ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೩೩: ಕೆರೆ ಕಲ್ಲು, ಮಣ್ಣೇ ಹಣದ ಮೂಲ!

ಕೆರೆಗಳ ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದರಲ್ಲಿ ಹೆಚ್ಚು ಹಣ ವೆಚ್ಚ ಮಾಡಬಹುದು ಎಂಬ ಅರಿವಿನಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಿಪುಣರು. ಅದಕ್ಕೇ ರಾಜ್ಯದಲ್ಲಿ ಆಗುತ್ತಿರುವ ಕೆರೆಗಳ ಅಭಿವೃದ್ಧಿಯಲ್ಲಿ ಮಣ್ಣು ಹಾಗೂ ಕಲ್ಲು ತೆಗೆಯುವಲ್ಲೇ ಅವರೆಲ್ಲ ನಿಷ್ಣಾತರು. ಹೂಳೆತ್ತುವ ಕಾಮಗಾರಿಗಳು ಬರೀ ಹಣ ಮಾಡುವ ಉದ್ದೇಶವನ್ನೇ ಹೊಂದಿಲ್ಲ. ಬದಲಿಗೆ ಅವರ ಅತಿಯಾಸೆಗೆ ಸಸ್ಯ-ಪ್ರಾಣಿಕುಲದ ಮೇಲೂ ಪ್ರತಿಕೂಲ ಪ್ರಭಾವ ಬೀರುತ್ತಿದೆ.

ChokkanahalliLakeಅಧಿಕ ಹೂಳೆತ್ತುವ ಕಾಮಗಾರಿಗಳೇ ನಡೆಯುತ್ತಿದ್ದು, ಎನ್‌ಎಲ್‌ಸಿಪಿ ಮಾರ್ಗದರ್ಶಿ ಸೂತ್ರಗಳ ಅನ್ವಯ ಹೂಳೆತ್ತುವುದರಿಂದ ಕೆರೆಯ ಆಳದಲ್ಲಿ ಹೆಚ್ಚಳವಾಗಿ ಸಸ್ಯ ಮತ್ತು ಪ್ರಾಣಿಕುಲದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತದೆ. ಹೂಳೆತ್ತುವ ಕಾಮಗಾರಿಯನ್ನು ತಜ್ಞರ ಮಾರ್ಗದರ್ಶನದಲ್ಲಿ ವೈಜ್ಞಾನಿಕವಾಗಿ ಕಾರ್ಯಗತಗೊಳಿಸಬೇಕು. ಅಧಿಕವಾಗಿ ಹೂಳೆತ್ತುವುದರಿಂದ ಜಲಧಾರಣ ಸಮಯವು (ಜಲಧಾರಣ ಸಮಯವೆಂದರೆ ಕೆರೆಯಲ್ಲಿ ನೀರು ನಿಂತಿರುವ ಸರಾಸರಿ ಸಮಯ. ನೀರು ನಿಂತಿರುವ ಸಮಯ ಹೆಚ್ಚಾದರೆ, ಮಾಲಿನ್ಯಕಾರಕಗಳು ಕೆರೆಯಲ್ಲಿ ಹೆಚ್ಚು ಸಮಯ ಉಳಿಯುತ್ತವೆ ಹಾಗೂ ಕೆರೆಯಿಂದ ನೀರು ಬೇಗ ಖಾಲಿಯಾಗುವುದಿಲ್ಲವಾದ್ದರಿಂದ, ಕೆರೆಯ ಮಾಲಿನ್ಯವನ್ನು ಅಧಿಕಗೊಳಿಸುತ್ತದೆ.) ಹೆಚ್ಚಾಗುವ ಕಾರಣದಿಂದ ಕೆರೆಯ ಪರಿಸರವನ್ನು ಬಾಧಿಸುವುದು ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ೨೦೧೫ನೇ (ಸಿಎಜಿ) ವರ್ಷದ ವರದಿಯಲ್ಲಿ ಸವಿವರವಾಗಿ ತಿಳಿಸಲಾಗಿದೆ. ಅಧಿಕವಾಗಿ ಹೂಳೆತ್ತದೇ ಹಾಗೂ ಕಡಿದಾದ ಏರಿಯನ್ನು ರಚಿಸದ ಮೂಲಕ ನೈಸರ್ಗಿಕ ತೀರ ಪ್ರದೇಶವನ್ನು ಸಂರಕ್ಷಿಸುವ ಅಗತ್ಯತೆಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಪಿಸಿಸಿಎಫ್) ಒತ್ತಿ ಹೇಳಿದ್ದರು (೨೦೦೮). ಕೆರೆ ಏರಿಯ ರಚನೆಗೆ ಅವಶ್ಯಕತೆಯಿರುವಷ್ಟು ಮಾತ್ರ ಕೆರೆಯ ಹೂಳೆತ್ತುವುದನ್ನು ಸೀಮಿತಗೊಳಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರದ ತಾಂತ್ರಿಕ ಸಲಹಾ ಸಮಿತಿಯು ಶಿಫಾರಸು ಮಾಡಿತ್ತು. ಬಿಬಿಎಂಪಿ ಮತ್ತು ಬಿಡಿಎಗಳು ಕಾರ್ಯಗತಗೊಳಿಸಿದ ಕಾಮಗಾರಿಗಳನ್ನು ಮೇಲ್ವಿಚಾರಣೆ ಮಾಡುವಂತೆ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಕೂಡ ಸೂಚಿಸಿತ್ತು (ಏಪ್ರಿಲ್ ೨೦೧೦).  ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲು, ಅಂತರ್ಜಲವು ಪುನರ್ಭರ್ತಿಯಾಗಲು ಮುಂತಾದವುದಕ್ಕಾಗಿ ಹೂಳೆತ್ತುವುದನ್ನು ಕೈಗೊಂಡಿರುವುದನ್ನು ದಾಖಲೆಗಳ ಪರಿಶೀಲನೆಯು ತಿಳಿಯಪಡಿಸಿತು. ಅಂದಾಜುಗಳಿಗೆ ಮತ್ತು ಸವಿವರ ಯೋಜನಾ ವರದಿಗೆ ಹೋಲಿಸಿದರೆ ತೆಗೆದಿದ್ದ ಹೂಳಿನ ಪರಿಮಾಣವು ಬಹಳ ಅಧಿಕವಾಗಿತ್ತೆಂದು ಗಮನಿಸಲಾಯಿತು. ಅಧಿಕ ಅಗೆತಕ್ಕಾಗಿ ದಾಖಲೆಗಳಲ್ಲಿ ಯಾವುದೇ ಸಮರ್ಥನೆಯಿರಲಿಲ್ಲ ಮತ್ತು ಪರೀಕ್ಷಾ-ತನಿಖೆ ನಡೆಸಿದ ೧೩  ಕೆರೆಗಳಲ್ಲಿ (ಅಲ್ಲಾಳಸಂದ್ರ, ಅಟ್ಟೂರು, ಬಿ.ನಾರಾಯಣಪುರ, ಚಿನ್ನಪ್ಪನಹಳ್ಳಿ, ದಾಸರಹಳ್ಳಿ, ದೊಡ್ಡಾನೆಕುಂದಿ, ಗಂಗಾಶೆಟ್ಟಿ, ಜಕ್ಕೂರು- ಸಂಪಿಗೇಹಳ್ಳಿ, ಕೈಗೊಂಡನಹಳ್ಳಿ, ಕೌದೇನಹಳ್ಳಿ, ಮೇಸ್ತ್ರಿಪಾಳ್ಯ, ರಾಚೇನಹಳ್ಳಿ ಮತ್ತು ಯಲಹಂಕ) ಅಧಿಕ ಹೂಳೆತ್ತುವುದರ ಮೇಲೆ ಭರಿಸಿದ್ದ ವೆಚ್ಚವು ೪.೦೨ ಕೋಟಿಗಳಾಗಿತ್ತು. ಮುಂದುವರೆದು, ಮೂರು  ಕೆರೆಗಳ (ಕೋಗಿಲು, ತಿರುಮೇನಹಳ್ಳಿ ಮತ್ತು ವೆಂಕಟೇಶಪುರ) ಸವಿವರ ಯೋಜನಾ ವರದಿಗಳಲ್ಲಿ ಹೂಳೆತ್ತುವ ಚಟುವಟಿಕೆಗಳ ಪ್ರಸ್ತಾವನೆ ಇರದಿದ್ದರೂ ಸಹ, ೯೯.೭೮ ಲಕ್ಷ ವೆಚ್ಚವನ್ನು ಭರಿಸಿ ಹೂಳೆತ್ತುವ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗಿತ್ತು. ಆದುದರಿಂದ ಅಧಿಕವಾಗಿ ಹೂಳೆತ್ತಿರುವುದು ಜಲಧಾರಣ ಸಮಯವನ್ನು ಅಧಿಕಗೊಳಿಸಿ ತತ್ಪರಿಣಾಮವಾಗಿ ಕೆರೆಗಳ ಮಾಲಿನ್ಯದ ಮಟ್ಟವನ್ನು ಹೆಚ್ಚಾಗಿಸಿತು.

