ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕಾಡು ತೋಟ ಸುಮನ ಸಂಗಮ: ಡಾ. ಸಂಜೀವಣ್ಣನ ಹಸುರು ಹೆಜ್ಜೆಯ ಕಾಲು ಹಾದಿ..

ಧಾರವಾಡದಿಂದ ಅಳ್ನಾವರಕ್ಕೆ ಹೋಗುವ ರಸ್ತೆಯ ಮೇಲೆ ದಡ್ದಿಕಮಲಾಪೂರ ಎಂಬ ಗೌಳಿಗರ ಗ್ರಾಮವಿದೆ.  ಧಾರವಾಡದಿಂದ ಅಂದಾಜು ೯ ಕಿಲೋಮೀಟರ್ ದೂರ. ಅಲ್ಲಿಂದ ೨ ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಕ್ರಮಿಸಿದರೆ, ಡಾಕ್ಟರ್ ಸಂಜೀವ ಕುಲಕರ್ಣಿ ಅವರ ಸುಮನ ಸಂಗಮ ಕಾಡು ತೋಟ. ಅದೊಂದು ಕಾಡು-ನಾಡು ಹಿತಮಿತವಾಗಿ ಮೇಳೈಸಿ ಹದಗೊಂಡ ನಾಡಿನ ಕಾಡು ತೋಟ!

೧೯೯೬ ರಲ್ಲಿ ಸಂಜೀವಣ್ಣ ಈ ೧೭ ಎಕರೆ ಭೂಮಿಯನ್ನು ಕೊಂಡುಕೊಂಡರು. ಭೂಮಿಯನ್ನು ಕೃಷಿಗಾಗಿ ಆಯ್ದುಕೊಳ್ಳುವಾಗ ಅವರ ಮುಂದೆ ಸ್ಪಷ್ಟವಾದ ಮಾನದಂಡಗಳಿದ್ದವು. ಧಾರವಾಡ ಬಿಟ್ಟು ಹೊಲ ದೂರವಿರಬೇಕು. ನೈಸರ್ಗಿಕವಾಗಿ ಮಳೆ ನೀರಿನಿಂದ ತೋಯ್ದು ಇಂಗುವಂತಹ ಗುಡ್ಡದ ‘ಫುಟ್ ಹಿಲ್ಸ್’ನಲ್ಲಿ ಅರಳಬಲ್ಲ, ತುಸು ಇಳಿಜಾರಿರಬೇಕು. ಮಳೆ ನೀರು ಹರಿದು ಹೋಗದೇ, ಗುಂಡಿಯಾಕಾರದಲ್ಲಿ ಸಣ್ಣ ಕೆರೆಗಳಂತೆ ಅಲ್ಲಲ್ಲಿ ಸಂಗ್ರಹಿಸಿ ಪುನ: ವ್ಯವಸಾಯಕ್ಕೆ ಅನುಕೂಲವಾಗುವಂತೆ ಮಾಡಲು ಸುಲಭವಾಗಬೇಕು. ಕಾಡಿನ ಪ್ರಾಣಿ-ಪಕ್ಷಿಗಳಿಗೂ ನೈಸರ್ಗಿಕ ಅರವಟ್ಟಿಗೆಗಳಾಗಿ ಅವು ಲಭ್ಯವಾಗಬೇಕು ಎಂದು ಸಂಜೀವಣ್ಣ ಅಳೆದು-ತೂಗಿ ಈ ಭೂಮಿ ಖರೀದಿಸಿದರು. ‘ಸಂಕುಲಜೀವ’’ ಎಂದು ಹೆಸರಿಟ್ಟರು.

ಸುದೈವದಿಂದ ಸಂಜೀವಣ್ಣ ಖರೀದಿಸಿದ ಹೊಲದ ಮಾಲೀಕ ದಶಕಗಳ ಕಾಲ ಅಲ್ಲಿ ಯಾವುದೇ ಕೃಷಿ ಮಾಡಿರಲಿಲ್ಲ. ಹಾಗಾಗಿ ಅದು ವಿಷರಹಿತ ಅನ್ನದ ಬಟ್ಟಲಾಗಿತ್ತು! ಯಾವುದೇ ರಾಸಾಯನಿಕಗಳು, ಕೀಟನಾಶಕಗಳು ಒಟ್ಟಾರೆ ಪರಿಸರ ಅಸ್ನೇಹಿ ಒಳಸುರಿಗಳನ್ನು ಸುರಿದು, ಲಾಭಕ್ಕಾಗಿ ಕೃಷಿ ಮಾಡುವುದಿಲ್ಲ ಎಂದು ಅವರು ನಿರ್ಧರಿಸಿದ್ದರು. ಹಾಗಾಗಿ, ಒಳ್ಳೆಯ ಕೆಲಸಕ್ಕೆ ದೇವರೇ ಆಸರೆ ಎಂಬಂತೆ ಒದಗಿಬಂದಿತ್ತು ಈ ಭೂಮಿ.

