ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಜಲವೃದ್ಧಿಗೊಂದು ಪ್ರಯತ್ನ – ಬತ್ತಿದ ಕೆರೆಗಳ ಹೂಳೆತ್ತಿದವರು

ರಾಜ್ಯದಲ್ಲಿರುವ ಕೆರೆಗಳ ಹೂಳೆತ್ತುವ ಕೆಲಸಗಳು ನಡೆದರೆ ರಾಜ್ಯದ ತಕ್ಕಮಟ್ಟಿನ ಜಲಸಮಸ್ಯೆಯೊಂದು ಬಗೆಹರಿದಂತಾಗುತ್ತದೆ. ಆದರೆ ಸರಕಾರ ಆ ನಿಟ್ಟಿನಲ್ಲಿ ಬಿಡುಗಡೆಗೊಳಿಸುವ ಲಕ್ಷಾಂತರ ರೂಪಾಯಿ ಯಾರ‍್ಯಾರದೋ ಪಾಲಾಗುತ್ತಿದೆಯೇ ಹೊರತು, ಕೆರೆಗಳು ಮಾತ್ರ ಇಂದಿಗೂ 12ಹೂಳು ತುಂಬಿಕೊಂಡು ಹಾಗೇ ಇವೆ. ಆದರೆ, ಇದೀಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು, ಈಗಾಗಲೇ ಕೆರೆಗಳ ಹೂಳೆತ್ತಿ ನೀರನ್ನು ಪಡೆಯುವ ಪ್ರಯತ್ನದಲ್ಲಿ ಯಶಸ್ಸನ್ನು ಕಂಡಿದೆ. ಇವರ ಪ್ರಯತ್ನ ರಾಜ್ಯಕ್ಕೆ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಉತ್ತರ ಕರ್ನಾಟಕದ ಮಂದಿ ಪ್ರತೀ ವರ್ಷ ನೀರಿಗಾಗಿ ಪಡುವ ಕಷ್ಟ ಅಷ್ಟಿಷ್ಟಲ್ಲ. ಅಲ್ಲಿ ಸಾಕಷ್ಟು ಕೆರೆಗಳು ಇವೆ. ಆದರೆ ಅವ್ಯಾವುದೂ ನೀರನ್ನೊದಗಿಸುವುದಿಲ್ಲ. ಇದ್ದ ಎಕರೆಗಟ್ಟಲೆ ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು, ಇದ್ದೂ ಇಲ್ಲದಂತಾಗಿದೆ. ಕೆರೆಯ ಅಭಿವೃದ್ಧಿ ಎನ್ನುವುದು ಅದು ಒಬ್ಬಿಬ್ಬರಿಂದ ಆಗಿಹೋಗುವ ಕೆಲಸವಲ್ಲ. ಆದರೆ ಕಳೆದ ಬೇಸಿಗೆಗಾಲದಲ್ಲಿ ಧಾರವಾಡ ತಾಲೂಕಿನ ೯೦ ಎಕರೆ ವಿಸ್ತೀರ್ಣದ ಮುಗದಕೆರೆ, ೧೯ ಎಕರೆಯ ಹೆಬ್ಬಳ್ಳಿ, ೬ ಎಕರೆಯ ತಿಮ್ಮಾಪುರ, ೩ ಎಕರೆಯ ಹಳ್ಳಿಗೇರಿ, ೨ ಎಕರೆಯ ಕೋಟಾಬಾಗಿ ಮತ್ತು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ರುದ್ರವಾಡಿ ಗ್ರಾಮದ ಬಸವನಕಟ್ಟೆಕೆರೆ, ಸರಸಾಂಬಾದ ಮಡ್ಡಿಕೆರೆ, ಆಫಜಲ್‌ಪುರ ತಾಲೂಕಿನ ಬಳೂರ್ಗಿ ಗ್ರಾಮದ ಹೊಸಕೆರೆ – ಹೀಗೆ ಒಟ್ಟು ಎಂಟು ಕೆರೆಗಳ ಹೂಳೆತ್ತುವ ಮೂಲಕ ಬೇಸಿಗೆಗಾಲದಲ್ಲೂ ನೀರನ್ನು ಪಡೆಯುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಜೊತೆಗೆ ಈ ಕೆರೆಗಳಲ್ಲಿ ಈ ಬಾರಿಯ ಮಳೆನೀರನ್ನು ಸಂಗ್ರಹಿಸುವ ಮೂಲಕ ಅಲ್ಲಿನ ಜನರ ನೀರ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನದಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿ, ಆಸಕ್ತಿಯನ್ನು ಹೊಂದಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಪತ್ನಿ ಶ್ರೀಮತಿ ಹೇಮಾವತಿ.ವಿ.ಹೆಗ್ಗಡೆಯವರ ಪ್ರಯತ್ನ ಇದೀಗ ಯಶಸ್ಸನ್ನು ಕಂಡಿದೆ.

