ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ರೈಲ್ವೇ ಹಳಿಗಳ ಮೇಲೆ ಜೈವಿಕ ಶೌಚಾಲಯಗಳು, ರೈಲ್ವೇ ಇಲಾಖೆ ತನ್ನ ಕಾರ್ಯಚಟುವಟಿಕೆಯನ್ನು ‘ಸ್ವಚ್ಛ’ಗೊಳಿಸಬೇಕಿದೆ

ರೈಲ್ವೇ ಹಳಿಗಳ ಮೇಲೆ ಮಲವನ್ನು ಸುರಿಯುವುದು ಅಸಹ್ಯಕರ ಆಚರಣೆ ಒಂದೇ ಅಲ್ಲ, ಅದು ಹಳಿಗಳನ್ನು ತುಕ್ಕು ಹಿಡಿಸುತ್ತದೆ.  ಜೈವಿಕ-ಶೌಚಾಲಯಗಳ ಬಳಕೆಯಿಂದ, ರೈಲ್ವೇ ಇಲಾಖೆಯು ಈ ಪರಿಸ್ಥಿತಿಯನ್ನ್ನು ಬದಲಿಸಲು ಹೊರಟಿದೆ….

bioloos - 1 copyಸುಮಾರು ಎರಡು ದಶಕಗಳಿಂದಲೂ, ೧೯೯೩ರ ಮಲ ಹೊರುವವರ ನೇಮಕಾತಿ ಹಾಗೂ ಒಣ ಶೌಚಾಲಯಗಳ ನಿರ್ಮಾಣ (ನಿಷೇಧ) ಕಾಯಿದೆಯು ಕಾನೂನಿನ ಪುಸ್ತಕಗಳ ನಿಷ್ಕ್ರಿಯ ಭಾಗವಾಗಿತ್ತು. ಈ ಕಾಯಿದೆಯಲ್ಲಿ, ಮಲವನ್ನು ಮನುಷ್ಯರು ಹೊರುವ ವ್ಯವಸ್ಥೆಯಿರುವ ಒಣ ಶೌಚಾಲಯಗಳ ನಿರ್ಮಾಣದ ಮೇಲೆ ನಿರ್ಬಂಧ ಹೇರಿ, ಮಲ ಹೊರುವ ಪದ್ಧತಿಯನ್ನು ಕಾನೂನುಬಾಹಿರ ಮಾಡಲಾಗಿದೆ.  ನಿಬಂಧನೆಗಳ ಹೊರತಾಗಿಯೂ, ಈ ಅಮಾನವೀಯ ಆಚರಣೆಯು ಅವಿರತವಾಗಿ ನಡೆದಿದ್ದು, ನಿಬಂಧನೆಗಳ ೨೦ ವರ್ಷದ ಚರಿತ್ರೆಯಲ್ಲಿ ಅಪರಾಧಕ್ಕೆ ಯಾವುದೇ ದಂಡನೆಯಾಗಿಲ್ಲ.  ಜೊತೆಗೆ, ಈ ನಿಟ್ಟಿನಲ್ಲಿ ಅತೀ ದೊಡ್ಡ ತಪ್ಪಿತಸ್ಥ – ಭಾರತೀಯ ರೈಲ್ವೇಯನ್ನು ಇದರ ಪರಿಧಿಗೆ ತರಲಿಲ್ಲ.

೨೦೦೩ರಲ್ಲಿ ಹಾಗೂ ಪುನಃ ೨೦೧೩ರಲ್ಲಿ, ಮಾನವ ಹಕ್ಕುಗಳ ಸಂಸ್ಥೆಯಾದ ಸಫ಼ಾಯಿ ಕರ್ಮಚಾರಿ ಆಂದೋಲನವು ಪರಮೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿ (filed a Public Interest Litigation (PIL) in the Supreme Court), ಮಲ ಹೊರುವ ಪದ್ಧತಿಯನ್ನು ನಿಷೇಧಿಸುವ ೧೯೯೩ರ ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನವನ್ನು ಬೇಡಿತು.

