ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ತುಂಬ ದೊಡ್ಡ ಕೆಲಸಗಳಲ್ಲ; ಆದರೆ, ಅರ್ಥಪೂರ್ಣ ಕಾಲು ಹಾದಿಗಳು

ಸ್ಕೋಪ್ ಸಿಇಓ ಮತ್ತು ಪ್ರಾಚಾರ್ಯ ಮೆಂಟರ್ ಡಾ. ಪ್ರಕಾಶ ಭಟ್

ಧಾರವಾಡ: ಸ್ಕೋಪ್ ಮತ್ತು ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್ ಪ್ರೋಗ್ರಾಂ ತುಂಬ ಆಸ್ಥೆ ಮತ್ತು ದೂರದೃಷ್ಟಿಯಿಂದ ವಿನ್ಯಾಸಗೊಳಿಸಲಾದ Dr. Prakash Baht - CEOಕಾರ್ಯಕ್ರಮ. ನಾವು-ನೀವು ಗಮನಿಸಿದಂತೆ, ಅಭ್ಯುದಯ ಸಂಬಂಧಿ ಹತ್ತು ಹಲವು ಕ್ಷೇತ್ರಗಳಿಗೆ ಹೋಲಿಸಿದರೆ, ನೀರು ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು, ಸಮರ್ಪಣಾ ಮನೋಭಾವದ ಯುವ ವೃತ್ತಿಪರರ ಕೊರತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಸ್ಕೋಪ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪ್ರಾಚಾರ್ಯ ಮೆಂಟರ್ ಡಾ. ಪ್ರಕಾಶ ಭಟ್.

ನೀರು ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ ಈಗಾಗಲೇ ಹಲವರು ತೊಡಗಿಸಿಕೊಂಡಿದ್ದರೂ, ಬಹುಕಾಲ ಅದೇ ಕ್ಷೇತ್ರದಲ್ಲಿ ಉಳಿದು ಕಾರ್ಯನಿರ್ವಹಿಸುವವರ ಕೊರತೆ ಇದ್ದೇ ಇದೆ. ಹಾಗಾಗಿ, ಸ್ಕೋಪ್ ಮತ್ತು ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್ ಪ್ರೋಗ್ರಾಂನ್ನು ಕ್ರಿಯಾನ್ವಿತ ಕಲಿಕೆಯ ಒಂದು ಸತತ ಪ್ರಗತಿಯ ಮಾದರಿಯಾಗಿ ಅಭಿವೃದ್ಧಿಪಡಿಸುವ ಹಂಬಲದಿಂದ ವಿಶೇಷ ಕಾಳಜಿಯಿಂದ ಪಠ್ಯ ರೂಪಿಸಲಾಗಿದೆ ಎಂದರು.

ಈ ಹಂತದಲ್ಲಿ ಎರಡು ಆವೃತ್ತಿಯ ಫೆಲೊಷಿಪ್ ಪ್ರೋಗ್ರಾಂ ಯಶಸ್ವಿಯಾಗಿ ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದಾದರೆ, ನಾವು ಆಯ್ದುಕೊಂಡ ಕ್ಷೇತ್ರ ಮತ್ತು ಕ್ರಿಯಾನ್ವಯನ ಕಲಿಕೆ ಮಾದರಿ ಯಶಸ್ವಿಯಾಗಿದೆ ಎಂದು ವಿಶ್ವಾಸದಿಂದ ಹೇಳಬಹುದು. ಈ ಫೆಲೊಷಿಪ್ ಅಡಿ, ಯುವ ವೃತ್ತಿಪರರು (ಯಂಗ್ ಪ್ರೊಫೆಷನಲ್ಸ್ – ವಾಯ್.ಪಿ.) ಎಂದು ಕರೆಯಿಸಿಕೊಳ್ಳುವ ಫೆಲೊಗಳು, ತಮ್ಮ ಕಲಿಕೆಯನ್ನು ಯಶಸ್ವಿಯಾಗಿ ಕ್ರಿಯೆಯಾಗಿ ಮಾರ್ಪಡಿಸಿ, ಕ್ಷೇತ್ರಗಳಿಗೆ ಫಲ ದೊರಕಿಸಿಕೊಡುವಲ್ಲಿ ಜಯ ಸಾಧಿಸಿದ್ದು, ಕೇವಲ ಕಲಿಕೆಯ ದೃಷ್ಟಿಯಿಂದ ಮಾತ್ರವಲ್ಲ; ಗ್ರಾಮಗಳಲ್ಲಿ ಧನಾತ್ಮಕ ಬದಲಾವಣೆಗಳಿಗೂ ಅವರು ಕಾರಣರಾಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಬಹುದು ಎನ್ನುತ್ತಾರೆ ಡಾ. ಪ್ರಕಾಶ ಭಟ್.

