ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನಮ್ಮಂತೆ ಪಕ್ಷಿಗಳಿವೆ, ಅವಕ್ಕೂ ನೀರು ಕೊಡಿ !

ನಮ್ಮ ಅಫೀಸಿನ ಮುಂದೆ, ಶೋಗಿಡಗಳಿಗೆ ನೀರು ಹಾಕಲು ಮುಂದಾದಾಗ. ನೀರಿನ ಟ್ಯಾಂಕರ್ ನಿಂದ. ಸ್ವಲ್ಪ ನೀರು ಹೊರ ಚೆಲ್ಲಿ, ಸಣ್ಣದೊಂದು ಚಿಲುಮೆಯನ್ನು ಸೃಷ್ಟಿಸಿತು. ಅಫೀಸಿನ ಸುತ್ತಾಮುತ್ತಾ ಮರಗಿಡಗಳಲ್ಲಿ ಅವಿತು ಕುಳಿತ ಸೋಬಾನದ ಹಕ್ಕಿಗಳು ಪಟಪಟನೆ ಹಾರಿ ಬಂದು, ಅಲ್ಲಿ ನಿಂತಿದ್ದ ನೀರನ್ನು ಕುಡಿಯಲು ಪ್ರಾರಂಭಿಸಿದವು. ನೀರು ಕುಡಿದು ದಣಿವಾರಿದ ನಂತರ, ಅದೇ ನೀರಿನಲ್ಲಿ ಬಿದ್ದು ಉರುಳಾಡಿ ಜಲಕ್ರೀಡೆಯನ್ನಾಡಲು ಶುರುಮಾಡಿದವು. ಇದನ್ನು ನೋಡುತ್ತಿದ್ದ ನಮ್ಮ ಫಾರಂನ ಮುಖ್ಯಸ್ಥರು, ಗೆಳೆಯ ರಘುನಾಥ್ “ಅಯ್ಯೋ ಪಾಪ, ಪಕ್ಷಿಗಳಿಗೆ ಕುಡಿಯಲು ನೀರು ಎಲ್ಲೂ ಸಿಗುತ್ತಿಲ್ಲ. ಮಧ್ಯಾಹ್ನದ ಬಿಸಿಲಿಗೆ ತಂಪು ಮಾಡಿಕೊಳ್ಳಲು ಹೇಗೆ ಪರದಾಡುತ್ತಿವೆ,” ಎಂದು ಹೇಳಿದಾಗ, ಈ ಹಕ್ಕಿಗಳ ಬಾಯಾರಿಕೆಯ ದಾಹ ನನಗೂ ಅರ್ಥವಾಯಿತು. ಬೇಸಿಗೆಯ ಕಾಲದಲ್ಲಂತೂ ಪಕ್ಷಿಗಳ ನೀರಿನ ಸಮಸ್ಯೆ ಹೇಳತೀರದು.

