ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ವಂಶಪುರದ ಜೀವಜಲ (ನಾಟಕ)

ಬನ್ನಿ ಬನ್ನಿ ಮಕ್ಕಳೆ

ಚಪ್ಪಾಳೆ ತಟ್ಟುವಾ||||

ಖುಷಿಯಿಂದ ನಾವೆಲ್ಲ ಒಂದಾಗುವಾ,,,

ಬನ್ನಿ ಬನ್ನಿ ಮಕ್ಕಳೆ

ಅಗಸಕೆ ಹೋಗುವಾ ||||

ಮಳೆರಾಜನನ್ನು ನಾವು ಬೇಡಿಕೊಳ್ಳುವಾ,,,

ಒಣಗಿದಾ ಭುವಿಯನ್ನು ಅವಗೆ ತೋರುವಾ

ನೀರಿಲ್ಲದೇ ಬಳಲುವುದನು ತಿಳಿಸಿ ಹೇಳುವಾ,,,

ಮಳೆಯ ನೀರು ತರಿಸಿ ನಾವ ಕೆರೆಯ ತುಂಬುವಾ

ಕುಡಿವ ನೀರಿಗಾಗಿ ಮಳೆಯ ಸುರಿಸಿ ಎನ್ನುವಾ,,,

(ಅಂದು ಮುಖ್ಯ ಗುರುಗಳು ಸೇವಾದಳದ ದೊಡಮನಿ ಗುರುಗಳ ಉಪಸ್ಥಿತಿಯಲ್ಲಿ ಹಾಡನ್ನು ಹಾಡಿಸಿ ಈ ವರ್ಷದ ೧೦ ದಿನದ ಶಿಬಿರ ಸಲುವಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡತೊಡಗಿದರು)

ಅಷ್ಟರಲ್ಲಿ ಸದ್ದು-ಗದ್ದಲ. ಹುಡುಗರ ಪಿಸುಮಾತು ತಡೆಯಲು ಗುರುಗಳು ಸೀಟಿ ಹಾಕಿದರು ತಕ್ಷಣ ನಿಶಬ್ದವಾಯಿತು.

ಮುಖ್ಯಗುರುಗಳು: ಮಕ್ಕಳೇ ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಸೇವಾದಳದ ಶಿಬಿರ ಏರ್ಪಡಿಸಲಾಗಿದೆ. (ಮಕ್ಕಳು ಖುಷಿಯಿಂದ ಮತ್ತೆ ಗದ್ದಲ) ಸಮಾಧಾನ ಮಕ್ಕಳೇ

ಕಪಿಲ: ಸರ್ ಈ ಸಲಾ ಯಾವ ಊರಿಗೆ ಹೋಗೋಣ ಸಾರ್.

ಮುಖ್ಯಗುರುಗಳು: ಲೇ ! ಕಪಿಲ ಬಲು ಆತುರಪಾ ನಿನಗ ಸ್ವಲ್ಪ ತಡೀಪ್ಪಾ …….. ಮಕ್ಕಳೇ ! ಇಂದು ನಮ್ಮ ಪರಿಸರದಾಗ ದಿನದಿನಕ್ಕೆ ತಾಪಮಾನ ಏರಿಕೆ ಆಗಲಿಕತದ. ಆದ್ರಿಂದ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗಾಕತೈತಿ. ನದಿ ಹಳ್ಳ, ಕೊಳ್ಳ ,ಕೆರೆ ಬಾವಿ ಬತ್ತ್ತಿ ನೀರ ಇಲ್ದಾಂಗ ಆಗೈತಿ.. ಅದಕ್ಕ              ನಾವು ಜೀವಜಲ ಉಳಿಸಬೇಕು. ಅದರ ಸಲುವಾಗಿ ಜಾಗೃತಿ ಮೂಡಿಸೂದಕ್ಕ ಬಾವಿಗಳ ನಗರ ವೇಣು ಗ್ರಾಮದಲ್ಲಿ ಈ ಸಲ ಶಿಬಿರ ಹಮ್ಮಿಕೊಂಡೇವಿ.

ಮಕ್ಕಳು (ಖುಷಿಯಿಂದ): ಆಯ್ತರೀ ಸರ್ ಹಾಗೆಯೇ ಮಾಡುವಾ….ನಮ್ಮ ತಂದೆ ತಾಯಿನ್ನ ಒಪ್ಪಿಸಿ ನಾವ ಶಿಬಿರಕ್ಕೆ ಕರಕೊಂಡು ಬರತಿವಿ.

ದೈಹಿಕ ಶಿಕ್ಷಕರು: ಮಕ್ಕಳೆ ಶಿಬಿರಕ್ಕೆ ನಾವು ಮುಂದಿನ ತಿಂಗಳು ಹೋಗೂದ್ರಿಂದ ನಿಮಗೆ ಬೇಕಾದ ಅವಶ್ಯಕ ಸಾಮಗ್ರಿಗಳ ಪಟ್ಟಿ ಸೂಚನಾ ಫಲಕದಲ್ಲಿ ಬರದೈತಿ. ಶಿಬಿರದ ನಿಯಮಗಳನ್ನು ಕೂಡಾ ಅಲ್ಲಿ ನೀವು ನೋಡಬಹುದು.

