ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ತೈಲಮಾಲಿನ್ಯ

ವಿಮಾನಗಳು ಸ್ವಲ್ಪ ಆಯ ತಪ್ಪಿದರೂ ಸುದ್ದಿಯಾಗುತ್ತದೆ. ಇತ್ತೀಚೆಗೆ ರೈಲುಗಳು ಬೀಳುವುದೂ ಸಹಾ ಸಾಮಾನ್ಯವಾಗಿದೆ. ಬಸ್ಸು, ಕಾರು, ಮೋಟಾರ್‌ಬೈಕ್‌ಗಳ ಅಪಘಾತವಂತೂ ದಿನನಿತ್ಯದ ವಿಷಯವೆನಿಸಿ ಬೆಲೆಯೇ ಇಲ್ಲವಾಗಿದೆ. ಆದರೆ ಹಡಗುಗಳು ಡಿಕ್ಕಿ ಮಾತ್ರ ದೊಡ್ಡ ಸುದ್ದಿಯಾಗುವುದೇ ಇಲ್ಲ. ಮೊನ್ನೆ, ಅಂದರೆ ಇಸವಿ ೨೦೧೭ರ ಜನವರಿ ೨೮ರಂದು ಹೀಗೆ ಎರಡು ಹಡಗುಗಳು ಡಿಕ್ಕಿ ಹೊಡೆದವು. ಅದು ಜನರನ್ನು ಸಾಗಿಸುವ ಹಡಗಾಗಿದ್ದಿದ್ದರೆ, ಬಹು ದೊಡ್ಡ ಸುದ್ದಿಯಾಗುತ್ತಿತ್ತು. ಹಾಗಂತ ಇದಕ್ಕೂ ದೊಡ್ಡ ಸುದ್ದಿಯಾಗಬೇಕಿದ್ದ ಅನಾಹುತ ಅಲ್ಲಿ ಸಂಭವಿಸಿತ್ತು. ಆದರೂ ಅದೇನು ಅಂತಹ ಸುದ್ದಿಯಾಗಲೇ ಇಲ್ಲ. ಯಾವ ಪರಿಸರವಾದಿಗಳೂ ತಲೆಕೆಡಿಸಿಕೊಳ್ಳಲಿಲ್ಲ.

Picture7ಅಂದು ಮರೀನಾ ಬೀಚ್‌ಗೆ ವಾಕಿಂಗ್ ಹೋದವರಿಗೆ ಕಡಲನೀರು ಕಡುಕಪ್ಪಾಗಿ ಕಾಣುತ್ತಿತ್ತು. ಆಕಾಶ ನೋಡಿದರೆ ಅಲ್ಲೇನು ಕಪ್ಪುಮೋಡಗಳು ಇರಲಿಲ್ಲ. ಇನ್ನೂ ಹತ್ತಿರ ಹೋಗಿ ನೋಡಿದರೆ, ನೀರಿನ ಮೇಲೆ ಕಪ್ಪನೆಯ ಕೊಳಚೆಯಂತಹುದು ಏನೋ ತೇಲುತ್ತಿತ್ತು. ನೋಡಿದಷ್ಟು ದೂರ ಕಪ್ಪನೆಯ ಕೊಳಚೆಯದೇ ಸಶೇಷ. ಒಂದು ರೀತಿಯ ವಾಸನೆ. ಕೆಲವರು ಅದನ್ನು ಕೈಯಲ್ಲಿ ಮುಟ್ಟಿ ನೋಡಿದರು. ಚನ್ನೈನ ಕೊಳಚೆ ಇಷ್ಟೊಂದು ಹೆಚ್ಚಾಗಿದೆಯಾ ಎಂದು ಅನುಮಾನಪಟ್ಟರು. ಇನ್ನೂ ಮುಂದೆ ಹೋಗುತ್ತಿದ್ದಂತೆ, ಕಡಲ ಹಕ್ಕಿಗಳು ಕಪ್ಪಗಾಗಿ ತೆವಳುತ್ತಾ ದಡ ಸೇರಲು ಹವಣಿಸುತ್ತಿದ್ದವು. ಅವುಗಳನ್ನು ಹಿಡಿದು ತಿನ್ನಲು ನಾಯಿಗಳು ಮೂಸುತ್ತ, ಹತ್ತಿರ ಹೋಗಿ ಕೆಟ್ಟ ಮೂತಿಮಾಡುತ್ತಾ ಹಿಂದಿರುಗಿ ಬರುತ್ತಿದ್ದವು. ಆ ಕಡಲ ಹಕ್ಕಿಗಳ ರೆಕ್ಕೆ ಹಾಗೂ ಮೈತುಂಬಾ ಕಪ್ಪನೆಯ ರಾಡಿ ಹತ್ತಿತ್ತು. ಸಮುದ್ರದ ನೀರಿನಲ್ಲೇ ತೊಳೆಯೋಣವೆಂದರೆ, ಸಮುದ್ರದ ತುಂಬಾ ಅದೇ ರಾಡಿ. ಹತ್ತಿರದಲ್ಲೆಲ್ಲೂ ನೀರು ಸಿಗುವಂತಿರಲಿಲ್ಲ. ಹೀಗಾಗಿ ಎಲ್ಲರೂ ಸುಮ್ಮನೆ ನೋಡಿ ಲೊಚ್‌ಲೊಚ್‌ಗುಟ್ಟುತ್ತಾ ಸಾಗುತ್ತಿದ್ದರು.