ಬಿಬಿಎಂಪಿ ಮತ್ತು ಬಿಡಿಎಗಳು ಕಾರ್ಯಗತಗೊಳಿಸಿದ ಅಧಿಕ ಹೂಳೆತ್ತುವ ಕಾಮಗಾರಿಗಳನ್ನು ಮೇಲ್ವಿಚಾರಣೆ ಮಾಡಲು ಕೆರೆ ಅಭಿವೃದ್ಧಿ ಪ್ರಾಧಿಕಾರವೂ ಸಹ ವಿಫಲವಾಯಿತು. ಕೆರೆ ಅಭಿವೃದ್ಧಿ ಪ್ರಾಧಿಕಾರವು ಲೆಕ್ಕಪರಿಶೋಧನಾ ಆಕ್ಷೇಪಣೆಗಳನ್ನು ಒಪ್ಪಿಕೊಂಡಿತು ಮತ್ತು ಕೆರೆಗಳ ನಿಯತಕಾಲಿಕ ಪರಿಶೀಲನೆ ಮತ್ತು ಮೇಲ್ವಿಚಾರಣೆಯನ್ನು ನಡೆಸಲು ಸಾಕಷ್ಟು ತಾಂತ್ರಿಕ ಸಿಬ್ಬಂದಿಯನ್ನು ಹೊಂದಿರಲಿಲ್ಲ ಎಂದು ತಿಳಿಸಿತು (ಏಪ್ರಿಲ್ ೨೦೧೫).  ಕೆರೆ ಅಂಗಳವನ್ನು ಸಾಸರ್ ಆಕೃತಿಗೆ ತರಲು ಕೆರೆ ಅಂಗಳವನ್ನು ಆಳ ಮಾಡಲಾಯಿತೆಂದು ಬಿಡಿಎ ತಿಳಿಸಿತು (ಜನವರಿ ೨೦೧೫). ಉತ್ತರವನ್ನು ಒಪ್ಪಲಾಗುವುದಿಲ್ಲ ಎಂದೂ ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ. ಏಕೆಂದರೆ ಇದು ಪಿಸಿಸಿಎಫ್ ನೀಡಿದ (ಜುಲೈ ೨೦೦೮) ತಜ್ಞ ಮಾರ್ಗದರ್ಶನಗಳಿಗೆ ವಿರುದ್ಧವಾಗಿತ್ತು. ಕೆರೆಗಳಲ್ಲಿ ಕಟ್ಟಡ ಅವಶೇಷಗಳು ಮತ್ತು ಇತರೆ ತ್ಯಾಜ್ಯಗಳ ಸಂಗ್ರಹದ ಕಾರಣದಿಂದ ಅಧಿಕವಾಗಿ ಹೂಳೆತ್ತಲಾಯಿತು ಮತ್ತು ಇದು ಸವಿವರ ಯೋಜನಾ ವರದಿಗಳ ತಯಾರಿಕೆಯಲ್ಲಿನ ಹಾಗೂ ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ವಿಳಂಬದಿಂದ ಆಗಿದ್ದು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿತು (ಮಾರ್ಚ್ ೨೦೧೫). ಅಲ್ಲದೇ ಕೆಸರಿನಂತಹ ಮಣ್ಣನ್ನು ಏರಿಯ ರಚನೆಗೆ ಬಳಸುವುದಕ್ಕಾಗುವುದಿಲ್ಲ. ಉತ್ತರವನ್ನು ಒಪ್ಪಲಾಗುವುದಿಲ್ಲ, ಏಕೆಂದರೆ ಒಂದು ಸಾರಿ ಅನುಷ್ಠಾನ ಸಂಸ್ಥೆಗಳಿಗೆ ಕೆರೆಯನ್ನು ಹಸ್ತಾಂತರಿಸಿದ ನಂತರ, ಕಟ್ಟಡ ಅವಶೇಷಗಳು ಮತ್ತು ಇತರೆ ತ್ಯಾಜ್ಯಗಳು ಸಂಗ್ರಹವಾಗುವುದನ್ನು ತಪ್ಪಿಸಬೇಕಿತ್ತು.   ಮಣ್ಣನ್ನು ‘ಕೆಸರು ಮಣ್ಣು’ ಎಂದು ವರ್ಗೀಕರಿಸಲು ಸಮರ್ಪಕ ಮಣ್ಣಿನ ಪರೀಕ್ಷಾ ವರದಿಗಳಿರಬೇಕು, ಆದರೆ ಅವು ಇರಲಿಲ್ಲ. ಅಲ್ಲದೆ, ಒಣಮಣ್ಣನ್ನೂ ಸಹ ಕೆರೆ ಪ್ರದೇಶದಿಂದ ಹೊರಗೆ ಸಾಗಿಸಲಾಯಿತು ಎಂದು ಬಿಲ್ಲುಗಳು ತೋರಿಸಿದವು.  ಆದ್ದರಿಂದ ಈ ವಿಷಯದ ತನಿಖೆಯಾಗಬೇಕು ಮತ್ತು ಸವಿವರ ಯೋಜನಾ ವರದಿಗಳಿಗೆ ಹೋಲಿಸಿದರೆ, ಅಧಿಕವಾಗಿ ಹೂಳೆತ್ತಿದ್ದಕ್ಕೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕಿದೆ. ಸಾಸರ್ ಆಕೃತಿಯ ಹೂಳೆತ್ತಿರುವುದನ್ನು ಬಿ.ನಾರಾಯಣಪುರ ಕೆರೆಯಲ್ಲಿ ಮತ್ತು ಉಂಗುರಾಕಾರದ ಏರಿಯನ್ನು ನಿರ್ಮಿಸಿರುವುದನ್ನು ಚೊಕ್ಕನಹಳ್ಳಿ ಕೆರೆಯಲ್ಲಿ ಗಮನಿಸಲಾಗಿದೆ.