ಸ್ಕೋಪ್ ಮತ್ತು ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್ ಪ್ರೋಗ್ರಾಂನ ವಿಶೇಷತೆ ಎಂದರೆ, ಇನ್ನುಳಿದ ಫೆಲೊಷಿಪ್ ಪ್ರೋಗ್ರಾಂಗಳಿಗಿಂತ ಮತ್ತು ಫೆಲೊಗಳಿಗಿಂತ ಭಿನ್ನವಾಗಿ, ನೀರು ಮತ್ತು ನೈರ್ಮಲ್ಯದ ಯುವ ವೃತ್ತಿಪರರನ್ನು ಒಂದು ವರ್ಷಗಳ ಕಾಲ ಗ್ರಾಮ ವಾಸ್ತವ್ಯಕ್ಕೆ ಅಣಿಗೊಳಿಸುವ ಸ್ಕೋಪ್ ಸಂಸ್ಥೆಯ ನಿರ್ಧಾರ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಡಾ. ಪ್ರಕಾಶ ಭಟ್ ಅವರು ಸೂಚ್ಯವಾಗಿ ಹೇಳುವಂತೆ, ಗ್ರಾಮಾಭಿವೃದ್ಧಿಯ ಹೊಣೆಹೊತ್ತ ಕಾರ್ಯಕರ್ತರಿಗೂ ಕೂಡ ಈಗ ಹಳ್ಳಿಯಲ್ಲೇ ವಾಸ ಮಾಡಬೇಕು ಎಂಬ ಅನಿವಾರ್ಯ ಆಯ್ಕೆ ಕನಸು-ಮನಸ್ಸಿನಲ್ಲೂ ಇಲ್ಲ; ಮೇಲಾಗಿ ಗ್ರಾಮೀಣಾಭಿವೃದ್ಧಿಯ ಬಗೆಗಳನ್ನು ಕಲಿಯಲು ಬಯಸುವವರೂ ಕೂಡ ಪಟ್ಟಣ ಕೇಂದ್ರಿತವಾಗಿಯೇ ಇದ್ದು, ಹಳ್ಳಿಯ ಮುಖ ನೋಡಬಯಸುತ್ತಿರುವ ಹಿನ್ನೆಲೆಯಲ್ಲಿ ‘ಗ್ರಾಮ ವಾಸ್ತವ್ಯ’ ಈ ಫೆಲೊಷಿಪ್ ಕಾರ್ಯಕ್ರಮದ ವಿಶೇಷತೆಯಾಯ್ತು. ಫೆಲೊಗಳ ಗ್ರಾಮ ವಾಸ್ತವ್ಯದಿಂದ ಗ್ರಾಮಸ್ಥರು ಮತ್ತು ಅಭ್ಯುದಯ ಕಾರ್ಯಕರ್ತರ ಮಧ್ಯೆ ಅವಿನಾಭಾವ ಸಂಬಂಧ ಏರ್ಪಟ್ಟಿತು. ಈ ಎರಡೂ ಸಮುದಾಯಗಳ ಮಧ್ಯೆ ಆ ಪರಸ್ಪರ ವಿಶ್ವಾಸದ ಕೊಂಡಿ ಬೆಸೆದು, ಏಕಮೇವಾದ್ವಿತೀಯ ಪ್ರಯತ್ನಗಳಿಂದ ಏಕಾಂಗಿಯಾಗಿ ನಿಲ್ಲಬೇಕಾದ ಪರಿಸ್ಥಿತಿ ಕ್ರಮೇಣ ಬದಲಾಯಿತು. ಮೇಲಾಗಿ, ಅಭ್ಯುದಯ ಯೋಜನೆಗಳ ಯಶಸ್ವಿ ಅನುಷ್ಠಾನ ಹಂತದಲ್ಲಿ ಸೋಲಿಗೆ ಕಾರಣವಾಗಬಲ್ಲ, ಆದರೆ ಅವುಗಳನ್ನು ಸಕಾಲದಲ್ಲಿ ಪರಿಹರಿಸಿ ಯೋಜನೆಯ ಅನುಷ್ಠಾನದ ಮೇಲೆ ಯಾವುದೇ ಅಡ್ಡಪರಿಣಾಮಗಳು ಉಂಟಾಗದ ರೀತಿ ನಿರ್ವಹಿಸುವಲ್ಲಿ ಯಶ ಸಾಧಿಸಿದೆವು ಎನ್ನುತ್ತಾರೆ.

