ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ಕಬಳಿಕೆ; ಹಳ್ಳ-ಕೊಳ್ಳ ಒತ್ತುವರಿ ನೀರ್ಗಳ್ಳರ ಸುತ್ತಮುತ್ತ ಇನ್ನು ಉಪಗ್ರಹ ಕಣ್ಗಾವಲು!

ಧಾರವಾಡ: ನಗರಗಳನ್ನು ಮಿತಿ ಆಚೆ ವಿಸ್ತರಿಸಬಯಸುವವರಿಗೆ ತರಿ ಭೂಮಿಯನ್ನು ಒಡೆದು, ನೀರನ್ನು ಬಸಿದು, ಕೆರೆಯ ಅಂಗಳಗಳನ್ನು ನಿವೇಶನಗಳನ್ನಾಗಿಸುವ ಕನಸಿದೆ. ಆದರೆ ಕ್ಷಮಿಸಿ, ಇನ್ನು ಈ ಹವಣಿಕೆ ನನಸಾಗುವುದಿಲ್ಲ!

ಉದ್ದಿಮೆದಾರರಿಗೆ ಕೆರೆ-ಕುಂಟೆ, ಕಾಲುವೆ-ಹರಿ-ತೊರೆಗಳನ್ನು ಕಸ, ತ್ಯಾಜ್ಯ, ಹೊಲಸಿನಿಂದ ತುಂಬಿ ಧುಮ್ಮಸ್ ಬಡಿದು ಕಾರ್ಖಾನೆಗಳನ್ನು ಎಬ್ಬಿಸುವ ಅದಮ್ಯ ಬಯಕೆ ಇದೆ. ಇನ್ನು ಈಡೇರುವುದಿಲ್ಲ!

ಕಾರ್ಖಾನೆಗಳು ತಮ್ಮಿಂದ ಹೊರಬಂದ ವಿಷಯುಕ್ತ ರಾಸಾಯನಿಕಗಳನ್ನು ಸದಿಲ್ಲದೇ ಕೆರೆಗಳಿಗೆ ಹರಿಸಿ ಕೈತೊಳೆದುಕೊಳ್ಳುವ ಹೊಂಚಿಗೆ ಪೂರ್ಣ ವಿರಾಮ!

algal_bloomಕೆರೆಯ ಸುತ್ತಲಿನ ದೊಡ್ಡಕುಳಗಳಿಗೆ, ಸರ್ಕಾರಿ ಭೂಮಿ ಕಬಳಿಸುವ ಪುರಪಿತೃಗಳಿಗೆ, ವಿಶೇಷವಾಗಿ ಕಾರ್ಪೋರೇಟರ್‌ಗಳಿಗೆ ಕಾಂಪ್ಲೆಕ್ಸ್ ಎಬ್ಬಿಸುವ ಕನಸು ಇನ್ನು ಹಗಲುಗನಸು!

ಕೆರೆಯಂಗಳದ ಫಲವತ್ತಾದ ಮಣ್ಣನ್ನು ಮೇಲಕ್ಕೆತ್ತಿ ಇಟ್ಟಂಗಿ ರೂಪಿಸುವ ಭಟ್ಟಿ ಯೋಚನೆ! ಕೆರೆಯಂಚಿನಲ್ಲಿರುವ ಶ್ರೀಮಂತರಿಗೆ ಕೆರೆಯನ್ನು ಒತ್ತುವರಿ ಮಾಡಿ ಜಮೀನನ್ನು ವಿಸ್ತರಿಸುವ ಆಸೆ.. ಯಾವೂದಕ್ಕೂ ಇನ್ನು ಇಂಬು ಸಿಗದು!

ಅಬ್ಬಾ, ನಮ್ಮ ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಕೆರೆ-ಕುಂಟೆ, ಕಟ್ಟಗಳ ಬಗ್ಗೆ ಅದೆಷ್ಟು ಕಾಳಜಿ ಬಂದುಬಿಟ್ಟಿತು.. ಎಂದು ನೀವು ಯೋಚಿಸುತ್ತಿರಬಹುದು. ಇನ್ನು ಮುಂದೆ ನಮ್ಮ ಕೆರೆ ಅಂಗಳಗಳನ್ನು ಕಬಳಿಸುವುದು ನಿನ್ನೆ-ಮೊನ್ನೆಯ ವರೆಗೆ ಇದ್ದಷ್ಟು ಸುಲಭವಲ್ಲ!.