ಸಾಗಣೆ ವೆಚ್ಚಗಳ ಅಕ್ರಮ ಪಾವತಿ: ಗುತ್ತಿಗೆದಾರರಿಗೆ ಕಲ್ಲುಗಣಿಯಿಂದ ಕಾಮಗಾರಿಯ ಸ್ಥಳಕ್ಕೆ ವಸ್ತುಗಳನ್ನು ಸಾಗಿಸಲು ಮತ್ತು ಬಳಕೆ ಮಾಡದ/ಬೇಕಿಲ್ಲದ ವಸ್ತುಗಳನ್ನು ಗುರುತಿಸಿದ ಗುಡ್ಡೆ ಹಾಕುವ ಸ್ಥಳಕ್ಕೆ ವಿಲೇವಾರಿ ಮಾಡಲು ಸಾಗಣೆ ದರವನ್ನು ಪಾವತಿಸಬೇಕು.  ಅಧಿಕ ಹೂಳೆತ್ತುವುದರಿಂದಾದ ತೋಡಿದ ಮಣ್ಣನ್ನು ಹೊರಹಾಕಲು ಗುತ್ತಿಗೆದಾರರಿಗೆ ಪಾವತಿ ಮಾಡಿದ ಸಾಗಣೆ ವೆಚ್ಚವೂ ಸಹ ಹೆಚ್ಚಾಗಿಸಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಸಂಹಿತೆಯ ಉಪಬಂಧಗಳಲ್ಲಿ ಅವಶ್ಯವಿರುವಂತೆ ಅನುಮೋದಿತ ತಾಂತ್ರಿಕ ಮಂಜೂರಾತಿಗಳ ಜೊತೆಗೆ ಸಾಗಣೆ ಚಿತ್ರ/ನಕ್ಷೆಗಳನ್ನು ಲಗತ್ತಿಸಿರದಿದ್ದರೂ ಸಹ, ಗುತ್ತಿಗೆದಾರರಿಗೆ ಪಾವತಿಗಳನ್ನು ಮಾಡಲಾಗಿತ್ತು. ಗುತ್ತಿಗೆದಾರರು ಬೇಡಿಕೆ ಮಾಡಿದ ಸಾಗಣೆ ವೆಚ್ಚಗಳಿಗೆ ಸಾಗಾಣಿಕೆಯ ವಿವರಗಳಿರಲಿಲ್ಲ.  ಲಭ್ಯವಿದ್ದ ಮಣ್ಣನ್ನು ಬಳಸಿಕೊಳ್ಳುವ ಬದಲು ಮಣ್ಣಿನ ಹೊಂದಾಣಿಕೆ ಪರೀಕ್ಷಾ ವರದಿಗಳಂತಹ ಸಮರ್ಥನೆಯಿಲ್ಲದೆ, ಮಣ್ಣನ್ನು ಬೇರೆ ಪ್ರದೇಶದಿಂದ ತರಲಾಯಿತು.  ಪರೀಕ್ಷಾ-ತನಿಖೆ ನಡೆಸಿದ ೩೨ ಪ್ರಕರಣಗಳಲ್ಲಿ (ಅಂಬ್ಲೀಪುರ ಮೇಲಿನಕೆರೆ, ಅಟ್ಟೂರು, ಚಿನ್ನಪ್ಪನಹಳ್ಳಿ, ದಾಸರಹಳ್ಳಿ, ಗಂಗಾಶೆಟ್ಟಿ, ಜಕ್ಕೂರು-ಸಂಪಿಗೇಹಳ್ಳಿ, ಕೈಗೊಂಡನಹಳ್ಳಿ, ಕೋಗಿಲು, ಮೇಸ್ತ್ರಿಪಾಳ್ಯ, ರಾಚೇನಹಳ್ಳಿ, ತಿರುಮೇನಹಳ್ಳಿ, ವಿಭೂತಿಪುರ ಮತ್ತು ಯಲಹಂಕ) ೪.೯೧ ಕೋಟಿಯನ್ನು ಸಾಗಣೆ ವೆಚ್ಚವನ್ನಾಗಿ ಪಾವತಿ ಮಾಡಲಾಗಿತ್ತು.  