ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

‘ಹಸಿರು ಮನೆಗೂ ಬಂತು ಮೇಲ್ಛಾವಣಿ ಮಳೆನೀರು ಸಂಗ್ರಹಣೆ’

ಹಸಿರು ಮನೆಗಳಲ್ಲಿ ಹೂವನ್ನು ಬೆಳೆಯುವವರು ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವುದು ಸಾಮಾನ್ಯ. ಇದರಿಂದ ನೀರಿನ ಬಳಕೆ ಕಡಿಮೆಯಾಗುತ್ತದೆ. ಆದರೆ ಹೂವಿನ ಇಳುವರಿ ಚೆನ್ನಾಗಿ ಬರಬೇಕಾದರೆ, ಶುದ್ಧ ನೀರಿನ ಅಗತ್ಯ ಆದರೆ ಹೆಚ್ಚು ಆಳದ ಕೊಳವೆಬಾವಿಗಳಿಂದ ಮೇಲೆತ್ತುವ ನೀರಿನಲ್ಲಿ ಲವಣಾಂಶ ೦.೫ಕ್ಕಿಂತಲೂ ಹೆಚ್ಚು ಇರುತ್ತದೆ. ಲವಣಾಂಶದ ಪ್ರಮಾಣ ಹೆಚ್ಚಾದರೆ, ಹೂವಿನ ಸಸಿಯ ಎಲೆಗಳು ಸೊರಗುತ್ತವೆ, ಸಸಿಯ ಬೆಳೆವಣಿಗೆ ಪ್ರಮಾಣ ಕುಂಠಿತವಾಗುತ್ತದೆ. ಈ ಎಲ್ಲದರ ಪರಿಣಾಮ ಅಂತಿಮವಾಗಿ ಹೂವಿನ ಮೇಲೆ ಬೀರುವುದರಿಂದ ಸಹಜವಾಗಿಯೇ ಕಳಪೆ ಹೂವು ಬರುತ್ತವೆ.

DBP-2ಇದನ್ನು ತಪ್ಪಿಸುವ ಸಲುವಾಗಿ ಕೆಲವರು ಅಧುನಿಕ ತಂತ್ರಜ್ಞಾನ ಬಳಸಿ, ನೀರನ್ನು ಶುದ್ಧೀಕರಿಸಿ ಲವಣಾಂಶದ ಪ್ರಮಾಣವನ್ನು ೦.೫ಕ್ಕಿಂತಲು ಕಡಿಮೆ ಮಾಡಿ ಹೂವಿನ ಸಸಿಗಳಿಗೆ ಹಾಯಿಸಲಾಗುತ್ತದೆ. ಇದು ದುಬಾರಿ ಖರ್ಚು. ಅದರೂ ಅನಿವಾರ್ಯ.

ಆದರೆ ಶುದ್ಧ ನೀರೂ ದೊರಕುವ, ಕಡಿಮೆ ಖರ್ಚೂ ತಗುಲುವ ವಿಧಾನವೊಂದಿದೆ, ಅದೇ ಮೇಲ್ಛಾವಣಿ ಮಳೆನೀರು ಸಂಗ್ರಹಣೆ. ಬೃಹತ್ ಪ್ರಮಾಣದಲ್ಲಿ ಹೂ ಬೆಳೆಯುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬೈರಾಪುರ ತಾಂಡ ಸಮೀಪದ ಸತ್ಯೇಂದ್ರಕುಮಾರ್ ಈ ಪರಿಹಾರ ಕಂಡುಕೊಂಡಿದ್ದಾರೆ.

DBP-4ಇವರು ತಮ್ಮ ಆರು ಎಕರೆ ಪ್ರದೇಶದ ಹಸಿರು ಮನೆ ಹೂವಿನ ತೋಟಕ್ಕೆ ೧೦ ಲಕ್ಷ ರೂಪಾಯಿ ಖರ್ಚು ಮಾಡಿ ೩೫ ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಛಾವಣಿ ಮಳೆನೀರು ಸಂಗ್ರಹಣೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ‘ಮಳೆ ನೀರಿನಲ್ಲಿ ಲವಣಾಂಶದ ಪ್ರಮಾಣ ಶೂನ್ಯ (೦) ಪ್ರಮಾಣದಲ್ಲಿರುತ್ತವೆ. ಮಳೆ ನೀರನ್ನು ಹೂವಿನ ಸಸಿಗಳಿಗೆ ನೀಡುವುದರಿಂದ, ಸಸಿಗಳ ಬೆಳೆವಣಿಗೆ, ಹೂವಿನ ಗುಣಮಟ್ಟ ಉತ್ತಮವಾಗುತ್ತದೆ. ಮಳೆ ನೀರನ್ನು ಶುದ್ಧೀಕರಣ ಮಾಡದೆ ನೇರವಾಗಿ ಸಸಿಗಳಿಗೆ ಹಾಯಿಸುವುದರಿಂದ, ಶುದ್ಧೀಕರಣಕ್ಕಾಗಿ ಬಳಸುವ ವಿದ್ಯುತ್ ಹಾಗೂ ಹಣ ಉಳಿತಾಯವಾಗಲಿದೆ’ ಎನ್ನುತ್ತಾರೆ.