ರಾತ್ರೋರಾತ್ರಿ ಕೆರೆಗಳ ಆವರಣದಲ್ಲಿ ನಮೂನಿ ತ್ಯಾಜ್ಯ ವಿಲೇವಾರಿ, ಬೇಕಾಬಿಟ್ಟಿ ಕಸದ ರಾಶಿ ತಂದು ಸುರಿಯಲು ಅವಕಾಶವಿಲ್ಲ. ಏಕೆಂದರೆ, ಬಾಹ್ಯಾಕಾಶದಿಂದ ಕಣ್ಣೆವೆಇಕ್ಕದೇ ಗಮನಿಸುತ್ತಿರುವ ಉಪಗ್ರಹಗಳು ತಕ್ಷಣವೇ ಇಂತಹ ಬೆಳವಣಿಗೆಗಳನ್ನು ದಾಖಲಿಸಿ, ಸಂಬಂಧಪಟ್ಟವರಿಗೆ ತತ್ಕಾಲ ಮಾಹಿತಿ ರವಾನಿಸಿ, ಎಚ್ಚರಿಸಲಿವೆ!

ಕೇವಲ ಕೆರೆ ಕಬಳಿಕೆಯ ಮೇಲೆ ಮಾತ್ರ ಉಪಗ್ರಹ ಕಣ್ಗಾವಲು ಅಂತ ತಿಳೀಬೇಡಿ, ನದಿಗಳು, ನಮ್ಮ ಅಣೆಕಟ್ಟೆ, ಜಲಾಶಯಗಳ ನೀರಿನ ಮಟ್ಟ, ಒಳ ಮತ್ತು ಹೊರ ಹರಿವಿನ ಮೇಲೆ ನಿಗಾ ಇಡುವ ಮತ್ತು ಮಾಹಿತಿ ಕೊಡುವ ಈ ವಿನೂತನ ಉಪಗ್ರಹ ಆಧಾರಿತ ಮಾಹಿತಿ-ಚಿತ್ರ ವ್ಯವಸ್ಥೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿದೆ.

ನಮಗೆಲ್ಲ ಗೊತ್ತಿದೆ. ಏಷ್ಯಾ ಖಂಡದಲ್ಲಿ ಪ್ರತಿ ನಿಮಿಷಕ್ಕೆ ಒಂದು ಹೆಕ್ಟೇರ್ ನಷ್ಟು ‘ತರಿಭೂಮಿ’ ಕಣ್ಮರೆಯಾಗುತ್ತಿದೆ; ಕರ್ನಾಟಕದಲ್ಲಿ ವರ್ಷವೊಂದಕ್ಕೆ ೩೫ ಕೆರೆಗಳು ಕಣ್ಮುಚ್ಚುತ್ತಿವೆ. ಧಾರವಾಡ ಜಿಲ್ಲೆಯ ಕೆರೆಗಳಲ್ಲಿ ಶೇ. ೩೧ರಲ್ಲಿ ಅಪಾರ ಹೂಳು. ಶೇ. ೧೩ ರಷ್ಟು ಕೆರೆಗಳಲ್ಲಿ ಕೈಗಾರಿಕೆಗಳ ಕಲ್ಮಶ. ೪೭ ರಲ್ಲಿ ಇಟ್ಟಿಗೆಯ ಗೂಡುಗಳು; ೩೯ರಲ್ಲಿ ಕೃಷಿ ಭೂಮಿಯ ಒತ್ತುವರಿ, ೩೬ರಲ್ಲಿ ಪಕ್ಷಿಗಳ ನಿರಂತರ ಬೇಟೆ. ನೂರಾರು ಕೆರೆ-ಕುಂಟೆಗಳಲ್ಲಿ ವೈವಿಧ್ಯಮಯ ಜೀವರಾಶಿಯ ಬದಲಿಗೆ ದುರ್ವಾಸನೆ ಬೀರುವ, ಕೊಳೆತ ವಸ್ತುಗಳನ್ನು ಒಳಗೊಂಡ, ಸುತ್ತಮುತ್ತಲಿನ ಜೀವಿಗಳಿಗೆ ಮಾರಕವಾದ ನೊರೆತುಂಬಿದ ಹೊಲಸು! ನಮ್ಮ ತರಿಭೂಮಿಯ ಹದಗೆಡುತ್ತಿರುವ ಪರಿಸ್ಥಿತಿಯನ್ನು ಸ್ಪಷ್ಠವಾಗಿ ನೀರ್ಕೋಳಿಗಳು ತೋರಿಸುತ್ತಿವೆ.

