ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೩೪: ಕೆರೆಯ ಜೋಗು, ಅರಣ್ಯ ನಿರ್ವಹಣೆಯಲ್ಲೇ ಲೋಪ!

ಕೆರೆಗಳ ಅಭಿವೃದ್ಧಿಯಲ್ಲಿ ನೈಸರ್ಗಿಕವಾದ ಜೌಗು ಭೂಮಿಗಳನ್ನು ರಕ್ಷಿಸುವುದು ಪ್ರಮುಖವಾದ ಅಂಶ. ಆದರೆ, ಇದಕ್ಕೆ ಅಭಿವೃದ್ಧಿ ಕಾರ್ಯದಲ್ಲಿ ಒತ್ತು ನೀಡಲಾಗಿಲ್ಲ. ಅಷ್ಟೇ ಅಲ್ಲ, ಕೆರೆ ಅಭಿವೃದ್ಧಿ ನೆಪದಲ್ಲಿ ಬಹಳಷ್ಟು ಮರಗಳನ್ನು ನಾಶಪಡಿಸಲಾಗಿರುವುದು ಶೋಚನೀಯ. ಇಂತಹ ಅಮಾನವೀಯ ಕಾಮಗಾರಿಗಳು ಕೆರೆ ಅಭಿವೃದ್ಧಿಯಲ್ಲಿ ನಡೆದಿವೆ.

