ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಅಂತರ್ಜಲ ಮರುಪೂರಣ ವಿಫಲವಾದಾಗ

ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ನೀರು ಹೆಚ್ಚು ಬಳಸುವ ಬೆಳೆಗಳನ್ನು ಬೆಳೆಯುವುದರಿಂದಾಗಿ, ಒಂದು ಪ್ರದೇಶದದ ಅಂತರ್ಜಲ ಮರುಪೂರಣ ಮಾಡುವ ಸರ್ಕಾರೇತರ ಸಂಸ್ಥೆಯೊಂದರ ಯತ್ನಗಳು ಅಷ್ಟೇನೂ ಫಲಕಾರಿ ಆಗುವುದಿಲ್ಲ. 

ಭಾರತದ ಬಹುತೇಕ ಭಾಗಗಳಲ್ಲಿ ಜಲ ಬಿಕ್ಕಟ್ಟು ಒಂದು ವಾಸ್ತವ ಸತ್ಯ.  ಬಿಸಿಲುಕಾಲದ ಬರದ ನಂತರ, ಮಳೆಗಾಲದ ನೆರೆ ಉಂಟಾಗುತ್ತದೆ.  ಮಹಾರಾಷ್ಟ್ರದ ಉದಾಹರಣೆ ತೆಗೆದುಕೊಳ್ಳಿ.   ಮಹಾರಾಷ್ಟ್ರದ ರಾಜಧಾನಿಯಾದ ಮುಂಬಯಿಯಲ್ಲಿ ಒಮ್ಮೆ ನೀರಿಗಾಗಿ ಹಾಹಾಕಾರವಾದರೆ, ಮತ್ತೊಮ್ಮೆ ಅದು ಮಂಡಿ-ಆಳದ ನೀರಿನಲ್ಲಿ ತೇಲುತ್ತಿರುತ್ತದೆ.  ಈ ವಾರ್ಷಿಕ ಬಿಕ್ಕಟ್ಟನ್ನು ನಾವು ಬಗೆಹರಿಸುವುದಾದರೂ ಹೇಗೆ? ದುರಾದೃಷ್ಟವಶಾತ್, ಇದಕ್ಕೆ ಪರಿಹಾರ ಹುಡುಕುವುದು ಸುಲಭದ ಮಾತಲ್ಲ.

ಇದಕ್ಕೆ ಸೂಚಿಸುವ ಅತ್ಯಂತ ಸಾಮಾನ್ಯ ಪರಿಹಾರಗಳೆಂದರೆ ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ, ಗೃಹಬಳಕೆ, ಉದ್ಯಮ ಹಾಗೂ ಕೃಷಿ ಕಾರ್ಯಗಳಿಗೆ ನೀರಿನ ಸಮರ್ಥ ಬಳಕೆ, ಹಾಗೂ, ನೀರಿನ ಮರುಸಂಸ್ಕರಣೆ ಹಾಗೂ ಪುನರ್ಬಳಕೆ.  ಜೊತೆಗೆ, ಕೃಷಿಯಲ್ಲಿ ನೀರನ್ನು ಉಳಿಸಲು ಇತರ ಮಾರ್ಗಗಳಾದ ಬೆಳೆ ಆವರ್ತನ ಅಥವಾ ಬದಲಾವಣೆ, ಸ್ಪ್ರಿಂಕ್ಲರ್‌ಗಳ ಹಾಗೂ ಹನಿ ನೀರಾವರಿಯ ಬಳಕೆ, ಭೂಮಿಯನ್ನು ಲೇಜ಼ರ್‌ಗಳ ಮೂಲಕ ಸಮತಟ್ಟು ಮಾಡುವುದು ಹಾಗೂ ವಿದ್ಯುತ್ತಿನ ಮಿತಬಳಕೆ ಆಗುವಂತೆ ರೈತರಿಗೆ ಉಚಿತ ವಿದ್ಯುತ್ ನೀಡದೆ ಇರುವಂತಹ ಪರಿಹಾರಗಳನ್ನು ಸೂಚಿಸಲಾಗುತ್ತದೆ.  ಈ ಸಲಹೆ-ಸೂಚನೆಗಳನ್ನು ಪ್ರತಿ ವರ್ಷವೂ ನೀಡಿದರೂ, ವಾಸ್ತವದಲ್ಲಿ ಬಿಕ್ಕಟ್ಟನ್ನು ನೀಗಿಸುವ ಸಲುವಾಗಿ ಸೂಕ್ತ ಮಟ್ಟದಲ್ಲಿ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.  ಬೇಸಿಗೆಯ ಬೇಗೆ ಅತ್ಯಧಿಕವಾದ ತಿಂಗಳುಗಳಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಹೆಚ್ಚಾದಾಗ, ನೀರಿಗಾಗಿ ಹಾಹಾಕಾರ ಏರುತ್ತದೆ.  ಮಳೆಗಾಲ ಬಂದಾಗ ಸಮಸ್ಯೆಯ ಕಡೆ ಗಮನ ನೀಡುವುದಿಲ್ಲ!

