ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರು ಉಳಿಸರೀss… ಬದುಕು ಉಳಿತೈತಿ..!

‘ನೀರು’ ಅನ್ನೊ ಜೀವದ್ರವ್ಯದ ಬಗ್ಗೆ ನಮ್ಮ ನಿರ್ಲಕ್ಷ ಮಿತಿಮಿರೇತಿ. ಒಂದು ಲೀಟರ್ ಬಾಟಲಿಗೆ ೨೦ ರೂಪಾಯಿ ಕೊಟ್ಟು ನೀರು ಕುಡಿಯುವಂಗss ಆಗಿದ್ರು ನಮ್ಗ ಅರಿವಾಗಿಲ್ಲ. ಇಷ್ಟ ಯಾಕs – ಎರಡ ದಿನಕ್ಕ ಬರೊ ನೀರು ನಾಲ್ಕ ದಿನಕ್ಕ, ನಾಲ್ಕ ದಿನಕ್ಕ ಬರೊ ನೀರು ಎಂಟ ದಿನಕ್ಕ, ಎಂಟ ದಿನಕ್ಕ ಬರೊ ನೀರು ೧೫ ದಿನಕ್ಕ, ೧೫ ದಿನದ ನೀರು ತಿಂಗಳಿಗೊಮ್ಮೆ ಬರೊವಂಗ ಆಗಿದ್ರು ನಮ್ಗ ನೀರಿನ ಬಗ್ಗೆ ಅರಿವು ಬಂದಿಲ್ಲ. ೨೦೨೫ರ ಹೊತ್ತಿಗೆ ನೀರಿಗಾಗಿ ಯುದ್ಧ ನಡಿಯೋದೈತಿ ಅಂಥ ಈಗಾಗಲೇ ಬಹಿರಂಗ ಆಗಿದ್ರೂ, ನಮ್ಮ ಕಬರಗೇಡಿತನ ಸುಧಾರಿಸಿಲ್ಲ. ಏಕಾಏಕಿ ನೀರಿನ ಬಗ್ಗೆ ಮಾತು ಶುರುಮಾಡೇನಿ ಅಂದ್ರ ನಿಮ್ಗೂ ಗೊತ್ತ ಆಗಿರತೈತಿ ಈ ವರ್ಷದ ಬಿಸಲಿನ ಬಿಸಿಯಿಂದ ಅಂ. ಹಂಗಾಗಿ ಈ ವರ್ಷರ ಎಚ್ಚರಾಗಬೇಕು ಅನ್ನೊ ಕಳಕಳಿಗೆ ನನ್ನ ಮಾತು.

ಈ ನೀರಿನ ಬಗ್ಗೆ ಮಾತಾಡೊದಕ್ಕ ಈ ವರ್ಷದ ಬ್ಯಾಸಗಿ ಎಷ್ಟ ಕಾರಣೊ, ಅಷ್ಟ ಕಾರಣ ಅಂತರಾಷ್ಟ್ರೀಯ ಜಲತಜ್ಞ ರಾಜೇಂದ್ರಸಿಂಗ್‌ರು. ರಾಜೇಂದ್ರಸಿಂಗ್ ಅವ್ರಿಗೆ ‘ಭಾರತ ನೀರಿನ ಮನುಷ್ಯ’ ಎಂಬ ಬಿರುದಿನೊಂದಿಗೆ ಈಗಾಗಲೇ ಮ್ಯಾಗ್ಸೇಸ್ಸೆ, ನೀರಿನ ನೊಬೆಲ್ ಪ್ರಶಸ್ತಿ ಅಂಥ ಕರೆಯೊ ಸ್ಟಾಕ್‌ಹೋಮ್ ಜಲಪ್ರಶಸ್ತಿಗಳ ಜೊತಿಗೆ ಇತ್ತೀಚಿಗೆ ಹುಲಕೋಟಿಯ ಕೆ.ಎಚ್.ಪಾಟೀಲ ಗ್ರಾಮಾಭಿವೃದ್ಧಿ ರಾಷ್ಟ್ರೀಯ ಪ್ರಶಸ್ತಿ ಕೂಡಾ ನೀಡಿ ಗೌರವಿಸಿದ ದೊಡ್ಡ ಮನುಷ್ಯ. ಜೀವಜಲ ಉಳಿಸೊ, ಭೂತಾಯಿ ಒಡಲಿನ ಬಗ್ಗೆ ಕಾಳಜಿ ಇರೊ ಪುಣ್ಯಾತ್ಮ. ಈ ಜೀವಪರ ಕಾಳಜಿ ಇರೊ ವ್ಯಕ್ತಿಗೆ ಜೀವಪರ, ಜನಪರ ಕಾಳಜಿಯ ಕನ್ನಡದ ಜಗದ್ಗುರು ಡಾ.ತೋಂಟದ ಸಿದ್ಧ್ದಲಿಂಗ ಮಹಾಸ್ವಾಮಿಗಳು ತಮ್ಮ  ತೋಂಟದಾರ್ಯಮಠದ ಜಾತ್ರಿಯೊಳ್ಗ ಸನ್ಮಾನಿಸಿ ಗೌರವಿಸೊ ಕೆಲ್ಸಾ ಮಾಡಿದ್ರು. ಅವತ್ತು ಈ ವ್ಯಕ್ತಿ ಮಾತಾಡಿದ ಬಗ್ಗೆ ನಿಮ್ಗ ಹೇಳಬೇಕು ಅಂತ ಈ ಮಾತು ಶುರು ಮಾಡೇನಿ. ಇದಕ್ಕೂ ಮುಂಚೆ ರಾಜೇಂದ್ರಸಿಂಗ್ ಅವ್ರ ವೈಯಕ್ತಿಕ ಪರಿಚಯ ಮಾಡಿ ನಂತ್ರ ಅವ್ರು ಮಾತಾಡಿದ ಬಗ್ಗೆ ಹೇಳತೇನಿ.

