ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೪೭: ಬೆಳ್ಳಂದೂರು ಕೆರೆ ಉಳಿಸುವ ಬೆಂಕಿ ತಣ್ಣಗಾಯಿತೇ?

ಈ ಕೆರೆಯ ಬಗ್ಗೆ ಆಗಾಗ್ಗೆ ಹೇಳುತ್ತಿರಲೇಬೇಕಾಗುತ್ತದೆ. ಏಕೆಂದರೆ, ಒಂದು ಬಾರಿ ಬೆಂಕಿ ಉರಿದು ತಣ್ಣಗಾದ ಮೇಲೆ, ಕೆರೆ ಅಭಿವೃದ್ಧಿ ಮಾಡುವ, ಅದನ್ನು ಸ್ವಚ್ಛ ಮಾಡುವ ಮಾತುಗಳೂ ತಣ್ಣಗಾಗಿಯೇ ಹೋಗುತ್ತವೆ. ಒಂದೆರಡು ಬಾರಿ ಬೆಂಕಿ ಕಂಡಾಗ ಆಕಾಶಕ್ಕೇ ಕೇಳುವಂತೆ ಹೋರಾಟ, ಮಾತು, ಪ್ರಚಾರ ಎಲ್ಲವೂ ಆಗುತ್ತದೆ. ಆದರೆ, ಅದು ಪದೇಪದೆ ಆದಾಗ, ಇದಿಷ್ಟೇ ಎಂದು ಸುಮ್ಮನಾಗುವ ಭಾವಾತ್ಮಗಳೇ ಹೆಚ್ಚು. ಅದಕ್ಕೆ ಬೆಳ್ಳಂದೂರು ಕೆರೆ ಇನ್ನೂ ಬೆಂಕಿಯಲ್ಲಿ ದಹಿಸುವ ದುಸ್ಥಿತಿ ಹೋಗಿಲ್ಲ.

Bellanduru-P1ಬೆಳ್ಳಂದೂರು ಕೆರೆ ೧೮ ಹಳ್ಳಿಗಳಿಗೆ ಕುಡಿಯುವ ನೀರು ನೀಡುತ್ತಿತ್ತು. ಇಂದು ಅದು ಬೆಳ್ಳಗಿನ ವಿಷ. ಬೆಳ್ಳಂದೂರು ಕೆರೆಗೆ ೩೬೪ ಹೆಕ್ಟೇರ್ ಪ್ರದೇಶದಲ್ಲಿ, ಅಂದರೆ ಸುಮಾರು ೮೮೦ ಎಕರೆ ಪ್ರದೇಶದಲ್ಲಿದ್ದು, ಸುಮಾರು ೧೩೦ ವರ್ಷಗಳ ಇತಿಹಾಸ ಹೊಂದಿದೆ. ೧೯೮೦ರಿಂದೀಚೆಗೆ, ಬೆಳ್ಳಂದೂರು ಕೆರೆಗೆ ನೀರು ಕಲ್ಪಿಸುವ ಕಾಲುವೆಗಳು ಸ್ಥಗಿತಗೊಂಡವು. ಮಳೆ ನೀರು ಬಂದು ಕೆರೆ ಶುಚಿಗೊಳ್ಳುವ ಕಾಲ ಮುಕ್ತಾಯವಾಯಿತು. ಹಕ್ಕಿಗಳಿಗೆ ಪ್ರಮುಖ ತಾಣವಾಗಿದ್ದ ಬೆಳ್ಳಂದೂರು ಕೆರೆಯ ಮಾಲಿನ್ಯದಿಂದ ಹಕ್ಕಿಗಳೂ ಈ ಕೆರೆಯನ್ನು ತೊರೆದವು. ಅಲ್ಲಿಂದ ಒಳಚರಂಡಿ ನೀರಿನ ತಾಣ ಬೆಳ್ಳಂದೂರು ಕೆರೆಯಾಯಿತು. ಬೆಳ್ಳಂದೂರು ಕೆರೆಯಲ್ಲಿ ಒಳಚರಂಡಿ ನೀರೇ ಹರಿಯುತ್ತದೆ. ಅಂದರೆ, ಇಲ್ಲಿ ಸಂಸ್ಕರಣ ಘಟಕ ಇದ್ದರೂ, ಅದು ಕಾರ‍್ಯನಿರ್ವಹಿಸುವುದಿಲ್ಲ. ಒಳಚರಂಡಿ ನೀರನ್ನು ಶುಚಿಗೊಳಿಸಿ ನೀರು ಬಿಡಬೇಕೆಂಬ ನಿಯಮವಿರುವುದು ಕಡತದಲ್ಲಿ ಮಾತ್ರ. ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಒಂದಕ್ಕೊಂದು ಸಂಪರ್ಕವಿದ್ದು, ಎರಡರಲ್ಲೂ ಅದೇ ಮಲಿನವಿದೆ. ಬೆಂಗಳೂರು ಜಲಮಂಡಳಿಯ ಬೇಜವಾಬ್ದಾರಿಯಿಂದ, ಈ ಕೆರೆಯನ್ನು ಸುಡಲಾಗುತ್ತಿದೆ ಎಂಬುದು ಪರಿಸರ ತಜ್ಞರು ಸೇರಿದಂತೆ ಬಹುತೇಕರ ಅಭಿಪ್ರಾಯ.