bioloos - 2 copyಅವಿರತ ಚಳುವಳಿಗಳು ಹಾಗೂ ಪರಮೋಚ್ಛ ನ್ಯಾಯಾಲಯದಿಂದ ಬಂದ ನಿರಂತರ ಒತ್ತಡದಿಂದ, ೨೦೧೩ರಲ್ಲಿ ಸಂಸತ್ತಿನಲ್ಲಿ ಪರಿಷ್ಕೃತ ಕಾಯಿದೆಯನ್ನು ಜಾರಿಗೊಳಿಸಲಾಯಿತು. ೧೯೯೩ರ ಕಾಯಿದೆಗಿಂತ ಭಿನ್ನವಾಗಿ, ಮಲ ಹೊರುವವರ ನೇಮಕಾತಿ ಹಾಗೂ ಒಣ ಶೌಚಾಲಯಗಳ ನಿರ್ಮಾಣ (ನಿಷೇಧ) ಕಾಯಿದೆ ೨೦೧೩ರಲ್ಲಿ ರೈಲ್ವೇ ಹಾಗೂ ದಂಡುಪ್ರದೇಶದ ಮಂಡಳಿಗಳಿಗೂ ಅದರ ನಿಬಂಧನೆಗಳನ್ನು ವಿಸ್ತರಿಸಲಾಯಿತು. ಅಪರಾಧಗಳನ್ನು ಜಾಮೀನು-ರಹಿತ ಮಾಡಿ, ಗರಿಷ್ಠ ಐದು ವರ್ಷಗಳ ಸೆರೆವಾಸ ಹಾಗೂ/ಅಥವಾ ಐದು ಲಕ್ಷ ದಂಡವನ್ನು ವಿಧಿಸಲಾಗುತ್ತದೆ.  ಪ್ರಾರಂಭವಾದ ಮೂರು ವರ್ಷಗಳ ಅವಧಿಯೊಳಗೆ, ರೈಲು ಪ್ರಯಾಣಿಕರು ಹಾಗೂ ರೈಲ್ವೇ ಸಿಬ್ಬಂದಿಗಾಗಿ ನೈರ್ಮಲ್ಯ ಸಮುದಾಯ ಶೌಚಾಲಯಗಳ ನಿರ್ಮಾಣವನ್ನೂ ಪರಿಷೃತ ಕಾಯಿದೆಯಲ್ಲಿ ಕಡ್ಡಾಯ ಮಾಡಲಾಯಿತು.

ರಕ್ಷಣೆಗೆ ಬಂದ ಬ್ಯಾಕ್ಟೀರಿಯಾ

ರೈಲು ಹಳಿಗಳ ಮೇಲೆ ನೇರವಾಗಿ  ಮಲವನ್ನು ಸುರಿಯುವುದು ನಮಗೆಲ್ಲರಿಗೂ ತಿಳಿದ ವಿಚಾರ.  ನೋಡಲು ಅಸಹ್ಯವಾಗಿರುವುದೊಂದೇ ಅಲ್ಲ, ನೇರವಾಗಿ ರೈಲು ಹಳಿಗಳ ಮೇಲೆ ಬೀಳುವ ಮಲವು ಅದನ್ನು ತುಕ್ಕು ಹಿಡಿಸುವುದಲ್ಲದೆ, ಅದರ ನಿರ್ವಹಣೆಯು ಹೆಚ್ಚು ಪ್ರಯಾಸಕರ ಹಾಗೂ ದುಬಾರಿಯಾಗಿಸುತ್ತದೆ.  ಇದನ್ನು ಸರಿಪಡಿಸಲು, ವಿವಿಧ ರೀತಿಯ ವಿನ್ಯಾಸಗಳು ಹಾಗೂ ತಂತ್ರಜ್ಞಾನಗಳ ಪ್ರಯೋಗವನ್ನು ಮಾಡಲಾಯಿತು.  ಕಂಟ್ರೋಲ್ ಡಿಸ್ಚಾರ್ಜ್ ಟಾಯ್ಲೆಟ್ ಸಿಸ್ಟಮ್ಸ್ (ಸಿಡಿಟಿಎಸ್) ಅಥವಾ ನಿಯಂತ್ರಕ ವಿಸರ್ಜನಾ ಶೌಚಾಲಯ ವ್ಯವಸ್ಥೆಗಳ ಪ್ರಯೋಗವನ್ನೂ ಮಾಡಲಾಗಿದೆ; ಇದರಲ್ಲಿ, ಶೌಚಾಲಯದ ಇಳಿಗಾಲುವೆಯು, ಗಂಟೆಗೆ ೩೦ ಕಿಲೋಮೀಟರ್ ಅಥವಾ ಹೆಚ್ಚಿನ ವೇಗವನ್ನು ರೈಲು ತಲುಪಿದಾಗ ಮಾತ್ರ ತೆರೆದುಕೊಳ್ಳುತ್ತದೆ.  ರೈಲು ನಿಲ್ದಾಣಗಳು ಹತ್ತಿರವಾಗುತ್ತಿರುವಂತೆ ರೈಲುಗಳು ವೇಗವನ್ನು ಕಡಿಮೆ ಮಾಡುವುದರಿಂದ ಸಿಡಿಟಿಎಸ್ ನಿಲ್ದಾಣಗಳ ಸ್ವಚ್ಛತೆಯನ್ನು ಕಾಪಾಡಿದರೂ, ರೈಲು ತನ್ನ ವೇಗವನ್ನು ಹೆಚ್ಚಿಸಿದಂತೆ, ಹಳಿಗಳ ಉದ್ದಕ್ಕೂ ಮಲವು ಹರಡುತ್ತದೆ.  ಪ್ರಾಯೋಗಿಕ ಆಧಾರದ ಮೇಲೆ, ರೈಲ್ವೇ ಅತ್ಯಾಧುನಿಕ ನಿರ್ವಾತ (ವ್ಯಾಕ್ಯುಯುಂ) ಶೌಚಾಲಯಗಳ ಪ್ರಯೋಗವನ್ನೂ ಮಾಡಿದೆ.