ಮಸನೊಬು ಫುಕುವೋಕಾ ಹೇಳುವಂತೆ “ವಿಜ್ಞಾನ ತನ್ನ ವೈಜ್ಞಾನಿಕ ಜ್ಞಾನದ ಮೂಲಕ ಅರಿತಿರುವುದು ಮೃತ ಪ್ರಕೃತಿಯನ್ನಷ್ಟೇ; ಆತ್ಮವಿಲ್ಲದ ದೇಹದಲ್ಲಿರುವ ಭೂತವನ್ನಷ್ಟೇ..“! ಲಭ್ಯ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಕ್ರೊಢೀಕರಿಸಿಕೊಂಡು ಬಳಸುವುದು, ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ, ಬೆಳೆ ವೈವಿಧ್ಯತೆಯ ಮೂಲಕ ಫಲವತ್ತತೆ ಕಾಯ್ದುಕೊಳ್ಳುವುದು. ನೆಲಮೂಲ ಜ್ಞಾನವನ್ನು ಆಕರಿಸಿಕೊಂಡು ಸಹಜ ಕೃಷಿ ಮಾಡುವುದು ಡಾಕ್ಟರ್ ನಿರ್ಧಾರವಾಗಿತ್ತು.

“ಫುಕುವೋಕಾ ಹೇಳುತ್ತಾರೆ ಕೃಷಿಯ ಅಂತಿಮ ಗುರಿ ಬೆಳೆ ಬೆಳೆಯುವುದಲ್ಲ. ಬದಲು ಮನುಷ್ಯನ ಬೆಳವಣಿಗೆ. ನನ್ನ ಕೃಷಿ ಎಂದರೆ ನಿಸರ್ಗವನ್ನು ಅರ್ಥ ಮಾಡಿಕೊಳ್ಳುವುದು. ಅದರ ತಾಳಕ್ಕೆ, ಹೆಜ್ಜೆಗೆ, ವಿನ್ಯಾಸಕ್ಕೆ ಹೊಂದಿಕೊಂಡು ಹೆಜ್ಜೆ ಇಡುತ್ತಲೇ ಅನ್ನಾಹಾರಗಳನ್ನೂ, ಆರೋಗ್ಯವನ್ನೂ, ನೆಮ್ಮದಿಯನ್ನೂ ಪಡೆದುಕೊಳ್ಳುವುದು.” ಸಂಜೀವಣ್ಣ ಕೃಷಿಯನ್ನು ಹಾಗೆ ಅರ್ಥ ಮಾಡಿಕೊಳ್ಳಲು ಅಧ್ಯಯನ ಮಾಡಿದ್ದಾರೆ.

DR SANJEEV KULAKARNI EDITEDಸುಮನ ಸಂಗಮ’ದಲ್ಲಿ ಒಟ್ಟು ಒಂಭತ್ತು ಎಕರೆ ತೋಟಕ್ಕೆ ಹಾಗೂ ಕಾಡಿನ ಮರಗಳಿಗೆ ಮೀಸಲಿಟ್ಟಿದ್ದಾರೆ. ಇನ್ನು ಐದು ಎಕರೆ ಭೂಮಿಯಲ್ಲಿ ಹುರುಳಿ, ರಾಗಿ, ಭತ್ತ, ನೆಲಗಡಲೆ ಹಾಗೂ ಸೋಯಾಬೀನ್ ಬೆಳೆಯುತ್ತಿದ್ದಾರೆ. ಕೆರೆ-ಕೃಷಿ ಹೊಂಡಗಳಿಗಾಗಿ ಎರಡು ಎಕರೆ ಮೀಸಲು. ಈ ಹೊಂಡಗಳೆ ತೋಟದ ಅಂತರ್ಜಲ ಹೆಚ್ಚಿಸುವ ಬ್ಯಾಂಕರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಳೆಗಾಲದಲ್ಲಿ ಉಳಿತಾಯ ಖಾತೆಗಳಿಗೆ ಜಮೆ..ಬೇಸಿಗೆಯಲ್ಲಿ ಅವಶ್ಯಕತೆಗೆ ತಕ್ಕಷ್ಟು ಸೇಫ್ ಡೆಪಾಸಿಟ್ ನಿಂದ ಹಿಂಪಡೆದು ಹಿತ-ಮಿತವಾಗಿ ಬಳಕೆ. ಒಟ್ಟು ೧೭ ಎಕರೆಯಲ್ಲಿ ಮಿಕ್ಕಿದ ೧ ಎಕರೆ ಅವರು ತೋಟದಲ್ಲಿ ಸಾಕಿರುವ ಎರಡು ಎತ್ತು, ಎರಡು ಎಮ್ಮೆ, ಎರಡು ಆಕಳುಗಳಿಗೆ ಮೇಯಲು ಹಸಿರು ಹುಲ್ಲು ಒದಗಿಸುತ್ತದೆ.