KaikondaHalli

ಇಂತಹ ಅವಘಡಗಳನ್ನು ಕಂಡೇ ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ೨೦೧೫ನೇ (ಸಿಎಜಿ) ವರ್ಷದ ವರದಿಯಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರವು ಕೆರೆಗಳ ಜೀರ್ಣೋದ್ಧಾರದ ಸವಿವರ ಯೋಜನಾ ವರದಿಗಳನ್ನು ಅನುಮೋದಿಸುವಾಗ ನಿರ್ಮಿತ ಜೌಗು ಭೂಮಿಯ ಬದಲಿಗೆ ನೈಸರ್ಗಿಕ ಜೌಗುಭೂಮಿಗಳ ರಚನೆ ಮತ್ತು ಸಂರಕ್ಷಣೆಗೆ ಒತ್ತಾಯ ಮಾಡಬೇಕು ಎಂದು ಶಿಫಾರಸು ಮಾಡಿದೆ. ಆದರೂ ಇಂದಿಗೂ ಅದು ಅನುಷ್ಠಾನವಾಗದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.  ನೈಸರ್ಗಿಕ ಜೌಗುಭೂಮಿಗಳನ್ನು ರಕ್ಷಿಸುವ ಪ್ರಯತ್ನಗಳ ಅನುಪಸ್ಥಿತಿ ಪರೀಕ್ಷಾ-ತನಿಖೆ ನಡೆಸಿದ ಕೆರೆಗಳ ಸವಿವರ ಯೋಜನಾ ವರದಿಗಳು ಜೌಗುಭೂಮಿಗಳನ್ನು ಸಂರಕ್ಷಿಸುವ ಮಹತ್ವವನ್ನು ಒತ್ತಿ ಹೇಳಿವೆ. ಆದರೆ, ನೈಸರ್ಗಿಕ ಜೌಗುಭೂಮಿಗಳನ್ನು ಸಂರಕ್ಷಿಸಲು ನಕ್ಷೆಯನ್ನು ಒದಗಿಸುವುದರ ಬದಲು, ಅವುಗಳು ಕೃತಕ ಜೌಗುಭೂಮಿಗಳನ್ನು ನಿರ್ಮಿಸಲು ಶಿಫಾರಸು ಮಾಡಿವೆ.  ಪಿಸಿಸಿಎಫ್ ಅವರ ಸೂಚನೆಯಂತೆ (ಜುಲೈ ೨೦೦೮) ಜೌಗುಭೂಮಿಯ ರಚನೆಯು ಕೆರೆ ಪ್ರದೇಶದ ಶೇಕಡಾ ೨೫ಕ್ಕಿಂತ ಕಡಿಮೆಯಿರಬಾರದು. ೧೪ ಕೆರೆಗಳಲ್ಲಿ (ಅಲ್ಲಾಳಸಂದ್ರ, ಅಟ್ಟೂರು, ಬಿ.ನಾರಾಯಣಪುರ, ಚಿನ್ನಪ್ಪನಹಳ್ಳಿ, ಚೊಕ್ಕನಹಳ್ಳಿ, ದಾಸರಹಳ್ಳಿ, ದೊಡ್ಡಾನೆಕುಂದಿ, ಗಂಗಾಶೆಟ್ಟಿ, ಜಕ್ಕೂರು-ಸಂಪಿಗೇಹಳ್ಳಿ, ಕೈಗೊಂಡನಹಳ್ಳಿ, ಮೇಸ್ತ್ರಿಪಾಳ್ಯ, ರಾಚೇನಹಳ್ಳಿ, ವಿಭೂತಿಪುರ ಮತ್ತು ಯಲಹಂಕ) ನಿರ್ಮಿಸಿದ ಜೌಗು ಭೂಮಿಗಳನ್ನು ಒದಗಿಸಲಾಗಿದ್ದನ್ನು ಮತ್ತು ಈ ಎಲ್ಲ ಕೆರೆಗಳ ಜೌಗು ಭೂಮಿಗಳ ಪ್ರದೇಶವು ಕೆರೆ ಪ್ರದೇಶದ ಅಪೇಕ್ಷಿತ ಕನಿಷ್ಠ ಶೇಕಡಾ ೨೫ಕ್ಕಿಂತ ಬಹಳ ಕಡಿಮೆಯಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಜೌಗು ಭೂಮಿಗಳನ್ನು ಉಂಗುರಾಕಾರದ ಎತ್ತರದ ಏರಿಯ ಒಳಗೆ ಒದಗಿಸಿದನ್ನು ಗಮನಿಸಿತು, ಆದರೆ ಈ ಕೆರೆಗಳಲ್ಲಿ (ಅಲ್ಲಾಳಸಂದ್ರ ಮತ್ತು ಅಟ್ಟೂರು ಕೆರೆಗಳನ್ನು ಹೊರತುಪಡಿಸಿ) ಮಾರ್ಗಾಂತರಣ ಚರಂಡಿಗಳನ್ನು ಉಂಗುರಾಕಾರದ ಎತ್ತರದ ಏರಿಯ ಹೊರಗೆ ಒದಗಿಸಲಾಗಿತ್ತು. ಇದು ಜೌಗು ಭೂಮಿ ಪ್ರದೇಶವು (ಮತ್ತು ಕೆರೆಯ ನೀರು ನಿಂತಿರುವ ಪ್ರದೇಶ) ವರ್ಷದ ಬಹುಕಾಲ ಒಣಗಿರುವುದರಲ್ಲಿ ಪರಿಣಮಿಸಿತು. ಮಳೆಗಾಲದಲ್ಲೂ ಸಹ ಜೌಗುಭೂಮಿಯು ಒಣಗಿರುವುದನ್ನು ಮತ್ತು ಜಲವಾಸಿ ಸಸ್ಯಗಳು ಇಲ್ಲದಿರುವುದನ್ನು ಕೆರೆಗಳ ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿ ಗಮನಿಸಲಾಯಿತು. ಜಲವಾಸಿ ಸಸ್ಯಗಳ ಅನುಪಸ್ಥಿತಿಯಿಂದ ನಿರ್ಮಿತವಾದ ಜೌಗುಭೂಮಿಗಳು ಮಾಲಿನ್ಯವನ್ನು ಹೀರಿಕೊಳ್ಳುವಲ್ಲಿ ಅಸಮರ್ಪಕವಾಗಿದ್ದವು ಎಂದು ಭಾವಿಸಲಾಯಿತು. ಅಲ್ಲಾಳಸಂದ್ರ ಕೆರೆಯ ಪ್ರಕರಣದಲ್ಲಿ ಗಮನಿಸಿದಂತೆ, ಜೌಗು ಭೂಮಿ ನಿರ್ಮಾಣದಲ್ಲಿ  ಬಹುಸ್ಥರದ ಇಳಿಜಾರು ವಿನ್ಯಾಸದ ಕೊರತೆಯಿಂದ ಮುಂದಡ ಪ್ರದೇಶದ ಹತ್ತಿರದಲ್ಲಿ ಕೊಳಚೆ ನೀರು ಕೆರೆಯನ್ನು ಪ್ರವೇಶಿಸುತ್ತಿತ್ತು.   ಅಲ್ಲಾಳಸಂದ್ರ ಕೆರೆಯ ಜೌಗುಭೂಮಿಯನ್ನು ಹಾಳುಮಾಡಿ, ಶೋಧನೆಯಿಲ್ಲದೇ ಕೊಳಚೆ ನೀರನ್ನು ಕೆರೆಗೆ ಬಿಡುತ್ತಿರುವುದನ್ನು ಅಧ್ಯಯನ ಸಮಯದಲ್ಲಿ ನೋಡಲಾಗಿದೆ. ಈ ಅಂಶಗಳನ್ನು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿತು (ಮಾರ್ಚ್ ೨೦೧೫) ಮತ್ತು ಹಾಳಾದ ಏರಿಗಳನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಕೆರೆಗಳಲ್ಲಿ ಒಳಹರಿವಿನ ಮಟ್ಟಗಳನ್ನು ಖಚಿತಪಡಿಸಲಾಗುವುದು ಎಂದು ತಿಳಿಸಿತು.  ಪರೀಕ್ಷಾ-ತನಿಖೆ ನಡೆಸಿದ ಕೆರೆಗಳಲ್ಲಿ, ಬೆಂಗಳೂರಿನ ನಾಗಾವರ ಕೆರೆಯು ನೈಸರ್ಗಿಕ ಜೌಗುಭೂಮಿಯ ರಚನೆಯನ್ನು ಗಮನಿಸಿದ ಏಕಮಾತ್ರ ಕೆರೆಯಾಗಿದ್ದಿತು. ಆದರೆ, ಈ ಜೌಗುಭೂಮಿಯೂ ಸಹ ನಿರ್ವಹಣೆಯ ಕೊರತೆಯಿಂದ ನೀರಿನ ಗಂಟೆ ಹೂವುಗಳಿಂದ ಮತ್ತು ತೇಲುತ್ತಿದ್ದ ಕಟ್ಟಡಗಳ ಭಗ್ನಾವಶೇಷಗಳಿಂದ ತುಂಬಿತ್ತು.