ಇವೆಲ್ಲದರ ಪೈಕಿ, ಬೃಹತ್ ಪ್ರಮಾಣದ ನಕಲೀಕರಣಕ್ಕೆ ಸೂಕ್ತವಾದುದು ಜೈವಿಕ ಶೌಚಾಲಯಗಳು ಎಂಬುದು ಸಾಬೀತಾಗಿದೆ. ೨೦೧೦ರಲ್ಲಿ ಡಿಫ಼ೆನ್ಸ್ ರಿಸರ್ಜ್ ಆಂಡ್ ಡೆವಲಪ್ಮೆಂಟ್ ಆರ್ಗನೈಜ಼ೇಷನ್ (ಡಿಆರ್‌ಡಿಒ) / ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆಯೊಂದುಗೆ ಸಹಿ ಹಾಕಿದ ಒಡಂಬಡಿಕೆಯು, ಭಾರತೀಯ ರೈಲ್ವೇಯ ನಿರ್ಣಾಯಕ ರೂಪಾಂತರಕ್ಕೆ ನೆರವಾಯಿತು.

bioloos - 3 copyಲಡಾಖ್‌ನಂತಹ ಅಧಿಕ ಎತ್ತರದ ಪ್ರದೇಶದಲ್ಲಿ ಮಾನವ ಮಲದ ವಿಲೇವಾರಿಯು ಹೆಚ್ಚುಹೆಚ್ಚು ಸವಾಲಿನ ಕಾರ್ಯವಾದ ಕಾರಣ, ಭಾರತೀಯ ಸೇನೆಯ ಬಳಕೆಗೆಂದು ಡಿಆರ್‌ಡಿಒ ಪ್ರಾರಂಭಿಕವಾದ ಪರಿಕಲ್ಪನೆಯೊಂದಿಗೆ, ಜೈವಿಕ ಶೌಚಾಲಯಗಳ ವಿನ್ಯಾಸ ಮಾಡಿತು. ತೀವ್ರ ತಾಪಮಾನವನ್ನು ತಡೆದುಕೊಳ್ಳುವುದರೊಂದಿಗೆ, ಮಲವನ್ನು ತಿಂದು ಜೀವಿಸುವ ಬ್ಯಾಕ್ಟೀರಿಯಾಗಳನ್ನು ವಿಜ್ಞಾನಿಗಳು ಗುರುತಿಸಿದರು.