ರಾಧಾ: ’ವಂಶಪುರ’ ದಲ್ಲಿ ಶಿಬಿರವಿರುವುದು ತಿಳಿದು ಬಹಳ ಖುಷಿಯಾಯ್ತು ಸರ್. ಅಲ್ಲಿ ರುಚಿ ರುಚಿಯಾದ ಕುಂದಾ ಸವಿಯಬಹುದು.

ಕಪಿಲ: ರಾಧಾಕ್ಕ ನಾವಲ್ಲಿ ಕುಂದಾ ತಿನ್ಯಾಕ ಹೊಂಟಿಲ್ಲ. ನಾವು ಬಾವಿ ಸ್ವಚ್ಚ ಮಾಡಾಕ ಹೊಂಟೀವಿ ತಿಳಿತಲ್ಲ,,,,

ರಾಧಾ: ಲೇ ಕಪಿಲ ಯಾವಾಗಲೂ ನೀ ನನ್ನ ಮಾತಿಗೆ ಅಡ್ಡನ ಬರತಿ ಅಲ್ಲಪಾ…

ಕಾವ್ಯಾ: ಹೋಗ್ಲಿ ಬಿಡು ರಾಧಾ ಮುಂದಿನ ತಿಂಗಳ ದಾರಿ ನೋಡೋದನ ನಮ್ಮ ಕೆಲಸ ಇನ್ನ!

ಶಿಲ್ಪಾ: ಕಾವ್ಯಾ.. ರಾಧಾ ನಾವು ನೀರಿನ ಬಗ್ಗೆ ಒಂದಿಷ್ಟು ಕಥೆ, ಕವನ. ನುಡಿಗಟ್ಟು ಸಂಗ್ರಹಿಸಿ ಜಾಥಾ ಕಾರ್ಯಕ್ರಮದಾಗ ಹಾಡು ಹಾಡೋಣ..

ಆಹಾ,,, ಹಾ,,, ಓಹೋ,,,,,

ಓ ಮಳೆರಾಯ ಬಾ ಮಳೆರಾಯ

ಒಣಗಿದ ಭುವಿಯ ತೋಯಿಸು ಬಾ,,

ದಾಹದೀ ತಣಿದ ಮಕ್ಕಳ ಬಾಯಿಗೆ

ಜೀವದ ಜಲವ ಸುರಿಸಲು ಬಾ,,

ಅಂದದ ಚಂದದ ಸುಂದರಾಂಗನೇ ನೀ ಬಾ

ಬತ್ತಿದ ಭುವಿಯ ದಾಹವ ತಣಿಸಲು

ಬೇಗನೆ ಬಾರೋ ಮಳೆರಾಯ

ಕೆರೆಯನು ತುಂಬಿಸು ಹರುಷವ ತರಿಸು

ಸಾಲಲಿ ಮುಗಿವೆವು ನಾವ ಕೈಯಾ,,,

(ವಂಶಪುರದ ಶಿಬಿರದ ಜಾಗ: ಸರಸ್ವತಿ ಪ್ರಾಥಮಿಕ ಶಾಲೆ ಆವರಣಕ್ಕೆ ಎಲ್ಲ ಶಿಬಿರಾರ್ಥಿಗಳ ಆಗಮನ. ಮಕ್ಕಳು ತಮ್ಮ ತಮ್ಮ ಸಾಮಗ್ರಿಗಳನ್ನು ಒಂದು ಕೊಠಡಿಯಲ್ಲಿ ಇಟ್ಟು ಶಾಲಾ ಮೈದಾನದಲ್ಲಿ ಜಮಾವಣೆಯಾದರು)

b9ಶಿಬಿರದ ಸಂಚಾಲಕರು: ಮಕ್ಕಳೇ,,.ಇದು ಬಾವಿಗಳ ನಗರ ’ವಂಶಪುರದಲ್ಲಿ ನೀವಿದ್ದಿರಿ.   ನೀವೀಗ ಶ್ರದ್ಧೆಯಿಂದ ನಿಮ್ಮ ನಿಮ್ಮ ಕೆಲಸ ಮಾಡಬೇಕು. ಹಾಗೆಯೇ ಇಲ್ಲಿರುವ ಬಾವಿಗಳ ಸ್ವಚ್ಛ ಮಾಡಿ ಮತ್ತೆ ಚಾಲ್ತಿಗೆ ತರುವ ಹೊಣೆ ನಿಮ್ಮ ಮೇಲೆ ಇದೆ. ಆದ್ದರಿಂದ ಶ್ರಮದಾನದ ಮೂಲಕ  ವೇಣುಗ್ರಾಮಕ್ಕೆ ಒಂದು ಹೊಸ ರೂಪ ಕೊಡುವಿರಿ ಎಂದು ನಮಗೆ ಭರವಸೆಯಿದೆ.

