಬೀಳು ಬಿದ್ದವು.

ಜಂಗಾಲಕೆರೆ ಅಭಿವೃದ್ಧಿಯಿಂದ ಊರು ಮತ್ತೆ ಹಸಿರು ಕಾಣುವಂತಾಯಿತು. ಅದು ಸಾಧ್ಯವಾಗಿದ್ದು ಹೀಗೆ…

Picture4೨೦೦೭ರಲ್ಲಿ ಗ್ರಾಮದ ಕೆರೆ ಅಭಿವೃದ್ಧಿಗಾಗಿ ಸರ್ಕಾರದ ಜಲ ಸಂವರ್ಧನೆ ಯೋಜನೆ ಊರಿಗೆ ಬಂದಿತು. ಶ್ರೀ ಬಸವೇಶ್ವರ ಕೆರೆ ಅಭಿವೃದ್ಧಿ ಸಂಘವು ರಚನೆಯಾಯಿತು. ಒಟ್ಟು ೭.೪೯.೧೪೧.೦೦ ರೂ.ಗಳ ಯೋಜನೆ. ೨೦೦೭ರ ಜೂನ್‌ನಲ್ಲಿ ಕೆರೆ ಅಂಗಳದಲ್ಲಿ ೫೦೦೦ ಘನ ಮೀಟರ್ ಹೂಳನ್ನು ತೆಗೆಯಲಾಯಿತು. ಆ ವರ್ಷ ಜುಲೈ ಹೊತ್ತಿಗೆ ಸ್ವಲ್ಪ ಮಳೆ ಬಂದು ಅರ್ಧ ಕೆರೆಗೆ ನೀರು ಬಂತು. ಹಾಗೆ ಬಂದ ನೀರು ಒಂದೇ ತಿಂಗಳಲ್ಲಿ ಇಂಗಿ ಹೋಯಿತು. ನಂತರ ಉತ್ತರೆ ಮಳೆ (ಸೆಪ್ಟೆಂಬರ್) ಬಂದು ಅರ್ಧ ಕೆರೆ ತುಂಬಿತು. ಆಗ ನೆಲ ತಂಪಾಗಿದ್ದರಿಂದ, ನೀರು ಇಂಗದೆ ಕೆರೆಯಲ್ಲಿಯೇ ಉಳಿಯಿತು. ಆ ವರ್ಷ ತೆರೆದ ಬಾವಿಗಳಲ್ಲಿ ಅಲ್ಪ-ಸ್ವಲ್ಪ ನೀರು ಬಂದವು. ೨೦೦೮ರಲ್ಲಿ ಉತ್ತಮ ಮಳೆಯಾಗಿ ಮುಕ್ಕಾಲು ಕೆರೆ ತುಂಬಿತು, ಆಗ ನೋಡ-ನೋಡುತ್ತಿದ್ದಂತೆಯೇ ಬಾವಿಗಳಲ್ಲಿ ನೀರು ಮೇಲೇರಿತು.

ಕಳೆದ ೧೫ ವರ್ಷಗಳಿಂದ ಅಕ್ಷರಶಃ ಒಣಗಿಹೋಗಿದ್ದ ಹಲವಾರು ತೆರೆದ ಬಾವಿಗಳಲ್ಲಿ ನೀರುಬಂದಿತು. ಈ ಕೆರೆ ಅಚ್ಚುಕಟ್ಟಿನಲ್ಲಿ ಒಟ್ಟು ೧೬ ಕೊಳವೆಬಾವಿಗಳಿದ್ದು, ಅವುಗಳಲ್ಲಿ ಸಂಪೂರ್ಣ ಒಣಗಿದ್ದ ೩ ಕೊಳವೆಬಾವಿಗಳು ಮತ್ತೆ ಜೀವ ಪಡೆದು, ಈಗ ೨ ಇಂಚು ನೀರು ಬರುತ್ತಿದೆ. ಉಳಿದ ೧೩ ಕೊಳವೆಬಾವಿಗಳಲ್ಲಿ ಹೂಳು ತೆಗೆಯುವುದಕ್ಕಿಂತ ಮುಂಚೆ ಕೇವಲ ಅರ್ಧ ಮತ್ತು ಮುಕ್ಕಾಲು ಇಂಚು ನೀರು ಬಿಟ್ಟೂ-ಬಿಟ್ಟೂ ಬರುತ್ತಿದ್ದುದು ಈಗ ನಿರಂತರವಾಗಿ ೨ ಇಂಚು ನೀರು ಬರುತ್ತಿದೆ. ಇದಕ್ಕೆಲ್ಲಾ ಕಾರಣ ಕೆರೆಯಲ್ಲಿ ಹೂಳು ತೆಗೆದಿದ್ದು ಎನ್ನುತ್ತಾರೆ ಊರವರು.