ಇದಕ್ಕೆಲ್ಲಾ ಕಾರಣವಾದದ್ದು ತಮಿಳುನಾಡಿನ ಚನ್ನೈನ ಎನ್ನೋರ್‌ನಲ್ಲಿರುವ ಕಾಮರಾಜರ್ ಬಂದರಿನ ಬಳಿ ನಡೆದ ಘಟನೆ. ಕಾಮರಾಜರ್ ಬಂದರಿನಿಂದ ಎರಡು ನಾಟಿಕಲ್ ದೂರದಲ್ಲಿ, ಶನಿವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಬಿಡಬ್ಲ್ಯು ಮ್ಯಾಪಲ್ ಎನ್ನುವ ಎಲ್‌ಪಿಜಿ ಟ್ಯಾಂಕರ್ ಹೊತ್ತ ಹಡಗು ತನ್ನೆಲ್ಲಾ ಭಾರವನ್ನು ಇಳಿಸಿ ಹಿಂದಿರುಗುತ್ತಿತ್ತು. ಬಂದರಿನ ಒಳಗೆ ಪ್ರವೇಶಿಸುತ್ತಿದ್ದ ಕಚ್ಚಾ ತೈಲ ಹೊತ್ತ ಡಾನ್ ಕಾಂಚಿಪುರ ಎಂಬ ಹಡಗು ಮ್ಯಾಪಲ್ಗೆ ಡಿಕ್ಕಿ ಹೊಡೆಯಿತು. ಡಾನ್ನಲ್ಲಿದ್ದ ಕಚ್ಚಾ ತೈಲದ ಟ್ಯಾಂಕ್ ಒಡೆದು ತೈಲವೆಲ್ಲಾ ನೀರು ಪಾಲಾಯಿತು. ತೈಲವು ಗಟ್ಟಿಯಾಗಿರುವ ಕಾರಣ ಅದನ್ನು ಸಲೀಸಾಗಿ ತೆಗೆಯಲು ಆಗದು.

ಅಪಘಾತ ಸಂಭವಿಸಿದಾಗ ಹಡಗುಗಳ ಜೊತೆಯಲ್ಲಿ ಸುಗಮ ಸಂಚಾರಕ್ಕಾಗಿ ನಿಯೋಜಿಸಲಾಗುವ ಟಗ್ ಬೋಟ್‌ಗಳು ಇದ್ದ ಕಾರಣ, ಯಾವುದೇ ಸಿಬ್ಬಂದಿಗಳ ಪ್ರಾಣಾಪಾಯವಾಗಲಿಲ್ಲ. ಹಡಗಿನಲ್ಲಿರುವ ತೈಲ ಸೋರಿತೇ ವಿನಃ, ಹಡಗಿನ ತಳಭಾಗಕ್ಕೆ ಯಾವುದೇ ಅನಾಹುತವಾಗಿಲ್ಲ ಎಂಬುದು ಬಂದರು ಅಧಿಕಾರಿಗಳ ಹೇಳಿಕೆ.