 

(ಶಿಬಿರದ ವಿದ್ಯಾರ್ಥಿಗಳನ್ನು ತಂಡಗಳನ್ನಾಗಿ ಕಾರ್ಯ ಹಂಚಿಕೆ ಮಾಡಿ ಬಾವಿಗಳತ್ತ ಕಳಿಸುವುದು)

(ವೇಣುಗ್ರಾಮದ ಸರಸ್ವತಿ ಕಾಲನಿಯ ಅರಳಿ ಮರದ ಹತ್ತಿರದ ದೊಡ್ಡ ಬಾವಿಯಿದ್ದ ಸ್ಥಳಕ್ಕೆ ಕಾವ್ಯಾಳ ತಂಡ ಬಂದು ಕೆಲಸಕ್ಕೆ ಆಣಿಯಾಗುವುದು )

 ರಾಧಾ: ಲೇ ಕಾವ್ಯಾ, ಅಲ್ಲಿ ನೋಡೆ ಬಾವಿಯಲ್ಲಿ ಗಿಜುಗನ ಗೂಡು ಎಷ್ಟು ಚೆನ್ನಾಗಿದೆ.!

 

ಕಾವ್ಯಾ: ಹೌದು ಅಷ್ಟು ಚೆನ್ಯಾಗಿದೆಯಂತೆಲೆ ಅದಕ್ಕೆ ’ ಅಭಿಯಂತರ ಪಕ್ಷಿ’ ಎನ್ನೋದು.

 

( ಇವರ ಸಪ್ಪಳಕ್ಕೆ ಗಿಜುಗ ಹೊರಗೆ ಬಂದು ಸಣ್ಣದಾಗಿ ಕೂಗಿತು)

ಗಿಜುಗ: ಅರೇ ಓ ಮಕ್ಕಳೇ ಇದೇನ ಮಾಡ್ತಾ ಇದ್ದಿರಾ … ಇಷ್ಟೆಲ್ಲಾ ಮಕ್ಕಳು ಇಲ್ಲಿಗೆ ಯಾಕೆ ಬಂದಿದೀರಾ?

 

ರಾಧೆ: ಐ ! ಗಿಜುಗಣ್ಣ ಇಂದು ನೀನಿರುವ ಬಾವಿಯ  ಸ್ವಚ್ಛ ಮಾಡಿ ಜನ  ಉಪಯೋಗಿಸಲಿಕ್ಕೆ ಬರುವಂತೆ ಮಾಡಲಿಕ್ಕೆ ಬಂದಿದ್ದೇವೆ

 

ಗಿಜುಗ: ಪರ‍್ವಾಗಿಲ್ಲ. ಈಗಲಾದ್ರೂ ಕಣ್ಣ ಬಿತ್ತಲ್ಲ ನಮ್ಮ ಬಾವಿಯ ಮೇಲೆ. ನನಗೆ ಮತ್ತು ನನ್ನ ಗೂಡಿಗೆ  ದಯವಿಟ್ಟು ಹಾನಿ ಮಾಡಬೇಡಿ……..

 

ರಾಧೆ: ಇಲ್ಲಪ್ಪ ನಿನಗೆ ನಾವು ತೊಂದರೆ ಕೊಡಲ್ಲಾ.

 

(ಇವರ ಕಿಲಬಿಲ ಸಪ್ಪಳಕ್ಕೆ ಕುಂಭನಿದ್ರೆಯಲ್ಲಿದ್ದ್ದ ಬಾವಿ ಎಚ್ಚರಗೊಳ್ಳುತ್ತದೆ)

ಬಾವಿಯಣ್ಣ : (ಆಕಳಿಸುತ್ತ) ,,, ಎಲಾ ಮಕ್ಕಳೇ ಏನ್ ವಿಶೇಷ ಎಲ್ಲಾ ಸೇರಿ ನನ್ನ ಮೇಲೆ ಬಿದ್ದ ಗಿಡಗಂಟಿ, ಕೆಸರು ತಗೆಯುತ್ತಿದ್ದೀರಿ . ನನ್ನ ಗುರುತು ಮರೆತ ನಾನೇ ಎಲ್ಲಿ ಸಾಯ್ತಿನೋ ಅಂತ ನನಗೆ ಬಹಳ ಭಯವಾಗಿತ್ತು. ಈಗ ನನ್ನ ಕಾಪಾಡುತ್ತಿದ್ದೀರಿ. ನಿಮಗೆ ತುಂಬ ಧನ್ಯವಾದ. (ಕಣ್ಣೀರು)

 ಕಾವ್ಯ: ಯಾಕೆ ಅಣ್ಣಾ ಕಣ್ಣೀರ‍್ಹಾಕ್ತಿ ಬಿಡು ನಾವು ನಿಂಗ ಮತ್ತೆ ಜೀವಕಳೆ ಬರುವ ಹಂಗೆ ಮಾಡತೇವ ಬಿಡು………

 