ಮರುಜೀವ ಪಡೆದಿರುವ ಕೊಳವೆ ಬಾವಿಗಳು:

ಶೆಟ್ಟರ ಕೊಳವೆ ಬಾವಿ : ೨೦೦೮ರಲ್ಲಿ ಕೆರೆಯಲ್ಲಿ ಹೂಳು ತೆಗೆದ ಸ್ಥಳದಲ್ಲಿ ನೀರು ನಿಂತು, ಶೆಟ್ಟರ ತೆರೆದಬಾವಿಗೆ ನೀರು  ಶೇಖರಣೆಯಾಯಿತು. ಆಗ ಅದರ ಪಕ್ಕದಲ್ಲೇ ಇದ್ದ ಕೊಳವೆಬಾವಿಯಲ್ಲಿ ನೀರು ಬಂದಿರಬಹುದೆಂದು ಪರೀಕ್ಷಿಸಿದಾಗ ಆಶ್ಚರ್ಯವೆಂಬಂತೆ ೨೦ ಅಡಿ ಆಳದಲ್ಲೇ ನೀರಿತ್ತು. ತಕ್ಷಣ ಕಿತ್ತಿಟ್ಟಿದ್ದ ಪಂಪು, ಮೋಟಾರುಗಳನ್ನು ಜೋಡಿಸಿ ಚಾಲೂ ಮಾಡಿದಾಗ ಎರಡೂವರೆ ಇಂಚು ನೀರು ಸರಾಗವಾಗಿ ಹೊಡೆಯಿತು. ನವಂಬರ್ ೨೦೦೮ರಲ್ಲಿ ಪಂಪು ಜೋಡಿಸಿ ಡಿಸೆಂಬರ್‌ನಲ್ಲಿ ೨ ಎಕರೆ ಬೇಸಿಗೆ ಶೇಂಗಾ ಮತ್ತು ಅರ್ಧ ಎಕರೆಯಲ್ಲಿ ಭತ್ತ ನಾಟಿ ಹಾಕಿದರು, ಇವರ ಕೊಳವೆಬಾವಿಯಲ್ಲಿ ೧೩ ವರ್ಷಗಳ ನಂತರ  ನೀರು ಕಾಣಿಸಿಕೊಂಡಾಗ, ಇಡೀ ಊರೇ ‘ಶೆಟ್ಟರ ಬಾವ್ಯಾಗೆ ನೀರ್ ಬಂತಲೇ’ ಎಂದು ಕೂಗಾಡಿದ್ದನ್ನು ಕೆರೆ ಸಂಘದ ಕಾರ್ಯದರ್ಶಿ ಸಣ್ಣಮಲ್ಲಪ್ಪ ನೆನಪಿಸಿಕೊಳ್ಳುತ್ತಾರೆ.

ರಾಮಲಿಂಗಾರೆಡ್ಡಿ ಕೊಳವೆಬಾವಿ: ಶೆಟ್ಟರ ಕೊಳವೆಬಾವಿ ಮರುಜೀವ ಪಡೆದದ್ದು ಗೊತ್ತಾದ ನಂತರ, ಇವರೂ ಸಹ ತಮ್ಮ ಕೊಳವೆಬಾವಿ ಪರೀಕ್ಷಿಸಿ ನೀರು ಮೇಲೆರಿರುವುದನ್ನು ಖಚಿತಪಡಿಸಿಕೊಂಡು ಪಂಪು ಜೋಡಿಸಿದರು. ೨ ಇಂಚು ನೀರು ಬರುತ್ತಿದ್ದು ೨ ಎಕರೆ ಭತ್ತ ಹಾಕಿದರು. ಸತತ ೫ ವರ್ಷಗಳ ನಂತರ ಬೇಸಿಗೆ ಬೆಳೆ ಇಟ್ಟಿದ್ದಾಗಿ ರಾಮಲಿಂಗಾರೆಡ್ಡಿ ಹೇಳುತ್ತಾರೆ.