r singhaಅವತ್ತಿನ ಕಾರ್ಯಕ್ರಮದೊಳ್ಗ ರಾಜೇಂದ್ರಸಿಂಗ್ ಅವರನ್ನ ಪರಿಚಯ ಮಾಡಿಕೊಟ್ಟವ್ರು ಮಾಜಿ ಶಾಸಕರು, ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ವಿಶೇಷ ಕಾಳಜಿ ಇರೊ ಡಿ.ಆರ್.ಪಾಟೀಲರು. ಡಿ.ಆರ್.ಪಾಟೀಲರು ರಾಜೇಂದ್ರಸಿಂಗ್‌ರ ಪರಿಚಯ ಆಗಿ ದಶಮಾನಕ್ಕೂ ಹೆಚ್ಚು ಕಾಲ ಆಗೇತಿ. ಅಷ್ಟಅಲ್ಲದ ರಾಜೇಂದ್ರಸಿಂಗ್ ಅವ್ರ ಕೆಲಸಗಳನ್ನು ಕಣ್ಣಾರೆ ಕಂಡು ಸ್ಪೂರ್ತಿಗೊಂಡವರು. ಜೊತಿಗೆ ಅವುಗಳನ್ನ ಈ ಭಾಗದಾಗೂ ಜಾರಿಗೆ ತರಬೇಕು ಅನ್ನೊ ಹುರುಪು ಹುಮ್ಮಸ್ಸುಗಳ ಜೊತಿಗೆ ಕಾಳಜಿ ಹೊಂದಿದ ವ್ಯಕ್ತಿತ್ವ ಡಿ.ಆರ್.ಪಾಟೀಲರದು. ಇದss ಸಂದರ್ಭದೊಳ್ಗ ಡಿ.ಆರ್.ಪಾಟೀಲರು ಗದಗ ಜಿಲ್ಲೆಯ ರೈತನೋರ್ವ ಈ ಬರಗಾಲದಾಗ ಬೆಳೆದಿರುವ ಪವಾಡಸದೃಶ್ಯದ ಕಥೆಯನ್ನು ಹೇಳಿದ್ರು, ಅದನ್ನು ನಿಮ್ಗ ಹೇಳತೇನಿ. ಮೊದಲ ಪಾಟೀಲರು ರಾಜೇಂದ್ರಸಿಂಗ್ ಅವ್ರ ಬಗೆಗೆ ಹೇಳಿದ ಮಾತು ಮತ್ತು ನಾನು ರಾಜೇಂದ್ರಸಿಂಗ್‌ರ ಬಗ್ಗೆ ಓದಿದರ ಆಧಾರದ ಮ್ಯಾಲೆ ಅವ್ರ ಸಣ್ಣ ಪರಿಚಯ ಮಾಡತೇನಿ.

೧೯೫೯ ರಲ್ಲಿ ರಾಜಸ್ಥಾನದ ಮೀರತ್ ಸಮೀಪದ ಬಾಗಪತ್ ಜಿಲ್ಲೆಯ ದೌಲಾದ ಕೃಷಿ ಕುಟುಂಬದಲ್ಲಿ ರಾಜೇಂದ್ರಸಿಂಗ್‌ರು ಹುಟ್ಟಿದ್ರು. ಅವ್ರ ತಂದೆ-ತಾಯಿಗೆ ಏಳು ಮಕ್ಕಳಲ್ಲಿ ಮೊದಲನೆಯವ್ರು. ಋಷಿಕುಲದ ಆಯುರ್ವೇದ ಮಹಾವಿದ್ಯಾಲಯದಲ್ಲಿ ಪದವಿ, ಹಿಂದಿ ಸಾಹಿತ್ಯದಲ್ಲಿ ಎಂಎ ಪದವಿ ಗಳಿಸಿ ರಾಜೇಂದ್ರಸಿಂಗ್‌ರು ಸರ್ಕಾರಿ ನೌಕರಿಗೆ ಸೇರಿದ್ರು. ಅಲ್ಲಿನ ವ್ಯವಸ್ಥೆಗೆ ಹೊಂದಿಕೊಳ್ಳೊದು ಸಿಂಗ್‌ರಿಗೆ ಕಷ್ಟ ಆತು. ಅಷ್ಟರೊಳ್ಗ ಸಿಂಗ್ ಅವ್ರು ‘ತರುಣ ಭಾರತ ಸಂಘ’ ಅನ್ನೊ ಸಂಘಟನೆ ಸೇರಿದ್ರು. ಈ ಮಧ್ಯ ಸರ್ಕಾರಿ ನೌಕರಿಯಲ್ಲಿ ಹಿರಿಯ ಅಧಿಕಾರಿಗಳಿಗೆ ಅಭಿವೃದ್ದಿ ಅನ್ನೊದು ಬೇಡ ಅನ್ನೊ ವಿಷಯ ತಿಳಿದು ಮನನೊಂದಿದ್ದರು. ನೌಕರಿ ಮಾಡೊದರೊಳ್ಗ  ಅರ್ಥ ಇಲ್ಲ ಅನ್ಕೊಂಡು ಸರ್ಕಾರಿ ನೌಕರಿಗೆ ರಾಜೀನಾಮೆ ಕೊಟ್ರು.