ಬಾವಿಯಣ್ಣ: ಇಲ್ಲಾ ಪುಟ್ಟಿ. ಕಠಿಣ ಪರಿಸ್ಥಿತಿಯಲ್ಲಿ ಹಿರಿಯರ ಪರಿಶ್ರಮದಿಂದ ಹುಟ್ಟಿದ ನನಗ..ಅದನ್ನೆಲ್ಲ ನೆನದರ ಕಣ್ಣೀರ ಬರ‍್ತಾವ ………

 

ರಾಧ: ಹೌದಾ ಬಾವಿಯಣ್ಣ. ನಿನ್ನ ಕಥೆ ನಮಗೂ ಒಂಚೂರು ಹೇಳಲಾ ಮತ್ತ, ನಿನ್ನ ಹುಟ್ಟು,    ಬೆಳವಣಿಗೆಯನ್ನು ನಮಗೂ ತಿಳಿಯುವ ಆಸೆ …….

ಬಾ: ಸರಿ ತಂಗಿ ನನ್ನ ಕಥೆ ಹೇಳ್ತೀನ ಕೇಳು., ತುಂಬಾ  ದಿನಗಳ ಹಿಂದೆ ಈ ವೇಣು ಗ್ರಾಮವನ್ನು ಜಕ್ಕದೇವ ಎಂಬ ಜೈನ ಅರಸ ಆಳ್ವಿಕೆ ಮಾಡುತ್ತಿದ್ದ. ಆಗ ಇದು ದಟ್ಟ ಅರಣ್ಯ ಪ್ರದೇಶವಾಗಿತ್ತು.

 

ಫ್ಲಾಶ್ ಬ್ಯಾಕ್ :

(ಪ್ರಯಾಗದಿಂದ ಜೈನ ಮುನಿಗಳು ಬಸದಿಗಳಲ್ಲಿ, ಛತ್ರಗಳಲ್ಲಿ ವಾಸ್ತವ್ಯ ಮಾಡುತ್ತಾ ಶ್ರವಣಬೆಳಗೊಳಕ್ಕೆ ಪ್ರವಾಸ ಮಾಡುತ್ತಿರುತ್ತಾರೆ. ಕುಂತಮಯ್ಯ ಪ್ರಾಂತ್ಯದ ಗಡಿ ಮೈಲು ದೂರ ಇರುವಾಗಲೇ ಗೂಢಚಾರರು ಬಂದು….)

ಗೂಢಚಾರ ೦೧: ದೊರೆಗಳೇ ಇಂದು ಸುಮಾರು ಜನ ಜೈನ ಮುನಿಗಳು ತಮ್ಮ ರಾಜ್ಯದ  ಗಡಿಯಿಂದ ೧೦ ಮೈಲು ದೂರದಿಂದ  ಬರುತ್ತಿದ್ದಾರೆ. ಬಹುಶ: ಅವರ ಮುಂದಿನ ಬಿಡಾರ ನಮ್ಮ ರಾಜ್ಯವೇ ಅಂತ ಕಾಣುತ್ತೇ, ಆದ್ದರಿಂದ ಅವರ ಆತಿಥ್ಯ ನಮಗೆ ಬಯಸದೇ ಬಂದ ಭಾಗ್ಯ…..

 

ಕುಂತಮಯ್ಯ: ಹೌದು ಸದ್ಯ ಚಾತುರ್ಮಾಸ ಇರುವುದು… ಅವರು ಈ ಸಂದರ್ಭದಲ್ಲಿ ನಮ್ಮ  ರಾಜ್ಯಕ್ಕೆ ಆಗಮಿಸಿರುವುದು ನಮಗೆ ಒದಗಿದ ಭಾಗ್ಯ. ನಡೆಯಿರಿ ಸಕಲ ಸೇವಾ ಸಾಮಗ್ರಿಗಳೊಂದಿಗೆ ಅವರನ್ನು ಸತ್ಕರಿಸೋಣ.

 

ಗುಣವತಿ: ದೊರೆಗಳೆ ನಿಮ್ಮ ಜೊತೆ ನಾನು ಬರುವೆ. ನಿಮ್ಮ ಭವಿಷ್ದ ಕುಡಿ ನಮ್ಮ  ಹೊಟ್ಟೆಯಲ್ಲಿರುವದರಿಂದ ನಮಗೆ ಮುನಿಗಳ ಆಶಿರ್ವಾದ ದೊರಕುವುದು.

 

ಜೈನ ಮುನಿ ೦೧: ಮರಾಠವಾಡಾವನ್ನು ದಾಟಿ ನಾವು ಈಗ ಜಕ್ಕದೇವನ ರಾಜ್ಯದಲ್ಲಿ ಕಾಲಿಟ್ಟಿದ್ದೇವೆ ಬಾಯಾರಿಕೆ ಬೇರೆಯಾಗುತ್ತದೆ. ಸಂಜೆಯಾಗುತ್ತಿದೆ ಎಲ್ಲಿಯೂ ದಾರಿಯಲ್ಲಿ ಬಾವಿಗಳ ನೀರಿನ ಮೂಲಗಳು ಸಿಗಲೇ ಇಲ್ಲಾ…….