ಮೇ ೧, ೨೦೧೬ರಂದು ದ ಟ್ರಿಬ್ಯೂನ್‌ನಲ್ಲಿ ಪ್ರಕಟವಾದ ವಾಟರ್ ವಾರ್ಸ್ (ಜಲ ಯುದ್ಧಗಳು) ಎಂಬ ಶೀರ್ಷಿಕೆಯ ವರದಿಯಲ್ಲಿ, ಪ್ರಸ್ತುತ ಬಿಕ್ಕಟ್ಟನ್ನು ಕುರಿತಾಗಿ ಅತ್ಯಂತ ಕರಾಳವಾದ, ಆದರೆ ವಾಸ್ತವ ಚಿತ್ರಣವನ್ನು ಪ್ರತಿಬಿಂಬಿಸಲಾಗಿದೆ.  ವರದಿಯ ಕೊನೆಯಲ್ಲಿ ಸಮಂಜಸವಾದ ಪ್ರಶ್ನೆಯನ್ನೇ ಮುಂದಿಡಲಾಯಿತು….ನೀರನ್ನು ಮಿತವಾಗಿ ಬಳಸಿ, ಸಂರಕ್ಷಿಸಲು ನಾವು ತೆಗೆದುಕೊಂಡಿರುವ ಕ್ರಮಗಳೇನು? ಈ ವರದಿಯಿಂದ, ಕಳೆದ ೧೦ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ಸೊಸೈಟಿ ಫ಼ಾರ್ ಪ್ರಮೋಷನ್ ಆಂಡ್ ಕನ್ಸರ್ವೇಷನ್ ಆಫ಼್ ಎನ್‌ವೈರನ್‌ಮೆಂಟ್ (ಸ್ಪೇಸ್) ಎಂಬ ಸರ್ಕಾರೇತರ ಸಂಸ್ಥೆಯ ಕೆಲ ಯತ್ನಗಳನ್ನು ಹಂಚಿಕೊಳ್ಳಲು ನನಗೆ ಇಚ್ಛೆಯಾಯಿತು.  ಆದರೆ, ಈ ಯೋಜನೆಗಳು, ಸೋಲು ಹಾಗೂ ಯಶಸ್ಸುಗಳ ನಡುವೆ ಡೋಲಾಯಮಾನವಾಗುತ್ತಿವೆ.