ಕೆರೆಗಳ ಹತ್ತಿರ ಗುಡ್ಡೆ ಹಾಕುವ ಪ್ರದೇಶದ ಲಭ್ಯತೆ ಇರದಿದ್ದುದರಿಂದ, ಸಾಗಣೆ ವೆಚ್ಚಗಳನ್ನು ಲೆಕ್ಕ ಹಾಕುವಲ್ಲಿ ವ್ಯತ್ಯಾಸಗಳಿದ್ದವು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿತು (ಮಾರ್ಚ್ ೨೦೧೫). ಉತ್ತರವನ್ನು ಒಪ್ಪಲಾಗುವುದಿಲ್ಲ ಏಕೆಂದರೆ ಸಾಗಾಣಿಕೆ ವೆಚ್ಚವನ್ನು ಲೆಕ್ಕ ಹಾಕುವುದಕ್ಕಾಗಿ ಇದು ಅನುಮೋದಿತ ತಾಂತ್ರಿಕ ಅಂದಾಜುಪಟ್ಟಿಗಳೊಡನೆ ಲಗತ್ತಿಸಬೇಕಾದ ಸಾಗಾಣಿಕೆ ಚಿತ್ರ/ನಕ್ಷೆಯ ಅಲಭ್ಯತೆಯ ಬಗ್ಗೆ ಉತ್ತರವಿರಲಿಲ್ಲ ಮತ್ತು ಈ ವಿಷಯದಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕಿದೆ.

ಕೆರೆ ಏರಿಯ ಕಾಮಗಾರಿಗಳು: ಎನ್‌ಎಲ್‌ಸಿಪಿ ಮಾರ್ಗದರ್ಶಿ ಸೂತ್ರಗಳ ಅನ್ವಯ, ಏರಿಯನ್ನು ನೈಸರ್ಗಿಕವಾಗಿ ಬಲಗೊಳಿಸುವುದನ್ನು ಆಯ್ಕೆ ಮಾಡುವ ಮೂಲಕ ಏರಿಯ ಇಂಜಿನಿಯರಿಂಗ್ ಕಾಮಗಾರಿಗಳನ್ನು ಕನಿಷ್ಠಗೊಳಿಸಬೇಕು. ಅಲ್ಲದೆ, ಈ ಕಾಮಗಾರಿಗಳ ವೆಚ್ಚವನ್ನು ಒಟ್ಟು ಯೋಜನಾ ವೆಚ್ಚದ ಶೇಕಡಾ ೧೦ರಿಂದ ೧೫ಕ್ಕೆ ಸೀಮಿತಗೊಳಿಸಬೇಕು.  ಆದರೆ, ಎತ್ತರಿಸಿದ ಉಂಗುರಾಕಾರದ ಏರಿಗಳನ್ನು ರಚಿಸುವ ಉದ್ದೇಶದಿಂದ ಕೆರೆಗಳಲ್ಲಿ ಅಧಿಕ ಹೂಳೆತ್ತುNarayanapuraLake-1ವುದನ್ನು ಕೈಗೊಳ್ಳಲಾಯಿತು. ಎತ್ತರದ ಉಂಗುರಾಕಾರದ ಜಾಗಿಂಗ್ ದಾರಿಗೆ ಬದಲಾಗಿ ಮೂರು ಮೀಟರ್ ಅಗಲ ಮೀರದಂತೆ ಒತ್ತಾದ ಮಣ್ಣಿನ/ಒರಟು ಕಲ್ಲಿನ ನೆಲಮಟ್ಟದ ಕಾಲುದಾರಿಯನ್ನು ರಚಿಸಬೇಕೆಂದು ಕೆರೆಗಳ ಜೀರ್ಣೋದ್ಧಾರದ ಕಾರ್ಯಯೋಜನೆಯು ನಿಗದಿಪಡಿಸಿತ್ತು. ನೆಲಮಟ್ಟದ ಕಾಲುದಾರಿಗಳು ಸುತ್ತಮುತ್ತಲಿನ ಜಲಾನಯನ ಪ್ರದೇಶದಿಂದ ಹರಿಯುವ ನೀರಿನ ಒಳಹರಿವಿಗೆ ಅಡ್ಡಿಪಡಿಸಬಾರದು ಎಂದೂ ನಿಗದಿಪಡಿಸಲಾಗಿತ್ತು. ಕೆರೆಯ ಪರಿಧಿಯ ಸುತ್ತಮುತ್ತ ನೀರಿನ ಗರಿಷ್ಠ ಮಟ್ಟ ಅಥವಾ ಬೇಲಿಯ ಪರಿಧಿಗೆ ಹತ್ತಿರದಲ್ಲಿ ಈ ಕೆಲಸವನ್ನು ಕಾರ್ಯಗತಗೊಳಿಸುವ ಅಗತ್ಯವಿದ್ದಿತು. ಕುನ್ನೀರಕಟ್ಟೆ ಸಣ್ಣ ನೀರಾವರಿ ಕೆರೆಯ ತಪಾಸಣೆಯ ಸಮಯದಲ್ಲಿ (ಫೆಬ್ರವರಿ ೨೦೦೮), ಕೆರೆ ಅಭಿವೃದ್ಧಿ ಪ್ರಾಧಿಕಾರದ ಅರಣ್ಯ ಸಂರಕ್ಷಣಾಧಿಕಾರಿಗಳೂ ಸಹ ಇದನ್ನು ಒತ್ತಿ ಹೇಳಿದ್ದರು  ಹಾಗೂ ಕೆರೆಯ ಎಲ್ಲ ಕಡೆ ಏರಿ ಹಾಗೂ ಕೆರೆಯ ಮಧ್ಯದಲ್ಲಿನ ದಿಬ್ಬವು ನೀರು ಹರಡುವ ಪ್ರದೇಶವನ್ನು ಕಡಿಮೆ ಮಾಡುವುದು ಮತ್ತು ಕೆರೆಗೆ ಒಳಹರಿವಿನ ನೀರನ್ನು ತಡೆಗಟ್ಟುವುದು.  ಆದರೆ, ಸರಾಸರಿ ಮೂರು ಮೀಟರ್ ಎತ್ತರದಲ್ಲಿ ಮತ್ತು ೨೯ ಮೀಟರ್‌ಗಳವರೆಗಿನ ಅಗಲದ ಉಂಗುರಾಕಾರದ ಎತ್ತರದ ಜಾಗಿಂಗ್ ಟ್ರಾಕ್‌ಗಳನ್ನು ಒದಗಿಸಿರುವುದನ್ನು ಪರೀಕ್ಷಾ-ತನಿಖೆ ನಡೆಸಿದ ೧೭  ಕೆರೆಗಳಲ್ಲಿ (ಅಲ್ಲಾಳಸಂದ್ರ, ಅಂಬ್ಲೀಪುರ ಮೇಲಿನಕೆರೆ, ಅಟ್ಟೂರು, ಬಿ.ನಾರಾಯಣಪುರ, ಚಿನ್ನಪ್ಪನಹಳ್ಳಿ, ದಾಸರಹಳ್ಳಿ, ದೊಡ್ಡಾನೆಕುಂದಿ, ಜಕ್ಕೂರು-ಸಂಪಿಗೇಹಳ್ಳಿ, ಕೈಗೊಂಡನಹಳ್ಳಿ, ಕಸವನಹಳ್ಳಿ, ಕೋಗಿಲು, ಕೌದೇನಹಳ್ಳಿ, ಮೇಸ್ತ್ರಿಪಾಳ್ಯ, ರಾಚೇನಹಳ್ಳಿ, ವೆಂಕಟೇಶಪುರ, ವಿಭೂತಿಪುರ ಮತ್ತು ಯಲಹಂಕ) ಗಮನಿಸಲಾಯಿತು. ಈ ಕಾಮಗಾರಿಯನ್ನೂ ಸಹ ಕೆರೆ ಅಭಿವೃದ್ಧಿ ಪ್ರಾಧಿಕಾರವು ಆಕ್ಷೇಪಿಸಿರಲಿಲ್ಲ. ಉಂಗುರಾಕಾರದ ಏರಿಗಳನ್ನು ಹೂಳೆತ್ತಿದ ಮಣ್ಣನ್ನು ಬಳಸಿ ರಚಿಸಲಾಗಿತ್ತು ಮತ್ತು ಕೆಲವು ಪ್ರಕರಣಗಳಲ್ಲಿ ಲಭ್ಯವಿದ್ದ ಪೂರ್ಣಪ್ರಮಾಣದ ಹೂಳೆತ್ತಿದ್ದ ಮಣ್ಣನ್ನು ಬಳಸದೇ ಬೇರೆ ಪ್ರದೇಶಗಳಿಂದ ಮಣ್ಣನ್ನು ತರಲಾಗಿತ್ತು. ಇದು ಸುತ್ತಮುತ್ತಲಿನ ಜಲಾನಯನ ಪ್ರದೇಶದಿಂದ ನೀರಿನ ಒಳಹರಿವನ್ನು ತಡೆಯುತ್ತಿತ್ತು. ಈ ಕಾಮಗಾರಿಗಳನ್ನು ಕಾರ್ಯಗತಗೊಳಿಸಿದ್ದರಿಂದ ಈ ಕೆರೆಗಳ ಸಂಬಂಧವಾಗಿ ತಪ್ಪಿಸಬಹುದಾಗಿದ್ದ ವೆಚ್ಚವು ೧೧.೩೨ ಕೋಟಿಯಾಗಿತ್ತು.  ಬಿಬಿಎಂಪಿ ಮತ್ತು ಬಿಡಿಎ ಕೆರೆಗಳ ಜೀರ್ಣೋದ್ಧಾರದ ಕಾಮಗಾರಿಗಳನ್ನು ತಾನು ಮೇಲ್ವಿಚಾರಣೆ ಮಾಡಲಿಲ್ಲ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರವು ಒಪ್ಪಿಕೊಂಡಿತು (ಡಿಸೆಂಬರ್ ೨೦೧೪).  