 

ಜೈನ ಮುನಿ ೦೨: ಹೌದು ಸಂಜೆಯಾದರೆ ಬಾವಿ ನೀರು ಕ್ರೀಮಿ ಕೀಟ ಸೇರಿರುವುದು ತಿಳಿಯದು ಈಗಲೇ ಬಾವಿಯ ಹುಡುಕಿ ನೀರು ತರಬೇಕು……..

 

ಜೈನ ಮುನಿ ೦೩: ಈ ರಾಜ್ಯದಲ್ಲಿ ಸಕಲವೂ ಸುಬಿಕ್ಷವಾಗಿದೆ. ಆದರೆ ನೀರು ಮಾತ್ರ  ದೊರೆಯದೆ ಹೋಯಿತಲ್ಲ?

 

ಜೈನ ಮುನಿ ೦೪: ದೊರೆಯಿತು ದೂರದ ಕೊಳದ ಬಳಿ ನೀರು ದೊರೆಯಿತು. ಇನ್ನು  ವಿಶ್ರಾಂತಿ ತೆಗೆದುಕೊಳ್ಳಲು ಅಡ್ಡಿಯಿಲ್ಲ.

 

(ಅಷ್ಟರಲ್ಲಿ ದಟ್ಟಾರಣ್ಯದಲ್ಲಿ ಕುದುರೆಗಳ ಸಪ್ಪಳ)

 ಜೈನ ಮುನಿ ೦೧: ಏನಿದು …ದಟ್ಟಾರಣ್ಯದಲ್ಲಿ ಕುದುರೆ ಸಪ್ಪಳ ಬಹುಶ: ಯಾರಾದರೂ ರಾಜರು ದಾಟುತ್ತಿರಬೇಕು …..

(ಕುದುರೆಗಳ ಸಮೇತ ವಾಸ್ತವ್ಯದ ಸಮೀಪಕ್ಕೆ ದೊರೆ ಜಕ್ಕದೇವ ಬಂದಿಳಿದ )

ಕುಂತಮಯ್ಯ: ಕ್ಷಮಿಸಬೇಕು ಮುನಿಗಳೇ..  ನಮ್ಮ ಆಗಮನದಿಂದ ತಮ್ಮ ವಿಶ್ರಾಂತಿಗೆ ಧಕ್ಕೆಯಾಗಿರಬಹುದು….. ನಾನು ವೇಣುಗ್ರಾಮದ ಅರಸ ಜಕ್ಕದೇವ. ತಮ್ಮ ಆಗಮನದ ಸುದ್ದಿ ತಿಳಿದು ತಮಗೆ ಆತಿಥ್ಯ ನೀಡಲು ಬಂದಿರುವೆ.

 (ಚಪ್ಪಾಳೆ ಹೊಡೆದು ಸೈನಿಕರ ಕರೆದು)

 ಕುಂತಮಯ್ಯ: ಮುನಿಗಳ ಈ ಹಣ್ಣು ಹಂಪಲಗಳನ್ನು ಸ್ವಿಕರಿಸಬೇಕು. ಸಂಜೆಯಾಗುತ್ತಿದೆ. ಈ ಫಲಹಾರ ಸೇವಿಸಿ……

 

ಜೈನಮುನಿಗಳು: ತಮ್ಮ ಈ ಕಾರ್ಯ ಶ್ಲಾಘನೀಯ. ಫಲಹಾರ ನೀಡಿ ನಮ್ಮನು ಸಂತೈಸಿದ್ದಕ್ಕೆ ತಮಗೆ ಧನ್ಯವಾದಗಳು….

 

(ಫಲಹಾರ ಸೇವಿಸಿದರು ಅಷ್ತರಲ್ಲಿ ಕತ್ತಲಾಯಿತು ….. ರಾಜರು  ತಂದಿದ್ದ ಕಂದೀಲು ಹಚ್ಚಿದರು. ಕಂದೀಲಿನ ಬೆಳಕಿನಲ್ಲಿ ಮುಖಗಳು ಅಸ್ಪಷ್ಟವಾಗಿ ಕಾಣತೊಡಗಿದವು.)

ಕುಂತಮಯ್ಯ: ಮುನಿಗಳೇ ನೀವಿನ್ನು ವಿಶ್ರಾಂತಿ ತೆಗೆದುಕೊಳ್ಳಿ. ನಾವು ಹೊರಡಲು ಸಜ್ಜಾಗುತ್ತೇವೆ.  ನಮಗೆ ಅಪ್ಪಣೆ ನೀಡಿರಿ.

 

ಜೈನ ಮುನಿ: ಆಗಲಿ … ನಿಮ್ಮಿಂದ ಪ್ರಜೆಗಳಿಗೆ ಹಾಗೂ ರಾಜ್ಯಕ್ಕೆ ಒಳ್ಳೆಯದಾಗಲಿ. ಹಾಗೆಯೇ ನಿಮ್ಮ ರಾಜ್ಯದಲ್ಲಿ ಬಾವಿಗಳ ಕೊರತೆಯಿರುವ ಹಾಗಿದೆ. ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.