ರಾಜೇಂದ್ರಸಿಂಗ್‌ರಿಗೆ ಮದುವೆಯಾಗಿ ಪತ್ನಿ ಮೀನಾ ಅವ್ರು ತವರಿಗೆ ಹೆರಿಗೆಗೆ ಹೋಗಿದ್ರು. ಆ ಸಂದರ್ಭದಲ್ಲಿ ಉಪಯುಕ್ತವಾದ ಮತ್ತು ಆಸಕ್ತಿದಾಯಕವಾದ ಏನಾದರೂ ಕೆಲಸ ಮಾಡಬೇಕು ಅಂದುಕೊಂಡ್ರು. ಮನಿಯೊಳ್ಗ ಅವ್ರ ಪತ್ನಿ ಸಂಗ್ರಹಿಸಿಟ್ಟ ವಸ್ತುಗಳನ್ನ ಎಲ್ಲಾ ಮಾರಿ ಬಂದ ೩೦ಸಾವಿರ ರೊಕ್ಕ ತೊಗೊಂಡು ತಮ್ಮ ತಭಾಸಂ(ತರುಣ ಭಾರತ ಸಂಘ)ನ ನಾಲ್ಕು ಗೆಳೆಯರ ಕೂಡ ಊರು ಬಿಟ್ರು. ಎಲ್ಲಿಗೆ ಹೋಗಬೇಕು ಅನ್ನೊದು ಸ್ಪಷ್ಟ ಇರಲಿಲ್ಲ. ರಾಜಸ್ಥಾನದ ಯಾವುದರs ಊರಿಗೆ ಹೋಗಿ ಕೆಲ್ಸಾ ಮಾಡೊ ನಿರ್ಧಾರ ಮಾಡಿಕೊಂಡಿದ್ರು. ಹಿಂದುಳಿದ ಗ್ರಾಮಕ್ಕೆ ಹೋಗುವ ಬಸ್ಸೊಂದನ್ನು ಹತ್ತಿ ಕಂಡಕ್ಟರ್‌ಗ ಸಿಂಗ್ ಅವ್ರು ಹೇಳಿದ್ದು ‘ಕೊನಿ ಸ್ಟಾಪ್‌ಗೆ ೫ ಟೀಕೆಟ್ ಕೊಡ್ರಿ’. ಕಂಡಕ್ಟರ್ ‘ಯಾಕ್ರಿ ಊರ ಹೆಸರು ಗೊತ್ತಿಲ್ಲಾ’? ಅದಕ್ಕ ಉತ್ತರ ಕೂಡಾ ‘ಗೊತ್ತಿಲ್ಲರೀ’, ಕೇಳಿ ಕಂಡಕ್ಟರ್‌ಗೆ ವಿಚಿತ್ರ ಅನಿಸಿತು. ಕೊನೆ ಸ್ಟಾಪ್ ಬಂದಿದ್ದು ಅಲ್ವಾರ್ ಜಿಲ್ಲೆಯ ತಾನಾಗಳಿ ತಾಲೂಕಿನ ಕಿಶೋರಿ ಗ್ರಾಮ. ಅಕ್ಟೋಬರ್ ೨, ೧೯೮೫ ರಂದು ಆ ಊರು ತಲುಪಿದರು.

