ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ಅಭಿವೃದ್ಧಿಗೆ ಕೈ ಜೋಡಿಸಿದ ಸಮುದಾಯ

ಸಮುದಾಯವು ಬದ್ಧತೆಯಿಂದ ಕೆಲಸ ನಿರ್ವಹಿಸಿದರೆ ಹೇಗೆ ಇಡೀ ಗ್ರಾಮ ಬದಲಾಗಬಹುದು, ಸರ್ಕಾರದ ಯೋಜನೆಯನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂಬುದಕ್ಕೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಪಾಲನಹಳ್ಳಿ ಗ್ರಾಮ ಮಾದರಿ.

ಕೆರೆ ಅಭಿವೃದ್ಧಿ ಕಾಮಗಾರಿಗಳು, ಗ್ರಾಮ ಸಂಘಟನೆ, ಸಾವಯವ ಕೃಷಿ ಉತ್ತೇಜನ, ಕೆರೆ ಅಂಚಿನಲ್ಲಿ ನೆಡುತೋಪು ಅಭಿವೃದ್ಧಿ, ಹೀಗೆ ಎಲ್ಲ ಚಟುವಟಿಕೆಗಳನ್ನೂ ಸಹ ಅತ್ಯಂತ ಅಚ್ಚುಕಟ್ಟಾಗಿ, ಸಕಾಲಕ್ಕೆ ಇಲ್ಲಿನ ಕೆರೆ ಅಭಿವೃದ್ಧಿ ಸಂಘ ಮತ್ತು ಗ್ರಾಮಸ್ಥರು ಒಗ್ಗೂಡಿ ನಿರ್ವಹಿಸಿದ್ದಾರೆ. ಗ್ರಾಮಸ್ಥರೆಲ್ಲ ಸದಸ್ಯರಾಗಿ ‘ಶ್ರೀ ಕಾಲಭೈರವೇಶ್ವರ ಕೆರೆ ಅಭಿವೃದ್ಧಿ ಸಂಘ’ ರಚಿಸಿಕೊಂಡಿದ್ದು, ೯ ಜನರ ಕಾರ್ಯಕಾರಿ ಸಮಿತಿ ಬೆನ್ನೆಲುಬಾಗಿ ನಿಂತಿದೆ.

???????????????????????????????ಗ್ರಾಮದ ಕೆರೆ ಅಭಿವೃದ್ಧಿಗಾಗಿ ರೂ.೧೯,೭೮,೬೦೪ ಸರ್ಕಾರದಿಂದ ದೊರೆತಿದೆ. ಅದಕ್ಕೆ ಗ್ರಾಮಸ್ಥರು ಶೇ ೬ರಷ್ಟು, ಅಂದರೆ  ರೂ.೧,೧೮,೭೧೬ ಗಳನ್ನು ವಂತಿಕೆ ಕಟ್ಟಬೇಕು ಎಂಬ ನಿಯಮವನ್ನು ತಪ್ಪದೇ ಪಾಲಿಸಿದ್ದಾರೆ. ಅಚ್ಚುಕಟ್ಟುದಾರರು ಹಾಗೂ ಗ್ರಾಮಸ್ತರೆಲ್ಲರೂ ವಂತಿಕೆ ನೀಡಿದ್ದಾರೆ. ಗ್ರಾಮದ ಎಲ್ಲ ಹಿರಿಯರೂ ವಂತಿಕೆ ಸಂಗ್ರಹಣೆಗೆ ಮನೆ-ಮನೆಗೆ ತೆರಳಿರುವುದು ವಿಶೇಷ.