ರೈಲು ಬಳಕೆಗೆ ಒಗ್ಗುವಂತೆ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಲಾಯಿತು.  ಪಾಯಿಖಾನೆಗಳ ಅಡಿಯಲ್ಲಿ ಇರಿಸಲಾದ ಆರು ಚೇಂಬರ್‌ಗಳಲ್ಲಿ ಆಮ್ಲಜನಕರಹಿತ ಬ್ಯಾಕ್ಟೀರಿಯಾದ (ಅನೇರೋಬಿಕ್ ಬ್ಯಾಕ್ಟೀರಿಯಾ) ಗುಂಪಿನೊಂದಿಗೆ ನವೀಕೃತ ಮಾದರಿಗಳು ಸಜ್ಜಾಗಿದ್ದು, ಮಾನವ ತ್ಯಾಜ್ಯವನ್ನು ನೀರು ಹಾಗೂ ಸ್ವಲ್ಪ ಪ್ರಮಾಣದ ಮೀಥೇನ್ ಹಾಗೂ ಇಂಗಾಲದ ಡೈಆಕ್ಸೈಡ್ ಆಗಿ ಪರಿವರ್ತಿತವಾಗುತ್ತದೆ.  ಅನಿಲಗಳು ವಾತಾವರಣಕ್ಕೆ ಬಿಡುಗಡೆ ಆದರೆ, ಶುದ್ಧೀಕರಿಸಲಾದ ತ್ಯಾಜ್ಯ ದ್ರವವನ್ನು, ಕ್ಲೋರಿನೀಕರಣದ ನಂತರ ಹಳಿಗಳ ಮೇಲೆ ಬಿಡಲಾಗುತ್ತದೆ. ವಿಶಿಷ್ಟವಾದ ಹೈಬ್ರಿಡ್ ನಿರ್ವಾತ ಅವತರಣಿಕೆಯ ಪರೀಕ್ಷಣಗಳೂ ನಡೆಯುತ್ತಿವೆ.  ದೆಹಲಿ-ದಿಬ್ರೂಘರ್ ರಾಜಧಾನಿ ಎಕ್ಸ್‌ಪ್ರೆಸ್‌ನ ಫ಼ಸ್ಟ್ ಎಸಿ ಕೋಚ್‌ನಲ್ಲಿ ಜೈವಿಕ-ಶೌಚಾಲಯಗಳು ಹಾಗೂ ವಿಮಾನದಲ್ಲಿರುವಂತಹ ರೀತಿಂii ನಿರ್ವಾತ ಸೀಲ್ ಪಾಯಿಖಾನೆಗಳ ತತ್ವಗಳೆರಡನ್ನೂ ಜೋಡಿಸಿ, ಕಾರ್ಯಕಾರಿ ಮೂಲಮಾದರಿಯ ಅನುಷ್ಠಾನವನ್ನು ಮಾಡಲಾಗಿದೆ.

ಮಲವನ್ನು ತಿಂದು ಹಾಕುವ ಬ್ಯಾಕ್ಟೀರಿಯಾದ ಅಂತರ್ಗತ ಶಕ್ತಿಯನ್ನು ಆಧರಿಸಿ, ರೈಲ್ವೇ ಹಳಿಗಳ ಮೇಲೆ ಮಾನವ ಮಲದ ವಿಲೇವಾರಿಯ ಹಳೆಯ ಸಮಸ್ಯೆಗೆ, ಜೈವಿಕ-ಶೌಚಾಲಯಗಳು ಸರಳ, ಆದರೆ ಅತ್ಯಂತ ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತದೆ.  ತ್ಯಾಜ್ಯವು ವಾಸನೆ-ರಹಿತವಾಗಿದ್ದು, ನಿಯಮಿತ ಕಾರ್ಯಾಚರಣೆಗೆ ಕನಿಷ್ಠ ಮಾನವ ಮಧ್ಯಸ್ಥಿಕೆಯ ಅಗತ್ಯವಿದ್ದು, ಬಹಳಷ್ಟು ಮಟ್ಟಿಗೆ ಹಳಿಗಳ ತುಕ್ಕುಹಿಡಿಯುವಿಕೆಯನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ.

ಎಚ್ಚರಿಕೆಯ ಆಶಾವಾದ

bioloos - 4 copyತಮಿಳುನಾಡಿನ ಮಾನಾಮದುರೈ ಹಾಗೂ ರಾಮೇಶ್ವರಂನ ನಡುವಣ ೧೧೪ ಕಿಲೋಮೀಟರ್‌ನ ದೂರವನ್ನು ಭಾರತದ ಪ್ರಥಮ ಶೂನ್ಯ-ವಿಸರ್ಜನಾ ಹಸಿರು ಕಾರಿಡಾರ್‌ನ್ನು ರೈಲ್ವೇ ಮಂತಿಯಾದ ಸುರೇಶ್ ಪ್ರಭು ಉದ್ಘಾಟಿಸಿದರು.  ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳಲ್ಲೂ ಜೈವಿಕ-ಶೌಚಾಲಯಗಳಲ್ಲಿ ಸ್ಥಾಪಿಸಲಾಗಿದೆ – ೨೭೬ ಕೋಚ್‌ಗಳಲ್ಲಿ ಒಟ್ಟಾರೆ ೧೦೪೧ ಶೌಚಾಲಯಗಳಿವೆ.