ಕೆರೆಗಳ ಜವಾಬ್ದಾರಿ ಗ್ರಾಮಾಭಿವೃದ್ಧಿ ಯೋಜನೆಗೆ

13ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿಯವರ ಕೋರಿಕೆಯಂತೆ, ಕಳೆದ ಬೇಸಿಗೆಯಲ್ಲಿ ಕೆರೆಗಳ ಹೂಳೆತ್ತುವ ಕೆಲಸಕ್ಕಾಗಿ ಹೆಗ್ಗಡೆಯವರು ಬರೋಬ್ಬರಿ ೩೧ ಲಕ್ಷ ರೂಪಾಯಿಗಳನ್ನು ಮೀಸಲಿರಿಸಿದ್ದಾರೆ. ಕೆರೆಗಳ ಆಯ್ಕೆ, ಹೂಳೆತ್ತುವ ಕಾರ್ಯಕ್ರಮ, ಮಳೆಗಾಲದಲ್ಲಿ ನೀರು ಸಂಗ್ರಹವಾದ ಬಗ್ಗೆ ದಾಖಲೆ ನಿರ್ವಹಣೆ,  ಕೆರೆ ಪ್ರತಿಯೋರ್ವರಿಗೂ ಉಪಯೋಗವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ, ಪ್ರಗತಿ ಪರಿಶೀಲನೆಯ ಜವಾಬ್ದಾರಿಯನ್ನು ಅಲ್ಲಿ ಕಾರ್ಯನಿರ್ವಹಿಸುತ್ತಿರುವ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ನೀಡಲಾಗಿತ್ತು. ಈ ಕೆಲಸದಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|ಎಲ್.ಹೆಚ್.ಮಂಜುನಾಥ್‌ರವರ ಸಲಹೆ, ಮಾರ್ಗದರ್ಶನದಂತೆ ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಎನ್.ಜಯಶಂಕರ ಶರ್ಮ, ನಿರ್ದೇಶಕರಾದ ದಿನೇಶ್.ಎಂ, ಅಲ್ಲಿನ ಯೋಜನಾಧಿಕಾರಿಗಳು, ಯೋಜನೆಯ ಸಿಬ್ಬಂದಿಗಳು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿಯವರ ಆಪ್ತ ಸಹಾಯಕ ಪ್ರಶಾಂತ್, ಕಲಬುರಗಿಯ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇಗೌಡ, ಅಲ್ಲಿನ ಜಿಲ್ಲಾ ನಿರ್ದೇಶಕರಾದ ನಾಗರಾಜ ಶೆಟ್ಟಿ ಕೆರೆಯ ಹೂಳೆತ್ತುವ ಕಾರ್ಯಕ್ರಮಗಳಲ್ಲಿ ಅವಿರತವಾಗಿ ದುಡಿದಿದ್ದಾರೆ. ಧಾರವಾಡದ ಕೆರೆ ಅಭಿವೃದ್ಧಿ ಕುರಿತು ಜಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ|ನಾ.ವಜ್ರಕುಮಾರ್ ಸರಿಯಾದ ಸಲಹೆ ನೀಡಿ ಪ್ರೋತ್ಸಾಹಿಸಿದ್ದಾರೆ. ಪರಿಣಾಮವಾಗಿ, ನಿರೀಕ್ಷೆಗಿಂತ ಕಡಿಮೆ ಖರ್ಚಿನಲ್ಲಿ ಕೆರೆಗಳು ಮರುಜೀವಪಡೆದು, ಇದೀಗ ಭರ್ತಿಯಾಗಿವೆ. ಇದರಿಂದಾಗಿ ಈಗಾಗಲೇ ಈ ಊರಿನ ಹೆಚ್ಚಿನ ಬತ್ತಿದ ಬೋರ್‌ಗಳಲ್ಲಿ ನೀರು ಸಿಂಚನವಾಗಿದೆ. ಈ ಬಾರಿಯ ಕೃಷಿ ಚಟುವಟಿಕೆಗಳಿಗೆ ಈ ಕೆರೆಯ ನೀರು ಬಳಕೆಯಾಗುತ್ತಿದೆ. ‘ಕೆರೆಯೊಂದು ಅಭಿವೃದ್ಧಿಗೊಂಡರೆ ಊರೊಂದು ಅಭಿವೃದ್ಧಿಗೊಂಡಂv’ ಎಂಬ ಮಾತು ಇಲ್ಲಿನವರ ಪಾಲಿಗೆ ಅಕ್ಷರಶಃ ಸತ್ಯವಾಗಿದೆ.