ಕೆರೆಗೆ ಹೋಗುವ ಮಾರ್ಗದಲ್ಲೇ ಬದಲಾವಣೆಗಳು ಗೋಚರಿಸುತ್ತವೆ.  ಮುಖ್ಯ ರಸ್ತೆಯಲ್ಲೇ ಕೆರೆ ಸಂಘದ ನಾಮಫಲಕ ಗೋಚರಿಸುತ್ತದೆ. ಜೊತೆಗೆ ದಾರಿಯ ಅಕ-ಪಕ್ಕಗಳಲ್ಲಿ ೬ ಅಡಿ ಎತ್ತರದ ಅರಣ್ಯ ಗಿಡಗಳನ್ನು ನೆಟ್ಟಿದ್ದು, ಅವು ಉತ್ತಮವಾಗಿ ಬೆಳೆದು ದಾರಿಗೆ ಶೋಭೆ ತಂದಿವೆ. ಇಲ್ಲಿ ‘ಯಾರೂ ಗಿಡಗಳನ್ನು ಕಡಿಯಬಾರದು, ಕುರಿ-ಮೇಕೆಗಳನ್ನು ಬಿಡಬಾರದು’ ಎಂಬ ಫಲಕ ಹಾಕಲಾಗಿದೆ.

ಕೆರೆ ಏರಿಯ ಬಳಿ ಯೋಜನೆಗೆ ಖರ್ಚಾಗಿರುವ ಮೊತ್ತ, ಸಂಘದ ಹೆಸರು, ಸ್ಥಾಪನೆ ದಿನಾಂಕ ಇತ್ಯಾದಿ ಮಾಹಿತಿಯನ್ನೊಳಗೊಂಡ ಫಲಕ ಹಾಕಲಾಗಿದೆ. ಕೆರೆ ಏರಿಗೆ ಹುಲ್ಲು ಹೆಪ್ಪು ಹಾಕಿದ್ದು ‘ಹುಲ್ಲು ಹೆಪ್ಪಿನ ಮೇಲೆ ದನ-ಕುರಿಗಳನ್ನು ಬಿಡಬಾರದು, ಬಿಟ್ಟವರಿಗೆ ದಂಡ ವಿಧಿಸಲಾಗುವುದು’ ಎಂಬ ಎಚ್ಚರಿಕೆ ಫಲಕಗಳಿವೆ. ತೂಬಿನ ಗೋಡೆಯ ಮೇಲೆ ‘ಇದು ಬರಿ ಕೆರೆಯಲ್ಲ, ನಮ್ಮ ಸಂಸ್ಕೃತಿಯ ಪ್ರತೀಕ, ನೀರಿದ್ದರೆ ನಾಡು’ ಎಂಬ ಘೋಷಣೆಯನ್ನು ಆಕರ್ಷಕ ಚಿತ್ರಗಳೊಂದಿಗೆ ಬಿಡಿಸಲಾಗಿದೆ. ಒಟ್ಟಾರೆ ಕೆರೆ ಮತ್ತು ಗ್ರಾಮದಲ್ಲೆಲ್ಲಾ ಕೆರೆಯ ಮಹತ್ವವನ್ನು ಸಾರುವ ಘೋಷಣೆಗಳನ್ನು ಬರೆಯುವ ಮೂಲಕ, ಸಮುದಾಯದಲ್ಲಿ ಕೆರೆಯ ಬಗ್ಗೆ ಪ್ರೀತಿ ಮತು ಜವಾಬ್ದಾರಿ ಉಂಟಾಗುವ ಕೆಲಸವನ್ನು ಸಂಘವು ನಿರ್ವಹಿಸಿರುವ ರೀತಿ ಶ್ಲಾಘನೀಯ. ಈ ರೀತಿ ಫಲಕಗಳನ್ನು ಹಾಕುವುದು ಅಥವಾ ಘೋಷಣೆ ಬರೆಯುವುದು ಯೋಜನೆಯಲ್ಲಿಲ್ಲ, ಆದರೆ ಗ್ರಾಮಸ್ಥರು ಸ್ವತಃ ಆಸಕ್ತಿ ವಹಿಸಿ ಇದನ್ನೆಲ್ಲಾ ಮಾಡಿದ್ದಾರೆ.

ಇಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಏರಿ ಬಲವರ್ಧನೆ ಮತ್ತು ಕೋಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಇವು ಗಮನಾರ್ಹವಾದವು. ಯೋಜನೆ ಪ್ರಾರಂಭಕ್ಕೆ ಮುಂಚೆ ಏರಿ ಗಿಡ ಗೆಂಟೆ ಬೆಳೆದಿತ್ತು, ಹುಲ್ಲು ಹೆಪ್ಪು ಹಾಕುವ ಮೂಲಕ ಏರಿಯನ್ನು ಸುಭದ್ರಗೊಳಿಸಿದ್ದು ಗ್ರಾಮಸ್ಥರಿಗೆ ಗುಣಮಟ್ಟದ ಬಗ್ಗೆ ಸಂತೋಷವಿದೆ.

ಕೆರೆಯ ಕೋಡಿ ಹಳ್ಳಕ್ಕೆ ಒಂದು ಸೇತುವೆಯನ್ನು ನಿರ್ಮಿಸಿದ್ದು ಗ್ರಾಮಸ್ಥರ ಹೆಚ್ಚಿನ ಸಂತೋಷಕ್ಕೆ ಕಾರಣವಾಗಿದೆ. ಕೆರೆ ಕೋಡಿ ಬಿದ್ದಾಗ, ಜಮೀನುಗಳಿಗೆ ಹೋಗುವವರಿಗೆ, ಕಾಡಿಗೆ ಜಾನುವಾರು, ಕುರಿ-ಮೇಕೆ ಮೇಯಿಸಲು ಹೋಗುವವರಿಗೆ, ದವಸ-ಧಾನ್ಯ ಸಾಗಾಣಿಕೆಗೆ, ಹೆಂಗಸರು ಮತ್ತು ಮಕ್ಕಳ ಓಡಾಟಕ್ಕೆ ವಿಪರೀತ ತೊಂದರೆಯಾಗಿತ್ತು. ಕೆರೆ ಅಭಿವೃದ್ಧಿಯ ಕ್ರಿಯಾ ಯೋಜನೆ ತಯಾರಿಸುವಾಗ ಇಂಜಿನಿಯರುಗಳು ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದಿದ್ದರು.  ಆದರೆ ಜಿಲ್ಲಾ ಅನುಮೋದನಾ ಸಭೆಯಲ್ಲಿ ಗ್ರಾಮಸ್ಥರು ಸೇತುವೆಯ ಅಗತ್ಯದ ಬಗ್ಗೆ ಮನವಿ ಮಾಡಿಕೊಟ್ಟರು. ನಂತರ ರಾಜ್ಯ ಯೋಜನಾ ಘಟಕದ ಅಭಿಯಂತರರು ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಿದರು.

ಈ ಸೇತುವೆ ಕಾಮಗಾರಿ ನಡೆಯುವ ಸ್ಥಳವನ್ನು ಯೋಜನೆಯ ಮುಂಚೆ ನೋಡಿದ್ದವರು ಯೋಜನೆ ಮುಕ್ತಾಯದ ನಂತರ ನೋಡಿದರೆ ಖಂಡಿತ ನಂಬಲಾರರು. ಅಷ್ಟರಮಟ್ಟಿಗೆ ಬದಲಾವಣೆಗೊಂಡಿದೆ. ಕಾಮಗಾರಿ ಪೂರ್ಣಗೊಂಡ ನಂತರ, ಈಗ ಗ್ರಾಮಸ್ಥರಿಗೆ ಅತ್ಯಂತ ಖುಷಿಯಾಗಿದ್ದು ಎಲ್ಲಾ ಅಧಿಕಾರಿಗಳಿಗೂ ತಮ್ಮ ಕೃತಜ್ಞತೆ ಸಲ್ಲಿಸುತ್ತಾರೆ. ಜೊತೆಗೆ ಕಾಮಗಾರಿ ನಡೆಯುವಾಗ ಕೆರೆ ಸಂಘದವರು, ನೀರಗಂಟಿ ಮುಂದೆ ನಿಂತು ಗುಣ ಮಟ್ಟವನ್ನು ಕಾಯ್ದುಕೊಂಡಿದ್ದಾರೆ, ಮರಳು, ಜಲ್ಲಿ, ಸಿಮೆಂಟ್  ಮುಂತಾದವುಗಳ ಗುಣಮಟ್ಟ ಸರಿಯಿಲ್ಲದಿದ್ದಾಗ, ನಿರ್ದಾಕ್ಷಿಣ್ಯವಾಗಿ ವಾಪಸ್ಸು ಮಾಡಿದ್ದಾರೆ, ಅಷ್ಟರಮಟ್ಟಿಗೆ ಗ್ರಾಮಸ್ಥರು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಅವರ ಬದ್ಧತೆಗೆ ಸಾಕ್ಷಿ.

