ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಜಲ ಉಳಿಸಲು – ಕೆರೆ ತೋಡಿದವರು

ಮಳೆನೀರನ್ನು ಭೂಮಿಯಲ್ಲಿ ನಿಲ್ಲುವಂತೆ ಮಾಡಿ ಆ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕೆಂಬ ನಿಟ್ಟಿನಲ್ಲಿ ಕೆರೆ ನಿರ್ಮಿಸುವ ಪ್ರಯತ್ನವೊಂದರಲ್ಲಿ ಕಡೂರಿನ ಎಂಭತ್ತು ಮನೆಗಳ ಮಂದಿ ಯಶಸ್ಸನ್ನು ಕಂಡಿದ್ದಾರೆ. ಈ ಊರಿನ ಜನ ಜೊತೆಯಾಗಿ ದುಡಿದು ತಮ್ಮ 2ಊರಿನಲ್ಲೊಂದು ಹದಿನಾರು ಎಕರೆಯಲ್ಲಿ ಕೆರೆಯನ್ನು ನಿರ್ಮಿಸಿದ್ದಾರೆ. ಎರಡು ವರ್ಷಗಳ ಹಿಂದೆ ನಿರ್ಮಾಣವಾದ ಈ ಕೆರೆಯಲ್ಲಿ ಮಳೆಗಾಲದಲ್ಲಿ ನೀರು ತುಂಬುತ್ತದೆ. ಬೇಸಿಗೆ ಕಾಲದಲ್ಲಿ ಕೂಡಾ ಇದರಿಂದ ನೇರವಾಗಿ ನೀರೆತ್ತುವ ಕೆಲಸವನ್ನು ಮಾಡುತ್ತಿಲ್ಲ. ಈ ಕೆರೆಯಲ್ಲಿ ಸಂಗ್ರಹಗೊಂಡ ನೀರಿನಿಂದಾಗಿ ಇದೀಗ ಈ ಊರಿನ ಎಂಭತ್ತು ಮನೆಗಳಲ್ಲಿರುವ ನಾಲ್ಕು ನೂರರಿಂದ ಐದು ನೂರರಷ್ಟು ಕೊಳವೆಬಾವಿಗಳಲ್ಲಿ ವರ್ಷದುದ್ದಕ್ಕೂ ನೀರು ದೊರೆಯುವಂತಾಗಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕೆಂಬ ಒಳವುಳ್ಳವರಿಗೆ ಇವರ ಪ್ರಯತ್ನ ಒಂದು ಉತ್ತಮ ನಿದರ್ಶನ.

