ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಅಂಕಮನಹಾಳ್ ಗ್ರಾಮದ ಕಥೆ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಅಂಕಮನಹಾಳ್ ಗ್ರಾಮದ ಒಂದು ಓಣಿಯವರು ಬಳಸಿದ, ಆ ಭಾಗದ ನೀರಿನ ತೊಟ್ಟಿ, ನಳದಿಂದ ಹೆಚ್ಚಾಗಿ ಹರಿಯುವ ನೀರು ನೇರವಾಗಿ ಗ್ರಾಮದ ನಾಗಮ್ಮಳ ಮನೆಯ ಮುಂದಿನ ಬಯಲಿಗೆ ಬಂದು ಸೇರುತ್ತಿತ್ತು. ಹೀಗೆ ಮನೆಯ ಮುಂದೆ ಜಮಾಯಿಸುತ್ತಿದ್ದ ಈ ತ್ಯಾಜ್ಯ ನೀರಿನಿಂದankamanal nagamma photos (2) ನಾಗಮ್ಮಳ ಕುಟುಂಬಕ್ಕೆ ನಿತ್ಯ ಕಿರಿಕಿರಿ ಜೊತೆಗೆ ಸಾಂಕ್ರಾಮಿಕ ರೋಗಗಳ ಹರಡುವ ಭೀತಿ ಎದುರಾಗಿತ್ತು. ಇದಕ್ಕೆ ಶಾಶ್ವತ ಪರಿಹಾರ ಹುಡುಕಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದ ನಾಗಮ್ಮಳಿಗೆ ಹೊಳೆದಿದ್ದು ಕೈ ತೋಟದ ಸೃಷ್ಠಿ! ಬರಗಾಲದಿಂದ ಕೈ ಸೇರದ ಬೆಳೆಯಿಂದ ಕೈ ಸುಟ್ಟುಕೊಂಡಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಗಗನಕ್ಕೇರುತ್ತಿರುವ ತರಕಾರಿ ಬೆಲೆಗಳಿಂದ ಕಂಗೆಟ್ಟ ಈ ಬಡ ಕುಟುಂಬಕ್ಕೆ ಈ ತ್ಯಾಜ್ಯ ನೀರೇ ಸಂಜೀವನಿ ಆಗಿ ಕಂಡಿತು! ಮನೆ ನಿರ್ವಹಣೆಗೆ ಕೂಲಿ ಮಾಡುವುದು ಅನಿವಾರ‍್ಯವಾದರೂ, ಅದೊಂದರಿಂದಲೇ ಬದುಕು ಹಸನು ಅಸಾಧ್ಯ ಎನ್ನುವುದನ್ನು ಅರಿತ ನಾಗಮ್ಮಳು, ಈ ತ್ಯಾಜ್ಯ ನೀರನ್ನೇ ಬಳಸಿಕೊಂಡು ತಾಜಾ ತರಕಾರಿ ಬೆಳೆಯುವ ಸಹಾಸಕ್ಕೆ ಕೈ ಹಾಕಿದಳು! ನಿರುಪಯುಕ್ತ ನೀರು, ಜೊತೆಗೆ ಮೇವು ದಾಸ್ತಾನು ಮಾಡಿ ಮಿಕ್ಕ ವೇಸ್ಟ್ ಜಾಗ ಇವೆರೆಡನ್ನು ಅಚ್ಚುಕಟ್ಟಾಗಿ ಸದ್ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಿದಳು.