ಕೆರೆ ಅಂಚಿನಲ್ಲಿ ನೆಡುತೋಪು ಗೋಪಾಲನಹಳ್ಳಿಯ ಮತ್ತೊಂದು ಪ್ರಮುಖ ಸಾಧನೆ. ಕೆರೆ ಅಂಚಿನಲ್ಲಿ ಲಭ್ಯವಿದ್ದ ಮೂರೂವರೆ ಹೆಕ್ಟೇರ್ ಜಾಗದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಹೊಂಗೆ, ಅಕೇಶಿಯಾ, ನೇರಳೆ, ಸಿಲ್ವರ್‌ಓಕ್, ಹಲಸು, ಬೇಲ ಮುಂತಾದವುಗಳನ್ನು ನೆಟ್ಟಿದ್ದು ಎದೆಯುದ್ದಕ್ಕೆ ಬೆಳೆದು ನಿಂತಿವೆ. ಕೆರೆ ಗಡಿ ಗುರುತಿಸಲು ತೆಗೆಸಿರುವ ಗಡಿಕಂದಕದ ಬದುವಿನ ಮೇಲೆ, ಹೊಂಗೆ ಮತ್ತು ಜಟ್ರೋಫ಼ಾ ಬೀಜಗಳನ್ನು ನೆಡಲಾಗಿದ್ದು ಅವೂ ಸಹ ಉತ್ತಮ ಬೆಳವಣಿಗೆ ಕಾಣುತ್ತಿವೆ.

ಕೆರೆ ಅಭಿವೃದ್ಧಿ ಸಂಘಕ್ಕೆ ಸುಸಜ್ಜಿತ ಕಛೇರಿಯನ್ನು ಹೊಂದಿರುವುದು ಗ್ರಾಮದ ಮತ್ತೊಂದು ಹೆಗ್ಗಳಿಕೆ. ಕಛೇರಿಯ ಆಸು-ಪಾಸು ಮತ್ತು ಪಕ್ಕದ ಗೋಡೆಗಳಲ್ಲಿ ಕೆರೆಯ ವಿವಿಧ ಅಂಗಗಳನ್ನು ಚಿತ್ರಗಳ ಸಮೇತ ಆಕರ್ಷಕವಾಗಿ ಬರೆಯಲಾಗಿದೆ. ಮೀನುಗಾರಿಕೆ, ಕೆರೆಯ ವಿವಿಧ ಉಪಯೋಗಗಳು ಮುಂತಾದ ಅನೇಕ ಸಂಗತಿಗಳು ಇಲ್ಲಿವೆ. ಯಾರೇ ಇಲ್ಲಿ ಬಂದರೂ ಹಲವಾರು ನಿಮಿಷ ಈ ಚಿತ್ರಗಳನ್ನು ನೋಡಿ ಆನಂದಿಸುತ್ತ್ತಾರೆ. ಗ್ರಾಮದ ಮಕ್ಕಳಿಗಂತೂ ಕೆರೆಯ ಬಗ್ಗೆ ಒಂದು ಪರಿಕಲ್ಪನೆ ಮೂಡಿಸುವಲ್ಲಿ ಇವು ತುಂಬಾ ಸಹಾಯಕವಾಗಿವೆ ಎಂದರೆ ತಪ್ಪಲ್ಲ. ಇಲ್ಲಿನ ಮತ್ತು ಕೆರೆ ಪರಿಸರದಲ್ಲಿನ ಆಕರ್ಷಕ ಗೋಡೆ ಬರಹಗಳನ್ನು ಗ್ರಾಮದವರೇ ಆದ ಆತ್ಮಾನಂದ ಎಂಬ ಕಲಾವಿದರು ಉಚಿತವಾಗಿ ಬರೆದುಕೊಟ್ಟಿದ್ದಾರೆ.