ದಕ್ಷಿಣ ಭಾರತದಿಂದ ಬಹಳ ದೂರದ ಮಾರ್ಗಗಳನ್ನು ಕ್ರಮಿಸುವ ಕಾರಣ ಹಾಗೂ ಅಧಿಕ ಸಂಚಾರ ದಟ್ಟಣೆ ಇರುವುದರಿಂದ, ದಕ್ಷಿಣ ರೈಲ್ವೇಯಲ್ಲಿ ಅತ್ಯಧಿಕ ಸಂಖ್ಯೆಯ ಕೋಚ್‌ಗಳು ಇದ್ದು, ತನ್ನ ೧,೨೫೫ ಕೋಚ್‌ಗಳಲ್ಲಿ ೩,೮೬೧ ಶೌಚಾಲಯಗಳನ್ನು ವ್ಯವಸ್ಥೆಗೊಳಿಸಿ, ಉತ್ತಮ ಕಾರ್ಯವನ್ನು ಮಾಡಿದೆ.  ಪ್ರಾರಂಭಿಕ ಗಡುವಿಗಿಂತ ಎರಡು ವರ್ಷ ಮುಂಚಿತವಾಗಿಯೇ, ೨೦೧೯ರ ವೇಳೆಗೆ ಜೈವಿಕ ಶೌಚಾಲಯಗಳನ್ನು ತನ್ನೆಲ್ಲಾ ೧೬ ವಲಯ ರೈಲ್ವೇಗಳ ಸ್ವಾಮ್ಯದ ಹಾಗೂ ಚಲಿಸುವ ಎಲ್ಲ ೫೫,೦೦೦ ರೈಲ್ವೇ ಕೋಚ್‌ಗಳಲ್ಲೂ ಸ್ಥಾಪನೆ ಮಾಡುವ ಯೋಜನೆ ಇದೆ.

ಚೇಂಜ್ ಇಂಡಿಯಾದ ಸರ್ಕಾರೇತರ ಸಂಸ್ಥೆಯ ನಿರ್ದೇಶಕರಾದ ಎ.ನಾರಾಯಣನನ್‌ರವರು ಈ ಕುರಿತಾಗಿ ಎಚ್ಚರದ ಆಶಾವಾದವನ್ನು ವ್ಯಕ್ತಪಡಿಸುತ್ತಾರೆ.  ಪಾರಿಸಾರಿಕವಾಗಿ ಸಕಾರಾತ್ಮಕವಾದ ಕ್ರಮವನ್ನು ರೈಲ್ವೇ ಇಲಾಖೆ ತೆಗೆದುಕೊಂಡಿರುವುದನ್ನು ಇವರು ಶ್ಲಾಘಿಸಿದರೂ, ಪರಿಪೂರ್ಣ ಕಾರ್ಯಾಚರಣೆ ಹಾಗೂ ಪರಿಣಾಮದ ವಿಶ್ಲೇಷಣೆಯನ್ನು ಕೈಗೊಳ್ಳುವ ಮುನ್ನ, ಅಂತಹ ಬೃಹತ್ ಕಾರ್ಯವನ್ನು ಸಂಸ್ಥೆಯು ಪ್ರಾರಂಭಿಸಬೇಕೇ ಎಂಬುದು ಚಿಂತಿಸಬೇಕಾದ ವಿಚಾರ ಎನ್ನುತ್ತಾರೆ.  “ಈ ಹಿಂದೆ, ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಲು ರೈಲ್ವೇ ಪರಿಚಯಿಸಿದ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲವೆನ್ನುವುದನ್ನು ನಾವು ನಿರಾಕರಿಸಲು ಸಾಧ್ಯವಿಲ್ಲ.  ಜೈವಿಕ-ಶೌಚಾಲಯಗಳನ್ನು ಎಲ್ಲ ರೈಲುಗಳಲ್ಲೂ ಸ್ಥಾಪನೆ ಮಾಡಲು ಬೃಹತ್ ಪ್ರಮಾಣದ ಮೊತ್ತವನ್ನು ಖರ್ಚು ಮಾಡುವ ಮುನ್ನ, ಅವುಗಳ ತಾಂತಿಕ ಆಡಿಟ್‌ಗಳನ್ನು ನಡೆಸಿ, ಕಾರ್ಯಾಚರಣೆಯ ಕೂಲಂಕುಷ ಪರಿಶೀಲನೆಯನ್ನು ಮಾಡುವುದು ಹೆಚ್ಚು ಸಮಂಜಸ,” ಎಂದು ನಾರಾಯಣನನ್ ಒತ್ತಿ ಹೇಳುತ್ತಾರೆ.