ನಮ್ಮ ರಾಜ್ಯವೂ ಸೇರಿದಂತೆ ದೇಶದ ಎಲ್ಲ ಸಣ್ಣ ಮತ್ತು ದೊಡ್ಡ ಕೆರೆಗಳು, ತೊರೆಗಳು, ನದಿ ಮತ್ತು ಝರಿಗಳು, ಜಲಾಶಯಗಳ ಮಾಹಿತಿ, ನೀರಿನ ಲಭ್ಯತೆ, ಒಳ ಹರಿವು ಮತ್ತು ಹೊರ ಹರಿವು, ಸಂಗ್ರಹದಲ್ಲಿನ ಏರಿಳಿಕೆಯ ಮಾಹಿತಿಯನ್ನು ಪ್ರತಿ ೧೫ ದಿನಗಳಿಗೊಮ್ಮೆ ಪಡೆಯಬಹುದು. ಈ ಮಾಹಿತಿ ಆಧರಿಸಿ ಸ್ಥಳೀಯ ಸರ್ಕಾರಗಳೂ ಸೇರಿದಂತೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಕಾಲಿಕ ಕ್ರಮ ಮತ್ತು ಕಾಲಮಿತಿಯ ಯೋಜನೆಗಳನ್ನು ಕರಾರುವಾಕ್ ರೂಪಿಸಲು ಸಾಧ್ಯ ಎನ್ನುತ್ತಾರೆ, ಈ ಯೋಜನೆಯ ರೂವಾರಿ ಇಸ್ರೊ ವಿಜ್ಞಾನಿ ಡಾ. ದೇವಿಪ್ರಸಾದ್ ಕಾರ್ಣಿಕ್.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೊ, ಒದಗಿಸುವ ದತ್ತಾಂಶ, ಮಾಹಿತಿ ಮತ್ತು ಚಿತ್ರಗಳಲ್ಲಿ ಕೆರೆ, ನದಿ, ಜಲಾಶಯಗಳ ವಿಸ್ತೀರ್ಣ, ತರಿ ಭೂಮಿ, ನೀರು ವ್ಯಾಪಿಸಿದ ವಿಸ್ತೀರ್ಣ ಕುರಿತ ಮಾಹಿತಿ ತುಂಬ ಕರಾರುವಾಕ್. ವಿಶೇಷವಾಗಿ ಬರಗಾಲದ ಸಂದರ್ಭದಲ್ಲಿ ನೀರಿನ ಲಭ್ಯತೆಯನ್ನು ನಿಖರವಾಗಿ ಅಂದಾಜು ಮಾಡಬಹುದು.

ನೀರಿನ ಪಾತಳಿ ಮತ್ತು ತರಿ ಭೂಮಿಗಳ ಮಹತ್ವದ ಬಗ್ಗೆ ನಮಗಿನ್ನೂ ಸರಿಯಾಗಿ ತಿಳಿದಿಲ್ಲ ಎಂಬುದು ವಿಷಾದನೀಯ. ತರಿಭೂಮಿ, ನೀರಾವರಿಯಿಂದ ಬೆಳೆ ತೆಗೆಯುವ ಜಮೀನಿಗೆ ಮಾತ್ರ ಸೀಮಿತವಾಗಿಲ್ಲ. ನೀರು-ನೆಲ ಸಂಧಿಸುವ ಎಲ್ಲ ಜಾಗಗಳನ್ನೂ ಈ ಗುಂಪಿಗೆ ಸೇರಿಸಬಹುದು. ಈ ದೃಷ್ಟಿಯಿಂದ ಕೆರೆ, ಸರೋವರ, ಜಲಾಶಯ, ಅಳಿವೆ, ಹಿನ್ನೀರಿನ ಜೌಗು ನೆಲಗಳೆಲ್ಲವೂ ತರಿಭೂಮಿಗಳೇ. ನೀರು ಮತ್ತು ನೆಲ ಈ ಎರಡೂ ಪ್ರಮುಖ ನೆಲೆಗಳೂ ನೀಡುವ ಅತ್ಯುತ್ತಮ ಪೋಷಣೆಯನ್ನು ಬಳಸಿಕೊಳ್ಳುವ ವೈವಿಧ್ಯಮಯವಾದ ಜೀವಿಪರ ಪ್ರಪಂಚವನ್ನು ನಾವು ತರಿಭೂಮಿಯಲ್ಲಿ ಕಾಣಬಹುದು.