ಕೆರೆ ತೋಡಿದ್ದು ಹೀಗೆ 

4ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಹೋಬಳಿಯ ಸಿಂಗಟಗೆರೆ ಸಮೀಪದ ಪರ್ವತನಹಳ್ಳಿ ಎಂಭತ್ತು ಮನೆಗಳನ್ನು ಹೊಂದಿರುವ ಪುಟ್ಟ ಹಳ್ಳಿ. ಈ ಊರಿನಲ್ಲಿ ಒಂದೇ ಒಂದು ಕೆರೆ ಇಲ್ಲ. ನೀರಿಗಾಗಿ ಪ್ರತಿ ಮನೆಯಲ್ಲೂ ನಾಲ್ಕರಿಂದ ಐದು ಬೋರ್‌ಗಳನ್ನು ಕೊರೆದಿದ್ದಾರೆ. ಆದರೆ ಫೆಬ್ರವರಿ ಮಾಸಾಂತ್ಯಕ್ಕೆ ಅವು ನೀರಿಲ್ಲದೆ ಬರಿದಾಗುತ್ತಿದ್ದುವು. ಇರುವ ಎಕರೆಗಟ್ಟಲೆ ಕೃಷಿಗಳು ನೀರಿಲ್ಲದೆ ಒಣಗಿಬಿಡುತ್ತಿದ್ದುವು. ಮಳೆನೀರನ್ನು ಸಂಗ್ರಹಿಸುವ ಮೂಲಕ ತಮ್ಮ ಊರಿನ ಬೋರ್‌ವೆಲ್‌ಗಳನ್ನು ರಿಚಾರ್ಜ್ ಮಾಡಿಕೊಳ್ಳಬಹುದೆಂಬ ನಿಟ್ಟಿನಲ್ಲಿ ಈ ಊರಿನ ಮಂದಿ ಜೊತೆ ಸೇರಿ ಕೆರೆ ನಿರ್ಮಿಸುವ ಕೆಲಸವನ್ನು ಕೈಗೆತ್ತಿಕೊಂಡರು. ಜಮಖಂಡಿ ತಾಲೂಕಿನ ಚಿಕ್ಕಕೊಡಲಿ ಗ್ರಾಮದಲ್ಲಿ ಜನರೇ ನಿರ್ಮಿಸಿದ ಸಿದ್ದುನ್ಯಾಮೇಗೌಡ ಬ್ಯಾರೇಜ್‌ನ ಸಾಹಸಗಾಥೆ ಇವರಿಗೆ ಪ್ರೇರಣೆಯಂತೆ.  ಈ ಊರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಲಭೈರೇಶ್ವರ, ವೇದಾವತಿ ಪ್ರಗತಿಬಂಧು ತಂಡದ ಸದಸ್ಯರು, ಸರಸ್ವತಿ ಮತ್ತು ನೂತನ, ವಿಜಯವಾಣಿ ಸ್ವಸಹಾಯ ಸಂಘದ ಯಗಟಿಯ ಶಿಕ್ಷಕರಾದ ಜಯ ನಾಗರಾಜುರವರ ಕಲ್ಪನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಹಗಲು ರಾತ್ರಿಯೆನ್ನದೆ ದುಡಿದರು. ಕೆರೆ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಆಯ್ಕೆ ಮಾಡುವ, ಕೆಲಸವನ್ನು ಮಾಡಿಸುವ ಜಾವಾಬ್ದಾರಿಯನ್ನು ವಹಿಸಿಕೊಳ್ಳುವ ನಿಟ್ಟಿನಲ್ಲಿ ಹದಿನಾರು ಮಂದಿಯನ್ನೊಳಗೊಂಡ ‘ಪರಿಸರ ಸ್ನೇಹಿ ಟ್ರಸ್ಟ್’ನ್ನು ಆರಂಭಿಸಲಾಯಿತು. ಪರ್ವತನಹಳ್ಳಿ ಬಳಿ ಹದಿನಾರು ಎಕರೆ ಸರಕಾರಿ ಭೂಮಿಯನ್ನು ಕೆರೆ ನಿರ್ಮಾಣಕ್ಕಾಗಿ ಗೊತ್ತುಪಡಿಸಿದರು. ಈಚಲು ಗಿಡದಿಂದ ತುಂಬಿದ್ದ ಹದಿನಾರು ಎಕರೆಯ ಕಳೆ ತೆಗೆದು ಕೆರೆ ನಿರ್ಮಿಸುವ ಕೆಲಸಕ್ಕೆ ಈ ಊರಿನವರ ಎಂಟು ಟ್ರ್ಯಾಕ್ಟರ್, ಒಂದು ಜೆಸಿಬಿಯನ್ನು ಬಳಸಲಾಯಿತು. ಅದನ್ನು ಮಾಲೀಕರು ಉಚಿತವಾಗಿ ನೀಡಿದ್ದಾರೆ. ಯಂತ್ರಗಳೊಂದಿಗೆ ಮಾನವ ಶ್ರಮವನ್ನು ಬಳಸಿ ೨೦೧೩ರ ಡಿಸೆಂಬರ್‌ನಲ್ಲಿ ಕೆರೆ ನಿರ್ಮಾಣದ ಕೆಲಸವನ್ನು ಕೈಗೆತ್ತಿಕೊಂಡರು. ಗ್ರಾಮ ಪಂಚಾಯತ್, ಸರಕಾರದ ಯಾವುದೇ ಅನುದಾನವನ್ನು ಬಯಸದೆ ನಿರ್ಮಿಸಲ್ಪಟ್ಟ ಈ ಕೆರೆ ನಿರ್ಮಾಣದಲ್ಲಿ ಊರಿನ ಪ್ರತಿ ಮನೆಯವರು ಜೊತೆಯಾದರು.