ನಲ್ಲಿಯಲ್ಲಿ ನೀರು ಬರಲಿಲ್ಲ ಅಂದ್ರೆ, ಮನುಷ್ಯರಾದ ನಾವು ಖಾಲಿ ಕೊಡಗಳನ್ನು ಪ್ರದರ್ಶನ ಮಾಡಿ. ಗ್ರಾಮಪಂಚಾಯತಿ ಕಚೇರಿಗೋ, ಇಲ್ಲ ಮುನ್ಸಿಪಾಲಿಟಿ ಆಫೀಸಿಗೋ ಮುತ್ತಿಗೆ ಹಾಕಿ ಗಲಾಟೆ ಮಾಡ್ತೇವೆ. ಬೋರ್ ನಲ್ಲಿ ನೀರಿಲ್ಲ ಅಂದ್ರೂ, ಕೆರೆ ಬತ್ತಿಹೋದರೂ, ಬೇರೆ ಕಡೆಯಿಂದ ಟ್ಯಾಂಕರ್ ನೀರು ತರಿಸುವಂತೆ ಮಾಡುತ್ತೇವೆ. ಇಲ್ಲ ಅಂದ್ರೆ ಇಂತಹ ಸನ್ನಿವೇಶಗಳನ್ನು ಟಿವಿಯವರು, ಪೇಪರ್ ನವರು ತೋರಿಸಿ ತೋರಿಸಿ, ಪತ್ರಿಕೆಯಲ್ಲಿ ಬರೆದು ಬರೆದು, ಸರ್ಕಾರದ ಮಾನವನ್ನು ಮೂರುಕಾಸಿಗೆ ಹರಾಜು ಹಾಕುತ್ತಾರೆ. ಪಾಪ ಪಕ್ಷಿಗಳು ಎಲ್ಲಿಗೆ ಹೋಗಬೇಕು? ಯಾರನ್ನು ಕೇಳಬೇಕು? ಮನುಷ್ಯರಿಗಿರುವ ಸೌಲಭ್ಯಗಳು, ಪಕ್ಷಿಗಳಿಗೆ ಎಲ್ಲಿಂದ ಬರಬೇಕು? ಮಳೆರಾಯನ ಕೃಪೆ ಬರುವವರೆಗೂ ಪ್ರಾಣಿ ಪಕ್ಷಿಗಳು ಆಹಾರಕ್ಕಿಂತ, ಹೆಚ್ಚು ತಮ್ಮ ಬಾಯಾರಿಕೆಯ ದಾಹ ತೀರಿಸಿಕೊಳ್ಳಲು ಪರದಾಡುತ್ತಿವೆ ಎನ್ನುವುದು ನಮಗೆ ಮನದಟ್ಟಾಯಿತು.

DSCN7300ತಕ್ಷಣ ರಘುನಾಥ್ ಪಕ್ಷಿಗಳಿಗೆ ನೀರು ನೀಡಲು ಮುಂದಾದರು. ನೀರು ಕೋಡುವುದು ಹೇಗೆ ಎಂದು ಗೆಳೆಯರ ಜೊತೆ ಹಂಚಿಕೊಂಡಾಗ. ಒಬ್ಬೊಬ್ಬರದ್ದು ಒಂದೊಂದು ಐಡಿಯ. “ತೆಂಗಿನ ಚಿಪ್ಪಲ್ಲಿ ನೀರಿಟ್ಟರೆ, ಹಕ್ಕಿ ಕುಡ್ಕೊಂಡ್ ಹೊಗ್ತಾವ್ ರೀ,” ಆಫೀಸ್ ಅಸಿಸ್ಟೆಂಟ್ ತಿಪ್ಪಣ್ಣ ಟಕ್ಕಳಕಿಯ ಸಲಹೆ. ಇನ್ನು ಕೋಳಿಗೆ ನೀರ್ ಕೋಡುವಂತೆ ಡಬ್ಬದಲ್ಲಿ ನೀರ್ ಇಟ್ಟರೆ ಸಾಕು ಸಾರ್ ಎನ್ನುವುದು ಶಿವಸ್ವಾಮಿಯ ಐಡಿಯ, ಅಂತೂ, ಇಂತೂ, ಒಂದು ಹೊಸ ಐಡಿಯ ಬಂತು. ನಮ್ಮಲ್ಲಿ ಡಿಸ್ಟಿಲ್ ವಾಟರ್ ಬಾಟ್ಲಿಗಳು ತುಂಬಾ ದಿನದಿಂದ ಆಫೀಸಿನ ಮೂಲೆಯಲ್ಲಿ ಬಿದಿದ್ದವು. ಅವುಗಳನ್ನು ಅರ್ಧಭಾಗಕ್ಕೆ ಕತ್ತರಿಸಿ, ತಂತಿಯ ಸಹಾಯದಿಂದ ಮರಕ್ಕೆ ತೂಗುಹಾಕುವಂತೆ ಮಾಡಿ, ಆ ಬಾಟ್ಲಿಗೆ ನೀರು ಹಾಕಿದರೆ, ಮರದ ಬಳಿಯೇ ಪಕ್ಷಿಗಳು ಸುಲಭವಾಗಿ ನೀರು ಕುಡಿಯುತ್ತವೆ ಎನ್ನುವ ಕಲ್ಪನೆಯೊಂದಿಗೆ ಕೆಲಸ ಶುರುಮಾಡಿದ್ವಿ.

ಅಫೀಸಿನಲ್ಲಿದ್ದ ಸುಮಾರು ಅರವತ್ತು ಡಿಸ್ಟಿಲ್ ವಾಟರ್ ಬಾಟ್ಲಿಗಳನ್ನು ತೆಗೆದುಕೊಂಡು, ಚೆನ್ನಾಗಿ ತೊಳೆದು, ಮುಂದಿನ ಕೆಲಸಕ್ಕೆ ಸಿದ್ಧಮಾಡಿದರು. ಬಾಟ್ಲಿಗಳನ್ನು ಅರ್ಧಭಾಗಕ್ಕೆ ಕತ್ತರಿಸುವ ಕೆಲಸ ಒಬ್ಬರದು, ಕತ್ತರಿಸಿದ ಬಾಟ್ಲಿಗೆ ತಂತಿಕಟ್ಟುವ ಕೆಲಸ ಮತ್ತೋರ್ವನದು. ತಂತಿ ಕಟ್ ಮಾಡಿ ಕೊಡುವ ಕೆಲಸ ಇನ್ನೊಬ್ಬನದು. ಹೀಗೆ ರೆಡಿಯಾದ ಬಾಟ್ಲಿಗಳನ್ನು ಮರಕ್ಕೆ ಕಟ್ಟುವುದು, ಕಟ್ಟಿದ ಬಾಟ್ಲಿಗೆ ನೀರು ಹಾಕುವುದು ಎಲ್ಲವನ್ನೂ ಮಾಡಲು ಸಣ್ಣದೊಂದು ತಂಡವೇ ಹುಟ್ಟಿತು. ಬಹಳ ಖುಷಿಯಿಂದ ಈ ಕೆಲಸವನ್ನು ಕೇವಲ ಎರಡೇ ಗಂಟೆಯಲ್ಲಿ ಮಾಡಿ ಮುಗಿಸಿತು.

ನಮ್ಮ ಗ್ರಾಮೋದಯ ತರಬೇತಿ ಕೇಂಧ್ರ ಇರೋದು ಒಂದು ಸಣ್ಣ ಕಾಡಿನ ಮಧ್ಯೆ. ಮರಗಿಡಗಳಿಂದ ಆವರಿಸಿಕೊಂಡಿದೆ. ನಮ್ಮ ತಂಡ ಸಿಕ್ಕಸಿಕ್ಕ ಮರಗಳಿಗೆಲ್ಲಾ ನೀರಿನ ಬಾಟ್ಲಿಗಳನ್ನು ಕಟ್ಟಿ ತೂಗುಹಾಕಿತ್ತು. ಮಧ್ಯಾಹ್ನದ ಬಿಸಿಲಿಗೆ ಈ ನೀರಿನ ಡಬ್ಬಗಳು ಸ್ಫಟಿಕದಂತೆ ಹೊಳೆಯಲು ಶುರುಮಾಡಿದವು. ಎಲ್ಲರಿಗೂ ಕುತೂಹಲ – ಯಾವ ಪಕ್ಷಿ ಮೊದಲು ಬಂದು ನೀರು ಕುಡಿಯುತ್ತದೆ? ಯಾರು ಕಟ್ಟಿದ ಡಬ್ಬದಲ್ಲಿ ನೀರು ಕುಡಿಯಬಹುದು? ಯಾರು ಪುಣ್ಯವಂತರು! ಯಾರು ಪಾಪತ್ಮರು? ಹೀಗೆ ಹರಟೆ ಕೂಡಾ ಶುರುವಾಯ್ತು. ಹರಟೆ, ತಮಾಷೆ ಎಲ್ಲಾ ಮುಗಿದು ೨-೩ ಗಂಟೆಯಾದ್ರೂ ಒಂದು ಪಕ್ಷಿನೂ ಬರ್ಲಿಲ್ಲ! ಎಲ್ಲೂ ಒಂದ್ ಗುಟ್ಕು ನೀರು ಕುಡಿದಿದ್ದು ಕಾಣಲಿಲ್ಲ!! ಎಲ್ಲರಿಗೂ ನಿರಾಸೆ – ಮಾಡಿದ ಶ್ರಮ ವ್ಯೆರ್ಥವಾಯಿತೇನೋ  ಎಂದು. ಓ.. ನೀರಿನ ಬಾಟ್ಲಿಲಿ ಇರೋ ನೀರು ಪಕ್ಷಿಗಳಿಗೆ ಕಾಣ್ತಾ ಇಲ್ಲ ಅಂತ ಒಬ್ಬರು; ಇಲ್ಲ, ನಾವು ಈಗ್ತಾನೆ ನೀರು ಕಟ್ಟಿದ್ದೇವೆ – ಅವುಕ್ಕೂ ಅರ್ಥ ಆಗಬೇಕಲ್ಲ ಇಲ್ಲಿ ನೀರಿದೆ ಅಂತ ಎಂದು ಮತ್ತೊಬ್ಬರು, ಸಮಾಧಾನದ ಮಾತುಗಳನ್ನಾಡುತ್ತಾ, ನಮ್ಮನಮ್ಮ ಕೆಲಸಗಳಿಗೆ ನಾವು ಹೊರೆಟು ಹೋದೆವು.