ನಿರ್ವಹಣೆಯನ್ನು ಕುರಿತಾಗಿಯೂ ಅವರು ವಿಚಾರ ಮಾಡುತ್ತಾರೆ.  ಇನಾಕ್ಯುಲೇಷನ್ ಪದಾರ್ಥವಾಗಿ ಬಳಸಲಾಗುವ ಬ್ಯಾಕ್ಟೀರಿಯಾದ ಆರೋಗ್ಯದ ಮೇಲೆ ಈ ಜೈವಿಕ ವ್ಯವಸ್ಥೆಯ ಕಾರ್ಯಾಚರಣೆಯು ಸಂಪೂರ್ಣವಾಗಿ ಅವಲಂಬಿತವಾದ ಕಾರಣ, ಪರಿಪೂರ್ಣ ಕಾರ್ಯಕ್ಷಮತೆಯನ್ನು ಖಚಿತಪಡಿಸುವುದು ಹೇಗೆ? ಬಳಸಿ ಬಿಸಾಡುವಂತಹ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಸ್ಯಾನಿಟರಿ ನ್ಯಾಪ್‌ಕಿನ್‌ನಂತಹ ವಸ್ತುಗಳನ್ನು ಈ ಶೌಚಾಲಯಗಳು ನಿರ್ವಹಿಸಲು ಸಾಧ್ಯವೇ?

ನಿರ್ಬಂಧ ಹಾಗೂ ನಿರ್ವಹಣೆ

ದಕ್ಷಿಣ ರೈಲ್ವೇಯಲ್ಲಿ ಮುಖ್ಯ ರೋಲಿಂಗ್ ಸ್ಟಾಕ್ ಎಂಜಿನಿಯರ್ (ಕೋಚಿಂಗ್) ಆದ ಟಿ. ವೆಂಕಟ ಸುಬ್ರಹ್ಮಣ್ಯಯನ್ ಅವರು ಆಶ್ವಾಸನಾಪೂರ್ವಕವಾಗಿ ಪ್ರತಿಕ್ರಿಯಿಸುತ್ತಾ, “ವಾರ್ಷಿಕ ನಿರ್ವಹಣಾ ಹಾಗೂ ಕಾರ್ಯಾಚರಣೆಯ ಒಪ್ಪಂದಗಳನ್ನು (ಎಎಮ್‌ಒಸಿ) ಡಿಆರ್‌ಡಿಒ-ಅಧಿಕೃತಗೊಳಿಸಿದ ವ್ಯಾಪಾರಿಗಳೊಂದಿಗೆ ನಾವು ಸಹಿ ಹಾಕಿದ್ದು, ಅವರಿಂದಲೇ ಎಲ್ಲ ಜೈವಿಕ-ಶೌಚಾಲಯಗಳ ಖರೀದಿಯನ್ನು ಮಾಡಲಾಗುತ್ತದೆ. ಈ ಶೌಚಾಲಯಗಳ ನಿರ್ವಹಣೆ ಮಾಡಲು ಬೇಕಾದ ತಾಂತ್ರಿಕ ತಜ್ಞತೆಯನ್ನು ಹೊಂದಿದ ಸಂಸ್ಥೆಗಳೊಂದಿಗೂ ಎಎಮ್‌ಒಸಿಗಳಿಗೆ ಸಹಿ ಹಾಕಲಾಗಿದೆ.  ನಿರ್ವಹಣಾ ಡಿಪೋಗೆ ರೈಲು ತಲುಪಿದೊಡನೆ, ರೈಲು ಅಲ್ಲಿಂದ ಹೊರಡುವ ಮೊದಲು ಎಲ್ಲ ಘಟಕಗಳೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಜೈವಿಕ-ಶೌಚಾಲಯ ತಜ್ಞರು ಖಚಿತಪಡಿಸಿಕೊಳ್ಳುತ್ತಾರೆ,” ಎನ್ನುತ್ತಾರೆ.