ಆರ್ಥಿಕ ಮೂಲ ಎಲ್ಲಿಂದ?  

ಈಗಾಗಲೇ ಈ ಕೆರೆ ನಿರ್ಮಾಣಕ್ಕೆ ಬರೋಬ್ಬರಿ ಐದು ಲಕ್ಷ ರೂಪಾಯಿ ಖರ್ಚಾಗಿದೆ. ಎರಡು ಲಕ್ಷ ರೂಪಾಯಿಯನ್ನು ನೀರಿನ ಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ನೀಡಿದ್ದಾರೆ. ಮೂರು ಲಕ್ಷ ರೂಪಾಯಿಯನ್ನು ಊರಿನವರಿಂದ, ಗಣ್ಯರಿಂದ ಸಂಗ್ರಹಿಸಲಾಗಿದೆ. ಪ್ರತಿ ಮನೆಯವರು ನಾಲ್ಕು ಸಾವಿರದಿಂದ ಐದು ಸಾವಿರ ರೂಪಾಯಿ ಹೀಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ಎರಡು ವರ್ಷಗಳಿಂದ ಕೆರೆ ನಿರ್ಮಾಣದ ಕೆಲಸ ನಡೆಯುತ್ತಿದ್ದು ಇದೀಗ ಒಂದು ಹಂತದ ಕೆಲಸಗಳು ಮುಗಿದು ಬಿಟ್ಟಿವೆ. ಈಗಾಗಲೇ ೪೫೦ ಆಳುಗಳ ಕೆಲಸ ನಡೆದಿವೆ. ೧೮೦೦ ಅಡಿ ಉದ್ದ ೧೦ ಅಡಿ ಎತ್ತರದ ಏರಿ ನಿರ್ಮಿಸಿದ್ದಾರೆ. ಸುಮಾರು ಹದಿನೈದು ಅಡಿಯಷ್ಟು ಆಳವಾದ ಕೆರೆಯಲ್ಲಿ ಮಳೆನೀರು ಸಂಗ್ರಹವಾಗುತ್ತಿದೆ. ಇನ್ನು ಈ ಕೆರೆಯನ್ನು ಬೇಕಾದಷ್ಟು ಆಳವಾಗಿ ತೋಡಬಹುದಾಗಿದೆ. ಇತರರು ಅನುದಾನ ನೀಡಿದಂತೆ ಪ್ರತಿ ವರ್ಷ ಕೆರೆಯನ್ನು ಇನ್ನಷ್ಟು ಆಳಗೊಳಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎನ್ನುವುದು ಕೆರೆಯ ಜಾವಾಬ್ದಾರಿಯನ್ನು ವಹಿಸಿಕೊಂಡಿರುವ ಪರಿಸರ ಸ್ನೇಹಿ ಟ್ರಸ್ಟ್‌ನ ಕಾರ್ಯದರ್ಶಿಯಾದ ಪಿ.ಬಿ.ನಂಜುಂಡಪ್ಪರವರ ಮಾತು.

ನೀರು ಸಂಗ್ರಹ ಹೀಗೆ 

5ಮಳೆಗಾಲದಲ್ಲಿ ಮಳೆನೀರಿನಿಂದ ಕೆರೆ ತುಂಬಿದರೆ ಕಡಿಮೆ ಮಳೆಯಾಗುವ ದಿನಗಳಲ್ಲೂ ಈ ಕೆರೆ ತುಂಬಬೇಕೆಂಬ ನಿಟ್ಟಿನಲ್ಲಿ ವೇದಾವತಿ ನದಿಯ ಅಣೆಕಟ್ಟಿನಿಂದ ಚಾನೆಲ್ ಮೂಲಕ ಯಗಟಿಗೆ ಸರಬರಾಜಾಗುವ ನೀರು ಇಲ್ಲಿಂದಲೇ ಹೋಗುತ್ತದೆ. ಅಲ್ಲಿ ವ್ಯರ್ಥವಾಗುವ ನೀರು ಕೆರೆಯಲ್ಲಿ ಶೇಖರಣೆಯಾಗುವಂತೆ ನೋಡಿಕೊಂಡಿದ್ದಾರೆ. ಚಾನೆಲ್‌ನಲ್ಲಿ ಜಾಸ್ತಿ ನೀರು ಬಂದಾಗ ಹೆಚ್ಚಿನ ನೀರು ಕೆರೆಯಲ್ಲಿ ಸಂಗ್ರಹವಾಗುತ್ತದೆ.