Picture9ಭಾನುವಾರ ಬೆಳ್ಳಂಬೆಳಿಗ್ಗೆಯೇ ಬಂದ ಪ್ರವಾಸಿಗರಿಗಂತೂ ನೀರೇ ಕಾಣುತ್ತಿರಲಿಲ್ಲ. ನೂರಾರು ಮೀನುಗಳು, ಹಕ್ಕಿಗಳು ಮತ್ತು ಆಮೆಗಳು ಮರಳದಿಣ್ಣೆಗೆ ಬಂದು ಬಿದ್ದಿದ್ದು ಹುಬ್ಬೇರಿಸುವಂತೆ ಮಾಡಿತ್ತು. ಅಲ್ಲಿನ ಮೀನುಗಾರ ರೋಬಿನ್ ಮತ್ತು ಅವರ ಸಮುದಾಯವರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದರು. ಕನಿಷ್ಠ ೨೦ ದಿನಗಳ ಕಾಲ ಅವರಿಗೆ ಇದು ಸಮಸ್ಯೆ. ಕಾರಣ ಕಚ್ಚಾ ತೈಲ ಏಕೆ ಬಿತ್ತು, ಹೇಗೆ ಬಿತ್ತು ಎನ್ನುವ ಕುರಿತು ತನಿಖೆ ಆಗುತ್ತದೆಯೇ ಹೊರತು, ಅದನ್ನು ಶೀಘ್ರವಾಗಿ ತೆರವುಗೊಳಿಸುವ ಕಾರ್ಯ ನಡೆಯುವುದಿಲ್ಲ. ಅಲ್ಲಿಯವರೆಗೆ ಆರೆಂಟು ಕಿಲೋಮೀಟರ್‌ಗಳವರೆಗೆ ಅದು ವ್ಯಾಪಿಸಿರುತ್ತದೆ. ಮೀನುಗಾರರ ವ್ಯಾಪ್ತಿ ಸಹ ಹೆಚ್ಚೆಂದರೆ ೨೦ ಕಿಲೋಮೀಟರ್‌ಗಳು ಮಾತ್ರ. ಹೆಚ್ಚಿನವರು ೧೦ ಕಿಲೋಮೀಟರ್ ಒಳಗೆ ಇರುತ್ತಾರೆ. ಅಮಾವಾಸ್ಯೆಯಾದ ಕಾರಣ ಸಮುದ್ರದಲ್ಲಿ ಇಳಿತವಿರುತ್ತದೆ. ಹೀಗಾಗಿ ಕಚ್ಚಾ ತೈಲವು ಬಲು ಬೇಗ ಆಳ ಸಮುದ್ರವನ್ನು ಸೇರುತ್ತದೆ. ಒಂದೊಮ್ಮೆ ಆಳ ಸಮುದ್ರವನ್ನು ಸೇರಿದರೆ, ತೈಲದ ಕಣಗಳು ಅಲ್ಲಿನ ಜೀವಿಗಳಿಗೆ ತೀವ್ರವಾದ ತೊಂದರೆಯನ್ನು ಉಂಟುಮಾಡುತ್ತದೆ.

ಇದರಿಂದ ಮೀನುಗಾರರ ದಿನದ ಆದಾಯಕ್ಕೆ ಹೊಡೆತ. ಮಾರುಕಟ್ಟೆಯಲ್ಲಿ ಮೀನಿನ ಕೊರತೆ. ಮೀನಿನ ಬೆಲೆ ಏರಿಕೆ. ಹೀಗೆ ಆರ್ಥಿಕ ಏರುಪೇರಿಗೆ ಕಾರಣವಾಗುತ್ತದೆ. ಇಲ್ಲಿ ಇನ್ನೊಂದು ಪರಿಣಾಮವೂ ಉಂಟು. ಸೋರಿಹೋದ ತೈಲವನ್ನು, ಅರ್ಥಾತ್ ಟಾರ್‌ನ್ನು ಎಷ್ಟೇ ಬಳಿದರೂ, ಇನ್ನೂ ಎರಡು ವರ್ಷಗಳ ಕಾಲ ಅದರ ಸಶೇಷ ನಾಶವಾಗದು. ಆ ಸಶೇಷವು ಮೀನುಗಳ ದೇಹಕ್ಕೂ ಸೇರುತ್ತವೆ. ಅಂತಹ ಮೀನುಗಳನ್ನು ತಿನ್ನುವ ಗ್ರಾಹಕರಿಗೆ ಕ್ಯಾನ್ಸರ್ ಉಚಿತ. ಉಳಿದಂತೆ ಶ್ವಾಸಕೋಶ, ಕರುಳು ಹಾಗೂ ಲಿವರ್‌ಗಳಿಗೆ ತೊಂದರೆ ಉಂಟಾಗುತ್ತವೆ ಎನ್ನುವ ಅಧ್ಯಯನವನ್ನು ಕೊಲ್ಲಿ ಯುದ್ದದ ತೈಲ ಸೋರಿಕೆಯ ಪರಿಣಾಮದಲ್ಲಿ ದಾಖಲಿಸಿದ್ದಾರೆ. ನಮ್ಮಲ್ಲಿ ಅಂತಹ ಅಧ್ಯಯನಗಳು ಆಗುವುದೂ ಇಲ್ಲ. ಆದರೂ ಅದು ಜನಸಾಮಾನ್ಯರಿಗೆ ತಿಳಿಯುವುದೂ ಇಲ್ಲ!!