ಒಂದು ವರ್ಷದ ಗ್ರಾಮ ವಾಸ್ತವ್ಯದ ಮೂಲಕ ಫೆಲೊಗಳು, ಸಮುದಾಯದೊಂದಿಗೆ ಬೆರೆತು ಕಾರ್ಯನಿರ್ವಹಿಸಿದ ಪರಿ, ಗ್ರಾಮಸ್ಥರ ದೃಷ್ಟಿಕೋನದ ಮೂಲಕವೇ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ, ಸಮುದಾಯದ ಮತ್ತು ಗ್ರಾಮಸ್ಥರ ಸಹಭಾಗಿತ್ವದಲ್ಲಿಯೇ ಆ ಸಮಸ್ಯೆಗಳ ಸ್ಥಳೀಯ ಇತ್ಯರ್ಥಕ್ಕೆ ಯೋಜಿತ ಪ್ರಯತ್ನ ನಡೆಸಿದ ರೀತಿ, ಯುವ ವೃತ್ತಿಪರರು ತುಂಬ ಖುಷಿಯಾಗಿ ತಮ್ಮ ಅನುಭವ ಗಳಿಕೆ ಮತ್ತು ಕಲಿಕೆಯ ಭಾಗವಾಗಿ ಫೆಲೊಷಿಪ್ ನಿರ್ವಹಿಸಿದ ರೀತಿ ಪ್ರೇರಣಾದಾಯಿ.

ಡಾ. ಪ್ರಕಾಶ ಭಟ್ ಅವರು ಹೆಮ್ಮೆಯಿಂದ ಹೇಳುವ ಪ್ರಕಾರ, ಫೆಲೊಗಳ ೧೨ ತಿಂಗಳ ಗ್ರಾಮ ವಾಸ್ತವ್ಯ ಮತ್ತು ೬ ತಿಂಗಳುಗಳ ಮೌಲ್ಯವರ್ಧಿತ ತರಬೇತಿ ತಂದ ಅಚ್ಚರಿಯ ಬೆಳವಣಿಗೆಗಳು ಒಂದೆರೆಡಲ್ಲ. ಗ್ರಾಮಸ್ಥರು ಸ್ವತಃ ‘ಅಬ್ಬಾ, ವಿಚಿತ್ರವಿದು!’ ಎಂದು ಉದ್ಗರಿಸಿದ ಪ್ರಮೇಯ ಒಂದೆರಡಲ್ಲ. ಓರ್ವ ಗ್ರಾಮಸ್ಥರಂತೂ, ‘ಇಷ್ಟೊಂದು ಕಲಿತವರು ನಮ್ಮ ಹಳ್ಳಿಗಳಲ್ಲಿ ಉಳಿದುಕೊಂಡು ಕೆಲಸ ಮಾಡುವುದು.. ಜಗತ್ತಿನ ಎಂಟನೇ ಅದ್ಭುತ!’