ತಿಮ್ಮಾರೆಡ್ಡಿ ಕೊಳವೆಬಾವಿಯೂ ಸಹ ಮತ್ತೆ ಜೀವ ಪಡೆದಿದೆ. ‘ಹೂಳು ತೆಗೆದ ನಂತರ ಪ್ರಸ್ತುತ ೨ ಇಂಚು ನೀರು ನಿರಂತರವಾಗಿ ಬರುತ್ತಿದೆ’ ಎನ್ನುತ್ತಾರೆ ಗ್ರಾಮದ ಪಡಜಾಲಪ್ಪ. ಇವರ ಕುಟುಂಬಕ್ಕೆ ಈಗ ಕೈತುಂಬ ಕೆಲಸಗಳಿದ್ದು, ಬೆಂಗಳೂರಿಗೆ ಗಾರ್ಮೆಂಟ್ಸ್‌ಗೆ ಹೋಗಿದ್ದ ತಮ್ಮ ಮನೆಯವರನ್ನೆಲ್ಲಾ ವಾಪಸು ಕರೆಸಿಕೊಂಡಿದ್ದಾರೆ.

ಸಣ್ಣನಿಂಗಪ್ಪನ ಗುಟ್ಟೆಬಾವಿ: ಇವರ ತೆರೆದ ಬಾವಿಯಲ್ಲಿ ೨೦೦೭ರಲ್ಲಿ ಕೆರೆಗೆ ಸ್ವಲ್ಪ ನೀರು ಬಂದಾಗ ನೀರಿನ ಪಸೆ ಆಡಿತ್ತು. ೨೦೦೮ರಲ್ಲಿ ಮತ್ತೆ ಮಳೆ ಬಂದು ಕೆರೆಯಲ್ಲಿ ನೀರು ನಿಂತ ಮೇಲೆ ಎಲ್ಲರಿಗೂ ಅಚ್ಚರಿಯಾಗುವಂತೆ ಬಾವಿಗೆ ೪ ಮಟ್ಟು – ೨೦ ಅಡಿ – ನೀರು ಬಂತು. ೨೦೦೮ರಲ್ಲಿ ೮ ಎಕರೆ ಬೆಳೆ ಇಟ್ಟರು. ೫ ಎಕರೆ ಭತ್ತ ಮತ್ತು ೩ ಎಕರೆ ಬೇಸಿಗೆ ಶೇಂಗಾ ಹಾಕಿದರು. ಕೆರೆ ಸಂಘದ ಅಧ್ಯಕ್ಷರೂ ಆಗಿರುವ ಇವರಿಗೆ ಇದರಿಂದ ಆಗಿರುವ ಸಂತೋಷ ಅಷ್ಟಿಷ್ಟಲ್ಲ, ಜಲ ಸಂವರ್ಧನೆ ಯೋಜನೆಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು ಎನ್ನುತ್ತಾರೆ. ಇವರ ಬಾವಿಗೆ ಸ್ವಲ್ಪ ದೂರದಲ್ಲಿರುವ ಶೆಟ್ಟರ ತೆರೆದ ಬಾವಿಗೂ ಸಹ ೪-೫ ಮಟ್ಟು ನೀರು ಬಂದಿದೆ.

ಹಾಗಾದರೆ ಕಳೆದ ೧೫ ವರ್ಷಗಳಿಂದ ಕೆರೆಗೆ ನೀರೇ ಬಂದಿರಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಉತ್ತರವಾಗಿ ಜನ ಹೇಳುವುದೆಂದರೆ, ೧೫ ವರ್ಷಗಳಿಂದ ಹಲವಾರು ಸಲ ಕೆರೆಗೆ ನೀರು ಬಂದಿದೆ, ಆದರೆ ಪೂರ್ತಿ ಹೂಳು ತುಂಬಿದ್ದರಿಂದ ನಿಂತ ನೀರು ಭೂಮಿಯೊಳಗೆ ಇಳಿಯುತ್ತಿರಲಿಲ್ಲ, ಯಾವಾಗ ಹೂಳು ತೆಗೆದೆವೋ ಆಗ ಹೂಳು ತೆಗೆದ ಸ್ಥಳದಲ್ಲಿ ನೀರು ಹೆಚ್ಚು ಕಾಲ ನಿಂತು ಅಂತರ್ಜಲ ಹೆಚ್ಚಾಗಲು ಕಾರಣವಾಯಿತು ಎನ್ನುತ್ತಾರೆ.