 ಕೆರೆಗಳ ಆಯ್ಕೆ ಈ ರೀತಿ

ಧಾರವಾಡ ಮತ್ತು ಆಳಂದ ತಾಲೂಕಿನಲ್ಲಿ ಹೆಚ್ಚಿನ ನೀರಿನ ಸಮಸ್ಯೆಯನ್ನೆದುರಿಸುತ್ತಿರುವ ಗ್ರಾಮಗಳನ್ನು ಗುರುತಿಸಿ, ಅಲ್ಲಿನ ಕೆರೆಗಳ ಮೂಲ15 ವಿಸ್ತೀರ್ಣವನ್ನು, ಅದರ ಕಾನೂನು ಚೌಕಟ್ಟನ್ನು ಸರಿಯಾಗಿ ಪರಿಶೀಲಿಸಿ, ಆ ಕೆರೆಯ ಪ್ರಯೋಜನ ಪಡೆಯುವ ಗ್ರಾಮಸ್ಥರ ಪಟ್ಟಿಯೊಂದನ್ನು ತಯಾರಿಸಿ, ಅದರಂತೆ ಧಾರವಾಡ ತಾಲೂಕಿನಲ್ಲಿ ಒಟ್ಟು ಐದು ಕೆರೆಗಳನ್ನು ಹೂಳೆತ್ತುವ ಕೆಲಸಕ್ಕೆ ಆಯ್ಕೆ ಮಾಡಲಾಗಿದೆ.  ಪ್ರತೀ ಕೆರೆಯ ವಿಸ್ತೀರ್ಣ ಮತ್ತು ಅಂದಾಜು ಖರ್ಚುವೆಚ್ಚಗಳ ಪಟ್ಟಿ ತಯಾರಿಸಿ, ಸ್ಥಳೀಯ ರೈತರು ಟ್ರಾಕ್ಟರ್ ಅಥವಾ ಟಿಪ್ಪರ್ ಮೂಲಕ ತಮ್ಮ ಖರ್ಚಿನಲ್ಲಿ ಕೆರೆಯ ಮಣ್ಣನ್ನು ಕೊಂಡೊಯ್ಯಲು ಸಿದ್ಧರಿರುವ ಗ್ರಾಮಗಳಲ್ಲಿ ಮಾತ್ರ ಕೆರೆಯ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇವರ ಕೆಲಸಕ್ಕೆ ಸ್ಥಳೀಯ ಗ್ರಾi ಪಂಚಾಯತ್ ಮತ್ತು ಗ್ರಾಮಸ್ಥರು ಕೈಲಾದ ಸಹಕಾರ ನೀಡಿದ್ದಾರೆ. ಪರಿಣಾಮವಾಗಿ ಧಾರವಾಡದಲ್ಲಿ ಐದು ಕೆರೆಗಳ ಹೂಳೆತ್ತುವ ಕೆಲಸವನ್ನು ಕೆಲವೇ ತಿಂಗಳುಗಳಲ್ಲಿ ಮಾಡಿ ಮುಗಿಸಲಾಗಿದೆ. ಪರಿಣಾಮವಾಗಿ, ಈ ಹಿಂದೆ ಇನ್ನೇನು ಭೂಮಿಯ ಮಟ್ಟಕ್ಕೆ ಸರಿಹೊಂದಿ ಒತ್ತುವರಿಯಾಗುತ್ತವೆಯೇನೋ ಎಂಬ ಭಯದಲ್ಲಿದ್ದ ಕೆರೆಗಳು ಇದೀಗ ನೀರಿನಿಂದ ತುಂಬಿವೆ.