ಅರಾವಳಿ ಬೆಟ್ಟಗಳಲ್ಲಿನ ಯತ್ನ

ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತಿಜಾರ ಬ್ಲಾಕ್‌ನಲ್ಲಿನ ಅರಾವಳಿ ಬೆಟ್ಟಗಳ ತಪ್ಪಲಿನಲ್ಲಿರುವ ತೀವ್ರವಾದ ಜಲ ಬಿಕ್ಕಟ್ಟು ಎದುರಿಸುತ್ತಿರುವ ಗ್ರಾಮಗಳು ನಮ್ಮ ಕಾರ್ಯಪ್ರದೇಶವಾಗಿತ್ತು.  ಎದುರಿಸಿದ ಸವಾಲುಗಳ ಪೈಕಿ ಮೇಯಿಸುವಿಕೆ ಹಾಗೂ ಉರುವಲು ಕಟ್ಟಿಗೆಗಾಗಿ ಹಸಿರು ಹೊದಿಕೆಯನ್ನು ಕಳೆದುಕೊಂಡು ಬೋಳಾದ ಅರಾವಳಿ ಬೆಟ್ಟಗಳು; ದೊಡ್ಡ ಕುಟುಂಬಗಳನ್ನು ಹೊಂದಿದ ಮಿಯೋ-ಮುಸಲ್ಮಾನ ಸಮುದಾಯ; ಜಾನುವಾರು ಮೇವಿಗೆಂದೇ ಬಳಸಲಾಗುವ ಬಂಜರುಭೂಮಿ; ಮಹಿಳೆಯರಲ್ಲಿ ಕೇವಲ ಐದು ಪ್ರತಿಶತ ಸಾಕ್ಷರತೆ ಹಾಗೂ ಪುರುಷರಲ್ಲಿ ೨೦ ಪ್ರತಿಶತ ಸಾಕ್ಷರತೆ, ಹಾಗೂ, ಮಹಿಳೆಯರಲ್ಲಿ ವರ್ಣನಾತೀತ ಮಟ್ಟದ ಬಡತನ ಹಾಗೂ ಕಠಿಣವಾದ ಶ್ರಮಜೀವನ – ಇವುಗಳು ಇದ್ದವು.

ದನಗಾಹಿ ಆರ್ಥಿಕತೆಯು ಕೃಷಿ ಆರ್ಥಿಕತೆಯತ್ತ ಹೊರಳಿದಾಗ, ಕಡಿಮೆ ಮಳೆ ಬೀಳುವ ಪ್ರದೇಶ ಹಾಗೂ ಮರಳು ಮಣ್ಣೆಂಬ ಅಂಶಗಳನ್ನೂ ಲೆಕ್ಕಿಸದೆ, ಕಣಿವೆಯ ಸಮತಟ್ಟಾದ ಭೂಮಿಗಳನ್ನು ಹದ ಮಾಡಿ, ಅತಿ ವೇಗವಾಗಿ ನೀರಾವರಿಗೆ ಅದನ್ನು ಒಳಪಡಿಸಲಾಯಿತು.  ಬೆಟ್ಟಗಳ ಬುಡದಲ್ಲಿ ಬರುವ ಭಿವಾಡಿಯಿಂದ ತಿಜಾರವರೆಗಿನ ೩೫ ಸರಣಿ ಗ್ರಾಮಗಳನ್ನು ನಾವು ಆಯ್ಕೆ ಮಾಡಿಕೊಂಡೆವು.  ೧೯೯೫ರಿಂದ, ಭಿವಾಡಿ ಸುತ್ತಲಿನ ಪ್ರದೇಶವು ತೀವ್ರವಾದ ಔದ್ಯಮಿಕ ಬೆಳವಣಿಗೆಯನ್ನು ಕಂಡಿತು.  ಇದರ ಪರಿಣಾಮವಾಗಿ, ಈಗಾಗಲೇ ವಿರಳವಾದ ಅಂತರ್ಜಲದ ಶೋಷಣೆಯನ್ನು ಮಾಡಲು ಕಾರ್ಖಾನೆಗಳು ಹಾಗೂ ಬಿಲ್ಡರ್‌ಗಳು ಪ್ರಾರಂಭಿಸಿದರು.  ತಿಜಾರದಿಂದ ಭಿವಾಡಿಯತ್ತ ಮೇಲ್ಮೈ ಹಾಗೂ ಉಪ-ಮೇಲ್ಮೈ ನೀರು ಹರಿಯುವುದರಿಂದ, ಉದ್ಯಮಗಳು ಹೆಚ್ಚಿನ ನೀರನ್ನು ಬಳಸಿದ ಕಾರಣ, ಮೇಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವು ಮತ್ತಷ್ಟು ಕುಗ್ಗಿತು.  ಭಿವಾಡಿಯ ಬಳಿಯಲ್ಲಿ ಕಾರ್ಖಾನೆಯನ್ನು ಸ್ಥಾಪಿಸಿದ್ದ ಎಸ್‌ಆರ್‌ಎಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಾರ್ಪೊರೇಟ್ ಉದ್ಯಮವು, ತನ್ನ ಗಳಿಕೆಯ ಒಂದು ಭಾಗವನ್ನು ಸಮಾಜ ಕಲ್ಯಾಣ ಚಟುವಟಿಕೆಗಳಿಗಾಗಿ ಮೀಸಲಿಟ್ಟಿತ್ತು.  ಅವರು ನಮ್ಮ ಯೋಜನೆಗೆ ಅನುದಾನವನ್ನು ನೀಡಿದರು.