ವಾಸದ ಮನೆಗೆ ಹೊಂದಿಕೊಂಡಂತೆ ಇರುವ ಅಂದಾಜು ೨೫ ಸೆಂಟ್ಸ್‌ನಲ್ಲಿ ಕೊಟ್ಟಿಗೆ, ಮೇವು ಸಂಗ್ರಹಕ್ಕೆ ಸ್ವಲ್ಪ ಜಾಗ ಬಿಟ್ಟು, ಉಳಿದ ಜಾಗವನ್ನೆಲ್ಲ ಹಸನು ಮಾಡಿದಳು. ಇದಕ್ಕೆ ನಾಗಮ್ಮಳ ಗಂಡ ಕುಮಾರಸ್ವಾಮಿ ಕೈ ಜೋಡಿಸಿದ. ಮನೆಗೆಲಸಗಳು ಆದ ತಕ್ಷಣ ಕೈ ತೋಟದಲ್ಲಿ ಕಾಲ ಕಳೆಯುತ್ತಿದ್ದ ನಾಗಮ್ಮ ಬಿಡಾಡಿ ದನಗಳನ್ನು ನಿಯಂತ್ರಿಸಲು ಸುತ್ತಲೂ ಬೇಲಿ ನಿರ್ಮಿಸಿಕೊಂಡಳು. ಕಾಲುವೆ ನೀರು ಚದುರದೇ, ಸೀದಾ ಕೈ ತೋಟಕ್ಕೆ ಬಂದು ಸೇರುವಂತೆ ಜಾಣ್ಮೆ ಮೆರೆದಳು. ನಿತ್ಯವೂ ನೀರು ಒಂದೇ ಅಳತೆಯಲ್ಲಿ ಬರುತ್ತಿದ್ದರಿಂದ, ಪ್ರತಿ ಮಡಿಗೆ ಕ್ರಮಬದ್ಧವಾಗಿ, ಸುಲಲಿತವಾಗಿ ಹರಿಯಲು ಅನುಕೂಲ ಮಾಡಿದಳು. ಆದರೆ, ಕೊಳಚೆ ನೀರನ್ನು ನೇರವಾಗಿ ಕೈ ತೋಟಕ್ಕೆ ಬಿಡದೇ ನೈಸರ್ಗಿಕವಾಗಿಯೇ ಶುದ್ಧಗೊಂಡು, ನಂತರ ಗಿಡಗಳಿಗೆ ತಲುಪುವ ವ್ಯವಸ್ಥೆ ಮಾಡಿದಳು. ಇದಕ್ಕಾಗಿ ಕಾಲುವೆ ನೀರನ್ನು ಹಂತಹಂತವಾಗಿ ತಡೆದು, ಕಲ್ಮಶವೆಲ್ಲ ಅಲ್ಲೇ ಉಳಿದು, ಸೋಸಿದ ನೀರು ಗಿಡಗಳಿಗೆ ಹೋಗುವಂತೆ ಪ್ಲಾನ್ ಮಾಡಿದಳು. ಕೈ ತೋಟದಲ್ಲಿ ಮೆಣಿಸಿನಕಾಯಿ, ಈರುಳ್ಳಿ, ಬದನೆ, ಬೆಂಡೆ.. ಇತ್ಯಾದಿ ತರಕಾರಿಗಳನ್ನು ಬೆಳೆದರೆ, ಬೇಲಿ ಸಾಲಿಗೆ ಹೀರೇಕಾಯಿ, ಅವರೆಕಾಯಿ.. ಇತ್ಯಾದಿ ಬಳ್ಳಿಗಳನ್ನು ಹಬ್ಬಿಸಿದಳು.  ಕೊಚ್ಚೆ ನೀರಿನಲ್ಲಿ ಸಹಜವಾಗಿ ಸಾಕಷ್ಟು ಜೀವಾಣುಗಳಿದ್ದು, ಬೆಳೆಗೆ ಪೋಷಕಾಂಶಗಳು ದ್ರವರೂಪದಲ್ಲಿ ಪೂರೈಕೆಯಾಗಿ ಬೆಳೆಗಳ ಬೆಳವಣಿಗೆ ಮತ್ತು ಇಳುವರಿ ಮೇಲೆ ಸಾಕಷ್ಟು ಪ್ರಭಾವ ಬೀರಿತು. ೨-೩ ತಿಂಗಳು ಕಳೆಯುವಷ್ಟರಲ್ಲಿ ಬರಡಾಗಿದ್ದ ನೆಲದಲ್ಲಿ ವೈವಿಧ್ಯಮಯ ಬೆಳೆ ಕಂಡ ನಾಗಮ್ಮ ಇದಕ್ಕಾಗಿ ಹಾಕಿದ್ದು ಬಹುತೇಕ ಶೂನ್ಯ ಬಂಡವಾಳ!. ಇದರಿಂದ ಪ್ರೇರಣೆಗೊಂಡ ನಾಗಮ್ಮಳಿಗೆ ಈಗ ಕೈ ತೋಟ ಕಾಮಧೇನು ಆಗಿಬಿಟ್ಟಿದೆ!.

