ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

‘ಫ್ಲೋರೋಸಿಸ್’; ಕರ್ನಾಟಕದ ಇಂದಿನ ಸಾಮಾಜಿಕ ಪಿಡುಗೇ?

ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಕುಡಿಯಲು ಮತ್ತು ಕೃಷಿಗಾಗಿ ನಾವೆಲ್ಲ ಅಂತರ್ಜಲವನ್ನೇ ಅವಲಂಬಿಸಿದ್ದೇವೆ. ಅತಿ ದೊಡ್ಡ ಧಾನ್ಯ ಉತ್ಪಾದಕ ದೇಶವಾದ ಭಾರತ ೧೯೫೦ರ ಸುಮಾರಿಗೆ ೩೦,೦೦೦ ಕೊಳವೆ ಬಾವಿಗಳನ್ನು ಹೊಂದಿತ್ತು. ೨೦೦೫ರ ವೇಳೆಗೆ ಈ ಕೊಳವೆ ಬಾವಿಗಳ ಸಂಖ್ಯೆ ಏಳು ಮಿಲಿಯನ್ ನಷ್ಟು ಏರಿಕೆ ಕಂಡಿದೆ. ಮತ್ತಷ್ಟು ಬೇಡಿಕೆ ಪೂರೈಕೆಗೆ ಅನುಗುಣವಾಗಿ ಮಂಡಿತವಾಗುತ್ತಲೇ ಇದೆ! ಕೃಷಿ ಕ್ಷೇತ್ರ, ಕಾರ್ಖಾನೆಗಳು ಹಾಗೂ ಒಳಚರಂಡಿ ಯೋಜನೆ ನಮ್ಮ ದೇಶದ ಅಂತರ್ಜಲಕ್ಕೆ ಮಾರಕವಾಗಿ ಪರಿಣಮಿಸಿದೆ. ವಿಶೇಷವಾಗಿ ಗಮನಿಸುವುದಾದರೆ, ೧೯೭೫ರ ಸುಮಾರಿಗೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದ್ದ ಕ್ರಿಮಿನಾಶಕಗಳಿಗಿಂತ, ೨೦೦೮ರಲ್ಲಿ ರಸಗೊಬ್ಬರಗಳಾಗಿ ಮಾರಾಟವಾಗುತ್ತಿರುವ ವಸ್ತುಗಳು ೧೦% ರಿಂದ ೧೦೦% ಪಟ್ಟು ಹೆಚ್ಚು ವಿಷಯುಕ್ತ ಎಂದು ವಿಜ್ಞಾನಿಗಳು ಲಿಖಿತವಾಗಿ ಹೇಳಿದ್ದಾರೆ!

FLOROSIS 1ಧಾರವಾಡ: ನಮ್ಮ ರಾಜ್ಯದ ೨೪ ಜಿಲ್ಲೆಗಳ ೬,೬೦೦ ಗ್ರಾಮಗಳಲ್ಲಿ ಸುಮಾರು 60 ಲಕ್ಷ ಮಂದಿ ಫ್ಲೋರೋಸಿಸ್ ನಿಂದ ಸದ್ಯ ಬಳಲುತ್ತಿದ್ದಾರೆ. ನಾವು ಕುಡಿಯುವ ನೀರಿನ ೧ಲೀಟರ್ ನಲ್ಲಿ ೦.೫ಮಿಲಿಗ್ರಾಂನಿಂದ ೧ ಮಿಲಿ ಗ್ರಾಂ ಫ್ಲೋರೈಡ್ ಪರಿಮಿತ ಮಿತಿ. ಈ ಪ್ರಮಾಣ ೧.೫ ಮಿಲಿಗ್ರಾಂ ಪ್ರತಿ ಲೀಟರ್ ಗೆ ಇದ್ದರೆ ಅಡ್ಡ ಪರಿಣಾಮಗಳು ಶುರು. ಫ್ಲೋರೈಡ್ ೨.೫ರಿಂದ ೩ ಮಿಲಿ ಗ್ರಾಂ ಪ್ರತಿ ಲೀಟರ್ ಕುಡಿಯುವ ನೀರಿಗೆ ಮಿಶ್ರಿತವಾಗಿದ್ದರೆ ಆರೋಗ್ಯ ಸಂಬಂಧಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸತತವಾಗಿ ಫ್ಲೋರೈಡ್ ನೀರು ಸೇವಿಸಿದರೆ, ಅಜೀರ್ಣದಿಂದ ಆರಂಭಗೊಂಡು, ಹಲ್ಲು ಸವೆತ, ಮೂಳೆ ಸವೆತ, ಸಂಧಿವಾತ ಕೊನೆಗೆ ಕ್ಯಾನ್ಸರ್ ವರೆಗೂ ತಂದು ನಿಲ್ಲಿಸಬಹುದು!