ವರ್ಷವೊಂದರಲ್ಲಿ ಅತ್ಯಧಿಕ ರನ್ ಆಫ಼್‌ನಿಂದ ಉಂಟಾಗುವ ನೆರೆ ಉಂಟುಮಾಡುವ ಸುಂಟರಗಾಳಿ-ಸಹಿತ ಮಳೆಯಿಂದ ಸರಾಸರಿ ೫೦೦ ಎಮ್.ಎಮ್.ನಷ್ಟು ಮಳೆಯು ಬರಡು ಅರಾವಳಿಗಳಲ್ಲಿ ಬೀಳುವುದು ಒಳ್ಳೆಯದು – ಹೀಗೆ ಬಿದ್ದ ನೀರನ್ನು ಅಂತರ್ಜಲ ಮರುಪೂರಣ ಮಾಡಲು ಬಳಸಬಹುದು. ಅರಾವಳಿ ಬೆಟ್ಟಗಳಿಂದ ಮಳೆನೀರು ಕೊಯ್ಲು ಮಾಡಲು ನಾವು ೨೦೫ ಮಣ್ಣಿನ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದೆವು. ಅರಾವಳಿ ಬೆಟ್ಟಗಳ ತಪ್ಪಲಿನಲ್ಲಿ ಇರುವ ೧೫೦೦ ಹೆಕ್ಟೇರ್ ಖಾಸಗಿ ಸ್ವತ್ತಿನ ಪಾಳುಭೂಮಿಯನ್ನು ಸಮತಟ್ಟು ಮಾಡಲು.  ಆರ್ಥಿಕ ನೆರವನ್ನು ಒದಗಿಸಲಾಯಿತು. ೬೫೦೦ ಬಡ ರೈತರ ಆದಾಯವನ್ನು ಹೆಚ್ಚಿಸುವಂತಹ ಉತ್ತಮ ಕೃಷಿ ಆಚರಣೆಗಳನ್ನು ಉತ್ತೇಜಿಸಲಾಯಿತು. ಹೊಲಗಳ ಬದುಗಳ ಮೇಲೆ ನಾವು ಮೂರು ಲಕ್ಷ ಗಿಡಗಳನ್ನೂ ನಾಟಿ, ೫೦,೦೦೦ ಹಣ್ಣಿನ ಮರಗಳನ್ನು ನಾಟಿ ಮಾಡಿದೆವು.