ಸ್ಥಳೀಯರ ಸಹಭಾಗಿತ್ವ

ಧಾರವಾಡದಲ್ಲಿ ಒಟ್ಟು ೧೨೦ ಎಕರೆ ವಿಸ್ತೀರ್ಣದಲ್ಲಿ ಕೆರೆಗಳಿಂದ ಟ್ರ್ಯಾಕ್ಟರ್ ಮತ್ತು ಜೆಸಿಬಿಯನ್ನು ಬಳಸಿ ಹೂಳನ್ನು ತೆಗೆಯಲಾಗಿದೆ. ಜೆಸಿಬಿ ಮತ್ತು ಹಿಟಾಚಿಗಳನ್ನು ಬಳಸಿ ೫ ಕೆರೆಗಳಿಂದ ೧೧೯೯೦ ಟ್ರಾಕ್ಟರ್ ಹೂಳನ್ನು ತೆಗೆಯಲಾಗಿದೆ. ಇದಕ್ಕೆ ತಗಲಿದ ವೆಚ್ಚ ರೂ. ೨೦ ಲಕ್ಷವನ್ನು ಧರ್ಮಸ್ಥಳದಿಂದ ಅನುದಾನದ ರೂಪದಲ್ಲಿ ನೀಡಿದ್ದಾರೆ. ಉಸ್ತುವಾರಿ ಸಚಿವರ ಆದೇಶದಂತೆ ಸ್ಥಳೀಯರ ಸಭಾಗಿತ್ವದಲ್ಲಿ ಅಂದಾಜು ೧೫,೫೫,೮೦೦ ಮೌಲ್ಯದ ಮಣ್ಣು ಸಾಗಾಟದ ಕೆಲಸವನ್ನು ಈ ಗ್ರಾಮದ ಜನ ಮಾಡಿ ಮುಗಿಸಿದ್ದಾರೆ. ಅಂದರೆ ಒಟ್ಟು ಇಲ್ಲಿ ೩೬ ಲಕ್ಷ ರೂಪಾಯಿ ವೆಚ್ಚದ ಕೆಲಸಗಳು ನಡೆದಿದೆ. ಊರಮಂದಿ ಎಲ್ಲಾ ಕೆಲಸಗಳಲ್ಲಿ ಸಾಥ್ ನೀಡಿದ್ದು ಕೆರೆಯ ಮಣ್ಣನ್ನು ತಮ್ಮ ತೋಟಗಳಿಗೆ, ಜಮೀನಿಗೆ ಬಳಸಿಕೊಂಡಿದ್ದಾರೆ. ಕೆರೆಯ ಹೂಳೆತ್ತುವ ಕಾರ್ಯಕ್ರಮದಿಂದಾಗಿ ಈ ಊರಿನ ಕಿರಿದಾದ ಅಪಾಯಕಾರಿ ರಸ್ತೆಗಳು ಅಗಲೀಕರಣದ ಭಾಗ್ಯವನ್ನು ಕಂಡಿವೆ. ಧಾರವಾಡದ ಮುಗದ ಕೆರೆಯ ಪಕ್ಕದ ರಸ್ತೆಯ ಅಗಲೀಕರಣದಿಂದಾಗಿ, ಈ ಊರಿನವರ ರಸ್ತೆ ಅಗಲೀಕರಣದ ಬಹುದಿನಗಳ ಕನಸೊಂದು ಈಡೇರಿದಂತಾಗಿದೆ. ಗ್ರಾಮದಲ್ಲಿದ್ದ ತಗ್ಗು ಪ್ರದೇಶಗಳು ಸಮತಟ್ಟಾಗಿವೆ. ಸುಮಾರು ೭೦೦ರಿಂದ ೮೦೦ ಜನ ರೈತರ ಜಮೀನಿಗೆ ಫಲವತ್ತಾದ ಮಣ್ಣು ದೊರಕಿದಂತಾಗಿದೆ. ಗ್ರಾಮದಲ್ಲಿ ಹಲವಾರು ರಸ್ತೆಗಳು ನಿರ್ಮಾಣವಾಗಿವೆ. ರೈತರ ಕೃಷಿ ಪ್ರದೇಶಕ್ಕೆ ಹೋಗಲು ರಸ್ತೆಗಳನ್ನು ನಿರ್ಮಿಸಲಾಗಿದೆ. ಕೆಲವು ಕಡೆ ಕೆರೆಯ ಎರಡು ಬದಿಗಳಲ್ಲೂ ದೊಡ್ಡ ಪ್ರಮಾಣದ ಬದುವಿನ ನಿರ್ಮಾಣವಾಗಿದೆ. ಸುಮಾರು ೫೦ರಷ್ಟು ಅಪಾಯಕಾರಿ ನೀರಿಲ್ಲದ ಬಾವಿಗಳನ್ನು ಮಣ್ಣಿನಿಂದ ಮುಚ್ಚಲಾಗಿದೆ. ಕೆರೆಯ ಮಣ್ಣನ್ನು ಬಳಸಿ ಶಾಲಾ ಆವರಣ, ದೇವಸ್ಥಾನದ ಆವರಣವನ್ನು ರಚಿಸಲಾಗಿದೆ. ಮರೇವಾಡ ಗ್ರಾಮದ ಹೊಲಗಳಿಗೆ ಹೋಗುವ ದಾರಿಗೆ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗಿದೆ. ಹೀಗೆ ಕೆರೆಯ ಹೂಳೆತ್ತಿದ ಪರಿಣಾಮ, ಇಲ್ಲಿ ಸಾಕಷ್ಟು ಅಭಿವೃದ್ಧಿ ಪರ ಕೆಲಸಗಳು ನಡೆದಿವೆ.