ಫ್ಲೋರೈಡ್ ಪರಿಮಿತ ಮಿತಿ ಮೀರಿರುವ ಪ್ರದೇಶಗಳಲ್ಲಿ ಬೆಳೆಯಲಾಗುವ ತರಕಾರಿ, ಹಣ್ಣು ಅತ್ಯಂತ ಅಪಾಯಕಾರಿ. ತಣ್ಣೀರು, ಬಿಸಿ ನೀರಿನಲ್ಲಿ ಸ್ವಚ್ಛವಾಗಿ ತೊಳೆಯುವುದರಿಂದ ಈ ಸಮಸ್ಯೆಗೆ ಪರಿಹಾರವಿಲ್ಲ. ಬಿಸಿ ಬಿಸಿ ನೀರಿನಲ್ಲಿ ಬೇಯಿಸಿದರೂ ಮುಕ್ತಿ ಸಿಗದು!

ಉದಾಹರಣೆಗೆ, ಚಿತ್ರದುರ್ಗದ ಎರಡು ಶಾಲೆಗಳಲ್ಲಿ ೧೨೬ಕ್ಕೂ ಹೆಚ್ಚು ಮಕ್ಕಳು ಫ್ಲೋರೋಸಿಸ್ ನಿಂದ ಬಳಲುತ್ತಿರುವುದು ಬೆಳಕಿಗೆ ಬಂದ ಮೇಲೆ, ಮಕ್ಕಳಲ್ಲಿ ಮಾನಸಿಕ ಅಸ್ವಸ್ಥತೆಯೂ ಫ್ಲೋರೈಡ್ ನ ಇನ್ನೊಂದು ಮುಖ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಮೇಲಾಗಿ, ಬೆವರು ಸುರಿಸಿ ದುಡಿಯುವ ಶ್ರಮಿಕ ವರ್ಗದ ಹಾಗೂ ರೈತಾಪಿ ಜನರಿಗೇ ಇದು ಅತೀ ಹೆಚ್ಚು ಕಾಡುವ ರೋಗವಾಗಿರುವುದರಿಂದ, ಫ್ಲೋರೋಸಿಸ್ ನ್ನು `ಬಡವರ ರೋಗ’ ಎಂದೇ ಗುರುತಿಸಲಾಗಿದೆ.

ಫ್ಲೋರೋಸಿಸ್ ಸಂಶೋಧನಾ ಕೇಂದ್ರ

FLOROSIS 3ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ರಾಜ್ಯ ದಿನಗೂಲಿ ನೌಕರರ ಮಹಾಮಂಡಲ ಫ್ಲೋರೋಸಿಸ್ ಸಂಶೋಧನಾ ಕೇಂದ್ರ ಆರಂಭಿಸಿದೆ. ಗೋಕುಲ ರಸ್ತೆಯ ಡಾ. ಕೆ.ಎಸ್. ಶರ್ಮಾ ಸಮೂಹ ಸಂಸ್ಥೆಗಳ ಪ್ರಕೃತಿ ಚಿಕಿತ್ಸಾ ಕೇಂದ್ರದ ಒಂದು ಕೊಠಡಿ ಈ ಪ್ರಯೋಗಾಲಯಕ್ಕೆ ಮೀಸಲಿದೆ. ಮಹಾಮಂಡಲದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಹಾಗೂ ಸಿ.ಎಸ್.ಆಯ್. ಆರ್ ನಿವೃತ್ತ ವಿಜ್ಞಾನಿ, ಆಂಧ್ರದ ಡಾ. ಎಂ. ಬಾಪೂಜಿ ನೇತೃತ್ವದಲ್ಲಿ ಫ್ಲೋರೋಸಿಸ್ ಸಂಶೋಧನಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

