ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೪೫: ೨೦ ವರ್ಷಗಳ ಸತತ ಕಾನೂನು ಹೋರಾಟ ಹೀಗಿತ್ತು!

ಜನ ಸಂಘಟಿತರಾಗಿ ಹೋರಾಡಿದರೆ ಜಯ ಕಟ್ಟಿಟ್ಟ ಬುತ್ತಿ ಮತ್ತು ಜನರ ನಿಸ್ವಾರ್ಥ ಹೋರಾಟಕ್ಕೂ ಜಯ ದೊರಕುತ್ತದೆ ಎಂಬುದನ್ನು ಜಯನಗರ, ಆರ್.ಬಿ.ಐ ಕಾಲೋನಿ ನಿವಾಸಿಗಳ ೨೦ ವರ್ಷಗಳ ಸತತ ಕಾನೂನು ಹೋರಾಟ ನಿರೂಪಿಸಿದೆ. ಈ ಕಥೆಯನ್ನು ಎಸ್. ವೆಂಕಟಸುಬ್ಬರಾವ್ ಹೀಗೆ ವಿವರಿಸಿದ್ದಾರೆ.

ByrasandraHaraju-Venkatasubbaraoಈ ಹೋರಾಟದಿಂದ ಭೂಗಳ್ಳರ ಪಾಲಾಗುತ್ತಿದ್ದ ನಗರದ ಹೃದಯ ಭಾಗದಲ್ಲಿರುವ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಹದಿನಾಲ್ಕು ಕಾಲು ಎಕರೆ ವಿಸ್ತೀರ್ಣದ ಕೆರೆ ಮತ್ತೆ ಹಚ್ಚ ಹಸಿರಿನ ಪರಿಸರದಲ್ಲಿ ತಿಳಿನೀರ ಕೆರೆಯಾಗಿ ಪುನಶ್ಚೇತನಗೊಳ್ಳುತ್ತಿದೆ. ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಜಯನಗರ ಕಾಂಪ್ಲೆಕ್ಸ್‌ನಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ (ಜಯನಗರ ಈಜುಕೊಳದಿಂದ ಕೇವಲ ಅರ್ಧ ಕಿಲೋಮೀಟರ್) ೧೪ ಎಕರೆ ೧೧ ಗುಂಟೆ ವಿಸ್ತೀರ್ಣದ ವಿಶಾಲ ಪ್ರದೇಶದಲ್ಲಿ ಕೆರೆಯೊಂದಿದೆ ಎಂದರೆ ನಿಮಗೆ ಅಚ್ಚರಿ ಆಗಬಹುದು. ಆದರೂ ಇದು ಸತ್ಯ. ಅಲ್ಲೆಲ್ಲಿ ಕೆರೆ ಇದೆ ಎಂದೂ ನೀವು ಕೇಳಬಹುದು. ಆ ಕೆರೆ ಇರುವುದು ನಿಮ್ಹಾನ್ಸ್ ಹಾಗೂ ಆರ್.ಬಿ.ಕಾಲೋನಿಯ ಮಧ್ಯೆ. ಸ್ಥಳೀಯರ ಹೋರಾಟದ ಫಲವಾಗಿ, ಆರ್.ಬಿ.ಐ ಕಾಲೋನಿಗೆ ಹೊಂದಿಕೊಂಡಂತೆ ಸರ್ವೇ ನಂ.೫೬ರಲ್ಲಿ ಸುಂದರ ಕೆರೆ ರೂಪುಗೊಳ್ಳುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಬನ್ನಿ ಎಂದು ಜನರನ್ನು ಕೈಬೀಸಿ ಕರೆಯುತ್ತಿದೆ. ಭೂಗಳ್ಳರ ಪಾಲಾಗಿ ಅಪಾರ್ಟ್ಮೆಂಟ್‍ಗಳ ರಾಶಿಯಲ್ಲಿ ಕಾಣೆಯಾಗಿ ಮತ್ತೊಂದು ಕಾಂಕ್ರೀಟ್ ಕಾಡಾಬೇಕಾಗಿದ್ದ ಕೆರೆ ಮರುಹುಟ್ಟು ಪಡೆದಿದೆ.