ಸುಮಾರು ಮೂರು ವರ್ಷಗಳಿಂದ ಮಳೆ ಬಾರದೇ ಬರಗಾಲ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರಲ್ಪಟ್ಟ ಕಲಬುರಗಿ ಜಿಲ್ಲೆಯಲ್ಲಿ, ಮಳೆಗಾಲದಲ್ಲಿ ಅಲ್ಪಸ್ವಲ್ಪ ಮಳೆಯಾದರೂ ನೀರು ನಿಲ್ಲದ ಪರಿಸ್ಥಿತಿಯಲ್ಲಿ ಕೆರೆಗಳಿವೆ. ಸುಮಾರು ಹದಿನೈದು ವರ್ಷಗಳಿಂದ ಹೂಳು ತುಂಬಿಕೊಂಡಿದ್ದ ನಾಲ್ಕರಿಂದ ಐದು ಎಕರೆಗಳ ವಿಸ್ತೀರ್ಣವನ್ನು ಹೊಂದಿರುವ ಆಳಂದ ತಾಲೂಕಿನ ರುದ್ರವಾಡಿ ಗ್ರಾಮದ ಬಸವನಕಟ್ಟೆ ಕೆರೆ, ಸರಸಾಂಬಾದ ಮಡ್ಡಿ ಕೆರೆ, ಅಫಜಲ್‌ಪುರ ತಾಲೂಕಿನ ಬಳೂರ್ಗಿ ಗ್ರಾಮದ ಹೊಸಕೆರೆ ಹೀಗೆ ಮೂರು ಕೆರೆಗಳನ್ನು ರೂ.೧೦.೬೧ ಲಕ್ಷ ವೆಚ್ಚದಲ್ಲಿ ೫೧೪ ತಾಸುಗಳ ಕೆಲಸವನ್ನು ಕೈಗೊಳ್ಳುವ ಮೂಲಕ ಈ ಊರಿನ ಜನತೆಗೆ ಕೆರೆಯ ನೀರನ್ನು ಉಣಿಸುವ ಪ್ರಯತ್ನವನ್ನು ಮಾಡಲಾಗಿದೆ. ಊರಿನವರ ಪರಿಶ್ರಮವನ್ನು ಲೆಕ್ಕಹಾಕಿದರೆ, ಇಲ್ಲಿ ಒಟ್ಟು ೩೧ ಲಕ್ಷ ರೂಪಾಯಿ ವೆಚ್ಚದ ಕೆಲಸಗಳು ನಡೆದಿವೆ. ಪರಿಣಾಮವಾಗಿ ಈ ಬಾರಿಯ ಮಳೆಗಾಲದಲ್ಲಿ ಕೆರೆ ಪೂರ್ತಿ ತುಂಬಿದ್ದು, ಇದರಿಂದಾಗಿ ೨೯೫೦ ಕುಟುಂಬಗಳಿಗೆ ಕುಡಿಯುವ ನೀರು ಲಭಿಸಿದಂತಾಗಿದೆ. ಸುಮಾರು ೩೦೦ ಎಕರೆ ಕೃಷಿ ಭೂಮಿ ಪ್ರದೇಶದಲ್ಲಿ ಅಂತರ್ಜಲವನ್ನು ಹೆಚ್ಚಿಸಿದಂತಾಗಿದೆ. ದನಕರು, ಪ್ರಾಣಿ-ಪಕ್ಷಿಗಳಿಗೆ ಸುಲಭವಾಗಿ ಕುಡಿಯುವ ನೀರು ದೊರೆತಂತಾಗಿದೆ. ಗ್ರಾಮಗಳಲ್ಲಿ ಒಟ್ಟು ೩೮ ಬೋರ್‌ಗಳು, ೬ ಸಾರ್ವಜನಿಕ ಬಾವಿಗಳಿದ್ದು ಇದೀಗ ಅವುಗಳು ಪೂರ್ತಿ  ತುಂಬಿಕೊಂಡಿವೆ. ಬತ್ತಿದ ಬೋರ್‌ಗಳಲ್ಲೂ ನೀರು ಲಭಿಸುತ್ತಿದೆ.