ರೈಲ್ವೇಯ ಪ್ರಮುಖ ಮಾನದಂಡಗಳ ಸಂಸ್ಥೆಯಾದ ಸಂಶೋಧನೆ, ವಿನ್ಯಾಸಗಳು ಹಾಗೂ ಮಾನದಂಡಗಳ ಸಂಸ್ಥೆ (ಆರ್‌ಡಿಎಸ್‌ಒ)ಯ ಮಾನದಂಡಗಳಿಗೆ ಅನುಗುಣವಾಗಿ ನಿರ್ವಹಣೆಯನ್ನು ಕೈಗೊಳ್ಳಲಾಗುವುದು.  ಗುಣಮಟ್ಟದ ನಿಯಂತ್ರಣಕ್ಕೆಂದು ಕಟ್ಟುನಿಟ್ಟಾದ ಶಿಷ್ಟಾಚಾರವು ಜಾರಿಗೆ ತರಲಾಗಿದೆ.  ಪಿಎಚ್, ಒಟ್ಟಾರೆ ಘನವಸ್ತುಗಳು, ಸಿಒಡಿ, ಹಾಗೂ ಕೊಲಿಫ಼ೊರ್ಮ್ ಮಟ್ಟಗಳಂತಹ ಅನೇಕ ಭೌತಿಕ ಹಾಗೂ ಜೈವಿಕ ಮಾನದಂಡಗಳನ್ನು ಅಳೆಯಲು, ವಿಸರ್ಜಿತ ದ್ರವ ತ್ಯಾಜ್ಯದ ಮಾದರಿಗಳನ್ನು ವಿಶ್ಲೇಷಣೆಗಾಗಿ ಸರ್ಕಾರಿ ಮಾನ್ಯತೆ ಪಡೆದ ಪ್ರಯೋಗಾಲಯಗಳಿಗೆ ನಿಯಮಿತವಾಗಿ ಕಳುಹಿಸಲಾಗುತ್ತದೆ.

ಜೈವಿಕ-ಶೌಚಾಲಯಗಳ ವಿನ್ಯಾಸ  ಹಾಗೂ ನಿರ್ವಹಣೆಯ ಹಲವಾರು ಆಯಾಮಗಳನ್ನು ಕುರಿತಾಗಿ ಚಿಂತಿಸಲು, ಡಿಆರ್‌ಡಿಒ, ಆರ್‌ಡಿಎಸ್‌ಒ ಹಾಗೂ ರೈಲ್ವೇ ಮಂಡಳಿಯ ತಜ್ಞ ಸದಸ್ಯರನ್ನೊಳಗೊಂಡ ಜಂಟಿ ಕಾರ್ಯಕಾರಿ ಗುಂಪನ್ನು ಸ್ಥಾಪಿಸಲಾಯಿತು.  ಆಂತರಿಕ ಆಡಿಟ್‌ನ ಫಲಿತಾಂಶಗಳು ಹಾಗೂ ಪ್ರಯಾಣಿಕರ ದೂರುಗಳ ವಿಶ್ಲೇಷಣೆಯನ್ನು ಮಾಡಲು, ಮೂರು ತಿಂಗಳಿಗೊಮ್ಮೆ ಗುಂಪು ಸಭೆ ಸೇರುತ್ತದೆ.

bioloos - 5 copyತಾಂತ್ರಿಕ ಸವಾಲುಗಳೊಂದಿಗೆ, ಈ ಯತ್ನ ಯಶಸ್ವಿಯಾಗಬೇಕಾದಲ್ಲಿ, ಪ್ರಯಾಣಿಕರ ನೆರವು ಹಾಗೂ ಸಹಕಾರ ಅತ್ಯಗತ್ಯ.  ರೈಲುಗಳು ಹಾಗೂ ರೈಲು ನಿಲ್ದಾಣಗಳೆರಡರಲ್ಲೂ ಜೈವಿಕ-ಶೌಚಾಲಯಗಳ ಬಳಕೆಯನ್ನು ಕುರಿತಾದ ಶ್ರವಣ-ದೃಶ್ಯ ಸಂದೇಶಗಳು ಹಾಗೂ ಮಾಹಿತಿಯನ್ನೊಳಗೊಂಡ ಸ್ಟಿಕರ್‌ಗಳ ಬಳಕೆಯು ಹೆಚ್ಚುತ್ತಿದೆ.  ಇವೆಲ್ಲವನ್ನೂ ಮಾಡಿಯೂ, ಅನೇಕ ಘಟಕಗಳು ಕಟ್ಟಿಕೊಂಡಿರುತ್ತವೆ.  “ಅಂದಾಜಿನ ಪ್ರಕಾರ, ೨೦ ಪ್ರತಿಶತದಷ್ಟು ಶೌಚಾಲಯಗಳು ಶೆಡ್‌ಗೆ ಸಮಸ್ಯೆಯೊಂದಿಗೆ ವಾಪಸ್ ಆಗುತ್ತದೆ. ಆದರೆ ಮಿಕ್ಕವು ಸರಿಯಾದ ಸ್ಥಿತಿಯಲ್ಲಿ ಮರಳುತ್ತವೆ.  ಇದು ನಾವು ಗಮನಿಸಬೇಕಾದ ಅಂಶವಾಗಿದೆ.  ಹಳಿಗಳ ಮೇಲೆ ಮಲವನ್ನು ಬಿಡುವುದನ್ನು/ಚೆಲ್ಲುವುದನ್ನು ಮಾಡುವುದು ನಾವು ಮುಂದುವರೆಸಲು ಸಾಧ್ಯವಿಲ್ಲ,” ಎಂದು ವೆಂಕಟ ಸುಬ್ರಹ್ಮಣ್ಯನ್ ಹೇಳುತ್ತಾರೆ.