ಅರಣ್ಯೀಕರಣ ಕಾಮಗಾರಿಗಳನ್ನು ಕಾರ್ಯಗತಗೊಳಿಸುವಲ್ಲಿ ಲೋಪದೋಷಗಳು: ಕೆರೆಯ ನೈಸರ್ಗಿಕ ಗುಣಗಳನ್ನು ಉಳಿಸಿಕೊಳ್ಳಲು ಕೆರೆಯ ಸುತ್ತಮುತ್ತ ಅರಣ್ಯವನ್ನು ಬೆಳೆಸುವುದು ಒಂದು ಪ್ರಮುಖ ಕ್ರಮ.  ಲೆಕ್ಕಪರಿಶೋಧನೆಯು ಕೆಳಕಂಡ ಲೋಪದೋಷಗಳನ್ನು ಗಮನಿಸಿತು:

  • ಬಳಕೆಯಲ್ಲಿರದ ಕೆರೆಗಳನ್ನೂ ಸಹ ಅವುಗಳ ಮೂಲಸ್ಥಿತಿಗೆ ತರಬೇಕೆಂದು ರಾಜ್ಯ ಸರ್ಕಾರವು ಸೂಚಿಸಿತು (ಏಪ್ರಿಲ್ ೨೦೧೦). ಆದರೆ, ಈ ಸೂಚನೆಗಳನ್ನು ಉಲ್ಲಂಘಿಸಿ ಪರೀಕ್ಷಾ-ತನಿಖೆ ನಡೆಸಿದ ಏಳು ಪ್ರಕರಣಗಳಲ್ಲಿ (ಅಂಬ್ಲೀಪುರ ಮೇಲಿನಕೆರೆ, ಅಟ್ಟೂರು, ಬಿ.ಚನ್ನಸಂದ್ರ, ಚಿಕ್ಕ ಬೆಳ್ಳಂದೂರು, ಚೊಕ್ಕನಹಳ್ಳಿ, ಕೋಗಿಲು ಮತ್ತು ತಿರುಮೇನಹಳ್ಳಿ) ಕೆರೆ ಅಂಗಳದಲ್ಲಿಯೇ ಸಸ್ಯಗಳನ್ನು ನೆಡಲಾಗಿತ್ತು.
  • ಪರೀಕ್ಷಾ-ತನಿಖೆ ನಡೆಸಿದ ಎರಡು ಕೆರೆಗಳಲ್ಲಿ, ಚೊಕ್ಕನಹಳ್ಳಿ ಮತ್ತು ತಿರುಮೇನಹಳ್ಳಿ, ೨೦೧೦-೧೧ರ ಅವಧಿಯಲ್ಲಿ ಕೆರೆ ಅಂಗಳದಲ್ಲಿ ಅರಣ್ಯೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು ಮತ್ತು ಆ ನಂತರ ೨೦೧೩-೧೪ರ ಅವಧಿಯಲ್ಲಿ ಹೂಳೆತ್ತುವುದನ್ನು ಒಳಗೊಂಡಂತೆ ಕೆರೆಯ ಜೀರ್ಣೋದ್ಧಾರ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಜೀರ್ಣೋದ್ಧಾರ ಕಾಮಗಾರಿಗಳ ನಂತರ ಯಾವುದೇ ಸಸ್ಯಗಳು ಬದುಕುಳಿಯದೇ ಇರುವುದನ್ನು ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿ ಲೆಕ್ಕಪರಿಶೋಧನೆಯು ಗಮನಿಸಿತು. ಆದ್ದರಿಂದ ಅರಣ್ಯೀಕರಣದ ಪ್ರಯತ್ನಗಳು ಉದ್ದೇಶಿತ ಫಲಿತಾಂಶವನ್ನು ನೀಡಲಿಲ್ಲ.