ಈ ಫೆಲೊಷಿಪ್ ಪ್ರೋಗ್ರಾಂನ ಮತ್ತೊಂದು ಮಹತ್ವದ ಕಲಿಕೆ ಎಂದರೆ, ಹಣಕ್ಕಿಂತ ಮಿಗಿಲಾಗಿ, ಗ್ರಾಮಸ್ಥರು ಬಯಸಿದ್ದು ಮತ್ತು ಅವರ ಬಳಿ ಇರದಿದ್ದುದು ಮಾತ್ರ ಕಲಿತ-ಸ್ವಹಿತಾಸಕ್ತಿ ಹೊಂದಿರದ ಯುವ ಮುಂದಾಳುಗಳನ್ನು! ಕಾರಣ, ಎಷ್ಟೇ ಗರಿಷ್ಠ ಅಥವಾ ಕನಿಷ್ಠ ಕಲಿತವನೂ ಹಳ್ಳಿಗಳನ್ನು ತ್ಯಜಿಸಿ ಪಟ್ಟಣಕ್ಕೆ ಬದುಕು ಅರಸಿ ಹೊರಟ ಈ ಸಂಕ್ರಮಣ ಕಾಲದಲ್ಲಿ, ಯುವ ವೃತ್ತಿಪರರು ತಮ್ಮ ಹೊಸ ಆಲೋಚನೆಗಳೊಂದಿಗೆ ಹಳ್ಳಿಗಳಲ್ಲಿಯೇ ಬದುಕು ಆರಂಭಿಸಿದ ಈ ಬೆಳವಣಿಗೆ – ಹೊಸ ಗಾಳಿಯನ್ನೇ ತಂತು ಎಂದರು ಡಾ. ಪ್ರಕಾಶ ಭಟ್.

ಡಾ. ಪ್ರಕಾಶ ಭಟ್, ತುಂಬ ಪ್ರ್ಯಾಕ್ಟಿಕಲ್ ಆಗಿ ಯೋಚಿಸಿ ಹೇಳಿದ ಮಾತು, ಸದ್ಯ, ಈ ಫೆಲೊಗಳು ಕಾರ್ಯನಿರ್ವಹಿಸಿದ ಗ್ರಾಮಗಳಲ್ಲಿ ಫಲಿತಾಂಶ ಯಾರಾದರೂ ಸುಲಭವಾಗಿ ಗುರುತಿಸಬಹುದು. ಈ ಕೆಲಸಗಳು ತುಂಬ ದೊಡ್ಡ ‘ಹೆದ್ದಾರಿ ನಡೆ’ಯ ಕೆಲಸಗಳು ಅಂತೇನಿಲ್ಲ; ಆದರೆ, ಈ ಕಾರ್ಯಗಳು ಒಂದಕ್ಕಿಂತ ಹತ್ತು ಕಾಲುದಾರಿಗಳಲ್ಲಿ ತುಂಬ ಅರ್ಥಪೂರ್ಣವಾಗಿವೆ. ಇವು ಎಂತಹ ಕೆಲಸಗಳೆಂದರೆ, ಸ್ಥಳೀಯ ಮತ್ತು ರಾಜ್ಯ ಸರ್ಕಾರಗಳೂ ಕೂಡ ಸಾಧಿಸಲಾಗದ ಕಾರ್ಯಗಳು!

