ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೩೬: ಕೆರೆ ಜೊತೆಗೆ, ಸಂಸ್ಕೃತಿ, ಸಸ್ಯ-ಪ್ರಾಣಿ ಸಂಕುಲಕ್ಕೂ ಸಂಕಟ!

ಕೆರೆಯನ್ನು ಅಭಿವೃದ್ಧಿ ಮಾಡಿ ಅವುಗಳನ್ನು ಸುಸ್ಥತಿಗೆ ತರುವ ಜವಾಬ್ದಾರಿ ಹಾಗೂ ನಿರ್ವಹಣೆಯಲ್ಲಿ, ಕೆರೆ ಸಂಸ್ಕೃತಿಗೆ ಮುಖ್ಯವಾದ ಸಸ್ಯ-ಪ್ರಾಣಿ ಸಂಕುಲವನ್ನೇ ಮರೆತಿದ್ದೇವೆ. ಕೆರೆಯನ್ನು ಒಂದು ಕಟ್ಟಡದಂತೆ ಭಾವಿಸಲಾಗಿದ್ದು, ಅದಕ್ಕೆ ಸಿಮೆಂಟ್, ಕಾಂಕ್ರೀಟ್ ಎಂಬ ಆಧುನಿಕ ಸ್ಪರ್ಶ ನೀಡಿ ಮೂಲವನ್ನೇ ಹಾಳುಮಾಡಲಾಗುತ್ತಿದೆ.

ಕೆರೆಗಳ ಅಭಿವೃದ್ಧಿಯನ್ನು ವಹಿಸಿಕೊಂಡ ಯಾವುದೇ ಸಂಸ್ಥೆಗಳು ಜೀರ್ಣೋದ್ಧಾರ ಕಾಮಗಾರಿಗಳ ನಂತರ ಕೆರೆಯಲ್ಲಿ ಲಭ್ಯವಿರುವ ಪ್ರಮುಖ ಪ್ರಭೇದ (ಪ್ರಭೇದವೊಂದರ ಅಸ್ತಿತ್ವ ಮತ್ತು ಪಾತ್ರವು ಅದೇ ವ್ಯವಸ್ಥೆಯಲ್ಲಿರುವ ಜೀವಿಗಳ ಮೇಲೆ ವಿಷಮ ಪರಿಣಾಮವನ್ನು ಬೀರುತ್ತದೆ) ಒಳಗೊಂಡಂತೆ ಸಸ್ಯ ಮತ್ತು ಪ್ರಾಣಿ ಸಂಕುಲದ ವಿವರಗಳನ್ನು ಹೊಂದಿರಲಿಲ್ಲ.   ಕೆರೆಗಳ ಮತ್ತು ಅವುಗಳಲ್ಲಿರುವ ಪ್ರಭೇದಗಳ ದತ್ತಸಂಚಯವು ಇರಲಿಲ್ಲವೆಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿದೆ. ಆದರೆ, ದತ್ತಸಂಚಯವೊಂದನ್ನು ನಿರ್ವಹಿಸುವುದಕ್ಕಾಗಿ ಕ್ರಮ ಕೈಗೊಳ್ಳಲು ಸರ್ಕಾರವು ಒಪ್ಪಿಕೊಂಡಿತು ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ೨೦೧೫ನೇ (ಸಿಎಜಿ) ವರ್ಷದ ವರದಿಯಲ್ಲಿ ತಿಳಿಸಲಾಗಿದೆ.