ಕೆರೆಯ ಕಥೆ: ನಿವೃತ್ತ ಐ.ಎ.ಎಸ್ ಅಧಿಕಾರಿ ಎನ್.ಲಕ್ಷ್ಮಣರಾವ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ತೋಟಗಾರಿಕೆ ಇಲಾಖೆ/ಅರಣ್ಯ ಇಲಾಖೆಯ ಅಧಿಸೂಚನೆಯ ಅನುಬಂಧಕ್ಕೆ ಅನುಗುಣವಾಗಿ, ಬೆಂಗಳೂರು ನಗರ ಮತ್ತು ಸುತ್ತಮುತ್ತಲ ೮೧ ಕೆರೆಗಳನ್ನು ಅಭಿವೃದ್ದಿಪಡಿಸುವಂತೆ ಶಿಫಾರಸ್ಸು ಮಾಡಿತು. ಇನ್ನು ಭೈರಸಂದ್ರ ಕೆರೆಯಲ್ಲಿ ಭಾಗಶಃ ನೀರಿನ ಸಂಗ್ರಹ ಕಾಪಾಡಬೇಕು ಮತ್ತು ಕೆರೆಯ ಮುಂದಿನ ದಡವನ್ನು ಮರಗಳ ಉದ್ಯಾನವಾಗಿ ಅಭಿವೃದ್ಧಿಪಡಿಸುವ ಸಾಧ್ಯತೆ ಬಗ್ಗೆ ಅರಣ್ಯ ಇಲಾಖೆ ಪರಿಶೀಲಿಸಬೇಕು ಎಂದು ವರದಿಯಲ್ಲಿ ಸೂಚಿಸಿತ್ತು. ಆದರೆ, ೧೯೯೨ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ, ನಿಮ್ಹಾನ್ಸ್ ಸಿಬ್ಬಂದಿಯ ವಸತಿ ಸಮುಚ್ಛಯ ಆವರಣದಲ್ಲಿದ್ದ ಕೊಳಗೇರಿಯನ್ನು ಸ್ಥಳಾಂತರಿಸುವ ಉದ್ದೇಶದಿಂದ ಅವಶೇಷಗಳನ್ನು ಸುರಿದು ಕೆರೆಯನ್ನು ಮುಚ್ಚುವ ಕಾರ್ಯಕ್ಕೆ ಮುಂದಾಯಿತು. ಕೆರೆ ಮುಚ್ಚುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಕರ್ನಾಟಕ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಘನ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿತು. ಇನ್ನು ಮುಂದೆ ಕೆರೆ ಮುಚ್ಚುವ ಕೆಲಸ ನಿಲ್ಲಿಸಬೇಕು ಮತ್ತು ಕೆರೆಯ ದಂಡೆಯ ಮೇಲೆ ಯಾವುದೇ ಮಾನವ ವಸತಿಗೆ ಅವಕಾಶ ನೀಡಬಾರದು ಎಂದು ಆದೇಶ ನೀಡಿತು. ೧೯೯೮ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಅಂತಿಮ ವಿಚಾರಣೆ ನಡೆಯಿತು. ೧೯೯೨ರಲ್ಲಿ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಶಾಶ್ವತ ತಡೆಯಾಜ್ಞೆಯಾಗಿ ಪರಿವರ್ತಿಸಲಾಯಿತು. ಈ ಮಧ್ಯೆ ಕೆರೆ ಕಬಳಿಸಲು ಮುಂದಾದ ಕೆಲವರು ಸರ್ವೆ ನಂ.