ಜನರ ಧೋರಣೆಯಲ್ಲಿ ಬದಲಾವಣೆ ತರುವುದು ಅತ್ಯಗತ್ಯ, ಹಾಗೂ ಈ ಕಾರ್ಯವನ್ನು ‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬುವಂತೆ ಚಿಕ್ಕವರಿರುವಾಗಲೇ ತರಬೇಕು. ನೈರ್ಮಲ್ಯ ಹಾಗೂ ಶುಚಿತ್ವವದ ಶಿಕ್ಷಣವನ್ನು ಕೇವಲ ಮನೆಯಲ್ಲಿ ಮಾತ್ರವಲ್ಲ, ಶಾಲಾ ಪಠ್ಯಕ್ರಮದ ಭಾಗವೂ ಆಗಬೇಕು.  ಯಾವುದೇ ವಿಚಾರವನ್ನು ಜನಪ್ರಿಯ ಮಾಧ್ಯಮಗಳು ಯಶಸ್ವಿಯಾಗಿಸಲು ಅಥವಾ ಸೋಲಿಸಲು ಸಾಧ್ಯವಾಗುವಂತಹ ಪರಿಸ್ಥಿತಿ ಇರುವಾಗ, ತಮ್ಮ ಈ ಯತ್ನವನ್ನು ಜನರಿಗೆ ತಲುಪಿಸಲು, ದೇಶದ ಗ್ರಾಮೀಣ ನೈರ್ಮಲ್ಯ ಅಭಿಯಾನಕ್ಕೆಂದು ವಿದ್ಯಾ ಬಾಲನ್‌ರಂತಹ ಪ್ರಸಿದ್ಧ ವ್ಯಕ್ತಿಗಳನ್ನು ಬಳಸಿದರೆ, ರೈಲ್ವೇಗೆ ನೆರವಾಗುತ್ತದೆ.  ರೈಲ್ವೇ ಇಂಜಿನಿಯರುಗಳು ಜೈವಿಕ ಶೌಚಾಲಯಗಳನ್ನು ಹೇಗೆ ಬಳಸಬೇಕೆಂದು ತಿಳಿಸುವುದಕ್ಕಿಂತ, ಚಿತ್ರತಾರೆಯರು ಇದನ್ನು ಕುರಿತಾಗಿ ಮಾತನಾಡುವುದನ್ನು ಜನರು ಅಪೇಕ್ಷಿಸುತ್ತಾರೆ ಎಂದು ವೆಂಕಟ ಸುಬ್ರಹ್ಮಣ್ಯಯನ್ ಹೇಳುವುದರಲ್ಲಿ ಸತ್ಯಾಂಶವಿದೆ.

ನೇರವಾಗಿ ಹೊರಚೆಲ್ಲುವ ಪಾಯಖಾನೆಗಳನ್ನು ೨೦೧೯ರ ವೇಳೆಗೆ ನಿರ್ಮೂಲನ ಮಾಡುವ ಗುರಿಯು ಆಗದ ಮಾತೆಂದು ತೋರಿದರೂ, ಜೈವಿಕ-ಶೌಚಾಲಯಗಳು ಹಾಗೂ ಜೈವಿಕ-ನಿರ್ವಾತ ಶೌಚಾಲಯಗಳ ಯೋಜನೆಯೊಂದಿಗೆ, ಭಾರತೀಯ ರೈಲ್ವೇ ಸರಿಯಾದ ಹಳಿಯ ಮೇಲೆ ಸಂಚರಿಸುತ್ತಿರುವಂತೆ ತೋರುತ್ತದೆ.

 ಲೇಖನ: ಸೀತಾ ಗೋಪಾಲಕೃಷ್ಣನ್

ಕನ್ನಡ ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ

(ಮೂಲ ಆಂಗ್ಲ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ: http://www.indiawaterportal.org/articles/bio-loos-track-railways-clean-its-act)
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*