ಇವರ ಪ್ರಯತ್ನದ ಫಲವಾಗಿ ಕಳೆದೆರಡು ವರ್ಷಗಳಿಂದ ೬೦೦ ರಿಂದ ೭೦೦ ಅಡಿ ಆಳದಲ್ಲಿರುವ ಕೊಳವೆಬಾವಿಗಳಲ್ಲಿ ಸರ್ವಋತುಗಳಲ್ಲೂ ನೀರು ಇದೆ. ಇದೀಗ ೧೫೦ ರಿಂದ ೩೫೦ ಅಡಿ ತೋಡಿದರೆ ಕೊಳವೆಬಾವಿಯಲ್ಲಿ ನೀರು ಲಭಿಸುತ್ತದೆ. ಕೆರೆಯ ಮಣ್ಣಿಗೆ ಬಹುಬೇಡಿಕೆಯಿದ್ದು, ಇಲ್ಲಿನ ತೋಟಗಳಿಗೆ ಬಳಕೆಯಾಗುತ್ತಿದೆ. ಕೆರೆಯಿಂದ ಈ ಊರಿನವರೆಗೆ ರಸ್ತೆಯೊಂದನ್ನು ನಿರ್ಮಿಸಲಾಗಿದೆ. ಕೆರೆ ನಿರ್ಮಾಣದಿಂದ ಅಂತರ್ಜಲ ಪ್ರಮಾಣ ಹೆಚ್ಚುವುದಷ್ಟೇ ಅಲ್ಲದೆ ಈ ಊರಿನ ದನ, ಕರು ಮುಂತಾದ ಸಾಕುಪ್ರಾಣಿ, ಜಾನುವಾರುಗಳಿಗೆ ಕುಡಿಯುವ ನೀರು ಸುಲಭವಾಗಿ ದೊರೆಯುವಂತಾಗಿದೆ. ತೆಂಗು, ರಾಗಿ ಇಲ್ಲಿನ ಪ್ರಮುಖ ಬೆಳೆಯಾಗಿದ್ದು ಹೈನುಗಾರಿಕೆಯನ್ನು ನಂಬಿ ಬದುಕುವವರು ಇಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಕೆರೆಯಲ್ಲಿ ಮೀನುಸಾಕಣೆ ಮಾಡುವ ಯೋಜನೆ ಕೂಡಾ ಇಲ್ಲಿನವರಲ್ಲಿದೆ. ಓಟ್ಟಾರೆ ಈ ಊರಿನ ಮಂದಿಯ ಸಾಹಸವೊಂದು ಯಶಸ್ಸನ್ನು ಕಂಡಿದೆ. ತಮ್ಮ ಊರಿನ ನೀರಿನ ಸಮಸ್ಯೆಗೆ ತಾವೇ ಪರಿಹಾರವನ್ನು ಕಂಡುಕೊಂಡಂತಾಗಿದೆ. ಎಲ್ಲಾದ್ದಕ್ಕೂ ಸರಕಾರದ ಯೋಜನೆಗಳಿಗಾಗಿ ಕಾದು ಕುಳಿತುಕೊಳ್ಳುವ ಬದಲು ಊರಿನವರೆಲ್ಲಾ ಜೊತೆಯಾದರೆ ತಮ್ಮ ಊರಿನ ನೀರಿನ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದೆಂಬ ಮಾತಿಗೆ ಇವರ ಪ್ರಯತ್ನ ಒಂದು ಉತ್ತಮ ಉದಾಹರಣೆ.

ಚಿತ್ರ-ಲೇಖನ: ಚಂದ್ರಹಾಸ ಚಾರ್ಮಾಡಿ

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*