ಆ ಕಾಲದಲ್ಲಿ ಪಂಜಾಬಿನಲ್ಲಿ ಸಿಖ್ ಉಗ್ರರ ಹಿಂಸಾಕೃತ್ಯಗಳು ಜೋರಾಗಿದ್ದವು. ಸಿಂಗ್ ಅವ್ರು ತಂಡವನ್ನು ಕಿಶೋರಿ ಗ್ರಾಮದವರು ಇವ್ರು ‘ಉಗ್ರರು ಅಥವಾ ಭಯೋತ್ಪಾದಕರು’ ಇರಬೇಕು ಎಂದು ಸಂಶಯದಿಂದ ನೋಡಿದ್ರು. ಗ್ರಾಮದ ಯುವಕರೆಲ್ಲರೂ ಪೇಟೆಗೆ ವಲಸೆ ಹೋಗಿದ್ದರಿಂದ ಗ್ರಾಮದಾಗ ಯುವಕರು ಇರಲಿಲ್ಲ. ಹೀಂಗಾಗಿ ಈ ಹಿಂದುಳಿದ ಗ್ರಾಮಕ್ಕಾದರೂ ಭಯೋತ್ಪಾದಕರಾದ್ರು ಯಾಕ ಬರ‍್ತಾರ ಎಂದು ಹಿರಿಯರೊಬ್ಬರು ಜನರಿಗೆ ಹೇಳಿ, ‘ಇಲ್ಲಿಗ್ಯಾಕ ಬಂದಿರೀ’ ಎಂದು ಸಿಂಗ್‌ರ ತಂಡಾನ ಪ್ರಶ್ನೆ ಮಾಡಿದ್ರು. ‘ಶಿಕ್ಷಣ ಮತ್ತು ಆರೋಗ್ಯದ ಕೆಲ್ಸಾ ಮಾಡಾಕ ಬಂದೇವಿ’ ಅಂದ್ರು, ಊರವರಿಗೆ ಇವ್ರ ಮ್ಯಾಲಿನ ಸಂಶಯ ಕಡ್ಮಿ ಆಗಲಿಲ್ಲ.

ರಾಜೇಂದ್ರಸಿಂಗ್‌ರ ತಂಡಕ್ಕ ಊರಿನ ಹನುಮಪ್ಪನ ಗುಡಿಯೊಳ್ಗ ಆಶ್ರಯ ಸಿಕ್ಕಿತು. ಆದ್ರ ಒಂದ ವಾರಕ್ಕ ಹನುಮಪ್ಪನ ಪೂಜಾರಿ ಇವ್ರನ್ನ ಹೊರ‍್ಗ ಹಾಕಿದ. ಅಷ್ಟರೊಳ್ಗ ಇವ್ರು ಊರವರ ಕೂಟ ಸಂಬಂಧ ಬೆಳೆಸಿ ಹೇಗೂ ತಮ್ಮ ಕೆಲ್ಸಾ ಶುರು ಮಾಡಿದ್ರು. ಆದ್ರೂ ಜನ ‘ಯಾಕ ಬಂದಿರೀ’ ಅನ್ನೊ ಪ್ರಶ್ನೆ ಮಾತ್ರ ಬಿಟ್ಟಿರಲಿಲ್ಲ. ನಿಜವಾಗಿ ಏನೂ ಮಾಡಬೇಕು ಅನ್ನೊದು ಇವ್ರಿಗೂ ಗೊತ್ತು ಇರ‍್ದ ಇದ್ದಿದ್ದರಿಂದ ರಾಜೇಂದ್ರಸಿಂಗ್ ಅವ್ರು ಕಲಿತ ಆಯುರ್ವೇದ ವೈದ್ಯಕೀಯ ಸೇವೆಯನ್ನ ಪಕ್ಕದ ಗೋಪಲಾಪುರ ಗ್ರಾಮದೊಳ್ಗ ಶುರು ಮಾಡಿದರು. ೬ ತಿಂಗಳ ಕಳಿಯ ಹೊತ್ತಿಗೆ ೬೦ ವರ್ಷದ ಮಂಗೂಲಾಲ್ ಎಂಬ ಯಜಮಾನರೊಬ್ರು “ಶಿಕ್ಷಿತರಾದ ನೀವು ಮಾತಾಡೋದಷ್ಟ ನಿಮ್ಗ ಗೊತ್ತು, ನಿಮ್ಮ ಕೈಯಿಂದ ಏನೂ ಆಗೋದಿಲ್ಲ. ನಮ್ಮ ಹಳ್ಳಿ ಜನಕ್ಕ ಶಾಲಿನೂ ಬ್ಯಾಡ, ಔಷದ್ಯಾನೂ ಬ್ಯಾಡ ಇದ್ನ ಬಿಟ್ಟು ಜನರಿಗೆ ಉಪಯೋಗ ಆಗುವಂತಹದ್ದು ಏನಾದ್ರೂ ಮಾಡುವಂಗಿದ್ರ ಮೊದ್ಲ ಹಾರೆ, ಗುದ್ದಲಿ ತನ್ನಿ ಎಂದು ನೇರವಾಗಿ ಮುಖಕ್ಕ ಹೊಡಿಯುವಂಗ ಹೇಳಿದ್ರು.