೫೬ (ಬೈರಸಂದ್ರ ಕೆರೆ) ಪ್ರದೇಶ ತಮ್ಮ  ಸ್ವಾಧೀನಾನುಭವದಲ್ಲಿರುವುದಾಗಿ, ಕೆರೆ ಜಾಗ ತಮಗೇ ಸೇರಿದ್ದೆಂದು ೧೯೯೬ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ೩ ಅರ್ಜಿಗಳು ಇತ್ಯರ್ಥವಾಗದೆ, ಬಾಕಿ ಇರುವ ವಿಷಯ ೧೯೯೯ರಲ್ಲಿ ಇಲ್ಲಿನ ನಿವಾಸಿಗಳ ಗಮನಕ್ಕೆ ಬಂತು.  ಕೂಡಲೇ ಕಾರ್ಯಪ್ರವೃತ್ತರಾದ ಈ ಭಾಗದ ನಿವಾಸಿಗಳು, ಭೂ ಮಾಫಿಯಾ ಬೆದರಿಕೆಗಳಿಗೂ ಜಗ್ಗದೆ, ತಮ್ಮನ್ನೂ ಈ ಪ್ರಕರಣದಲ್ಲಿ ಪ್ರತಿವಾದಿಗಳೆಂದು ಪರಿಗಣಿಸುವಂತೆ ನ್ಯಾಯಾಲಯದ ಮೊರೆ ಹೋದರು. ಇಂಪ್ಲೀಡಿಂಗ್ ಅಪ್ಲಿಕೇಷನ್ ಸಲ್ಲಿಸಿದರು. ವಿವಾದಿತ ಕೆರೆ ಜಾಗಕ್ಕೆ ಸಂಬಂಧಿಸಿದಂತೆ ತಮ್ಮ ಆಕ್ಷೇಪಣೆಗಳನ್ನು ದಾಖಲಿಸಿದರು.

ByrasandraHaraju-12ಈ ಜಾಗ ತಮಗೇ ಸೇರಿದ್ದೆಂದು ಹೇಳಿಕೊಂಡು ಅರ್ಜಿ ಸಲ್ಲಿಸಿರುವ ಮಂದಿ ಅರ್ಜಿ ಜತೆಗೆ ನ್ಯಾಯಾಲಯಕ್ಕೆ ಒದಗಿಸಿರುವ ಎಲ್ಲ ದಾಖಲೆಗಳೂ ನಕಲಿ. ಈ ಕುರಿತಂತೆ ಪೊಲೀಸ್ ತನಿಖೆ ನಡೆಸಿದರೆ ಸತ್ಯ ಹೊರಬರುತ್ತದೆ ಎಂದು ನ್ಯಾಯಾಲಯವನ್ನು ಕೋರಿದರು. ಇನ್ನೆಲ್ಲಿ ಉರುಳು ಕೊರಳಿಗೆ ಬೀಳುತ್ತದೋ ಎಂದು ಹೆದರಿದ ಅರ್ಜಿದಾರರು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿ, ತಾವು ಅರ್ಜಿಗಳನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ಅರಿಕೆ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಪ್ರಕರಣಗಳನ್ನು ವಿಲೇವಾರಿ ಮಾಡಲಾಯಿತು. ಭೂಗಳ್ಳರಿಂದ ಕೆರೆ ಕಾಪಾಡಿದರೂ ಇಲ್ಲಿನ ನಿವಾಸಿಗಳ ಗೋಳು ತಪ್ಪಲಿಲ್ಲ. ಎಲ್ಲ ಬಗೆಹರಿದ ಮೇಲೆ ೨೦೦೦ ಇಸವಿಯಲ್ಲಿ, ಬೆಂಗಳೂರು ಮಹಾನಗರ ಪಾಲಿಕೆ ಕೆರೆ ಪ್ರದೇಶಕ್ಕೆ ಭಾಗಶಃ ಬೇಲಿ ಹಾಕುವ ಕಾರ್ಯ ಆರಂಭಿಸಿತು. ಬೇಲಿ ಹಾಕುವ ಕಾರ್ಯ ಪ್ರಗತಿಯಲ್ಲಿದ್ದಾಗ, ೧೯೯೬ರಲ್ಲಿ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ ನಿವಾಸಿಗಳು, ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಮೂಲ ದಾವೆ ಹೂಡಿ ಮಧ್ಯಂತರ ತಡೆಯಾಜ್ಞೆ ತಂದರು. ಇದರೊಂದಿಗೆ ಕೆರೆ ಪ್ರದೇಶಕ್ಕೆ ಬೇಲಿ ಹಾಕುವ ಕಾರ್ಯ ಸ್ಥಗಿತಗೊಳಿಸಿದರು. ಈ ವಿವಾದ ಹೈಕೋರ್ಟ್ ಮೆಟ್ಟಿಲನ್ನೂ ಏರಿತು. ಹೈಕೋರ್ಟ್ ಆದೇಶದ ಮೇಲೆ ಮೂಲ ದಾವೆ ಒಂದು ತಿಂಗಳ ಒಳಗಾಗಿ ಇತ್ಯರ್ಥವಾಯಿತು. ನ್ಯಾಯಾಲಯ ಮೂಲ ದಾವೆಯನ್ನು ವಜಾ ಮಾಡಿತು. ಭಾಗಶಃ ಬೇಲಿ ಕೆಲಸ ಪೂರ್ಣಗೊಂಡಿತು. ಬೆಂಗಳೂರು ಮಹಾನಗರ ಪಾಲಿಕೆ ಸದರಿ ಕೆರೆ ಅಭಿವೃದ್ಧಿಪಡಿಸಲು ೨೦೦೪ರಲ್ಲಿ ೧೨೦ ಲಕ್ಷ ರೂಪಾಯಿ ವೆಚ್ಚ ಮಾಡಿತು. ಆದರೆ, ೧೨೦ ಲಕ್ಷ ರೂಪಾಯಿ ವೆಚ್ಚವಾದರೂ ಭೌತಿಕವಾಗಿ ಕೆರೆ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಬರಿಗಣ್ಣಿಗೆ ಕಾಣಲಿಲ್ಲ.

ಈ ಮಧ್ಯೆ ಒಬ್ಬ ಬಿಲ್ಡರ್ ಮತ್ತು ಡೆವಲಪರ್ ಸಾರ್ವಜನಿಕ ವಲಯದ ಬ್ಯಾಂಕ್‍ನಿಂದ ಪಡೆದಿದ್ದ ಸಾಲಕ್ಕೆ ಆಧಾರವಾಗಿಟ್ಟಿದ್ದ (ಕೊಲ್ಯಾಟರಲ್ByrasandraHaraju-11 ಸೆಕ್ಯುರಿಟಿ) ಬೈರಸಂದ್ರ ಕೆರೆ ಪ್ರದೇಶವನ್ನು ಸಾರ್ವಜನಿಕವಾಗಿ ಹರಾಜು ಹಾಕಲು, ಸಾಲ ವಸೂಲಾತಿ ನ್ಯಾಯಾಧಿಕರಣ ೨೦೦೫ರಲ್ಲಿ ಆದೇಶಿಸಿತು. ಮತ್ತೆ ನಾಗರಿಕರ ಕೆರೆ ಉಳಿಸುವ ಹೋರಾಟ ಸಾಲ ಮುಂದುವರಿಯಿತು. ನಾಗರಿಕರ ಹೋರಾಟಕ್ಕೆ ಸೋಲಾಯಿತು. ಕೆರೆ ಪ್ರದೇಶ ಸಾರ್ವಜನಿಕ ಹರಾಜಿನಲ್ಲಿ ೭೬೦ ಲಕ್ಷ ರೂಪಾಯಿಗಳಿಗೆ ಮಾರಾಟವಾಯಿತು. ಮತ್ತೆ ಸ್ಥಳೀಯ ನಾಗರಿಕರು ಹೈಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾದರು. ೨೦೧೧ರಲ್ಲಿ ಸಾಲ ವಸೂಲಾತಿ ನ್ಯಾಯಾಧಿಕರಣ ಮಾಡಿದ್ದ ಹರಾಜು ಪ್ರಕ್ರಿಯೆ ರದ್ದುಗೊಳಿಸಿ, ಸರ್ವೆ ನಂ. ೫೬ ಕೆರೆ ಪ್ರದೇಶವಾಗಿದ್ದು, ಇದು ಸರ್ಕಾರದ ಆಸ್ತಿಯಾಗಿದೆ. ಇದನ್ನು ಬಿಬಿಎಂಪಿ ನಿರ್ವಹಣೆ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶಿಸಿತು. ಪ್ರಕರಣ ಸುಪ್ರೀಂಕೋರ್ಟ್ ತಲುಪುತ್ತದೆ ಎಂದು ತಿಳಿದಿದ್ದ ನಾಗರಿಕರು ಸುಪ್ರೀಂಕೋರ್ಟ್‍ನಲ್ಲಿ ಕೇವಿಯಟವ್ ಸಲ್ಲಿಸಿದರು. ಸಾರ್ವಜನಿಕ ವಲಯದ ಬ್ಯಾಂಕ್ ಸಲ್ಲಿಸಿದ ವಿಶೇಷ ತೆರವು ಅರ್ಜಿ ೨೦೧೧ರ ಜುಲೈನಲ್ಲಿ ವಿಚಾರಣೆಗೆ ಬಂದು ವಜಾಗೊಂಡಿತು.

