ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೃಷ್ಣೆ ಬಂದಳು ಬೇಗಂ ತಲಾಬ್‌ಗೆ: ಐತಿಹಾಸಿಕ ಕೆರೆಗೆ ಮರುಜೀವ

ವಿಜಯಪುರ: ವಿಶ್ವವಿಖ್ಯಾತ ಗೋಲಗುಮ್ಮಟವನ್ನು ಕಟ್ಟಿದ ದೊರೆ ಮೊಹ್ಮದ ಆದಿಲ್‌ಶಾಹಿ ವಿಜಯಪುರ ನಗರದಲ್ಲಿ ಸುಂದರ ಕೆರೆಯನ್ನು ಕಟ್ಟಿಸಿದ ಎಂಬುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಮೊಹ್ಮದ ಆದಿಲ್‌ಶಾಹಿ ದೊರೆ ೧೬೫೧-೫೩ರ ಅವಧಿಯಲ್ಲಿ ಅಂದು ೧೦ ಲಕ್ಷ ಮೀರಿ ಬೆಳೆಯುತ್ತಿದ್ದ ವಿಜಯಪುರ ನಗರಕ್ಕೆ ಕುಡಿಯುವ ನೀರು ಪೂರೈಸಲು ನಗರದ ದಕ್ಷಿಣ ಭಾಗದಲ್ಲಿ, ನಗರಕ್ಕಿಂತಲೂ ೩೦ ಅಡಿ ಮೇಲ್ಬಾಗದಲ್ಲಿರುವ ೨೩೭ ಎಕರೆ ವಿಸ್ತೀರ್ಣದಲ್ಲಿ ಬೃಹತ್ ಕೆರೆಯನ್ನು ಪತ್ನಿ ಜಹಾಬೇಗಂ ಹೆಸರಿನಲ್ಲಿ ನಿರ್ಮಿಸಿದ. ಮಂತ್ರಿ ಅಫ್‌ಜಲಖಾನ್ ಈ ಕೆರೆ ನಿರ್ಮಾಣದ ಉಸ್ತುವಾರಿ ನೋಡಿಕೊಂಡಿದ್ದ. ಆ ಕೆರೆ ಕಟ್ಟಿ ೩೬೫ ವರ್ಷಗಳ ನಂತರದಲ್ಲಿ ಆ ಕೆರೆಗೆ ಮತ್ತೆ ಜೀವ ಬಂದಿದೆ. ಇಂದು ಆ ಕೆರೆ ಮೈದುಂಬಿ ಕೋಡಿಯ ಮೂಲಕ ತಾಯಿ ಕೃಷ್ಣೆ ನಗರದ ಹೊರವಲಯದಲ್ಲಿ ಹರಿಯುತ್ತಿದ್ದಾಳೆ.

begum talab (1)ಬೇಗಂ ತಲಾಬ ಕೆರೆಯಲ್ಲಿ ಕಟ್ಟಿರುವ ಕಲ್ಲಿನ ಮಂಟಪದ ಮೂಲಕ (ಕಂಟ್ರೋಲ್ ಚೇಂಬರ್) ೧೫ ಇಂಚು ವ್ಯಾಸದ ಹಂಚಿನ ಪೈಪುಗಳ ಮೂಲಕ ನಗರದ ಕೋಟೆಯನ್ನು ದಾಟಿ ಸಾರವಾಡ ದಿಡ್ಡಿ (ಕೋಟೆಯ ಗುಂಬಜ) ಮೂಲಕ ನಗರವನ್ನು ಪ್ರವೇಶಿಸುವ ಈ ಪೈಪಲೈನ್ ವ್ಯವಸ್ಥೆ ಅಲ್ಲಿಂದ ಖಾದಿ ಗ್ರಾಮೋದ್ಯೋಗ ಹಿಂಭಾಗದಲ್ಲಿರುವ ಅಲಿ ಆದಿಲ್‌ಶಾಹಿ ಗಂಜ್, ಬಾಗಲಕೋಟ ಕ್ರಾಸ್‌ನಲ್ಲಿರುವ ಅಂಡುಮಸೀದಿ ಗಂಜ್ ನಂತರ ಆಸರ ಮಹಲ್ ಗಂಜ್ ಮತ್ತು ಅದರ ಮುಂಭಾಗದಲ್ಲಿರುವ ಬೃಹತ ಕೊಳದಲ್ಲಿ ನೀರು ಸರಬರಾಜು ಆಗುತ್ತಿತ್ತು. ಅದೇ ರೀತಿ ನಗರದ ಪ್ರಮುಖ ಸ್ಥಳಗಳಲ್ಲಿರುವ ೧೧ ಮುಖ್ಯ ಜಲಸಂಗ್ರಹಾರಗಳು (ಗಂಜ್‌ಗಳು) ಇಲ್ಲಿಂದಲೇ ನೀರು ಸರಬರಾಜು ಗುರುತ್ವಾಕರ್ಷಣೆ ಮೂಲಕವೇ ಆಗುತ್ತಿತ್ತು. ಭೂಮಿಯ ಮೇಲ್ಮಟ್ಟದಿಂದ ೩೦ ಅಡಿ ಆಳದಲ್ಲಿರುವ ಈ ಪೈಪಲೈನ್‌ಗೆ ಸುತ್ತಲೂ ಗಚ್ಚಿನಿಂದ ಮಾಡಿದ ರಕ್ಷ ಕವಚವಿದೆ. ಪೈಪಲೈನ್ ಮಾರ್ಗದ ಮಧ್ಯದಲ್ಲಿ ತೊಂದರೆಗಳಿದ್ದರೆ ಇಳಿದು ರಿಪೇರಿ ಮಾಡಲು, ಸ್ವಚ್ಚಗೊಳಿಸಲು ಬಾವಿಗಳನ್ನು ಕಟ್ಟಿದ್ದು, ಇಳಿದು ಹೋಗಲು ವ್ಯವಸ್ಥೆ ಇದೆ.