ಗ್ರಾಮಗಳಲ್ಲಿ ಏನೆಲ್ಲ ಅಭ್ಯುದಯ ಕೆಲಸಗಳನ್ನು ಮಾಡಬಹುದಿತ್ತೋ.. ಅವುಗಳನ್ನು ಹೊರತುಪಡಿಸಿ, ಯುವ ವೃತ್ತಿಪರರಲ್ಲೂ ಆಂತರಿಕವಾಗಿ ಮತ್ತು ಅವರ ಬಾಹ್ಯ ವ್ಯಕ್ತಿತ್ವದಲ್ಲಿ ತುಂಬ ಗಣನೀಯ ಬೆಳವಣಿಗೆಗಳನ್ನು ಗುರುತಿಸಬಹುದು. ಹಳ್ಳಿಗರನ್ನು ತುಂಬ ಸಹಜ ಮತ್ತು ಸರಳವಾಗಿ ಅರ್ಥಮಾಡಿಕೊಂಡು, ಅವರ ಪರಿಸ್ಥಿತಿಗಳನ್ನು ಈಗ ಅವರು ವಿಶ್ಲೇಷಿಸಬಲ್ಲರು, ಸಾಮಾನ್ಯವಾಗಿ ಪಟ್ಟಣದಲ್ಲಿಯೇ ಹುಟ್ಟಿ-ಬೆಳೆದು, ಶಿಕ್ಷಣ ಪಡೆದವರಿಗೆ ಹಳ್ಳಿ ಮತ್ತು ಹಳ್ಳಿಗರ ಬಗ್ಗೆ ಇರುವ ಸಾಮಾನ್ಯ ಅಪನಂಬುಗೆಗಳನ್ನು ಇವರು ಈಗ ತೊಡೆದವರು, ಅನುಭವಾತ್ಮಕ ಕಲಿಕೆಯ ಮಹತ್ವ ಅರಿತುಕೊಂಡವರು, ಬಹುತೇಕ ಸಮಸ್ಯೆಗಳಿಗೆ ಹಲವು ಸಂದರ್ಭಗಳಲ್ಲಿ ಉತ್ತರವೇ ಇರಲಾರದು ಎಂಬುದನ್ನು ಮನನ ಮಾಡಿಕೊಂಡವರು, ಪುಸ್ತಕದ ಓದು ಕೆಲವೊಮ್ಮೆ, ಮತ್ತೆ ಕೆಲವೊಮ್ಮೆ ಅನುಭವದ ಕಲಿಕೆ, ಹಲವು ಬಾರಿ ಕಲಿತದ್ದನ್ನು ಬದಿಗಿಟ್ಟು ಹೊಸದಾಗಿ ಕಲಿಯುವ ಮನೋಭೂಮಿಕೆ.. ಹೀಗೆ, ಸಂದರ್ಭಕ್ಕೆ ತಕ್ಕಂತೆ ಕಲಿತು, ಕಲಿತದ್ದನ್ನು ಮರೆತೂ ನಡೆಯುವ ಪ್ರಬುದ್ಧತೆ ಈ ಫೆಲೊಗಳು ಬೆಳೆಸಿಕೊಂಡವರು.

ಈ ಯುವ ವೃತ್ತಿಪರರು ಈಗ ಪದವೀಧರರಾಗಿದ್ದಾರೆ.  ನಾಡಿನ ಹಲವಾರು ಸಂಘ-ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿ, ಸೇವಾ ನಿರತರಾಗಿದ್ದಾರೆ. ಈ ಜಗತ್ತನ್ನು ಇನ್ನಷ್ಟು ಬದುಕಲು ಯೋಗ್ಯವಾಗಿಸುವಲ್ಲಿ ಖಂಡಿತವಾಗಿಯೂ ಅವರ ಕೊಡುಗೆ ಇನ್ನು ಮುಂದೆ ಇದ್ದೇ ಇರುತ್ತದೆ ಎಂದು ಸ್ಪಷ್ಟವಾಗಿ ಹೇಳಬಲ್ಲೆ ಎನ್ನುತ್ತಾರೆ ಡಾ. ಪ್ರಕಾಶ ಭಟ್.

 ಮಾಹಿತಿಗೆ/ಸಂಪರ್ಕ: www.scopedharwad.org / +೯೧ ೯೦೦೮೪೫೨೪೪೭.

*****************************************************************************************************************************************************************************

ವಾಟ್‌ಸ್ಯಾನ್; ಸ್ಕೋಪ್‌ನಿಂದ ಸಮರ್ಥ ಉತ್ತರ

ಅರ್ಘ್ಯಂ ಸಿಇಓ ಜಯಮಾಲಾ ವಿ. ಸುಬ್ರಮಣಿಯಮ್

ಬೆಂಗಳೂರು: ಅರ್ಘ್ಯಂ, ತನ್ನ ಸಹವರ್ತಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಶೇಷ ತರಬೇತಿ ಹೊಂದಿದ ಮಾನವ ಸಂಪನ್ಮೂಲವನ್ನು ಕ್ಷೇತ್ರಾಧಾರಿತ ಅಭ್ಯುದಯಕ್ಕೆ ಕೌಶಲ್ಯಗಳೊಂದಿಗೆ ರೂಪಿಸಬೇಕು ಎಂಬ ಚಿಂತನೆಯೊಂದಿಗೆ ಮೊದಲ ಬೀಜ ಬಿತ್ತಿತ್ತು. ನೀರು ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ, ವಿಶೇಷ ತರಬೇತಿ ಮತ್ತು ಮೌಲ್ಯವರ್ಧಿತ ಕೌಶಲ್ಯ ಹೊಂದಿದ ಯುವ ವೃತ್ತಿಪರರನ್ನು ಸ್ಕೋಪ್ ರೂಪಿಸಿದ್ದು ಒಂದು ಮಹತ್ವದ ಮೈಲುಗಲ್ಲು ಎಂದು ಅಭಿಪ್ರಾಯಪಡುತ್ತಾರೆ ಅರ್ಘ್ಯಂ ಸಿಇಓ ಜಯಮಾಲಾ ವಿ. ಸುಬ್ರಮಣಿಯಮ್.

ಸ್ಕೋಪ್ ಮತ್ತು ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್ ಪ್ರೋಗ್ರಾಂ ಬೇರುಮಟ್ಟದಲ್ಲಿಯೇ ಬದಲಾವಣೆಯ ಹರಿಕಾರರನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆ. ಫೆಲೊಗಳು ವರ್ಷಗಳ ಕಾಲ ಹಳ್ಳಿಗಳಲ್ಲಿಯೇ ಉಳಿದು, ಗ್ರಾಮಸ್ಥರು ಮತ್ತು ಸಮುದಾಯದೊಂದಿಗೆ ನಿಕಟವಾಗಿ ಹೊಂದಿಕೊಂಡು ಕೆಲಸ ಮಾಡಿ, ಗ್ರಾಮಾಭಿವೃದ್ಧಿಯ ಆಶಾಭಾವ ಅರಳಿಸಿದ್ದು ಈ ಫೆಲೊಷಿಪ್‌ನ ಹೈಲೈಟ್ ಎನ್ನುತ್ತಾರೆ ಜಯಮಾಲಾ.

ಸ್ಕೋಪ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರಕಾಶ ಭಟ್ ಅವರ ಸಮರ್ಥ ಮುಂದಾಳತ್ವದಲ್ಲಿ ತುಂಬ ಸಂಕೀರ್ಣವಾದ ನೀರು-ನೈರ್ಮಲ್ಯ ಕ್ಷೇತ್ರದ ಕಾರ್ಯನಿರ್ವಹಣೆಯ ಸುಂದರ, ಒಪ್ಪಿತ ಮಾದರಿಯನ್ನು ಸಿದ್ಧಪಡಿಸಿದೆ. ೧೬ ಯುವ ವೃತ್ತಿಪರರು, ‘ವಾಟ್‌ಸ್ಯಾನ್ ಎಕ್ಸಪರ್ಟ್ಸ’ ಎರಡು ತಂಡಗಳಲ್ಲಿ ತರಬೇತಿ ಪಡೆದು, ತುಂಬ ಹೆಮ್ಮೆ ಪಡಬಹುದಾದ ಕೆಲಸಗಳನ್ನು ನಿರ್ವಹಿಸಿದ್ದು ಸುಜಲ ಮತ್ತು ಸುಶೌಚ ಕ್ಷೇತ್ರದಲ್ಲಿ ಹೊಸ ಮಾನದಂಡಗಳನ್ನು ರೂಪಿಸಿದೆ ಎಂದೇ ಹೇಳಬೇಕು ಎಂದು ವಿವರಿಸುತ್ತಾರೆ ಜಯಮಾಲಾ.