ಗೋಪಾಲನಹಳ್ಳಿಯಲ್ಲಿ ನಡೆದಿರುವ ಗುಣಮಟ್ಟದ ಕಾಮಗಾರಿಗಳು ಹಾಗೂ ಗ್ರಾಮದ ಸಂಘಟನಾ ಶಕ್ತಿಯನ್ನು ವೀಕ್ಷಿಸಲು ಹಲವು ಗಣ್ಯರು ಭೇಟಿ ನೀಡಿದ್ದಾರೆ. ವಿಶ್ವಬ್ಯಾಂಕ್ ತಂಡ, ಒರಿಸ್ಸಾ ರಾಜ್ಯದ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆ ಅಧಿಕಾರಿಗಳು ಮತ್ತು ವಿವಿಧ ತಾಲ್ಲೂಕುಗಳ ಜನರು ಇವರಲ್ಲಿ ಪ್ರಮುಖರು.

ಈ ಎಲ್ಲಾ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ಅನೇಕ ಹಿರಿಯರು ನಿಂತಿದ್ದಾರೆ. ಅವರಲ್ಲಿ ಬಹುಮುಖ್ಯ ಹೆಸರು ಗ್ರಾಮದ ರಘು ಅವರದು. ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಇವರು, ಗ್ರಾಮದ ಕೆರೆ ಚಟುವಟಿಕೆಗಳು ಯಶಸ್ವಿಯಾಗಿ ನಡೆಯಲು ಹೆಚ್ಚು ಕಾಳಜಿ ವಹಿಸಿದ್ದಾರೆ. ಯುವಕರನ್ನು ಹುರಿದುಂಬಿಸಿ ಶ್ರಮದಾನ ಮಾಡಿಸುವಲ್ಲಿ ಹಾಗೂ ಎಲ್ಲ ಕಾಮಗಾರಿಗಳು ಗುಣಮಟ್ಟದಲ್ಲಿ ನಡೆಯುವಂತೆ ಮಾಡುವಲ್ಲಿ ಇವರ ಪಾತ್ರ ಬಹುದೊಡ್ಡದು.

ಕೆರೆ ಅಭಿವೃದ್ಧಿ ಯೋಜನೆಯ ಅನುಷ್ಠಾನದಲ್ಲಿ ಮಾದರಿ ಕಾರ್ಯ ನಿರ್ವಹಿಸಿರುವುದನ್ನು ಗಮನಿಸಿರುವ ಸರ್ಕಾರದ ವಿವಿಧ ಇಲಾಖೆಗಳು ಈ ಗ್ರಾಮಕ್ಕೆ ಹಲವು ಯೋಜನೆಯನ್ನು ನೀಡಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವ ವಿದ್ಯಾಲಯದವರೂ ಸಹ ಹಲವಾರು ಯೋಜನೆಗಳನ್ನು ಇಲ್ಲಿ ಅನುಷ್ಠಾನಗೊಳಿಸುತ್ತಿದ್ದಾರೆ

ಚಿತ್ರ-ಲೇಖನ: ಮಲ್ಲಿಕಾರ್ಜುನ ಹೊಸಪಾಳ್ಯ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*