ಕುಂತಮಯ್ಯ: ಆಗಲಿ ನಿಮ್ಮ ಹೇಳಿಕೆಯನ್ನು ಸ್ವೀಕರಿಸುವೆ. ಪ್ರಜೆಗಳ ಸೌಕರ‍್ಯಕ್ಕಾಗಿ ನಾನು ಕೆಲಸ  ಮಾಡಲು ಸದಾ ಸಿದ್ದನಾಗಿರುವೆ ……. ನಾನಿನ್ನು ಹೋಗಿ ಬರುವೆ……..

 

(ಕುಂತಮಯ್ಯ ಮತ್ತು ಆತನ ಸೈನಿಕರು ಕುದುರೆ ಏರಿ ಕಂದೀಲು ಹಚ್ಚಿ ಕಾಡಿನಲ್ಲಿ ಹೊರಡಲು ಸಜ್ಜಾಗುವರುರಭಸದಿಂದ ಹೋಗುವ ವೇಳೆ ಒಣಮರದ ಎಲೆ ತಪ್ಪಲಿಗೆ ಬೆಂಕಿ ತಗುಲುವುದು. ಆದನ್ನು ಅರಿಯದೆ ಮುಂದೆ ಸಾಗಿ ರಾಜ ಹಾಗೂ ಸೈನಿಕರು ಅರಮನೆ ತಲುಪುವರು. ಇತ್ತ ದಟ್ಟಾರಣ್ಯಕ್ಕೆ ತಗುಲಿದ ಬೆಂಕಿ ಎಲ್ಲಡೆ ಪಸರಿಸಿ ಬೆಂಕಿ ಹೆಚ್ಚಿತ್ತು. ಮುನಿಗಳ ವಿಶ್ರಾಂತಿಯ ಸ್ಥಳಕ್ಕೂ ತಗುಲಿ ಬಂದಿದ್ದ ಅಷ್ಟು ಮುನಿಗಳು ಬೆಂಕಿಗೆ ಸಿಲುಕಿ ಹತರಾಗುವರು.)

 

ಅಯ್ಯೋ ವಿಧಿಯೇ ….ಎವೋ ವಿಧಿಯೇ

ಏನಿದು ನಿನ್ನ ಅವಕೃಪೆ

ನಾಡಿಗೆ ನ್ಯಾಯ ಹೇಳೋ ದೊರೆಯ

ನಾಡಲಿ ಇಂದು ಸ್ಮಶಾನಕಳೆ

ನಿನ್ನಯ ಕೆನ್ನಾಲಿಗೆಗೆ

ನೊಂದು ಬೆಂದರು ಸಂತರು…….

 

ಗೂಢಾಚಾರ: (ಓಡೋಡಿ ರಾಜ್ಯ ಸಭೆಗೆ ಬಂದು) ದೊರೆಗಳು ಕ್ಷಮಿಸಬೇಕು ……ನಿನ್ನೆ ನಿಮ್ಮ ಆತಿಥ್ಯ ಸ್ವೀಕರಿಸಿದ ಜೈನ ಮುನಿಗಳಿದ್ದ ಕಾಡಿಗೆ ನಮ್ಮ ಸೈನಿಕರ ಕಂದೀಲು ತಗಲಿ ಎಲ್ಲರೂ ಸುಟ್ಟು ಭಸ್ಮವಾಗಿದ್ದಾರೆ. ಈ ಘೋರ ದುರಂತದ ಸುದ್ದಿ ನಾಡಿನೆಲ್ಲಡೆ ಹರಡಿದೆ ಪ್ರಭುಗಳೇ.

 

ಕುಂತಮಯ್ಯ & ಗುಣವತಿ: (ವಿಚಲಿತನಾಗಿ ತುಂಬಾ ನೊಂದುಕೊಳ್ಳುತ್ತಲೇ)  ಅಯ್ಯೋ ವಿಧಿಯೇ …… ಏನೂ ತಪ್ಪು ಮಾಡದ ಜೈನ ಮುನಿಗಳು ಹತರಾದರಲ್ಲ? ಇದಿರಿಂದ ನಮ್ಮ ರಾಜ್ಯದ  ದುರಂತವೇ ಸರಿ, ಛೇ ! ಕ್ಷಮಿಸಿ ಮುನಿಗಳೇ,,,ಕ್ಷಮಿಸಿ

 

ಗೂಢಚಾರ:  ಕಾಡಿನ ಜನತೆ ಸಾಕಷ್ಟು ರೀತಿ ಬೆಂಕಿ ನಂದಿಸಲು ಪ್ರಯತ್ನಿಸಿದರಂತೆ ಆದರೆ ಬಾವಿಗಳ ಅಭಾವದಿಂದ ಎಲ್ಲರೂ ಜಿನೈಕ್ಯರಾದರಂತೆ ಪ್ರಭುಗಳೆ!