‘ಬೆಳ್ಳಂದೂರು ಕೆರೆಯು ಗ್ಯಾರೇಜ್ ಮತ್ತು ಮೋಟಾರ್ ಸರ್ವೀಸ್ ಸ್ಟೇಷನ್‌ಗಳ ತ್ಯಾಜ್ಯಕ್ಕೆ ತಾಣವಾಗಿದ್ದು, ಎಲ್ಲ ರೀತಿಯ ಆಯಿಲ್‌ಗಳು ಇಲ್ಲಿ ಸೇರುತ್ತದೆ. ಅತಿಯಾದ ಒಳಚರಂಡಿ ತ್ಯಾಜ್ಯ ಸೇರಿಕೊಂಡು, ಮೀಥೇನ್ ಗ್ಯಾಸ್ ಉತ್ಪಾದನೆಯಾಗಿ, ಬಿಳಿನೊರೆ ಸೃಷ್ಟಿಯಾಗುತ್ತಿದೆ. “ಎಲ್ಲಾದರೂ ಒಂದು ಸಣ್ಣ ಕಿಡಿಯೂ ಸಾಕು ಇಲ್ಲಿ ಬೆಂಕಿ ಹತ್ತಿ ಉರಿಯಲ”, ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ಶ್ರೀಧರ್ ಅವರು ಡೌನ್ ಟು ಅರ್ಥ್ ಪ್ರಕಟಿಸಿರುವ ‘ವೈ ಅರ್ಬನ್ ಇಂಡಿಯಾ ಫ್ಲಡ್ಸ್’ ಪುಸ್ತಕದಲ್ಲಿ ಹೇಳಿದ್ದಾರೆ. ಈ ಪುಸ್ತಕದಲ್ಲಿರುವ ಕೆಲವು ಅಂಶಗಳನ್ನು ಕೆಲವು ನೋಟಗಳಲ್ಲಿ ನಾನು ಪ್ರಸ್ತಾಪಿಸಲಿದ್ದೇನೆ. ಇದೇ ಪುಸ್ತಿಕೆಯಲ್ಲಿ ಎನ್ವಿರಾನ್‌ಮೆಂಟ್ ಸಪೋರ‍್ಟ್ ಗ್ರೂಪ್‌ನ ಸಂಚಾಲಕ ಲಿಯೋ ಸಲ್ಡಾನ ಅವರು, ನಗರದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದೇ ಕೆರೆಗಳು ತ್ಯಾಜ್ಯ ಗುಂಡಿಯಾಗಲು ಕಾರಣ ಎಂದಿದ್ದಾರೆ. ಆದರೆ ಅಧಿಕಾರಿಗಳು ಬೇರೆ ರೀತಿ ಹೇಳುತ್ತಾರೆ.

ಬೆಳ್ಳಂದೂರು ಕೆರೆಯ ಸುತ್ತಮುತ್ತ ೧೪ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳು ತ್ಯಾಜ್ಯ ನಿರ್ವಹಣೆ ಮಾಡುತ್ತವೆ. ಅವರು ತ್ಯಾಜ್ಯವನ್ನು ಕೆರೆಗೆ ಹಾಕುವುದಿಲ್ಲ ಎಂದು ಜಲಮಂಡಳಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ಕೈಗಾರಿಕಾ ತ್ಯಾಜ್ಯ ಇನ್ನೆಲ್ಲಿಂದ ಬರುತ್ತದೆ – ವಸತಿ ಪ್ರದೇಶಗಳಲ್ಲಿಂದಲೇ? ಇಲ್ಲಿಂದ ಕಾರ್ಖಾನೆ ತ್ಯಾಜ್ಯ ಬರುತ್ತದೆ ಎಂದರೆ ಕ್ರಮ ಏಕೆ ತೆಗೆದುಕೊಂಡಿಲ್ಲ? ವಸತಿ ಪ್ರದೇಶಗಳಲ್ಲಿ ಕಾರ್ಖಾನೆಗಳಿವೆಯೇ? ಕಾರ್ಖಾನೆಗಳ ತಪ್ಪನ್ನು ಅಧಿಕಾರಿಗಳು ಮುಚ್ಚಿಹಾಕುತ್ತಿದ್ದಾರೆಯೇ? ಅಥವಾ ಕೆರೆಯನ್ನು ಹಾಳು ಮಾಡಿ, ಅದನ್ನು ನೆಲಸಮ ಮಾಡುವ ದೂರದೃಷ್ಟಿ ಇದ್ದೀತೇ? ಈ ಪ್ರಶ್ನೆಗಳಿಗೆ ಉತ್ತರಿಸಬೇಕಾದ್ದು ಅಧಿಕಾರಿಗಳು, ಜನಪ್ರತಿನಿಧಿಗಳು. ಏಕೆಂದರೆ ನಾವು ಅವರ ಮೇಲೆ ಅವಲಂಬಿತ! ಏಕೆಂದರೆ, ಬೆಳ್ಳಂದೂರು ಕೆರೆ ಉಳಿಸುವ ಹೋರಾಟದ ಸಂದರ್ಭದಲ್ಲಿ, ಕಾರ್ಪೊರೇಟ್ ಕಂಪನಿಗಳು, ಸಂಘ-ಸಂಸ್ಥೆಗಳು ಹಾಗೂ ಕೆಲವು ಜನರು ಕೋಟಿ ನೀಡುವ ಮಾತನಾಡುತ್ತಾರೆ. ಸ್ವಯಂಸೇವೆ ಮಾಡುವ ಧೈರ್ಯದ ಮಾತುಗಳು ಆಗುತ್ತವೆ. ಆದರೆ, ಬೆಂಕಿ ನಂದಿಸಿ ಹೋದಂತೆ ಇವರ ಮಾತುಗಳೂ ತಣ್ಣಗಾಗುತ್ತವೆ!

 

ಚಿತ್ರ-ಲೇಖನ: ಕೆರೆ ಮಂಜುನಾಥ್

 

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*