ಹಿರಿಯ ನ್ಯಾಯವಾದಿ ಜಿ.ಎಸ್. ವಿಶ್ವೇಶ್ವರ, ನ್ಯಾಯವಾದಿಗಳಾದ ಟಿ. ಕೃಷ್ಣ, ಎ.ಮಧುಸೂದನ ರಾವ್, ಜಿ.ವಿ. ಚಂದ್ರಶೇಖರ ಅವರು ೨೦ ವರ್ಷ ಕಾನೂನು ಸಮರ ನಡೆಸಿದ್ದನ್ನು ಎಸ್.ವೆಂಕಟಸುಬ್ಬರಾವ್ ಸ್ಮರಿಸಿ ಅಭಿನಂದಿಸುತ್ತಾರೆ. ಸ್ಥಳೀಯರ ಪರವಾಗಿ ಈ ಕಾನೂನು ಸಮರದ ನೇತೃತ್ವವನ್ನು ಆರ್.ಬಿ.ಐ ಕಾಲೋನಿ ನಿವಾಸಿಗಳಾದ ಎಸ್. ವೆಂಕಟಸುಬ್ಬರಾವ್ ವಹಿಸಿದ್ದರು.

ಬೈರಸಂದ್ರ ಕೆರೆಯನ್ನು ಉಳಿಸಲು ೨೦ ವರ್ಷ ಹೋರಾಟ ನಡೆಸಿದ ಸ್ಥಳೀಯ ನಿವಾಸಿ ಎಸ್.ವೆಂಕಟಸುಬ್ಬರಾವ್ ಅವರಿಗೆ ಬೆಂಗಳೂರು ನಗರದ ಅತ್ಯುನ್ನತ ಗೌರವ, ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ಯನ್ನು ಬಿಬಿಎಂಪಿ ೨೦೧೩ ಪ್ರದಾನ ಮಾಡಿತು. ಇದೇ ವರ್ಷದಲ್ಲಿ, ನಮ್ಮ ಬೆಂಗಳೂರು ಪ್ರತಿಷ್ಠಾನವೂ ಇವರಿಗೆ ಪ್ರಶಸ್ತಿ ನೀಡಿತು. ಈ ಎರಡು ಪ್ರಶಸ್ತಿಗಳನ್ನು ಕಾನೂನು ಹೋರಾಟ ಮಾಡಿದ ತಮ್ಮ ಸ್ನೇಹಿತ ಹಾಗೂ ನ್ಯಾಯವಾದಿ ಜಿ.ಎಸ್. ವಿಶ್ವೇಶ್ವರ ಅವರಿಗೆ ವೆಂಕಟಸುಬ್ಬರಾವ್ ಅವರು ಸಮರ್ಪಿಸಿದ್ದಾರೆ. ವೆಂಕಟಸುಬ್ಬರಾವ್ ಅವರನ್ನು ಇಮೇಲ್  (svsrao.blr.rbi@gmail.com ) ಮೂಲಕ ಸಂಪರ್ಕಿಸಬಹುದು.

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*