ಬೇಲಿ ಹಾಕುವ ಕಾಮಗಾರಿಗಳು ಪ್ರಗತಿಯಲ್ಲಿದ್ದಾಗಲೇ ಅರಣ್ಯೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಯಿತು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿತು (ಮಾರ್ಚ್ ೨೦೧೫). ಒತ್ತುವರಿಯನ್ನು ತೆರವುಗೊಳಿಸಿದ ಪ್ರದೇಶದಲ್ಲಿ ಸಸ್ಯಗಳನ್ನು ನೆಡಲು ಈ ಕ್ರಮ ಅಗತ್ಯವಾಗಿತ್ತು.

 

allalasandra-cagಈ ಉತ್ತರವನ್ನು ಒಪ್ಪಲಾಗುವುದಿಲ್ಲ ಎಂದು ಸಿಎಜಿ ತಿಳಿಸಿದೆ. ಏಕೆಂದರೆ, ಕೆರೆಗಳ ಹೂಳೆತ್ತುವುದರಿಂದ ಮತ್ತು ಎತ್ತರದ ಉಂಗುರಾಕಾರದ ಏರಿಯನ್ನು ರಚಿಸಿದ್ದರಿಂದ ಆ ಸಸಿಗಳು ನಾಶವಾದವು.  ಇದು ಅರಣ್ಯೀಕರಣ ಕಾಮಗಾರಿಗಳ ಮೇಲೆ ಭರಿಸಿದ ವೆಚ್ಚವು ವ್ಯರ್ಥವಾಗುವಲ್ಲಿ ಪರಿಣಮಿಸಿತು.  ಇದಕ್ಕೆ ವ್ಯತಿರಿಕ್ತವಾಗಿ ಕೈಗೊಂಡನಹಳ್ಳಿ ಕೆರೆಯಲ್ಲಿ ಕೊಳಚೆನೀರಿನ ಮಾರ್ಗಾಂತರಣ ಪೈಪುಗಳನ್ನು ಅಳವಡಿಸಲು ಮರಗಳನ್ನು ಮನಸೋಇಚ್ಛೆ ಕಡಿಯಲಾಗಿರುವುದನ್ನು ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿ ಲೆಕ್ಕಪರಿಶೋಧನೆಯು ಗಮನಿಸಿತು.