groundwater iwp article photoಅರಾವಳಿ ಬೆಟ್ಟಗಳಿಂದ ಮಳೆನೀರು ಕೊಯ್ಲು ಮಾಡಲು ನಾವು ೨೦೫ ಮಣ್ಣಿನ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದೆವು.  ಅರಾವಳಿ ಬೆಟ್ಟಗಳ ತಪ್ಪಲಿನಲ್ಲಿ ೧೫೦೦ ಹೆಕ್ಟೆರುಗಳ ಖಾಸಗಿ-ಸ್ವಾಮ್ಯದ ಬಂಜರು ಭೂಮಿಯನ್ನು ಸಮತಟ್ಟು ಮಾಡಲು ರೈತರಿಗೆ ಆರ್ಥಿಕ ನೆರವನ್ನು ನೀಡಲಾಯಿತು.  ಬ್ಲಾಕ್ ಮಟ್ಟದಲ್ಲಿ ಒಕ್ಕೂಟ ನಿರ್ಮಾಣ ಮಾಡಿಕೊಂಡ ೧೭೦ ಸ್ವಸಹಾಯ ಗುಂಪುಗಳನ್ನು ನಾವು ರಚಿಸಿದೆವು.  ಜೀವನೋಪಾಯ ಚಟುವಟಿಕೆಗಳಿಗಾಗಿ ಸಾಲ ನೀಡಲು ಈ ಒಕ್ಕೂಟಗಳಿಗೆ ಬ್ಯಾಂಕ್‌ಗಳ ಸಂಪರ್ಕವನ್ನು ಕಲ್ಪಿಸಲಾಯಿತು.  ಮೇಕೆ ಸಾಕಾಣಿಕೆಗಾಗಿ ಭೂರಹಿತರಿಗೂ ನೆರವನ್ನು ನೀಡಲಾಯಿತು.  ಹೊಲಗಳ ಬದುಗಳ ಮೇಲೆ, ಉತ್ತಮ ಮಾರುಕಟ್ಟೆ ಮೌಲ್ಯವಿರುವ ಕಿನ್ನೊ ಹಾಗೂ ಸೀಬೆಯಂತಹ ಹಣ್ಣಿನ ಮರಗಳು, ಹಾಗೂ ತರಕಾರಿ ಬೆಳೆಗಳನ್ನು ನಾಟಲು ರೈತರು ಪ್ರಾರಂಭಿಸಿದರು.  ಗೋಮಾಳದಲ್ಲಿ ಜಾನುವಾರುಗಳಿಗಾಗಿ ಜಲ ಸಂಪನ್ಮೂಲಗಳನ್ನು ನಿರ್ಮಾಣ ಮಾಡಲಾಯಿತು.

ಒಂದು ಎಕರೆ ಕಿನ್ನೊ ಹೂವಿನ ತೋಟದಿಂದ ಮೊದಲ ಬಾರಿಗೆ ರೈತನೊಬ್ಬನು ೧.೨೩ ಲಕ್ಷ ರೂಪಾಯಿಗಳನ್ನು ಸಂಪಾದಿಸಿದನು.  ಗ್ರಾಮದಲ್ಲಿ ಕಿನ್ನೊ ರಸವನ್ನು ರೂ.೨೫೦೦೦ಕ್ಕೆ ಮಾರಾಟ ಮಾಡಿದ ಮೊತ್ತವೂ ಲಾಭದಲ್ಲಿ ಸೇರಿತ್ತು.  ಒಬ್ಬ ರೈತ ಮಹಿಳೆಯು, ಆರು ವರ್ಷಗಳ ಆರೈಕೆಯ ನಂತರ ೨೦೦ ಬೆಳೆದ ಅರುಣೀಮ ಗಿಡಗಳನ್ನು ರೂ.೧ ಲಕ್ಷಕ್ಕೆ ಮಾರಾಟ ಮಾಡಿದಳು.  ಅ ಹಣದೊಂದಿಗೆ ಆಕೆ ಏನು ಮಾಡಿದಳೆಂದು ಕೇಳಿದಾಗ, ಅರ್ಧ ಹಣವನ್ನು ಮುರ್ರ ಎಮ್ಮೆ ಕೊಳ್ಳಲು ಹಾಗೂ ಮಿಕ್ಕ ಹಣವನ್ನು ತನ್ನ ಏಳು ಗಂಡುಮಕ್ಕಳ ಪೈಕಿ ಇಬ್ಬರ ವಿವಾಹ ನಿಶ್ಚಯ ಮಾಡಲು ಬಳಸಿದಳೆಂದು ಹೇಳಿದಳು. ಹೊಲದ ಅಭಿವೃದ್ಧಿ, ಮನೆ ನಿರ್ಮಾಣ, ಮಕ್ಕಳ ಶಿಕ್ಷಣ, ಮುರ್ರ ಎಮ್ಮೆಗಳು ಹಾಗೂ ಬೈಕುಗಳ ಖರೀದಿಗಾಗಿ ತನ್ನ ಆದಾಯದ ಬಹುತೇಕ ಭಾಗವನ್ನು ವಿನಿಮಯ ಮಾಡಲಾಯಿತು.