ಕಳೆದ ನಾಲ್ಕಾರು ವರ್ಷಗಳ ಕೆಳಗೆ ಉತ್ತರ ಕರ್ನಾಟಕ ಭಾಗದಲ್ಲಿ ಚಾಟಿ ಬೀಸಿದ್ದ ಬರಗಾಲ ಸಂಜೀವಣ್ಣ ಅವರಿಗೂ ಬಿಸಿ ತಾಗಿಸದೇ ಬಿಟ್ಟಿಲ್ಲ. ತೋಟದ ಯಾವ ಹೊಂಡದಲ್ಲಿಯೂ ಹನಿ ನೀರಿರದೆ, ತಾತ್ವಾರಕ್ಕೆ ಈಡಾಗಿ ಸಂಜೀವಣ್ಣ ತಮ್ಮ ಆಶಯಕ್ಕೆ ವಿರುದ್ಧವಾಗಿ ಕೊಳವೆಬಾವಿ ಕೊರೆಸಿದ್ದಿದೆ. ಆದರೆ ನಂತರದ ವರ್ಷಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ.

ಸಂಜೀವಣ್ಣ ಬಹಳ ಉಮ್ಮೇದಿಯಿಂದ ಹೇಳುತ್ತಾರೆ..”ನಮ್ಮ ತ್ವಾಟಕ್ಕ ಮೂರು ಕಡೆ ಇಳಿಜಾರು ಅದ. ಯಾವ ಭಾಗದೊಳಗ ಮಳೆಯಾದರೂ ನೀರು ಹರಿದು ‘ಎಪಿ ಸೆಂಟರ್’ ಬೋಧಿ ಕೆರೆಯತನಕ ಸಾಗಿ ಬಂದು, ಕೃಷಿ ಹೊಂಡ ತುಳುಕುವಂಗ ಮಾಡ್ತದ. ಒಂದು ಹನಿ ನೀರೂ ವ್ಯರ್ಥ ಆಗೋದಿಲ್ಲ. ನಮ್ಮ ‘ಸಂಪಿಗೆ ಹೊಂಡ’ದ ಸುತ್ತಳತಿ ೧೦ x ೨೦ x ೪ ಇದ್ದು, ಮಳೆ ಬಂದಾಗ ಮೊದಲ ಅದು ತುಂಬತೈತಿ. ಅದು ತುಂಬಿ ಓವರ್ ಫ್ಲೋ ಆದಮ್ಯಾಲೆ ಕೆಳಗಿನ ‘ಮೈನಾ ಹೊಂಡ’’ದೊಳಗ ಸಂಗ್ರಹಗೊಳ್ತದ. ಅದರ ಅಳತಿ ಸುಮಾರು ೧೫ x ೫ x ೨. ಮೂರನೆಯ ಹೊಂಡದ ಹೆಸರು ‘ರಘು ತೀರ್ಥ’; ಅದು ೧೦ x ೧೦ x ೪ ರಷ್ಟು ಜಾಗೆಯೊಳಗ ಹೆಚ್ಚುವರಿಯಾಗಿ ಹರಿದು ಬರೋ ನೀರನ್ನು ತನ್ನ ಒಡಲೊಳಗ ತುಂಬಿಸಿಕೊಳ್ತದ. ನಂತರ ಮತ್ತೊಂದು ಸಣ್ಣ ಕೃಷಿ ಹೊಂಡ ಅದ ‘ಕವಳಿ ಕೊಳ’’. ಇವೆಲ್ಲ ತುಂಬಿ ತುಳುಕಿದ ಮ್ಯಾಲೆ, ನೀರು ಹರಿದುಕೊಂಡು ಬರೋದು ‘ಬೋಧಿ ಕೆರೆ’’ಗೆ. ಅದು ಭಾಳ ದೊಡ್ದ ಕೆರಿ. ಕೆರೆಯ ಮಧ್ಯದೊಳಗ ಬೋಧಿ ಗಿಡ ಇರೋದರಿಂದ ಅದಕ್ಕ ಆ ಹೆಸರು ಇಟ್ಟೇವಿ” ಸಂಜೀವಣ್ಣ ಅವರ ನೀರ ಕಳಕಳಿ ಅವರು ಸಾಧಿಸಿರುವ ನೀರ ನೆಮ್ಮದಿ ನನಗೆ ಕೃಷಿ ವಿಶ್ವ ವಿದ್ಯಾಲಯದ ಪಠ್ಯವಾಗಬಹುದು ಅನ್ನಿಸಿತು.