ಮಕ್ಕಳನ್ನು ಫ್ಲೋರೋಸಿಸ್ ನಿಂದ ಬಚಾವ್ ಮಾಡುವುದು ತಮ್ಮ ಸಂಶೋಧನಾಲಯದ ಮೊದಲ ಆದ್ಯತೆ ಎನ್ನುವ, ಪ್ರೊ. ಶರ್ಮಾ, ಯೂನಿಸೆಫ್ ನವರ ತಾಂತ್ರಿಕ ನೆರವು ಮತ್ತು ಹಲವು ಸೌಲಭ್ಯಗಳ ಸಹಾಯದಿಂದ, ಪ್ರತಿ ಗ್ರಾಮದಲ್ಲಿ ನೀರು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವಂತೆ ಪ್ರೋತ್ಸಾಹಿಸುವ ಕೆಲಸ ಮಹಾಮಂಡಳದ ವತಿಯಿಂದ ನಡೆದಿದೆ. ಜೊತೆಗೆ ೧೦೦ ಜನ ಔಷಧೀಯ ವಿಜ್ಞಾನ ಓದುವ ವಿದ್ಯಾರ್ಥಿಗಳೊಂದಿಗೆ ಹುಬ್ಬಳ್ಳಿ-ಧಾರವಾಡ ಸೇರಿದಂತೆ 5 ತಾಲೂಕುಗಳ ಮೂಲೆಮೂಲೆಗೆ ತೆರಳಿ ಫ್ಲೋರೈಡ್ ಪತ್ತೆ ಮಾಡಿ, ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಆರಂಭಿಸಲಾಗಿದೆ.

ನಮ್ಮ ರಾಜ್ಯ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ್, ಪಂಜಾಬ್ ಹಾಗು ಹರ್ಯಾಣಾ ರಾಜ್ಯಗಳಲ್ಲಿ ಫ್ಲೋರೋಸಿಸ್ ಸಮಸ್ಯೆ ತಾರಕಕ್ಕೇರಿದೆ. ಸಾಲದಕ್ಕೆ ಸಾರ್ವಜನಿಕ ಜೀವನ ತೀರ ಅಸ್ತವ್ಯಸ್ಥಗೊಂಡಿದೆ. ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಅಂತರ್ಜಲದಲ್ಲಿ ಸಹ ಫ್ಲೋರೈಡ್ ಇರುವುದು ಪತ್ತೆಯಾಗಿದೆ. ವಿಜ್ಞಾನಿಗಳು ನಿದ್ದೆಗೆಟ್ಟಿದ್ದಾರೆ ಆದರೆ ಸರಕಾರಗಳು ನಿರ್ಲಿಪ್ತವಾಗಿವೆ! ಜನ ಅಷ್ಟೇ ಉದಾಸೀನ ಧೋರಣೆಯಿಂದ ಕಾಲ ನೂಕುತ್ತಿದ್ದಾರೆ.

೧ ಲೀಟರ್ ನೀರಿನಲ್ಲಿ ಒಂದು ಮಿಲಿಗ್ರಾಂನಷ್ಟು ಫ್ಲೋರೈಡ್ ಅಂಶವಿರುವ ನೀರನ್ನು ಹೆಚ್ಚು ದಿನಗಳವರೆಗೆ ಕುಡಿಯುತ್ತಿದ್ದರೆ ಹಲ್ಲಿನ ಫ್ಲೋರೋಸಿಸ್FLOROSIS 2 ಕಟ್ಟಿಟ್ಟದ್ದು. ಈ ನೀರನ್ನು ಸೇವಿಸುವುದರಿಂದ ಮೊದಲು ಹಲ್ಲುಗಳ ಮೇಲೆ ಬಿಳಿ ಹಾಗು ಹಳದಿ ಕಲೆಗಳು ಕಾಣುತ್ತವೆ. ನಂತರ ಕಂದು ಬಣ್ಣಕ್ಕೆ ತಿರುಗಿ, ಕಪ್ಪಾಗಿ ಪರಿಣಮಿಸಿ ಗುಳಿಗಳಾಗಿ ಹಲ್ಲು ಹಾಳಾಗುತ್ತವೆ. ಈ ಹಲ್ಲಿನ ಫ್ಲೋರೀಸಿಸ್ ರೋಗ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ ಎಂದರೆ ನಂಬುತ್ತೀರಾ? ಮದುವೆಯಂತಹ ಸಾಮಾಜಿಕ ಬಂಧನಗಳಿಗೆ ಹಾಗು ಆರ್ಥಿಕ ಸ್ವಾವಲಂಬನೆಗೆ ಈ ಖಾಯಿಲೆ ತಲೆ ಚಿಟ್ ಹಿಡಿಸಿದೆ.