ಮಂಗೂಲಾಲ್ ಅವ್ರು ಹೇಳಿದ ಮಾತನ್ನ ರಾಜೇಂದ್ರಸಿಂಗ್‌ರು ಗೆಳೆಯರಿಗೆ ಹೇಳಿದ್ದ ತಡಾ ಇಬ್ರು ಗೆಳೆಯಾರು “ನಾವು ಶಿಕ್ಷಿತರು; ನಮ್ಮ ನಿರ್ಧಾರ ನಾವ ತೊಗೊಂತೇವಿ, ಅದಕ್ಕ ಮಂಗೂಲಾಲ್ ಪಟೇಲರನ್ನು ಕೇಳಬೇಕಿಲ್ಲ” ಎಂದ್ರು. ಇದಕ್ಕ ಸಿಂಗ್‌ವ್ರು, ‘ಯಜಮಾನರ ಮಾತಿನೊಳ್ಗ ಅನುಭವ ಐತಿ, ಅವ್ರು ಮಾತು ಕೇಳೊದು ತಪ್ಪ ಅಲ್ಲಾ” ಎಂದ್ರು. ಇದಕ್ಕ ಒಪ್ಪದ ಇಬ್ರು ಗೆಳೆಯಾರು ಜೈಪುರದ ದಾರಿ ಹಿಡಿದ್ರು. ಉಳಿದಿಬ್ರು “ನಾವು ಶಾಲಿಯೊಳ್ಗ ಪಾಠ ಮಾಡತೇವಿ ಹೊರ‍್ತು ಗುದ್ದಲಿ ಹಾರಿ ಹಿಡಿದು ಕೆಲಸ ಮಾಡೊದಿಲ್ಲ” ಅಂಥ ಕರಾರುವಕ್ಕಾಗಿ ಹೇಳಿ ಅವ್ರು ಅಲ್ಲಿಂದ ಕಾಲಕಿತ್ತರು.

ಮಂಗೂಲಾಲ್‌ರು ಹೇಳಿದಂಗ ಹಾರಿ ಗುದ್ದಲಿ ತೊಗೊಂಡು ರಾಜೇಂದ್ರಸಿಂಗ್‌ರು ಕೆಲ್ಸಾ ಶುರು ಮಾಡಿದ್ರು. ಇವ್ರಿಗೆ ಕೈಕೂಡಿಸೊದಕ್ಕ ಊರೊಳ್ಗ ಯಾರೊಬ್ಬ ಯುವಕರೂ ಇರಲಿಲ್ಲ. ಜೊತಿಗೆ ಮಂಗೂಲಾಲ್‌ರನ್ನ ಬಿಟ್ರ ಉಳಿದವ್ರಿಗೆ ಮೊದಮೊದಲ ಇದ್ರ ಬಗ್ಗೆ ಆಸಕ್ತಿ ಇರಲಿಲ್ಲ. ಆದ್ರ ಮಂಗೂಲಾಲ್‌ರ ಮಾತಿನ ಮ್ಯಾಲೆ ಸಿಂಗ್ ಅವ್ರಿಗೆ ವಿಶ್ವಾಸ ಇತ್ತು. ಹಿಂಗಾಗಿ ತಿಂಗಳಾನುಗಟ್ಟಲೆ ಒಬ್ರ ಕೆಲ್ಸಾ ಮಾಡಿದ್ರು ಸಿಂಗ್‌ರು ಬ್ಯಾಸರಾ ಮಾಡಕೊಳ್ಳಲಿಲ್ಲ. ಮಳೆಗಾಲದ ಹೊತ್ತಿಗೆ ಬಂದ ಕೆಲವು ಯುವಕರನ್ನು ಸಿಂಗ್‌ರಿಗೆ ಕೈಕೂಡಿಸಲು ಒಪ್ಪಿಸಿದ್ರು. ೩ ವರ್ಷದ ಹೊತ್ತಿಗೆ ೧೫ ಅಡಿ ಆಳದ ಒಂದss ದೊಡ್ಡ ಕೆರಿ ನಿರ್ಮಾಣ ಆತು. ಮಳೆ ಬಂದಿದ್ದ ತಡಾ ಆ ಕೆರಿ ನೀರಿನಿಂದ ತುಂಬಿತು. ಜೊತಿಗೆ ಊರಿನ ಸುತ್ತ-ಮುತ್ತಲಿನ ಬಾವಿಗೆ ನೀರs ಬಂದವು. ಇದನ್ನು ಕಂಡು ಅಕ್ಕಪಕ್ಕದವ್ರು ಮಳೆ ನೀರನ್ನು ಸಂಗ್ರಹಿಸುವ ಸಲುವಾಗಿ ದೊಡ್ಡ ದೊಡ್ಡ ಹೊಂಡಗಳನ್ನು ತೆಗೆಯುವ ಕೆಲ್ಸಾ ನಿರಂತರ ಶುರುಮಾಡಿದ್ರು. ಗೋಪಲಾಪುರದ ಈ ಸುದ್ದಿ ಎಲ್ಲೆಂದರಲ್ಲಿ ಹರಡಿತು. ಅಕ್ಕಪಕ್ಕದವ್ರು ಬಂದು “ನಮ್ಮ ಊರಿಗೆ ಬರ್ರಿ ನಮ್ಮ ಊರೊಳ್ಗು ಜೋಹಾಡ(ಮಳೆ ನೀರು ಹರಿದು ಬರುವ ಇಳಿಜಾರಿನ ಜಾಗದಲ್ಲಿ ಆ ನೀರನ್ನು ಸಂಗ್ರಹ ಮಾಡುವ ಕೆರೆ) ನಿರ್ಮಿಸಾಕ ಕರಿಯಾಕ್ಹತ್ತಿದ್ರು.