ಸಂಜೀವಣ್ಣ, ಸುಮನ ಸಂಗಮ ತೋಟದ ಸುತ್ತ ‘ಜೀವಂತ ಬೇಲಿ’ ನೆಟ್ಟಿದ್ದಾರೆ. ಅರ್ಥಾತ್ ವಿದ್ಯುತ್ ಬೇಲಿ ಅಲ್ಲ. ನೈಸರ್ಗಿಕವಾಗಿ ಬೆಳೆದಿದ್ದ ಕಾಡಿನ ಗಿಡಗಳನ್ನು ಕಡಿದು ಸಾಗಿಸದೇ ಹಾಗೆಯೇ ಇಟ್ಟುಕೊಂಡು, ಮತ್ತಷ್ಟು ಕಾಡು ಮರಗಳನ್ನು ಅವರು ನೆಟ್ಟಿದ್ದಾರೆ. ಸಾವಿರಕ್ಕೂ ಮಿಕ್ಕಿದ ಸಾಗವಾನಿ, ಹೊಂಗೆ ಮರಗಳು, ಅಕೇಷಿಯಾ, ಬೇವು, ಆಲ, ಅತ್ತಿ ಬಳಸಲು ಫಲ ಕೊಡುವ ತೆಂಗಿನ ಮರಗಳನ್ನು ಬೆಳೆಸಿ ತೋಟಕ್ಕೆ ಕೋಟೆ ಸದೃಶ ಆವರಣ ಅವರು ಸೃಷ್ಟಿಸಿದ್ದಾರೆ.

ನೂರು ಗಿಡಗಳಷ್ಟು ಹಲಸು, ಮಾವು, ಸೀತಾಫಲ, ರಾಮ ಫಲ, ಮರಸೇಬು, ಪಪ್ಪಾಯ, ಅಂಜೂರು, ಅನಾನಸು, ಸಿಂಗಾಪೂರ ಚೆರ್ರಿ, ಗೇರು ಹಣ್ಣಿನ ಮರ, ವಿವಿಧ ಜಾತಿಯ ನಿಂಬೆಯ ಗಿಡಗಳು ಇಲ್ಲಿವೆ. ಈಗಾಗಲೇ ಅವು ಫಲ ನೀಡಲು ಆರಂಭಿಸಿದ್ದು, ಪಕ್ಷಿಗಳು ತಮ್ಮ ಪಾಲನ್ನು ಆಗಲೇ ಹೊತ್ತೊಯ್ದಿದ್ದರೆ, ಸಂಜೀವಣ್ಣ ಆಪ್ತರಿಗೂ ಹಂಚಿ ಖುಷಿ ಪಟ್ಟಿದ್ದಾರೆ.