ಅಷ್ಟೇ ಅಲ್ಲ, ನಾವು ಕುಡಿಯುವ ೧ ಲೀಟರ್ ನೀರಿನಲ್ಲಿ ಸುಮಾರು ೩ ರಿಂದ ೬ ಮಿಲಿ ಗ್ರಾಂನಷ್ಟು ಫ್ಲೋರೈಡ್ ಅಂಶವಿದ್ದು, ಸತತವಾಗಿ ೨ ವರ್ಷಗಳ ವರೆಗೆ ಕುಡಿದರೆ ಮೂಳೆಗಳ ಫ್ಲೋರೋಸಿಸ್ ರೋಗಕ್ಕೆ ತುತ್ತಾಗುವ ಭಯಂಕರ ಸಮಸ್ಯೆ ಎದುರಿಸಬೇಕಾಗುತ್ತದೆ. ಕೈ ಹಾಗು ಕಾಲು ಮತ್ತು ಬೆನ್ನಿನ ಮೂಳೆಗಳು ಡೊಂಕಾಗುವುದರಿಂದ ಯುವಕರು ದುಡಿಯಲು ಅಸಮರ್ಥರು ಹಾಗು ದೈಹಿಕವಾಗಿ ಅಪಂಗರು ಸಹ ಆಗುತ್ತಾರೆ. ಇನ್ನು ವಯೋ ವೃದ್ಧರು ಅಂತ್ಯ ಕಾಲದ ವರೆಗೆ ಪರಾವಲಂಬಿಯಾಗಿ ಜೀವಿಸದೇ ವಿಧಿ ಇಲ್ಲ. ಹಾಗೆಯೇ ಗರ್ಭಿಣಿ ಮಹಿಳೆ ಈ ಫ್ಲೋರೈಡ್ ಯುಕ್ತ ನೀರನ್ನು ಸೇವಿಸುತ್ತಿದ್ದರೆ ಬೆಳವಣಿಗೆಯ ಹಂತದಲ್ಲಿರುವ ಭ್ರೂಣ ಅಂಗವಿಕಲವಾಗುವ ಸಾಧ್ಯತೆ ನಿಚ್ಚಳವಾಗಿವೆ. ಇನ್ನು ಹಸು ಗೂಸಿಗೆ ಹಾಲುಣಿಸುವ ತಾಯಿಯಾಗಿದ್ದರೆ ಆಕೆಗೆ ಹಾಗು ಮಗುವಿಗೂ ಸಹ ಎಲುವು-ಕೀಲುಗಳಿಗೆ ಸಂಬಂಧಿಸಿದ ಮಾರಣಾಂತಿಕ ರೋಗಗಳು ತಟ್ಟುವ ಸಾಧ್ಯತೆ ಇದೆ.

ಕುಡಿಯಲು ಬಳಸುವ ೧ ಲೀಟರ್ ನೀರಿನಲ್ಲಿ ೫೦ ಮಿಲಿ ಗ್ರಾಂಗಿಂತ ಹೆಚ್ಚು ಫ್ಲೋರೈಡ್ ಅಂಶ ಕಂಡು ಬಂದರೆ ಥೈರಾಯಿಡ್ ಗ್ರಂಥಿ ಸಮಸ್ಯೆ, ಸ್ನಾಯುಗಳ ಬೆಳವಣಿಗೆಯಲ್ಲಿ ಕುಂಠಿತ, ಕಿಡ್ನಿ ವಿಫಲಗೊಳ್ಳುವ ಖಾಯಿಲೆಯಿಂದ ಬಳಲಬೇಕಾಗುತ್ತದೆ. ಕರ್ನಾಟಕದಲ್ಲಿ ಗುಲ್ಬರ್ಗಾ ಜಿಲ್ಲೆಯ ಉಲಕಲ್ ನಲ್ಲಿ ೧ ಲೀಟರ್ ಕುಡಿಯುವ ನೀರಿನಲ್ಲಿ ೮.೬ ಮಿಲಿ ಗ್ರಾಂ ಗರಿಷ್ಠ ಪ್ರಮಾಣದ ಫ್ಲೋರೈಡ್ ಅಂಶವಿರುವುದು ಪತ್ತೆಯಾಗಿದೆ. ನಾವು ನಿತ್ಯ ಸೇವಿಸಲು ಬಳಸುವ ೧ ಲೀಟರ್ ನೀರಿನಲ್ಲಿ ಫ್ಲೋರೈಡ್ ನ ಅಪೇಕ್ಷಿತ ಮಿತಿ ೧.೦ ಮಿಲಿ ಗ್ರಾಂ ಹಾಗು ಅಡ್ಡಿ ಇಲ್ಲ ಎನ್ನಬಹುದಾದ ಮಿತಿಯನ್ನು ೧.೫ ಮಿಲಿ ಗ್ರಾಂಗೆ ನಿಗದಿ ಪಡಿಸಲಾಗಿದೆ!