ಮೆಕ್ಸಿಕೋ ಕೊಲ್ಲಿಯಲ್ಲಿನ ತೈಲ ಸೋರಿಕೆ

ಮೆಕ್ಸಿಕೋ ಕೊಲ್ಲಿಯಲ್ಲಿ ಸಮುದ್ರ ಗರ್ಭದೊಳಗೆ ಪೆಟ್ರೋಲಿಯಂ ಬಾವಿಯನ್ನು ಸ್ಥಾಪಿಸಲಾಗಿದೆ. ಸಮುದ್ರದ ಗರ್ಭದೊಳಗೆ ಸ್ಥಾಪಿಸಲಾಗಿದ್ದ ಈPicture10 ಪೆಟ್ರೋಲಿಯಂ ಬಾವಿಯು ಇಸವಿ ೧೯೮೯ರಲ್ಲಿ ಸ್ಟೋಟಗೊಂಡು, ಭಾರಿ ಪ್ರಮಾಣದ ಪರಿಸರ ನಷ್ಟ ಸಂಭವಿಸಿತ್ತು. ಬಿ.ಪಿ ಕಂಪನಿಯ ಒಡೆತನದ ಪೆಟ್ರೋಲಿಯಂ ತೈಲ ಸಂಗ್ರಹಾಲಯವೊಂದು ೧೯೮೯ರಲ್ಲೇ ಸಿಡಿದು, ೪೦ ಲಕ್ಷ ಲೀಟರ್ ಪೆಟ್ರೋಲಿಯಂ ಸಮುದ್ರದೊಳಗೆ ಸೋರಿಕೆಯಾಗಿತ್ತು. ಈ ಘಟನೆಯ ಸಂದರ್ಭದಲ್ಲಿ ಸೋರಿಕೆಯಾಗಿರುವ ಪೆಟ್ರೋಲನ್ನು ಸಂಗ್ರಹಿಸಲು ಅವಶ್ಯವಾದ ರಬ್ಬರ್ ಬಿರಡೆಗಳಾಗಲೀ, ಅಥವಾ ರಕ್ಷಣಾ ಕಾರ್ಯಪಡೆಗಳನ್ನಾಗಲಿ ಸಿದ್ಧಪಡಿಸಿರಲಿಲ್ಲ. ಅದೆಷ್ಟು ತೈಲ ಸೋರಿತು ಎಂದು ಆಗ ಕಂಡುಹಿಡಿಯಲೂ ಸಹ ಆಗಿರಲಿಲ್ಲ. ಒಂಭತ್ತು ಲಕ್ಷ ಲೀಟರ್ ಪೆಟ್ರೋಲಿಯಂ ಸಮುದ್ರದೊಳಗೆ ಸೇರಿದೆ ಎಂಬುದು ಒಂದು ಊಹೆ ಮಾತ್ರ.