ಇದು ನಮ್ಮ ಯಶೋಗಾಥೆಗಳು; ಆದರೆ ಸೋಲಿನ ಕಥೆಗಳೂ ಅಷ್ಟೇ ಇವೆ.

 ನಮ್ಮ ಗೊಂದಲ

ಈ ಗ್ರಾಮಗಳು ಗುರ್‌ಗಾಂವ್ ಹಾಗೂ ಮಾನೇಸರ್‌ಗೆ ಹತ್ತಿರ ಇರುವುದರಿಂದ, ತರಕಾರಿಗಳು, ಅದರಲ್ಲೂ ಮೆಣಸಿನಕಾಯಿ ಹಾಗೂ ಈರುಳ್ಳಿಗೆ ಉತ್ತಮ ಆದಾಯ ದೊರಕಿತು. ಸಾಂಪ್ರದಾಯಿಕ ಸಜ್ಜೆಗೆ ಯಾವುದೇ ನೀರಾವರಿಯ ಅಗತ್ಯವಿರಲಿಲ್ಲ ಹಾಗೂ ಸಾಸಿವೆಗೆ, ಸ್ಪ್ರಿಂಕ್ಲರ್‌ಗಳ ಮೂಲಕ ಎರಡು ಬಾರಿ ಮಾತ್ರ ನೀರಾವರಿ ಪೂರೈಕೆಯ ಅಗತ್ಯವಿತ್ತು.  ಮೆಣಸಿನಕಾಯಿ ಹಾಗೂ ಈರುಳ್ಳಿಗೆ ತಲಾ ಒಂಭತ್ತು ಹಾಗೂ ೧೧ ನೀರಾವರಿಯ ಅಗತ್ಯವಿತ್ತು.  ಅದರ ಪರಿಣಾಮವಾಗಿ, ನಮ್ಮ ಯೋಜನೆಗಳ ಭಾಗವಾದ ಗ್ರಾಮವೊಂದರಲ್ಲಿ, ಈಗ ೧೨೮ ಕೊಳವೆಬಾವಿಗಳಿವೆ; ಆದರೆ, ೧೯೭೦ರಲ್ಲಿ, ಕೇವಲ ಎರಡೇ ಇತ್ತು.  ಸುಧಾರಿತ ಭೂಮಿಯ ಮೇಲೆ ಐವತ್ತು ಹೊಸ ಕೊಳವೆಬಾವಿಗಳನ್ನು ಅಗೆಯಲಾಯಿತು.  ಅರವತ್ತು ಪ್ರತಿಶತ ಕೊಳವೆಬಾವಿಗಳನ್ನು ಸಬ್ಮರ್ಸಿಬಲ್ ಮೋಟಾರುಗಳಾಗಿ ಪರಿವರ್ತಿಸಲಾಗಿದೆ.

ಗುಆಲ್ಡದಂತಹ ದೊಡ್ಡ ಗ್ರಾಮದಲ್ಲಿ ೪೦ ಮಳೆನೀರು ಕೊಯ್ಲಿನ ಅಣೆಕಟ್ಟುಗಳಿದ್ದರೂ, ಸುಧಾರಿತ ಭೂಮಿಯಲ್ಲಿ ೬೦ ಹೊಸ ಕೊಳವೆಬಾವಿಗಳು ತಲೆ ಎತ್ತಿವೆ.  ಕೊಯ್ಲುಮಾಡಿದ ಮೇಲ್ಮೈ ಹರಿವಿನಿಂದ ಅಂತರ್ಜಲ ಮಟ್ಟವು ಮಳೆಗಾಲದಲ್ಲಿ ಮೇಲಕ್ಕೆ ಏರುತ್ತದೆ ಹಾಗೂ, ಗೋಧಿ ಮತ್ತು ತರಕಾರಿ ಬೆಳೆಗಳಿಗೆ ನೀರಾವರಿ ಒದಗಿಸಿದಾಗ, ಕಡಿಮೆ ಆಗುತ್ತದೆ.  ನೀರಿನ ಇಳಿಕೆಯು ಐದು ವರ್ಷಗಳು ಮುಂದುವರೆದು, ಅಂತರ್ಜಲದಲ್ಲಿ ೫.೫ ಮೀಟರ್‌ಗಳ ಒಟ್ಟಾರೆ ಇಳಿಕೆಯಾಯಿತು.  ನಾವು ಭತ್ತ ಬೆಳೆಯುವುದಿಲ್ಲ, ತರಕಾರಿಗಳಿಗೆ ಉತ್ತಮ ಆದಾಯ ಬಂದರೂ, ಹೆಚ್ಚಿನ ನೀರನ್ನು ಬಯಸುತ್ತದೆ.

