ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಅಂತರ್ಜಲದ ಬರಿದಾಗುವಿಕೆಯಲ್ಲಿ ಭಾರತವು ವಿಶ್ವದಲ್ಲೇ ಅತ್ಯಂತ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ: ನಾಸಾ

ವಿಶ್ವದಲ್ಲಿ ಅಂತರ್ಜಲವು ವೇಗವಾಗಿ ಬರಿದಾಗುತ್ತಿದ್ದು, ಭಾರತದಲ್ಲಿ ಅದು ವಿಷಮ ಸ್ಥಿತಿಯನ್ನು ತಲುಪಿದೆ ಎಂದು ನಾಸಾದ ಗ್ರಾವಿಟಿ ರಿಕವರಿ ಆಂಡ್ ಕ್ಲೈಮೇಟ್ ಎಕ್ಸ್‌ಪರಿಮೆಂಟ್ (ಗ್ರೇಸ್) ಉಪಗ್ರಹಗಳಿಂದ ದೊರೆತ ಮಾಹಿತಿಯು ಸೂಚಿಸಿದೆ. 

ವಿಶ್ವದ ಅತ್ಯಂತ ದೊಡ್ಡ ಅಂತರ್ಜಲ ತಪ್ಪಲುಗಳ ಪೈಕಿ, ಭಾರತ ಮತ್ತು ಪಾಕಿಸ್ತಾನದ ಸಿಂಧೂ ತಪ್ಪಲಿನ ಜಲಧರವು ಲಕ್ಷಾಂತರ ಜನರ ಸಿಹಿನೀರಿನ ಮೂಲವಾಗಿದೆ.  ಈ ನೀರಿನ ಬಳಕೆಯನ್ನು ಸರಿದೂಗಿಸಲು ನೈಸರ್ಗಿಕವಾದ ಮರುಪೂರಣ ಆಗದೆ, ಅತ್ಯಂತ ಒತ್ತಡವಿರುವ ಬೇಡಿಕೆ-ಆಧಾರಿತ ಎರಡನೆಯ ಮೂಲವಾಗಿದೆ ಎಂದು ಗ್ರೇಸ್ ಉಪಗ್ರಹಗಳಿಂದ ದೊರೆತ ಮಾಹಿತಿ ಬಳಸಿ, ಕ್ಯಾಲಿಫ಼ೋರ್ನಿಯಾ – ಇರ್ವಿನ್ ವಿಶ್ವವಿದ್ಯಾನಿಲಯ (ಯುಸಿಐ) ನಡೆಸಿದ ಎರಡು ಹೊಸ ಅಧ್ಯಯನಗಳಿಂದ ತಿಳಿದು ಬಂದಿದೆ.

ಭೂಮಿಯ ಅತ್ಯಂತ ದೊಡ್ಡ ಅಂತರ್ಜಲ ತಪ್ಪಲುಗಳ ಮೂರನೆಯ ಒಂದು ಭಾಗವು ಮಾನವ ಬಳಕೆಯಿಂದ ಅತ್ಯಂತ ವೇಗವಾಗಿ ಕ್ಷೀಣಿಸುತ್ತಿದೆ ಎಂದು ಈ ಅಧ್ಯಯನಗಳು ತಿಳಿಸಿವೆ.

ಸಾಮಾನ್ಯವಾಗಿ, ಭೂಮಿಯ ಮೇಲ್ಮೈನ ಅಡಿಯಲ್ಲಿ ಇರುವ ಆಳದಲ್ಲಿನ ಕಲ್ಲಿನ ಪದರಗಳು ಅಥವಾ ಮಣ್ಣಿನಲ್ಲಿ, ಅಂತರ್ಜಲದ ಜಲಧರಗಳು ಇರುತ್ತವೆ.