ಪರಿಣಾಮದ ಮೌಲ್ಯಮಾಪನ: ಹಲವು ವರ್ಷಗಳಲ್ಲಿ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳ ಮೌಲ್ಯಮಾಪನವು ಆ ಕಾರ್ಯಕ್ರಮಗಳ ಯೋಜನೆಯಲ್ಲಿ ಮತ್ತು ಕಾರ್ಯಾಚರಣೆಯಲ್ಲಿ ಗಮನಿಸಿದ ಕೊರತೆಗಳ ಒಳನೋಟವನ್ನು ನೀಡುತ್ತವೆ. ಗಮನಿಸಿದ ಕೊರತೆಗಳನ್ನು ಸರಿಪಡಿಸಲು ಅವಶ್ಯಕ ಪರಿಹಾರಾತ್ಮಕ ಕ್ರಮಗಳನ್ನು ಸಹ ಅದು ಒದಗಿಸುತ್ತದೆ. ಕೆರೆಗಳ ಜೀರ್ಣೋದ್ಧಾರದ ಕಾಮಗಾರಿಗಳನ್ನು ಕಾರ್ಯಗತಗೊಳಿಸಿದ ನಂತರ ಯಾವುದೇ ಅನುಷ್ಠಾನ ಸಂಸ್ಥೆಗಳು ಪರಿಣಾಮದ ಮೌಲ್ಯಮಾಪನವನ್ನು ಮಾಡಿರಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಅಂತರ್ಜಲ ಮಟ್ಟ, ನೀರಿನ ಗುಣಮಟ್ಟ, ಜೌಗುಭೂಮಿಗೆ, ಪ್ರಮುಖ ಕಲ್ಲಿನ ಜಾತಿಗಳಿಗೆ, ಸಸ್ಯಗಳಿಗೆ, ಪ್ರಾಣಿಗಳಿಗೆ ಮತ್ತು ಜಲಚರ ಪಕ್ಷಿಗಳಿಗೆ ಮಾಲಿನ್ಯದ ಕಾರಣದಿಂದ ಆಗಿರುವ ಹಾನಿಯನ್ನು ಮತ್ತು ಜೀರ್ಣೋದ್ಧಾರ ಕಾಮಗಾರಿಗಳಿಗೆ ಮೊದಲು ಮತ್ತು ನಂತರ ಕೆರೆಗಳ ಸಮೀಪದಲ್ಲಿರುವ ಮನುಷ್ಯರ ಆರೋಗ್ಯ, ಇವುಗಳ ಮೇಲಿನ ಪರಿಣಾಮದ ಮೌಲ್ಯಮಾಪನವನ್ನೂ ಸಹ ಮಾಡಿರಲಿಲ್ಲ. ಮಾನವ ಆರೋಗ್ಯದ ಮೇಲೆ ಕೆರೆಗಳ ಮಾಲಿನ್ಯದ ಪರಿಣಾಮದ ಮೌಲ್ಯಮಾಪನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊಣೆಗಾರನಾಗಿತ್ತೆಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಉತ್ತರಿಸಿತು (ಮಾರ್ಚ್ ೨೦೧೫). ಉತ್ತರವನ್ನು ಒಪ್ಪಲಾಗುವುದಿಲ್ಲ, ಏಕೆಂದರೆ ಜೀರ್ಣೋದ್ಧಾರ ಕಾಮಗಾರಿಗಳನ್ನು ಕೈಗೊಳ್ಳುವ ಮೊದಲು ಮತ್ತು ನಂತರ ಕೆರೆಗಳ ಮೇಲೆ ಮಾಲಿನ್ಯದ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಅನುಷ್ಠಾನ ಸಂಸ್ಥೆಗಳು ಯಾವುದೇ ಪ್ರಯತ್ನ ಮಾಡಿರಲಿಲ್ಲ. ಅಲ್ಲದೆ, ವಾತಾವರಣದ ಪರಿಸ್ಥಿತಿಗಳು ಕೆಡುವುದರಿಂದ ಏಕಾಏಕಿ ರೋಗಗಳು ಉಲ್ಬಣಿಸುವುದನ್ನು ಮೌಲ್ಯಮಾಪನ ಮಾಡಲು ನಾಗರೀಕ ಸಂಸ್ಥೆಯಾಗಿರುವ ಬಿಬಿಎಂಪಿಯು ಹೊಣೆಗಾರನಾಗಿತ್ತು. ಸಿಎಜಿ ವರದಿಯಲ್ಲಿ ಹೊಣೆಗಾರಿಕೆಯನ್ನು ನೀಡಿದ್ದರೂ ಅದನ್ನು ಅರಿತು ಮುಂದೆ ಹೋಗದೆ, ಕೆರೆ ಅಭಿವೃದ್ಧಿ ಮಾಡುತ್ತಿರುವ ಸಂಸ್ಥೆಗಳು ಮತ್ತೆ ಅದೇ ತಪ್ಪು ಮಾಡುತ್ತಿರುವುದು ನಾಗರಿಕರಿಗೆ ಹಣವನ್ನು ಲೂಟಿ ಮಾಡುತ್ತಿವೆ. ಈ ಬಗ್ಗೆ ಸ್ಥಳೀಯ ನಾಗರಿಕರು ಎಚ್ಚೆತ್ತುಕೊಳ್ಳುವುದೇ ಸೂಕ್ತ ಮಾರ್ಗ.

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*