ಈ ಘಟನೆಯಲ್ಲಿ ಎಣ್ಣೆ ಕೊಳವೆಗಳು ಸ್ಪೋಟಗೊಂಡು, ಅಲ್ಲಿದ್ದ ೧೨೬ ಮಂದಿ ಕೆಲಸಗಾರರಲ್ಲಿ ೧೧ ಜನ ಸಾವನ್ನಪ್ಪಿದ್ದರು. ಲಕ್ಷಾಂತರ ಜೀವಿಗಳ ಮಾರಣಹೋಮ ನಡೆಯಿತು. ಪೆಟ್ರೋಲಿಯಂ ಬಾವಿಯಿಂದ ಪ್ರತಿ ದಿನ ಎಂಟು ಲಕ್ಷ ಲೀಟರ್‌ಗೂ ಹೆಚ್ಚು ಪೆಟ್ರೋಲಿಯಂ ಸಮುದ್ರದೊಳಗೆ ಚಿಮ್ಮುತ್ತಿತ್ತು. ಅಂದು ಒಟ್ಟು ಸಾವಿಗೀಡಾದ ಹಕ್ಕಿಗಳ ಸಂಖ್ಯೆ ೬೧೦೪. ೨೦೮೪ ಹಕ್ಕಿಗಳನ್ನು ತೊಳೆದು ಬದುಕಿಸಲಾಗಿತ್ತು. ಒಟ್ಟು ೬೦೫ ಆಮೆಗಳು ಸತ್ತವು. ೫೩೫ ಆಮೆಗಳನ್ನು ರಕ್ಷಿಸಲಾಯಿತು. ೯೭ ಕಡಲ ಹಸುಗಳು ನಾಲ್ಕಾರು ದಿನಗಳ ಅಂತರದಲ್ಲಿ ಜೀವಬಿಟ್ಟವು. ಕೇವಲ ಒಂಭತ್ತು ಕಡಲ ಹಸುಗಳನ್ನು ಮಾತ್ರ ಕಾಪಾಡಲು ಸಾಧ್ಯವಾಯಿತು. ಇವೆಲ್ಲ ಲೆಕ್ಕಕ್ಕೆ ಸಿಕ್ಕ ಜೀವಿಗಳು. ಇನ್ನು ಲೆಕ್ಕಕ್ಕೆ ಸಿಗದ ಇನ್ನೆಷ್ಟು ಜೀವಿಗಳು ನಾಶವಾದವೋ ಹುಡಿಕಿದವರು ಯಾರು?

ಈ ಹಿಂದೆಯೂ ಹೀಗೆ ತೈಲ ಸೋರಿಕೆ ಘಟನೆಗಳು ಅಗಿವೆ. ಆಗೆಲ್ಲ ತೈಲವನ್ನು ಮೊಗೆದು ಮತ್ತೆ ಬಳಕೆ ಮಾಡಿದ್ದೇವೆ ಎನ್ನುವ ಹೇಳಿಕೆಗಳನ್ನು ಅಧಿಕಾರಿಗಳು ಕೊಟ್ಟಿದ್ದಾರೆ. ಇದನ್ನು ಪರೀಕ್ಷಿಸಿದವರು ಯಾರು?? ಅದರಿಂದ ಆಗುವ ಅನಾಹುತಗಳನ್ನು ದಾಖಲಿಸಿದವರು ಯಾರು? ಅಲ್ಲಿನ ಪರಿಸರದಲ್ಲಾದ ಏರುಪೇರುಗಳನ್ನು ನೋಡಿದವರು ಯಾರು?