ರಾಜೇಂದ್ರಸಿಂಗ್‌ರು ತಮ್ಮ ತಭಾಸಂ ಗೆಳೆಯರು ಪಾದಯಾತ್ರೆ ಮೂಲಕ ‘ಕೆರೆ ತೋಡಿರಿ, ಜೋಹಾಡ ನಿರ್ಮಿಸರಿ’ ಎಂದು ಜನರಿಗೆ ಹೇಳಾಕ್ಹತ್ತಿದ್ರು. ಹಿಂಗ್ ಮಳೆ ನೀರು ಸಂಗ್ರಹಿಸೊ ಕೆಲ್ಸ ದೊಡ್ಡ ಕ್ರಾಂತಿಯಂಗ್ ಶುರುವಾಗಿ ದಿನದಿಂದ ದಿನಕ್ಕ ಅಂತರ್ಜಲ ಹೆಚ್ಚಅಕ್ಕೊಂತ ಹೊಂಟಿತು. ಮೂರು ವರ್ಷಕ್ಕ ಒಂದು ಜೋಹಾಡ ನಿರ್ಮಾಣ ಆದ್ರ, ಮುಂದ ಒಂದss ವರ್ಷದೊಳ್ಗ ೯ ನಿರ್ಮಾಣ ಆದವು. ೫ನೇ ವರ್ಷಕ್ಕ ೩೬, ೬ನೇ ವರ್ಷಕ್ಕ ೯೦, ಏಳನೇ ವರ್ಷಕ್ಕ ೨೧೦ ಹಿಂಗ್s ಜೋಹಾಡ್‌ಗಳ ಸಂಖ್ಯೆ ಬೆಳಕೊಂತ ಈಗ ೧೨೦೦ರ ಗಡಿದಾಟೇತಿ. ಈ ಜೋಹಾಡಗಳ ಜೊತಿಜೊತಿಗೆ ಸ್ಥಳದ ಅಗತ್ಯಕ್ಕ ಅನುಸಾರ ಅಲ್ಲಲ್ಲಿ ಹೊಳೆ-ಹಳ್ಳಗಳಿಗೆ ನೀರುಣಿಸುವ, ಸಣ್ಣ ಸಣ್ಣ ಆಣೆಕಟ್ಟು(ಹೊಳಗಟ್ಟಿ ಅಥವಾ ತಡೆಕಟ್ಟಿ)ಗಳನ್ನು ನಿರ್ಮಾಣ ಮಾಡಿ ಮತ್ತಷ್ಟು ಮತ್ತಷ್ಟು ಮಳೆ ನೀರನ್ನು ನಿಲ್ಲಿಸೊ ಕೆಲ್ಸಾ ಶುರುಮಾಡಿದ್ರು.

ಈ ಮಳೆ ನೀರು ಸಂಗ್ರಹದ ಫಲ ಅನ್ನೊವಂಗ ಮಳೆ ಕಡ್ಮಿ ಆಗೊ ರಾಜಸ್ಥಾನದೊಳ್ಗ ಎಲ್ಲಾ ನದಿಗಳು ನೀರಿನಿಂದ ತುಂಬಿ ಹರಿಯಾಕ್ಹತ್ತಿದವು. ಎಲ್ಲೆಂದರಲ್ಲೆ ನೀರು ನಿಂತು ವ್ಯವಸಾಯ ಶುರುವಾಗಿ ಶಹರದ ಕಡೆ ಮುಖಮಾಡಿದ್ದ ಯುವಕರು ಊರಿಗೆ ಬಂದು ಹಸಿರಿನಿಂದ ಬದಕು ಹಸಿರು ಮಾಡಿಕೊಂಡ್ರು. ಈ ಬದುಕು ಹಸಿರು ಆಗಿ ಉಸಿರು ಉಳಿಸಿಕೊಳ್ಳೊವಂಗ್ ಮಾಡಿದ ಕೀರ್ತಿ ರಾಜೇಂದ್ರಸಿಂಗ್‌ರದಾತು. ಅವ್ರ ವ್ಯಕ್ತಿತ್ವದ ಒಂದು ಸಣ್ಣ ಎಳಿ ನಿಮ್ಗ ಹೇಳೆನಿ.