ತೋಟದ ದಕ್ಷಿಣ ತುದಿಯಲ್ಲಿ ಒಂದು ದಿಬ್ಬವಿದ್ದು, ಬೆಳಿಗ್ಗೆ ಮತ್ತು ಸಂಜೆಯ ವೇಳೆ ಅಲ್ಲಿ ಕುಳಿತರೆ ನಾವು ಸೋಜಿಗ ಅನುಭವಿಸುವಷ್ಟು ತರಹೇವಾರಿ ಪಕ್ಷಿಗಳು ಅಲ್ಲಿಗೆ ಹಾರಿ ಬರುತ್ತವೆ. ಸಿಂಗಾಪೂರ ಚೆರ್ರಿ, ಚಕ್ಕೋತ, ಬಟರ್ ಫ್ರುಟ್, ರಾಮ ಫಲ, ಲಕ್ಷ್ಮಣ ಫಲ, ಅಂಜೂರಿನ ಮರಗಳಿಗೆ ಲಗ್ಗೆ ಹಾಕಿ, ಮನ ದಣಿಯೇ ತಿಂದು, ಮೈನಾ ಹೊಂಡ ಅಥವಾ ಬೋಧಿ ಕೆರೆಯ ನೀರು ಕುಡಿದು, ಮಿಂದೆದ್ದು ಖುಷಿಯಿಂದ ಕಲರವ ಮಾಡಿ, ತರಹೇವಾರಿ ಕೂಗಿ ಸಂಗೀತ ಕಛೇರಿ ನಡೆಸಿ ನೋಡುಗರ ಮನಸ್ಸನ್ನು ಸಂತೋಷಪಡಿಸುತ್ತವೆ. ಸಂತ ಮಾಥ್ಯೂ ಈ ಸಂದರ್ಭಕ್ಕೆ ಅನುಗುಣವಾಗಿ ಮಾತೊಂದನ್ನು ಹೇಳಿದ್ದಾರೆ..”ಗಾಳಿಯಲ್ಲಿ ತೇಲುವ ಹಕ್ಕಿಗಳ ನೋಡು. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜ ತುಂಬುವುದಿಲ್ಲ, ನಾಕದ ತಂದೆ ಅವುಗಳನ್ನು ಸಲಹುತ್ತಾನೆ.” ಇಲ್ಲಿ ನಮ್ಮ ಸುಮನ ಸಂಗಮವೆಂಬ ನಾಕದ ಪಾಲಕ = ಸಂಜೀವಣ್ಣ!

ಸುಮನ ಸಂಗಮ’ದಲ್ಲಿ ಪುಷ್ಪೋದ್ಯಾನವೂ ಇದೆ. ಮಲ್ಲಿಗೆ, ಸಂಪಿಗೆ, ಕಾಕಡ, ಗುಲಾಬಿ, ನಾಗಲಿಂಗ ಪುಷ್ಪ, ದೇವಕಣಗಿಲೆ, ಗೌರಿ ಹೂವು, ಅಶೋಕ ಎಲ್ಲವೂ ಮನ ತಣಿಸುತ್ತವೆ. ಕೈ ತುಂಬ ಹಣ ಸಂಪಾದನೆ ಇರುವ, ಮೈತುಂಬ ಟೆನ್ಷನ್ ಹೊತ್ತಿರುವ ಡಾಕ್ಟರ್ ಸಂಜೀವಣ್ಣ ಅವರಿಗೆ ಈ ಕೆಲಸ ಬೇಕಿತ್ತೆ? ಅವರೇ ಹೇಳುತ್ತಾರೆ..”ಕೃಷಿಯಲ್ಲಿ ಗಿಡ ಬೆಳೆಸಿದ ಖುಷಿ, ನೀರು ಇಂಗಿಸಿದ ಹಿತ, ಪಕ್ಷಿ-ಪ್ರಾಣಿಗಳಿಗೆ ಸಾಂದರ್ಭಿಕವಾಗಿ ಆಹಾರವಿತ್ತು ಪೋಷಿಸಿದ ಧನ್ಯತೆ ಇನ್ಯಾವ ವೃತ್ತಿಯಲ್ಲಿ ಇದ್ದೀತೋ?..ಹಾಗಾಗಿ ಹವ್ಯಾಸಕ್ಕಾಗಿ ಈ ಕೆಲಸ; ಆದರೆ ಅಷ್ಟೇ ಗಂಭೀರವಾಗಿ”.