ಹೆಚ್ಚಿನ ಉತ್ಪಾದಕತೆಗಾಗಿ ಭೂಮಿಯನ್ನು ಸಮತಟ್ಟು ಮಾಡಿ, ಬದು ನಿರ್ಮಾಣ ಮಾಡಲಾಯಿತು, ಆದರೆ ಇದರಿಂದ ಸ್ಥಾನಿಕ ಮಳೆನೀರು ಸಂರಕ್ಷಣೆ ಉಂಟಾಗಿ, ಮಣ್ಣಿನ ಮರುಪೂರಣ ಸ್ವರೂಪದಲ್ಲಿ ಬದಲಾವಣೆ ಉಂಟಾಗುತ್ತದೆ.  ಆದರೆ, ಖಾಸಗಿ ಭೂಮಿಯ ಸುತ್ತ ಅಣೆಕಟ್ಟುಗಳನ್ನು ನಿರ್ಮಾಣ  ಮಾಡಿದಾಗ, ಸಮತಟ್ಟು ನೆಲದಿಂದ ಬರುವ ಮೇಲ್ಮೈ ಹರಿವು ಶೇಖರಣಾ ಅಣೆಕಟ್ಟುಗಳಿಗೆ ತಲುಪದ ಕಾರಣ, ಕಡಿಮೆ ಅಂತರ್ಜಲ ಮರುಪೂರಣ ಉಂಟಾಯಿತು. ಪಂಜಾಬ್ ಕಥೆಯು ರಾಜಸ್ಥಾನದಲ್ಲೂ ಪುನರಾವರ್ತನೆಗೊಂಡಿತು.  ನಾವು ಮಳೆನೀರನ್ನು ಕೊಯ್ಲು ಮಾಡಿದರೂ, ಅಂತರ್ಜಲ ಮಟ್ಟ ಕುಸಿಯುತ್ತಾ ಬಂದಿದೆ.

ಅಂತರ್ಜಲ ಮಟ್ಟಕ್ಕಾಗಿ, ರೈತರು ಸಜ್ಜೆ ಹಾಗೂ ಸಾಸಿವೆ ಬೆಳೆಯುವುದನ್ನು ಮುಂದುವರೆಸಬೇಕಿತ್ತು.  ದುರಾದೃಷ್ಟವಶಾತ್, ಸಜ್ಜೆ ಅಥವಾ ಸಾಸಿವೆ ಬೆಳೆಯಲ್ಲಿ ಯಾವುದೇ ಲಾಭವಿಲ್ಲ. ಸ್ಥಳೀಯ ಉತ್ಪನ್ನ-ಆಧಾರಿತ ಕೃಷಿ-ಉದ್ಯಮವನ್ನು ಉತ್ತೇಜಿಸುವುದೊಂದೇ ಮುಂದಿನ ಹೆಜ್ಜೆಯಾಗಿದೆ.

ಚಿತ್ರ-ಲೇಖನ: ಡಾ.ಎಸ್.ಎಸ್.ಗ್ರೇವಾಲ್

ಕನ್ನಡ ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ

ಲೇಖಕರು ಲುಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಸ್ಥಾವರದ ಮಾಜಿ ನಿರ್ದೇಶಕರು ಹಾಗೂ ಎಸ್.ಪಿ.ಎ.ಸಿ.ಇ.ದ ಅಧ್ಯಕ್ಷರಾಗಿದ್ದಾರೆ. 
(ಮೂಲ ಆಂಗ್ಲ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ: http://www.indiawaterportal.org/articles/groundwater-revival-comes-cropper)
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*