ಕೆರೆಗಳಲ್ಲಿ ಆಕ್ರಮಣಕಾರಿ ಪ್ರಭೇದಗಳು

ನಿರ್ದಿಷ್ಟ ಸ್ಥಳವೊಂದರ ನಿವಾಸಿಯಾಗಿರದ  ಮತ್ತು ಹರಡುವ ಪ್ರವೃತ್ತಿಯಿರುವ ಹಾಗೂ ಪರಿಸರ ಮತ್ತು ಮಾನವ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದೆಂದು ನಂಬಲಾದ ಸಸ್ಯ ಅಥವಾ ಪ್ರಾಣಿಗಳ (ಪರಿಚಯಿಸಲ್ಪಟ್ಟ ಪ್ರಭೇದ) ಪ್ರಭೇದವನ್ನು ಆಕ್ರಮಣಕಾರಿ ಪ್ರಭೇದವೆಂದು ವ್ಯಾಖ್ಯಾನಿಸಬಹುದು. ಹೆಚ್ಚಾಗಿ ಪ್ರಚಲಿತವಿರುವ ನೀರಿನ ಗಂಟೆ ಹೂ ಎಂದು ಕರೆಯಲ್ಪಡುವ ಇಚ್ಹೋರ್ನಿಯಾ ಕ್ರಾಸಿಪ್ಸ್ ಎಂಬ ಆಕ್ರಮಣಶೀಲ ಸಸ್ಯದ ಪರಿಣಾಮವನ್ನು ಲೆಕ್ಕಪರಿಶೋಧನೆಯು ಪರಿಶೀಲಿಸಿತು.  ಈ ತರಹದ ಸಸ್ಯವು ಎರಡು ವಾರಗಳಲ್ಲಿ ತಾನೇ ದ್ವಿಗುಣವಾಗುತ್ತದೆ. ನಿಯಂತ್ರಿಸದಿದ್ದರೆ ಅದು ಜಲಚರ ಸಸ್ಯಗಳಿಗೆ AmruthHalli-Kere36ತಲುಪುವ ಸೂರ್ಯನ ಕಿರಣವನ್ನು ತಡೆದು, ನೀರಿನಲ್ಲಿ ಆಮ್ಲಜನಕದ ಕೊರತೆ ಉಂಟುಮಾಡಿ ಮೀನು/ಆಮೆಗಳನ್ನು ಕೊಲ್ಲುತ್ತದೆ. ನೀರಿನ ಗಂಟೆಹೂವಿನ ಕ್ಷಿಪ್ರ ಬೆಳವಣಿಗೆಯು ಕೆರೆಗಳಿಗೆ ಕೊಳಚೆ ನೀರಿನ ಪ್ರವೇಶದ ಕಾರಣದಿಂದ ಆಗುತ್ತದೆ. ಮಾಲಿನ್ಯದ ವಿಪತ್ತನ್ನು ಬಗೆಹರಿಸದಿದ್ದರೆ ನೀರಿನ ಗಂಟೆಹೂವಿನ ಬೆಳವಣಿಗೆಯನ್ನು ನಿಯಂತ್ರಿಸಲಾಗುವುದಿಲ್ಲ.  ಪರೀಕ್ಷಾ-ತನಿಖೆ ನಡೆಸಿದ ಮೂರು (ಅಮೃತಹಳ್ಳಿ, ಗರುಡಾಚಾರ್‌ಪಾಳ್ಯ ಮತ್ತು ಕಲ್ಕೆರೆ-ರಾಂಪುರ) ಕೆರೆಗಳಲ್ಲಿ, ಪೂರ್ಣ ನೀರು ಹರಡಿರುವ ಪ್ರದೇಶವನ್ನು ನೀರಿನ ಗಂಟೆ ಹೂ ವ್ಯಾಪಿಸಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಒಂಭತ್ತು (ಅಮೃತಹಳ್ಳಿ, ಬೆಳ್ಳಂದೂರು, ಗರುಡಾಚಾರ್ ಪಾಳ್ಯ, ಕಲ್ಕೆರೆ-ರಾಂಪುರ, ಕೆಂಪ್ಕೆರೆ, ಕೋಳಿಕೆರೆ, ಉನ್ಕಲ್, ವರ್ತೂರು