ಇಂಥಾ ಕ್ರಾಂತಿ ಮಾಡಿದ ರಾಜೇಂದ್ರಸಿಂಗ್‌ರವ್ರು ಜಾತ್ರಿಯೊಳ್ಗ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾತು ನಿಮ್ಗ ಹೇಳಬೇಕು. “ಪೂಜ್ಯರ ಈ ಸನ್ಮಾನ ಕಡ್ಮಿ ಮಳೆ ಆಗೊ ರಾಜ್ಯದಿಂದ ಬಂದ ನನ್ಗ ಶಕ್ತಿ ನೀಡತೈತಿ. ಆದ್ರ ಕಡ್ಮಿ ಮಳೆ ಆದ್ರೂ ಕೂಡಾ ಬಿದ್ದ ಮಳೆ ನೀರನ್ನ ಸೂರ್ಯ ಕಳುವು ಮಾಡೊದಕ್ಕ ಬಿಡದಂಗ ನಾವು ಕೆಲ್ಸಾ ಮಾಡೇವಿ; ಮಾಡಾಕ್ಹತ್ತೇವಿ. ಸೂರ್ಯ ನೀರು ಕಳುವು ಮಾಡಲಾರದಂಗss ನಾವೇಲ್ಲ ಮಾಡಬೇಕು. ಭೂಮಿಯಿಂದ ನೀರು ತೆಗಿಯೊ ಮೂಲಕ ಭೂಮಿಯನ್ನು ಶೋಷಣೆ ಮಾಡೊ ತಂತ್ರಜ್ಞಾನ ಮಾತ್ರ ನಮ್ಮಲ್ಲಿ ಹೆಚ್ಚಾಗೇತಿ, ಹೊರ‍್ತು ಭೂಮಿಗೆ ನೀರು ಮರುಪೂರ್ಣ ಮಾಡೊ ಕೆಲ್ಸಾ ಇವತ್ತಿಗೂ ಆಗಿಲ್ಲ. ಆಗುತ್ತಿಲ್ಲ. ಇದರಿಂದ ಜಗದ್ಗುರುವಾಗಿದ್ದ ನಮ್ಮ ದೇಶ ಇವತ್ತು ಬೇರೆ ದೇಶದ ಮುಂದೆ ಬೇಡುವ ದೇಶವಾಗಾಕ್ಹತ್ತೇತಿ. ಅದಕ್ಕ ನಾವು ನಮ್ಮ ಪಾರಂಪರಿಕವಾದ ಜ್ಞಾನವನ್ನು ಉಳಿಸಿಕೊಂಡು ಅದನ್ನು ಪಾಲಿಸಿ ಗೌರವಿಸೊ ಕೆಲಸ ಮಾಡಬೇಕು. ಮಹಿಳೆ, ನೀರು, ನದಿ(ನೀರ್, ನಾರಿ, ನದಿ)ಗಳ ಬಗ್ಗೆ ನಮ್ಗ ಗೌರವ ಬರಬೇಕು. ಪಂಚೇಂದ್ರಿಯ ಪಂಚಭೂತಗಳ ಬಗ್ಗೆ ನಮ್ಗ ಅರಿವು ಬೇಕು. ಇವುಗಳನ್ನು ಉಳಿಸೊದಕ್ಕ ರಾಜ್, ಸಮಾಜ, ಸಂತರು(ರಾಜಕಾರಣಿಗಳು, ಸಮಾಜ, ಸ್ವಾಮಿಗಳು) ಸೇರಬೇಕು. ಭೂಮಿಯನ್ನು ಸಂಪನ್ನಗೊಳಿಸೊ ಕೆಲಸ ಮಾಡಬೇಕು ಅಂದ್ರ ಆ ಭೂಮಿ ನಮ್ಗ ಏನೆಲ್ಲ ಕೊಡತೈತಿ. ಭೂಮಿಗೆ ನಾವು ನೀರುಣಿಸಿದರೆ ಭೂಮಿ ನಮ್ಗ ಅನ್ನ ಕೊಡತೈತಿ ಅನ್ನೊ ಮಹತ್ವದ ಸಂದೇಶ ಮತ್ತ ಮತ್ತ ನಮ್ಗ ತಿಳಿಬೇಕು” ಅನ್ನೊ ಮಹತ್ವದ ಅನೇಕ ಮಾತುಗಳನ್ನ ಹೇಳಿದ್ರು. ಸಿಂಗ್‌ರ ಪ್ರತಿ ಮಾತಿನೊಳ್ಗ ನೀರಿನ ಕಳಕಳಿ ಎದ್ದ ಕಾಣತಿತ್ತು.

ರಾಜೇಂದ್ರಸಿಂಗ್‌ರ ಮಾಡಿದ ಕೆಲ್ಸಾ ಭಾಳ ದೂರದ್ದು ನೋಡೊದಕ್ಕ ಎಲ್ಲಾರಿಗೂ ಸಾಧ್ಯ ಆಗದ ಇರಬಹುದು. ಆದ್ರ ಮಳೆ ನೀರು ಸಂಗ್ರಹಿಸಿದ್ರ ಬದುಕು ಹಚ್ಚಹಸಿರು ಅಕ್ಕೈತಿ ಅನ್ನೊದಕ್ಕ ತಾಜಾ ಉದಾಹರಣೆಯೊಂದನ್ನ ಡಿ.ಆರ್.ಪಾಟೀಲರು ಹೇಳಿದ್ದನ್ನ ನಿಮ್ಗ ಹೇಳತೇನಿ. ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದ ಶರಣಪ್ಪ ಹದಲಿ ಅನ್ನೊ ರೈತರು ತಮ್ಮ ಹೊಲದೊಳ್ಗ ೯ ಕೃಷಿ ಹೊಂಡಗಳನ್ನ ಮಾಡಿಸಿ, ಮಳೆಗಾಲದಾಗ ಅವುಗಳನ್ನು ತುಂಬಿಸಿಕೊಂಡು ಈ ವರ್ಷದ ಬರಗಾಲದೊಳ್ಗ ಲಕ್ಷಾಂತರ ರೂಪಾಯಿ ಲಾಭ ಮಾಡ್ಯಾರಂತ. ಇದನ್ನ ನೋಡೊ ಕುತೂಹಲ ನನ್ಗೂ ಭಾಳ ಐತೀ ಆದ್ರ ಇನ್ನು ನೋಡೊದಕ್ಕ ಆಗಿಲ್ಲ. ನೀವು ಸಾಧ್ಯ ಆದ್ರ ನೋಡ್ರಿ!