ಜನಪ್ರತಿನಿಧಿ ಮತ್ತು ಸಾರ್ವಜನಿಕರ ಸಹಕಾರ

ಕೆರೆಯ ಹೂಳೆತ್ತುವ ಕೆಲಸಗಳಿಗೆ ಧಾರವಾಡ ಮತ್ತು ಕಲಬುರಗಿ ಜಿಲ್ಲೆಯ ಸ್ಥಳೀಯ ಶಾಸಕರು, ಗ್ರಾಮ ಪಂಚಾಯತ್‌ನ ಅಧ್ಯಕ್ಷರು ಮತ್ತು ಸದಸ್ಯರು ಎಲ್ಲಾ ರೀತಿಯ ಸಹಕಾರವನ್ನು ನೀಡಿರುವುದು ಇಲ್ಲಿ ಉಲ್ಲೇಖನೀಯ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿಯವರು, ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್‌ನ ಸದಸ್ಯರಾದ ಹರ್ಷಾನಂದ ಉಚಿತವಾಗಿ ಕೆರೆಯಿಂದ ಹೂಳೆತ್ತಿದ ಮಣ್ಣನ್ನು ಸಾಗಿಸಲು ಟಿಪ್ಪರನ್ನು ಒದಗಿಸಿದ್ದಾರೆ. ಇಲ್ಲಿನ ಪ್ರತಿ ಗ್ರಾಮಗಳಲ್ಲಿ ಊರಿನ ರೈತರು ಸುಮಾರು ೨೦ ಟ್ರಾಕ್ಟರ್‌ಗಳ ಮೂಲಕ ಮಣ್ಣು ಸಾಗಾಟ ಮಾಡಲು ಸಾಥ್ ನೀಡಿರುತ್ತಾರೆ. ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ದಿನ ಮೂರು ಕೆರೆಗಳಿಂದ ಸುಮಾರು ೬೦ ಟ್ರಾಕ್ಟರ್‌ಗಳಷ್ಟು ಕೆರೆಯ ಮಣ್ಣನ್ನು ಸ್ಥಳೀಯರು ತಮ್ಮ ಹೊಲ-ಗದ್ದೆಗಳಿಗೆ ಸಾಗಾಟ ಮಾಡಿಕೊಂಡಿದ್ದು, ಒಟ್ಟು ೩೦೦ರಿಂದ ೪೦೦ ಟ್ರಾಕ್ಟರ್ ಲೋಡ್ – ಅಂದರೆ ಅಂದಾಜು ೨೦ ಲಕ್ಷ ರೂಪಾಯಿ ಮೌಲ್ಯದ ಮಣ್ಣನ್ನು ಕೆರೆಯಿಂದ ತೆಗೆಯಲಾಗಿದೆ. ಅದು ಅಲ್ಲಿನ ಜನತೆಗೆ ಉಪಯೋಗವೂ ಆಗಿದೆ. ಎಲ್ಲಾ ಕೆರೆಗಳ ದಂಡೆಗಳ ಮೇಲೆ ಸಾಲು ಮರಗಳನ್ನು ನಾಟಿ, ಶಾಲಾ ವನ ರಚನೆ, ಕೆರೆಗಳ ಉದ್ಘಾಟನೆಯನ್ನು ಮಾಡುವ ಮೂಲಕ, ಪರಿಸರ ಬೆಳೆಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಕೆರೆಗಳ ಹೂಳೆತ್ತುವ ಮೂಲಕ ಬೇಸಿಗೆಗಾಲದಲ್ಲಿ ನೀರ ಮೂಲವನ್ನು ಕಂಡುಕೊಳ್ಳುವ ಜೊತೆಗೆ, ಮಳೆನೀರ ಸಂರಕ್ಷಣೆಯೂ ಸಾಧ್ಯವಾಗಿದೆ.