ಉದಾಹರಣೆಗೆ, ಭರತಪುರದ ಜೌಗುನೆಲ – ವಿದೇಶದ ಅಪರೂಪದ ಕೊಕ್ಕರೆಗಳಿಗೆ ಆಸರೆ; ಕಾಜ಼ಿರಂಗಾ ರಾಷ್ಟ್ರೀಯ ಉದ್ಯಾನದ ಬದಿ ಭೂಮಿ, ಒರಿಸ್ಸಾದ ಚಿಲ್ಕಾ ಸರೋವರ, ಮದ್ರಾಸ್ ಸಮೀಪದ ತಾಡಾ ಹಿನ್ನೀರು ಪ್ರದೇಶ, ರಣ್ ಆಫ್ ಕಛ್ ನ ಜೌಗು ಬೆಂಗಾಡು, ಸುಂದರಬನ್ ಮ್ಯಾಂಗ್ರೋವ್ ಜೌಗು ಪ್ರದೇಶಗಳು ತರಿಭೂಮಿಗೆ ಹೆಸರು ವಾಸಿ. ಹಾಗೆಯೇ, ಧಾರವಾಡ, ಬೀದರ್, ಕಲಬುರ್ಗಿ, ಮೈಸೂರು, ಮಂಗಳೂರು, ಕೋಲಾರ ಹೀಗೆ ರಾಜ್ಯದ ಒಟ್ಟು ೩೦ ಜಿಲ್ಲೆಗಳ ಪೈಕಿ ಯಾವುದೇ ಜಿಲ್ಲೆಯನ್ನು ಆಯ್ದುಕೊಂಡು ಎಷ್ಟು ಕೆರೆಗಳಿವೆ? ಅವುಗಳಲ್ಲಿ ಎಷ್ಟು ನೀರು ಲಭ್ಯವಿದೆ ಎಂಬ ಮಾಹಿತಿ ಬೆರಳ ತುದಿಯಲ್ಲೇ ಪಡೆಯಬಹುದು. ಸದ್ಯಕ್ಕೆ ‘ಇಸ್ರೊ’ ಕೆರೆಗಳ ಹೆಸರು ನಮೂದಿಸಿಲ್ಲ. ಕೇವಲ ಜಲಾಶಯ, ಅಣೆಕಟ್ಟೆ ಮತ್ತು ನದಿಗಳ ಹೆಸರು ಮಾತ್ರ ಉಲ್ಲೇಖಿಸಿದೆ. ಮುಂದಿನ ಕಾರ್ಯ ಪ್ರಗತಿಯಲ್ಲಿದೆ.

ಹೈದ್ರಾಬಾದ್‌ನಲ್ಲಿರುವ ರಾಷ್ಟ್ರೀಯ ದೂರ ಸಂವೇದಿ ಕೇಂದ್ರವು (ಎನ್‌ಆರ್‌ಎಸ್‌ಸಿ – ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್) ಕೆರೆಗಳ ಮೇಲೆ ಉಪಗ್ರಹಗಳ ಮೂಲಕ ನಿಗಾ ವಹಿಸುವ, ಚಿತ್ರಗಳನ್ನು ಸೆರೆ ಹಿಡಿಯುವ, ಮತ್ತು ಕೂಡಲೇ ರವಾನಿಸುವ ಕೆಲಸ ಮಾಡುತ್ತಿದೆ. ಪ್ರತಿ ೧೫ ದಿನಗಳಿಗೊಮ್ಮೆ ಕ್ರೊಢೀಕೃತ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದೆ. ಕಾಲಕಾಲಕ್ಕೆ ಇದು ಅಪ್‌ಡೇಟ್ ಕೂಡ ಆಗುತ್ತಿದೆ.

ಡಾ. ದೇವಿಪ್ರಸಾದ್ ಕಾರ್ಣಿಕ್ ಅವರ ಪ್ರಕಾರ, ಈ ಕಾರ್ಯಕ್ಕೆ ರಿಸೋರ್ಸ್ ಸ್ಯಾಟ್ – ೨ ಮತ್ತು ರಿಸ್ಯಾಟ್ – ೧ ದೂರ ಸಂವೇದಿ ಉಪಗ್ರಹಗಳು ನೆರವಾಗುತ್ತಿವೆ. ಭೂಮಿಯ ಮೇಲ್ಭಾಗದ ಜಲಾಶಯಗಳು, ನದಿಗಳು, ಕೆರೆಗಳು, ಕೊಳ್ಳಗಳು, ಜಲಪಾತಗಳು ಮತ್ತು ಹಳ್ಳಗಳ ಸಚಿತ್ರ ಮಾಹಿತಿಯನ್ನು ಈ ಉಪಗ್ರಹಗಳು ಸೆರೆಹಿಡಿಯುತ್ತವೆ. ಸದ್ಯಕ್ಕೆ ನಮ್ಮ ದೇಶದ ೧೨,೫೦೦ಕ್ಕೂ ಅಧಿಕ ಕೆರೆಗಳು, ಜಲಾಶಯಗಳು ಮತ್ತು ನದಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗಿದೆ. ಪ್ರಮುಖ ನದಿಗಳು ಮತ್ತು ಅದರ ಪಾತ್ರಗಳಲ್ಲಿ ಬರುವ ಉಪನದಿಗಳು, ಕಣಿವೆಗಳ ವಿವರಗಳೂ ಲಭ್ಯ, ಎನ್ನುತ್ತಾರೆ.