ಮಂತ್ರಿ: ಕ್ಷಮಿಸಿ ಮಹಾರಾಜ ಇಂತಹ ದುರ್ಘಟನೆ ನಡೆಯಬಾರದಿತ್ತು. ನಡೆದು ಹೋಯಿತು. ಮುಂದೆ ಇಂತಹ ಘಟನೆ ಆಗದಂತೆ ಜಾಗೃತಿ ವಹಿಸುವುದು ಅವಶ್ಯ.

 

ಕುಂತಮಯ್ಯ: ನಮ್ಮ ಆಳ್ವಿಕೆಯಲ್ಲಿ ನಡೆದ ಘೋರ ದುರಂತ ಇದು. ಆದ್ದರಿಂದ ಆಸ್ಥಾನದ ಪಂಡಿತರು, ಮಂತ್ರಿಗಳು ಇದಕ್ಕೆ ಶಾಶ್ವತ ಪರಿಹಾರವನ್ನು ಸೂಚಿಸಿ…..

 

(ಮಂತ್ರಿ ಪಂಡಿತರ ಚರ್ಚೆ ನಂತರ)

ಮಂತ್ರಿ: ಮಹಾರಾಜರೇ, ನಮ್ಮೆಲ್ಲರ ಒಮ್ಮತದ ಚರ್ಚೆಯಿಂದ ಮೂಡಿಬಂದ ವಿಷಯವೇನಂದರೆ ರಾಜ್ಯದಲ್ಲಿ ಬಾವಿಗಳ ಕೊರತೆ ನಿವಾರಣೆಗೆ ಬಾವಿ ಕೆರೆ ಹಾಗೂ ಬಸದಿಗಳ ಕಟ್ಟುವುದೊಂದೇ ಪರಿಹಾರ……….

 

ಕುಂತಮಯ್ಯ: ಅಹುದು ಮಂತ್ರಿಗಳೇ ! ನಿಮ್ಮೆಲ್ಲರ ಆಶಯದಂತೆ ವಂಶಪುರದಲ್ಲಿ ಈಗಲೇ ೧೦೮ ಬಾವಿ ಹಾಗೂ ಬಸದಿಗಳ ನಿರ್ಮಾಣಕ್ಕೆ ನಾನು ಸಿದ್ಧನಾಗಿದ್ದೇನೆ. ಅಲ್ಲದೇ ಇದಕ್ಕೆ ಬೇಕಾಗುವ ಸಕಲ ಸೌಲಭ್ಯ ಒದಗಿಸಿ. ಗಲ್ಲಿ-ಗಲ್ಲಿ , ಮನೆ-ಮನೆಗಳಲ್ಲಿ ಬಾವಿಗಳು ನಿರ್ಮಾಣವಾಗಲಿ …. ಇದು ನನ್ನ ಕಟ್ಟಾಜ್ಙೆ,,,,,,

 

ಬನ್ನಿ - ಬನ್ನಿ ಗೆಳೆಯರೇ

ಕೈ ಕೈ ಕೂಡಿಸಿ ಒಮ್ಮತವ ತೋರಿಸಿ

ಒಂದಾಗಿ ನಡೆಯುವಾ

ಒಂದಾಗಿ ನಾವು ಬಾವಿಯನ್ನು ಕಟ್ಟುವಾ

ಅಳಿವಿನಂಚಿನಲ್ಲಿ ಇರುವ ಬಾವಿಯನ್ನು ಶುಚಿಗೊಳಿಸುವಾ

ಜೀವಜಲಕ್ಕಾಗಿ ಹೊಸದು ಬಾವಿಯನ್ನು ತೋಡುವಾ

ಬಾವಿಯನ್ನು ಕಟ್ಟಿ ನಾವು ನೀರನ್ನು ತರಿಸುವಾ……

 

(ರಾಣಿ ಗುಣವತಿ ಗರ್ಭವತಿಯಾದಳು. ಕೆಲದಿನಗಲಲ್ಲಿ ಆಕೆಗೆ ಗರ್ಭಪಾತವಾಗುವು ಇದರಿಂದ ಶಾಪದ ಭೀತಿಯೂ ಹೆಚ್ಚಾಗುವುದು.ನಂತರ ಕುಂತಮಯ್ಯನಿಗೆ ಮಕ್ಕಳಾಗದ ಕಾರಣ ತಮ್ಮ ಸಾಂತನ ಹೆಂಡತಿ ಪದ್ಮಾವತಿ ಪುತ್ರ ಸಾಂತನನ್ನು ಪಟ್ಟಕಟ್ಟುತ್ತಾರೆ. ಸುದರ್ಶನ ನದಿಯಲ್ಲಿ ಜಲಕ್ರೀಡೆಯಾಡುವಾಗ ಆತನೂ ಸಿಡಿಲೂ ಬಡಿದು ಸಾಯುತ್ತಾನೆ ಶಾಪ ಪರಿಹಾರಕ್ಕಾಗಿ ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿ ವಂಶಪುರ ಎಂಬ ಗ್ರಾಮವನ್ನು ಕಟ್ಟಿ ಇದೆ ವಂಶದ ಅನಂತವೀರ‍್ಯ ರಾಜ್ಯಭಾರ ಮಾಡತೊಡಗಿದ.)