Group Photosಸಮುದಾಯದ ಮಧ್ಯೆ ‘ನೆಗೋಷಿಯೇಟರ್’ಗಳಾಗಿ, ಅನೇಕ ಮಹತ್ವದ ಪಾತ್ರಗಳನ್ನು ನಿರ್ವಹಿಸಿ ‘ವಿಸಿಬಲ್ ಛೇಂಜ್’ ತಂದಿತ್ತಿರುವುದು ಸಾಮಾನ್ಯ ಸಾಧನೆ ಏನಲ್ಲ. ಇವರೆಲ್ಲ ವಾಟ್‌ಸ್ಯಾನ್ ಫೆಲೊಷಿಪ್ ಪ್ರೋಗ್ರಾಂ ಬಯಸುವ ಗುರಿ ಸಾಧನೆಯ ಆಚೆಯೂ ಆಸಕ್ತಿಯಿಂದ ಕೆಲಸ ನಿರ್ವಹಿಸಿದ್ದು, ಪ್ರೇರಣಾದಾಯಿ. ಸ್ಥಳೀಯ ಸಮುದಾಯಗಳ ಸಾಮಾಜಿಕ ಬದಲಾವಣೆಯ ಹರಗೋಲು ಹೊತ್ತವರಾಗಿ, ಪಂಚಾಯ್ತಿ ಮತ್ತು ಸಮುದಾಯಗಳ ಮಧ್ಯೆ ವಿಶ್ವಾಸದ ಸೇತುವಾಗಿ, ಬ್ಯಾಂಕ್‌ಗಳಂತಹ ಇತರೆ ಆಡಳಿತಾತ್ಮಕ ಸಂಸ್ಥೆಗಳೊಟ್ಟಿಗೆ ಸಂಬಂಧ-ಸಂಪರ್ಕ ಕಲ್ಪಿಸುವಲ್ಲಿ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಗಳ ಶ್ರಮ ಮನನೀಯ.

ವಿಶೇಷ ಎಂದರೆ, ಈ ಯುವ ವೃತ್ತಿಪರರು ಸ್ವತಃ ಕೈ ಕೆಸರಾಗಿಸಿಕೊಂಡಿದ್ದಾರೆ. ಮೈ-ಕೈಗೆ ಮಣ್ಣು ಮೆತ್ತಿಕೊಂಡಿದ್ದಾರೆ. ಬಾವಿ, ಕೊಳವೆ ಬಾವಿ, ಕೆರೆಗಳನ್ನು ಸ್ವಚ್ಛಗೊಳಿಸಿದ್ದಾರೆ. ರಸ್ತೆ, ಗಟಾರು, ಒಳ ಚರಂಡಿಗಳನ್ನು ಸಮುದಾಯದವರ ಸಹಭಾಗಿತ್ವದಲ್ಲಿ ಅಸಹ್ಯ ಪಟ್ಟುಕೊಳ್ಳದೇ ಶುಚಿಗೊಳಿಸಿದ್ದಾರೆ. ಬಯಲು ಶೌಚಕ್ಕೆ ಇತಿಶ್ರೀ ಹಾಡಿಸುವಲ್ಲಿ ಪಡಬಾರದ ಪಾಡು ಪಟ್ಟಿದ್ದಾರೆ. ಶುದ್ಧ ಕುಡಿಯುವ ನೀರಿನ ಲಭ್ಯತೆಯನ್ನು ಖಾತ್ರಿಗೊಳಿಸಿದ್ದಾರೆ. ಪಂಚಾಯ್ತಿಗಳು ಜನರ ಬೇಕು-ಬೇಡಗಳನ್ನು ಆಧರಿಸಿ ಕಾರ್ಯನಿರ್ವಹಿಸುವಂತೆ, ಯೋಜನಾ ಪ್ರಸ್ತಾವನೆ ಸಮುದಾಯದ ಸಹಭಾಗಿತ್ವದಲ್ಲಿ ನಿರೂಪಿಸುವಂತೆ ಸದಾ ಎಚ್ಚರ ಮತ್ತು ಸನ್ನದ್ಧ ಸ್ಥಿತಿಗೆ ಅಣಿಗೊಳಿಸಿದ್ದಾರೆ.

ಈ ಎಲ್ಲ ಪ್ರಯತ್ನಗಳ ಫಲವಾಗಿ, ಈ ಫೆಲೊಗಳನ್ನು ಅನೇಕ ಸ್ವಯಂಸೇವಾ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಅಭ್ಯುದಯ ಸಂಘಟನೆಗಳು ತಮ್ಮ ಯೋಜನೆಗಳ ಅನುಷ್ಠಾನದಲ್ಲಿ ಕೈಜೋಡಿಸುವಂತೆ ಕೋರಿರುವುದು, ಫೆಲೊಷಿಪ್‌ನ ಗುಣಮಟ್ಟಕ್ಕೆ ಹಿಡಿದ ಕನ್ನಡಿ ಎನ್ನುತ್ತಾರೆ ಜಯಮಾಲಾ.