FLOROSIS 4ಆದರೆ ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿಯಲ್ಲಿ ಅಂತರ್ಜಲ ಪರೀಕ್ಷಿಸಲಾಗಿ ಕುಡಿಯುವ ನೀರಿನಲ್ಲಿ ಪ್ರತಿ ಲೀಟರ್ ನೀರಿಗೆ ೭.೬ ಮಿಲಿ ಗ್ರಾಂ ಫ್ಲೋರೈಡ್ ಅಂಶ ದಾಖಲಾಗಿದೆ. ಕರ್ನಾಟಕ ಸರಕಾರದ ಭೂ ವಿಜ್ಞಾನ ಮತ್ತು ಗಣಿ ಇಲಾಖೆ ೨೦೦೬ರಲ್ಲಿ ನಡೆಸಿದ ಸಮೀಕ್ಷೆಗಳ ಪ್ರಕಾರ ಧಾರವಾಡ, ಹಾವೇರಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗಾ, ಬೀದರ್ ಹಾಗು ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಮಂಡ್ಯ ಜಿಲ್ಲೆಗಳಲ್ಲಿ ಕನಿಷ್ಠ ಸುಮಾರು ೪ ತಾಲ್ಲೂಕುಗಳಲ್ಲಿ ಫ್ಲೋರೈಡ್ ಅಂಶ ೧ ಲೀಟರ್ ನೀರಿನಲ್ಲಿ ೧.೫ ಮಿಲಿ ಗ್ರಾಂ ಗಿಂತ ಹೆಚ್ಚಿದ್ದು ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಭೂಶಾಸ್ತ್ರಜ್ಞರು ಸರಕಾರಕ್ಕೆ ವಿವರವಾದ ವರದಿ ಸಲ್ಲಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ಸುತ್ತಮುತ್ತಲಿನ ಗ್ರ್ಯಾನೈಟ್ ಗಣಿಗಾರಿಕೆ, ಗ್ರ್ಯಾನೈಟ್ ಪಾಲಿಶ್ ಹಾಗು ರಾಸಾಯನಿಕ ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದು, ಅಲ್ಲಿನ ಅಂತರ್ಜಲದಲ್ಲಿ ಪ್ರತಿ ಲೀಟರ್ ನೀರಿಗೆ ೦.೩ ದಿಂದ ೬.೫ ಮಿಲಿ ಗ್ರಾಂ ಫ್ಲೋರೈಡ್ ಅಂಶವಿರುವುದು ೨೦೦೭ರ ಸಮೀಕ್ಷೆಯಲ್ಲಿ ಕಂಡುಬಂದಿದೆ. ಇಳಕಲ್ ಹಾಗು ಹುನಗುಂದ ಹಳ್ಳಗಳು ನೇರವಾಗಿ ಪಿಗ್ಮಿಟೈಟ್ ಎಳೆಗಳ ಸಂಪರ್ಕದೊಂದಿಗೆ ಕೃಷ್ಣಾ ನದಿಯನ್ನು ಸೇರುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಈ ಪಿಗ್ಮಿಟೈಟ್ ಎಳೆಗಳು ಮುಖ್ಯವಾಗಿ ಫ್ಲೋರೈಡ್ ಅಂಶದ ಖನಿಜಗಳನ್ನು ಒಳಗೊಂಡಿದ್ದು ಆ ಭಾಗದ ಎಲ್ಲ ಹಳ್ಳಗಳಲ್ಲಿ ಹಾಗು ಅಂತರ್ಜಲದಲ್ಲಿ ಬೆರೆತು ಹಳ್ಳಿಗಳನ್ನು ತಲುಪುವಲ್ಲಿ ಯಶಸ್ವಿಯಾಗಿದ್ದು, ಫ್ಲೋರೈಡ್ ಅಂಶ ಮಾರಣಾಂತಿಕವಾಗಿ ಪರಿಣಮಿಸಿದೆ.