 

ಮಕ್ಕಳೇ ! ಹೀಗೆ ಮುಂದೆ ಎಲ್ಲರ ಪರಿಶ್ರಮ ಫಲವಾಗಿ ನಮ್ಮಂತಹ ನೂರೆಂಟು ಬಸದಿ ಹಾಗೂ ಬಾವಿಗಳು ಇಲ್ಲಿ ನಿರ್ಮಾಣವಾದವು. ಬಾವಿಯಣ್ಣ ಕಥೆ ಹೇಳಿ ಮುಗಿಸಿದ.

 

ಅಷ್ಟರಲ್ಲಿ ಸಂಯೋಜನಾಧಿಕಾರಿ ಸಿಟಿ ಹೊಡೆದು ಮಕ್ಕಳನ್ನು ಕರೆದರು.

 

(ಮಕ್ಕಳು ದು:ಖತಪ್ತರಾಗಿ ಕಣ್ಣೀರೊರೆಸಿಕೊಳ್ಳುತ್ತ ಗುರುಗಳ ಸಮ್ಮುಖದಲ್ಲಿ ಕೈ ಮುಂದೆ ಮಾಡಿ ನಿಂತುಕೊಂಡು)

 

ಗುರುಗಳೇ ! ಇಂದು ಈ ಬಾವಿಯಣ್ಣ ನಮ್ಮೆಲ್ಲರ ಕಣ್ತೆರೆಸಿದ ನೀರಿನ ಹನಿ ಹನಿಯೂ ಎಷ್ಟು ಅಮೂಲ್ಯ ಎಂಬುದರ ಕುರಿತು ನಮಗೆ ತಿಳಿ ಹೇಳಿದ ಆತನ ಕಥೆ ಕೇಳಿ ನಮ್ಮ ಮನ ಕಲುಕಿತು. ಈಗಲೇ ನಮ್ಮ ಸಮಾಜಕ್ಕೆ ಒಂದು ದೀರ್ಘ ಸಂದೇಶ ಕೊಡಲು ನಾವುಗಳು ಬಯಸಿದ್ದೇವೆ.

 

ಗುರುಗಳು: ಹೌದಾ ಅದೇನು ಸಂದೇಶ ಮಕ್ಕಳೇ ?

 

ಮಕ್ಕಳು: ಊರಿಲ್ಲಿರುವ ಪ್ರಮುಖ ಬಾವಿಗಳನ್ನು ಸ್ವಚ್ಛ ಮಾಡಿಸಿ ಕೆರೆ, ಹಳ್ಳ, ಕೊಳ್ಳಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಮನೆ ಮನೆಗೆ ಹೋಗಿ ಜನರ ಮನ ಪರಿವರ್ತನೆ ಮಾಡೋಣ,,,,  ಏನಂತೀರಿ ?

 

ಸರಿ ಮಕ್ಕಳೇ ! ನಮಗೆ ತುಂಬ ಖುಷಿಯಾಯಿತು, ಹಾಗೇಯೇ ಮಾಡೋಣ ಆವಾಗಲೇ ನಾವು ಈ ಶಿಬಿರ ಏರ್ಪಡಿಸಿರುವುದಕ್ಕೆ ಸಾರ್ಥಕವಾಗುತ್ತದೆ. ನಡೆಯಿರಿ ಈಗಲೇ ನಮ್ಮ ಜನಗಳಿಗೆ ನೀರಿನ ಮಹತ್ವ ತಿಳಿಸೋಣ,,,

 

( ಮಕ್ಕಳು ಹಾಡುತ್ತಾ ಸಾಗುವುದು)

 

ಏಳಿರಿ ಎದ್ದೇಳಿರಿ,,, ಈಗಲೇ ಎದ್ದೇಳಿರಿ,,,

ನಿದ್ದೆಯಿಂದ ಏಳಿರಿ ಆಲಸಿಗಳು ಆಗದಿರಿ

ಜೀವ ಜಲವ ಉಳಿಸಿರಿ ಜೀವಜಲವ ಬಳಸಿರಿ

ಬಾವಿ ಕೆರೆ ಹಳ್ಳಗಳ ಈಗಲೇ ಸ್ವಚ್ಛಗೊಳಿಸಿರಿ

ಮರಗಿಡಗಳ ಪೋಷಿಸಿರಿ ಪೃಕೃತಿಯ ಉಳಿಸಿರಿ

ಶುದ್ದ ನೀರು ಕುಡಿಯಿರಿ ನದಿಯ ಸ್ವಚ್ಛ ಇರಿಸಿರಿ

ಜೀವಜಲ,,,, ಇದು ಜೀವ ಜಲ,,,,

 ರಚನೆ : ವಿನೋದ ರಾ ಪಾಟೀಲ, ಚಿಕ್ಕಬಾಗೇವಾಡಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*