ಇಂತಹ ಅನುಭವಿ ಮಾನವ ಸಂಪನ್ಮೂಲದ ಕೊರತೆ ವಾಟರ್ ಆಂಡ್ ಸ್ಯಾನಿಟೇಷನ್ ಕ್ಷೇತ್ರದಲ್ಲಿ ತುಂಬ ಇದ್ದು, ಇವರನ್ನು ಕ್ಷೇತ್ರದ ಬೇಡಿಕೆಗೆ ಅನುಗುಣವಾಗಿ ರೂಪಿಸುವ ಹಾದಿಯಲ್ಲಿ ಸರ್ಕಾರ ಸೇರಿದಂತೆ ಸಂಘ-ಸಂಸ್ಥೆಗಳು ಮುಂದೆ ಬಂದು, ಖರ್ಚುವೆಚ್ಚಗಳನ್ನು ನಿಭಾಯಿಸಿದ್ದೇ ಆದರೆ, ಸಾಮಾಜಿಕ ಅಭ್ಯುದಯದ ವಿವಿಧ ಕ್ಷೇತ್ರಗಳಲ್ಲಿ ಸಮತೋಲಿತ ಬೆಳವಣಿಗೆ ಸಾಧಿಸಲು ಸಾಧ್ಯವಾಗುವುದು. ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿಯ ಅಡಿ ಸಂಸ್ಥೆಗಳು ಧನ ಸಹಾಯಕ್ಕೆ ಮುಂದಾದಲ್ಲಿ ಕಂದರಗಳನ್ನು ಮುಚ್ಚಿ, ಸೇತುವೆಗಳನ್ನು ರೂಪಿಸಲು ಇಂತಹ ಹತ್ತು ಹಲವು ಫೆಲೊಷಿಪ್‌ಗಳು ಸಹಕಾರಿಯಾಗುವುದರಲ್ಲಿ ಸಂದೇಹವಿಲ್ಲ.

ವಾಟ್‌ಸ್ಯಾನ್ ಫೆಲೋಷಿಪ್ ಪ್ರೋಗ್ರಾಂ ಮೂಲಕ ಸೂಕ್ತ ಸಿದ್ಧತೆ ಮತ್ತು ಬದ್ಧತೆ ಹೊಂದಿದ, ಗ್ರಾಮಾಭಿವೃದ್ಧಿಯ ಪರ ಒಲವುಳ್ಳ ಶ್ರದ್ಧೆಯ ಮಾನವ ಸಂಪನ್ಮೂಲವನ್ನು ಸೃಷ್ಟಿಸುವಲ್ಲಿ ಸ್ಕೋಪ್ ಹಾಗೂ ತಂಡ ಯಶಸ್ವಿಯಾಗಿದೆ. ನಮ್ಮ ದೇಶವನ್ನು ಪ್ಲೇಗ್ ಮಾದರಿಯಲ್ಲಿ ಕಾಡುತ್ತಿರುವ ನೀರು ಮತ್ತು ನೈರ್ಮಲ್ಯ ಸಮಸ್ಯೆಗಳಿಗೆ ಸಮರ್ಪಕ ಉತ್ತರ ನೀಡುವಲ್ಲಿ ಈ ಯುವಪಡೆ ಸಿದ್ಧವಾಗಿದೆ ಎಂಬ ಹೆಮ್ಮೆ ನಮ್ಮದಾಗಿದೆ.

ಮಾಹಿತಿಗೆ/ಸಂಪರ್ಕ: www.arghyam.org / ೦೮೦ – ೪೧೬೯೮೯೪೧

*****************************************************************************************************************************************************************************

 ಲೇಖನಹರ್ಷವರ್ಧನ ವಿಶೀಲವಂತಧಾರವಾಡ

ಇದು ಸ್ಕೋಪ್-ಅರ್ಘ್ಯಂ ‘ವಾಟ್ಸ್ಯಾನ್’ ಫೆಲೋಷಿಪ್ ಪ್ರೋಗ್ರಾಂ’ ಯಶೋಗಾಥೆಯ ಸರಣಿಯ ೧೩ನೆಯ  ಹಾಗೂ ಅಂತಿಮ ಲೇಖನ
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*