for swarup kottur articleಈಗ ಈ ತ್ಯಾಜ್ಯ ನೀರು, ನಿರುಪಯುಕ್ತ ನೆಲದಿಂದ ವರ್ಷದಲ್ಲಿ ೩ ಬಾರಿ ಫಲ ಕಾಣುತ್ತಿರುವ ನಾಗಮ್ಮಳಿಗೆ ಪ್ರಾರಂಭದಲ್ಲಿ ಮನೆ ಬಳಕೆಗೆ ಸಾಕೆಂದು ಮಾಡಿದ ಕೈ ತೋಟ ನಾಗಮ್ಮಳಿಗೆ ಕಾಸನ್ನೂ ನೀಡುತ್ತಿದೆ!. ಮನೆಯ ಮುಂದೆಯೇ ಕೈ ತೋಟ ಇರುವ ಕಾರಣ, ಇದನ್ನು ಕಾಯಲು ನಾಗಮ್ಮಳು ಪ್ರತ್ಯೇಕ ಸಮಯ, ಶ್ರಮ ಮೀಸಲಿಡುತ್ತಿಲ್ಲ. ಗಗನಕ್ಕೇರಿರುವ ಕಾಯಿಪಲ್ಲೆ ಬೆಳೆಗಳಿಂದ ಕಂಗೆಟ್ಟ ಕುಟುಂಬಕ್ಕೀಗ ರಿಲ್ಯಾಕ್ಸ್ ಜೊತೆಗೆ ತೋಟದಲ್ಲಿನ ತಾಜಾ ತರಕಾರಿಗಳಿಗೆ ಡಿಮ್ಯಾಂಡ್ ಇರುವ ಫಲವಾಗಿ ಆರ್ಥಿಕ ಭದ್ರತೆ ನೀಡಿದೆ!.

ಅದೇನೇ ಇರಲಿ, ಬಳಸಿದ ನೀರು ಪಕ್ಕದ ಮನೆಯವರ ಅಂಗಳಕ್ಕೆ ಬಿಟ್ಟ ವಿಚಾರವಾಗಿ ನೆರೆಹೊರೆಯವರೊಂದಿಗೆ ಕೈ-ಕೈ ಮಿಲಾಯಿಸುತ್ತೇವೆ. ಊರಿನವರೆಲ್ಲ ಬಳಸಿದ ನೀರೆಲ್ಲ ನಮ್ಮ ಮನೆ ಕಡೆಗೆ ಹರಿದು ಬರುತ್ತೆ ಅಂತ ಶಪಿಸುತ್ತೇವೆ. ಆದರೆ ಇದನ್ನೇ ಪ್ಲಸ್ ಪಾಯಿಂಟ್ ಮಾಡಿಕೊಂಡು, ನಿರುಪಯುಕ್ತ ನೀರಿನಿಂದಲೇ ಒಂದು ಸುಂದರ ಕೈ ತೋಟ ಮಾಡಿಕೊಳ್ಳಬಹುದು. ಆ ಮೂಲಕ ಮನೆ ಬಳಕೆಗೆ ಕಾಯಿಪಲ್ಲೆಗಳನ್ನು ಬೆಳೆದುಕೊಳ್ಳುವುದರ ಜೊತೆಗೆ, ಒರತೆ ನೀರಿನಂತೆ ಸಣ್ಣ ಪ್ರಮಾಣದಲ್ಲಿ ಆದಾಯ ಪಡೆಯಬಹುದು ಎಂಬುವುದನ್ನು ಅಂಕಮನಹಾಳ್ ನಾಗಮ್ಮ ತೋರಿಸಿಕೊಟ್ಟಿದ್ದಾರೆ.

                                             ಚಿತ್ರ-ಲೇಖನ :- ಸ್ವರೂಪಾನಂದ ಎಂ. ಕೊಟ್ಟೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*