ಮತ್ತು ಯಲಹಂಕ) ಕೆರೆಗಳಲ್ಲಿ ಈ ಆಕ್ರಮಣಕಾರಿ ಪ್ರಭೇದವನ್ನು ಒಳಹರಿವು ಮತ್ತು ಹೊರಹರಿವುಗಳ ಬಳಿ ಗಮನಿಸಲಾಯಿತು. ಬಿಬಿಎಂಪಿಯ ೧೦ ಕೆರೆಗಳಲ್ಲಿ (ಅಂಬ್ಲೀಪುರ ಮೇಲಿನಕೆರೆ, ಅಟ್ಟೂರು, ಚಿನ್ನಪ್ಪನಹಳ್ಳಿ, ದಾಸರಹಳ್ಳಿ, ಕೈಗೊಂಡನಹಳ್ಳಿ, ಕಸನವಹಳ್ಳಿ, ಕೋಗಿಲು, ಕೌದೇನಹಳ್ಳಿ, ತಿರುಮೇನಹಳ್ಳಿ ಮತ್ತು ಯಲಹಂಕ) ಆಕ್ರಮಣಕಾರಿ ಪ್ರಭೇದಗಳನ್ನು ತೆಗೆದುಹಾಕುವ ಕಾಮಗಾರಿಗಳ ಮೇಲೆ ೯.೮೩ ಲಕ್ಷವನ್ನು ವೆಚ್ಚ ಮಾಡಲಾಗಿತ್ತು. ನೀರಿನ ಮೂಲವನ್ನು ಪ್ರವೇಶಿಸುವ ಕೊಳಚೆನೀರಿನ ಮಾರ್ಗಾಂತರಣದಿಂದ ನೀರಿನ ಗಂಟೆಹೂಗಳ ಬೆಳವಣಿಗೆಯನ್ನು ಗಮನಿಸಲಾಯಿತು ಮತ್ತು ಕೆರೆಯ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯು ಅಂತಹ ಆಕ್ರಮಣಕಾರಿ ಪ್ರಭೇದಗಳನ್ನು ತೆಗೆದುಹಾಕುತ್ತದೆ ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿತು (ಮಾರ್ಚ್ ೨೦೧೫). ನೀರಿನ ಗಂಟೆಹೂವಿನ ಬೆಳವಣಿಗೆಯು ಕೆರೆಗಳನ್ನು ಪ್ರವೇಶಿಸುವ ಕೊಳಚೆ ನೀರಿನಿಂದ ಎಂಬ ಪರಿಕಲ್ಪನೆಗೆ ಈ ಉತ್ತರವು ವಿರುದ್ಧವಾಗಿತ್ತು. ಪ್ರಭೇದಗಳನ್ನು ತೆಗೆದುಹಾಕುವುದರಲ್ಲಿ ಮಾತ್ರ ಪರಿಹಾರವಿಲ್ಲ ಆದರೆ ಕೆರೆಗಳಿಗೆ ಕೇವಲ ಸಂಸ್ಕರಿಸಿದ ನೀರಿನ ಪ್ರವೇಶದಿಂದ ಮಾತ್ರ ಇದನ್ನು ಖಚಿತಪಡಿಸಿಕೊಳ್ಳಬಹುದು.

ಮೀನುಗಳ ಹಾನಿಕಾರಕ ಮತ್ತು ಆಕ್ರಮಣಕಾರಿ ಪ್ರಭೇದಗಳು

ಕೆರೆಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ನಿಯಂತ್ರಿಸುವುದು ಮೀನುಗಾರಿಕೆ ಇಲಾಖೆಯ ಹೊಣೆಯಾಗಿರುತ್ತದೆ. ಕೆರೆಗಳಲ್ಲಿ ಮೀನು ಸಂತತಿಯನ್ನು ಹೆಚ್ಚಿಸಲು ಸ್ಥಳೀಯ ಮೀನುಗಳನ್ನು ಪಾಲನೆ ಮಾಡಬೇಕು ಮತ್ತು ಆಕ್ರಮಣಕಾರಿ ಪ್ರಭೇದಗಳನ್ನು ತಪ್ಪಿಸಬೇಕು. ಸ್ಥಳೀಯ ಮೀನುಗಳ ಉಳಿವಿಗೆ ಹಾನಿಕಾರಕವಾಗುವ ಆಕ್ರಮಣಕಾರಿ ಮೀನುಗಳ ಪ್ರಭೇದಗಳನ್ನು ಸಾಕುವುದರ ಬಗ್ಗೆ ಅನುμನ ಸಂಸ್ಥೆಗಳಿಗೆ ಅರಿವಿರಲಿಲ್ಲ. ಮೈಸೂರಿನ ಮೀನುಗಾರಿಕೆ ಸಹಾಯಕ ನಿರ್ದೇಶಕರು ಮೈಸೂರಿನ  ದಳವಾಯಿ ಕೆರೆಯಲ್ಲಿ ಆಫ್ರಿಕನ್ ಕ್ಯಾಟ್‌ಫಿಶ್ ತಳಿಯನ್ನು ಸಾಕಬಾರದೆಂದು ಮೀನುಗಾರಿಕೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು (ಜುಲೈ ೨೦೧೪). ಆದರೆ, ಮೇಲ್ವಿಚಾರಣೆಯ ಕೊರತೆಯಿಂದ ಮತ್ತು ಮೀನುಗಾರಿಕೆ ಇಲಾಖೆಯಿಂದ ದಂಡ ನಿಬಂಧನೆಗಳು ಕಟ್ಟುನಿಟ್ಟಾಗಿ ಜಾರಿಯಿರಲಿಲ್ಲವಾದ್ದರಿಂದ, ಕ್ಯಾಟ್‌ಫಿಶ್ ಅನ್ನು ಸಾಕುವುದು ಮುಂದುವರೆದಿತ್ತು. ಕೈಗೊಂಡನಹಳ್ಳಿ ಕೆರೆಯಲ್ಲಿ ಮೀನಿನ ಈ ಆಕ್ರಮಣಕಾರಿ ಪ್ರಭೇದವು ಜಲಾನಯನ ಪ್ರದೇಶದಿಂದ ಕೆರೆಯನ್ನು ಪ್ರವೇಶಿಸಿದೆ ಮತ್ತು ಸ್ಥಳೀಯ ಮೀನುಗಳನ್ನು ಧ್ವಂಸ ಮಾಡುತ್ತಿದೆ ಎಂದು ಕೆರೆಯನ್ನು ನಿರ್ವಹಿಸುತ್ತಿರುವ ಸಂಸ್ಥೆಯು (ಎಮ್‌ಪಿಎಸ್‌ಎಮ್‌ಎಎಸ್) ಲೆಕ್ಕಪರಿಶೋಧನೆಗೆ ತಿಳಿಸಿತು.

ಕೆರೆಗಳ ಬಫರ್ ವಲಯವನ್ನು ರಚಿಸುವುದು ಮತ್ತು ಸಂರಕ್ಷಿಸುವುದು

ಕೆರೆಯ ಗಡಿಯುದ್ದಕ್ಕೂ ೩೦ ಮೀಟರ್‌ಗಳಿಗೆ ಕಡಿಮೆಯಿಲ್ಲದ ವಿಸ್ತಾರದ ಬಫರ್ ವಲಯವನ್ನು ರಚಿಸುವಂತೆ ರಾಜ್ಯ ಸರ್ಕಾರವು ಸೂಚನೆಗಳನ್ನು (ಮಾರ್ಚ್ ೨೦೦೮ರಲ್ಲಿ ಮತ್ತು ಅಕ್ಟೋಬರ್ ೨೦೦೮ರ ಒಪ್ಪೋಲೆ) ಹೊರಡಿಸಿತ್ತು. ಬಫರ್ ವಲಯವು ಜಲಮೂಲದ ಪರಿಧಿಯ ಉದ್ದಕ್ಕೂ ನೈಸರ್ಗಿಕವಾಗಿ ಬೆಳೆಯುವ ವೈವಿಧ್ಯಮಯ ಸಸ್ಯವರ್ಗವನ್ನು ಒಳಗೊಂಡಿರುತ್ತದೆ ಮತ್ತು