ಈ ಕೃಷಿಹೊಂಡದ್ದು ದೊಡ್ಡ ಕಥೀನ ಐತಿ. ಯಾಕಂದ್ರ ನಮ್ಮ ಸರ್ಕಾರದ ಕೃಷಿಹೊಂಡದ ಯೋಜನೆಯೊಳ್ಗ ಬಹುತೇಕ ಲಕ್ಷಾಂತರ ಕೃಷಿ ಹೊಂಡ ಆಗೇವು. ಆದ್ರ ಇವು ಹೊಲದಾಗಿಲ್ಲ ಬದಲಾಗಿ ಸರ್ಕಾರದ ಕಾಗದದಾಗ ಮಾತ್ರ ಅದಾವು. ಈ ಯೋಜನಾ ಮಾಡೊ ಸರ್ಕಾರ, ಅವುಗಳನ್ನ ಜಾರಿ ಮಾಡಬೇಕಾದ ಅಧಿಕಾರಿಗಳು ಈ ಬಗ್ಗೆ ಮನಮುಟ್ಟುವಂಗs ಹೇಳಲಿಲ್ಲ. ಅವುಗಳನ್ನ ಬಳಸಿಕೊಳ್ಳಬೇಕಾದ ರೈತರು, ಬರೊ ನಾಲ್ಕ ದುಡ್ಡಿಗೆ ಆಸೆ ಬಿದ್ದು ತಮ್ಮ ಕಾಲಮ್ಯಾಲೆ ತಾವ ಕಲ್ಲು ಹಾಕ್ಕೊಂಡಂಗ ಆಗೇತಿ. ಈಗರ ನಮ್ಮ ಅನ್ನದಾತರು ಈ ಕೃಷಿಹೊಂಡದ ಕಡೆ ಲಕ್ಷ್ಯಾ ಕೊಡಬೇಕು.

ರಾಜೇಂದ್ರಸಿಂಗ್‌ರ ಹೇಳೊ ಮಾತನ್ನ ಹೇಳಿ ಈ ವಾರದ ನನ್ನ ಮಾತು ಮುಗಿಸತೇನಿ. “ಮಳೆಯಿಂದ ಬಿದ್ದು ಓಡೊ ನೀರನ್ನ ನಡಿಯುವಂಗs ಮಾಡ್ರಿ, ನಡಿಯೋ ನೀರನ್ನ ಆಮೆಯಂಗss ಹೆಜ್ಜಿಹಾಕಿಸಿ ಭೂಮಿಯೊಳ್ಗ ಇಂಗುವಂಗs ಮಾಡ್ರಿ”. ಈ ಮಾತು ಎಷ್ಟು ಅರ್ಥಪೂರ್ಣ ಅನ್ನೊದನ್ನ ನಾವೇಲ್ಲ ತಿಳ್ಕೊಬೇಕು. ಭೂಮಿಗೆ ನೀರು ಉಣಿಸಿದ್ರ ಭೂಮಿ ನಮ್ಗ ನೀರು ಕೊಡತಾಳ, ಅನ್ನಾ ಕೊಡತಾಳ ಅನ್ನೊ ಸತ್ಯ ನಮ್ಗ ಈ ವರ್ಷದಿಂದಾನಾದ್ರೂ ಗೊತ್ತ ಆಗಬೇಕು. ಅದಕ್ಕ ಈ ವರ್ಷದಿಂದ ಬಿದ್ದ ಮಳೆ ನೀರನ್ನು ಭೂಮಿಗೆ ಇಂಗಿಸೊ ಕೆಲ್ಸಾನ ನಮ್ಗ ಕೈಲಾದ ಮಟ್ಟಿಗೆ ನಾವs ನಾವss ಮಾಡಬೇಕು ಅನ್ನೊದು ನನ್ನ ಅಭಿಪ್ರಾಯ. ಇದಕ್ಕ ನೀವು ಏನಂತೀರಿ?

ಚಿತ್ರ-ಲೇಖನ: ಮಂಜುನಾಥ ಬಮ್ಮನಕಟ್ಟಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*