ಬಿಬಿಎಂಪಿ/ ಬಿಡಿಎ ಕೆರೆಗಳ ಜೀರ್ಣೋದ್ಧಾರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವಲ್ಲಿನ ಕೆರೆ ಅಭಿವೃದ್ಧಿ ಪ್ರಾಧಿಕಾರ ವಿಫಲತೆಯು ಕೆರೆಗಳ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವಲ್ಲಿ ಪರಿಣಮಿಸಿತು.  ಕೆರೆಗೆ ನೀರಿನ ಒಳಹರಿವನ್ನು ಖಚಿತಪಡಿಸಿಕೊಂಡ ನಂತರವೇ ಉಂಗುರಾಕಾರದ ಏರಿಯನ್ನು ಒದಗಿಸಲಾಯಿತು ಮತ್ತು ಉಂಗುರಾಕಾರದ ಏರಿಗಳ ಮೇಲೆ ಭರಿಸಿದ ವೆಚ್ಚವು ವಾಸ್ತವವಾಗಿ ಅಗತ್ಯವಾಗಿದ್ದಿತು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಉತ್ತರಿಸಿತು (ಮಾರ್ಚ್ ೨೦೧೫). ಉತ್ತರವನ್ನು ಒಪ್ಪಲಾಗುವುದಿಲ್ಲ, ಏಕೆಂದರೆ ಉಂಗುರಾಕಾರದ ಏರಿಗಳು ಸುತ್ತಮುತ್ತಲಿನ ಜಲಾನಯನ ಪ್ರದೇಶದಿಂದ ಹರಿಯುವ ನೀರಿನ ಒಳಹರಿವಿಗೆ ತಡೆಯೊಡ್ಡುತ್ತವೆ.

ಕೆರೆಗೆ ಬೇಲಿ ಹಾಕುವುದು:  ಕೆರೆ ಪ್ರದೇಶಕ್ಕೆ ಬೇಲಿ ಹಾಕುವುದು ಆದ್ಯತೆಯ ಮೇಲೆ ಕೈಗೊಳ್ಳುವ ಕೆಲಸಗಳಲ್ಲಿ ಒಂದಾಗಿದೆ.  ಪರೀಕ್ಷಾ-ತನಿಖೆ ನಡೆಸಿದ ೫೬ ಕೆರೆಗಳಲ್ಲಿ ೨೨ ಕೆರೆಗಳಿಗೆ ಪೂರ್ಣವಾಗಿ ಬೇಲಿ ಹಾಕಲಾಗಿತ್ತು, ೨೫ ಕೆರೆಗಳಿಗೆ ಅಂಶಿಕವಾಗಿ ಬೇಲಿ ಹಾಕಲಾಗಿತ್ತು ಹಾಗೂ ಒಂಬತ್ತು ಕೆರೆಗಳಿಗೆ ಬೇಲಿ ಹಾಕಿರಲಿಲ್ಲ. ೨೦೦೯-೧೪ರ ಅವಧಿಯಲ್ಲಿ ೧೭  ಕೆರೆಗಳಲ್ಲಿ (ಅಲ್ಲಾಳಸಂದ್ರ, ಅಟ್ಟೂರು, ಬಿ.ನಾರಾಯಣಪುರ, ಬೆಳ್ಳಂದೂರು, ದಾಸರಹಳ್ಳಿ, ದೊಡ್ಡಾನೆಕುಂದಿ, ಗಂಗಾಶೆಟ್ಟಿ, ಜಕ್ಕೂರು-ಸಂಪಿಗೇಹಳ್ಳಿ, ಕೈಗೊಂಡನಹಳ್ಳಿ, ಕೌದೇನಹಳ್ಳಿ, ಮೇಸ್ತ್ರಿಪಾಳ್ಯ, ರಾಚೇನಹಳ್ಳಿ, ತಿರುಮೇನಹಳ್ಳಿ, ವರ್ತೂರು, ವೆಂಕಟೇಶಪುರ, ವಿಭೂತಿಪುರ ಮತ್ತು ಯಲಹಂಕ) ಬೇಲಿ ಹಾಕುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು ಮತ್ತು ಆ ಕಾಮಗಾರಿಗಳ ಮೇಲೆ ‘೧೧.