ಮುಂದಿನ ಯೋಜನೆ

ಕೆರೆ ನಿರ್ವಾಹಣಾ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯ ಮೂಲಕ ಕೆರೆ ಕಟ್ಟೆಯ ಮೇಲೆ ಗಿಡಗಳನ್ನು ನಾಟಿ ಮಾಡುವ ಮೂಲಕ ಸಣ್ಣ ಉದ್ಯಾನವನ್ನು ರಚಿಸುವುದು, ಗ್ರಾಮದ ಜನರಿಗೆ ನೀರಿನ ಬಳಕೆ ಮತ್ತು ಶುಚಿತ್ವದ ಬಗ್ಗೆ ಮಾಹಿತಿ ನೀಡುವುದು, ಕೆರೆ ಸುತ್ತಲೂ ಸಸಿ ನಾಟಿಗಳ ಮೂಲಕ ಪರಿಸರ ಜಾಗೃತಿ ಮೂಡಿಸುವುದು, ಅಲ್ಲದೆ ಕೆರೆ ಪಕ್ಕದಲ್ಲಿ ನೈರ್ಮಲ್ಯವನ್ನು ಕುರಿತಾದ ನಾಮಫಲಕವನ್ನು ಹಾಕುವುದು, ನೀರಿನ ಸ್ವಚ್ಛತೆ ಮತ್ತು ಕೆರೆಯ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುವುದು, ಇವರ ಮುಂದಿನ ಯೋಜನೆ ಮತ್ತು ಯೋಚನೆ.

ಕೆರೆಗಳ ಅಭಿವೃದ್ಧಿ ಸರಕಾರದ ಕೆಲಸವೆಂದು ಕೈಕಟ್ಟಿ ಕುಳಿತುಕೊಳ್ಳುವ ಬದಲು, ಇಂತಹ ಪ್ರಯತ್ನಗಳತ್ತ ಇತರ ಸಂಘ-ಸಂಸ್ಥೆಗಳು ಒಲವು ತೋರಿದಲ್ಲಿ, ರಾಜ್ಯದಲ್ಲಿರುವ ನೂರಾರು ಕೆರೆಗಳು ಮತ್ತೆ ಮರುಜೀವ ಪಡೆದು, ರಾಜ್ಯದ ಜನತೆಯ ನೀರಿನ ಸಮಸ್ಯೆಗೆ ಅಲ್ಪ ಪ್ರಮಾಣದ ಮುಕ್ತಿ ದೊರೆಯುವುದರಲ್ಲಿ ಎರಡು ಮಾತಿಲ್ಲ. ಇತರ ಸಂಘ-ಸಂಸ್ಥೆಗಳು ಕೆರೆಗಳಿಂದ ಹೂಳೆತ್ತುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು, ಆ ಊರಿನ ಜನತೆಯನ್ನು ಒಂದುಗೂಡುವಂತೆ ಪ್ರೇರೆಪಿಸಿದರೆ, ರಾಜ್ಯದಲ್ಲಿರುವ ಸಾಕಷ್ಟು ಕೆರೆಗಳು ಮರುಜೀವ ಪಡೆದವು. ಆ ಮೂಲಕ ನೀರಿನ ಸಮಸ್ಯೆಗೊಂದು ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಚಿತ್ರ-ಲೇಖನ: ಪ್ರೇಮ.ಪಿ.                                                                    

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*