ಅದು ಈ ಕೆಳಗಿನವುಗಳಾಗಿ ವರ್ತಿಸುತ್ತದೆ; ಕೆಸರು ಹಾಗೂ ಪೌಷ್ಟಿಕತೆಯ ಪರಿವರ್ತನೆ; ಲೋಹ ಹಾಗೂ ಮತ್ತಿತರ ಮಾಲಿನ್ಯಕಾರಕಗಳನ್ನು ಕಡಿಮೆಗೊಳಿಸುವುದು; ಒಳವ್ಯಾಪಿಸುವಿಕೆಯ ಮೂಲಕ ಮಳೆನೀರು ಹರಿದು ಹೋಗುವುದನ್ನು ಕಡಿಮೆ ಮಾಡುವುದು; ನೀರಿನ ತಾಪಮಾನವನ್ನು ಕಡಿಮೆಗೊಳಿಸುವುದು, ಸುಲಭ ಪ್ರವೇಶವನ್ನು ಸೀಮಿತಗೊಳಿಸುವ ಹಾಗೂ ಶಬ್ದ, ಬೆಳಕು, ತಾಪಮಾನ ಹಾಗೂ ಇತರೆ ಬದಲಾವಣೆಗಳ ತೀಕ್ಷ್ಣ ಪ್ರಭಾವಗಳನ್ನು ಕನಿಷ್ಟ ಮಟ್ಟಕ್ಕೆ ತರುವ ಮೂಲಕ ಮಾನವನಿಂದ ಉಂಟಾಗುವ ಪ್ರಭಾವಗಳನ್ನು ಇಳಿಮುಖಗೊಳಿಸುವುದು; ಮತ್ತು ಆಂತರಿಕ ಜೌಗುಭೂಮಿ ಸಸ್ಯವರ್ಗದ ಸಂರಕ್ಷಣೆ ಹಾಗೂ ವಿಲಕ್ಷಣ ಪ್ರಭೇದಗಳ (ನೀರಿನ ಗಂಟೆಹೂವಿನಂತಹ) ದಾಳಿಗೆ ತಡೆಯಾಗಿ ವರ್ತಿಸುತ್ತದೆ. ಇದಲ್ಲದೆ, ಬಫರ್ ವಲಯವು ಮನರಂಜನಾ ಚಟುವಟಿಕೆಗಳಿಗೆ ಜಾಗ ಒದಗಿಸುತ್ತದೆ ಹಾಗೂ ಒತ್ತುವರಿಗಳಿಗೆ ತಡೆ ಒಡ್ಡುತ್ತದೆ.  ಪರೀಕ್ಷಾ-ತನಿಖೆ ನಡೆಸಿದ ಯಾವುದೇ ಕೆರೆಗಳ ಪರಿಧಿಯಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅಥವಾ ನಿರ್ಮಾಣ ಚಟುವಟಿಕೆಗಳನ್ನು ನಿಯಂತ್ರಿಸುವ ಮೂಲಕ ಬಫರ್ ವಲಯವನ್ನು ರಚಿಸಿರಲಿಲ್ಲ.  ಬದಲಾಗಿ ಕೊಳೆಗೇರಿ, ರಸ್ತೆಗಳ ಮತ್ತು ವಸತಿ ಬಡಾವಣೆಗಳ ರಚನೆ, ಕಟ್ಟಡಗಳು/ಅಪಾರ್ಟ್‌ಮೆಂಟ್‌ಗಳ ನಿರ್ಮಾಣ, ಶಾಲೆಗಳ ಕಾರ್ಯನಿರ್ವಹಣೆ, ಅರಣ್ಯ ಇಲಾಖೆ ಸಿಬ್ಬಂದಿ ವಸತಿಗೃಹಗಳ ನಿರ್ಮಾಣ, ಮುಂತಾದವುಗಳಿಂದ ಕೆರೆಗಳ ಪರಿಧಿಯನ್ನು ಹಾಳು ಮಾಡಲಾಗಿತ್ತು. ಬೆಂಗಳೂರಿನ ಪರೀಕ್ಷಾ-ತನಿಖೆ ನಡೆಸಿದ ಎಲ್ಲ ೩೪ ಕೆರೆಗಳಲಿ, ಬಫರ್ ವಲಯದ ಸಂಭಾವ್ಯ ಉಲ್ಲಂಘನೆಗಳನ್ನು ಗಮನಿಸಲಾಯಿತು.