೧೩ ಕೋಟಿ ವೆಚ್ಚವನ್ನು ಭರಿಸಲಾಗಿತ್ತು.  ಬೆಳ್ಳಂದೂರು ಕೆರೆಯಲ್ಲಿ ಬಿಬಿಎಂಪಿ ೨೦೦೯-೧೨ರ ಅವಧಿಯಲ್ಲಿ ‘೩.೩೧ ಕೋಟಿಯನ್ನು ವೆಚ್ಚ ಮಾಡಿತ್ತು ಹಾಗೂ ಬಿಡಿಎ ಸಹ ‘೩.೦೩ ಕೋಟಿ ಅಂದಾಜು ವೆಚ್ಚದಲ್ಲಿ ಬೇಲಿ ಹಾಕುವುದನ್ನು ಪ್ರಸ್ತಾಪಿಸಿತ್ತು (೨೦೧೨-೧೩). ಟೆಂಡರನ್ನು ಅಂತಿಮಗೊಳಿಸಲಾಗಿದೆ ಹಾಗೂ ಕಾಮಗಾರಿಯು ಇನ್ನೂ ಪ್ರಾರಂಭವಾಗಬೇಕಿದೆ (ನವೆಂಬರ್ ೨೦೧೪). ಕೆರೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿಲ್ಲ ಮತ್ತು ಕೆರೆ ಪ್ರದೇಶದ ಗಡಿಗಳನ್ನು ಗುರುತಿಸಿರಲಿಲ್ಲ ಎಂಬ ವಾಸ್ತವಾಂಶದ ಮೇಲೆ ಬೇಲಿ ಹಾಕುವುದರ ಮೇಲಿನ ವೆಚ್ಚ ಮತ್ತು ಅದರ ಪರಿಣಾಮಕಾರಿತ್ವವನ್ನು ನೋಡಬೇಕಿದೆ. ಕೆಲವು ದುಷ್ಕರ್ಮಿಗಳು ಕಟ್ಟಡದ ಭಗ್ನಾವಶೇಷಗಳನ್ನು ಸುರಿಯಲು ಸುಲಭದ ಮಾರ್ಗಕ್ಕಾಗಿ ಬೇಲಿಯನ್ನು ಹಾಳು ಮಾಡಿದ್ದಾರೆ ಮತ್ತು ಅದನ್ನು ಸರಿಪಡಿಸಲಾಗುವುದು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿತು (ಮಾರ್ಚ್ ೨೦೧೫). ಉತ್ತರವನ್ನು ಒಪ್ಪಲಾಗುವುದಿಲ್ಲ, ಏಕೆಂದರೆ ಕೆರೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ಸಾಕಷ್ಟು ಭದ್ರತಾಪಡೆಯನ್ನು ನಿಯೋಜಿಸಿ  ಕೆರೆ ಪ್ರದೇಶವನ್ನು ರಕ್ಷಿಸುವುದು ಅನುಷ್ಠಾನ ಸಂಸ್ಥೆಗಳ ಪ್ರಾಥಮಿಕ ಕರ್ತವ್ಯವಾಗಿರುತ್ತದೆ. ಕೆರೆಗಳ ಅಭಿವೃದ್ಧಿಯಲ್ಲಿ ಜೀವವೈವಿಧ್ಯಕ್ಕೂ ಮಹತ್ವ ಕೊಡಬೇಕು ಎಂದು ಸಿಎಜಿ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇದನ್ನು ಅಧಿಕಾರಿಗಳು ಪಾಲಿಸಬೇಕಿದೆ.

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*