ಆಯಿಲ್ ಸ್ಪಿಲ್ ಅಥವಾ ತೈಲ ಚೆಲ್ಲಿಕೆ

ತೈಲ ಸಾಗಾಣಿಕೆ ಮಾಡುವ ಹಡಗುಗಳಿಂದ ಉಂಟಾಗುವ ಸೋರಿಕೆಗಳನ್ನು ಆಯಿಲ್ ಸ್ಪಿಲ್ ಅಥವಾ ತೈಲ ಚೆಲ್ಲಿಕೆ ಎನ್ನುತ್ತಾರೆ. ಇದು Picture8ಆಕಸ್ಮಿಕವಾಗಿ ಅಥವಾ ಅಪಘಾತದಿಂದಾಗಿ ಆಗುತ್ತಿರುತ್ತವೆ. ಸಾಮಾನ್ಯವಾಗಿ ಸಾಗರ ಅಥವಾ ಸಮುದ್ರಗಳಲ್ಲಿ ಚೆಲ್ಲಿದ ತೈಲವನ್ನು ಮಾತ್ರ ಈ ರೀತಿ ಸೋರಿಕೆ ಎಂದು ಪರಿಗಣಿಸಲಾಗುತ್ತದೆ. ಹೀಗೆ ಸೋರಿಕೆ ಉಂಟಾದಾಗ, ಸಮುದ್ರದಲ್ಲಿ ಸ್ವಯಂ-ಶುದ್ಧೀಕರಣ ಕ್ರಿಯೆ ಘಟಿಸುತ್ತದೆ. ಅದು ಸೋರಿಕೆಯಾದ ತೈಲವನ್ನು ವಿಘಟಿಸುತ್ತದೆ. ಸೋರಿಕೆಯು ಅತೀ ಹೆಚ್ಚಾದರೆ, ಕಚ್ಚಾ ತೈಲವು ಟಾರ್ ಆಗಿ ನೀರಿನ ಮೇಲೆ ತೇಲತೊಡಗುತ್ತದೆ. ವಿಘಟಿತ ಕಚ್ಚಾ ತೈಲದ ಕೆಲವು ಅಂಶಗಳು ಮಾತ್ರ ಸಮುದ್ರದಲ್ಲಿ ಕರಗುತ್ತವೆ. ಉದಾಹರಣೆಗೆ ಕಚ್ಚಾ ತೈಲದಲ್ಲಿರುವ ಗಂಧಕವು ಎಂದೆಂದಿಗೂ ಕರಗುವುದಿಲ್ಲ. ಸಮುದ್ರದ ಜೀವಿಗಳಿಗೆ ಅದು ತೀವ್ರ ವಿಷಕಾರಿ.

ಕೊಲ್ಲಿ ಯುದ್ಧದ ಪರಿಣಾಮ

ಇಸವಿ ೧೯೯೧-೯೨ರಲ್ಲಿ, ಕೊಲ್ಲಿ ಯುದ್ಧ ನಡೆಯಿತು. ಆಗ ಆದ ತೈಲ ಸೋರಿಕೆ ಅತ್ಯಂತ ಗಂಭೀರ ಪ್ರಮಾಣದ್ದು. ಸುಮಾರು ೧.೨ ಬಿಲಿಯನ್ ಲೀಟರ್‌ಗಳಷ್ಟು ಕಚ್ಚಾ ತೈಲವು ಕೊಲ್ಲಿಯಲ್ಲಿ ಚಲ್ಲಿಹೋಯಿತು. ಸೌದಿ ಅರೇಬಿಯಾದ ಕರಾವಳಿಯಲ್ಲಿ ಅತ್ಯಂತ ಹೆಚ್ಚಿನ ತೈಲವು ಸೇರಿಕೊಂಡಿತ್ತು. ಅದನ್ನು ನಿವಾರಣೆ ಮಾಡಲು ಎರಡು ವರ್ಷಗಳ ಕಾಲ ಹಿಡಿಯಿತು.

ಅಷ್ಟೊತ್ತಿಗಾಗಲೇ ಏನೆಲ್ಲಾ ವಿನಾಶಗಳು ಆಗಿಹೋಗಿದ್ದವು. ಸುಮಾರು ೩೦,೦೦೦ ಕಡಲ ಹಕ್ಕಿಗಳು ಸತ್ತಿದ್ದವು. ಮ್ಯಾಂಗ್ರೂವ್ ಕಾಡು ಸಂಪೂರ್ಣ ನಾಶವಾಯಿತು. ಅದನ್ನು ಇನ್ನೂವರೆಗೂ ಮತ್ತೆ ಬೆಳೆಸಲಾಗಿಲ್ಲ. ಅಲ್ಲಿದ್ದ ಲವಣ ಜೌಗು ಟಾರ್‌ನಿಂದ ತುಂಬಿಹೋಯಿತು. ಪರಿಣಾಮ ಜೌಗನ್ನು ಅವಲಂಬಿಸಿದ ೪೦ಕ್ಕೂ ಹೆಚ್ಚು ಜೀವಿಗಳು ನಿರ್ನಾಮಗೊಂಡವು. ಇಂದು ಅಲ್ಲಿ ಜೌಗು ಪ್ರದೇಶವೇ ಇಲ್ಲ. ಜೌಗು ಪ್ರದೇಶ ಇಲ್ಲದ ಕಾರಣ ಬಿಸಿಲಿನ ತಾಪ ಇನ್ನಷ್ಟು ಹೆಚ್ಚಿದೆ.

ಚಿತ್ರ-ಲೇಖನ: ಪೂರ್ಣಪ್ರಜ್ಞ ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*