ಡಾ.ಜಗದೀಶ ಗುಡಗೂರ ಪಿ.ಎಚ್.ಡಿ ಅಧ್ಯಯನ

ಧಾರವಾಡದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಡಾ.ಜಗದೀಶ ಗುಡಗೂರ ಗದಗ ಜಿಲ್ಲೆಯ ಅಂತರ್ಜಲ ಕುರಿತು ಪಿ.ಎಚ್.ಡಿ ಅಧ್ಯಯನFLOROSIS 5 ಕೈಗೊಂಡು ಸವಿಸ್ತಾರವಾದ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದಿದ್ದಾರೆ. ಅವರು ಹೇಳುವಂತೆ, ಗದಗ ಜಿಲ್ಲೆಯ ರೋಣ, ಮುಂಡರಗಿ ತಾಲ್ಲೊಕುಗಳಲ್ಲಿ ಅಂತರ್ಜಲ ಹಾಗು ಕುಡಿಯುವ ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್ ಕೂಡಿರುವುದು ಪತ್ತೆಯಾಗಿದೆ. ಗಡಿ ಭಾಗದ ತಾಲ್ಲೂಕುಗಳಾದ ಸಿರಾ, ಪಾವಗಡ, ಮಧುಗಿರಿ, ಗುಡಿಬಂಡೆ, ಬಾಗೇಪಲ್ಲಿ, ಸಿಂಧನೂರು, ಮಾನ್ವಿ, ದೇವದುರ್ಗ, ಕುಷ್ಟಗಿ, ಕೊಪ್ಪಳ, ಗಂಗಾವತಿ, ಶಿಡ್ಲಘಟ್ಟ, ಚಿಂತಾಮಣಿ ಸೇರಿದಂತೆ, ಸುತ್ತಮುತ್ತಲಿನ ಅನೇಕ ಭಾಗಗಳಲ್ಲಿ ಫ್ಲೋರೈಡ್ ಅಧಿಕವಾಗಿರುವುದನ್ನು ಗುರುತಿಸಲಾಗಿದೆ. ಜನ-ಜಾನುವಾರು ಅದೇ ನೀರನ್ನು ಕುಡಿದು ಅನೇಕ ರೋಗ-ರುಜಿನಗಳಿಂದ ಬವಣೆಯಲ್ಲಿ ನರಳುತ್ತ ಬದುಕಿದ್ದಾರೆ.

ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಡೆಸಿದ (೨೦೦೨-೦೩ನೇ ಸಾಲಿನಲ್ಲಿ) ಸಮೀಕ್ಷೆಯ ವರದಿ ಆಘಾತಕಾರಿ ಅಂಕಿ-ಅಂಶಗಳನ್ನು ಅರುಹಿದೆ. ೨೧,೦೦೮ ವಸತಿಗಳನ್ನು ಒಳಗೊಃಡ ಇಡೀ ರಾಜ್ಯ ವ್ಯಾಪ್ತಿಯ ಸರ್ವೇಕ್ಷಣೆಯು ೫,೮೩೦ ವಸತಿಗಳು ಫ್ಲೋರೈಡ್ ನಿಂದ, ೬,೬೩೩ ವಸತಿಗಳು ಹೆಚ್ಚಿನ ಪ್ರಮಾಣದ ಕಬ್ಬಿಣದ ಅಂಶದಿಂದ, ೪,೦೭೭ ವಸತಿಗಳು ಹೆಚ್ಚಿನ ನೈಟ್ರೈಟ್ ಮತ್ತು ಲವಣ ಯುಕ್ತ ನೀರಿನಿಂದ ಸದಾಕಾಲ ಪೀಡಿತವಾಗಿವೆ!