ಕಳೆದ ಹಲವಾರು ವರ್ಷಗಳಿಂದ ಸರಿಯಾದ ಮಳೆ ಇಲ್ಲದೆ, ಊರಿನ ಸುಮಾರು ೧೫ ಜನ ಬೆಂಗಳೂರಿಗೆ ಕೆಲಸ ಅರಸಿ ಹೋಗಿದ್ದರು. ಈಗ ನೀರು ಬಂದು ಊರಿನಲ್ಲೇ ಕೆಲಸ ಸಿಗತೊಡಗಿದಂತೆ ನಿಧಾನವಾಗಿ ಹೋದವರು ವಾಪಸು ಬರುತ್ತಿದ್ದಾರೆ. ಪಡಜಾಲಪ್ಪನವರ ಮನೆಯಲ್ಲಿ ೩ ಜನ ೨೦೦೬ರಲ್ಲಿ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದವರು ೨೦೦೮ರ ನವಂಬರ್‌ಗೆ ವಾಪಸು ಬಂದಿದ್ದಾರೆ. ಒಣಗಿದ್ದ ಇವರ ಕೊಳವೆ ಬಾವಿಗೆ ನೀರು ಬಂದು ಹೊಲದಲ್ಲಿ ಕೆಲಸ ಜಾಸ್ತಿಯಾದದ್ದರಿಂದ ವಾಪಸು ಬಂದರೆಂದು ಪಡಜಾಲಪ್ಪ ಹೇಳುತ್ತಾರೆ. ಗ್ರಾಮದ ನಿಂಗಶೆಟ್ಟಿಯವರ ಮನೆಯ ಇಬ್ಬರು ಬೆಂಗಳೂರಿನಿಂದ ಮನೆಗೆ ಮರಳಿದ್ದಾರೆ.

ನೀರು ಲಭ್ಯವಾದ ಮೇಲೆ ಹಲವಾರು ಕುಟುಂಬಗಳು ತರಕಾರಿ ಬೆಳೆದು ಮಾರಾಟ ಮಾಡಲು ಆರಂಭಿಸಿದ್ದಾರೆ. ಗ್ರಾಮದ ಸಣ್ಣಮಲ್ಲಪ್ಪ ಇದಕ್ಕೆ ಉತ್ತಮ ಉದಾಹರಣೆ. ಇವರು ತಮ್ಮ ೨ ಕುಂಟೆ ಜಮೀನಿನಲ್ಲಿ ಮಡಿಕಟ್ಟಿ ಸೊಪ್ಪು ಬೆಳೆದಿದ್ದಾರೆ. ಕೊತ್ತಂಬರಿ, ಪಾಲಾಕ್, ಮೆಂತ್ಯ, ಚಕ್ಕೋತ, ಚಿಲುಕೂರ ಮುಂತಾದವುಗಳನ್ನು ಬೆಳೆದು ತಮ್ಮ ಗ್ರಾಮ ಮತ್ತು ಪಕ್ಕದ ಪೊನ್ನಸಮುದ್ರ, ಎತ್ತಿನಹಳ್ಳಿಗಳಲ್ಲಿ ಪ್ರತಿನಿತ್ಯ ಮಾರಾಟ ಮಾಡುತ್ತಾರೆ. ಮುಂಚೆ ಸೊಪ್ಪು ಕೀಳಲು ಬೇರೆಯವರ ಹೊಲಕ್ಕೆ ಹೋದರೆ ಬಯ್ಯುತ್ತಿದ್ದರಂತೆ, ‘ಈಗ ಕಂಡೋರ್ ಹೊಲಕ್ಕೆ ಹೋಗೋದು ಇಲ್ಲ, ಅವರು ಬಯ್ಯೊಂಗು ಇಲ್ಲ’ ಎನ್ನುತ್ತಾರೆ ಮಲ್ಲಪ್ಪ, ಇದು ಸಾಮಾಜಿಕವಾಗಿ ಇವರ ಕುಟುಂಬದಲ್ಲಾಗಿರುವ ಮತ್ತೊಂದು ಬದಲಾವಣೆ.