2661983010_93aeb6c690_zಅಂತರ್ಜಲದ ನೀರಿನ ಮೇಲೆ ಬಹಳಷ್ಟು ಅವಲಂಬಿತವಾಗಿರುವ ಸಮುದಾಯಗಳು/ಜನರು ಇರುವ ವಿಶ್ವದ ಅತ್ಯಂತ ಒಣ ಪ್ರದೇಶಗಳಲ್ಲಿ  ಅತೀ ಹೆಚ್ಚು ಬೇಡಿಕೆ ಇರುವ ಜಲಧರಗಳನ್ನು ನೀವು ಕಾಣಬಹುದು.  ಹವಾಮಾನ ಬದಲಾವಣೆ ಹಾಗೂ ಜನಸಂಖ್ಯಾ ಬೆಳವಣಿಗೆಯು ಸಮಸ್ಯೆಯನ್ನು ಜನಸಂಖ್ಯಾ ಬೆಳವಣಿಗೆಯು ಸಮಸ್ಯೆಯನ್ನು ಉಲ್ಭಣಗೊಳಿಸಲಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

“ಕಡಿಮೆ ಆಗುತ್ತಿರುವ ನೀರಿನ ಸರಬರಾಜಿನ ಕೊರತೆಯನ್ನು ನೀಗಿಸಲು ಅಗತ್ಯ ವೇಗದಲ್ಲಿ ಸಾಧ್ಯವಾಗದ, ಸಾಮಾಜಿಕ-ಆರ್ಥಿಕ ಅಥವಾ ರಾಜಕೀಯ ಒತ್ತಡಗಳಿರುವ ಪ್ರದೇಶದಲ್ಲಿ ಅತ್ಯಂತ ಒತ್ತಡ ಇರುವ ಜಲಧರ ಇದ್ದಾಗ ಏನಾಗುತ್ತದೆ?” ಎಂದು ಎರಡೂ ಅಧ್ಯಯನಗಳ ಪ್ರಮುಖ ಲೇಖಕರಾದ ಹಾಗೂ ಸಂಶೋಧನೆ ನಡೆಸಿದ ಯುಸಿಐ ಡಾಕ್ಟರಲ್ ವಿದ್ಯಾರ್ಥಿನಿಯಾದ ಅಲೆಕ್ಸಾಂಡ್ರಾ ರಿಚಿ ಹೇಳುತ್ತಾರೆ.

“ಭವಿಷ್ಯದಲ್ಲಿ ಜೀವಗಳು ಹಾಗೂ ಜೀವನೋಪಾಯಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುವ ಸಕ್ರಿಯ ನಿರ್ವಹಣೆಯನ್ನು ಇಂದು ನಿಖರವಾಗಿ ಹೇಗೆ ಕೈಗೊಳ್ಳಬಹುದೆಂಬುದಕ್ಕೆ ನಾವು ಎಚ್ಚರಿಕೆಯ ಸೂಚಕಗಳನ್ನು ಜನರ ಮುಂದಿಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ,” ಎನ್ನುತ್ತಾರೆ ರಿಚಿ.

ಸುಮಾರು ೬೦ ದಶಲಕ್ಷಕ್ಕಿಂತ ಹೆಚ್ಚಿನ ಜನರಿಗೆ ಪ್ರಮುಖ ನೀರಿನ ಮೂಲವಾದ ಅರಬ್ಬಿ ಜಲಧರ ವ್ಯವಸ್ಥೆಯು ವಿಶ್ವದಲ್ಲಿ ಅತ್ಯಂತ ಒತ್ತಡಕ್ಕೆ ಒಳಗಾದ ವ್ಯವಸ್ಥೆಯಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ನಾಸಾದ ಜಂಟಿ ಗ್ರೇಸ್ ಉಪಗ್ರಹಗಳಿಂದ ಪಡೆದ ಅಂಕಿಅಂಶಗಳನ್ನು ಬಳಸಿಕೊಂಡು ಬಾಹ್ಯಾಕಾಶದ ಮಾಹಿತಿಯೊಂದಿಗೆ ಜಾಗತಿಕ ಅಂತರ್ಜಲದ ಕಳವಿನ ಸಮಗ್ರ ಚಿತ್ರಣವನ್ನು ಮೊದಲ ಬಾರಿಗೆ ಈ ಅಧ್ಯಯನಗಳು ನೀಡಿದವು.

ನೀರಿನ ಪ್ರಮಾಣದಿಂದ  ಪ್ರಭಾವಿತವಾಗುವ, ಭೂಮಿಯ ಗುರುತ್ವಾಕರ್ಷಣೆಯಲ್ಲಿ ಉಂಟಾಗುವ ಏರಿಳಿತಗಳನ್ನು ಗ್ರೇಸ್ ಅಳೆಯುತ್ತದೆ.