ಎಲ್ಲ ರಾಜ್ಯಗಳ ನದಿ, ಕೆರೆ, ಕೊಳ್ಳ, ಜಲಾಶಯಗಳ ಮ್ಯಾಪಿಂಗ್ ಉಪಗ್ರಹಗಳ ಮೂಲಕ ಪೂರ್ಣಗೊಂಡಿದೆ. ಈ ಮಾಹಿತಿಯನ್ನು ಬಳಸಿಕೊಂಡು ಆಯಾ ರಾಜ್ಯದವರು ಕೆರೆ, ನದಿ, ಜಲಾಶಯಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ತತ್ಕಾಲ ರೂಪಿಸಬಹುದು. ರಾಜ್ಯದ ವಿವಿಧೆಡೆ ಕೆರೆಗಳ ಒತ್ತುವರಿ ಮತ್ತು ಕಬಳಿಕೆ ಅವ್ಯಾಹತವಾಗಿರುವ ಹಿನ್ನೆಲೆಯಲ್ಲಿ, ಅದನ್ನು ಕೂಡಲೇ ತಡೆಯಲು ಮತ್ತು ಅತಿಕ್ರಮಣ ತೆರವುಗೊಳಿಸಲು ಈ ಮಾಹಿತಿ, ಉಪಗ್ರಹ ಚಿತ್ರಗಳು ತುಂಬ ಸಹಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ.

೧೯೯೦ರಿಂದ ೧೯೯೩ರವರೆಗೆ ಸುಮಾರು ಮೂರು ವರ್ಷಗಳವರೆಗೆ ನಡೆದ ಗಣತಿಯಿಂದ, ೨೬ ದೇಶಗಳ ೧೩೧೯ ತರಿ ಭೂಮಿಗಳ ಸ್ಥಿತಿಗತಿಯ ಬಗ್ಗೆ ಸಾಕಷ್ಟು ನಿಖರವಾದ ಮಾಹಿತಿ ದೊರಕಿದೆ. ಯಾವುದೇ ತರಿಭೂಮಿ ೨೦,೦೦೦ಕ್ಕೂ ಹೆಚ್ಚಿನ ಜಲಪಕ್ಷಿಗಳಿಗೆ ಆಸರೆ ಒದಗಿಸಿ ಪೋಷಿಸಿದರೆ, ಅಂತಹ ತರಿಭೂಮಿಗೆ ಅಂತಾರಾಷ್ಟ್ರೀಯ ಮನ್ನಣೆ, ನೆರವು ದೊರಕುತ್ತದೆ. ಸ್ಥಳೀಯರಾದ ನಾವು ಮನಸ್ಸು ಮಾಡಬೇಕು. ಕಣ್ಮರೆ ಅಂಚಿನಲ್ಲಿರುವ ೬೪ ಪ್ರಬೇಧಗಳಿಗೆ ಸೇರಿದ ನೀರ್ಕೋಳಿಗಳನ್ನು ಗುರುತಿಸಲಾಗಿದೆ.

ಸ್ಥಳೀಯವಾಗಿ ಕಾರ್ಯಪ್ರವೃತ್ತರಾಗಲು ಇದು ಸಕಾಲ. ‘ಹೈಟೈಮ್’. ನೀರು ನಮ್ಮ ತಿಳಿವಳಿಕೆಯಾಗಬೇಕು; ಕೊರಗಾಗಬಾರದು.

ಜಲಮೂಲಗ ಬಗ್ಗೆ ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ –

http://bhuvan.nrsc.gov.in/gis/thematic/wbis/#/map /

http://bhuvan.nrsc.gov.in/gis/thematic/index.php

ಚಿತ್ರ-ಬರಹ: ಹರ್ಷವರ್ಧನ ವಿ. ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*