ವಿಜಯಪುರದ ಆದಿಲ್‌ಶಾಹಿ ಕಾಲದ ಕುಡಿಯುವ ನೀರಿನ ವ್ಯವಸ್ಥೆಯನ್ನು ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ವಿಶೇಷ ಪ್ರಯತ್ನಗಳನ್ನು ನಡೆಸಿದ್ದು, ಈಗಾಗಲೇ ತೊರವಿ ಹತ್ತಿರದ ಖಾನ್ ಸರೋವರದಿಂದ ಸೈನಿಕ್‌ಸ್ಕೂಲ್ ಹತ್ತಿರದ ಸುರಂಗ ಬಾವಡಿ ಸಂಪರ್ಕಿಸುವ ೫ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ಪುನಶ್ಚೇತನಗೊಳಿಸಲು ಡಿ.ಪಿ.ಆರ್ ಸಿದ್ದಗೊಂಡಿದೆ. ಅದೇ ಮಾದರಿಯಲ್ಲಿ ಬೇಗಂ ತಲಾಬ ಕೆರೆಯ ಸಂಪೂರ್ಣ ಮಾರ್ಗವನ್ನು ಪುನಶ್ಚೇತನಗೊಳಿಸಲು ಕ್ರಮ ಜರುಗಿಸಬೇಕು ಎನ್ನುತ್ತಾರೆ ಇತಿಹಾಸ ತಜ್ಞ ಡಾ.ಎಚ್.ಜಿ.ದಡ್ಡಿ. ಬೆಳೆಯುತ್ತಿರುವ ನಗರದಲ್ಲಿ ನಿರ್ಮಿಸುತ್ತಿರುವ ಕಟ್ಟಡಗಳಿಂದ ಹಾಗೂ ಕೊರೆಯುತ್ತಿರುವ ಬೋರವೆಲ್‌ಗಳಿಂದ ಅಲ್ಲಲ್ಲಿ ನೀರು ಪೂರೈಸುವ ಮಾರ್ಗಕ್ಕೆ ಅಡಚಣೆಯಾಗಿದ್ದರೂ ಸಹ, ಹೆಚ್ಚಿನ ಹಾನಿ ಆಗಿಲ್ಲ ಎಂಬುದು ಇವರ ಅಭಿಮತ. ೨೫-೩೦ ವರ್ಷಗಳ ಹಿಂದೆ ಈ ಕೆರೆ ತುಂಬಿದ್ದಾಗ ಆಸರಮಹಲ್ ಕೊಳದಲ್ಲಿ ನೀರು ತುಂಬಿತ್ತು ಎಂಬುದನ್ನು ನೆನಪಿಸುತ್ತಾರೆ. ವಿಶ್ವದ ಕೆಲವೇ ದೇಶಗಳಲ್ಲಿರುವ ಈ ವ್ಯವಸ್ಥೆ ಬಹುತೇಕ ನಗರಕ್ಕೆ ವಿಶ್ವಪಾರಂಪರಿಕ ತಾಣ ಎಂಬ ಗೌರವವನ್ನು ತಂದು ಕೊಡಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಸಾಗಬೇಕು.

begum talab (2)ಹಲವಾರು ವರ್ಷಗಳಿಂದ ಮಳೆಯ ಅಭಾವದಿಂದ ಈ ಕೆರೆಗೆ ನೀರು ಬಂದಿರಲಿಲ್ಲ. ಹೂಳು ತುಂಬಿ ಕಸ, ಕಂಟಿಗಳಿಂದ ಮುಚ್ಚಿ ಹೋಗಿದ್ದ ಕೆರೆಗೆ ಎಂ.ಬಿ.ಪಾಟೀಲರು ತಮ್ಮ ಜಲಸಂಪನ್ಮೂಲ ಇಲಾಖೆಯಿಂದ ಯೋಜನೆ ಕೈಗೆತ್ತಿಕೊಂಡು ಇಲ್ಲಿಂದ ೫೦ಕಿ.ಮೀ ದೂರದ ಕೃಷ್ಣಾ ನದಿಯಿಂದ ನೀರೆತ್ತಿ ತುಂಬಿಸಲು ಕಾಮಗಾರಿ ಆರಂಭಿಸಿದಂತೆಯೇ ಕೆರೆ ಪಾತ್ರದಲ್ಲಿನ ಹೂಳನ್ನು ಸ್ವಚ್ಚಗೊಳಿಸಿದ್ದು, ಅಂದಾಜು ೩ ಲಕ್ಷ ಕ್ಯೂಬಿಕ್ ಮೀಟರ್ ಹೂಳು ತೆಗೆದಿದ್ದು, ಈ ಹಿಂದೆ ೨೧ ಎಂ.ಸಿ.ಎಫ್.ಟಿ ನೀರು ಸಂಗ್ರಹಣ ಸಾಮರ್ಥ್ಯ ಹೊಂದಿದ ಈ ಕೆರೆ ಇಂದು ೫೭ ಎಂ.ಸಿ.ಎಫ್.ಟಿಗೆ ಏರಿಕೆಯಾಗಿದ್ದು, ದಿ.೧೦ ರಂದು ಇಲ್ಲಿ ನೀರು ತುಂಬಿಸಲು ಆರಂಭಿಸಲಾಗಿದೆ. ಸರಿಯಾಗಿ ೧೫ ದಿನಗಳಲ್ಲಿ ಸಂಪೂರ್ಣ ಭರ್ತಿಯಾಗಿ ನೀರು ಕೋಡಿಯಿಂದ (ವೇಸ್ಟವೇರ್) ಹರಿಯುತ್ತಿದ್ದು, ನಗರದ ಹೊರವಲಯದ ಕೆ.ಎಚ್.ಬಿ ಕಾಲೋನಿ ಮೂಲಕ ರಾಷ್ಟ್ರೀಯ ಹೆದ್ದಾರಿ-೧೩ ದಾಟಿ ಹಿಟ್ನಳ್ಳಿ-ಉತ್ನಾಳ ಮಧ್ಯದಲ್ಲಿ ಡೋಣಿ ನದಿಯನ್ನು ಸೇರುತ್ತಿದೆ.

begum talab (3)ಈ ಕೆರೆಯ ಪರಿಸರವನ್ನು ಸ್ವಚ್ಚವಾಗಿಟ್ಟು ಇದನ್ನು ವಿಹಾರ ತಾಣವನ್ನಾಗಿ ಮಾರ್ಪಡಿಸಿ, ಉದ್ಯಾನವನ, ಬೋಟಿಂಗ್ ವ್ಯವಸ್ಥೆ, ನಡುಗಡ್ಡೆ ಹೊಟೇಲ್ ಸೌಕರ್ಯ, ಕಾರಂಜಿ ವ್ಯವಸ್ಥೆ, ಕೆರೆಯ ಅಂಗಳದಲ್ಲಿ ವಿವಿಧ ಆಟಗಳಿಗೆ ಮೈದಾನಗಳು, ಕೆರೆಯ ಸುತ್ತಲಿನ ೭.೫ಕಿ.ಮೀ ವ್ಯಾಪ್ತಿಯಲ್ಲಿ ಸುಂದರ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಸೇರಿದಂತೆ ಈ ಪ್ರದೇಶದ ಅಭಿವೃದ್ಧಿಗೆ ಜಲಸಂಪನ್ಮೂಲ ಇಲಾಖೆಯಿಂದ ಮಾಸ್ಟರ್ ಪ್ಲ್ಯಾನ್ ಸಿದ್ದವಾಗುತ್ತಿದ್ದು, ರಾಜ್ಯದ ಪ್ರಮುಖ ವಾಸ್ತುಶಿಲ್ಪಿಗಳು ಇಲ್ಲಿಗೆ ಭೇಟಿನೀಡಿ ಪರಿಶೀಲನೆ ನಡೆಸಲಿದ್ದಾರೆ.

ಬರದ ನಾಡು ಎಂಬ ಹಣೆಪಟ್ಟಿಯೊಂದಿಗೆ ನಗರಕ್ಕೆ ಕುಡಿಯಲು ವಾರಕ್ಕೊಮ್ಮೆ ನೀರು ಎಂಬ ಕುಖ್ಯಾತಿಗೆ ಒಳಗಾಗಿದ್ದ ವಿಜಯಪುರಕ್ಕೆ ಬೇಗಂ ತಲಾಬ ತುಂಬುವುದರೊಂದಿಗೆ, ನಗರದಲ್ಲಿ ಅಂತರ್ಜಲ ಹೆಚ್ಚಳವಾಗಿ ಸುತ್ತಲಿನ ಜುಮನಾಳ, ಹಿಟ್ನಳ್ಳಿ, ತೊನಶ್ಯಾಳ, ಹೊನಗನಹಳ್ಳಿ, ದದಾಮಟ್ಟಿ ಮತ್ತಿತರ ಪ್ರದೇಶದ ರೈತರ ಜಮೀನುಗಳಲ್ಲಿ ಅಂತರ್ಜಲ ವೃದ್ಧಿಯಾಗಿ ಅನುಕೂಲವಾಗಲಿದೆ.

ಚಿತ್ರ-ಲೇಖನ: ರಾಮು ಬಿ.(ಮಸಳಿ)

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*