೩೫೦+೧೫೦ ಉದ್ದ, ೨೦ ಅಡಿ ಆಳದ ತೊಟ್ಟಿಯಲ್ಲಿ ೩೫ ಲಕ್ಷ ಲೀಟರ್ ಮಳೆನೀರು ಸಂಗ್ರಹಣೆ ಮಾಡಲಾಗಿದೆ. ತೊಟ್ಟಿಯ ತಳಭಾಗ ಸೇರಿದಂತೆ, ಇಡೀ ತೊಟ್ಟಿಗೆ ದಪ್ಪದ ಪ್ಲಾಸ್ಟಿಕ್ ಪೇಪರ್‌ನಿಂದ ಹೊದಿಕೆ ಮಾಡಲಾಗಿದೆ. ಇದರಿಂದ ಬಿಸಿಲಿಗೆ ನೀರು ಆವಿಯಾಗುವುದು, ಸಂಗ್ರಹಣೆ ಮಾಡಿದ ನೀರು ಭೂಮಿಗೆ ಇಂಗುವುದು ಹಾಗೂ ಬಿಸಿಲಿನಿಂದ ತೊಟ್ಟಿಯಲ್ಲಿ ಪಾಚಿ ಬೆಳೆಯುವುದು ತಪ್ಪುತ್ತದೆ.

DBP-6ಛಾವಣಿ ನೀರು ಸಂಗ್ರಹಣೆಗೆ ಮುಂಚೆ, ಪ್ರತಿ ದಿನ ಕೊಳವೆ ಬಾವಿಯಿಂದ ನೀರು ಮೇಲೆತ್ತಿ ಶುದ್ಧೀಕರಣ ಮಾಡಿ (ಲವಣಾಂಶ ೦.೫ಕ್ಕೆ ತರಲು), ಆರು ಎಕರೆ ಪ್ರದೇಶದ ಹಸಿರು ಮನೆಯಲ್ಲಿನ ಹೂವಿನ ಸಸಿಗಳಿಗೆ ಹನಿ ನೀರಾವರಿ ಮೂಲಕ ನೀರು ಹಾಯಿಸಲು ೮,೦೦೦ ಸಾವಿರ ರೂಪಾಯಿಗಳ ವಿದ್ಯುತ್ ಶುಲ್ಕ ಗುತ್ತಿತ್ತು. ಅಂದರೆ ತಿಂಗಳಿಗೆ ಸುಮಾರು ೨ ಲಕ್ಷ ರೂ. ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ, ಮಳೆ ನೀರಿನಲ್ಲಿ ಲವಣಾಂಶ ಇಲ್ಲದೆ ಇರುವುದರಿಂದ, ಶುದ್ಧೀಕರಿಸದೆ ನೇರವಾಗಿ ಹಾಯಿಸಲು ಕೇವಲ ೩,೫೦೦ ರೂಪಾಯಿ ವೆಚ್ಚ ಗುತ್ತಿದೆ. ಇದರಿಂದ ಮಳೆನೀರು ಸಂಗ್ರಹಣೆಗೆ ಮಾಡಿದ ವೆಚ್ಚ ಐದಾರು ತಿಂಗಳಲ್ಲೇ ಉಳಿತಾಯವಾದಂತಾಗಿದೆ; ಅಲ್ಲದೆ ಗುಣಮಟ್ಟದ ಹೂ ಬರುತ್ತಿರುವುದರಿಂದ ಅಲ್ಲಿಯೂ ಹೆಚ್ಚಿನ ಲಾಭ ದೊರಕಿದೆ ಎನ್ನುತ್ತಾರೆ ಇವರು.

ಮಳೆನೀರಿನ ಉಪಯೋಗದಿಂದ ಆಗುವ ಅನುಕೂಲಗಳನ್ನು ಲೆಕ್ಕ ಹಾಕಿದರೆ, ತೊಟ್ಟಿ ನಿರ್ಮಾಣ ಹಾಗೂ ಆರು ಎಕರೆ ಪ್ರದೇಶದಲ್ಲಿನ ಹಸಿರು ಮನೆಯ ಮೇಲ್ಛಾವಣಿಯಿಂದ ಮಳೆನೀರು ಹರಿದು ಬರಲು ಅಳವಡಿಸಿರುವ ಪೈಪ್‌ಲೈನ್‌ಗಳಿಗೆ ಮಾಡಿರುವ ಖರ್ಚು-ವೆಚ್ಚ ದುಬಾರಿ ಅನ್ನಿಸುವುದಿಲ್ಲ. ಇದೆಲ್ಲಕ್ಕೂ ಮುಖ್ಯವಾಗಿ ಮಳೆಗಾಲದಲ್ಲಿ ವ್ಯರ್ಥವಾಗಿ ಹೋಗುವ ಮಳೆನೀರನ್ನು ಬಳಕೆ ಮಾಡಿಕೊಳ್ಳುವುದರಿಂದ, ಅಪಾರ ಪ್ರಮಾಣದ ಅಂತರ್ಜಲ ಉಳಿತಾಯವಾಗಲಿದೆ. ಇದಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.

ಇಂದು ರಾಜ್ಯದ ಎಲ್ಲೆಡೆ ಈ ರೀತಿ ಹೂವಿನ ಬೇಸಾಯ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ, ವಿವಿಧ ಇಲಾಖೆಗಳೂ ಇದಕ್ಕೆ ಪ್ರೋತ್ಸಾಹ ನೀಡುತ್ತಿವೆ, ಎಲ್ಲರೂ ಸತ್ಯೇಂದ್ರಕುಮಾರ್ ಅವರಂತೆ ಮಳೆ ನೀರು ಬಳಸಿದ್ದೇ ಆದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಾಧ್ಯ.

                                                                                                   ಚಿತ್ರ-ಲೇಖನ: ಎನ್.ಎಂ.ನಟರಾಜ್ ನಾಗಸಂದ್ರ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*