 ಒಂದು ದಿನ ಕಳೆಯಿತು, ಹೊಸ ಐಡಿಯಾ ಬಂತು – ಪಕ್ಷಿಗಳಿಗೆ ಕುಳಿತುಕೊಳ್ಳಲು ಜಾಗವಿಲ್ಲ, ಆದ್ದರಿಂದ ಪಕ್ಷಿಗಳು ನೀರು ಕುಡಿಯಲು ಬರುತ್ತಿಲ್ಲವೆಂದು, ಪ್ರತಿಯೊಂದು ಬಾಟ್ಲಿಯ ಮೇಲೆ ಒಂದು ಸಣ್ಣ ಕಟ್ಟಿಗೆಯನ್ನು ಪಕ್ಷಿ ಬಂದು ಕೂರಲು ಅನುವು ಮಾಡಿದೆವು. ಕಟ್ಟಿಗೆ ನೀರಿನ ಜೊತೆ ಬೆರೆತು ನೀರಿನ ಬಣ್ಣ ಸ್ವಲ್ಪ ಬದಲಾಯಿತು. ಪ್ಲಾಸ್ಟಿಕ್ ಬಾಟ್ಲಿಯಲ್ಲಿ ನೀರು ಇರುವುದು ಪಕ್ಷಿಗಳಿಗೆ ಕಾಣಲಾರಂಭಿಸಿತು. ಆಗ ನಿಧಾನವಾಗಿ ಒಂದೊಂದೇ ಪಕ್ಷಿಗಳು ಬಂದು ನೀರನ್ನು ಕುಡಿಯಲು ಮುಂದಾವು. ಅದನ್ನು ಕಂಡ ನಮ್ಗೆ ಎಲ್ಲಿಲ್ಲದ ಸಂತೋಷ  ಮನೆಮಾಡಿತು! ಇಂತಹ ಸಂತೋಷ ಕಾಣಬೇಕಾದರೆ, ನಮ್ಮಂತೆ ಪಕ್ಷಿಗಳಿವೆ ಅವಕ್ಕೂ ನೀರು ಕೊಡಿ, ಕೊಟ್ಟು ನೋಡಿ !!

ಚಿತ್ರ-ಲೇಖನ: ರಾಮಕೃಷ್ಣ ಗುಂಜೂರು, ಬೈಫ್ ಸಂಸ್ಥೆ ತಿಪಟೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*