ಕರ್ನಾಟಕ ಸರಕಾರದ ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಸಚಿವೆ ಶೋಭಾ ಕರಂದ್ಲಾಜೇ ಧಾರವಾಡಕ್ಕೆ ಭೇಟಿ ನೀಡಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ಆಘಾತಕಾರಿ ಮಾಹಿತಿ (ಬಹುಶಃ ಬಾಯಿ ತಪ್ಪಿ) ನೀಡಿದರು- “ಕರ್ನಾಟಕ ರಾಜ್ಯದಲ್ಲಿ ಕೊನೆ ಪಕ್ಷ ೧೫ ಸಾವಿರ ಜನಸಂಖ್ಯೆ ಇರುವ ಒಟ್ಟು ೫೬ ಸಾವಿರ ಹಳ್ಳಿಗಳಿಗೆ ಇಂದಿಗೂ ಸ್ವಚ್ಛ ಕುಡಿಯುವ ನೀರು ಒದಗಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ!”  ಇದಕ್ಕಿಂತ ಕಡಿಮೆ  ಜನಸಂಖ್ಯೆ ಇರುವ ನಮ್ಮ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ‘ಆಹೆಟ್ಟಿ’ ಯಂತಹ ಹಳ್ಳಿಗಳೆಷ್ಟು ಇವೆಯೋ..?

*******

 ನೀರು-ತೈಲ ಒಂದೇ ಲೆಕ್ಕ!

೨೦ನೇ ಶತಮಾನದಲ್ಲಿ ತೈಲದ ಮಹತ್ವ ಏನಿತ್ತೋ, ಆ ಸ್ಥಾನವನ್ನು ೨೧ನೇ ಶತಮಾನದಲ್ಲಿ ನೀರು ಆಕ್ರಮಿಸಿಕೊಂಡಿದೆ. ಇದು ಶ್ರೀಮಂತ ರಾಷ್ಟ್ರಗಳಿಗೆ ಮಾರಾಟದ ತಾಜಾ ಸರಕಾಗಿ ಪರಿಣಮಿಸಿದೆ. ಇಂದಿಗಾಗಲೇ ಇದು ಜಾಗತಿಕ ಮಾರುಕಟ್ಟೆಯಲ್ಲಿ ೪೦ ಸಹಸ್ರ ಕೋಟಿ ರುಪಾಯಿಗಳ ವ್ಯಾಪಾರವಾಗಿದೆ. ಈ ನೀರುಎಂಬ ಮಾರಾಟದ ಸರಕಿನ ದಂಧೆಯ ನಿವ್ವಳ ಲಾಭ ಈಗಾಗಲೇ ತೈಲ ಕ್ಷೇತ್ರದ ಶೇ.೪೦ ರಷ್ಟಿದೆ. ಇದು ಒಟ್ಟು ಔಷಧ ವ್ಯಾಪಾರದ ಮೂರನೇ ಒಂದು ಭಾಗವನ್ನು ಮೀರಿನಿಂತಿದೆ. ಬೇರೆ ಎಲ್ಲ ವ್ಯಾಪಾರಗಳಿಗೆ ಹೋಲಿಸಿದರೆ ವಿಶ್ವ ಆರ್ಥಿಕತೆಯಲ್ಲಿ ಇದಕ್ಕೆ ಪ್ರಮುಖ ಹಾಗು ಪ್ರಖರವಾದ ಭವಿಷ್ಯವಿದೆ” – ಇದು ೨೦೦೨ರ ಡಿಸೆಂಬರ್ ಸಂಚಿಕೆಯಲ್ಲಿ ನೇಚರ್ಪತ್ರಿಕೆ ಪ್ರಕಟಿಸಿದ ವರದಿಯ ಸಾರ!