ಈಗಾಗಲೇ ಹೇಳಿದಂತೆ, ಕೆರೆಯಿಂದ ೫೦೦೦ ಕ್ಯುಬಿಕ್ ಮೀಟರ್ ತೆಗೆಯಲಾಗಿದೆ. ಇದು ಸುಮಾರು ೨೫೦೦ ಟ್ರ್ಯಾಕ್ಟರ್ ಲೋಡುಗಳಾಗುತ್ತದೆ. ಈ ಹೂಳನ್ನು ಯರ್ರಮ್ಮನಹಳ್ಳಿ, ಎತ್ತಿನಹಳ್ಳಿ ಮತ್ತು ಪೊನ್ನಸಮುದ್ರದ ರೈತರು ತಮ್ಮ ಹೊಲಗಳಿಗೆ ಸಾಗಿಸಿಕೊಂಡಿದ್ದಾರೆ. ಇದರಿಂದ ಇಳುವರಿ ಹೆಚ್ಚಾಗಿದೆ ಎನ್ನುತ್ತಾರೆ ಸಂಘದವರು. ಕೆಲವು ಉದಾಹರಣೆಗಳನ್ನು ನೋಡುವುದಾದರೆ, ಗ್ರಾಮದ ಮಲ್ಲೇಶ್ ತನ್ನ ಒಂದು ಎಕರೆ ಹೊಲಕ್ಕೆ ೧೦೦ ಲೋಡು ಹೂಳು ಹೊಡೆಸಿಕೊಂಡು ಶೇಂಗಾ ಬಿತ್ತಿದರು. ೩೦ ಚೀಲ ಇಳುವರಿ ಬಂದಿತು. (೧೦ ಕ್ವಿಂಟಾಲ್) ಅಂದಾಜು ೨೨ ಸಾವಿರದಷ್ಟು ಆದಾಯ. ಶೇಂಗಾ ಕಿತ್ತ ನಂತರ ಈರುಳ್ಳಿ ಹಾಕಿದರು. ಅದೂ ಸಹ ಉತ್ತಮವಾಗಿ ಬೆಳೆದು ಸುಮಾರು ೭೫ ಪ್ಯಾಕೆಟ್ ಇಳುವರಿ ಕೊಟ್ಟಿತು. ಇದರಿಂದ ೩೫೦೦೦ ಆದಾಯ ಬಂದಿತು. ಹೂಳು ಹಾಕಿದ್ದರಿಂದಲೇ ಈ ರೀತಿ ಇಳುವರಿ ಬರಲು ಸಾಧ್ಯವಾಯಿತು ಎನ್ನುತ್ತಾರೆ ಮಲ್ಲೇಶ್. ಸಣ್ಣಮಲ್ಲಪ್ಪನವರಿಗೆ ೬ ಎಕರೆ ಜಮೀನಿದೆ. ಇದಕ್ಕೆ ಸುಮಾರು ೨೫೦ ಲೋಡು ಹೂಳು ಹೊಡೆಸಿಕೊಂಡಿದ್ದು, ೨೦೦೮ರಲ್ಲಿ ಎಕರೆಗೆ ೧೮ ಮೂಟೆ ಭತ್ತದ ಇಳುವರಿ ಪಡೆದಿದ್ದಾರೆ, ಇಷ್ಟೇ ಜಮೀನಿನಲ್ಲಿ ಹೂಳು ಹಾಕದಿದ್ದಾಗ ಎಕರೆಗೆ ೬-೭ ಮೂಟೆ ಮಾತ್ರ ಇಳುವರಿ ಬರುತ್ತಿತ್ತು ಎನ್ನುತ್ತಾರೆ. ಇವರ ಪಕ್ಕದ ಜಮೀನಿನವರದೂ ಸಹ ಇದೇ ಅಭಿಪ್ರಾಯ.

ಕೆರೆಗಳು ಗ್ರಾಮೀಣ ಬದುಕಿನ ಜೀವನಾಡಿಗಳು, ಅವುಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದರೆ ಸಾಕು ಗ್ರಾಮದ ಅಭಿವೃದ್ಧಿ ಸಾಧ್ಯ.

 ಚಿತ್ರ-ಲೇಖನ: ಮಲ್ಲಿಕಾರ್ಜುನ ಹೊಸಪಾಳ್ಯ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*