೨೦೦೩ ಹಾಗೂ ೨೦೧೩ರ ನಡುವೆ ಸಂಶೋಧಕರು ನಡೆಸಿದ ಮೊದಲನೆಯ ಅಧ್ಯಯನದಲ್ಲಿ, ಭೂಮಿಯ ಅತ್ಯಂತ ದೊಡ್ಡ ೩೭ ಜಲಧರಗಳ ಪೈಕಿ, ೧೩ ಜಲಧರಗಳಲ್ಲಿ ಅತ್ಯಂತ ಕಡಿಮೆ ಅಥವಾ ಯಾವುದೇ ಮರುಪೂರಣ ಆಗದ ಕಾರಣ, ಕ್ಷೀಣಿಸುತ್ತಿರುವುದು ಕಂಡುಬಂದಿತು. ಬಳಕೆಗೆ ಪೂರಕವಾಗಿ, ನೈಸರ್ಗಿಕವಾದ ಮರುಪೂರಣವೇ ಇಲ್ಲದ ಅಥವಾ ಅತ್ಯಲ್ಪವಿರುವ ಎಂಟು ಜಲಧರಗಳನ್ನು “ಅತಿಯಾದ ಒತ್ತಡ” ಇರುವ ಜಲಧರಗಳೆಂದು ವರ್ಗೀಕರಣ ಮಾಡಲಾಯಿತು.

ಮರುಪೂರಣ ಮಟ್ಟವನ್ನು ಆಧರಿಸಿ, ಇನ್ನೂ ಐದು ಜಲಧರಗಳನ್ನು “ತೀವ್ರತರ” ಅಥವಾ “ಅತ್ಯಧಿಕ” ಒತ್ತಡ ಅನುಭವಿಸುತ್ತಿರುವ ಜಲಧರಗಳೆಂದು ವರ್ಗೀಕರಿಸಲಾಯಿತು.

ಈ ಜಲಧರಗಳು ಕ್ಷೀಣಿಸುತ್ತಿದ್ದರೂ, ಅದಕ್ಕೆ ಸ್ವಲ್ಪಮಟ್ಟಿನ ನೀರಿನ ಒಳಹರಿವೂ ಇತ್ತು.  “ಜಗತ್ತಿನ ಅಂತರ್ಜಲದ ನಿಕ್ಷೇಪಗಳನ್ನು ನಾವು ಬಳಸುತ್ತಿರುವ ವೇಗವನ್ನು ಗಮನಿಸಿದರೆ, ಉಳಿದಿರುವುದೆಷ್ಟೆಂದು ಕಂಡುಕೊಳ್ಳಲು ಸಂಘಟಿತ ಜಾಗತಿಕ ಯತ್ನವನ್ನು ಅತ್ಯಗತ್ಯವಾಗಿ ಮಾಡಬೇಕಾಗಿದೆ,” ಎಂದು ಪ್ರಮುಖ ಸಂಶೋಧಕರೂ, ಕ್ಯಾಲಿಫ಼ೋರ್ನಿಯಾದ ಪ್ಯಾಸಡೆನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯ ಹಿರಿಯ ಜಲ ವಿಜ್ಞಾನಿಯಾದ ಜೇ ಫ಼್ಯಾಮಿಗ್ಲಿಯೆಟ್ಟಿ ಹೇಳುತ್ತಾರೆ.

ಜಲ ಸಂಪನ್ಮೂಲಗಳ ಸಂಶೋಧನೆ (ವಾಟರ್ ರಿಸೋರ್ಸಸ್ ರಿಸರ್ಚ್) ಎಂಬ ನಿಯತಕಾಲಿಕದಲ್ಲಿ ಈ ಸಂಶೋಧನಾ ಆವಿಷ್ಕಾರಗಳನ್ನು ಪ್ರಕಟಿಸಲಾಗಿದೆ.

ಲೇಖನ: ಸ್ವಾತಿ ಬನ್ಸಲ್

ಕನ್ನಡ ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ

(ಮೂಲ ಆಂಗ್ಲ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ: http://www.indiawaterportal.org/articles/world-running-out-groundwater-nasa)
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*