*********

 ವಿಶ್ವ ಬ್ಯಾಂಕ್ ಎಚ್ಚರಿಕೆ

ವಿಶ್ವ ಬ್ಯಾಂಕ್ ೧೯೯೮ರಲ್ಲಿ ಹೀಗೆ ಹೇಳಿತ್ತು. “ಈ ಜಲ ವ್ಯಾಪಾರ ಶೀಘ್ರದಲ್ಲಿ ೮೦೦ ಬಿಲಿಯನ್ ಅಮೇರಿಕನ್ ಡಾಲರ್ ವಹಿವಾಟು ಸಾಧಿಸಲಿದೆ. ೨೦೦೧ರ ವೇಳೆಗೆ ಒಂದು ಟ್ರಿಲಿಯನ್ ಮೊತ್ತದ ವ್ಯವಹಾರವಾಗಿ ಪರಿಣಮಿಸಲಿದೆ” ಎಂದು ಅಂದಾಜಿಸಿತ್ತು. ೨೦೦೭ರ ವೇಳೆಗೆ, ಈ ಜಲ ವ್ಯವಹಾರ ಜಾಗತಿಕವಾಗಿ ೮ ಟ್ರಿಲಿಯನ್ ಅಮೇರಿಕನ್ ಡಾಲರ್ ತಲುಪಿದೆ! ಬಹುಶಃ ಈ ಬೆಳವಣಿಗೆಯ ಊಹೆ ನಮ್ಮ ಕಲ್ಪನೆಗೆ ಮೀರಿದ್ದು.

೧೯೯೮ರಲ್ಲಿ ವಿಶ್ವ ಬ್ಯಾಂಕ್ ನಿಂದ ಸಾಲ ಪಡೆದುಕೊಂಡಿದ್ದ ಕಂಪನಿಗಳು ಸರಬರಾಜು ಮಾಡುತ್ತಿದ್ದ ನೀರನ್ನು ಪಡೆಯುತ್ತಿದ್ದ ಜನಸಂಖ್ಯೆ ಜಾಗತಿಕ ಮಟ್ಟದಲ್ಲಿ ಶೇ.೫! ಆದರೆ ಇನ್ನೂ ಉದ್ದೇಶಿತ ಗ್ರಾಹಕರಾಗಿ ೯೫% ಜನ ಉಳಿದಿದ್ದಾರೆ! ಹಾಗಾಗಿ ನೀರು ಉದ್ಯಮ ೨೧ನೇ ಶತಮಾನದ ಲಾಭದಾಯಕ ಉದ್ದಿಮೆಯಾಗಿ ಬೆಳೆಯಿತು. ಈ ಎಲ್ಲ ಬೆಳವಣಿಗೆಗಳನ್ನು ತೀರ ಹತ್ತಿರದಿಂದ ಗಮನಿಸಿ, ಜಾಗತಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ದಾಖಲಿಸಲು ವಿಶ್ವ ಜಲ ಗುಪ್ತಚರ ಸಂಸ್ಥೆಕಾರ್ಯ ನಿರ್ವಹಿಸುತ್ತಿದೆ. ೧೯೯೯ರ ಜನೇವರಿಯಲ್ಲಿ ಈ ಸಂಸ್ಥೆಯ ಮಾಸಿಕ ಪ್ರಕಟಿಸಿದ ವರದಿ ಉಲ್ಲೇಖಿಸಿ ಹೇಳುವುದಾದರೆ, “ಒಂದು ಬ್ಯಾರೆಲ್ ಕುಡಿಯುವ ನೀರಿಗೆ, ಒಂದು ಬ್ಯಾರೆಲ್ ತೈಲದಷ್ಟೆ ಬೆಲೆಯನ್ನು ನೀಡಲು ನೀರಿನ ಕಂಪೆನಿಗಳು ಸದ್ಯದಲ್ಲಿ ಬೇಡಿಕೆ ಮಂಡಿಸಲಿವೆ”. ಹಾಗಾಯಿತು ಕೂಡ. ಕೊಲೆರಾಡೋದ ಶಿಲಾವೃತ ಪರ್ವತ ಪ್ರದೇಶಗಳಲ್ಲಿ ಕಳೆದ ಜೂನ್ ೨೦೦೬ ಹಾಗು ೨೦೦೭ರ ಮಧ್ಯೆ ೧,೦೦೦ ಕ್ಯೂಬಿಕ್ ಮೀಟರ್ ನೀರಿನ ಬೆಲೆ ೮,೦೦೦ ಡಾಲರ್ ದಿಂದ ೧೮,೦೦೦ ಡಾಲರ್ ಗಳ ವರೆಗೆ ಏರಿದ್ದನ್ನು ದಾಖಲಿಸಿದೆ!

ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ.

                                                                                                                              ಚಿತ್ರಗಳು : ಕೇದಾರನಾಥ ಸ್ವಾಮಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*