ಚಿನ್ನಪ್ಪನಹಳ್ಳಿ ಮತ್ತು ಕೈಗೊಂಡನಹಳ್ಳಿ ಕೆರೆಗಳ ಸಂಬಂಧವಾಗಿ ಬಿಬಿಎಂಪಿಯ ಟೌನ್ ಪ್ಲಾನಿಂಗ್ ವಿಭಾಗವು ಕಟ್ಟಡ ನಕ್ಷೆಗಳನ್ನು ಮಂಜೂರು ಮಾಡುವಾಗ, ಬಫರ್ ವಲಯದ ಪರಿಕಲ್ಪನೆಯನ್ನೇ ಪರಿಗಣಿಸಲಿಲ್ಲ, ಹೀಗಾಗಿ ಅದು ಬಫರ್ ವಲಯದ ಉಲ್ಲಂಘನೆಯಲ್ಲಿ ಪರಿಣಮಿಸಿತು.  ಪರೀಕ್ಷಾ- ತನಿಖೆ ನಡೆಸಿದ ಮೇಲಿನ ಎರಡೂ ಕೆರೆಗಳಲ್ಲಿ ಬಫರ್ ವಲಯದ ಉಲ್ಲಂಘನೆಯನ್ನು ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿ ಗಮನಿಸಲಾಯಿತು. ಈ ಕೆರೆಗಳ ನಿರ್ವಹಣೆಯಲ್ಲಿ ಒಳಗೊಂಡಿರುವ ಸರ್ಕಾರೇತರ ಸಂಸ್ಥೆಗಳೂ ಸಹ ಭೂಅಭಿವೃದ್ಧಿದಾರರಿಂದ ಬಫರ್ ವಲಯದ ಉಲ್ಲಂಘನೆ ಆಗಿರುವುದನ್ನು ತಿಳಿಸಿದವು ಹಾಗೂ ಅವು ಬಫರ್ ವಲಯದ ರಚನೆಯನ್ನು ಪ್ರತಿಪಾದಿಸಿದವು. ೩೦ ಮೀಟರ್‌ಗಳ ಬಫರ್ ವಲಯವನ್ನು ಹೊರತುಪಡಿಸಿ, ವಸತಿ ಬಡಾವಣೆಯ ನಕ್ಷೆಗಳನ್ನು ಅನುಮೋದಿಸಲಾಯಿತು ಎಂದು ಟೌನ್ ಪ್ಲಾನಿಂಗ್ ಸದಸ್ಯರು (ಬಿಡಿಎ) ತಿಳಿಸಿದರು (ನವೆಂಬರ್ ೨೦೧೪).

ಆದರೆ, ಪರೀಕ್ಷಾ-ತನಿಖೆ ನಡೆಸಿದ ನಾಲ್ಕು ಕೆರೆಗಳ (ಬಿ.ಚನ್ನಸಂದ್ರ, ಹೊರಮಾವು-ಅಗರ, ಜಕ್ಕೂರು-ಸಂಪಿಗೇಹಳ್ಳಿ ಮತ್ತು ಕಲ್ಕೆರೆ-ರಾಂಪುರ) ಬಫರ್ ವಲಯಗಳಲ್ಲಿ ಖಾಸಗಿ/ಬಿಡಿಎ ಬಡಾವಣೆಗಳು ನಿರ್ಮಾಣವಾಗಿರುವುದನ್ನು ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿ ಗಮನಿಸಲಾಯಿತು. ಸರ್ಕಾರ ಕೆರೆಗಳನ್ನು ಯೋಜನೆ ಅಥವಾ ಒಂದು ಕಾಮಗಾರಿ ಎಂದಷ್ಟೇ ಪರಿಗಣಿಸದೆ, ನಮ್ಮ ಸಂಸ್ಕೃತಿಯ ಪ್ರತೀಕ, ಜೀವಜಲ ಮೂಲ ಎಂದು ಭಾವಿಸಿ ಅಭಿವೃದ್ಧಿ ಕೈಗೊಂಡರೆ, ಸಸ್ಯ-ಪ್ರಾಣಿ ಸಂಕುಲಗಳೂ ನೆಲೆ ಕಂಡುಕೊಳ್ಳುತ್ತವೆ. ಇದು ಇನ್ನು ಮುಂದಾದರೂ ಆಗಲಿ ಎಂಬುದೇ ಆಶಯ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*