ಶತಮಾನದ ಹಿಂದೆ ಕವಿ ವರ್ಡ್ಸ್ ವರ್ತ್ ಹೀಗೊಂದು ಉದ್ಗಾರವೆತ್ತಿದ್ದ…”ನಮ್ಮ ಕಡ್ಡಿಯಾಡಿಸುವ ಬುದ್ದಿ ವಸ್ತುಗಳ ಸುಂದರ ರೂಪವನ್ನು ಕೆಡಿಸುತ್ತದೆ. ಕೊಲ್ಲಲೆಂದೇ ಛೇದಗೊಳಿಸುತ್ತ ಸಾಗುತ್ತೇವೆ ನಾವು” ಅಂತಹ ಬೆಳವಣಿಗೆ ‘ಸುಮನ ಸಂಗಮ’ದಲ್ಲಿಲ್ಲ. ಬದಲಾಗಿ ಮಸನೊಬು ಫುಕುವೋಕಾ ಉದ್ಧರಿಸಿದಂತೆ..ಡಾಕ್ಟರ್ ಸಂಜೀವಣ್ಣ ..”ರೈತರು ಭೂಮಿಯ ಮೇಲೆ ಎಲ್ಲೇ ಇದ್ದರೂ ಒಂದೇ. ನವೆಲ್ಲರೂ ಒಂದಾಗಿ ‘ಶಾಂತಿ ಬೇಕೆ’? ಅದನ್ನು ಪಡೆಯುವ ಸೂತ್ರ ಮಣ್ಣಿಗೆ ಹತ್ತಿರವಾಗಿದೆ’ ಎನ್ನೋಣ” ಎನ್ನುತ್ತಾರೆ.

ಆದಷ್ಟೂ ಬೇಗ ತೋಟದ ಖರ್ಚನ್ನೂ ತೋಟವೇ ಭರಿಸುವ ದಿನವೂ ಬರಲಿದೆ. ನೀವೂ ಒಮ್ಮೆ ‘ಸುಮನ ಸಂಗಮ’ಕ್ಕೆ ಭೇಟಿ ನೀಡಿ..

ವಿಳಾಸ: ಡಾ. ಸಂಜೀವ ಕುಲಕರ್ಣಿ, ಬಾಲಬಳಗ ಆವರಣ, ಮಹಿಷಿ ರಸ್ತೆ, ಮಾಳಮಡ್ಡಿ ಧಾರವಾಡ, ೫೮೦ ೦೦೭. ದೂರವಾಣಿ: (೦೮೩೬) ೨೭೪೩೧೦೦.

 ****************************************************************************************************************************

ಸಂಜೀವಣ್ಣ ಅಂದ್ರೆ:

ಡಾಕ್ಟರ್ ಸಂಜೀವ ಕುಲಕರ್ಣಿ ಧಾರವಾಡದಲ್ಲಿ ಪ್ರಸಿದ್ಧ ವೈದ್ಯರು. ಸ್ತ್ರೀ ಆರೋಗ್ಯ ಹಾಗೂ ಪ್ರಸೂತಿ ಅವರ ಶುಶ್ರೂಷೆಯ ಸ್ಪೆಶಲೈಸೇಷನ್. ಆತ್ಮೀಯರಿಗೆಲ್ಲ ಅವರು ಸಂಜೀವಣ್ಣ. ಜೊತೆಗೆ ಸುಮನಸ್ಸಿನ ಕೃಷಿಕ. ಪ್ರತಿವಾರದಂದು ಗಾಂಧಿ ಶಾಂತಿ ಪ್ರತಿಷ್ಠಾನದ ಕಟ್ಟೆಯ ಮೇಲೆ ನಡೆಯುವ ಗುರುವಾರ ಬಜಾರದಲ್ಲಿ ತಮ್ಮ ಸುಮನ-ಸಂಗಮದಲ್ಲಿ ಬೆಳೆದ ಸಾವಯವ ಕಾಯಿಪಲ್ಲೆಯನ್ನು ಸ್ವತ: ನಿಂತು ಮಾರಾಟ ಮಾಡುವ ಅಂಗಡಿಕಾರ. ಹಾಗೆಯೇ..ಮಕ್ಕಳ ಸ್ನೇಹಿ ‘ಬಾಲ ಬಳಗ’ ಎಂಬ ಶಾಲೆಯೊಂದನ್ನು ಕಟ್ಟಿ ಜಪಾನಿ ಶಿಕ್ಷಣ ತಜ್ಞ ತೆತ್ಸುಕೊ ಕೊರೊಯೋನಾಗಿ ಅವರ ಆಶಯಗಳನ್ನು ಜೀವಂತವಾಗಿಟ್ಟಿರುವ ಮುದ್ದಿನ ‘ಸಂಜೀವ ಮಾಮಾ’.

****************************************************************************************************************************

ಚಿತ್ರ-ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ.

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*